ಮೂರ್ಖರ ದಿನ ಅಥವಾ ಏಪ್ರಿಲ್ ಫೂಲ್ ದಿನವೆಂದೇ ಪ್ರಸಿದ್ಧಿ ಪಡೆದಿರುವ ಏಪ್ರಿಲ್ ಒಂದನೆಯ ದಿನಕ್ಕೆ ತನ್ನದೇ ಆದ ಸ್ಪಷ್ಟ ಇತಿಹಾಸವಿಲ್ಲ. ಈ ಪರಂಪರೆ ಯಾವ ಕಾಲಘಟ್ಟದಲ್ಲಿ ಪ್ರಾರಂಭವಾಯಿತೆಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ. ಕೆಲವು ಚಾರಿತ್ರಿಕ ದಾಖಲೆಗಳ ಪ್ರಕಾರ ಏಪ್ರಿಲ್ ಫೂಲ್ ಪರಂಪರೆಯ ಆದಿಯನ್ನು 1582ರ ಫ್ರಾನ್ಸ್ನ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. 1581ರ ಹೊಸವರ್ಷದ ಸಂದರ್ಭವನ್ನು ಎಂಟು ದಿನಗಳ ಕಾಲ ಆಚರಿಸಲಾಗಿತ್ತು. ಏಪ್ರಿಲ್ 1ರಂದು ಕೊನೆಯ ದಿನವಾಗಿತ್ತು. ಚಾರ್ಲ್ಸ್ ದೊರೆಯು ಗ್ರೆಗೋರಿಯನ್ ಕ್ಯಾಲೆಂಡರನ್ನು ಜಾರಿಗೊಳಿಸಿದ ನಂತರ ಹೊಸವರ್ಷಾಚರಣೆಯನ್ನು ಜನವರಿ 1 ಕ್ಕೆ ಬದಲಾಯಿಸಲಾಗಿತ್ತು. ಅಂದಿನ ಕಾಲದಲ್ಲಿ ಸಂಪರ್ಕ ಮಾದ್ಯಮಗಳು ಸೀಮಿತವಾಗಿದ್ದುದರ ಪರಿಣಾಮವಾಗಿ ಈ ಬದಲಾವಣೆಯ ಸುದ್ದಿ ಅನೇಕ ದೇಶಗಳಿಗೆ ತಲುಪಲು ಹಲವು ವರ್ಷಗಳೇ ಬೇಕಾಯಿತು. ಕೆಲವು ಸಂಪ್ರದಾಯಸ್ಥರು ಹೊಸ ಕ್ಯಾಲೆಂಡರನ್ನು ಒಪ್ಪಿಕೊಳ್ಳದೆ ಏಪ್ರಿಲ್ 1 ರಂದೇ ಹೊಸವರ್ಷಾಚರಣೆ ಮಾಡುತ್ತಿದ್ದರು. ಈ ಜನತೆಯನ್ನು ಸಾರ್ವಜನಿಕರು ಮೂರ್ಖರೆಂದು ಕರೆಯಲಾರಂಭಿಸಿದರು. ಈ ಸಮುದಾಯಗಳು ಜನರಿಂದ ಅಪಹಾಸ್ಯಕ್ಕೀಡಾದವು, ಹಾಸ್ಯದ ವಸ್ತುಗಳಾಗಿ ಪರಿಣಮಿಸಿದರು.
ಜನರನ್ನು ಅಪಹಾಸ್ಯಕ್ಕೀಡುಮಾಡುವ ಈ ವ್ಯವಸ್ಥೆಯೇ ಕ್ರಮೇಣ ಒಂದು ಪರಂಪರೆಯಾಗಿ ಬೆಳೆದು ಏಪ್ರಿಲ್ ಒಂದನೆಯ ತಾರೀಖು ಜನರನ್ನು ಮೂರ್ಖರನ್ನಾಗಿ ಮಾಡುವ ದಿನವನ್ನಾಗಿ ಆಚರಿಸಲಾಯಿತು. ಈ ಸಂಪ್ರದಾಯವೇ 18ನೆಯ ಶತಮಾನದಲ್ಲಿ ಸ್ಕಾಟ್ಲ್ಯಾಂಡ್ ಮತ್ತು ಇಂಗ್ಲೆಂಡಿಗೂ ವಿಸ್ತರಣೆಗೊಂಡು, ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಗಳಲ್ಲೂ ಬೆಳೆಯಿತು. ಹಾಗಾಗಿ ಏಪ್ರಿಲ್ ಫೂಲ್ಸ್ ದಿನಾಚರಣೆ ಜಾಗತಿಕ ಹಾಸ್ಯ ಹಬ್ಬವಾಗಿ ಪರಿಣಮಿಸಿ ವಿವಿಧ ದೇಶಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ವ್ಯಕ್ತವಾಗತೊಡಗಿತು. ಕಾಲಕ್ರಮೇಣ ಏಪ್ರಿಲ್ 1 ರಂದು ಸ್ನೇಹಿತರನ್ನು, ಜನಸಾಮಾನ್ಯರನ್ನು ಕುಚೇಷ್ಠೆ ಮಾಡುವುದು ಸರ್ವವ್ಯಾಪಿಯಾಗತೊಡಗಿತು. ಇಂಗ್ಲೆಂಡಿನಲ್ಲಿ ಏಪ್ರಿಲ್ 1ರ ಮುಂಜಾನೆ ಮಾತ್ರ ಕುಚೇಷ್ಠೆ ಮಾಡಲಾಗುತ್ತದೆ. ಹಾಸ್ಯಕ್ಕೀಡಾದ ವ್ಯಕ್ತಿಯನ್ನು ನೂಡಲ್ ಎಂದು ಕ್ಪರೆಯಲಾಗುತ್ತದೆ. ಮಧ್ಯಾಹ್ನದ ನಂತರ ಕುಚೇಷ್ಠೆ ಮಾಡುವುದು ಒಳಿತಲ್ಲವೆಂದೇ ಪರಿಗಣಿಸಲಾಗುತ್ತದೆ. ರೋಮ್ನಲ್ಲಿ ಈ ದಿನವನ್ನು ಹಿಲೇರಿಯಾ ಹಬ್ಬ ಎಂದು ಆಚರಿಸಲಾಗುತ್ತದೆ. ಪೋಚರ್ುಗಲ್ನಲ್ಲಿ ಭಾನುವಾರ ಮತ್ತು ಸೋಮವಾರದಂದು ಆಚರಿಸಲಾಗುತ್ತದೆ. ಮೆಕ್ಷಿಕೋದಲ್ಲಿ ಏಪ್ರಿಲ್ ಫೂಲ್ ದಿನವನ್ನು ಡಿಸೆಂಬರ್ 27ರಂದು ಆಚರಿಸಲಾಗುತ್ತದೆ.
ಏಪ್ರಿಲ್ ಫೂಲ್ ದಿನಾಚರಣೆಯನ್ನು ಹಾಸ್ಯದ ದಿನ ಎನ್ನುವುದಕ್ಕಿಂತಲೂ ಕುಚೇಷ್ಟೆಯ ದಿನ ಎಂದು ಹೇಳಬಹುದು. ಸುಳ್ಳು ಹೇಳುವ ಮೂಲಕ ಬುದ್ಧಿವಂತರನ್ನೂ ಬೇಸ್ತು ಬೀಳಿಸುವ ಮೂಲಕ ಅವರನ್ನು ಫೂಲ್ ಮಾಡುವ ದಿನ ಮೂರ್ಖರ ದಿನ. ಹಾಗಾಗಿ ಈ ದಿನದಂದು ಸಣ್ಣ ಪುಟ್ಟ ಜೋಕುಗಳೊಂದಿಗೇ ಇಲ್ಲಸಲ್ಲದ ಸುದ್ದಿಗಳನ್ನು ಹೇಳಿ ಮೂರ್ಖರನ್ನಾಗಿಸುವುದೂ ನಡೆಯುತ್ತದೆ. ಇದು ಕೇವಲ ತಮಾಷೆಗಾಗಿ ಮಾಡುವ ಕೃತ್ಯಗಳಾದ್ದರಿಂದ ಯಾರೂ ಬೇಸರಿಸಿಕೊಳ್ಳುವುದೂ ಇಲ್ಲ. ಕ್ಷಮಿಸಿ ನಾ ಮಾಡೋದೆಲ್ಲಾ ತಮಾಷೆಗಾಗಿ ಎಂಬ ಹಾಡು ನೆನಪಾಗುವುದಲ್ಲವೇ ? ಏಪ್ರಿಲ್ 1 ರ ಮೂರ್ಖರ ದಿನದಂದು ಆಗುವುದೂ ಹಾಗೆಯೇ. ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿ ನಗಲೂ ಸಮಯವಿಲ್ಲದೆ, ಕಛೇರಿ-ಮನೆ-ಕ್ಲಬ್ಬುಗಳಲ್ಲೇ ಮುಳುಗಿರುವ ಮಧ್ಯಮ ವರ್ಗದ ಸಂಖ್ಯೆ ಹೆಚ್ಚಾಗುತ್ತಿರುವಾಗ ಮೂರ್ಖರ ದಿನಾಚರಣೆ ಒಂದು ರೀತಿ ಮರುಭೂಮಿಯ ಓಯಸಿಸ್ನ ಹಾಗೆ ಕಾಣಬಹುದೇನೋ. ಆದರೂ ಏಪ್ರಿಲ್ ಫೂಲ್ ಎಂದೊಡನೆ ಯಾರಿಗೇ ಆದರೂ ಬಾಲ್ಯದ ದಿನಗಳ ನೆನಪಾಗದಿರುವುದಿಲ್ಲ. ಹಾಗೆಯೇ ನನ್ನ ನೆನಪಿನ ಬುತ್ತಿಯಿಂದ ಕೆಲವನ್ನು ಅನಾವರಣಗೊಳಿಸುತ್ತಲೇ ಸಮಕಾಲೀನ ಸಂದರ್ಭದಲ್ಲಿ ಮೂರ್ಖರಾಗುವವರು ಯಾರು, ಮೂರ್ಖರನ್ನಾಗಿ ಮಾಡುವವರಾರು ಎಂಬ ಅಂಶವನ್ನೂ ಪ್ರಸ್ತಾಪಿಸುತ್ತೇನೆ.
ನೆನಪಿನ ಬುತ್ತಿಯಿಂದ
ನಾವೆಲ್ಲಾ ಬಾಲ್ಯದ ದಿನಗಳಲ್ಲಿದ್ದಾಗ ಒಂದು ಕುಟುಂಬ ಎಂದರೆ ಕನಿಷ್ಠ 6 ರಿಂದ 10 ಜನ ಇದ್ದೇ ಇರುತ್ತಿದ್ದರು. ಬಾಲ್ಯದ ಒಡನಾಟಗಳೆಲ್ಲವೂ ಕುಟುಂಬದವರೊಡನೆಯೇ ಕಳೆಯುತ್ತಿತ್ತು. ಈಗಿನಂತೆ ಒಂದು ಎರಡರ ಪರಿಸ್ಥಿತಿ ಇರಲಿಲ್ಲ. ಹಾಗಾಗಿಯೇ ಒಬ್ಬರನ್ನೊಬ್ಬರು ಛೇಡಿಸುವುದು, ಕುಚೇಷ್ಠೆ ಮಾಡುವುದು, ನಗಿಸುವುದು, ಅಳಿಸುವುದು, ಹೊಡೆದಾಡುವುದು ಇವೆಲ್ಲವೂ ಸಾಮಾನ್ಯ. ನಿಯಂತ್ರಣಕ್ಕಾಗಿಯೇ ಹಿರಿಯಣ್ಣನೋ ಹಿರಿಯಕ್ಕನೋ ಸಿದ್ಧರಾಗಿರುತ್ತಿದುದೂ ಸಾಮಾನ್ಯವಾಗಿತ್ತು.
ನಮ್ಮ ತಾಯಿ ಬೆಂಡೆಕಾಯಿ ಗೊಜ್ಜು ಮಾಡುವುದರಲ್ಲಿ ನಿಸ್ಸೀಮರು. ಎಷ್ಟು ಖಾರ ಇರುತ್ತಿತ್ತೆಂದರೆ ಕಣ್ಣುಮೂಗಿನಲ್ಲಿ ನೀರು ಹರಿಸುತ್ತಲೇ ತಿನ್ನಬೇಕಾಗಿತ್ತು. ಆದರೂ ನಮ್ಮ ನೆರೆಮನೆಯಲ್ಲಿದ್ದ ಐಯ್ಯಂಗಾರ್ ಮನೆಯವರಿಗೆ ನಮ್ಮಮ್ಮ ಮಾಡಿದ ಗೊಜ್ಜು ಎಂದರೆ ಪಂಚಪ್ರಾಣ. ನಾವೆಲ್ಲಾ ಆಗ ಹುಡುಗಾಟದ ವಯಸ್ಸಿನವರು. ಒಂದು ಸ್ಟೀಲ್ ಕ್ಯಾರಿಯರ್ನಲ್ಲಿ ಬಿಸಿನೀರನ್ನು ಹಾಕಿ, ಪೇಪರ್ ಮೇಲೆ ಏಪ್ರಿಲ್ ಫೂಲ್ ಎಂದು ಬರೆದು ಅದರಲ್ಲಿ ತೇಲಿ ಬಿಟ್ಟು, ಅವರ ಮನೆಗೆ ನಮ್ಮಮ್ಮ ಮಾಡಿದ ಬೆಂಡೆಕಾಯಿ ಗೊಜ್ಜು ತೊಗೊಳ್ಳಿ ಎಂದು ಹೇಳಿ ಕೊಟ್ಟುಬರುವುದು ನನ್ನ ಕೆಲಸ. ಪ್ಲಾನ್ ಮಾಡುತ್ತಿದ್ದುದು ನಮ್ಮಣ್ಣ. ಈಗ ಅವನಿಲ್ಲ. ಸಂಜೆ ಆಕೆ ಮನೆಗೆ ಬಂದಾಗ ಎಲ್ಲರೂ ಪರಾರಿ. ಬೈಸಿಕೊಳ್ಳಲು ಸಿದ್ಧರಾಗಿರಬೇಕಲ್ಲ. ಕೊನೆಗೆ ಅಮ್ಮನ ಬೈಗಳಿಂದ ಮುಕ್ತಾಯವಾಗುತ್ತಿತ್ತು.
ಹಾಗೆಯೇ ಮತ್ತೊಂದು ಘಟನೆ. ನಾವು ಒಟ್ಟು ಎಂಟು ಮಕ್ಕಳು ಒಟ್ಟಿಗೇ ಮಲಗುತ್ತಿದ್ದೆವು. ದೊಡ್ಡ ಹಾಲಿನಲ್ಲಿ ಸಾಲಾಗಿ ಹಾಸಿದ ಹಾಸಿಗೆಗಳು. ಬೆಳಿಗ್ಗೆ ಒಬ್ಬೊಬ್ಬರಾಗಿ ಏಳುವುದು. ನಾನು ಕೊನೆಯವನಾದ್ದರಿಂದ ಕಟ್ಟ ಕಡೆಯದಾಗಿ ಏಳುವವನು ನಾನೇ ಆಗಿದ್ದೆ. ಏಪ್ರಿಲ್ ಒಂದರ ಒಂದು ದಿನ ಹಾಸಿಗೆಯಿಂದ ಎಲ್ಲರೂ ಎದ್ದು ಹೋಗಿಯಾಗಿತ್ತು. ನಾನೊಬ್ಬನೇ ಮಲಗಿದ್ದಾಗ ಬಂದ ನನ್ನ ಅಣ್ಣ ನನಗೆ ಸುಮ್ಮನೆ ಎಲ್ಲಾ ಹಾಸಿಗೆಯ ಮೇಲೂ ಹೊರಳಾಡಲು ಹೇಳಿದ. ನಾನೂ ಅವನ ಆಜ್ಞೆಯನ್ನು ಶಿರಸಾವಹಿಸಿ ಹೊರಳಾಡತೊಡಗಿದೆ. ನನಗೆ ಹೊರಳಾಡಲು ಹೇಳಿದ ಅಣ್ಣನೇ ನಮ್ಮಮ್ಮನ ಬಳಿ ಹೋಗಿ ದಿವಾಕರನಿಗೆ ಏನೋ ಆಗಿದೆ, ಸುಮ್ಮನೆ ಹೇಗ್ಹೇಗೋ ಹೊರಳಾಡುತ್ತಿದ್ದಾನೆ ಎಂದು ಹೇಳಿದ್ದು ನನಗೆ ಗೊತ್ತಿರಲಿಲ್ಲ. ಸ್ವಲ್ಪಹೊತ್ತಿಗೇ ನಮ್ಮಮ್ಮ ಕೈಯ್ಯಲ್ಲಿದ್ದ ಕಬ್ಬಿಣದ ಇಕ್ಕಳ ಹಿಡಿದು ನನ್ನತ್ತ ಬಂದರು. ಅಮ್ಮ ಹೊಡೆಯಲು ಬಂದಿದ್ದಾರೆ ಎಂದು ನಾನು ಭಾವಿಸಿದ್ದೆ, ನನಗೆ ಅಪಸ್ಮಾರವಾಗಿದೆ ಕಬ್ಬಿಣ ಕೈಗೆ ಕೊಟ್ಟರೆ ಸರಿಹೋಗುತ್ತದೆ ಎಂದು ನಮ್ಮಮ್ಮ ಭಾವಿಸಿದ್ದಾರೆ. ಅಮ್ಮನ ಕೈಗೆ ಸಿಗದೆ ಅತ್ತಿಂದಿತ್ತ ಇತ್ತಿಂದತ್ತ ಹೊರಳಾಡುತ್ತಿದ್ದ ನಾನು ಮಿಕ್ಕವರೆಲ್ಲರಿಗೂ ಹಾಸ್ಯದ ವಸ್ತುವಾಗಿದ್ದು ಇಂದಿಗೂ ನೆನಪಿನಲ್ಲಿರುವ ಘಟನೆ.
ಈ ತರಹದ ಘಟನೆಗಳು ಬಾಲ್ಯದಲ್ಲಿ ಅನೇಕ. ಶಾಲೆಯಲ್ಲಿ ಮಾಸ್ಟರು ಬಂದಿಲ್ಲ ಎಂದು ಸುಳ್ಳು ಹೇಳಿ ಫೂಲ್ ಮಾಡುವುದು, ತಲೆಯ ಮೇಲೆ ಗುಬ್ಬಚ್ಚಿ ಕೂತಿದೆ ಎಂದು ಹೇಳುವುದು, ಬಟ್ಟೆಗೆ ಏನೋ ಮೆತ್ತಿಕೊಂಡಿದೆ ಎಂದು ಹೇಳುವುದು ಇವೆಲ್ಲವೂ ಬಾಲ್ಯದ ದಿನಗಳಲ್ಲಿ ಎಷ್ಟೋ ಮುದ ನೀಡುತ್ತಿದ್ದವು. ಕೆಲವೊಮ್ಮೆ ಸ್ನೇಹಿತರನ್ನು ಮೂರ್ಖರನ್ನಾಗಿ ಮಾಡಲು ಹೋಗಿ ಜಗಳಗಳಲ್ಲಿ ಕೊನೆಗೊಂಡದ್ದೂ ಉಂಟು. ನೆನಪಾಗುವ ಇತ್ತೀಚಿನ ಘಟನೆ ಎಂದರೆ ನಾನು ಬ್ಯಾಂಕಿಗೆ ಸೇರಿದ ಮೇಲೆ ನಡೆದದ್ದು. ನಮ್ಮ ಬ್ರಾಂಚಿನ ಸಬ್ ಸ್ಟಾಫ್ ಒಬ್ಬನಿಗೆ ಇಂಗ್ಲಿಷ್ ಓದಲು ಬರುತ್ತಿರಲಿಲ್ಲ.. ಯಾವುದೇ ಲೆಡ್ಜರ್, ದಾಖಲೆ ಬೇಕೆಂದರೆ ಬಣ್ಣಗಳನ್ನು ಅಥವಾ ಆಕಾರವನ್ನು ನೋಡಿ ತಂದುಕೊಡುತ್ತಿದ್ದ. ಒಮ್ಮೆ ಏಪ್ರಿಲ್ ಒಂದರ ದಿನ ನಾವುಗಳೆಲ್ಲಾ ಸೇರಿ ಒಂದು ಲೆಟರ್ಹೆಡ್ನಲ್ಲಿ ಅವನಿಗೆ ವರ್ಗಾವಣೆಯಾಗಿದೆ ಎಂದು ಟೈಪ್ ಮಾಡಿ ಒಂದು ಕವರಿನಲ್ಲಿಟ್ಟು ಬ್ಯಾಂಕಿಗೆ ಬಂದ ಕೂಡಲೇ ನೀಡಿದ್ದೆವು. ಬ್ರಾಂಚ್ ಪ್ರಾರಂಭವಾದಾಗಿನಿಂದಲೂ ಅಲ್ಲಿಯೇ ಕೆಲಸ ಮಾಡುತ್ತಿದ್ದ ಅವನಿಗೆ ಪಾಪ ಆಕಾಶವೇ ತಲೆಯಮೇಲೆ ಬಿದ್ದಂತಾಗಿರಬೇಕು. ನಾನು ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ ಎಂದು ಅಳಲು ಪ್ರಾರಂಭಿಸಿಬಿಟ್ಟ. ನಿಜವಾಗಿಯೂ ವರ್ಗವಾಗಿದೆ ಎಂದು ನಂಬಿದ್ದ ಅವನನ್ನು ಸಮಾಧಾನ ಮಾಡುವಷ್ಟರಲ್ಲಿ ನಮಗೂ ಸುಸ್ತಾಗಿ ಹೋಗಿತ್ತು.
ಮೂರ್ಖರು ಯಾರು ?
ಈ ರೀತಿಯ ಘಟನೆಗಳ ಮೆಲುಕು ಇಂದಿಗೂ ಮನಸ್ಸಿಗೆ ಮುದ ನೀಡುತ್ತದೆ. ಸಮಕಾಲೀನ ಸಮಾಜದ ಸಣ್ಣ ಕುಟುಂಬಗಳಲ್ಲಿ, ಗಣಕೀಕೃತ ಕಛೇರಿಗಳಲ್ಲಿ, ಮಾರ್ಕಸ್ಗಳಿಗಾಗಿ ಹಗಳಿರುಳೂ ಓದಿನಲ್ಲೇ ಮುಳುಗಿರುವ ಶಾಲೆಗಳಲ್ಲಿ ಈ ರೀತಿಯ ಘಟನೆಗಳು ಸಾಧ್ಯವೇ ಎನಿಸುತ್ತದೆ. ಆದರೂ ಏಪ್ರಿಲ್ ಫೂಲ್ ದಿನವನ್ನು ಈಗಲೂ ಆಚರಿಸಲಾಗುತ್ತದೆ. ಮೊಬೈಲ್ಗಳ ಮೂಲಕ, ಅಂತರ್ಜಾಲದ ಮೂಲಕ, ಎಸ್ಸೆಮ್ಮೆಸ್ಗಳ ಮೂಲಕ ಸ್ನೇಹಿತರನ್ನು ಫೂಲ್ ಮಾಡಲೂಬಹುದು. ಆದರೂ ಪ್ರಸ್ತುತ ಸಂದರ್ಭದಲ್ಲಿ ಏಪ್ರಿಲ್ ಫೂಲ್ ದಿನವನ್ನು ವರ್ಷವಿಡೀ ಆಚರಿಸುವುದು ನಮ್ಮ ಆಳುವ ವರ್ಗಗಳೇ ಎಂದು ನಿಸ್ಸಂದೇಹವಾಗಿ ಹೇಳಬಹುದು. ಚುನಾವಣೆ ಇರಲಿ ಇಲ್ಲದಿರಲಿ ನಮ್ಮ ರಾಜಕಾರಣಿಗಳ ಆಶ್ವಾಸನೆಗಳಿಗೇನೂ ಕೊರತೆ ಇರುವುದಿಲ್ಲ. ಕರ್ನಾಟಕದಲ್ಲೇ ನೋಡಿ, ಕಳೆದ ವರ್ಷದ ನೆರೆಹಾವಳಿಗೆ ತುತ್ತಾದ ಲಕ್ಷಾಂತರ ಜನರನ್ನು ಸರ್ಕಾರ ಫೂಲ್ ಮಾಡುತ್ತಲೇ ಇದೆ. ನಿಮಗೆ ಮನೆ ನಿರ್ಮಿಸಿಕೊಡುತ್ತೇವೆ, ಹೊಸ ಗ್ರಾಮ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಲೇ ಇದೆ. ಈವರೆಗೂ ಏನನ್ನೂ ನಿರ್ಮಿಸಿಲ್ಲ, ಕನಸುಗಳ ಭವನಗಳನ್ನು ಹೊರತಾಗಿ. ಹಾಗೆಯೇ ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಹೇಳುತ್ತಲೇ ವಿದ್ಯುತ್ ಕಡಿತ ಮುಂದುವರೆಯುತ್ತಿರುತ್ತದೆ, ರೈತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಿರುವಾಗಲೇ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿರುತ್ತವೆ. ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಎಂಬ ಆಶ್ವಾಸನೆಯನ್ನು ನಂಬಿದ ಜನ ಆರು ದಶಕಗಳಿಂದಲೂ ಮೂರ್ಖರಾಗುತ್ತಲೇ ಇದ್ದಾರೆ. ಈ ಪಟ್ಟಿಯಂತೂ ಮುಗಿಯುವುದೇ ಇಲ್ಲ. ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ.
ಏನೇ ಆದರೂ ಏಪ್ರಿಲ್ ಫೂಲ್ ದಿನಾಚರಣೆ ಸಾಮಾನ್ಯ ಜನರಿಗಷ್ಟೇ ಏಪ್ರಿಲ್ ಒಂದರಂದು ಬರುತ್ತದೆ. ಆಳ್ವಿಕರಿಗೆ, ರಾಜಕಾರಣಿಗಳಿಗೆ ದಿನನಿತ್ಯವೂ ಏಪ್ರಿಲ್ ಫೂಲ್ ದಿನವೇ. ಯಾವುದಾದರೂ ಒಂದು ರೀತಿಯಲ್ಲಿ ಜನರನ್ನು ಫೂಲ್ ಮಾಡುತ್ತಲೇ ಇರುತ್ತಾರೆ. ಜನಸಾಮಾನ್ಯರೂ ಮೂರ್ಖರಾಗುತ್ತಲೇ ಇರುತ್ತಾರೆ. ವಾಸ್ತವದಲ್ಲಿ ಅನೇಕ ಸಂದರ್ಭಗಳಲ್ಲಿ ಏಪ್ರಿಲ್ ಫೂಲ್ ದಿನವನ್ನು ಹಾಸ್ಯದ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಇದನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ ನಿಜವಾದ ಅರ್ಥದಲ್ಲಿ ಏಪ್ರಿಲ್ 1 ರ ದಿನ ಮತ್ತೊಬ್ಬರನ್ನು ಕುಚೇಷ್ಠೆಯ ಮೂಲಕ ಬೇಸ್ತು ಬೀಳಿಸುವ ದಿನ. ಸುಳ್ಳು ಹೇಳಿ ನಂಬಿಸಿ ತಮಾಷೆ ಮಾಡುವ ದಿನ. ಈ ದಿನವನ್ನು ಶಿಸ್ತಾಗಿ, ಕ್ರಮಬದ್ಧವಾಗಿ ಆಚರಿಸುವವರು ನಮ್ಮ ರಾಜಕಾರಣಿಗಳೇ ಅಲ್ಲವೇ ?
ನಾ ದಿವಾಕರ್ ಕಾಲಂ : ಮೂರ್ಖರ ದಿನಾಚರಣೆಯೂ ಮೂರ್ಖರ ಸಹವಾಸವೂ!
ನಿಮಗೆ ಇವೂ ಇಷ್ಟವಾಗಬಹುದು…





0 Comments