ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ ಕಾಲಂ: ದೇವಾನಂದ್ ಏಕೆ ವಿಶಿಷ್ಟವಾಗಿ ಕಾಣುತ್ತಾರೆ ?

ನಾ ದಿವಾಕರ

1950ರ ದಶಕದ ಭಾರತೀಯ ಚಿತ್ರರಂಗದಲ್ಲಿ ಪ್ರಧಾನವಾಗಿ ಕೇಳಿಬರುತ್ತಿದ್ದುದು ಮೂರು ಹೆಸರುಗಳು. ಟ್ರಾಜಿಡಿ ಕಿಂಗ್ ಎಂದೇ ಹೆಸರಾದ, ಭಾವನಾತ್ಮಕ ನಟನೆಗೆ ಸ್ಪಷ್ಟ ನಿದರ್ಶನ ಒದಗಿಸಿದ ದಿಲೀಪ್ ಕುಮಾರ್, ಚಾಲರ್ಿ ಚಾಪ್ಲಿನ್ ಹಾದಿಯಲ್ಲೇ ಹಾಸ್ಯ ಸನ್ನಿವೇಶಗಳ ಮೂಲಕ ಸಮಾಜಕ್ಕೆ ಸಂದೇಶಾತ್ಮಕ ಚಿತ್ರಗಳನ್ನು ನೀಡುತ್ತಿದ್ದ ರಾಜ್ಕಪೂರ್ ಮತ್ತು ಈ ಇಬ್ಬರು ಮಹಾನ್ ನಟರಿಗೂ ಸರಿಸಮನಾಗಿ ನಿಲ್ಲಲು ತಮ್ಮದೇ ಆದ ವಿಶಿಷ್ಟ ಹಾವಭಾವಗಳನ್ನು ರೂಢಿಸಿಕೊಂಡು ಯುವ ಪೀಳಿಗೆಯ ಹೃನ್ಮನಗಳಿಗೆ ಲಗ್ಗೆ ಇಟ್ಟಿದ್ದ ರೊಮ್ಯಾಂಟಿಕ್ ಹೀರೋ ದೇವಾನಂದ್. ಇದೇ ಪೀಳಿಗೆಯ ಇತರ ನಟರಿಗೆ ಹೋಲಿಸಿದರೂ ದೇವ್ ಅಂತಹ ಅದ್ಭುತ ನಟ ಎಂದು ಹೇಳಲಾಗುವುದಿಲ್ಲ. ಭಾರತದ ಸಂದರ್ಭದಲ್ಲಿ ಉತ್ತಮ ನಟನೆ ಎಂದರೆ ಭಾವನಾತ್ಮಕ ನಟನೆ ಎಂದೇ ಅಥರ್ೈಸಲಾಗುವುದರಿಂದ, ಇದೇ ಅವಧಿಯಲ್ಲಿ ಇತರ ಭಾಷೆಗಳಲ್ಲಿ ಹೆಸರು ಮಾಡಿದ್ದ ರಾಜ್ಕುಮಾರ್, ಶಿವಾಜಿಗಣೇಶನ್, ಪ್ರೇಮ್ನಜೀರ್ ಮುಂತಾದವರ ಸಾಲಿನಲ್ಲಿ ದೇವಾನಂದ್ ನಿಲ್ಲುವವರಲ್ಲ. ಕಾರಣ ಅವರ ನಟನೆಯಲ್ಲಿ ದಿಲೀಪನಂತೆ ಕಂಗಳಲ್ಲೇ ಭಾವ ವ್ಯಕ್ತಪಡಿಸುವ ಛಾಪು ಆಗಲಿ, ಪ್ರೇಕ್ಷಕರನ್ನು ನಗಿಸುತ್ತಲೇ ಕಣ್ಣೀರು ಸುರಿಸುವಂತೆ ಮಾಡುವ ರಾಜ್ಕಪೂರನ ಚಾಪ್ಲಿನ್ ಛಾಯೆಯಾಗಲಿ, ತಮ್ಮ ಮುಖಭಾವದಿಂದಲ್ಲೇ ಪ್ರೇಕ್ಷಕರನ್ನು ಅಳಿಸುವ ಶಿವಾಜಿ-ರಾಜ್ಕುಮಾರ್ ಅವರ ನಟನಾ ಕೌಶಲ್ಯವಾಗಲೀ ಕಾಣಲಾಗುತ್ತಿರಲಿಲ್ಲ.

ಆದರೆ ಈ ಎಲ್ಲ ನಟರನ್ನೂ ಮೀರಿಸುವ ಸಾಮಥ್ರ್ಯ ದೇವ್ ಅವರಲ್ಲಿತ್ತು ಎಂದರೆ ಅನೇಕರಿಗೆ ಅಚ್ಚರಿಯಾಗಬಹುದು. ಹೌದು. ದೇವ್ ಅವರಲ್ಲಿ ಛಲ ಇತ್ತು. ತಾವು ಮಾಡಬೇಕೆಂದುಕೊಂಡದನ್ನು ಮಾಡಿಯೇ ತೀರುವ ಛಲ. ಈ ಛಲದ ಪರಿಣಾಮವೇ ಅವರ ನವಕೇತನ್ ಸ್ಟುಡಿಯೋ ಮತ್ತು ಅಲ್ಲಿಂದ ಹೊರಬಂದ ಅದ್ಭುತ ಚಿತ್ರಗಳು, ನಟರು, ನಟಿಯರು ಮತ್ತು ಸಹ ನಟರು. ರಾಜ್ಕಪೂರ್ ತಮ್ಮ ಸಿನಿಮಾಗಳಲ್ಲಿ ಭಾರತೀಯ ಸಮಾಜವನ್ನು ಕಾಡುತ್ತಿದ್ದ ಗಂಭೀರ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಮಹಿಳಾ ಸಮಸ್ಯೆಗಳು, ಬಾಲ್ಯವಿವಾಹ, ಮಕ್ಕಳ ಸಮಸ್ಯೆಗಳನ್ನು ಬಿಂಬಿಸಲು ಯತ್ನಿಸುತ್ತಿದ್ದರು. ಇದು ಒಂದು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವ್ಯಕ್ತವಾಗುವಂತೆ ರಾಜ್ ಎಚ್ಚರ ವಹಿಸುತ್ತಿದ್ದುದೂ ಹೌದು. ಹಾಗಾಗಿ ಅವರ ಚಿತ್ರಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಪ್ರತಿಷ್ಠಿತ ಸ್ಥಾನ ಪಡೆಯುತ್ತಿದ್ದವು.

ಇದೇ ಅವಧಿಯಲ್ಲಿ ದೇವಾನಂದ್ ಸಮಾಜವನ್ನು ಕಾಡುವ ಇತರ ಸಾಮಾನ್ಯ ಸಮಸ್ಯೆಗಳ ಬಗ್ಗೆ ಚಿತ್ರಗಳನ್ನು ನಿಮರ್ಿಸುತ್ತಿದ್ದುದು ಅವರ ವೈಶಿಷ್ಟ್ಯ. ಗಂಭೀರವಾದ ಕಥನವುಳ್ಳ ಚಿತ್ರಗಳನ್ನು ತೆರೆಗೆ ನೀಡುವ ಬದಲು ದೇವಾನಂದ್ ಆಯ್ಕೆ ಮಾಡಿದ್ದು ಲವಲವಿಕೆಯಿಂದ ಕೂಡಿದ ರೊಮ್ಯಾಂಟಿಕ್ ಚಿತ್ರಗಳನ್ನು. ಯುವ ಪೀಳಿಗೆಗೆ ಅಗತ್ಯವಾದ ಮನರಂಜನೆಯನ್ನು ನೀಡುತ್ತಲೇ ತಮ್ಮ ನಟನಾ ಕೌಶಲ್ಯದ ಇತಿಮಿತಿಗಳನ್ನು ಅರಿತು ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದುದು ದೇವ್ ಅವರ ವಿಶಿಷ್ಟ ಲಕ್ಷಣಗಳಲ್ಲೊಂದು. ಗುರುದತ್ ಅವರಂತಹ ಅಪ್ರತಿಮ ಪ್ರತಿಭೆಗೆ ಒಂದು ಅವಕಾಶ ನೀಡಿದ್ದೇ ಅಲ್ಲದೆ ಹಿಂದಿ ಚಿತ್ರರಂಗದಲ್ಲಿ ನೆಲೆಯೂರಲು ನೆರವಾಗಿದ್ದು ದೇವ್ ಅವರ ಹೆಗ್ಗಳಿಕೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಿಂದಲೂ ದೇವ್ ಅವರಲ್ಲಿದ್ದ ಒಂದು ವಿಶೇಷ ಲಕ್ಷಣವೆಂದರೆ ಆತ್ಮವಿಶ್ವಾಸ. ತಾವು ಮಾಡಿದ್ದೆಲ್ಲವೂ ಸರಿ ಎಂಬ ಅಹಂ ಇಲ್ಲದಿದ್ದರೂ ತಮಗೆ ತೋಚಿದ್ದನ್ನು ಮಾಡಿಯೇ ತೀರುವ ಹಂಬಲ ಅವರಲ್ಲಿ ಮನೆಮಾಡಿತ್ತು.

ಈ ಹಂಬಲವೇ ಅವರನ್ನು 65 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೆರೆಸಲು ಕಾರಣ. ನಿನ್ನೆಯನ್ನು ಸೋಲಿಸಲಾಗದಿದ್ದಲ್ಲಿ ನನಗೆ ನಾಳೆಗೊಂದು ಚಿತ್ರ ತಯಾರಿಸುವ ಹಕ್ಕು ಇರುವುದಿಲ್ಲ ಎಂದು ದೃಢವಾಗಿ ನಂಬಿದ್ದ ದೇವಾನಂದ್ಗೆ ಸಿನಿಮಾ ಎಂದರೆ ಕೇವಲ ಒಂದು ವೃತ್ತಿಯಲ್ಲ. ಅದು ಅವರ ಜೀವನ ಶೈಲಿ. ಇಲ್ಲವಾದಲ್ಲಿ ಕಳೆದ 30 ವರ್ಷಗಳಲ್ಲಿ ಒಂದೂ ಯಶಸ್ವಿ ಚಿತ್ರವನ್ನು ತಯಾರಿಸಲು ಸಾಧ್ಯವಾಗದ ಒಬ್ಬ ಕಲಾವಿದ, ತನ್ನ 88ನೆಯ ವಯಸ್ಸಿನಲ್ಲೂ ಚಿತ್ರ ನಿಮರ್ಿಸಿ ನಟಿಸುವುದು ಸಾಧ್ಯವೇ ? ನಿಮ್ಮ ಬಹುತೇಕ ಸಿನಿಮಾಗಳು ಸೋಲುತ್ತಿದ್ದರೂ ಏಕೆ ಚಿತ್ರ ನಿಮರ್ಿಸುತ್ತೀರಿ ಎಂಬ ಪ್ರಶ್ನೆಗೆ ಅವರ ಉತ್ತರವೇನು ಗೊತ್ತೇ ? ನಾನು ಒಬ್ಬ ಸಿನಿಮಾ ನಿಮರ್ಾಪಕ, ನನಗಿನ್ನೇನು ಕೆಲಸ ಇದೆ ? ಅಷ್ಟೆ. ಅಂದರೆ ದೇವ್ಗೆ ಸಿನಿಮಾ ಎನ್ನುವುದು ಲಾಭ ನಷ್ಟಗಳ ವ್ಯವಹಾರವಲ್ಲ, ಅದೊಂದು ನಿರಂತರ ಪ್ರಕ್ರಿಯೆ. ಎದೆಗುಂದದೆ ಮುನ್ನಡೆಯಬಹುದಾದ ವಾಹಿನಿ. ಜನಸಾಮಾನ್ಯರಿಗೆ ಶುದ್ಧ ಮನರಂಜನೆ ಒದಗಿಸುತ್ತಲೇ ಸೂಕ್ಷ್ಮ ಸಂದೇಶಗಳನ್ನು ನೀಡುವ ಒಂದು ಪ್ರಮುಖ ಮಾಧ್ಯಮ. ಅವರ ಚಿತ್ರಗಳಲ್ಲಿ ಎದ್ದು ಕಾಣುವುದೂ ಇದೇ ಅಂಶವೇ.

ದೇವ್ ತಮ್ಮ ಚಿತ್ರ ನಿಮರ್ಾಣದಲ್ಲಿ ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ, ನಾಯಕಿಯ ಪಾತ್ರಕ್ಕೆ ನಟಿಯರನ್ನು ಶೋಧಿಸುವುದರಿಂದ, ಚಿತ್ರದ ಹಾಡುಗಳ ನಿರೂಪಣೆಯವರೆಗೂ ಅವರು ತಮ್ಮದೇ ಆದ ಭೂಮಿಕೆ ನಿರ್ವಹಿಸುತ್ತಿದ್ದರು. ದೇವಾನಂದ್-ಮಧುರ ಹಾಡುಗಳು ಬಹುಶಃ ಪಯರ್ಾಯ ಪದಗಳೆಂದೇ ಹೇಳಬಹುದು. ಇದಕ್ಕೆ ಕಾರಣ ದೇವ್ ತೋರುತ್ತಿದ್ದ ಅಸಕ್ತಿ. ಸಂಗೀತ ನಿದರ್ೇಶಕರೊಡನೆ ಕುಳಿತು ಸಿನಿಮಾದ ಕಥಾಹಂದರಕ್ಕೆ ಅನುಗುಣವಾದ ಮಧುರ ಗೀತೆಗಳಿಗೆ ಜನ್ಮ ನೀಡುತ್ತಿದ್ದ ದೇವ್ಗೆ ಸಂಗೀತವೂ ಜೀವನದ ಒಂದು ಭಾಗವೇ. ಅವರ ಚಿತ್ರಗಳ ಸಂಗೀತವನ್ನು ಆಲಿಸುತ್ತಿದ್ದರೆ ನಾವು ಬೇರೊಂದು ಲೋಕದಲ್ಲೇ ವಿಹರಿಸಿದಂತಾಗುತ್ತದೆ. ಸಿಗರೇಟನ್ನು ಬಾಯಲ್ಲಿ ಕಚ್ಚಿ ಹಿಡಿದು ಅವರು ಹಾಡಿದ ಮೈ ಜಿಂದಗೀ ಕ ಸಾಥ್ ನಿಭಾಥಾ ಚಲಾಗಯಾ ಎಂಬ ಹಂದೋನೋ ಚಿತ್ರದ ಹಾಡು ಎಷ್ಟು ಜನಪ್ರಿಯವಾಗಿತ್ತೆಂದರೆ, ತುಟಿಗಳ ನಡುವೆ ಸಿಗರೇಟ್ ಇಟ್ಟುಕೊಂಡು ಮಾತನಾಡುವುದೇ ಒಂದು ಫ್ಯಾಷನ್ ಆಗಿಹೋಗಿತ್ತು.

1950-60ರ ದಶಕದ ಯುವ ಪೀಳಿಗೆಗೆ ಒಂದು ಮಾದರಿಯಾಗಿದ್ದ ದೇವ್ ಆನಂದ್ ಎಲ್ಲರ ಗಮನ ಸೆಳೆದಿದ್ದು ಅವರ ವಿಶಿಷ್ಟ ಶೈಲಿಯಿಂದಲೇ. ಪಟಪಟನೆ ಮಾತನಾಡುವುದು, ಸದಾ ನಗುಮೊಗದಿಂದಿರುವುದು, ತಲೆದೂಗಿಸುವುದು, ಕತ್ತು ಸೊಟ್ಟಗೆ ಮಾಡಿ ನಡೆಯುವುದು, ಬಿರಬಿರನೆ ನಡೆಯುವುದು ಹೀಗೆ ಅವರ ಶೈಲಿಯನ್ನು ಅನುಕರಿಸದ ಯುವಕರೇ ಇರಲಿಲ್ಲವೆಂದು ಹೇಳಬಹುದು. ಅವರ ಕ್ರಾಪ್ ಸ್ಟೈಲನ್ನು ಸಹ ಯುವಕರು ಅನುಕರಿಸಿದ್ದುಂಟು. ಯುವ ಜನತೆಗೆ ಮೆಚ್ಚುವಂತಹ ಕಥೆಗಳನ್ನು ನೀಡುವುದೇ ಅಲ್ಲದೆ ಪ್ರತಿಯೊಂದು ಹೊಸ ಚಿತ್ರಕ್ಕೂ ನವ ನಟಿಯರನ್ನು ಶೋಧಿಸುವ ಮೂಲಕ ಅಸಂಖ್ಯಾತ ಕಲಾವಿದರಿಗೆ ಅವಕಾಶ ಒದಗಿಸಿದ್ದು ದೇವ್ ಅವರ ನವಕೇತನ್ನ ಹೆಗ್ಗಳಿಕೆ. ಹೆಚ್ಚು ಸುದ್ದಿ ಮಾಡದೆ ತಮ್ಮ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದ ದೇವ್ ಪ್ರಚಾರಪ್ರಿಯರಾಗಿರಲಿಲ್ಲ. ಆದರೆ ಸಹಕಲಾವಿದರಿಗೆ ಅವರ ಸಹಾಯ ಹಸ್ತ ಸದಾ ಸಿದ್ಧವಾಗಿರುತ್ತಿತ್ತು. ತಾವು ಪಟಪಟನೆ ಏಕೆ ಮಾತನಾಡುತ್ತೀರಿ ಎಂದು ಕೇಳಿದಾಗ ಅವರ ಉತ್ತರ, ಜೀವನದಲ್ಲಿ ಸಿಗುವ ಅವಧಿ ಕಡಿಮೆ, ನನಗೆ ಹೆಚ್ಚು ಸಮಯವಿಲ್ಲ ಅದಕ್ಕಾಗಿ ಬೇಗಬೇಗನೆ ಮಾತನಾಡುತ್ತೇನೆ ಎನ್ನುತ್ತಿದ್ದರು.

ತಾವೇ ನಿಮರ್ಾಪಕ-ನಿದರ್ೇಶಕರಾಗಿ ದೇವ್ ನಟಿಸಿದ ಬಹುತೇಕ ಚಿತ್ರಗಳು ತೋಪಾಗಿರುವುದೇ ಹೆಚ್ಚು. 1979ರ ದೇಸ್ ಪದರ್ೇಸ್ ನಂತರ ಅವರ ಒಂದೇ ಒಂದು ಚಿತ್ರವೂ ಯಶಸ್ವಿಯಾಗಿಲ್ಲ. ಆದರೆ ಈ ವೈಫಲ್ಯ ದೇವಾನಂದ್ ಅವರ ಹಿರಿಮೆಯನ್ನು ತಗ್ಗಿಸುವುದಿಲ್ಲ. ಸಾಂಪ್ರದಾಯಿಕತೆ ತಾಂಡವಾಡುತ್ತಿದ್ದ ಸಮಾಜದಲ್ಲಿ ಗೈಡ್, ಹರೇರಾಮ ಹರೇಕೃಷ್ಣ ಮುಂತಾದ ಮಹೋನ್ನತ ಚಿತ್ರಗಳನ್ನು ನಿಮರ್ಿಸಿದ್ದು ಅವರ ಧೈರ್ಯ ಸಾಹಸಗಳ ದ್ಯೋತಕ. ನಿಮ್ಮ ಚಿತ್ರಗಳಲ್ಲಿ ನಿಮಗೆ ಪ್ರಿಯವಾದ ಚಿತ್ರ ಯಾವುದು ಎಂದು ಕೇಳಿದರೆ ಥಟ್ ಎಂದು ಹೇಳುತ್ತಿದ್ದುದು , ಎಲ್ಲವೂ ! ಹಾಡುಗಳ ಬಗ್ಗೆಯೂ ಅಷ್ಟೆ. ಇದನ್ನು ಅಹಂ ಎಂದವರೂ ಉಂಟು. ಆದರೆ ದೇವ್ ಅವರಲ್ಲಿದ್ದುದು ಆತ್ಮಾಭಿಮಾನ. ನನ್ನ ಕಲಾಕೃತಿ ನನಗೇ ಇಷ್ಟವಾಗದಿದ್ದರೆ ಜನತೆಗೆ ಹೇಗೆ ಇಷ್ಟವಾದೀತು ಎಂಬುದು ಅವರ ಪ್ರಶ್ನೆ .

ಇಂತಹ ಅನೇಕಾನೇಕ ವಿಶಿಷ್ಟ ಗುಣಗಳ ದೇವ್ ಇಂದು ನಮ್ಮನ್ನಗಲಿದ್ದಾರೆ. ಬಹುತೇಕ ಏಳು ದಶಕಗಳ ಯುವಜನತೆಗೆ ಶುದ್ಧ ಮನರಂಜನೆ ನೀಡಿದ ದೇವ್ ಸಾಹೆಬ್ ಎಂದೂ ಅಶ್ಲೀಲತೆಯನ್ನು ಬಳಸಿದವರಲ್ಲ. ಮತ್ತೊಬ್ಬ ನಾಯಕ ನಟನೊಡನೆ ನಟಿಸಿದವರೂ ಅಲ್ಲ. ದೇವ್ ಮತ್ತೊಬ್ಬ ಹೀರೋನೊಡನೆ ನಟಿಸಿದ ಚಿತ್ರ ಬಹುಶಃ ಇಲ್ಲವೇ ಇಲ್ಲ ಎನಿಸುತ್ತದೆ. ಕೊನೆಯವರೆಗೂ ಹೀರೋ ಆಗಿಯೇ ನಟಿಸಿದ ಈ ಮಹಾನ್ ಕಲಾವಿದನನ್ನು ಹೇಗೆ ಮರೆಯುವುದು ? ಮುಖತಃ ಕಾಣದಿದ್ದರೂ ಅವರ ಆರು ದಶಕಗಳಿಗೂ ಹೆಚ್ಚು ಕಾಲದ ಸುಮಧುರ ಸಂಗೀತದ ಹೊಳೆ ಸದಾ ಭಾರತೀಯರ ಹೃನ್ಮನಗಳಲ್ಲಿ ಹರಿಯುತ್ತಲೇ ಇರುತ್ತದೆ. ಏ ರಾತ್ ಏ ಚಾಂದ್ನೀ ಫಿರ್ ಕಹಾಂ ಸುನ್ ಜಾ ದಿಲ್ ಕಿ ದಾಸ್ತಾನ್ ಎಂದು ತಮ್ಮ ಜೀವನದುದ್ದಕ್ಕು ರಜತ ಪರದೆಯ ಮೇಲೆ ಕಥೆಗಳನ್ನು ಹೇಳುತ್ತಲೇ ಬಂದ ದೇವ್ ಸಾಹೆಬ್ಗೆ ನಮನ ಸಲ್ಲಿಸುವ ಒಂದೇ ಪರಿ ಎಂದರೆ ಅಭೀ ನ ಜಾವೋ ಚೋಡ್ಕರ್ ಎ ದಿಲ್ ಅಭೀ ಭರಾ ನಹೀಂ ಎಂಬ ಹಾಡನ್ನು ಗುನುಗುನಿಸುವುದು.

 

 

 

 

‍ಲೇಖಕರು G

12 December, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading