ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಕಾಲಂ : ಜಸಿಂತಾ ಮಲಾಲ ಸವಿತಾ ಶರ್ಮಿಳಾ?

ಜಸಿಂತಾ ಮಲಾಲ ಸವಿತಾ ಶರ್ಮಿಳಾ?

ಭಾರತೀಯ ಸಂಜಾತೆ, ಕರ್ನಾಟಕದ ಉಡುಪಿ ಜಿಲ್ಲೆಯ ಶುಶ್ರೂಷಕಿ ಜಸಿಂತಾ ಸಲ್ಡಾನ ಆತ್ಮಹತ್ಯೆ ಪ್ರಕರಣ ಮತ್ತೊಮ್ಮೆ ಮಾಧ್ಯಮಗಳ ಸುದ್ದಿಗೆ ಹೂರಣವಾಗಿದೆ. ಬ್ರಿಟನ್ನಿನ ರಾಜಕುಟುಂಬದ ಅವಕೃಪೆಗೆ ಪಾತ್ರವಾಗುವ ಭೀತಿ, ಮಾಧ್ಯಮಗಳ ಕೃಪೆಯಿಂದ ಸಾರ್ವಜನಿಕ ಚರ್ಚೆಗೆ ಕೇಂದ್ರ ಬಿಂದು ಆಗಬಹುದೆಂಬ ಆತಂಕ, ಕೆಲಸದಲ್ಲಿನ ಶ್ರದ್ಧೆಯಿಂದ ಮೂಡಿರಬಹುದಾದ ಪಾಪಪ್ರಜ್ಞೆ ಮತ್ತು ಆಸ್ಪತ್ರೆಯ ಮಾಲೀಕರ ಸಂವೇದನಾಶೂನ್ಯ ವರ್ತನೆ ಇವೆಲ್ಲವೂ ಜಸಿಂತಾ ಸಾವಿಗೆ ಕಾರಣವಾಗಿರಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ಜಸಿಂತಾಳ ಸಾವು ಆತ್ಮಹತ್ಯೆಯೇ ಆದರೂ ಮಾನವೀಯ ನೆಲೆಗಟ್ಟಿನಲ್ಲಿ ನೋಡಿದಾಗ ಅದೊಂದು ಘೋರ ಹತ್ಯೆ ಎಂದೇ ಹೇಳಬಹುದು. ಆಧುನಿಕ ಸಂವಹನ ಮಾಧ್ಯಮಗಳ ಮನರಂಜನಾ ದೃಷ್ಟಿಕೋನ ಮಾನವೀಯ ನೆಲೆಗಳನ್ನು ದಾಟಿ ಕೇವಲ ರಂಜನೀಯ ಸನ್ನಿವೇಶಗಳ ತಾಣವಾಗಿರುವುದನ್ನು ಜಸಿಂತಾ ಅವರ ಸಾವು ನಿರೂಪಿಸುತ್ತದೆ. ಇಬ್ಬರು ರೇಡಿಯೋ ಜಾಕಿಗಳ ಕುಚೋದ್ಯದ ಕರೆಯನ್ನು ನಿಜವೆಂದು ನಂಬಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬ್ರಿಟನ್ನಿನ ಯುವರಾಣಿಯ ಬಗ್ಗೆ ಮಾಹಿತಿ ನೀಡಿದ ಜಸಿಂತಾ ಮಾಡಿದ ತಪ್ಪಾದರೂ ಏನು ? ರಾಜಕುಟುಂಬದ ಗೋಪ್ಯ ಮಾಹಿತಿಯನ್ನು ಬಹಿರಂಗಪಡಿಸಿದ್ದು.

ಪ್ರಜಾಪ್ರಭುತ್ವವನ್ನೇ ಉಸಿರಾಡುತ್ತಿರುವ ಆಧುನಿಕ ಜಗತ್ತಿನಲ್ಲಿ ರಾಜಕುಟುಂಬದ ಬಗ್ಗೆ ಇಂತಹ ಒಂದು ಪ್ರತಿಷ್ಠೆ, ಗೌರವಗಳು ವ್ಯಕ್ತವಾಗುವುದನ್ನು ನೋಡಿದರೆ ಆತ್ಮಹತ್ಯೆಗೆ ಶರಣಾಗಬೇಕಿರುವುದು ಜಸಿಂತಾ ಅಲ್ಲ, ಪ್ರಜ್ಞಾವಂತ ಮಾನವ ಸಮುದಾಯ ಎಂದು ಭಾಸವಾಗುತ್ತದೆ. ರೇಡಿಯೋ ಜಾಕಿಗಳು ಮಾಡಿದ ಹುಸಿಕರೆಯನ್ನು ನಿಜವೆಂದು ನಂಬಿದ ಜಸಿಂತಾ ಒಂದು ರೀತಿಯಲ್ಲಿ ಮಾಧ್ಯಮಗಳು ನೀಡುವ ಸುದ್ದಿಯನ್ನೇ ಅಂತಿಮ ಸತ್ಯ ಎಂದು ನಂಬುವ ವಿಶ್ವ ಸಮುದಾಯದ ಸಂಕೇತವಾಗಿಯೂ ಕಾಣುತ್ತಾರೆ. ಒಂದು ವೇಳೆ ಯುವರಾಜನೇ ಕರೆ ಮಾಡಿದ್ದು ಜಸಿಂತಾ ಮಾಹಿತಿ ನೀಡಲಾಗುವುದಿಲ್ಲ ಎಂದು ಹೇಳಿದ್ದರೆ ಏನಾಗುತ್ತಿತ್ತು ? ಆಗಲೂ ಮಾಧ್ಯಮಗಳಲ್ಲಿ ಜಸಿಂತಾ ಅಪರಾಧಿಯಾಗಿ ನಿಲ್ಲುತ್ತಿದ್ದಳು. ರಾಜಕುಟುಂಬಕ್ಕೇ ಮಾಹಿತಿ ನಿರಾಕರಿಸಿದ ಆರೋಪಕ್ಕೆ ಗುರಿಯಾಗುತ್ತಿದ್ದಳು. ನವ ಉದಾರವಾದ ಸೃಷ್ಟಿಸಿರುವ ಪ್ರಭುತ್ವ ಧೋರಣೆಗೆ ಈ ಘಟನೆ ಸಾಕ್ಷೀಭೂತವಾಗಿ ನಿಲ್ಲುತ್ತದೆ. ಜಸಿಂತಾ ಬಲಿಯಾಗಿರುವುದು ಪ್ರಭುತ್ವವನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವ ಮಾಧ್ಯಮಲೋಕದ ಕೃತ್ಯಕ್ಕೆ. ಇಲ್ಲಿ ಅಪರಾಧಿಗಳು ಜಾಕಿಗಳಲ್ಲ, ವಿಶ್ವ ಪ್ರಭುತ್ವ ಮತ್ತು ನವ ಉದಾರವಾದ ಪೋಷಿಸುವ ಸಂಸ್ಕೃತಿಯ ಪ್ರತಿಪಾದಕರು.

ಆಧುನಿಕ ವಿಶ್ವದ ಸಾಂಸ್ಕೃತಿಕ ಪ್ರಭುತ್ವದ ಕುಚೇಷ್ಟೆಗೆ ಜಸಿಂತಾ ಬಲಿಯಾದರೆ, ಇದೇ ಆಧುನಿಕ ವಿಶ್ವದ ಮತೀಯ ಪ್ರಭುತ್ವದ ಬರ್ಬರತೆಗೆ ಸವಿತಾ ಎಂಬ ಮಹಿಳೆ ಬಲಿಯಾಗುತ್ತಾಳೆ. ಐಲರ್ೆಂಡಿನ ಕ್ಯಾಥೋಲಿಕ್ ಸಕರ್ಾರ ತಮ್ಮ ಕ್ರೈಸ್ತ ಧರ್ಮವನ್ನು ಕಾಪಾಡುವ ಸಲುವಾಗಿ ಅಥವಾ ಕ್ರೈಸ್ತ-ಕ್ಯಾಥೋಲಿಕ್ ಸಮುದಾಯದ ಸಾಂಸ್ಕೃತಿಕ-ಧಾರ್ಮಿಕ ನಿಯಮಗಳನ್ನು ಪಾಲಿಸುವ ಸಲುವಾಗಿ ಗರ್ಭಪಾತವನ್ನು ನಿಷೇಧಿಸಿದೆ. ಅಂದರೆ ಒಬ್ಬ ಮಹಿಳೆ ತನ್ನ ಗರ್ಭದಲ್ಲಿನ ಮಗುವನ್ನು ಪಡೆಯುವುದೋ ಇಲ್ಲವೋ ಎಂದು ನಿರ್ಧರಿಸುವುದು ಅಲ್ಲಿನ ಪ್ರಭುತ್ವವೇ ಹೊರತು ಗರ್ಭಧಾರಣೆ ಮಾಡಿದ ಮಹಿಳೆಯಲ್ಲ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದೆ ಕೆನ್ನೆ ನೀಡಲು ಹೇಳಿದ್ದ ಏಸುಕ್ರಿಸ್ತ ಈ ನಿಯಮವನ್ನು ಒಪ್ಪುತ್ತಿದ್ದರೋ ಇಲ್ಲವೋ ಆದರೆ ಧರ್ಮ ರಕ್ಷಣೆಯ ಹೆಸರಿನಲ್ಲಿ ಐರ್ಲೆಂಡಿನ ಸರ್ಕಾರ ಈ ನೀತಿ ಜಾರಿಗೊಳಿಸಿದೆ. ಇದಕ್ಕೆ ಬಲಿಯಾಗಿದ್ದು ಸವಿತಾ ಎಂಬ ಮಹಿಳೆ. ಗರ್ಭಪಾತ ಮಾಡದಿದ್ದರೆ ಆಕೆ ಉಳಿಯುವುದಿಲ್ಲ ಎಂದು ತಿಳಿದಿದ್ದರೂ ಅಲ್ಲಿನ ಧರ್ಮನಿಷ್ಠ ವೈದ್ಯರು ಕರ್ಮ ಭ್ರಷ್ಟರಾದದ್ದು ಈಗಾಗಲೇ ಇತಿಹಾಸವಾಗಿಬಿಟ್ಟಿದೆ. ಮತೀಯ ಪ್ರಭುತ್ವ ಮಹಿಳೆಯರ ಮೇಲೆ ಎಸಗುವ ದೌರ್ಜನ್ಯಕ್ಕೆ ಸವಿತಾ ಜ್ವಲಂತ ನಿದರ್ಶನವಾಗಿ ನಿಲ್ಲುತ್ತಾರೆ.

ಸವಿತಾ ಮತೀಯ ಪ್ರಭುತ್ವದ ಬಲಿಪಶುವಾದರೆ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದ ಬಾಲಕಿ ಮಲಾಲಾ ಇದೇ ಮತೀಯವಾದ ಸೃಷ್ಟಿಸುವ ಪರ್ಯಾಯ ಪ್ರಭುತ್ವ ಅಥವಾ ಮತೀಯವಾದಿಗಳ ಖಾಸಗಿ ಪ್ರಭುತ್ವಕ್ಕೆ ಬಲಿಯಾಗುತ್ತಾಳೆ. ಮಲಾಲಾ ಮಾಡಿದ ಮಹಾಪರಾಧ ಮಹಿಳೆಯರಿಗೆ ಶಿಕ್ಷಣ ನೀಡಲು ಆಗ್ರಹಿಸಿದ್ದು. ತಾಲಿಬಾನಿಗಳ ಪ್ರಕಾರ ಇಸ್ಲಾಂ ಧರ್ಮ ಅಥವಾ ಮಹಾನ್ ಪ್ರವಾದಿಗಳು ಮಹಿಳೆಯರಿಗೆ ಶಿಕ್ಷಣ ನಿರಾಕರಿಸುತ್ತಾರೆ. ಇದು ಸಮರ್ಥನೀಯವೋ ಅಲ್ಲವೋ ಪ್ರಶ್ನೆಯಲ್ಲ, ಆದರೆ ಈ ಸಮರ್ಥನೆಯನ್ನು ತಮ್ಮ ತೋಳ್ಬಲದ ಮೂಲಕ ಪ್ರತಿಪಾದಿಸುವ ತಾಲಿಬಾನಿಗಳಿಗೆ ಆಧುನಿಕ ನಾಗರಿಕ ಸಮಾಜ ಇನ್ನೂ ಸಮರ್ಥನೆ ನೀಡುತ್ತಿರುವುದು ಪ್ರಶ್ನಾರ್ಹ. ಇದು ಕೇವಲ ತಾಲಿಬಾನಿಗಳ ಪ್ರಶ್ನೆಯಲ್ಲ. ಕನರ್ಾಟಕದ ಶಾಲಾ ಕಾಲೇಜುಗಳಲ್ಲಿ, ಹರಿಯಾಣದ ಗ್ರಾಮಗಳಲ್ಲಿ, ರಾಜಧಾನಿ ದೆಹಲಿಯ ಕಾಲೇಜುಗಳಲ್ಲಿ ಯುವತಿಯರ, ಮಹಿಳೆಯರ ಮೇಲೆ ವಸ್ತ್ರ ಸಂಹಿತೆ ಹೇರುವ ಸಾಂಸ್ಕೃತಿಕ ಆರಕ್ಷಕರೂ ಇದೇ ಗುಂಪಿಗೆ ಸೇರುತ್ತಾರೆ. ಅಲ್ಲಿ ಮಲಾಲ ಮೇಲೆ ಕೊಲೆಯ ಯತ್ನ ನಡೆಯುತ್ತದೆ, ಇಲ್ಲಿ ಸಾಂಸ್ಕೃತಿಕ ಆರಕ್ಷಕರನ್ನು ಧಿಕ್ಕರಿಸಿದ ಮಹಿಳೆ ಅಥವಾ ಯುವತಿ ದಿನ ನಿತ್ಯ ಮಾನಸಿಕ ಹಲ್ಲೆಗೊಳಗಾಗುತ್ತಾಳೆ. ಅಲ್ಲಿ ಮಹಿಳೆ ವಿದ್ಯಾವಂತಳಾದರೆ ಪ್ರಚೋದಕವಾಗಿ ಕಾಣುತ್ತದೆ ಇಲ್ಲಿ ಆಕೆಯ ಉಡುಪು ಪ್ರಚೋದಕವಾಗುತ್ತದೆ. ಅತ್ಯಾಚಾರ ಮಾನಭಂಗ ಪ್ರಕರಣಗಳು ಉಂಟಾದಾಗ ಇದೇ ಪ್ರಚೋದನೆಯ ವಿದ್ಯಮಾನ ಚರ್ಚೆಗೊಳಗಾಗುತ್ತದೆ. ಈ ಮತೀಯ ಶಕ್ತಿಗಳನ್ನು ತನ್ನ ಅಸ್ತಿತ್ವದ ಉಳಿವಿಗಾಗಿ ಸಹಿಸಿಕೊಳ್ಳುವುದೇ ಅಲ್ಲದೆ ಪರೋಕ್ಷವಾಗಿ ಸಂರಕ್ಷಿಸುವ ಪ್ರಭುತ್ವಗಳು ಅಪರಾಧಿ ಸ್ಥಾನದಲ್ಲಿ ನಿಲ್ಲುವುದಿಲ್ಲವೇ ?

ಪ್ರಭುತ್ವದ ಸಾಂಸ್ಕೃತಿಕ, ಸಂವಹನ ಮಾಧ್ಯಮ ರೂಪದ, ಧಾರ್ಮಿಕ ಆಯಾಮಗಳಲ್ಲಿ ದೌರ್ಜನ್ಯಕ್ಕೊಳಗಾಗುವ ಮಹಿಳೆಯರೊಡನೆ ಕಳೆದ 12 ವರ್ಷಗಳಿಂದ ಪ್ರಭುತ್ವದ ದಮನಕಾರಿ ನೀತಿಗಳ ವಿರುದ್ಧ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿರುವ ಇರೋಮ್ ಶರ್ಮೀಳಾ ಕ್ಷಣಕ್ಷಣಕ್ಕೂ ಹಲ್ಲೆಗೊಳಗಾಗುತ್ತಿದ್ದಾರೆ. ಶರ್ಮಿಳಾ ಅವರ ಆಕ್ರಂದನವನ್ನು ಆಲಿಸಲೂ ಸಿದ್ಧರಿಲ್ಲದ ಭಾರತದ ಪ್ರಭುತ್ವ ಆಕೆಯ ಆಶಯವನ್ನು ಗ್ರಹಿಸಲೂ ವಿಫಲವಾಗಿರುವುದು ಪ್ರಭುತ್ವ-ಆಳ್ವಿಕರು ಮತ್ತು ಮಾನವೀಯತೆಯ ನಡುವಿನ ಕಂದರದ ಪ್ರಮಾಣವನ್ನು ಸೂಚಿಸುತ್ತದೆ. ಸಾರ್ವಭೌಮ ಪ್ರಜೆಗಳ ವಿರುದ್ಧ ತಮ್ಮ ಶಸ್ತ್ರಾಸ್ತ್ರಗಳನ್ನು ಬಳಸಿ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಅನಿರ್ಬಂಧಿತ ಅಧಿಕಾರ ಪಡೆದಿರುವ ಸಶಸ್ತ್ರಪಡೆಗಳಿಗೆ ಈ ಅಧಿಕಾರ ನೀಡುವ ಕರಾಳ ಶಾಸನವನ್ನು ರದ್ದುಪಡಿಸಿ ಎಂಬ ಶರ್ಮಿಳಾ ಅವರ ಆಗ್ರಹ ಆಳ್ವಿಕರ ಕಿವಿಗೆ ಬೀಳದಿರುವುದು ಪ್ರಭುತ್ವದ ಮೂಲ ಲಕ್ಷಣದ ದ್ಯೋತಕವಾಗಿದೆ. ಮಲಾಲಾಳಂತೆ ಕೊಲೆ ಯತ್ನಕ್ಕೆ ಬಲಿಯಾಗಿಲ್ಲ. ಸವಿತಾಳಂತೆ ಹತ್ಯೆಗೀಡಾಗಿಲ್ಲ, ಜಸಿಂತಾಳಂತೆ ಆತ್ಮಹತ್ಯೆಗೆ ಪ್ರೇರೇಪಿಸಿಲ್ಲ. ಆದರೂ ಶರ್ಮಿಳಾ ನಿತ್ಯ ಸಾವನ್ನು ಎದುರಿಸುತ್ತಿರುವ ದಿಟ್ಟ ಮಹಿಳೆ.

ಈ ನಾಲ್ವರು ಮಹಿಳೆಯರು ಪ್ರತಿನಿಧಿಸುವ ಜನಸಮುದಾಯವನ್ನು ರಕ್ಷಿಸುವುದಿರಲಿ, ಈ ಸಮುದಾಯದ ಅಳಲನ್ನು ಕೇಳಲೂ ಸಿದ್ಧರಿಲ್ಲದ ಆಳ್ವಿಕರು ಪ್ರಭುತ್ವದ ಚುಕ್ಕಾಣಿ ಹಿಡಿದಿರುವಾಗ ದೆಹಲಿಯಲ್ಲಿ ನಡೆದಂತಹ ಘಟನೆ ಸ್ವಾಭಾವಿಕ ಎನಿಸುವುದಿಲ್ಲವೇ ? ಅತ್ಯಾಚಾರಿಗಳಿಗೆ ಮರಣದಂಡನೆ ನೀಡಲು ಆಗ್ರಹಿಸಲಾಗುತ್ತಿದೆ, ಆದರೆ ಮಲಾಲ, ಸವಿತಾ, ಜಸಿಂತಾ ಮತ್ತು ಶರ್ಮಿಳಾ  ಅವರ ಜೀವಕ್ಕೆ ಬೆಲೆ ನೀಡದ ಈ ಅಮಾನವೀಯ ವ್ಯವಸ್ಥೆಗೆ ಏನು ಶಿಕ್ಷೆ ?

‍ಲೇಖಕರು G

26 December, 2012

2 Comments

  1. shanthi k.a.

    idee jagattu avyavastitavaagide.ellavoo badalaagabekide..adare yaavaaga..? hege..? yochisidare gaabariyaaguttide..

  2. Mohan V Kollegal

    ಒಂದು ವೇಳೆ ಯುವರಾಜನೇ ಕರೆ ಮಾಡಿದ್ದು ಜಸಿಂತಾ ಮಾಹಿತಿ ನೀಡಲಾಗುವುದಿಲ್ಲ ಎಂದು ಹೇಳಿದ್ದರೆ ಏನಾಗುತ್ತಿತ್ತು ? ಆಗಲೂ ಮಾಧ್ಯಮಗಳಲ್ಲಿ ಜಸಿಂತಾ ಅಪರಾಧಿಯಾಗಿ ನಿಲ್ಲುತ್ತಿದ್ದಳು – ಇದು ಹುಸಿ ಕರೆ ಸ್ವೀಕರಿಸಿದಾಗ ಆಕೆಯ ಗೊಂದಲವಾಗಿತ್ತೇನೋ? ಏನೇ ಆಗಲಿ ಒಂದು ಜೀವದ ಅವಸಾನವಾಯಿತು ಅಷ್ಟೇ. ಇಂತಹ ಎಷ್ಟೋ ಸಾವುಗಳು ಘಟಿಸುತ್ತಿವೆ, ಜಸಿಂತಾಳಂತೆ ಹೈ ಪ್ರೊಫೈಲ್ ಕನೆಕ್ಷನ್ ಇಲ್ಲದೇ ಇರುವುದರಿಂದ ಮಂದ ಬೆಳಕಿನಲ್ಲಿಯೇ ಸಮಾಧಿಯಾಗುತ್ತವೆ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಿಗುವ ಮನ್ನಣೆ, ಗುಲ್ಬರ್ಗಾದಲ್ಲಿ ನಡೆಯುವ ಅತ್ಯಾಚಾರಕ್ಕೆ ದೊರಕುವುದಿಲ್ಲ. ಲೇಖನದ ತಿರುಳು ಚೆನ್ನಾಗಿದೆ, ಘಟನೆಗಳನ್ನು ತೂಗಿನೋಡಿ ನೇರನೋಟದಲ್ಲಿ ವಿಮರ್ಶಿಸುವ ಕಲೆಯನ್ನು ನಿಮ್ಮಿಂದ ನನ್ನಂತಹ ಎಳೆನಿಂಬೆಕಾಯಿಗಳು ಕಲಿಯಬೇಕು. ಇಷ್ಟವಾಯಿತು… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading