ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ನೋಡಿದ ನಾಯಿಗಳ ವಿಷಯಕ್ಕೆ ಬರುತ್ತೇನೆ..

Exclusive

ಕಥೆ 

ಕಾಮಾಲೆ ಕಣ್ಣು

IMG_1812
ಕನಕರಾಜ್ ಬಿ ಆರನಕಟ್ಟೆ

ಎಂಥ ಕಾಲ ಬಂತ್ರಿ! ಕೊರಿಯಾದವರು ನಾಯಿಗಳನ್ನು ತಿನ್ತಾರೆ ಅಂತ ಕೇಳಿದ್ವಿ, ಆದರೆ ಇಲ್ಲಿ ನಾಯಿಗಳೇ ಮನುಷ್ಯರನ್ನು ತಿನ್ತಾವಲ್ರಿ… ಆಕೆ ಹೇಳುತಿರುವುದು ಹಸುಳೆಗಳ ತಿನ್ನುವ ಹಸಿದ ನಾಯಿಗಳ ಬಗ್ಗೆ ಎಂದುಕೊಂಡು- ನಮ್ಮ ಚಾನೆಲ್ಗಳು ಇಂತಹ ಸುದ್ದಿಗಳ ಆಗಾಗ ತೋರಿಸುವುದರಿಂದ ಈ ಸತ್ಯಕ್ಕೆ ಒಗ್ಗಿಕೊಂಡು- ಸುಮ್ಮನಾಗಿದ್ದೆ. ಆದರೆ ಈಗಲೇ ಆಕೆಯ ಮಾತಿನ ‘ವಿರಾಟ್’ ದರ್ಶನವಾದುದು.

ಹತ್ತಿಪ್ಪತ್ತು ನಾಯಿಗಳ ಗುಂಪೊಂದು ರಸ್ತೆಯಲ್ಲಿ ತಿರುಗಾಡುತ್ತ ಸಿಕ್ಕಸಿಕ್ಕವರನ್ನು ಕಡಿದು ರಕ್ತದ ಹೊಳೆಯನ್ನು ಹರಿಸುತ್ತಿದ್ದವು. ಅವುಗಳ ಬಿಡಿಸಲು ಅಥವ ಓಡಿಸಲು ಹೋದವರ ಕಥೆಗಳ ಕೇಳಲೇ ಬೇಡಿ, ಕಿಂಚಿತ್ತೂ ಬಿಡದಂತೆ ಅವರುಗಳ ಮಾಂಸವನ್ನು ಕಚ್ಚಿ ಬಿಸಾಕುತ್ತಿದ್ದವು. ಒಂದು ವಿಷಯವ ನಾ ಇಲ್ಲಿ ನಿಮಗೆ ಹೇಳಲೇಬೇಕು: ಈ ನಾಯಿಗಳು ಸಿಕ್ಕಸಿಕ್ಕವರ ಮೇಲೆ ಎರಗುತ್ತಿದ್ದವು ಎಂದು ಈ ಮುಂಚೆ ಹೇಳಿದ್ದೆ, ಅಲ್ವಾ?! ಆದರೆ ಅದು ಸಂಪೂರ್ಣ ನಿಜವಲ್ಲ. ಆ ನಾಯಿಗಳ ಓಟವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ನನ್ನರಿವಿಗೆ ಬಂದದ್ದು ಬೆಚ್ಚಿಬೀಳಿಸುವಂತಹ ಸಂಗತಿ ಅಥವ ಈ ನಾಯಿಗಳ ಧಾಳಿಯನ್ನು ನಾನು ಹಾಗೆ ಗ್ರಹಿಸಿಕೊಂಡನೇನೊ! ‘ಅರ್ಥಗಳು ಸಂಗತಿಗಳಲ್ಲಿ ಇಲ್ಲ, ಆ ಸಂಗತಿಗಳ ಅರ್ಥಮಾಡಿಕೊಳ್ಳುವುದರಲ್ಲಿದೆ’ ಎಂದು ಎಲ್ಲೊ ಓದಿದ ನೆನಪು.

ನಾನಿಲ್ಲಿ ಹೇಳುತ್ತಿರುವುದು ಪೋಸ್ಟ್ ಮಾರ್ಡನ್ ಸಾಹಿತ್ಯ ಸಿದ್ಧಾಂತಗಳ ಮಗ್ಗಿ ಪಾಠ ಎಂದುಕೊಂಡರೊ ಅಥವ ಸ್ಪಾನಿಷ್ ಬರಹಗಾರ farnando ಸೊರಾಂಟಿನೊನ ಕಥೆಯ ನಕಲು ಇದು ಎಂದು ನಿಮ್ಮಲ್ಲಿ ಕೆಲವರು ನಗಾಡುತ್ತಿದ್ದರೆ, ಅಂತಹವರಿಗೆ ಒಂದು ವಿಷಯವ ಸ್ಪಷ್ಟಪಡಿಸಿ ಮುಂದೆ ಹೋಗುತ್ತೇನೆ: ಈ ಜಗತ್ತಿನಲ್ಲಿ ‘ಅಸಲಿ’ ಎನ್ನುವುದೊಂದು ಒಂದು ಭ್ರಮೆ. ಅಸಲಿ ಎನ್ನೋ ಪದವೇ ಅರಬ್ಬಿ ಮೂಲದ್ದು- ಅರಬ್ಬಿ ಭಾಷೆಯೇ ನಬಾತಿ ಮೂಲದ್ದು… ಹೀಗೆ ಮೂಲಗಳ ಅಥವ ಅನುಕರಣವಲ್ಲದ ವಸ್ತುವಾಗಲಿ, ವಿಚಾರವಾಗಲಿ ಯಾವುದೂ ಇಲ್ಲ ಎಂದು ಯೂ ಟ್ಯೂಬ್, ಗೂಗಲ್ಗಳ ನವ್ಯೋತ್ತರ ಕಾಲದಲ್ಲಿ ಬದುಕುತ್ತಿರುವ ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ, ಅಲ್ಲವೆ. ಇರಲಿ, ನಾ ನೋಡಿದ ನಾಯಿಗಳ ವಿಷಯಕ್ಕೆ ಬರುತ್ತೇನೆ. ಅವು ಸಿಕ್ಕಸಿಕ್ಕವರನ್ನೆಲ್ಲ ಕಚ್ಚುತ್ತಿರಲಿಲ್ಲ, ಬದಲಿಗೆ ಕೆಲವರನ್ನು ಮಾತ್ರ ಆರಿಸಿಕೊಂಡು ಕಚ್ಚುತ್ತಿದ್ದವು.

 

group line artಪೋಲಿಸರ ಗುಂಡೇಟುಗಳಿಗೂ ನಿಲುಕದ ಆ ನಾಯಿಗಳು ಕ್ಷಣ ಮಾತ್ರದಲ್ಲಿ ಮಾಯವಾಗಿಬಿಟ್ಟವು. ಎಲ್ಲರೂ ಅತ್ತಿತ್ತ ತಡಕಾಡುತ್ತಿದ್ದರು. ಮೆಲ್ಲಗೆ ಇಡೀ ವಾತಾವರಣವನ್ನೇ ಪೋಲಿಸರ ಸೈರನ್ ಸದ್ದು ತುಂಬಿಕೊಳ್ಳುತ್ತಿತ್ತು. ನಾ ಗಡಿಬಿಡಿಯಿಂದ ಮಹಡಿಯಿಂದಿಳಿದು ಆ ಜಾಗದ ಬಳಿ ಹೋಗುತ್ತಿದ್ದೇನೆ. ನಾಯಿಗಳು ಮತ್ತೊಮ್ಮೆ ತಮ್ಮ ಧಾಳಿ ಮಾಡುತ್ತವೇನೊ ಎನ್ನೊ ಕೂತೂಹಲ ನನಗೆ. ಮರವೊಂದರ ಹಿಂಬದಿಯಲ್ಲಿ ನಿಂತು ನೋಡುತ್ತಿದ್ದೇನೆ. ಅರೆ! ಆ ನಾಯಿಗಳು ಏನಾದರೂ ಈ ಮರದ ಮೇಲೆ ನೇತಾಡುತ್ತಿದ್ದರೆ!? ಎದೆ ಜೋರಾಗಿ ಬಡಿದುಕೊಳ್ಳುತ್ತಿದೆ. ಅಂಜುತ್ತ ಮೆಲ್ಲಗೆ ತಲೆಯೆತ್ತಿದೆ, ಹ! ಬಚಾವಾದೆ.
ಶ್ಶ್ಶ್ಶ್… ಎನ್ನುತ್ತ ಮರ ಗಾಳಿಯ ತಳ್ಳುತ್ತಿತ್ತು. ಆ ಜಾಗಕ್ಕೆ ಯಾರನ್ನೂ ಬಿಡುತ್ತಿರಲಿಲ್ಲ. ದೂರದಲ್ಲೇ ನಿಂತು ಕಣ್ಣರಳಿಸಿ ದಿಟ್ಟಿಸುತ್ತಿದ್ದೇನೆ; ನಾಯಿಗಳಿಗೆ ಬಲಿಯಾದವರ ನೆಂಟರಿಷ್ಟರೇನಾದರೂ ಬರುವರೇನೊ, ಕಾಯುತ್ತಿದ್ದೇನೆ. ಆದರೆ ಸತ್ತವರು ಯಾರ್ಯಾರು ಎನ್ನುವುದ ಹೇಗೆ ನಿಖರವಾಗಿ ಕಂಡುಹಿಡಿಯುವುದು? ಅವರ ಜೇಬಿನಲ್ಲಿ ಗುರುತಿನ ಚೀಟಿಗಳೇನಾದರೂ ಇದ್ದರೆ ಮಾತ್ರ ಗುರುತಿಸಬಹುದೇನೊ! ಏಕೆಂದರೆ, ಒಂಚೂರೂ ಚಹರೆಗಳ ಬಿಡದೆ ಆ ನಾಯಿಗಳು ಮನುಷ್ಯರ ಮುಖಗಳ ಕಿತ್ತು ಚೆಂಡಾಡಿದ್ದವು. ನಾಯಿಗಳ ಇಂತಹ ಆಟವನ್ನು ನಾವ್ಯಾರೂ ಇದುವರೆವಿಗೂ ನೋಡೇ ಇಲ್ಲ. ಈ ಊರ ಇತಿಹಾಸದಲ್ಲಿ ಎಂದೆಂದೂ ಅಳಿಸಲಾಗದಂತಹ ಅಟ್ಟಹಾಸವನ್ನು ಮೆರೆದು ಹೋಗಿದ್ದವು ಆ ನಾಯಿಗಳು. ‘ಎಂತಹ ರಾಕ್ಷಸ ನಾಯಿಗಳು’, ‘ಮನುಷ್ಯರನ್ನೇ ತಿನ್ನುವಷ್ಟು ಕೊಬ್ಬಿದ್ದಾವೆ’- ಜನ ಮಾತಾಡಿಕೊಳ್ಳುವುದು ಕೇಳಿಸಿತು. ಇಂತಹ ನಾಯಿಗಳ ಧಾಳಿಯಿಂದ ತಪ್ಪಿಸಿಕೊಂಡವರು ಅಥವ ಅವುಗಳ ತಿರಸ್ಕಾರಕ್ಕೆ ಗುರಿಯಾದವರು ಥರಥರ ನಡುಗುತ್ತ ಎದುರಿಗೆ ಬಂದವರನ್ನೆಲ್ಲ ಅಪ್ಪಿಕೊಂಡು ಬೆವರುತ್ತ ಬಿಕ್ಕುತ್ತಿದ್ದರು. ಬೈಕು, ಸ್ಕೂಟರ್, ಕಾರುಗಳು ಸದ್ದು ಮಾಡುತ್ತಲೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದವು. ಪೋಲಿಸರು ಅವುಗಳನ್ನು ತಹಬದಿಗೆ ತರಲು ಹೆಣಗಾಡುತ್ತಿದ್ದರು. ಎಲ್ಲವ ನೋಡುತ್ತ ನಿಂತಿದ್ದ ನನಗೆ (ನಿಮ್ಮಂತೆಯೆ) ಒಂದು ಪ್ರಶ್ನೆ ಕಾಡಲಾರಂಭಿಸಿತು. ಆ ನಾಯಿಗಳ್ಯಾಕೆ ಧಾಳಿ ಮಾಡುತ್ತಿವೆ? ಅದೂ ಈ ಸಿಸಿ ಕ್ಯಾಮರಾಗಳ ಯುಗದಲ್ಲಿ! ಅಥವ ನಾಯಿಗಳ ಸೈಕಾಲಜಿಯನ್ನು ಅರ್ಥಮಾಡಿಕೊಳ್ಳಲು ಮನುಷ್ಯರ ಬೌದ್ಧಿಕತೆ ಸೋತಿರಬಹುದು!

ಈ ಧಾಳಿ ಎಲ್ಲಿಂದ ಹೇಗೆ ಶುರುವಾಗುತ್ತದೆಯೊ, ಯಾರಿಗೆ ಗೊತ್ತು? ನಾಯಿಗಳ ಮನದೊಳಗೆ ತುಡಿತವೊಂದು ಭುಗಿಲೆದ್ದು ಪಟಕ್ಕನೆ ಎಗರುತ್ತವೇನೊ! ಅವುಗಳು ಜನರ ಆರಿಸಿಕೊಂಡು ಕಚ್ಚುವುದಿಲ್ಲ; ಒಳ್ಳೆಯವರ್ಯಾರು, ಕೆಟ್ಟವರ್ಯಾರು, ಬಿಳಿಯನೊ ಕರಿಯನೊ, ಗಂಡಸೊ ಹೆಂಗಸೊ ಎಂದೆಲ್ಲ ನೋಡಿ ಎರಗುವುದಿಲ್ಲ ಅನ್ಸುತ್ತೆ. ಇಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವವರಲ್ಲಿ ಒಳ್ಳೆಯವರ್ಯಾರು,ಕೆಟ್ಟವರ್ಯಾರು ಎಂದು ಹೇಗೆ ಗುರ್ತಿಸು ವುದು? ಇಲ್ಲಿ ಬಿದ್ದಿರುವವರಲ್ಲಿ ಗಂಡಸ್ಯಾರು, ಹೆಂಗಸ್ಯಾರು, ಮಂಗಳಮುಖಿಯರ್ಯಾರು ಎನ್ನುವುದ ಬೇಕಾದರೆ ಪತ್ತೆ ಹಚ್ಚಬಹುದೇನೊ. ಈ ಗಂಡಸು-ಹೆಂಗಸು ಎಂಬ ವೈರುಧ್ಯಗಳು ದೇಹವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಭಾಷೆಯಾದ್ದರಿಂದ ಸತ್ತವರು ಎರಡು ಕಾಲಿನ ಮನುಷ್ಯರು ಎಂದಷ್ಟೆ ಹೇಳಬಹುದು. ಅಗೊ! ಆ ನಾಯಿಗಳು ಬೊಗಳೊ ಸದ್ದು! ಎಲ್ಲರೂ ಓಡುತ್ತಿದ್ದಾರೆ. ಪೋಲಿಸರ ವ್ಯಾನ್ಗಳು ಗುಂಯ್ಗುಟ್ಟುತ್ತ ಹಾರುತ್ತಿವೆ. ಸದ್ದು ಬಂದ ಕಡೆ ನಾನೂ ಓಡುತ್ತಿದ್ದೇನೆ. ನನ್ನ ಹಿಂದೆ ಮುಂದೆ ನನ್ನಂತೆ ಹತ್ತಾರು ಮಂದಿ, ಎಲ್ಲರೂ ಆ ನಾಯಿಗಳ ಕೊಲ್ಲಬೇಕೆಂದು ಓಡುತ್ತಿದ್ದಾರೆ, ಎಲ್ಲರೂ ಕೂಗುತ್ತಿದ್ದರು: ಕೊಲ್ಲಿರಿ ಅವುಗಳ, ಕಲ್ಲೆಸೆದು ಕೊಲ್ಲಿ, ಗುಂಡು ಹಾರಿಸಿ ಒಂದೇ ಏಟಿಗೆ ಕೊಂದುಬಿಡಬೇಡಿ…

bloody handನಾ ಮಾತ್ರ ಅವುಗಳ ನೋಡಲು ಓಡುತ್ತಿದ್ದೆ; ಅವುಗಳ ಮುಂದಿನ ನಡೆಯ ನೋಡಲು ನಾ ಉತ್ಸುಖನಾಗಿದ್ದೇನೆ. ಮನಸ್ಸು ಕುಣಿಕುಣಿಯುತ್ತ ಕಾರಂಜಿಯಾಗುತ್ತಿದೆ.  ಪೋಲಿಸರು ದಟ್ಟ ಪೊದೆಯೊಂದರ ಸುತ್ತ ನಿಂತು ಗನ್ನುಗಳ ಹಿಡಿದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಜನಸಾಮಾನ್ಯರನ್ನು ದೂರದಲ್ಲೇ ನಿಲ್ಲಿಸಲಾಗಿದೆ. ಕೂಗಾಟ, ಕಿರುಚಾಟ… ಮತ್ತೆ ನಾನು ಮರವೊಂದರ ಆಸರೆ ಪಡೆದೆ. ಈ ಬಾರಿ ಅದರ ಮೇಲೆ ಹತ್ತಿ ನಿಟ್ಟುಸಿರಿಟ್ಟೆ. ಎಲ್ಲವೂ ಲಾಂಗ್ ಏಂಗಲ್ನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದವು. ಆ ಪೊದೆಯೊಳಗೆ ಏನೂ ಇಲ್ಲ ಎನ್ನುವುದು ನನಗೆ ಬೇಗನೆ ಗೊತ್ತಾಯಿತು. ನಾ ಮರದಿಂದಿಳಿದು ಸುತ್ತಲೂ ಹುಡುಕಿದೆ, ಆ ನಾಯಿಗಳ ಇರುವಿಕೆಗೆ ಯಾವ ಕುರುಹೂ ಕಾಣಲಿಲ್ಲ. ಆದರೆ, ಅವುಗಳಿಂದ ಕಚ್ಚಿಸಿಕೊಂಡು ಸತ್ತವರ ಸಂಬಂಧಿಕರ ಕಂಡೆ. ಮತ್ತೊಂದು ನಿಟ್ಟುಸಿರಿಟ್ಟು ಅವರತ್ತ ಲಗುಬಗೆಯಿಂದ ಓಡಿದೆ. ಅವರುಗಳ ಸಮಾಧಾನಿಸಲು ವ್ಯರ್ಥ ಪ್ರಯತ್ನ ನಡೆಸಿ, ಅಸಹಾಯಕನಾಗಿ ನಿಂತೆ. ಅವರು ಏಳು ಜನ, ಮಂಡಿಯೂರಿ ಎದೆ ಬಡಿಯುತ್ತ ಕೂಗಾಡುತ್ತಿದ್ದರು. ಒಬ್ಬೊಬ್ಬರದು ಒಂದೊಂದು ಕತೆ. ಸತ್ತ ಅವರ ಸಂಬಂಧಿಕರಲ್ಲಿ ವಯಸ್ಸಾದವರು, ಯುವಕರು, ಮಕ್ಕಳು ಹೀಗೆ ನಾನಾ ಪ್ರಾಯದವರು ಸೇರಿದ್ದಾರೆ ಎಂದು ಗೊತ್ತಾಯ್ತು. ಸತ್ತವರೆಲ್ಲರೂ ತುಂಬಾ ಒಳ್ಳೆಯ ಜನ ಎನ್ನುವುದು ಅವರುಗಳು ಹರಿಸುತ್ತಿದ್ದ ಕಣ್ಣೀರ ಕೋಡಿಯಿಂದ ಗೊತ್ತಾಯಿತು.

ಇವೆಲ್ಲಕ್ಕಿಂತ ಮುಖ್ಯವಾಗಿ ನನ್ನ ಕೆರಳಿಸುತ್ತಿರುವ ವಿಷಯವೆಂದರೆ, ಇಲ್ಲಿ ಅಳುತ್ತಿರುವ ಏಳ್ವರಲ್ಲಿ ಮೂವರು ಆ ನಾಯಿಗಳ ಧಾಳಿಯಾದಾಗ ಸತ್ತವರ ಜೊತೆ ಇದ್ದಿದ್ದಾರೆ. ಸತ್ತವರೊಂದಿಗೆ ಒಂದೇ ಬೈಕಿನಲ್ಲಿ ಕೂತು ಪ್ರಯಾಣಿಸುತ್ತಿದ್ದಿದ್ದಾರೆ. ಆ ನಾಯಿಗಳು ಇವರನ್ಯಾಕೆ ಬಿಟ್ಟವೊ, ಅರ್ಥವಾಗ್ತಿಲ್ಲ. ಇದಕ್ಕಿಂತ ಮುಖ್ಯವಾಗಿ ನನಗೆ ಅರ್ಥವಾಗದಿರುವುದು ಈ ನಾಯಿಗಳ್ಯಾಕೆ ಮನುಷ್ಯರ ಬೇಟೆಯಾಡುತ್ತಿವೆ? ಎನ್ನುವುದು. ಹುಲಿ ನಾಡಿಗೆ ನುಗ್ಗಿ ಮನುಷ್ಯರನ್ನು ತಿನ್ನುತ್ತವೆ ಎನ್ನುವುದಕ್ಕೆ ನಾನಾ ಕಾರಣಗಳಿವೆ; ಕಾಡುಗಳಿಲ್ಲ, ಇರುವ ಚೂರುಪಾರು ಕಾಡುಗಳೊಳಗೆ ಹುಲಿಗಳಿಗೆ ಆಹಾರಗಳಿಲ್ಲ…ಇತ್ಯಾದಿ. ಆದರೆ ಈ ನಾಯಿಗಳಿಗ್ಯಾವ ಕಾರಣಗಳಿವೆ? ನನಗಂತೂ ತಿಳಿಯುತ್ತಿಲ್ಲ. ಅದೂ ನಾಯಿಗಳು ಕೆಲವರನ್ನೇ ಮಾತ್ರ ಆರಿಸಿಕೊಂಡು ಕೊಲ್ಲುತ್ತವೆ ಎನ್ನುವುದ ಹೇಗೆ ಅರ್ಥೈಸಿಕೊಳ್ಳುವುದು? ಅರೆ! ಅಲ್ಯಾರೊ ಏನನ್ನೊ ಕೂಗುತ್ತಿದ್ದಾರೆ…

stone faceವಿಜಯನಗರದ ಮಾರುತಿಬಂಡೆ ಬಳಿ ಆ ನಾಯಿಗಳು ಜನರ ಕಚ್ಚಿ ಸಾಯಿಸುತ್ತಿವೆಯಂತೆ. ನಾನು ಮೆಜಸ್ಟಿಕ್ಗೆ ಹೋಗಿ 61 ಎ ಬಸ್ ಹಿಡಿದು ಕೋತಿಬಂಡೆ ಸ್ಟಾಪಿನಲ್ಲಿ ಇಳಿದಾಗ ಅಲ್ಲಿ ಜನವೋ ಜನ. ನಾಯಿಗಳ ಜನ ಹಿಡಿದಿರಬೇಕು ಎಂಬ ನನ್ನ ಊಹೆ ಸುಳ್ಳು ಎನ್ನುವುದ ಅರಿಯಲು ಬಹು ಸಮಯವೇನೂ ಬೇಕಾಗಲಿಲ್ಲ. ಜನ ಇಲ್ಲೂ ಅದನ್ನೇ ಹೇಳುತ್ತಿದ್ದರು: ಕಚ್ಚಿ ಮನುಷ್ಯರ ಚೆಂಡಾಡಿ ಮಾಂಸವ ಚೆಲ್ಲಾಪಿಲ್ಲಿಯಾಗಿಸಿದ ನಾಯಿಗಳು ಯಾರ ಕೈಗಳಿಗೂ ಸಿಗದೆ ತಟ್ಟನೆ ಮಾಯವಾದವಂತೆ. ಅಲ್ಲಿದ್ದವರನ್ನೆಲ್ಲ ಹಲವು ಟಿ.ವಿ ಚಾನೆಲ್ಗಳು ಸಂದಶರ್ಿಸುತ್ತಿದ್ದವು. ಸತ್ತವರ ಸಂಬಂಧಿಕರು ಕ್ಯಾಮೆರಾಗಳೆದುರು ಗೋಳಿಡುತ್ತಿದ್ದರು. ಅವರ ಬಳಿ ನಿಂತು ಸೂಕ್ಷ್ಮವಾಗಿ ಕೇಳಿಸಿಕೊಂಡೆ. ಆ ಮಾತುಗಳು ಈ ಹಿಂದೆ ನಾ ಕೇಳಿಸಿಕೊಂಡ ಮಾತಿನ ಮುಂದುವರಿಕೆಯಂತೆ ಕಾಣುತ್ತಿವೆ:

ನಮ್ಮೆಜಮಾನ್ರು ತುಂಬಾ ಒಳ್ಳೆಯವ್ರು, ಹೆಂಡ ಸಾರಾಯಿ ಅಂದ್ರೆ ಏನೆಂದೇ ಗೊತ್ತಿಲ್ಲದವರು… ಡ್ಯೂಟಿ ಡ್ಯೂಟಿ ಅಂತ ಸದಾ ಆಫೀಸ್ ನಲ್ಲೇ ಇದ್ದವರು. ಅಂತಹವರಿಗೆ ಈ ಗತಿಯೇ?

ಈ ಹುಡುಗ ನಮ್ಮ ಪಕ್ಕದ ಮನೆಯ ಹುಡುಗ, ತುಂಬಾ ಒಳ್ಳೆಯವನು; ತಂದೆತಾಯಿ ಹಾಕಿದ ಗೆರೆಯನ್ನು ಎಂದೂ ದಾಟಿದವನಲ್ಲ, ಮುತ್ತಿನಂತಹ ಹುಡುಗ… ಹೀಗಾಗಬಾರದಿತ್ತು!… ಛೆ!

 

ಅಸಹ್ಯವೆನಿಸಿ, ಬೇಸರವಾಗಿ, ಬಸ್ ಹಿಡಿದು ಮೆಜಸ್ಟಿಕ್ನತ್ತ ಹೊರಟೆ. ಆ ಬಸ್ನಲ್ಲಿರುವವರೆಲ್ಲರೂ ಮಾಂಸದ ಮುದ್ದೆಗಳಂತೆ ಕಾಣುತ್ತಿದ್ದರು. ಕಿವಿಯ ತುಂಬ ಆ ನಾಯಿಗಳು ಬೊಗುಳುತ್ತಿವೆ. ತಮಟೆಯ ಸೀಳುವಂತೆ ಅಲ್ಲೊಬ್ಬಾತ ಕಿರುಚುತ್ತಿದ್ದಾನೆ: ಇದೆಂಥ ಕೇಡು ಕಾಲ ಮಾರಾಯ್ರೆ! ಕೊಲೆ, ರೇಪು,ಕಳ್ಳತನ ಸಾಲದು ಅಂತ ಈಗ ಇದು ಬೇರೆ! ಮನುಷ್ರು ಸತ್ಯ, ನೇಮ ನಿಷ್ಠೆಗಳ ಪಾಲಿಸದಿದ್ರೆ ಇನ್ನೇನಾಗುತ್ತೆ, ನಾಯಿಗಳೂ ತಿನ್ನುತ್ವೆ, ನಾಳೆ ನಮ್ಮನ್ನು ಇರುವೆಗಳೂ ಸಾಯಿಸುತ್ವೆ. ನಮ್ಮ ಕಾಲ ಹೇಗಿತ್ತು…! ಬಂಗಾರ, ಬಂಗಾರ ಇದ್ದಂಗಿತ್ತು… ಈಗ ನೋಡಿ, ನಾಯಿಗಳೂ ಮನುಷ್ಯರ ತಿನ್ನುವಂತಾಗಿದೆ! ಇವೆಲ್ಲ ಯಾಕಾಗಿ… , ಆತ ಮಾತ ನಿಲ್ಲಿಸುವಂತೆ ಕಾಣಲಿಲ್ಲ. ಬಸ್ಸು ಮೆಜಸ್ಟಿಕ್ ತಲುಪಿದರೂ ಆತ ವಿರಾಮ ಕೊಡದೆ ಹೊದರುತ್ತಲೇ ಇದ್ದಾನೆ. ಅರೆ! ಬಸ್ ಸ್ಟಾಂಡಿನೊಳಗೆ ಏನು ನಡೆಯುತ್ತಿದೆ!? ಬಸ್ಸು ನಿಂತರೂ ಇಳಿಯಲು ಎಲ್ಲರೂ ಭಯಪಡುತ್ತಿದ್ದಾರೆ. ಆತ ‘ಬೇಲಿಯಲ್ಲಿ ಹರಿವ ಹಾವಿನಂತೆ’ ಸದ್ದಿಲ್ಲದೆ ಅಳುತ್ತಾ ತನ್ನ ಪ್ರವಚನವ ಕಿರುದನಿಯಲ್ಲಿ ಮುಂದುವರಿಸುತ್ತಲೇ ಇದ್ದ. ಎಲ್ಲರೂ ಕಿಟಕಿಗೆ ತಲೆಯ ತೂರಿಸಿ ನೋಟವ ಎಸೆಯುತ್ತಿದ್ದರು. ಆ ನಾಯಿಗಳು ಸಿಟಿ ಬಸ್ಸ್ಟಾಂಡಿನ ತುಂಬ ಅಲೆದಾಡುತ್ತ ತಮ್ಮ ಬೇಟೆಗೆ ಜನರ ಹುಡುಕುತ್ತಿದ್ದಾವೆ, ಅನ್ಸುತ್ತೆ. ಬಸ್ಸಿನೊಳಗೆ ಎಗೆರೆಗರಿ ಕೆಲವರ ಎಳೆಯುತ್ತಿದ್ದವು; ಎಳೆದು ಮುಖಮೂತಿ ನೋಡದೆ ಮಾಂಸವ ಕಚ್ಚಿ ಉಗಿಯುತ್ತಿದ್ದವು. ಜನ ಕಿಟಕಿಗಳಿಂದ ಎಗರಿ ಪರಾರಿಯಾಗುತ್ತಿದ್ದಾರೆ. ಅಗೊ, ಅವು ನಮ್ಮ ಬಸ್ಸಿನತ್ತ ಬರುತ್ತಿವೆ, ಅನ್ಸುತ್ತೆ. ಬಸ್ಸಿನಲ್ಲಿದ್ದವರಲ್ಲಿ ಅನೇಕರು ಕಿಟಕಿಗಳಿಂದ ತೂರಿ ಜಿಗಿಯುತ್ತಿದ್ದಾರೆ. ನನಗೆ ಭಯ, ಜಿಗಿಯುವಾಗ ಆ ನಾಯಿಗಳು ಕಚಕ್ ಎಂದು ಹಿಡಿದುಬಿಟ್ಟರೆ!

dog lineartತಡ ಮಾಡದೆ, ಐಡಿಯಾ ಮಾಡಿ ನಾ ಕಿಟಕಿಯಿಂದ ತೂರಿ ಬಸ್ ಟಾಪಿನ ಮೇಲೆ ಹೋಗಿ ನಿಂತೆ. ಆ ನಾಯಿಗಳು ನಮ್ಮ ಬಸ್ಸನ್ನೇ ಗುರಿಯಾಗಿಸಿಕೊಂಡು ಒಳಗೆ ನುಗ್ಗುವುದ ನಾ ಕಂಡೆ. ಯಾರೊ ಕಿರುಚುತ್ತಿದ್ದಾರೆ… ಆ ದನಿ ನನಗೆ ಪರಿಚಿತ ಎನ್ನಿಸುತ್ತಿದೆ… ದೇವರೆ… ಆತ ಕೂಗುತ್ತಿದ್ದಾನೆ; ಇಲ್ಲಿ ಒಳ್ಳೆತನಕ್ಕೆ ಉಳಿಗಾಲವಿಲ್ಲ, ಯಾರಿಗೂ ಇಲ್ಲಿ ಸಹಾಯ ಮಾಡಬೇಕೆನ್ನುವ ಮನುಷ್ಯತ್ವವೇ ಇಲ್ಲ… ಆತ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ. ನಾಯಿಗಳು ಸದ್ದಿಲ್ಲದೆ ಕಚ್ಚುತ್ತಿವೆಯೇನೊ… ಅತ್ತ, ಜನ ಸದ್ದಿಲ್ಲದೆ ಓಡುತ್ತಿದ್ದರು. ಬಸ್ಸಿನೊಳಗಿಂದ ನಿಲ್ಲದ ಕಿರುಚಾಟ. ಸಾವಿನ ಕರ್ಕಶವ ಇದೇ ಮೊದಲ ಬಾರಿಗೆ ಕೇಳಿಸಿಕೊಂಡೆ. ಎಷ್ಟು ತಡೆದರೂ ನನ್ನ ದೇಹ ಥರಥರ ನಡುಗಲಾರಂಭಿಸಿತು. ಗಂಟಲೆಲ್ಲ ಒಣಗಿ ತಲೆ ಚಕ್ಕರ್ ಹೊಡೆಯುತ್ತಿದೆ. ಕಣ್ಣು ಮಂಜುಮಂಜಾದರೂ ನಾ ನೋಡಿದೆ, ಆ ನಾಯಿಗಳು ನಾ ನಿಂತಿದ್ದ ಬಸ್ನಿಂದ ಕೆಳಗಿಳಿದು ಅತ್ತಿತ್ತ ನೋಡುತ್ತ ಕತ್ತ ಎತ್ತಿ ನನ್ನ ನೋಡಿದವು. ಅವುಗಳ ಬಾಯಿಂದ ರಕ್ತ ತೊಟ್ಟಿಕ್ಕುತ್ತಿತ್ತು. ನನ್ನ ಕಿಬ್ಬೊಟ್ಟೆ ಗಡಗಡ ನಡುಗಿ ಕರುಳು ಕಿತ್ತುಬರುವಂತಾಯ್ತು. ಕಣ್ಣ ಇರುಕಿ ಮುಚ್ಚಿಕೊಂಡೆ. ಎದೆ ಸಿಡಿಯುವಷ್ಟು ಬಡಿದುಕೊಳ್ಳುತ್ತಿದೆ…

ಅರೆ! ಇದೇನಿದು! ನನ್ನ ಒಳಗಣ್ಣುಗಳೊಳಗೆ ಅವಳ ಸುಂದರ ದೇಹ, ಮತ್ತು ಆ ಕಪ್ಪು ತುಟಿ ಬಂದು ಹೋಗುತ್ತಿವೆ. ಇಂಥಹ ಭಯದ ಹೊತ್ತಲ್ಲಿ ಎಂಥಹ ಚಿತ್ರಗಳು! ಜೊತಗೆ ಅವನ ಬೊಕ್ಕ ತಲೆ! ಆ ತಲೆಯ ಒಂದೇ ಏಟಿಗೆ ಕಡಿದು ಹಾಕಬೇಕೆಂಬ ತುಡಿತ! ಜನ ಏನಂದುಕೊಂಡರೂ ಪರವಾಗಿಲ್ಲ, ಈ ಹಾಳು ಸಮಾಜ ನನ್ನ ಜೈಲಿಗಟ್ಟಿದರೂ ಸರಿಯೇ! ಸೇಡನ್ನು ನಾ ತೀರಿಸಿಕೊಳ್ಳುತ್ತೇನೆ. ಸಮಾಜಕ್ಕೆ ಹೆದರಿ ನನ್ನೊಳಗಿನ ತುಡಿತವ ಬಲಿಕೊಡುವುದಿಲ್ಲ. ನಾನು ನಾನಾಗುತ್ತೇನೆ, ಜೈಲುಗೀಲುಗಳಿಗೆಲ್ಲ ಹೆದರುವುದಿಲ್ಲ… ಮನುಷ್ಯರು ನಿರ್ಮಿಸಿರುವ ಈ ಸಮಾಜಕ್ಕೇ ಹೆದರದವನು ಯಕಶ್ಚಿತ್ ನಾಯಿಗಳಿಗೆ ಹೆದರುತ್ತೇನಾ?! ಬರ್ರಲೇ… ಒಂದು, ಎರಡು, ಮೂರು, ಮನದೊಳಗೆ ಅವಿತುಕೊಳ್ಳುತ್ತಿದ್ದೆ…ಎದೆ ಬಡಿದುಕೊಳ್ಳುತ್ತಲೇ ಇದೆ, ಕಿಬ್ಬೊಟ್ಟೆ ಕಿರುಚುತ್ತಲೇ ಇದೆ, ನನ್ನ ಪ್ಯಾಂಟ್ ಒದ್ದೆಯಾಗಿದೆ… ಆದರೆ ನಾ ಎಣಿಸಿದ್ದು ಏನೊಂದೂ ಘಟಿಸಲಿಲ್ಲ. ಮೆಲ್ಲಗೆ ಕಣ್ಣ ತೆರೆಯುತ್ತಿದ್ದೇನೆ. ಪೋಲಿಸರು ಓಡಿ ಬರುತ್ತಿದ್ದಾರೆ, ಜನ ಮತ್ತೆ ಮುತ್ತಿಕೊಳ್ಳುತ್ತಿದ್ದಾರೆ. ಒಂದೇ ಕೂಗಾಟ, ಬಹುಶ: ನಾಯಿಗಳು ಮತ್ತೆ ಮಾಯವಾಗಿರಬೇಕು, ಜನ ಲೊಚಗುಟ್ಟುತ್ತ ಸೇರುತ್ತಿದ್ದಾರೆ. ನಾ ಬದುಕಿದ್ದೇನೆ! ಮ್! ಹಾಗಾದರೆ ನಾನಂದುಕೊಂಡಿದ್ದು ಸರಿ, ಆ ನಾಯಿಗಳು ಆಯ್ಕೆ ಮಾಡಿಕೊಂಡೆ ಸಾಯಿಸುತ್ತಿವೆ. ನಾ ಅವುಗಳ ತಿರಸ್ಕಾರಕ್ಕೆ ಒಳಗಾಗಿದ್ದೇನೆ, ಅನ್ಸುತ್ತೆ. ಅಥವ, ಅವುಗಳ ಪ್ರೀತಿಗೆ ಪಾತ್ರನಾಗಿದ್ದೇನೆ ಎಂದೂ ಅಂದುಕೊಳ್ಳಬಹುದೇನೊ!

ನಮ್ಮ ಏರಿಯಾದ ಬಸ್ ಹತ್ತಿ ಹಿಂದಿನ ಸೀಟ್ನಲ್ಲಿ ಕೂತೆ. ಬಸ್ಸು ಮೆಲ್ಲಗೆ ಜರುಗಲಾರಂಭಿಸಿತು. ಅದರ ಸದ್ದು ನಿಧಾನಕ್ಕೆ ಏರುತ್ತ ನನ್ನನ್ನು ಆವರಿಸುತ್ತಿತ್ತು. ಮುಂದಿದ್ದವರನ್ನೆಲ್ಲ ಒಮ್ಮೆ ನೋಡಿದೆ. ಎಲ್ಲರೂ ಹೆಣದ ಮೆರವಣಿಗೆಯಲ್ಲಿ ಕೂತವರಂತೆ ಕತ್ತ ಇಳಿಬಿಟ್ಟಿದ್ದರು. ಆದರೆ ಡ್ರೈವರ್ ಮಾತ್ರ ಏನೇನೋ ಕಿರುಚುತ್ತ ಬೀಡಿ ಸೇದುತ್ತಿದ್ದಾನೆ. ನನ್ನ ಮುಂದಿನ ಸೀಟ್ನಲ್ಲಿದ್ದಾತ ಬಸ್ನೊಳಗಿನ ಮೌನವ ಮುರಿವಂತೆ ಇಲ್ನೋಡ್ರಿ, ಧೂಮಪಾನ ನಿಷೇಧ ಅಂತ ಬೋಡರ್ು, ಅಲ್ಲಿ ಬಸ್ ಓಡಿಸೋಣ ಕೈಯಲ್ಲೇ ಬೀಡಿ… ಈ ದೇಶ ಯಾವತ್ತು ಸರಿ ಹೋಗತ್ತೊ… ನಾ ಡ್ರೈವರ್ನತ್ತ ನನ್ನ ನೋಟವ ಬದಲಿಸಿದೆ. ಆತ ಎಡಗೈಯಲ್ಲಿ ಗೇರ್ ಬದಲಿಸುತ್ತ, ಬಲಗೈಯಲ್ಲಿ ಸ್ಟೇರಿಂಗ ತಿರುಗಿಸುತ್ತ ದೇಹವ ಅಲ್ಲಾಡಿಸುತ್ತಿರವುದು ಕಾಣಿಸಿತು. ಬಹುಶ: ಬೀಡಿ ಆತನ ಬಾಯಲ್ಲಿದ್ದಿರಬೇಕು, ಬಗ್ಗಿಕೊಂಡಿದ್ದ ಆತನ ಕುತ್ತಿಗೆಯ ಸೀಳಿ ಹೊಗೆ ಬುಸ್ಸೆಂದು ಬರುತ್ತ ಗಾಳಿಯಲ್ಲಿ ಲೀನವಾಗುತ್ತಿತ್ತು. ಚಣ ಕಳೆದು ‘ಕ್ರ್ಕ್ರ್’ ಎನ್ನುತ್ತ ಕತ್ತ ಕಿಟಕಿಯಾಚೆ ತಳ್ಳಿ ಕ್ಯಾಕರಿಸಿ ಉಗಿದ. ಅಲ್ಲ್ಲಿದ್ದವರಿಗೆಲ್ಲ ತಮ್ಮ ಮುಖದ ಮೇಲೆ ಆತ ಉಗಿದಂತೆ ತೋಚಿ ಮೂಗ ಸೊಟ್ಟಗೆ ಮಾಡಿಕೊಂಡರು. ನನ್ನ ಮುಂದಿದ್ದಾತ ಹಣೆ ಚಚ್ಚಿಕೊಳ್ಳುತ್ತ ಈ ಜನ್ಮದಲ್ಲಿ ಇವರು ಉದ್ಧಾರವಾಗಲ್ಲ ಕಣ್ರಿ, ಸ್ವಚ್ಛ ಭಾರತ ಎನ್ನೋದು ಸಾಧ್ಯವೇ ಇಲ್ಲ, ಬಿಡಿ… ಎನ್ನುತ್ತಿದ್ದ.

ನಾನಾಗ ಮಿಷೆಲ್ ಫುಕೊನ ದಿ ಸಬ್ಜೆಕ್ಟ್ ಅಂಡ್ ಪವರ್ ಪುಸ್ತಕವ ಎರಡನೇ ಬಾರಿ ಓದಲು ತೆಗೆಯುತ್ತಿದ್ದೆ. ಎಷ್ಟು ಸಾರಿ ಓದಿದರೂ ಮತ್ತೆಮತ್ತೆ ಓದಿಸಿಕೊಳ್ಳುವ ಕ್ರಿಯಾಶೀಲ ತುಡಿತ ಆತ, ಸೆಕ್ಸ್ನಂತೆ. ಆ ಪುಸ್ತಕದ ಲೇಖನಗಳಲ್ಲಿ ಅವನು ಮನುಷ್ಯನ ಸ್ವಭಾವಕ್ಕೂ ಸಮಾಜದ ಅಧಿಕಾರ ಕೇಂದ್ರಗಳಿಗೂ ಇರುವ ಸಂಬಂಧಗಳ ಚರ್ಚಿಸುತ್ತಾನೆ. ಆ ಪುಸ್ತಕದ ಮೊದಲ ಸಾಲನ್ನು ಮುಟ್ಟುತ್ತಿದ್ದಂತೆ ನನಗೆ ಖಾತ್ರಿಯಾಯ್ತು; ಮನುಷ್ಯರ ತಿನ್ನುವ ನಾಯಿಗಳು ಇಷ್ಟರಲ್ಲೇ ಇಲ್ಲಿ ಎರಗುತ್ತವೆ, ಎನ್ನುವುದು.

***

‍ಲೇಖಕರು admin

21 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading