ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಕಾಲಂ : ಮಠೋದ್ಯಮಿಗಳಿಗೆ ಸರ್ಕಾರದ ಔದಾರ್ಯ!

ಮಾಜಿ ಸೀಎಂ ಯಡಿಯೂರಪ್ಪ ಕೆಲವು ಪ್ರಥಮಗಳಿಗೆ ನಾಂದಿ ಹಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರ್ಕಾರವನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರವಾದಂತೆಯೇ ಹಲವು ಮೊದಲ ಹೆಜ್ಜೆಗಳನ್ನೂ ಇಡುವ ಮೂಲಕ ಕರ್ನಾಟಕದ ರಾಜಕಾರಣದಲ್ಲಿ ಹಲವು ನೂತನ ಪರಂಪರೆಗಳಿಗೆ ನಾಂದಿ ಹಾಡಿದ್ದಾರೆ. ಬಿಜೆಪಿ ಪಾಟಿ ವಿತ್ ಡಿಫರೆನ್ಸ್ ಎಂದು ನಿರೂಪಿಸಲೆಂದೋ ಅಥವಾ ಕರ್ನಾಟಕದಲ್ಲಿ ಶಾಶ್ವತವಾಗಿ ಬಿಜೆಪಿ ಆಳ್ವಿಕೆಯನ್ನು ಸ್ಥಾಪಿಸಲೆಂದೋ ಯಡಿಯೂರಪ್ಪ ಅನುಸರಿಸಿದ ಕೆಲವು ಭ್ರಷ್ಟ, ಸಮಯಸಾಧಕ ನೀತಿಗಳು ಪ್ರಸಕ್ತ ರಾಜಕಾರಣವನ್ನು ಅಧಃಪತನದ ಅಂಚಿಗೆ ತಂದು ನಿಲ್ಲಿಸಿದೆ. ಪಕ್ಷಾಂತರ ರಾಜಕಾರಣಕ್ಕೆ ಹೊಸ ಸ್ವರೂಪ ನೀಡಿ, ಗೌರವಯುತ ಹೆಸರು ನೀಡುವ ಮೂಲಕ ಆಪರೇಷನ್ ಕಮಲ ಪ್ರಕ್ರಿಯೆ ರಾಜಕಾರಣವನ್ನು ಮಾರುಕಟ್ಟೆಯನ್ನಾಗಿ ಮಾಡಿದೆ. ಈಗ ಚುನಾಯಿತ ಪ್ರತಿನಿಧಿಗಳು ಖರೀದಿತ ಪ್ರತಿನಿಧಿಗಳಾಗಿದ್ದಾರೆ. ಖರೀದಿಸಲ್ಪಡುವವರೂ ಆಗಿದ್ದಾರೆ. ಈಗ ಬಿಜೆಪಿ ತೊರೆದಿದ್ದರೂ ಯಡಿಯೂರಪ್ಪನವರು ಮಾಡಿದ ಪ್ರಮಾದ ಬಿಜೆಪಿಯನ್ನು ಬಿಡುವುದಿಲ್ಲ. ಜನತೆಯ ನೆನಪಿನಿಂದ ಮಾಸುವುದೂ ಇಲ್ಲ. ಇದು ಸರ್ಕಾರವನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಬಳಸಿದ ಸರಳ ಅಸ್ತ್ರ.
ಆದರೆ ಜಾತಿ ರಾಜಕಾರಣ ಆಲದ ಮರದ ಬೇರುಗಳಂತೆ ಹರಡುತ್ತಿರುವ ರಾಜ್ಯದಲ್ಲಿ ಸಾಮುದಾಯಿಕ ಅಸ್ಮಿತೆಗಳಿಗೆ ಸರ್ಕಾರದ ಅಧಿಕೃತ ಮೊಹರು ನೀಡುವ ನಿಟ್ಟಿನಲ್ಲಿ ಯಡಿಯೂರಪ್ಪ ಮಠಾಧಿಪತಿಗಳನ್ನು ಮಠೋದ್ಯಮಿಗಳನ್ನಾಗಿ ಪರಿವರ್ತಿಸಿದ್ದು ರಾಜ್ಯದಲ್ಲಿ ಬಿಜೆಪಿ ಆಳ್ವಿಕೆಯನ್ನಷ್ಟೇ ಅಲ್ಲ ಜಾತಿ ರಾಜಕಾರಣವನ್ನೂ ಶಾಶ್ವತಗೊಳಿಸುವ ಒಂದು ಪ್ರಯತ್ನ. ಇದೂ ಒಂದು ರೀತಿಯಲ್ಲಿ ಆಪರೇಷನ್ ಕಮಲ ಎಂದೇ ಹೇಳಬಹುದು. ಇಲ್ಲಿ ಸರಕುಗಳು ಭಿನ್ನ ಮತ್ತು ಹೆಚ್ಚು ಗೌರವಯುತ ಎಂದಷ್ಟೇ ಹೇಳಬಹುದು. ಸಾಮುದಾಯಿಕ ಹಿತಾಸಕ್ತಿಗಳನ್ನು ಸಂರಕ್ಷಿಸದಿದ್ದರೂ ಪ್ರತಿನಿಧಿಸುವ ಧೋರಣೆ ತೋರುವ ವಿವಿಧ ಜಾತಿಗಳ ಮಠಗಳಿಗೆ ಮಾನ್ಯತೆ ನೀಡುವುದಷ್ಟೇ ಅಲ್ಲದೆ, ಸಕರ್ಾರದ ಬೊಕ್ಕಸದಿಂದ ಕೋಟ್ಯಂತರ ರೂಗಳ ಅನುದಾನ ನೀಡುವ ಭ್ರಷ್ಟ ಪರಂಪರೆಗೆ ಯಡಿಯೂರಪ್ಪ ತಮ್ಮ ಆಡಳಿತಾವಧಿಯಲ್ಲಿ ನಾಂದಿ ಹಾಡಿದ್ದರು. ಇದು ಈಗ ರಾಜ್ಯ ಆಥರ್ಿಕ ನೀತಿಯ ಅಂಶಿಕ ಭಾಗವಾಗಿ ಪರಿಣಮಿಸಿದೆ.
ಯಡಿಯೂರಪ್ಪನವರ ಪರಂಪರೆಯನ್ನೇ ಅನುಸರಿಸಿರುವ ಜಗದೀಶ್ ಶೆಟ್ಟರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಧರ್ಮಗಳ ಸಮನ್ವಯ (?) ಕಾಪಾಡಲು ಪ್ರಯತ್ನಿಸಿದ್ದಾರೆ. ಎಲ್ಲ ಜಾತಿಗಳನ್ನೂ ಗುರುತಿಸಿ ಈ ಜಾತಿಗಳನ್ನು ಪ್ರತಿನಿಧಿಸುವ ಎಲ್ಲ ಮಠಗಳಿಗೂ ಅನುದಾನ ಹೆಚ್ಚಿಸಿದ್ದಾರೆ. ಮುಂಗಡ ಪತ್ರದಲ್ಲಿ 200 ಕೋಟಿ ರೂಗಳ ಅನುದಾನವನ್ನು ಮಠಗಳಿಗೆ ನೀಡಿದ್ದು ಸಾಲದೆಂಬಂತೆ ಪುನಃ 25 ಕೋಟಿ ರೂಗಳನ್ನು ಮಂಜೂರು ಮಾಡಿದ್ದಾರೆ. ಮಠಮಾನ್ಯಗಳಿಂದ ಸಮಾಜ ಸೇವೆ ನಡೆಯುತ್ತಿದೆ, ವಿದ್ಯಾದಾನ , ಅನ್ನದಾನ ನಡೆಯುತ್ತಿದೆ, ಧಾಮರ್ಿಕ ಕಾರ್ಯಗಳು ಸಮಾಜದ ಏಳಿಗೆಗಾಗಿ ನಡೆಯುತ್ತಿವೆ, ಹಾಗಾಗಿ ಮಠಗಳ ಮತ್ತು ಮಠಾಧೀಶರುಗಳ ಸಾಮಾಜಿಕ ಕಳಕಳಿಗೆ ಒಂದು ಮೌಲ್ಯವನ್ನು ನಿರ್ಧರಿಸುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಮಠಗಳಿಗೆ ಅನುದಾನ ನೀಡಿದೆ ಎಂದು ಬಿಜೆಪಿ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಇದು ಸಮಯಸಾಧಕ ಹೇಳಿಕೆ ಎಂದು ಹೇಳಬೇಕಿಲ್ಲ.
ಕರ್ನಾಟಕದಲ್ಲಿನ ಮಠಗಳು ಸಲ್ಲಿಸುತ್ತಿರುವ ಸಮಾಜಸೇವೆಯನ್ನು ಅಲ್ಲಗಳೆಯುವ ಅಗತ್ಯವಿಲ್ಲ. ಕೆಲವು ಮಠಗಳಾದರೂ ಉತ್ತಮ ಕಾರ್ಯ ಮಾಡುತ್ತಿರಬಹುದು. ಆದರೆ ಈ ಮಠಗಳಿಗೆ ಇರುವ ಆದಾಯ, ಆಸ್ತಿಯ ಮೌಲ್ಯ ಮತ್ತು ಜನರಿಂದ ಸಲ್ಲುವ ದೇಣಿಗೆಯ ಬಗ್ಗೆ ಸರ್ಕಾರ ಒಮ್ಮೆಯಾದರು ಕಣ್ಣು ತೆರೆದಿದೆಯೇ? ಎಲ್ಲ ಪ್ರತಿಷ್ಠಿತ ನಗರಗಳಲ್ಲು ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿ ತಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿರುವ ಮಠಗಳು ಉಚಿತ ಶಿಕ್ಷಣ ಎಷ್ಟರ ಮಟ್ಟಿಗೆ ನೀಡುತ್ತಿವೆ ಎಂಬ ಪ್ರಶ್ನೆಗೆ ಶೆಟ್ಟರ್ ಸರ್ಕಾರ ಉತ್ತರ ನೀಡಬೇಕಿದೆ. ಮಠಗಳು ತಮ್ಮ ಅಪಾರ ಆಸ್ತಿಯನ್ನು ಗಳಿಸುವುದಾದರೂ ಹೇಗೆ, ಸಂರಕ್ಷಿಸುವುದಾದರೂ ಹೇಗೆ, ಉಚಿತ ಅನ್ನ ದಾಸೋಹ ನೀಡುವುದಾದರೂ ಹೇಗೆ ? ಒಮ್ಮೆ ಯೋಚಿಸಿದಲ್ಲಿ ವಾಸ್ತವ ಗ್ರಹಿಸುವುದು ಕಷ್ಟವೇನಲ್ಲ. ಕರ್ನಾಟಕದ ಯಾವುದೇ ಪ್ರತಿಷ್ಠಿತ ಮಠಗಳ ಇತಿಹಾಸವನ್ನು ಕೆದಕಿ ನೋಡಿದಾಗ ಎಲ್ಲೋ ಒಂದೆಡೆ ಭೂ ಕಬಳಿಕೆ, ಆಸ್ತಿ ವಿವಾದ, ಮಠಾಧೀಶರ ಪ್ರಶ್ನಾರ್ಹ ಹಿನ್ನೆಲೆ, ಸಾರ್ವಜನಿಕರ ಅಲ್ಪ ಆಸ್ತಿಯ ಲೂಟಿ ಇವೆಲ್ಲವೂ ಕಾಣುತ್ತವೆ, ನೋಡುವ ದಾಷ್ಟ್ರ್ರ್ಯತೆ ಇದ್ದಲ್ಲಿ.
ವೈದ್ಯಕೀಯ ಕಾಲೇಜಿಗಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ಪಡೆದಿರುವ ಪ್ರತಿಷ್ಠಿತ ಮಠವೊಂದು ತನ್ನ ಸಂಸ್ಥೆಗೆ ಭೂಮಿ ನೀಡಿದವರಿಗೆ ಸಂಸ್ಥೆಯಲ್ಲಿ ನೌಕರಿ ನೀಡುವುದಾಗಿ ಭರವಸೆ ನೀಡಿ ಕೆಲವು ವರ್ಷಗಳ ನಂತರ ಮೂಲೋತ್ಪಾಟನೆ ಮಾಡಿರುವ ನಿದರ್ಶನ ನಮ್ಮಲ್ಲಿದೆ. ಯಾವುದೋ ಅಪರಾಧಕ್ಕೆ ಸಿಲುಕಿ ತಲೆಮರೆಸಿಕೊಂಡು ನಂತರ ಕೆಲವು ವರ್ಷಗಳ ಜಪ-ತಪ(?)ಗಳ ನಂತರ ಆಧ್ಯಾತ್ಮದ ಹೆಸರಿನಲ್ಲಿ ಮಠಗಳನ್ನು ಸ್ಥಾಪಿಸಿರುವ ನಿದರ್ಶನಗಳು ನಮ್ಮಲ್ಲಿವೆ. ಆಧ್ಯಾತ್ಮ ಅಥವಾ ಜಾತಿಯ ಹೆಸರಿನಲ್ಲಿ ಸ್ಥಾಪಿಸಲಾಗುವ ಒಂದು ಮಠ ಕೆಲವೇ ವರ್ಷಗಳಲ್ಲಿ ಸಾವಿರಾರು ಎಕರೆ ಭೂಮಿಯ ಒಡೆತನ ಹೊಂದಿರುತ್ತದೆ. ಜನರಿಂದ , ಕ್ಷಮಿಸಿ, ಭಕ್ತಾದಿಗಳಿಂದ ಸಂಗ್ರಹಿಸುವ ದೇಣಿಗೆಯ ಮೂಲಕ ಕುಂಭಾಭಿಷೇಕ, ಪಟ್ಟಾಭಿಷೇಕ, ರಾಜಗೋಪುರ, ಮಹಾದ್ವಾರಗಳು ನಿರ್ಮಾಣವಾಗುತ್ತವೆ. ಸರ್ಕಾರದ ಕೃಪಾಕಟಾಕ್ಷದಿಂದ ಪ್ರಾಥಮಿಕ ತರಗತಿಯಿಂದ ಹಿಡಿದು ವೈದ್ಯಕೀಯ-ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿಯವರೆಗೂ ಶಿಕ್ಷಣ ಸಂಸ್ಥೆಗಳ ಸಮೂಹವೇ ಸೃಷ್ಟಿಯಾಗುತ್ತದೆ.
ಆದರೆ ಎಷ್ಟೇ ಶ್ರೀಮಂತ ಮಠವಾದರೂ ಸಂವಿಧಾನದ ಆಶಯಕ್ಕೆ ಪೂರಕವಾಗಿ ಉಚಿತ ಸಾರ್ವತ್ರಿಕ ಶಿಕ್ಷಣವನ್ನಾಗಲೀ, ಕನ್ನಡ ನಾಡಿನ ಜನತೆಯ ಆಶಯಗಳಿಗನುಗುಣವಾಗಿ ಕನ್ನಡ ಮಾಧ್ಯಮದ ಶಿಕ್ಷಣವನ್ನಾಗಲೀ ನೀಡುವುದಿಲ್ಲ. ಇದು ಅಲ್ಲಗಳೆಯಲಾಗದ ಸತ್ಯ. ಆದರೂ ವಿದ್ಯಾದಾನ ಮಾಡುತ್ತಿರುವುದಾಗಿ ಬೆನ್ನು ತಟ್ಟಿಕೊಳ್ಳುವ ಈ ಶೈಕ್ಷಣಿಕ ಸಂಸ್ಥೆಗಳು ತಮ್ಮ ಔದ್ಯಮಿಕ ಹಿತಾಸಕ್ತಿಗಳಿಗಾಗಿ ಆಧ್ಯಾತ್ಮವನ್ನು, ಯೋಗ ಶಿಕ್ಷಣವನ್ನು ಮತ್ತು ಧಾರ್ಮಿಕ ಪ್ರವಚನಗಳನ್ನು ಚಿಮ್ಮುಹಲಗೆಯಾಗಿ ಪರಿಗಣಿಸುತ್ತವೆ. ಜಾತಿಗೊಂದು ಮಠ ಇದ್ದರೂ, ಎಲ್ಲ ಮಠಗಳೂ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದರೂ ಆಯಾ ಜಾತಿಯ ಮಕ್ಕಳಿಗೂ ಯಾವುದೇ ಉಚಿತ ಸೌಲಭ್ಯ ನೀಡುವ ನಿದರ್ಶನಗಳಿಲ್ಲ. ರಾಜಕೀಯ ಪಕ್ಷಗಳನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಳ್ಳಲು ರಾಜಕೀಯ ಸಲಹಾ ಕೇಂದ್ರಗಳಾಗಿ ಪರಿಣಮಿಸಿರುವ ಮಠೋದ್ಯಮಿಗಳು ಮಾಡುವ ಸಮಾಜ ಸೇವೆ ಎಂತಹುದು ಎಂದು ಯೋಚಿಸಿದಾಗ ಆತಂಕ ಉಂಟಾಗುವುದು ಸಹಜ.
ಅಪಾರ ಡೊನೇಷನ್ ಪಡೆದು ವೈದ್ಯಕೀಯ ಕಾಲೇಜುಗಳನ್ನು ನಡೆಸುವ ಮಠೋದ್ಯಮಿಗಳು ತಮ್ಮ ಆಸ್ಪತ್ರೆಗಳಲ್ಲಿ ಕೊಂಚ ಮಟ್ಟಿನ ರಿಯಾಯಿತಿ ನೀಡಬಹುದೇ ಹೊರತು, ಅತಿ ಕಡುಬಡವರಿಗೂ ಸಹ ಉಚಿತ ಆರೋಗ್ಯ ಸೇವೆ ಒದಗಿಸುವುದಿಲ್ಲ. ಜನಸಾಮಾನ್ಯರಿಗೆ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕಾದರೆ ಪ್ರತಿಷ್ಠಿತ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಧಾವಿಸಬೇಕಾಗುತ್ತದೆ. ಆದರೆ ಇದೇ ವಿಶ್ವಾಸವನ್ನು ಮಠೋದ್ಯಮಿಗಳು ನಿರ್ವಹಿಸುವ ಆಸ್ಪತ್ರೆಗಳ ಬಗ್ಗೆ ಕಾಣಲಾಗುವುದಿಲ್ಲ. ಅಪಭ್ರಂಶಗಳಿರಬಹುದು. ಆದರೆ ಈ ವಿದ್ಯಮಾನವನ್ನು ಅಲ್ಲಗಳೆಯಲಾಗುವುದಿಲ್ಲ. ಮಠಗಳಲ್ಲಿ ನಡೆಸಲಾಗುವ ಅನ್ನ ದಾಸೋಹದ ಹಿಂದೆ ಸಾವಿರಾರು ರೈತರ ಬೆವರು, ಪರಿಶ್ರಮ ಅಡಗಿರುವುದನ್ನು ತೆರೆಮರೆಯಲ್ಲೇ ಇರಿಸಲಾಗುತ್ತದೆ. ಮಠಗಳು ತಮ್ಮ ಟ್ರಸ್ಟ್ಗಳ ಮೂಲಕ ಸುತ್ತಲಿನ ರೈತರಿಂದ ಉಚಿತವಾಗಿ ಸಂಗ್ರಹಿಸುವ ದವಸ ಧಾನ್ಯಗಳನ್ನೇ ಅನ್ನದಾಸೋಹಕ್ಕೆ ಬಳಸುವುದು ಗುಟ್ಟಿನ ಮಾತೇನಲ್ಲ. ರೈತರು ಸ್ವ ಇಚ್ಚೆಯಿಂದ, ಭಕ್ತಿಯಿಂದ ದವಸ ಧಾನ್ಯ ನೀಡಲಿ ಅಥವಾ ಅನಿವಾರ್ಯತೆಯಿಂದ, ಒತ್ತಡದಿಂದ ನೀಡಲಿ, ಅನ್ನ ದಾಸೋಹದ ಶ್ರೇಯಸ್ಸು ಅವರಿಗೇ ಸಲ್ಲಬೇಕಾಗುತ್ತದೆ. ಆದರೆ ಸಲ್ಲುವುದು ಯಾವುದೋ ಒಂದು ಮಠ ಅಥವಾ ಮಠೋದ್ಯಮಿಗೆ ಮಾತ್ರ. ಶಿಕ್ಷಣ, ಧರ್ಮ, ಆಧ್ಯಾತ್ಮ , ಯೋಗ ಮತ್ತು ಪರ್ಯಾಯ ಚಿಕಿತ್ಸೆಗಳ ಹೆಸರಿನಲ್ಲಿ ಮಠಮಾನ್ಯಗಳು ನಡೆಸುತ್ತಿರುವ ವಾಣಿಜ್ಯ ಪ್ರಕ್ರಿಯೆಗಳಿಗೆ ಸಕರ್ಾರದ ಕೃಪಾಕಟಾಕ್ಷವಿದ್ದರೆ ಸಮಾಜ ಪ್ರಜಾಪ್ರಭುತ್ವದ ಹಾದಿಯಿಂದ ಮಠಪ್ರಭುತ್ವದ ಹಾದಿಯೆಡೆಗೆ ಸಾಗುವುದು ಖಚಿತ. ಶೆಟ್ಟರ್ ಸರ್ಕಾರ ಈ ನಿಟ್ಟಿನಲ್ಲಿ ಮಠೋದ್ಯಮಿಗಳ ಹಾದಿಯನ್ನು ಸುಗಮಗೊಳಿಸಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಸ್ವೀಕರಾರ್ಹವಲ್ಲ.
ಮಠ ಸಂಸ್ಕೃತಿಯ ಆಂತರ್ಯ
ಸರ್ಕಾರಗಳ ಅಳಿವು ಉಳಿವನ್ನು , ರಾಜಕೀಯ ಪಕ್ಷಗಳ ಹೆಜ್ಜೆ ಗುರುತುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಠೋದ್ಯಮಿಗಳು ದಿಟ್ಟ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ಮಠಗಳಿಗೆ ಕೋಟ್ಯಂತರ ರೂಗಳ ಅನುದಾನ ನೀಡುವ ಮೂಲಕ ರಾಜ್ಯ ಸರ್ಕಾರ ಮಠಪ್ರಭುತ್ವದೆಡೆ ಸಾಗುತ್ತಿರುವುದು ಸ್ಪಷ್ಟ . ಭಾರತೀಯ ಸಮಾಜದಲ್ಲಿ ಧರ್ಮ ಎಂಬ ಪದಕ್ಕೆ ನಾನಾ ಅರ್ಥಗಳಿವೆ. ಜೀವನ ಮಾರ್ಗವನ್ನೇ ಧರ್ಮವೆಂದು ಭಾವಿಸುವ ಚಿಂತನೆ ಒಂದಾದರೆ, ಒಂದು ನಿರ್ದಿಷ್ಟ ಜನಸಮುದಾಯವನ್ನು ಪ್ರತಿನಿಧಿಸುವ ಅಸ್ಮಿತೆಯನ್ನೇ ಧರ್ಮದ ಚೌಕಟ್ಟಿನೊಳಗೆ ಸಮೀಕರಿಸುವ ಚಿಂತನೆ ಮತ್ತೊಂದೆಡೆ ಕಾಣುತ್ತದೆ. ದೇವರ ಪರಿಕಲ್ಪನೆ ಮತ್ತು ಧರ್ಮ ಭಿನ್ನವಾದರೂ ಭಾರತದ ಶ್ರೇಣೀಕೃತ ಸಮಾಜದಲ್ಲಿ ಎರಡನ್ನೂ ಹೊಸೆದು ನೋಡುವ ಪರಂಪರೆ ಬೆಳೆದುಬಂದಿದೆ. ಇದರೊಟ್ಟಿಗೆ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಎನ್ನಬಹುದಾದ ಆಧ್ಯಾತ್ಮವೂ ಸಹ ಬೆಸೆದುಕೊಂಡಿರುವುದು ಧರ್ಮ-ಸಂಸ್ಕೃತಿ-ಆಧ್ಯಾತ್ಮ ಮತ್ತು ದೇವರ ಪರಿಕಲ್ಪನೆಯನ್ನು ಒಂದೇ ಚೌಕಟ್ಟಿನಲ್ಲಿ ನೋಡಲಾಗುತ್ತದೆ. ಹಾಗಾಗಿ ಧರ್ಮ ರಕ್ಷಣೆಯ ನಿಟ್ಟಿನಲ್ಲಿ ದೇವಾಲಯಗಳಿಗಿಂತಲೂ ಹೆಚ್ಚಾಗಿ ಆಧ್ಯಾತ್ಮವನ್ನು ಬೋಧಿಸುವ ಮಠಗಳು ಮತ್ತು ಮಠಾಧೀಶರುಗಳ ಪಾತ್ರ ಮಹತ್ವದ್ದಾಗಿರುತ್ತದೆ. ಮಠ ಸಂಸ್ಕೃತಿ ಅನಾದಿ ಕಾಲದಿಂದಲೂ ಬೆಳೆದುಬಂದಿರುವ ಪರಂಪರೆಯಾಗಿದ್ದು ವಿಭಿನ್ನ ಕಾಲಘಟ್ಟಗಳಲ್ಲಿ ತನ್ನದೇ ಆದ ನವ ನವೀನ ಸ್ವರೂಪಗಳನ್ನು ಪಡೆದುಬಂದಿದೆ. ಸಮಕಾಲೀನ ಸಂದರ್ಭದಲ್ಲಿನ ಮಠೋದ್ಯಮಿಗಳನ್ನು ಬದಿಗಿಟ್ಟು ನೋಡಿದಾಗ ಮಠ ಸಂಸ್ಕೃತಿಯ ಮೂಲ ಲಕ್ಷಣಗಳನ್ನು ಗ್ರಹಿಸುವುದು ಸುಲಭ.
ಭಾರತದ ಆಧ್ಯಾತ್ಮ ಪರಂಪರೆಯಲ್ಲಿ ವಿರಕ್ತ ಜೀವನ ನಡೆಸುವ ಆಧ್ಯಾತ್ಮದಲ್ಲಿ ಅನುಭಾವ ಪಡೆದಿರುವ ಕೆಲವೇ ವ್ಯಕ್ತಿಗಳು ಇಂತಹ ಮಠ ಸಂಸ್ಕೃತಿಯನ್ನು ಬೆಳೆಸಿರುವುದನ್ನು ಕಾಣಬಹುದು. ಕಾಲಾನುಕ್ರಮದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಜಾಲಕ್ಕೆ ಸಿಲುಕಿ ಜಾತಿ ಆಧಾರಿತ ಮಠ ಸಂಸ್ಕೃತಿ ಬೆಳೆದುಬಂದಿದ್ದರೂ ಮಠಗಳಿಗೆ ಮತ್ತು ಮಠಾಧೀಶರಿಗೆ ತಮ್ಮದೇ ಆದ ಗೌರವಯುತ ಸ್ಥಾನಮಾನಗಳಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ಮೇಲ್ಜಾತಿಯ ಅಧಿಪತ್ಯವನ್ನು ಸಾಧಿಸಲು ಆಧ್ಯಾತ್ಮದ ಮೂಲಕ ಸರ್ವ ಜನಾಂಗದ ಜನತೆಯನ್ನು ಧರ್ಮದ ಚೌಕಟ್ಟಿನೊಳಗೆ ಬಂಧಿಸಿಡುವ ಒಂದು ಅಸ್ತ್ರವಾಗಿ ಮಠಗಳನ್ನು ಬಳಸಲಾಗಿದ್ದು ಐತಿಹಾಸಿಕ ಸತ್ಯವೇ ಆದರೂ ಮಠಗಳ ಅಧಿಪತ್ಯ ವಹಿಸುತ್ತಿದ್ದ ವ್ಯಕ್ತಿಗಳ ನೈತಿಕ ಮತ್ತು ಧಾಮರ್ಿಕ ನಿಲುವುಗಳು ಜನಸಾಮಾನ್ಯರಿಗೆ ಮಾರ್ಗದರ್ಶಕವಾಗಿರುತ್ತಿದ್ದವು. ಮಠಾಧೀಶರೆಂದರೆ ಪೂಜ್ಯ ಭಾವನೆಯನ್ನು ಸೃಷ್ಟಿಸುವ ಪರಿಸ್ಥಿತಿ ಇತ್ತು. ಕಾರಣ ಮಠಾಧೀಶರುಗಳು ತಮ್ಮ ಧಾಮರ್ಿಕ ಕ್ರಿಯಾವಿಧಿಗಳನ್ನು ಹೊರತುಪಡಿಸಿ, ಆಧ್ಯಾತ್ಮ ಮತ್ತು ಪ್ರವಚನಗಳತ್ತ ಹೆಚ್ಚು ಗಮನ ನೀಡುತ್ತಿದ್ದರು. ಜಾತಿ ವ್ಯವಸ್ಥೆಯ ಸಂರಚನೆಯನ್ನು ಸಂರಕ್ಷಿಸಿಕೊಂಡೇ ತಮ್ಮ ಅಧಿಪತ್ಯವನ್ನು ಸಾಧಿಸುವ ಮೇಲ್ಜಾತಿಯ ಮಠಗಳು ಒಂದೆಡೆಯಾದರೆ, ಧರ್ಮದ ಚೌಕಟ್ಟನ್ನು ಬೇಧಿಸದೆ ಜಾತೀಯ ಹಿತಾಸಕ್ತಿಗಳನ್ನು ಸಂರಕ್ಷಿಸುವ ಅನ್ಯ ಜಾತಿಯ ಮಠಗಳೂ ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡಿದ್ದವು.
ಸರ್ವ ಸಂಗ ಪರಿತ್ಯಾಗಿಗಳಾಗಿ, ಅರಿಷಡ್ವರ್ಗಗಳನ್ನು ಗೆದ್ದು, ಸಮಾಜದಲ್ಲಿ ಕಂಡುಬರುವ ಅಮಾನವೀಯ ಅನಿಷ್ಠ ಪದ್ಧತಿಗಳನ್ನು, ಆಚರಣೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ತಮ್ಮ ಧರ್ಮನಿಷ್ಠೆ ಮತ್ತು ಆಧ್ಯಾತ್ಮಿಕ ಶ್ರದ್ಧೆಯ ಮೂಲಕ ಜನತೆಗೆ ಒಳಿತು ಮಾಡಲು ಹುಟ್ಟಿಕೊಂಡ ಮಠಗಳು ಇಂದಿಗೂ ತಮ್ಮ ಅನನ್ಯ ಸ್ವರೂಪವನ್ನು ಕಾಪಾಡಿಕೊಂಡು ಬಂದಿವೆ. 12ನೆಯ ಶತಮಾನದ ಸಾಮಾಜಿಕ ಚಳುವಳಿಗಳ ಮೂಲಕ ಉಗಮಿಸಿದ ನವೀನ ಚಿಂತನೆಗಳು ಜಾತ್ಯಾತೀತ ಪರಂಪರೆಯ ಮಠ ಸಂಸ್ಕೃತಿಯನ್ನು ಬೆಳೆಸಿಲ್ಲವಾದರೂ ಸಮಾಜದಲ್ಲಿ ಒಂದು ಮೌಲಿಕ ವಾತಾವರಣವನ್ನು ಸೃಷ್ಟಿಸುವತ್ತ ತಮ್ಮದೇ ಆದ ಕೊಡುಗೆ ನೀಡಿದ್ದವು. ಸಮಾಜದ ಆಗುಹೋಗುಗಳಿಗೆ ಆಧ್ಯಾತ್ಮದ ಪರಿಹಾರ ಸೂಚಿಸುವ ಮೂಲಕ ಜನತೆಯ ನೈತಿಕ ಮೌಲ್ಯಗಳಿಗೆ ಒಂದು ಸಾಮುದಾಯಿಕ ಸ್ವರೂಪ ನೀಡುವ ಕೈಂಕರ್ಯ ಸ್ವಾಮೀಜಿಗಳದ್ದಾಗಿತ್ತು. ಹಾಗಾಗಿಯೇ ಮಠಾಧೀಶರೆಂದರೆ ಜನತೆಯಲ್ಲಿ ಪೂಜ್ಯ ಮನೋಭಾವ ಮೂಡುತ್ತಿತ್ತು. ನಡೆದಾಡುವ ದೇವರು ಎಂಬ ಬಿರುದನ್ನು ಪಡೆದ ಶತಾಯುಷಿ ಮಠಾಧೀಶರು ನಮ್ಮೊಡನಿರುವುದು ಈ ವಿದ್ಯಮಾನಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ದೇವರು ಮತ್ತು ಮಾನವ ನಡುವೆ ಸಂಪರ್ಕ ಕಲ್ಪಿಸುವ ಏಜೆಂಟರಂತೆ ಕಾರ್ಯ ನಿರ್ವಹಿಸದೆ, ಜನಸಾಮಾನ್ಯರಿಗೆ ದೈವ ಸಾಕ್ಷಾತ್ಕಾರದ ಮಾರ್ಗವನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಮಠಾಧೀಶರು ನಡೆಯುತ್ತಿದ್ದುದೇ ಅವರ ಘನತೆ, ಗೌರವ ಮತ್ತು ಮೌಲಿಕ ಸಂಸ್ಕೃತಿಗಳಿಗೆ ಸಮಾಜದಲ್ಲಿ ಮಾನ್ಯತೆ ಹೆಚ್ಚಾಗಿತ್ತು. ಹಾಗೆಂದ ಮಾತ್ರಕ್ಕೆ ಮಠಾಧೀಶರ ಮತ್ತು ಸ್ವಾಮೀಜಿಗಳ ಸಾಮುದಾಯಿಕ ನಿಷ್ಠೆ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಇದರ ಪರಿಣಾಮವಾಗಿಯೇ ಇಂದು ಜಾತಿ ಆಧಾರಿತ ಮಠಗಳನ್ನು ಕಾಣುತ್ತಿದ್ದೇವೆ. ಅಷ್ಟೇ ಅಲ್ಲ, ಮಠಾಧಿಪತಿಗಳು ತಮ್ಮ ಔದ್ಯಮಿಕ ಹಿತಾಸಕ್ತಿಗಳಿಗೆ ಬಲಿಯಾಗಿ ಮಠೋದ್ಯಮಿಗಳಾಗಿ ಪರಿವರ್ತಿತವಾಗುತ್ತಿರುವುದನ್ನೂ ಕಾಣುತ್ತಿದ್ದೇವೆ. ಸಮಾಜದಲ್ಲಿ ಮಾನವೀಯ, ನೈತಿಕ ಮೌಲ್ಯಗಳ ಬೀಜ ಬಿತ್ತುವ ಬದಲು ತಾವು ಗೆಲ್ಲಲಾಗದ ಅರಿಷಡ್ವರ್ಗಗಳಿಗೆ ಬಲಿಯಾಗುತ್ತಿರುವ ಸ್ವಾಮೀಜಿಗಳನ್ನು ಕಾಣುತ್ತಿದ್ದೇವೆ. ಒಂದು ಸದಾಚಾರಯುಕ್ತ ಸಮೃದ್ಧ ಸಮಾಜವನ್ನು ನಿರ್ಮಿಸುವ ಬದಲು ಅನಾಚಾರಗಳಲ್ಲಿ ತೊಡಗುವ ಸ್ವಾಮೀಜಿಗಳನ್ನು ಕಾಣುತ್ತಿದ್ದೇವೆ. ಈ ಪ್ರವೃತ್ತಿಯನ್ನು ಸಾರ್ವತ್ರೀಕರಿಸಲಾಗುವುದಿಲ್ಲವಾದರೂ ಮಠ ಸಂಸ್ಕೃತಿ ಎಲ್ಲೋ ಒಂದು ಕಡೆ ಹಳಿ ತಪ್ಪುತ್ತಿರುವುದನ್ನು ಅಲ್ಲಗಳೆಯಲಾಗದು. ಕಾಣದ ದೇವರ ನಂತರದ ಪೂಜ್ಯ ಸ್ಥಾನ ಪಡೆದು ರಾರಾಜಿಸುತ್ತಿದ್ದ ಮಠಾಧಿಪತಿಗಳು ಇಂದು ತಮ್ಮ ಅಗ್ರಸ್ಥಾನವನ್ನು ಕಳೆದುಕೊಳ್ಳುತ್ತಿರುವುದು ವಾಸ್ತವ. ಕಾರಣಗಳು ಹಲವಾರು ಆದರೆ ಪರಿಣಾಮ ಒಂದೇ. ಆಧ್ಯಾತ್ಮದ ವಾಣಿಜ್ಯೀಕರಣ ಮತ್ತು ಧರ್ಮ-ಸಂಸ್ಕೃತಿಗಳ ಔದ್ಯಮೀಕರಣ.
 

‍ಲೇಖಕರು avadhi

24 February, 2013

3 Comments

  1. A P Bhat

    ಇವರಲ್ಲಿ ಶಿಕ್ಷಕರಿಗೆ ,ದಾದಿಯರಿಗೆ ಸಂಬಳ ಕೊಡಲು ಹಣವಿಲ್ಲ.ಶಿಕ್ಷಣ ಆರೋಗ್ಯ ಕ್ಸೆತ್ರಗಳನ್ನು ವಾನಿಜ್ಯೀಕರಿಸುವುದರಲ್ಲಿ ಮುನ್ಚೂನಿಯಲ್ಲಿದ್ದು ವೈಭವೋಪೇತ ಐಶರಾಮೀ ಜೀವನ ನಡೆಸುತ್ತಿರುವ ಗುರುಗಳು ಸಾರ್ವಜನಿಕರ ತೆರಿಗೆ ಹಣ ವನ್ನು ದಾನ ಪಡೆಯಲು ಎಷ್ಟು ಅರ್ಹರು? ನಮಗೆ ರಾಜಶೇಖರ ಮುರ್ತಿಯವರಂತ ಅರ್ಥ ಮಂತ್ರಿಗಳು ಬೇಕು.ದುರಂತವೆಂದರೆ ಇಂತಹ ಅನಿಷ ಪದ್ದತಿಗಳನ್ನು ಆರಂಬಿಸುವುದು ಸುಲಭ ನಿಲ್ಲಿಸುವುದು ಕಷ್ಟ

  2. Kiran

    Wasn’t the tradition started by Congress through “financial upliftment” of mosques to gain vote-bank? Only if intellectuals has risen their voice then! Now the epidemic has spread to Hindu organizations. This is natural history. When the intellectuals follow the policy selective blindness and selective mutism, they lose their voice when the problem grows beyond proportion. The present scenario is disgusting. Now, who will bell the cat?

  3. mmshaik

    jaati rajakaarnada innodu mukh..mahatma gandhi pakka vaalmiki kuduttdne,shivaaji kuduttane,kanakadaas kuduttane,kacheriya godeyella tumbisi bidtaare..swartha raajkaarinigalu!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading