ಭಾರತ ಮತ್ತೊಂದು ಗಣತಂತ್ರ ದಿನವನ್ನು ಆಚರಿಸುತ್ತಿದೆ. ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿ 62 ವರ್ಷಗಳು ಸಂದಿವೆ. ಈ ಆರು ದಶಕಗಳ ಅವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ, ಸಾಮಾಜಿಕ ಮುನ್ನಡೆ, ಸಾಂಸ್ಕೃತಿಕ ಅಭ್ಯುದಯಗಳ ಸಿಂಹಾವಲೋಕನ ಮಾಡಿದಾಗ ಬ್ರಿಟೀಷ್ ವಸಾಹತು ಆಳ್ವಿಕೆಯಿಂದ ಮುಕ್ತವಾದ ಹಿಂದುಳಿದ ದೇಶವೊಂದು ಜಗತ್ತಿನ ಭೂಪಟದಲ್ಲಿ ಪ್ರಮುಖ ಸ್ಥಾನ ಗಳಿಸುವ ಮಟ್ಟಿಗೆ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿ ಎನಿಸುತ್ತದೆ. ನವ ಉದಾರವಾದ ಮತ್ತು ಜಾಗತೀಕರಣ ನೀತಿಗಳ ಪರಿಣಾಮ ದೇಶದಲ್ಲಿ ಅಸಮಾನತೆ ತಾಂಡವಾಡುತ್ತಿದ್ದರೂ ಕೊಂಚ ಮಟ್ಟಿನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದ್ದರೆ ಅದಕ್ಕೆ ಈ ದೇಶದ ಶ್ರಮಜೀವಿಗಳ ಪರಿಶ್ರಮವೇ ಕಾರಣ ಹೊರತು, ಆಳ್ವಿಕರ ಔದಾರ್ಯ ಅಥವಾ ಸಂವೇದನೆಗಳಲ್ಲ. ಜಾಗತೀಕರಣದ ಪರಿಸರದಲ್ಲಿ ವಿಶ್ವದ ಭೂಪಟದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಭಾರತ ಕಾಣಿಸಿಕೊಂಡರೂ ಬಡವ ಶ್ರೀಮಂತರ ಅಂತರ ದಿನೇ ದಿನೇ ಹೆಚ್ಚಾಗುತ್ತಿದ್ದು, ಶ್ರೀಮಂತಿಕೆಯ ಐಷಾರಾಮಿ ಪರದೆಯ ಹಿಂದೆ ಕಂಡೂ ಕಾಣದಂತೆ ನಿರ್ಗತಿಕತೆ ತಾಂಡವಾಡುತ್ತಿದೆ. ಇದು ಈ ಸಂದರ್ಭದಲ್ಲಿ ನೆನೆಯಬೇಕಾದ ಕಟು ಸತ್ಯ.
ವಿಶ್ವದ ಇತಿಹಾಸದಲ್ಲೇ ಅತ್ಯಂತ ಮಾನವೀಯ ಸಂವೇದನೆಯುಳ್ಳ ಸಂವಿಧಾನವನ್ನು ಹೊಂದಿರುವ ಭಾರತದ ಸಮಾಜದಲ್ಲಿ ಪ್ರಜಾತಂತ್ರದ ಬೇರುಗಳು ಇನ್ನೂ ಗಟ್ಟಿಯಾಗದಿದ್ದರೂ ದೇಶದ ಸಾರ್ವಭೌಮ ಪ್ರಜೆಗಳ ಮನದಾಳದಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ವಿಶ್ವಾಸ ಹೆಚ್ಚಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಪ್ರಜಾ ಪ್ರತಿನಿಧಿಗಳಿಂದ ಉತ್ತರದಾಯಿತ್ವ ಬಯಸುವ ಮನೋಭಾವವನ್ನು ನಿಧಾನವಾಗಿಯಾದರೂ ರೂಢಿಸಿಕೊಂಡಿರುವ ಪ್ರಬುದ್ಧ ಜನಸಮುದಾಯಗಳು ತಮ್ಮ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸಲು ಹಿಂಜರಿಯದೆ ಇರುವುದು ಒಂದು ರೀತಿಯಲ್ಲಿ ಪ್ರಬುದ್ಧತೆಯ ಸಂಕೇತವಾಗಿ ಕಾಣುತ್ತದೆ. ದೆಹಲಿಯ ಅತ್ಯಾಚಾರ ಪ್ರಕರಣದ ನಂತರದ ಬೆಳವಣಿಗೆಗಳು ಈ ನಿಟ್ಟಿನಲ್ಲಿ ಒಂದು ಬೆಳಕಿನ ಕಿಂಡಿ ಎನ್ನಬಹುದು. ಆದಾಗ್ಯೂ ಸಾಮಾಜಿಕ ಸ್ತರದಲ್ಲಿ ಭಾರತೀಯ ಸಮಾಜ ತನ್ನ ಪ್ರಾಚೀನ ಪಳೆಯುಳಿಕೆಗಳಿಂದ ಇನ್ನೂ ಹೊರಬರದಿರುವುದು ಸ್ಪಷ್ಟವಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ನಿಯಂತ್ರಿಸಲು ಇಂದಿಗೂ ಕಾನೂನು ಕ್ರಮಗಳನ್ನೇ ಅವಲಂಬಿಸುವ ಸಮಾಜ ತನ್ನನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನೂ ಮುಂದಿರಿಸದಿರುವುದು ಖೇದಕರ.
ಭಾರತೀಯ ಸಮಾಜದ ಪ್ರಬುದ್ಧತೆಯನ್ನು ಪ್ರತಿಭಟನೆಗಳ ಛಾಯೆಯನ್ನು ಹೊರತುಪಡಿಸಿ ನೋಡಿದಾಗ ಇನ್ನೂ ಹಲವು ರೀತಿಯ ಪ್ರಾಚೀನ ಮೌಲ್ಯಗಳನ್ನು ಸಂರಕ್ಷಿಸುತ್ತಿರುವುದು ಕಂಡುಬರುತ್ತದೆ. ಜಾತಿ ವ್ಯವಸ್ಥೆಯನ್ನು ಸಂರಕ್ಷಿಸುವ ಪಟ್ಟಭದ್ರ ಹಿತಾಸಕ್ತಿಗಳು, ಊಳಿಗಮಾನ್ಯ ಮೌಲ್ಯಗಳನ್ನು ಉಳಿಸಲು ಹೆಣಗುವ ಖಾಪ್ ಪಂಚಾಯತಿಗಳು, ರಾಜಕೀಯ ಕುಟಿಲತೆಯ ಮೂಲಕ ಜನಸಮುದಾಯಗಳಲ್ಲಿ ದ್ವೇಷಬೀಜಗಳನ್ನು ಬಿತ್ತುವ ಆಳುವ ವರ್ಗದ ಪ್ರತಿನಿಧಿಗಳು, ಮಹಿಳಾ ಸಂವೇದನೆಯನ್ನು ಅರ್ಥಮಾಡಿಕೊಳ್ಳುವುದಿರಲಿ ಮಾನ್ಯ ಮಾಡುವುದಕ್ಕೂ ಹಿಂಜರಿಯುವ ಪಿತೃ ಪ್ರಧಾನ ವ್ಯವಸ್ಥೆ ಮತ್ತು ಪುರುಷ ಪ್ರಧಾನ ಸಾಮಾಜಿಕ ಮೌಲ್ಯಗಳು, ದೇಶದ ಅಖಂಡತೆ ಮತ್ತು ಜನಸಾಮಾನ್ಯರ ಹಿತಾಸಕ್ತಿಗಳನ್ನೂ ಲೆಕ್ಕಿಸದೆ ಕೋಮುದ್ವೇಷವನ್ನು ಬೆಳೆಸುವ ಮತೀಯವಾದಿಗಳು ಇವೆಲ್ಲವೂ ಗಣತಂತ್ರ ಭಾರತವನ್ನು ಅಣಕಿಸುವ ವಿದ್ಯಮಾನಗಳಾಗಿ ಕಾಣುತ್ತವೆ. ಇವುಗಳ ಹಲವು ರೀತಿಯ ಹೋರಾಟ, ಪ್ರತಿಭಟನೆ ವ್ಯಕ್ತವಾಗುತ್ತಿದ್ದರೂ ಎಲ್ಲೋ ಒಂದೆಡೆ ಜನಸಾಮಾನ್ಯರ ಸಿನಿಕತೆಯೂ ಎದ್ದು ಕಾಣುತ್ತದೆ.
ಕಾರಣ ಸ್ಪಷ್ಟ. ಇಂದಿನ ನವ ಉದಾರವಾದಿ ವ್ಯವಸ್ಥೆಯಲ್ಲಿ ಪ್ರಭುತ್ವವನ್ನು ಪ್ರಶ್ನಿಸುವುದು ಎಷ್ಟು ಮಹಾಪರಾಧವೋ, ಸ್ಥಾಪಿತ ವ್ಯವಸ್ಥೆ ಮತ್ತು ಈ ವ್ಯವಸ್ಥೆಯನ್ನು ರಕ್ಷಿಸುವ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಪ್ರಶ್ನಿಸುವುದೂ ಅಷ್ಟೇ ಅಪರಾಧವಾಗುತ್ತದೆ. ಹಾಗಾಗಿಯೇ ಪ್ರಭುತ್ವದ ಜನವಿರೋಧಿ ನೀತಿಗಳನ್ನು ಸರ್ಕಾರ ಶಿಕ್ಷಿಸಿದರೆ, ಸಾಮಾಜಿಕ ವ್ಯವಸ್ಥೆಯ ಅನಿಷ್ಠಗಳ ವಿರುದ್ಧ ದನಿ ಎತ್ತುವವರನ್ನು ಅಘೋಷಿತ ಸಾಂಸ್ಕೃತಿಕ ಆರಕ್ಷಕರು, ಜಾತಿ ಸಂಸ್ಥಾಪಕರು, ಧರ್ಮ ನಿಷ್ಠರು ಶಿಕ್ಷಿಸುತ್ತಾರೆ. ಪ್ರತಿರೋಧದ ದನಿಗಳನ್ನು ಅನುಕೂಲಸಿಂಧು ರಾಜಕಾರಣಕ್ಕೆ ಬಳಸಿಕೊಳ್ಳುವ ಒಂದು ಪರಂಪರೆ ಇಲ್ಲಿ ವ್ಯವಸ್ಥಿತವಾಗಿ ಬೇರೂರುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ಅರಾಜಕೀಯ ರಾಜಕಾರಣ ಸಾಂಸ್ಕೃತಿಕ ಸ್ವರೂಪ ಪಡೆದುಕೊಂಡಾಗ ವಿದ್ಯಾಲಯಗಳೂ ಮತೀಯವಾದಿ ಸಂಕಥನಗಳ ಕೇಂದ್ರವಾಗುತ್ತವೆ. ಕನರ್ಾಟಕದಲ್ಲಿ ಟಿಪ್ಪು ವಿಶ್ವವಿದ್ಯಾಲಯದ ಸಂದರ್ಭದಲ್ಲಿ ಈ ಸಾಂಸ್ಕೃತಿಕ ಭಯೋತ್ಪಾದನೆಯ ಛಾಯೆಯನ್ನು ಕಾಣಬಹುದು. ಈ ಒಂದು ಮತೀಯವಾದವನ್ನು ಪೋಷಿಸಲು ಪರಂಪರೆ, ಸಂಪ್ರದಾಯ ಮತ್ತು ದೇಶದ ಭವ್ಯ (?) ಇತಿಹಾಸವನ್ನು ಬಳಸಿಕೊಳ್ಳುವುದು ರಾಜಕೀಯ-ಸಾಮಾಜಿಕ ಪರಿಭಾಷೆಯಾಗಿದೆ. ಇದು ಗಣತಂತ್ರದ ದಿನದಂದು ಚರ್ಚೆಗೊಳಗಾಗಬೇಕಾದ ವಿಚಾರ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಭರವಸೆ ಮತ್ತು ವಿಶ್ವಾಸ ಅಚಲವಾಗಿದ್ದರೂ ಇದೇ ವಿಶ್ವಾಸಪೂರ್ವ ಮಾತುಗಳನ್ನು ಈ ದೇಶದ ಆಳ್ವಿಕರ ಬಗ್ಗೆ ಹೇಳಲಾಗುವುದಿಲ್ಲ. ಇದು ವಿಷಾದನೀಯವಾದರೂ ಸತ್ಯ. ಮತ್ತೊಂದು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಆಳುವ ವರ್ಗಗಳ ನಿಷ್ಕ್ರಿಯತೆ ಮತ್ತು ನಿಷ್ಕಾಳಜಿಗಳು ಜನತೆಯ ಎದುರು ತಂತಾನೇ ಅನಾವರಣಗೊಳ್ಳುತ್ತಿರುವುದು ಶೋಭೆ ಎನಿಸುವುದಿಲ್ಲ. ದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಆಂತರಿಕ ಕಲಹಗಳಿಂದ ಕಂಗೆಟ್ಟಿರುವುದು ಸೂಕ್ಷ್ಮ ಅವಲೋಕನದಿಂದ ತಿಳಿಯುತ್ತದೆ. ಯುವಜನತೆಗೆ ಅಧಿಕಾರ ನೀಡುವ ನೆಪದಲ್ಲಿ ಕುಟುಂಬ ರಾಜಕಾರಣವನ್ನು ಪೋಷಿಸುವ ಕಾಂಗ್ರೆಸ್ ಕುಹಕ ನೀತಿ ಒಂದೆಡೆಯಾದರೆ, ಕಳಂಕಿತ ಅಧ್ಯಕ್ಷರನ್ನು ಕೆಳಗಿಳಿಸಲು ಹಿರಿಯ ತಲೆಮಾರಿನವರನ್ನೇ ಅವಲಂಬಿಸುವ ಪ್ರವೃತ್ತಿ ಬಿಜೆಪಿಯಲ್ಲಿ ಕಾಣುತ್ತಿದೆ. ಭಯೋತ್ಪಾದನೆಯಂತಹ ವಿನಾಶಕಾರಿ ವಿದ್ಯಮಾನವನ್ನೂ ರಾಜಕೀಯ ಹಿತಾಸಕ್ತಿಗಳ ಬತ್ತಳಿಕೆಯಲ್ಲಿ ಬಳಸಿಕೊಳ್ಳುವ ಮಟ್ಟಿಗೆ ದೇಶದ ರಾಜಕಾರಣ ಹೀನಾಯವಾಗಿದೆ. ಇದು ಕಳವಳಕಾರಿ ವಿದ್ಯಮಾನವಾಗಿದೆ.
ಗಣತಂತ್ರ ದಿನದಂದು ದೇಶದ ಶಸ್ತ್ರಾಸ್ತ್ರ ಬಲವನ್ನು ಪ್ರದಶರ್ಿಸುವುದೇ ಈ ದೇಶದ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುವುದಿಲ್ಲ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಬಲ್ಯ ವ್ಯಕ್ತವಾಗುವುದು ಪ್ರಜಾತಾಂತ್ರಿಕ ಮೌಲ್ಯಗಳಲ್ಲಿಯೇ ಹೊರತು ದೇಶದ ಸೇನಾ ಬಲದಲ್ಲಿ ಅಥವಾ ಶಸ್ತ್ರಾಸ್ತ್ರಗಳ ಬತ್ತಳಿಕೆಯ ಸಾಮಥ್ರ್ಯದಲ್ಲಿ ಅಲ್ಲ. ಪ್ರಜಾತಂತ್ರ ವ್ಯವಸ್ಥೆ ಬಲವಾಗಿರಲು ಅವಶ್ಯವಾಗಿರುವುದು ಪ್ರಜಾತಂತ್ರ ಮೌಲ್ಯಗಳೇ ಹೊರತು, ವಿನಾಶಕಾರಿ ಶಸ್ತ್ರಗಳಲ್ಲ. ನಮ್ಮ ಆದ್ಯತೆ ಯಾವುದೆಂಬುದನ್ನು ಗ್ರಹಿಸುವುದು ಈ ಸಂದರ್ಭದಲ್ಲಿ ಅತ್ಯವಶ್ಯ.
ನಾ ದಿವಾಕರ್ ಕಾಲಂ : ಗಣತಂತ್ರದ ಹೊಣೆಗಾರಿಕೆಗಳು
ನಿಮಗೆ ಇವೂ ಇಷ್ಟವಾಗಬಹುದು…





0 Comments