ನಾ ದಿವಾಕರ
ದೇಶದ ಜನಸಾಮಾನ್ಯರ ದೃಷ್ಟಿಯಲ್ಲಿ ರಾಜಕಾರಣ/ರಾಜಕೀಯ ಎಂದರೆ ಜನತೆಯಿಂದ ಚುನಾಯಿತರಾದ ಪ್ರತಿನಿಧಿಗಳು ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ರಾಜ್ಯದ/ದೇಶದ ಪ್ರಜೆಗಳ ಅಭಿವೃದ್ಧಿಗಾಗಿ ಶ್ರಮಿಸುವ ಒಂದು ಪ್ರಕ್ರಿಯೆ ಎಂದಾಗಿತ್ತು. ಈ ಪ್ರಕ್ರಿಯೆಯಲ್ಲಿ ಒಂದು ಗುಂಪು ಅಧಿಕಾರರೂಢರಾಗಿದ್ದರೆ ಮತ್ತೊಂದು ಗುಂಪು ವಿರೋಧಿ ನೆಲೆಗಟ್ಟಿನಲ್ಲಿ ನಿಂತು ಆಳುವ ಪಕ್ಷದ ತಪ್ಪು ಒಪ್ಪುಗಳನ್ನು ಜನತೆಗೆ ತಿಳಿಸುತ್ತಾ ಆಡಳಿತದ ಸುಧಾರಣೆಗಾಗಿ ಶ್ರಮಿಸುತ್ತದೆ. ಈ ಚೌಕಟ್ಟಿನೊಳಗೇ ನಡೆಯುವ ವಿದ್ಯಮಾನಗಳಲ್ಲಿ ಏನೇ ನ್ಯೂನತೆಗಳು ಕಂಡುಬಂದರೂ ಅವುಗಳನ್ನು ಸರಿಪಡಿಸಲು ನ್ಯಾಯಾಂಗ ಮತ್ತು ಕಾರ್ಯಾಂಗ ಸಿದ್ಧವಾಗಿರುತ್ತವೆ. ರಾಜಕೀಯ ವ್ಯವಸ್ಥೆ, ಆಡಳಿತ ಯಂತ್ರ ಮತ್ತು ಅಧಿಕಾರಶಾಹಿ ಎಷ್ಟೇ ಕುಲಗೆಟ್ಟು ಹೋದರೂ ಸಂವಿಧಾನ ಬದ್ಧವಾಗಿ ಐದು ವರ್ಷಕ್ಕೊಮ್ಮೆ ಜನತೆಯ ಬಳಿ ವೋಟಿನ ಭಿಕ್ಷೆ ಬೇಡುವ ಅಗತ್ಯತೆ ಎಲ್ಲಾ ರಾಜಕೀಯ ಪಕ್ಷಗಳನ್ನೂ ಕಟ್ಟಿಹಾಕಿರುತ್ತದೆ. ಇದು ಮೂಲತಃ ರಾಜಕಾರಣದ ಬಗ್ಗೆ ಜನತೆಯಲ್ಲಿರುವ ನಿರೀಕ್ಷೆ.
ಆದರೆ ಭಾಜಪ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ರಾಜಕಾರಣದ ಮೂಲ ಅರ್ಥವೇ ಬದಲಾಗಿಹೋಗಿದೆ. ಇಲ್ಲಿ ಆಳುವ ಪಕ್ಷ ಎಂದರೆ ಏನಾದರೂ ಮಾಡು ಅಧಿಕಾರದಲ್ಲಿರು ಎಂಬ ಮಂತ್ರವನ್ನು ಪಠಿಸುವ ಒಂದು ಭ್ರಷ್ಟ ಪ್ರಕ್ರಿಯೆಯಾಗಿದೆ. ಮತ್ತೊಂದೆಡೆ ವಿರೋಧ ಪಕ್ಷ ಎಂದರೆ ಆಳುವ ಪಕ್ಷದ ಭ್ರಷ್ಟಾಚಾರವನ್ನು ಬಹಿರಂಗಗೊಳಿಸುವ ಏಜೆನ್ಸಿಯಂತಾಗಿದೆ. ಆಳುವ ವರ್ಗಕ್ಕೇ ಸೇರಿದ ವಿರೋಧ ಪಕ್ಷಗಳಿಗೂ ಸಂವಿಧಾನ ಬದ್ಧವಾದ ಕೆಲವು ಮೂಲಭೂತ ಕರ್ತವ್ಯಗಳಿವೆ, ಪ್ರಜಾಹಿತದ ದೃಷ್ಟಿಯಿಂದ ಮಾಡಬೇಕಾದ ಕೆಲವು ಮಹತ್ತರ ಕಾರ್ಯಗಳಿವೆ ಎಂಬ ಸಂಗತಿಯನ್ನೇ ಕರ್ನಾಟಕದ ರಾಜಕೀಯ ಪಕ್ಷಗಳು ಮರೆತಂತಿದೆ. ಹಾಗಾಗಿ ಕಳೆದ ಎರಡು ವರ್ಷಗಳಿಂದ ರಾಜ್ಯದ ಜನತೆ ಭ್ರಷ್ಟಾಚಾರ, ಭೂ ಸ್ವಾಧೀನ, ಡಿ ನೋಟಿಫಿಕೇಷನ್, ಭೂ ಹಗರಣ, ಅಕ್ರಮ ಗಣಿಗಾರಿಕೆ, ಆಪರೇಷನ್ ಕಮಲ ಇವೇ ಮುಂತಾದ ಹಗರಣಗಳನ್ನು ಬಿಟ್ಟರೆ ಮತ್ತಾವ ರಾಜಕಾರಣವನ್ನೂ ಕಂಡಿಲ್ಲ. ಪರಿಣಾಮ ರಾಜ್ಯದಲ್ಲಿ ಸೃಷ್ಟಿಯಾಗಿರುವ ಅರಾಜಕತೆ.
ಈಗ ಮತ್ತೊಂದು ಹೊಸ ಪ್ರಹಸನಕ್ಕೆ ಕುಮಾರ ಸ್ವಾಮಿ ನಾಂದಿ ಹಾಡಿದ್ದಾರೆ. ಜನತಾದಳ ಪಕ್ಷವನ್ನು ಕಟ್ಟಲು ಹಣ ನೀಡುವುದಾಗಿ ಯಡಿಯೂರಪ್ಪನವರು ತಮಗೆ ಆಮಿಷ ಒಡ್ಡಿದ್ದರು ಎಂಬ ಕುಮಾರಸ್ವಾಮಿಯ ಹೇಳಿಕೆ ಮತ್ತೊಂದೆ ವ್ಯಾಪಕ ಚರ್ಚೆ, ವಾದವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆಯಲು ಮಾನ್ಯ ಮುಖ್ಯಮಂತ್ರಿಗಳು ಧರ್ಮಸ್ಥಳದ ಮಂಜುನಾಥೇಶ್ವರನ ಸನ್ನಿಧಿಯಲ್ಲಿ ಆಣೆ ಮಾಡುವುದಾಗಿ ಶಪಥ ಮಾಡಿದ್ದಾರೆ. ಈ ಪಂಥಾಹ್ವಾನವನ್ನು ಮಾಜಿ ಮುಖ್ಯಮಂತ್ರಿಗಳೂ ಸ್ವೀಕರಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ ಇಬ್ಬರು ರಾಜಕಾರಣಿಗಳು ಈ ರೀತಿ ಆಣೆ ಮಾಡುವ ಮೂಲಕ ತಮ್ಮ ವಾದವನ್ನು ಸಮರ್ಥಿಸಲು ಹೊರಟಿರುವುದು ಇಬ್ಬರ ಅಪ್ರಬುದ್ಧತೆ ಮತ್ತು ಕರ್ನಾಟಕ ರಾಜಕಾರಣದ ದುರ್ವ್ಯವಸ್ಥೆಯ ಪ್ರತೀಕವಾಗಿಯೇ ಕಾಣುತ್ತದೆ.
ಒಂದು ವೇಳೆ ಇಬ್ಬರೂ ತಮ್ಮ ನಿಲುವುಗಳಿಗೆ ಬದ್ಧರಾಗಿ ಆಣೆ ಪ್ರಮಾಣ ಮಾಡಿದರೆನ್ನಿ. ಆಗ ತಪ್ಪಿತಸ್ಥರು ಯಾರು ಎಂದು ನಿರ್ಧರಿಸುವ ಹೊಣೆಗಾರಿಕೆ ಮಂಜುನಾಥೇಶ್ವರನದಾಗುತ್ತದೆಯೇ ? ಅಥವಾ ವೀರೇಂದ್ರ ಹೆಗ್ಡೆ ಡಿ ಫ್ಯಾಕ್ಟೋ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಾರೋ ? ಸುಳ್ಳಿನ ಹಾದಿಯಲ್ಲೇ ಸಾಗಿಬಂದು ರಾಜಕೀಯ ನೆಲೆ ಕಂಡುಕೊಂಡಿರುವ ರಾಜಕಾರಣಿಗಳ ಆಣೆ ಪ್ರಮಾಣಗಳಿಗೆ ಜನಸಾಮಾನ್ಯರು ಏಕೆ ಬೆಲೆ ಕೊಡಬೇಕು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಸಂವಿಧಾನ ಬದ್ಧರಾಗಿ ಸ್ವೀಕರಿಸುವ ಪ್ರಮಾಣವಚನಕ್ಕೇ ಶ್ರದ್ಧೆ, ನಿಷ್ಠೆ, ಬದ್ಧತೆ ತೋರದಿರುವ ಪ್ರಭೃತಿಗಳು ಅಗೋಚರ ದೈವತ್ವದ ಮುಂದೆ ಮಾಡುವ ಪ್ರಮಾಣಕ್ಕೆ ಹೇಗೆ ಮೌಲ್ಯ ಕಟ್ಟಲು ಸಾಧ್ಯ ? ಬಹುಶಃ ಧರ್ಮಸ್ಥಳದಲ್ಲಿ ಬಾಬಾ ರಾಂದೇವ್ ತರಹದ ಮತ್ತೊಂದು ಮನರಂಜನಾ ಪ್ರಹಸನವನ್ನು ಕರ್ನಾಟಕದ ಜನತೆ ಎಂಜಾಯ್ ಮಾಡಬಹುದೇನೋ.
ದೇವೇಗೌಡರ ಕುಟುಂಬ ಯಡಿಯೂರಪ್ಪನವರ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದೆ. ಅನೇಕ ಭೂ ಹಗರಣಗಳ ಕಡತಗಳನ್ನು ಜನತೆಯ ಮುಂದಿಡುತ್ತಿದೆ. ಲೋಕಾಯುಕ್ತ, ಉಚ್ಚ ನ್ಯಾಯಾಲಯದಲ್ಲೂ ಅನೇಕ ಪ್ರಕರಣಗಳು ದಾಖಲಾಗಿದ್ದು ಮೊಕದ್ದಮೆ ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ರಾಜ್ಯ ಭಾಜಪ ಸರ್ಕಾರ ಏನೂ ನಡೆದೇ ಇಲ್ಲವೆಂಬಂತೆ ಮುಂದುವರೆಯುತ್ತಿರಲು ಕಾರಣ, ವಿರೋಧ ಪಕ್ಷಗಳ ಮೌಲ್ಯ ರಹಿತ ರಾಜಕಾರಣ ಮತ್ತು ಈ ಪಕ್ಷಗಳಲ್ಲಿ ಕಾಣಲಾಗದ ಸಂವಿಧಾನ ನಿಷ್ಠೆ. ಪ್ರಾಥಮಿಕ ಶಾಲಾ ಮಕ್ಕಳಂತೆ ಆಣೆ ಪ್ರಮಾಣಗಳ ರಾಜಕಾರಣ ಮಾಡುವ ಕೀಳು ಮಟ್ಟದ ರಾಜಕಾರಣ, ರಾಜಕೀಯ ಭ್ರಷ್ಟಾಚಾರದಂತಹ ಗಂಭೀರ ವಿಚಾರಗಳನ್ನು ಮನರಂಜನಾ ವಸ್ತುವನ್ನಾಗಿ ಮಾಡಿಬಿಡುತ್ತದೆ. ರಾಜ್ಯದಲ್ಲಿ, ದೇಶದಲ್ಲಿ ಬೇರೂರಿರುವ ಭ್ರಷ್ಟಾಚಾರ ಕೇವಲ ಒಂದು ಪಕ್ಷಕ್ಕೆ ಸೀಮಿತವಾದ ವಿದ್ಯಮಾನವಲ್ಲ. ಅಥವಾ ಒಂದು ಕ್ಷೇತ್ರಕ್ಕೆ ಮೀಸಲಾಗಿರುವುದೂ ಅಲ್ಲ.
ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಒಳಗೊಳಗೇ ಶಿಥಿಲವಾಗುತ್ತಿದೆ. ಈ ದುರವಸ್ಥೆಯ ವಿರುದ್ಧ ದೇಶದ ಜನಸಾಮಾನ್ಯರು ವಿಭಿನ್ನ ಸ್ತರಗಳಲ್ಲಿ ಹೋರಾಟದ ಹಾದಿ ಹಿಡಿಯುತ್ತಿರುವ ಈ ಸಂದರ್ಭದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾದ ಪಕ್ಷಗಳು ಈ ರೀತಿಯ ನಾಲ್ಕಾಣೆ ರಾಜಕಾರಣ ಮಾಡುವುದು ಖಂಡನಾರ್ಹ. ಭ್ರಷ್ಟಾಚಾರ ಇಂದು ಸರ್ವವ್ಯಾಪಿಯಾಗಿದೆ. ಭ್ರಷ್ಟರು ಸರ್ವಾಂತರ್ಯಾಮಿಗಳಾಗಿದ್ದಾರೆ. ಭ್ರಷ್ಟತೆಯ ಆರೋಪಗಳು ಪರಸ್ಪರ ದೋಷಾರೋಪಗಳಿಗೆ ಸೀಮಿತವಾಗಿದೆ. ಇಡೀ ರಾಜಕೀಯ ವ್ಯವಸ್ಥೆಯನ್ನು ಫಿನಾಲ್‌ನಲ್ಲಿ ತೊಳೆದು ಸ್ವಚ್ಚಗೊಳಿಸಬೇಕಾಗಿದೆ. ಕರ್ನಾಟಕದ ಜನತೆಗೆ ಮನರಂಜನೆ ಸಾಕಾಗಿದೆ. ಸ್ವಚ್ಚ ಆಡಳಿತ ಬೇಕಿದೆ. ಸಾಧ್ಯವಾದರೆ ಒದಗಿಸಿ. ಇಲ್ಲವೇ ನಿರ್ಗಮಿಸಿ ಎಂದು ಒಕ್ಕೊರಲಿನಿಂದ ಹೇಳೋಣವೇ ?








ಎನಗೂ ಆಣೆ ರಂಗ
ನಿನಗೂ ಆಣೆ
ಎನಗು ನಿನಗೂ ಇಬ್ಬರಿಗೂ ಭಕ್ತರಾಣೆ..
*
ಚಿಕ್ಕಂದಿನಲ್ಲಿ ಗೋಲಿಯಾಟದಲ್ಲಿ ಸೋತಾಗ ಗೆಳೆಯರಿಗೆಲ್ಲ ವಾಪಸ್ ಕೊಡ್ರೋ..ಇಲ್ಲಾಂದ್ರೆ ನಮ್ಮಕ್ಕನ್ನ ಕರ್ಕೊಂಡು ಬರ್ತೀನಿ ಅಂತ
ಹೆದರಿಸುತ್ತಿದ್ದೆ. ಇವಾಗ ಅದನ್ನೆಲ್ಲ ನೆನೆಸಿಕೊಂಡರೆ ನಗು ಬರುತ್ತೆ.ಯಡಿಯೂರಪ್ಪ-ಕುಮಾರಸ್ವಾಮಿಗಳ ‘ಆಣೆಯಾಟ’ ನೋಡಿದ ಮೇಲೂ
ಅಂಥದೇ ನಗೆ ಬರುತ್ತಿದೆ..ಇಂಥವರಿಗೆಲ್ಲಾ ಕಾಮೆಂಟ್ ಬೇರೆ ಕೇಡು!
ಯಡಿಯೂರಪ್ಪನವರು ಮಂಜುನಾಥ ಸ್ವಾಮಿಯ ಮೇಲೆಯೇ ಯಾಕೆ ಆಣೆ ಇಟ್ಟರು? ಅವರ ಅತ್ಯಂತ ನಂಬುಗೆಯ ಸಿದ್ದಗಂಗಾ ಮಠದ ಮೇಲೇಕೆ ಆಣೆ ಇಡಲಿಲ್ಲ? ಮಂಜುನಾಥನ ಸನ್ನಿಧಿಗೆ ಅವರ ದೃಷ್ಟಿಯಲ್ಲಿ ಎರಡನೇ ಸ್ಥಾನವೇ? ಅಥವಾ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಬ್ಬರ ಸ್ಫೂರ್ತಿದೇವತೆಯರು, ಮಂಜುನಾಥ ಸ್ವಾಮಿ ನೆಲೆ ನಿಂತಿರುವ ಮಣ್ಣಿಗೆ ಸೇರಿದವರು ಎಂಬುದು ಇದಕ್ಕೆ ಕಾರಣವಾಗಿರಬಹುದೇ?….ಅಂತೂ ಪ್ರಹಸನ ಮುಂದುವರಿಯುತ್ತಿದೆ..ನಮಗೆಲ್ಲಾ ಪುಕ್ಕಟೆ ಮನರಂಜನೆ. ಆದರೆ ಜೋಕರುಗಳು ಎಲ್ಲಾ ಕಾಲಕ್ಕೂ ಜನರನ್ನು ರಂಜಿಸಲು ಸಾಧ್ಯವಿಲ್ಲ ಎಂಬುದು ನಮ್ಮ ನಂಬಿಕೆ. ಅಲ್ವಾ ಸರ್?