ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ನೇರನುಡಿ: ವಿವೇಕಾನಂದರೇ ನೀವೆಲ್ಲಿದ್ದೀರಿ ?

ನಾ ದಿವಾಕರ ಭರತ ಭೂಮಿಯಲ್ಲಿ ಜನಿಸಿ ತಮ್ಮ ಜೀವನ ಪಾವನವಾಯಿತು ಎಂದು ಭಾವಿಸುತ್ತಲೇ ಭಾರತೀಯ ಸಮಾಜಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿ ಹೋದ ಮಹಾತ್ಮರಿಗೆ, ಉದಾತ್ತ ಚಿಂತಕರಿಗೆ ನಮ್ಮ ದೇಶದಲ್ಲೇನೂ ಕೊರತೆಯಿಲ್ಲ. ಇತಿಹಾಸ ಕಾಲದಿಂದಲೂ ಸಾಮಾಜಿಕ, ಸಾಂಸ್ಕೃತಿಕ, ಕಲಾಕ್ಷೇತ್ರಗಳಲ್ಲಿ, ಧಾಮರ್ಿಕ ಕ್ಷೇತ್ರಗಳಲ್ಲಿ ಇಂತಹ ಮಹನೀಯರು ಆಗಿಹೋಗಿದ್ದಾರೆ. ದೇಶದ ಜನಸಾಮಾನ್ಯರಿಗೆ ತಮ್ಮ ಸ್ಪಷ್ಟ ಸಂದೇಶ, ಮಾರ್ಗದರ್ಶನ, ಉದಾತ್ತ ಚಿಂತನೆ ಮತ್ತು ವ್ಯಕ್ತಿತ್ವದ ರೂಪು ರೇಷೆಗಳನ್ನು ಬಿಟ್ಟು ಹೋಗಿದ್ದಾರೆ. ಪುರಾಣ ಕಥನಗಳ ಜನಕರಿಂದ ಹಿಡಿದು ಇತ್ತೀಚಿನ ಮಹಾತ್ಮ ಗಾಂಧೀಜಿ, ಅಂಬೇಡ್ಕರ್ವರೆಗೆ ( ಅವರ ನಂತರದಲ್ಲಿ ಮಹಾತ್ಮ ಎಂಬ ಪದ ತನ್ನ ಅರ್ಥವನ್ನೇ ಕಳೆದುಕೊಂಡಿರುವುದನ್ನು ಗಮನದಲ್ಲಿಡಬೇಕು) ಇಂತಹ ಅಮೂಲ್ಯ ಜೀವಗಳು ಭಾರತೀಯ ಸಮಾಜದ ವಿಭಿನ್ನ ರಂಗಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿ ಮರೆಯಾಗಿದ್ದಾರೆ. ಆ ಹೆಜ್ಜೆ ಗುರುತುಗಳು ಭರತ ಖಂಡದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ ಎಂದರೆ ಅದನ್ನು ಉಳಿಸಿಕೊಂಡಿರುವುದಕ್ಕೆ ಹೆಮ್ಮೆ ಪಡುವ ಅಗತ್ಯವಿಲ್ಲ, ಅವು ಉಳಿದಿರುವುದು ಆ ಹೆಜ್ಜೆಗಳಲ್ಲಿನ ಸತ್ವದಿಂದ ಅಷ್ಟೇ. ಮಹಾತ್ಮರೆಂದು ಅಧಿಕೃತವಾಗಿ ಗಾಂಧಿಯನ್ನು ಮಾತ್ರ ಗುರುತಿಸಲಾಗುವುದಾದರೂ ಈ ದೇಶ ಅನೇಕ ಮಹಾತ್ಮರನ್ನು ಸೃಷ್ಟಿಸಿದೆ. ಈ ಚಿಂತಕರ ಅಭಿಪ್ರಾಯಗಳು ಎಷ್ಟೇ ಚಚರ್ಾಸ್ಪದವಾಗಿದ್ದರೂ, ವಿವಾದಾಸ್ಪದವಾಗಿದ್ದರೂ ಎಲ್ಲೋ ಒಂದು ಕಡೆ ಸಮಾಜದ ಒಳಿತಿಗಾಗಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿರುವುದು ಮಾತ್ರ ಅಲ್ಲಗಳೆಯಲಾಗದ ಸತ್ಯ. ಗಾಂಧೀಜಿಯವರ ನಿಷ್ಠೆ, ಪ್ರಾಮಾಣಿಕತೆ, ಅಂಬೇಡ್ಕರ್ ಅವರ ದಮನಿತರ ಪರವಾದ ಕಾಳಜಿ, ವಿವೇಕಾನಂದರ ಆಧ್ಯಾತ್ಮ ಮತ್ತು ವ್ಯವಸ್ಥೆಗೆ ವ್ಯತಿರಿಕ್ತವಾದ ನಿಲುವು ಹೀಗೆ ಎಲ್ಲ ಚಿಂತಕರೂ ತಮ್ಮದೇ ಆದ ವೈಶಿಷ್ಟ್ಯದಿಂದ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ ನಾವು ಮಾಡಿರುವುದೇನು. ಎಲ್ಲ ಮಹನೀಯರನ್ನೂ ಪ್ರತಿಮೆಗಳಲ್ಲಿ ಬಂಧಿಸಿ ಉಪ್ಪರಿಗೆಯ ಮೇಲೆ ಕೂಡಿಸಿಬಿಟ್ಟಿದ್ದೇವೆ. ಮಹಾನ್ ದಾರ್ಶನಿಕ ಚಿಂತಕರಿಗೆ ಭಾವಚಿತ್ರದಿಂದ ಉಪ್ಪರಿಗೆಗೆ ಬಡ್ತಿ ನೀಡುವ ಮೂಲಕ ಜನಸಾಮಾನ್ಯರಿಂದ ಈ ಮಹಾತ್ಮರನ್ನು ದೂರ ಇರಿಸಿದ್ದೇವೆ. ಹಾಗೆಯೇ ಅವರ ಚಿಂತನೆ-ಧೋರಣೆಗಳನ್ನೂ. ಇದು ಒಂದು ಆಯಾಮ. ಮತ್ತೊಂದು ಆಯಾಮವೆಂದರೆ ಭಾರತದ ಇತಿಹಾಸದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿರುವ ಪ್ರತಿಯೊಬ್ಬ ದಾರ್ಶನಿಕ ಮಹಾತ್ಮರನ್ನೂ ನಾವು ಯಾವುದೋ ಒಂದು ಅಸ್ಮಿತೆಯಲ್ಲಿ ಬಂಧಿಸಿಬಿಟ್ಟಿದ್ದೇವೆ. ವಾಲ್ಮೀಕಿಯಿಂದ ಅಂಬೇಡ್ಕರ್ವರೆಗೆ, ಕಾಳಿದಾಸನಿಂದ ಕುವೆಂಪುವರೆಗೆ, ಶ್ರೀರಾಮನಿಂದ ನೆಹರೂವರೆಗೆ, ಪುರಂದರದಾಸರಿಂದ ವಿವೇಕಾನಂದರವರೆಗೆ, ಎಲ್ಲ ಚಿಂತಕರನ್ನೂ, ತತ್ವಜ್ಞಾನಿಗಳನ್ನೂ ಅಸ್ಮಿತೆಗಳ ಲೋಕದಲ್ಲಿ ಬಂಧಿಸಿ ಪಂಜರದ ಸರಳುಗಳ ನಡುವೆ ವೈಭವಯುತವಾಗಿ ಪ್ರತಿಷ್ಠಾಪಿಸಿಬಿಟ್ಟಿದ್ದೇವೆ. ಪರಿಣಾಮ ಸ್ಪಷ್ಟ, ಈ ಚಿಂತಕರ ಧೋರಣೆ, ಚಿಂತನೆ, ಬೋಧನೆಗಳೆಲ್ಲವೂ ಕೆಲವೇ ಪ್ರಬಲ ವರ್ಗಗಳ ವ್ಯಾಖ್ಯಾನಗಳಿಗೊಳಗಾಗಿ ತಮ್ಮ ಸಾರ್ವಜನಿಕರ ದೃಷ್ಟಿಯಲ್ಲಿ ತಮ್ಮ ಅಂತಃಸತ್ವವನ್ನೇ ಕಳೆದುಕೊಂಡುಬಿಡುತ್ತವೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಅಂತಃಪ್ರಜ್ಞೆ ಎಷ್ಟು ಆಳವಾಗಿ ಬೇರೂರಿದೆ ಎಂದರೆ ದೇಶದ ಬೌದ್ಧಿಕ ಚಿಂತನೆಯನ್ನು ರೂಪಿಸುವ ದಾರ್ಶನಿಕರೂ ಸಹ ಜಾತಿ-ಧರ್ಮ-ಪ್ರಾದೇಶಿಕ ಹಿತಾಸಕ್ತಿಗಳ ಖಾಸಗಿ ಸ್ವತ್ತುಗಳಾಗಿಬಿಡುತ್ತಾರೆ. ನಮ್ಮವರಾದರೂ ನಮ್ಮವರಲ್ಲ ಹಾಗಾಗಿಯೇ ಗಾಂಧೀಜಿ ಕಾಂಗ್ರೆಸ್ ಪಕ್ಷದ ಸ್ವತ್ತಾದರೆ, ವಿವೇಕಾನಂದರು ಹಿಂದುತ್ವ ಗುಂಪುಗಳ ಸ್ವತ್ತಾಗುತ್ತಾರೆ. ಕುವೆಂಪು ಗೌಡ ಸಮುದಾಯದ ಅಸ್ಮಿತೆಯೇ ಆಗುತ್ತಾರೆ. ಕನಕದಾಸರು ಕುರುಬ ಸಮುದಾಯದ ಖಾಸಗಿ ಆಸ್ತಿಯಾಗುತ್ತಾರೆ. ಅಂಬೇಡ್ಕರ್ ಅವರನ್ನು ದಲಿತ ಸಮುದಾಯದ ಚೌಕಟ್ಟಿನಲ್ಲೇ ಬಂಧಿಸಲಾಗುತ್ತದೆ. ರಾಮಾಯಣದಂತಹ ಮಹಾನ್ ಕಾವ್ಯ ರಚಿಸಿದ ವಾಲ್ಮೀಕಿಯೂ ಒಂದು ಜಾತಿ ಸಮುದಾಯದ ಬಂಧಿಯಾಗುತ್ತಾರೆ. ಈ ಹಿನ್ನೆಲೆಯಲ್ಲೇ ವಿವೇಕಾನಂದರ ಸುತ್ತ ಉದ್ಭವಿಸಿರುವ ವಿವಾದವನ್ನು ನೋಡಬೇಕಾಗುತ್ತದೆ. ಅಂಕಣಕಾರರೊಬ್ಬರು ಸ್ವಾಮಿ ವಿವೇಕಾನಂದರನ್ನು ಕುರಿತ ಕೆಲವು ಸತ್ಯಗಳನ್ನು ಬಿಚ್ಚಿಡುವುದೇ ಮಹಾಪರಾಧವಾಗಿಬಿಡುತ್ತದೆ. ಮುಂದೊಂದು ದಿನ ವಾಲ್ಮೀಕಿಯನ್ನು ಕುರಿತೂ ಇದೇ ವಿವಾದ ಸೃಷ್ಟಿಯಾಗಬಹುದು. ಏಕೆಂದರೆ ಸ್ವತಂತ್ರ ಭಾರತದಲ್ಲಿ ದಾರ್ಶನಿಕರನ್ನು ಕುರಿತು ಸ್ವಂತ ವ್ಯಾಖ್ಯಾನ ಮಾಡುವ ಹಕ್ಕನ್ನು ಸಾರ್ವಭೌಮ ಪ್ರಜೆಗಳು ಕಳೆದುಕೊಂಡುಬಿಟ್ಟಿದ್ದಾರೆ ಅಥವಾ ಪ್ರಜೆಗಳಿಂದ ಈ ಹಕ್ಕನ್ನು ಕಸಿದುಕೊಂಡು ಕೆಲವೇ ಗುಂಪುಗಳಿಗೆ ಗುತ್ತಿಗೆ ನೀಡಲಾಗಿದೆ. ಪಾಪ ! ಇಲ್ಲಿ ಬಡಪಾಯಿಗಳಾಗಿ ಕಾಣುವುದು ವಿವೇಕಾನಂದರಂತಹ ದಾರ್ಶನಿಕರೇ. ಏಳಿ ಎದ್ದೇಳಿ ಜಾಗೃತರಾಗಿ ಎಂದು ಯಾವ ಘಳಿಗೆಯಲ್ಲಿ ಹೇಳಿದರೋ, ಆ ಘೋಷಣೆಯನ್ನು ಹಿಂಡಿ ಹಿಪ್ಪೆಕಾಯಿ ಮಾಡಿ, ದೇಶದ ಜನರ ಮತೀಯ, ಭಾಷಿಕ, ಜಾತೀಯ, ಪ್ರಾದೇಶಿಕ ಭಾವನೆಗಳನ್ನು ಬಡಿದೆಬ್ಬಿಸುವ ಒಂದು ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ಶತಮಾನಕ್ಕೂ ಹಿಂದೆ ಭಾರತೀಯ ಸಮಾಜವನ್ನು ಇಂದಿನಂತೆಯೇ, ಇಂದಿಗಿಂತಲೂ ಹೆಚ್ಚಾಗಿ ಕಾಡುತ್ತಿದ್ದ ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಪ್ರತಿರೋಧಿಸಿ ಅಂದಿನ ಕಾಲಘಟ್ಟಕ್ಕೆ ಅನ್ವಯಿಸುವ ರೀತಿಯಲ್ಲಿ ಭಾರತದ ಭವಿಷ್ಯವನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಿದ ವಿವೇಕಾನಂದರ ಚಿಂತನೆಗಳನ್ನು ಸಮಕಾಲೀನ ಸಂದರ್ಭದ ಸಂಘಪರಿವಾರ ಪ್ರಣೀತ ಹಿಂದುತ್ವದ ಚೌಕಟ್ಟಿನಲ್ಲಿ ಅಳವಡಿಸಲು ಹೊರಟಿರುವುದೇ ನಾವು ಮಾಡುತ್ತಿರುವ ಅಕ್ಷಮ್ಯ ಅಪರಾಧ ಎಂದು ಹೇಳಬಹುದು. ಬ್ರಿಟೀಷ್ ಆಳ್ವಿಕೆಯ ವಿರುದ್ಧ, ಪಾಶ್ಚಾತ್ಯ ಸಂಸ್ಕೃತಿಯ ದಾಳಿಯ ವಿರುದ್ಧ ಹೋರಾಡಲು ಹಲವರು ಹಲವು ಮಾರ್ಗಗಳನ್ನು ಅನುಸರಿಸಿದ್ದಾರೆ. ಗೋಖಲೆ, ಲಜಪತ್ರಾಯ್, ಗಾಂಧೀಜಿ, ಅಂಬೇಡ್ಕರ್ ತಮ್ಮದೇ ಆದ ಧೋರಣೆಗಳ ಮೂಲಕ ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಲು ಯತ್ನಿಸಿದ್ದಾರೆ. ಈ ಎಲ್ಲ ಮಹನೀಯರಿಗಿಂತಲೂ ಭಿನ್ನವಾಗಿ ಭಾರತದ ಭವಿಷ್ಯವನ್ನು ಆಧ್ಯಾತ್ಮದಲ್ಲಿ ಕಂಡುಕೊಂಡ ವಿವೇಕಾನಂದರಿಗೆ ಬಹುಶಃ ಭಾರತೀಯರ ಸ್ವಾತಂತ್ರ್ಯದ ಕಲ್ಪನೆ ಕಂಡುಬಂದಿದ್ದು ಅವರ ಪರಿಕಲ್ಪನೆಯ ಹಿಂದೂ ಧರ್ಮದ ಪುನರುತ್ಥಾನದಲ್ಲಿ. ವಾಸ್ತವವಾಗಿ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಸನಾತನ ಧರ್ಮದ ಬಗ್ಗೆ ವ್ಯಾಖ್ಯಾನ ಮಾಡುವಾಗ ವಿವೇಕಾನಂದರ ಮುಖ್ಯ ಉದ್ದೇಶ ಹಿಂದೂ ಧರ್ಮ ಎಂದು ಹೇಳಲಾಗುವ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿನಲ್ಲಿ ತಾಂಡವಾಡುತ್ತಿದ್ದ ಜಾತಿ ವ್ಯವಸ್ಥೆಯ ಕರಾಳ ಚಹರೆ ಮತ್ತು ಭಾರತೀಯ ಸಮಾಜವನ್ನು ಕಾಡುತ್ತಿದ್ದ ಅಸ್ಪೃಶ್ಯತೆಯ ಕರಿ ನೆರಳು. ಬ್ರಾಹ್ಮಣ ಶಾಹಿಯ ವಿರುದ್ಧ ತಮ್ಮ ಪ್ರಖರ ನುಡಿಗಳ ಮೂಲಕ ಜಾತಿ ವ್ಯವಸ್ಥೆಯ ಕರಾಳತೆಯನ್ನು ಜನಸಾಮಾನ್ಯರ ಮುಂದೆ ಬಿಚ್ಚಿಟ್ಟ ವಿವೇಕಾನಂದರ ವಾಣಿ ಬಹುಶಃ ವಾಚನಾಲಯಗಳ ಗ್ರಂಥಗಳಲ್ಲೇ ಹುದುಗಿ ಹೋಗಿದೆ ಎನಿಸುತ್ತದೆ. ಒಬ್ಬ ಸಮಾಜ ಸುಧಾರಕನ ಅಥವಾ ಕ್ರಾಂತಿಕಾರಿ ಸನ್ಯಾಸಿಯ ಸಾಮಾಜಿಕ ಕಳಕಳಿಯುಳ್ಳ ಸಂದೇಶವನ್ನು ಹೇಗೆ ಮರೆಮಾಚಬಹುದು ಎಂದು ಅರಿಯಲು ವಿವೇಕಾನಂದರ ಸಾಹಿತ್ಯವನ್ನು ಪ್ರಚಾರ ಮಾಡಿರುವ ಕ್ರಮವನ್ನು ನೋಡಬೇಕಾಗುತ್ತದೆ. ಹಸಿದ ಹೊಟ್ಟೆಗಳಿಗೆ ಉಪನ್ಯಾಸ ನೀಡದಿರಿ, ಮಾನವರನ್ನು ಮಾನವರಂತೆಯೇ ಕಾಣಿರಿ, ಅಸ್ಪೃಶ್ಯತೆ, ಅಸಮಾನತೆ, ಹಸಿವು, ಬಡತನಗಳನ್ನು ಹೋಗಲಾಡಿಸದ ತತ್ವಶಾಸ್ತ್ರಾದಿಗಳನ್ನು ತಿರಸ್ಕರಿಸಿ, ಮಾನವೀಯ ಕಾಳಜಿ ಇಲ್ಲದ ಧರ್ಮವನ್ನು ತಿರಸ್ಕರಿಸಿ, ಢಂಬಾಚಾರಗಳಿಗೆ ಬಲಿಯಾಗದಿರಿ, ಪುರೋಹಿತ ಶಾಹಿಯ ಕಪಿಮುಷ್ಠಿಯಿಂದ ಮುಕ್ತಿ ಪಡೆಯಿರಿ ಎಂದೆಲ್ಲಾ ಉಪದೇಶಿಸಿದ ವಿವೇಕಾನಂದರ ಅಸಂಖ್ಯಾತ ಭಾಷಣಗಳನ್ನು ಬದಿಗಿಟ್ಟು, ಅವರು ಆಧ್ಯಾತ್ಮ ಕ್ಷೇತ್ರದಲ್ಲಿ ಉಣಬಡಿಸಿದ ಕೆಲವು ಉಪನ್ಯಾಸಗಳನ್ನೇ ವೈಭವೀಕರಿಸಿರುವುದು ನಿಜಕ್ಕೂ ದುರಂತ. ವಿವೇಕಾನಂದ ಎಂದರೆ ಹಿಂದೂಧರ್ಮ- ಜಾಗೃತಿ- ಸನಾತನ ಧರ್ಮ- ಯೋಗ ಇಷ್ಟೇ ಎನ್ನುವ ಮಟ್ಟಿಗೆ ಮಠಾಧೀಶರುಗಳು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಮತ್ತೊಂದೆಡೆ ಹಿಂದೂ ಧರ್ಮದ ಶ್ರೇಷ್ಠತೆಯ ಬಗ್ಗೆ ವಿವೇಕಾನಂದರು ಪ್ರತಿಪಾದಿಸಿದ ವಿಚಾರಗಳನ್ನೇ ವೈಭವೀಕರಿಸಿ, ಹಿಂದೂ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ದನಿ ಎತ್ತಿದ ವಿವೇಕಾನಂದರನ್ನು ಮೂಲೆಗುಂಪು ಮಾಡಲಾಗಿದೆ. ಈ ಒಂದು ದ್ವಂದ್ವ ನೀತಿ ಮತ್ತು ಠಕ್ಕುತನದ ಪರಮಾವಧಿಯನ್ನು ಪ್ರಸ್ತುತ ವಿವಾದದಲ್ಲಿ ಕಾಣುತ್ತಿದ್ದೇವೆ. ಹಿಂದುತ್ವ ಸಂಘಟನೆಗಳು ಪ್ರತಿಪಾದಿಸುವ ಹಿಂದೂ ಧರ್ಮಕ್ಕೂ ವಿವೇಕಾನಂದರ ಪರಿಕಲ್ಪನೆಯ ಹಿಂದೂ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ಗ್ರಹಿಸದೆ ಹೋದರೆ, ಬಹುಶಃ ವಿವೇಕಾನಂದರ ಆದರ್ಶಗಳು ಅವರ ವೈಭವಪೂರ್ಣ ಪ್ರತಿಮೆಗಳಲ್ಲೇ ಹುದುಗಿಹೋಗುವ ಸಂಭವವೇ ಹೆಚ್ಚು. ಈ ದೃಷ್ಟಿಯಿಂದಲಾದರೂ ಏಳಿ ಎದ್ದೇಳಿ ಜಾಗೃತರಾಗಿ ಎಂಬ ವಿವೇಕವಾಣಿಯನ್ನು ನೆನೆಯೋಣ.          ]]>

‍ಲೇಖಕರು G

25 January, 2012

4 Comments

  1. Raghavendra

    rushi moola, nadi moola hudukalu hogabaradu embudu hiriyara abhipraya. Ekendare ella rushigalu maanavare. yaakendare yaava vyaktiyu paripoornanalla. maanava sahaja dourbalyagalu avarigu ive. prati deepada kelagu kattale ide. aadare ade deepa tanna sutta muttida kattalannu odisiddu nijavallave? panditarige idella arthavaaguttade. Aadare paamararige idella kastasaadhya. katu vichaaravaadigallada swami vevekanandaru `kaavi’ dharisi sanyasiyadaddu jana saamanyarigiruva `kaavi’ bannada melina shardde, bhaktiyinda. kaashadhari sanyasigala maatige e deshadalli uttama bele ide ennuva satya avarige arivaagittu. adakke nammella hiriyaru mahan vyaktigala chitrana chitrisuvaaga avarella samanya maanavarigina veshesharu, daivamsha sambootharu ennuva haage chitra iruva kaarana saamanya jana avaa maatige hechchu gourava koduttare ennuva swartharahira sullugalu. anthaha ondu brame, visheshanagalu saamanyarige teera agathya. adu bittu egagale shrestarendu bimbisalpatta vibhuti purushara pratima bhanga maaduva sahasakke kai hakuvudu neechatanavaste. vivekanandaru appata deshapremi, aporva sanyasi, hindutvada mahatva aritu bhodhisida nera nade haagu nudiya sanyasi ende prabhala hindutvavaadigalige hagu katu vimarshakarige avarige priya. Dayavittu saamanyara kanninalli doddadagi bimbitavaada avara sundara chitranavannu haalugeduhuva dusta kelasakke kai haakabedi embude nanna vinanti.

  2. Manjula Narayanarao

    Tumba Chennagide

  3. bharathi

    dinesh avara lekhanadalli idfudu sathyavagiddaroo kelavu padagalannu balasabaradittu anta avare justification kottidaaralla. sathyavannu helo bharadalli padagalu hathoti thappabaradu allave? nimma baraha ishtavaythu

  4. Jayalaxmi Patil

    ದಿನೇಶ್ ಅಮಿನ್ ಮಟ್ಟು ಅವರ ಬರಹದ ಧಾಟಿ ಹೇಗಿತ್ತೆಂದರೆ,ಯಾವುದೇ ಅಪರಾಧವಲ್ಲದ, ಅನ್ಯಾಯವಲ್ಲದ ಮಾನವ ‘ಸಹಜ’ ಗುಣಗಳೇ (ದೈಹಿಕ ಖಾಯಿಲೆ, ಊಟ-ತಿಂಡಿ,ಬುದ್ದಿವಂತಿಕೆ[ಶೈಕ್ಷಣಿಕವಾಗಿ])ವಿವೇಕಾನಂದರ ನ್ಯೂನೆತೆಗಳು ಅಥವಾ ದುರ್ಗುಣಗಳು ಎಂಬಂತೆ, ಅವೆಲ್ಲವೂ ಸಾಮಾನ್ಯ ಜನರಿಗೆ ಗೊತ್ತಾದರೆ ವಿವೇಕಾನಂದರ ಕುರಿತ ಗೌರವ ಕಡಿಮೆಯಾಗಬಹುದು ಎನ್ನುವಂತೆ ಇದೆ. ಅದರಿಂದಾಗಿ ಆ ಲೇಖನ ಇಷ್ಟೆಲ್ಲ ಚರ್ಚೆಗೆ, ವಿವಾದಕ್ಕೆ ಗುರಿಯಾಗಿರುವುದು.
    ನಿಮ್ಮ ಬರಹ ಮೌಲಿಕ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading