ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಲೇಖನಕ್ಕೆ ಶ್ವೇತಾ ಹೊಸಬಾಳೆ ಪ್ರತಿಕ್ರಿಯೆ

ನಾ ದಿವಾಕರ್ ‘ನೇರ ನುಡಿ’ ಸಮಾನತೆ ಎಂಬ ಮರೀಚಿಕೆ ಗೆ ಪ್ರತಿಕ್ರಿಯೆ

– ಶ್ವೇತಾ ಹೊಸಬಾಳೆ.

ದೆಹಲಿಯಿಂದ ಮುಂಬೈಗೆ ಹೊರಟಿದ್ದ ವಿಮಾನದ ಚಾಲಕಿ ಮಹಿಳೆಯಾಗಿದ್ದು, ಅದಕ್ಕೆ ಒಬ್ಬ ಪ್ರಯಾಣಿಕ ನನಗೆ ಸಾಯಲು ಇಚ್ಛೆ ಇಲ್ಲ, ತನ್ನ ಮನೆಯನ್ನೇ ನಿರ್ವಹಿಸಲಾಗದ ಹೆಣ್ಣು ವಿಮಾನವನ್ನು ಹೇಗೆ ನಿರ್ವಹಿಸಬಲ್ಲಳು? ಎಂದು ಕೆಲವು ಗಂಟೆಗಳ ಕಾಲ ವಿಮಾನವನ್ನು ತಡೆಹಿಡಿದಿದ್ದ ಎನ್ನುವ ಸುದ್ದಿಯನ್ನು ನಾ ದಿವಾಕರ ಅವರ ಲೇಖನದಲ್ಲಿ ಓದಿ ಪೂರ್ವಾಗ್ರಹ ಈ ಮಟ್ಟದಲ್ಲಿಯೂ ಇರುತ್ತದಾ? ಎಂದು ಆಶ್ಚರ್ಯವಾಯಿತು, ಜೊತೆಗೆ ಖೇದ ಕೂಡಾ. ನಿಜವಾಗಿಯೂ ಅದೊಂದು ಮನೋವೈಕಲ್ಯವೇ.

ಮೇಲಿನ ಘಟನೆಗೆ ಹೊಂದುವಂತೆ ಅಂದರೆ ಹೆಣ್ಣಿನ ವಾಹನಚಾಲನಾಶಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸುವವರು, ಕಾಮೆಂಟ್ ಮಾಡುವವರಂತೂ ಬಹಳ ಮಂದಿ. ಅದಕ್ಕೆ ಸಂಬಂಧಿಸಿದಂತೆ ಕೆಲವು ಅನುಭವಗಳನ್ನು, ಅವಳು ಮಹಿಳೆ ಎನ್ನುವ ಕಾರಣಕ್ಕೆ ಅವಳ ಚಾಲನಾ ಸಾಮಥ್ರ್ಯದ ಮೇಲೆ ಸಂಶಯಪಟ್ಟು ವಿಮಾನವನ್ನೇ ತಡೆಹಿಡಿದ ಉದ್ಧಟತನದ ಕತೆ ಕೇಳಿದ ಮೇಲಂತೂ ಹೇಳಿಕೊಳ್ಳದೆ ಸುಮ್ಮನಿರಲಾಗುತ್ತಿಲ್ಲ.

ಕೆಲವು ತಿಂಗಳುಗಳ ಹಿಂದೆ ಕಾರಿನಲ್ಲಿ ಊರಿನಿಂದ ಹಿಂತಿರುಗುತ್ತಿದ್ದ ಸಂದರ್ಭ: ಅದೊಂದು ಟೋಲ್ ಗೇಟಿನಲ್ಲಿ ಟೋಲ್ ಕಟ್ಟಿ ಮುಂದೆ ಹೋಗಬೇಕು, ನಮ್ಮ ಕಾರಿಗಿಂತ ಮುಂದಿದ್ದ ಕಾರು ಸ್ಟಾಟರ್್ ಆಗುತ್ತಿಲ್ಲ, ಏನೋ ತೊಂದರೆಯಾಗಿ ಹಾಗೇ ನಿಂತುಬಿಟ್ಟಿತ್ತು. ಇದರಿಂದ ವಾಹನಗಳು ಮುಂದೆ ಹೋಗಲಾಗದೆ ಹಿಂದೆ ಸಾಲುಗಟ್ಟಿ ನಿಂತಿದ್ದವು. ಹಿಂದಿನವರಿಗೆ ಮುಂದೆ ಹೋಗುವ ಆತುರ, ಏನಾಗಿದೆ ಅಂತಲೂ ತಿಳಿಯುತ್ತಿಲ್ಲ. ಎಷ್ಟೇ ಒದ್ದಾಡಿದರೂ ಮುಂದಿದ್ದ ಕಾರು ಮೇಲೇಳುತ್ತಿಲ್ಲ, ಚಲಿಸುತ್ತಿಲ್ಲ. ದುಡ್ಡು ತೆಗೆದುಕೊಂಡು ರಶೀದಿ ಕೊಡುತ್ತಿದ್ದವ ಹೆಂಗುಸ್ರಿಗೆಲ್ಲ ಯಾಕ್ ಕಾರ್ ಕೊಡ್ತಾರೋ? ನೋಡಿ ಹೆಂಗಾಗೈತೆ ಎಂದು ಗೊಣಗಿದಾಗಲೇ ನನಗೆ ಗೊತ್ತಾಗಿದ್ದು ಡ್ರೈವಿಂಗ್ ಸೀಟಿನಲ್ಲಿದ್ದಿದ್ದು ಮಹಿಳೆ ಎಂದು. ಅವನು ಹೇಳಿದ್ದಕ್ಕೆ ಸಹಮತವಿದೆಯೆಂಬಂತೆ ಡ್ರೈವಿಂಗ್ ಸೀಟಿನಲ್ಲಿದ್ದ ನನ್ನವನು ನಕ್ಕು ನನ್ನೆಡೆಗೆ ನೋಡಿದ. ನನಗೋ ಮೈಯ್ಯೆಲ್ಲ ಉರ್ದು ಹೋಯ್ತು. ಏನೋ ತೊಂದರೆಯಾಗಿ ಕಾರು ಸ್ಟಾರ್ಟ್  ಆಗುತ್ತಿಲ್ಲ, ಅದಕ್ಕೆ ಹೆಂಗಸು ಡ್ರೈವ್ ಮಾಡುತ್ತಿದ್ದುದೇ ಕಾರಣ ಎನ್ನುವ ಅವನ ಧೋರಣೆ, ಅದರ ಹಿಂದಿರುವ ಹೆಂಗಸರಿಗೆ ಸರಿಯಾಗಿ ಗಾಡಿ ಓಡಿಸಲು ಬರುವುದಿಲ, ಸುಮ್ನೆ ಮಕ್ಕಳನ್ನ ನೋಡಿಕೊಂಡು ಮನೇಲಿರೋದುಬಿಟ್ಟು ಯಾಕಾದ್ರೂ ಕಾರು ಓಡಿಸಿಕೊಂಡು ಬರ್ತಾರೋ ಎನ್ನುವ ಮನೋಭಾವ ನನ್ನನ್ನು ಸಿಟ್ಟಿಗೆಬ್ಬಿಸಿತ್ತು.

ಅದಾಗಿ ಕೆಲವು ದಿನಗಳ ನಂತರ ನಮ್ಮ ಸಂಬಂಧಿಕರೊಬ್ಬರು ಹೊಸದಾಗಿ ಕಾರು ತೆಗೆದುಕೊಂಡಿದ್ದು ಹೀಗೇ ಮಾತಾಡುತ್ತಿರುವಾಗ ನೀನು ಕಾರು ಓಡಿಸೋದು ಕಲ್ತಾಯ್ತು . . ನಿನ್ ಕೈಲಿ ಕಾರು ಕೊಟ್ರೆ ಅಷ್ಟೆ ಎಂದು ತಮ್ಮ ಹೆಂಡತಿಯನ್ನುದ್ದೇಶಿಸಿ ಹೇಳಿದ್ರು. ಇದರ ಹಿಂದಿರವುದೂ ಅದೇ ಹೆಂಗುಸ್ರೆಲ್ಲ ಏನ್ ಕಾರ್ ಓಡಿಸ್ತಾರೆ ಎನ್ನುವ ಅದೇ ನಿರ್ಲಕ್ಷ್ಯ ಧೋರಣೆ.

ಇನ್ನೊಮ್ಮೆ ಕಾರು ಸರ್ವಿಸಿಗೆ ಕೊಡಲು ಹೋದ ನನ್ನವನು ವಾಪಾಸ್ ಬಂದು ಅಲ್ಲೊಬ್ಬನ ಹೊಸಾ ಕಾರು ಮುಂದೆ ತುಂಬ ಜಜ್ಜಿಹೋಗಿತ್ತು, ಅವನ ಹೆಂಡ್ತಿ ತಗೊಂಡು ಹೋಗಿದ್ಲಂತೆ ಎಂದಿದ್ದರ ಹಿಂದೆಯೂ ಅದೇ ಭಾವ! ಹೆಂಗುಸ್ರಿಗೆಲ್ಲ ಯಾಕ್ ಕಾರ್ ಕೊಡ್ತಾರೋ? ಎಂದಿದ್ದ ಆ ಟೋಲ್ ಕೀಪರ್ ಮಾತು ನನ್ನ ಕಿವಿಯಲ್ಲಿ ಮತ್ತೊಮ್ಮೆ ಪ್ರತಿಧ್ವನಿಸಿತು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಎಲ್ಲಿಂದೆಲ್ಲಿಗೆ ಹೋದರೂ ಬರೀ ಡ್ರೈವಿಂಗ್ ಮಾತ್ರವಲ್ಲ, ಬೇರೆ ವಿಷಯಗಳಲ್ಲಿಯೂ ಮಹಿಳೆಯರಿಗೆ ಸಂಬಂಧಿಸಿದಂತೆ ಈ ರೀತಿಯ ಮಾತು-ಅಭಿಪ್ರಾಯಗಳು ಪಕ್ಷಪಾತಿ ಧೋರಣೆಗಳು ಸರ್ವವ್ಯಾಪಿ. ಇದಕ್ಕೆ ವಿಮಾನಯಾನ ತಡೆಗಟ್ಟಿದ ಆ ಭೂಪ, ಆ ಘಟನೆ ಒಳ್ಳೆಯ ನಿದರ್ಶನ. ಕೆಲವರು ವ್ಯಕ್ತಪಡಿಸುತ್ತಾರೆ, ಮತ್ತೆ ಕೆಲವರು ಬಾಯಿಬಿಟ್ಟು ಹೇಳುವುದಿಲ್ಲ ಅಷ್ಟೆ, ಮನಸ್ಸಿನಲ್ಲಿರುವುದು ಮಾತ್ರ ಅದೇ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಮೊನ್ನೆ ಮೊನ್ನೆ ಆಫೀಸಿನಲ್ಲಿ ಒಂದಿಬ್ಬರು ಗಂಡಸರು ಮಾತಾಡುತ್ತಿದ್ದುದು: ಅದ್ಯಾರಿಗೋ ವಯಸ್ಸು 40 ರ ಹತ್ತಿರ ಬಂದಿದ್ದರೂ ಇನ್ನೂ ಮದುವೆಯಾಗಿಲ್ಲವಂತೆ, ತೋರಿಸಿದ ಗಂಡುಗಳಲ್ಲೆಲ್ಲಾ ಏನಾದರೊಂದು ದೋಷ ಹುಡುಕಿ ತಿರಸ್ಕರಿಸುತ್ತಿದ್ದಳಂತೆ ಎಂದು ಶುರುವಾಗಿ ಹೆಣ್ಣುಮಕ್ಕಳನ್ನು ಜಾಸ್ತಿ ಓದಿಸಬಾರದು, ಓದಿಸಿದ್ರೆ ಅವರಿಗೆ ಸರಿ ಹೊಂದುವಂತಹ ಗಂಡನ್ನು ಹುಡುಕುವುದು ಕಷ್ಟ, ಹಾಗಿರ್ಬೇಕು, ಹೀಗಿರ್ಬೇಕು ಎನ್ನುವ ಡಿಮ್ಯಾಂಡುಗಳೂ ಜಾಸ್ತಿ, ಅದಕ್ಕೆ ಡಿಗ್ರಿ ಆಗುತ್ತಿದ್ದ ಹಾಗೆ ಮದುವೆ ಮಾಡಿಬಿಡಬೇಕು! ಅವರ ಮಾತಿನ ಹಿಂದಿನ ಉದ್ದೇಶ ಏನಿದೆಯೋ ಗೊತ್ತಿಲ್ಲ, ಆದ್ರೆ ಧ್ವನಿಸಿದ್ದು ಮಾತ್ರ ಹೆಣ್ಣಿಗೆ ಮದುವೆಯೇ ಅಂತಿಮ ಎನ್ನುವ ಭಾವ.

ಈ ಹಿನ್ನೆಲೆಯಲ್ಲಿ ಅಂತಹ ಮನೋವೈಕಲ್ಯ ಒಂದು ರೀತಿಯಲ್ಲಿ ಅವ್ಯಕ್ತ ರೂಪದಲ್ಲಿ ಬಹುಪಾಲು ಪುರುಷರಲ್ಲೂ ಇರಲು ಸಾಧ್ಯ, ಮೇಲೆ ಹೇಳಿದ ಪ್ರಸಂಗ ಮರೆಯುವಂತಹುದೇ ಆದರೂ ಈ ಪ್ರಸಂಗಗಳಿಗೆ ಪೂರಕವಾಗಿರುವ ಮನೋಭಾವವನ್ನು ಅಲಕ್ಷಿಸುವಂತಿಲ್ಲ. ಭಾರತದ ಬಹುಪಾಲು ಪುರುಷರು ಇದೇ ಮನೋಭಾವ ಹೊಂದಿರುತ್ತಾರೆ ಎಂದು ಹೇಳಲಾಗದು. ಆದರೂ ತಮ್ಮ ಮನದ ಯಾವುದೋ ಒಂದು ಮೂಲೆಯಲ್ಲಿ ಪ್ರತಿಯೊಬ್ಬ ಪುರುಷನೂ ಒಂದು ಪ್ರಶ್ನೆಯನ್ನು ಹಾಕಿಕೊಳ್ಳುತ್ತಾನೆ. ಈಕೆ ಈ ಉದ್ದಿಮೆಯನ್ನು ನಡೆಸಬಲ್ಲಳೇ, ವಿಮಾನ ನಿರ್ವಹಿಸಬಲ್ಲಳೇ. ಬಸ್ ಚಾಲಕಿಯಗಿ ದುಡಿಯಬಲ್ಲಳೇ, ಮುಖ್ಯಮಂತ್ರಿಯಾಗಿ ಯಶಸ್ವಿಯಾಗಬಲ್ಲಳೇ ಈ ರೀತಿ – ಎಂದು ನಾ ದಿವಾಕರ್ ಹೇಳಿದ್ದು ತುಂಬಾ ಪ್ರಸ್ತುತವೆನ್ನಿಸುತ್ತದೆ.

ಅಂದು ಆ ಟೋಲ್ಕೀಪರ್ ಮಾತಿಗೆ ಸಿಟ್ಟುಬಂದಿದ್ದರೂ ತಕ್ಷಣ ಪ್ರತಿಕ್ರಿಯಿಸುವುದಕ್ಕೆ ಅವಕಾಶವಾಗದೆ, ಅವನ ಮಾತು ಆಗಾಗ ಕಿವಿಯಲ್ಲಿ ಗುಂಯ್ಗುಟ್ಟಿ ಅಂದೇ ಅವನಿಗೆ ಸರೀ ಕೊಟ್ಟುಗಾಣಿಸಬೇಕಿತ್ತು, ಎಂದು ನಿರಾಶಳಾಗಿದ್ದೆ. ಈಗ ಅದೇ ರೀತಿಯ ಮನೋಭಾವದ ಬಗ್ಗೆ ನಾ ದಿವಾಕರ್ ಬರೆದು ಅದಕ್ಕೆ ಸಪೋರ್ಟಿವ್  ಆಗಿ ನಾನು ಆ ಟೋಲ್ಕೀಪರ್ ಬಗ್ಗೆ ಬರೆಯುವ ಅವಕಾಶವೊದಗಿ ಬಂದು ಎಲ್ಲೋ ಅವನ ಮಾತನ್ನು ಪ್ರತಿಭಟಿಸಿದಷ್ಟೇ ಸಮಾಧಾನ. ಮಹಿಳಾ ದಿನಾಚರಣೆ ದಿನ ಅರ್ಥಪೂರ್ಣ ಲೇಖನ ಪ್ರಕಟಿಸಿದ ‘ಅವಧಿ’ಗೆ ಧನ್ಯವಾದ.

‍ಲೇಖಕರು G

8 March, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading