ಹಾವೇರಿ ಕಾವೇರಿಯ ನಡುವೆ ಸಾವೇರಿ ರಾಗ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ಹಿತಾಸಕ್ತಿಗಳನ್ನು ರಕ್ಷಿಸುವುದಿರಲಿ, ಜನತೆಯ ಹಿತಚಿಂತನೆಯನ್ನೂ ಮಾಡಲಾಗದಂತಹ ಒಂದು ಸರ್ಕಾರರವನ್ನು ಎಲ್ಲಾದರೂ ಕಂಡಿರುವಿರಾ ಎಂಬ ಪ್ರಶ್ನೆಗೆ ಥಟ್ಟನೆ ಉತ್ತರ ಹೊಳೆದರೆ, ಬಹುಶಃ ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರ ಧುತ್ತೆಂದು ಎದುರು ನಿಲ್ಲುತ್ತದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿರುವ ಈ ಸರ್ಕಾರಕ್ಕೆ ಆಡಳಿತ ಎಂದರೆ ಪಕ್ಷವನ್ನು ನಿರ್ವಹಿಸುವ ಮತ್ತು ಪಕ್ಷದ ತಪ್ಪು ಒಪ್ಪುಗಳನ್ನು ಸರಿಪಡಿಸುವ ಪ್ರಕ್ರಿಯೆಯೇ ಹೊರತು, ತಮ್ಮನ್ನು ಚುನಾಯಿಸಿದ ಪ್ರಜೆಗಳ ಹಿತರಕ್ಷಣೆಯಲ್ಲ. ಶಾಸಕರನ್ನು ಹೇಗೋ ಕ್ರೋಢೀಕರಿಸಿ ವಿಧಾನಸಭೆಯಲ್ಲಿ ಬಹುಮತ ಪಡೆದು ಗದ್ದುಗೆಯ ಮೇಲೆ ಕುಳಿತು, ಸಚಿವ ಸಂಪುಟವನ್ನು ರಚಿಸಿ, ಸಚಿವ ಖಾತೆಗಳನ್ನು ಹಂಚಿಬಿಟ್ಟರೆ ತಮ್ಮ ಆಡಳಿತ ವ್ಯವಸ್ಥೆ ಪೂರ್ಣವಾಗುತ್ತದೆ ಎಂದು ನಂಬಿರುವ ಬಿಜೆಪಿ ಸರ್ಕಾರದ ವೈಫಲ್ಯಗಳಿಗೆ ಪಾರವೇ ಇಲ್ಲ. ಒಂದೆಡೆ ಆಡಳಿತ ವ್ಯವಸ್ಥೆ ಕುಸಿದಿದ್ದರೆ ಮತ್ತೊಂದೆಡೆ ರಾಜಕೀಯ ನೈತಿಕ ಮೌಲ್ಯಗಳು ಅವನತಿಯ ಮಾರ್ಗ ಹಿಡಿದಿವೆ. ಆಪರೇಷನ್ ಕಮಲದ ಮೂಲಕ ಪಕ್ಷದ ಸಂಖ್ಯಾಬಲ ಹೆಚ್ಚಿಸಿ ನೈತಿಕ ಬಲವನ್ನು ಕುಗ್ಗಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಕಮಲದ ಪಕಳೆಗಳನ್ನು ಖುದ್ದಾಗಿ ಹೆಕ್ಕಿ ತೆಗೆದುಹಾಕುತ್ತಿದ್ದಾರೆ.
ಹಾಗಾಗಿ ಡಿಸೆಂಬರ್ 9ರ ಹಾವೇರಿ ಸಮಾವೇಶ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಯಡಿಯೂರಪ್ಪನವರ ಕೆಜೆಪಿ ಪಕ್ಷದ ಉದ್ಘಾಟನೆ ಹಾವೇರಿಯಲ್ಲಿ ನಡೆದಿದ್ದು ಇಲ್ಲಿ ಹಾಜರಾಗುವ ಸಚಿವರ ವಿರುದ್ಧ, ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ನಾಯಕತ್ವ ಘೋಷಿಸಿದೆ. ಬಂಡಾಯದ ಬಾವುಟ ಹಾರಿಸಿ ಎರಡು ವರ್ಷ ಕಳೆದರೂ ಯಡಿಯೂರಪ್ಪನವರ ವಿರುದ್ಧ ಇಂದಿಗೂ ಕಠಿಣಕ್ರಮ ಕೈಗೊಳ್ಳಲು ವಿಫಲವಾಗಿರುವ ಬಿಜೆಪಿ ಇನ್ನೆಂತಹ ಶಿಸ್ತು ಕ್ರಮ ಕೈಗೊಂಡೀತು. ಶಿಸ್ತು ಕ್ರಮ ಜರುಗಿಸಲು ಮೊದಲು ಪಕ್ಷದ ನಾಯಕತ್ವದಲ್ಲಿ ಶಿಸ್ತು ಇರಬೇಕು. ಆದರೆ ಶಿಸ್ತಿನ ಪಕ್ಷದಲ್ಲಿ ಶಿಸ್ತು ಎನ್ನುವುದು ಮರೀಚಿಕೆಯಾಗಿದೆ. ಆಯಾರಾಂ ಗಯಾರಾಂ ಸಂಸ್ಕೃತಿಯನ್ನು ಉಚ್ಚ ಮಟ್ಟಕ್ಕೇರಿಸಿ ಆಪರೇಷನ್ ಕಮಲ ಎಂಬ ಹೊಸ ನಾಮಕರಣ ಮಾಡಿದ ಬಿಜೆಪಿ ಈಗ ಕಮಲದಿಂದ ಜಾರಿ ಕೆಸರಿನೊಳಗೆ ಜಾರಿ ಬಿದ್ದಿದೆ. ಹಿಂದೊಮ್ಮೆ ಜನಾರ್ಧನರೆಡ್ಡಿ ಮತ್ತು ಸೋದರರೊಡನೆ ಬಂಡಾಯದ ಕಹಳೆ ಊದಿದ ಯಡಿಯೂರಪ್ಪನವರ ಅನೇಕ ಶಿಷ್ಯರು ಇಂದಿಗೂ ಸಚಿವರಾಗಿರುವುದನ್ನು ನೋಡಿದರೆ ಬಿಜೆಪಿ ಅಧಿಕಾರದಾಸೆಗೆ ಎಂತಹ ಅಶಿಸ್ತನ್ನೂ ಸಹಿಸಿಕೊಳ್ಳುತ್ತದೆ ಎಂದು ಸಾಬೀತಾಗುತ್ತದೆ.
ಈ ದೃಷ್ಟಿಯಿಂದ ಹಾವೇರಿ ಮಹತ್ವ ಗಳಿಸುತ್ತದೆ. ಒಂದು ವೇಳೆ ಯಡಿಯೂರಪ್ಪ ಬಣದ ವಿರುದ್ಧ ಪಕ್ಷ ಕಠಿಣ ನಿಲುವು ತಾಳಿದರೆ ಸಕರ್ಾರ ಉರುಳುತ್ತದೆ. ನಾಲ್ಕು ವರ್ಷಗಳ ಭ್ರಷ್ಟಾತಿಭ್ರಷ್ಟ ಆಳ್ವಿಕೆಯಲ್ಲಿ ಅದಕ್ಷತೆಯ ಪರಾಕಾಷ್ಠೆ ತಲುಪಿರುವ ಬಿಜೆಪಿ ಇನ್ನು ಜನ್ಮತಃ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಹಾಗೊಮ್ಮೆ ಬಂದಲ್ಲಿ ರಾಜ್ಯದಲ್ಲಿ ರಾಜಕೀಯ ಶೂನ್ಯ ಆವರಿಸಿದೆ ಎಂದು ಸಾಬೀತಾಗುತ್ತದೆ. ಹಾಗಾಗಿ ಯಡ್ಡಿ ಬಣದ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಇನ್ನು ಆರು ತಿಂಗಳೊಳಗಾಗಿ ನಡೆಯಲಿರುವ ಚುನಾವಣೆಯಲ್ಲಿ ಪುನಃ ಗೆಲ್ಲಬೇಕಾದರೆ ಬಿಜೆಪಿಗೆ ಯಡಿಯೂರಪ್ಪನವರಿಗೆ ಸರಿಸಾಟಿಯಾದ ನಾಯಕನ ಅವಶ್ಯಕತೆ ಇದೆ. ಇದು ಅಸಾಧ್ಯದ ಕೆಲಸ ಎಂದು ಪಕ್ಷದ ವರಿಷ್ಠರಿಗೂ ತಿಳಿದಿದೆ. ಕಾರಣ ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಮೂಲ ಕಾರಣ ಯಡಿಯೂರಪ್ಪನವರ ವರ್ಚಸ್ಸು ಮತ್ತು ಕಾಂಗ್ರೆಸ್ ಪಕ್ಷದ ಅವನತಿ. ಈಗ ಯಡ್ಡಿಯ ವರ್ಚಸ್ಸು ಕುಸಿತ ಕಂಡಿದ್ದರೆ ಕಾಂಗ್ರೆಸ್ ಚಿಗುರಿಕೊಂಡಂತೆ ಕಾಣುತ್ತಿದೆ. ತನ್ನೆಲ್ಲಾ ರಾಜಕೀಯ ಮೌಲ್ಯಗಳನ್ನು (ಇನ್ನೂ ಉಳಿದಿದ್ದರೆ), ಕನರ್ಾಟಕ ಕಂಡ ಭ್ರಷ್ಟಾತಿಭ್ರಷ್ಟ ಮುಖ್ಯಮಂತ್ರಿಯ ನೂತನ ಪಕ್ಷದೊಡನೆ ಕೈಜೋಡಿಸಲು ಸಿದ್ಧವಾಗಿರುವ ಕಾಂಗ್ರೆಸ್ ಪಕ್ಷದ ಅವಕಾಶವಾದಿ ರಾಜಕಾರಣದ ಹಿನ್ನೆಲೆಯಲ್ಲಿ ಹಾವೇರಿ ಬಿಜೆಪಿಯ ನಾಯಕರನ್ನು ಕಂಗೆಡಿಸಿದ್ದರೆ ಅಚ್ಚರಿಯೇನಿಲ್ಲ.
ಇನ್ನು ಆಡಳಿತ ವ್ಯವಸ್ಥೆಯನ್ನು ಪರಾಮರ್ಶಿಸಿದಾಗ ಕಾವೇರಿ ವಿವಾದವನ್ನು ಪರಿಹರಿಸುವುದಿರಲಿ, ಈ ಸಮಸ್ಯೆಯನ್ನು ನಿರ್ವಹಿಸಲು ಅಸಮರ್ಥವಾಗಿರುವ ಶೆಟ್ಟರ್ ಸರ್ಕಾರ ನಿಜಕ್ಕೂ ಕರ್ನಾಟಕದ ಜನತೆಯ ಪ್ರಥಮ ವೈರಿಯಾಗಿ ಪರಿಣಮಿಸಿದೆ. ನಿಜ, ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸುವಂತಿಲ್ಲ, ತಮಿಳುನಾಡಿಗೆ ನೀರು ಬಿಡದೆ ವಿಧಿಯಿಲ್ಲ. ಆದರೆ ಕಳೆದ ನಾಲ್ಕು ತಿಂಗಳಿಂದಲೂ ಕಾಡುತ್ತಿರುವ ಈ ಸಮಸ್ಯೆಗೆ ಒಂದು ಸಮರ್ಥ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕಾವೇರಿ ವಿವಾದದ ನೆಪದಲ್ಲಿ ಸರ್ಕಾರವನ್ನು ವಿಸರ್ಜಿಸಿದರೆ ಮುಂದಿನ ಚುನಾವಣೆಯಲ್ಲಿ ಅನುಕಂಪ ಗಳಿಸಬಹುದು ಎಂಬ ಕ್ಷುಲ್ಲಕ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿರುವ ಬಿಜೆಪಿ ಸರ್ಕಾರ ಕಾವೇರಿಯಲ್ಲಿ ಹರಿವ ನೀರನ್ನು ತನ್ನ ರಾಜಕೀಯ ಬಂಡವಾಳವೆಂದು ಪರಿಗಣಿಸಿದಂತಿದೆ. ಕನ್ನಡ ಪರ ಸಂಘಟನೆಗಳಿಗೆ ಕಾವೇರಿ ವಿವಾದ ಭಾವಾವೇಷದ ಅಭಿವ್ಯಕ್ತಿಯಾಗಿ ಕಂಡುಬಂದರೆ, ರಾಜಕೀಯ ಪಕ್ಷಗಳಿಗೆ ಚುನಾವಣಾ ಲಾಭ ನಷ್ಟಗಳ ಲೆಕ್ಕಾಚಾರವಾಗಿ ಕಂಡುಬರುತ್ತದೆ. ಆದರೆ ನ್ಯಾಯಾಂಗದ ದೃಷ್ಟಿಯಲ್ಲಿ ಇವೆರಡಕ್ಕೂ ಮಾನ್ಯತೆ ಇರುವುದಿಲ್ಲ. ಹಾಗಾಗಿ ನ್ಯಾಯಾಂಗದಿಂದ ಹೊರತಾಗಿ ಜನತೆಯ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಜನತೆಯ ಮಟ್ಟದಲ್ಲೇ ಒಂದು ಪರಿಹಾರ ಸೂತ್ರ ಕಂಡುಹಿಡಿಯುವ ದಾಷ್ಟ್ರ್ಯತೆ ಬಿಜೆಪಿ ಸಕರ್ಾರಕ್ಕೆ ಇಲ್ಲದಿವುರುವುದು ನಿಚ್ಚಳವಾಗಿ ತೋರುತ್ತದೆ.
ಇತ್ತ ಕಾವೇರಿ ವಿವಾದದಿಂದ ಸಾಮಾಜಿಕ ಪ್ರಕ್ಷುಬ್ಧತೆ ಎದುರಿಸುತ್ತಿರುವ ಬಿಜೆಪಿ ಸಕರ್ಾರ ಹಾವೇರಿ ಸಮಾವೇಶದ ಪರಿಣಾಮ ರಾಜಕೀಯ ಅಸ್ಥಿರತೆ ಎದುರಿಸುತ್ತಿದೆ. ಎರಡೂ ವಿದ್ಯಮಾನಗಳನ್ನು ಮುಂಬರುವ ಚುನಾವಣೆಗಳ ದೃಷ್ಟಿಯಿಂದಲೇ ನೋಡುತ್ತಿರುವ ಶೆಟ್ಟರ್ ಸಕರ್ಾರಕ್ಕೆ ರಾಜ್ಯದ ಜನತೆಯನ್ನು ಆಳುವ ಅರ್ಹತೆ ಇದೆಯೇ ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡದಿರಲಾರದು.





0 Comments