ಡಿಸೆಂಬರ್ 2012ರಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದ ಅತ್ಯಾಚಾರದ ಘಟನೆ ಭಾರತದ ಸಾಮಾಜಿಕ ಸಂಕಥನಗಳ ದಿಕ್ಕನ್ನೇ ಬದಲಾಯಿಸಿದ್ದು ಸತ್ಯ. ಚಲಿಸುತ್ತಿರುವ ಬಸ್ ಒಂದರಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತ್ಯುವಿನ ದವಡೆ ಸೇರಿದ ನಿರ್ಭಯ ಈ ದೇಶದ ಪುರುಷ ಪ್ರಧಾನ ಸಮಾಜದ ಕ್ರೌರ್ಯಕ್ಕೆ ಬಲಿಯಾದ ನತದೃಷ್ಟೆ . ಅಷ್ಟೇ ಅಲ್ಲ ಮಹಿಳೆಯರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಪ್ರತಿರೋಧಿಸುವ ದನಿಗಳಿಗೆ ವೇಗವರ್ಧಕವಾಗಿ ನಿರ್ಭಯ ಪ್ರಕರಣ ಪರಿಣಮಿಸಿತ್ತು. ಕೇವಲ ಮಹಿಳಾ ಸಂಘಟನೆಗಳೇ ಅಲ್ಲದೆ ಪ್ರಜ್ಞಾವಂತ ಪುರುಷ ಸಮಾಜವೂ ಈ ಘಟನೆಯ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದು ಆಳುವ ವರ್ಗಗಳನ್ನೂ ಜಾಗೃತಗೊಳಿಸಿತ್ತು. ಮಹಿಳೆಯರ ಮೇಲಿನ ಅವ್ಯಾಹತ ಆಕ್ರಮಣಗಳನ್ನು ಕೇವಲ ಕಾನೂನು ಸುವ್ಯವಸ್ಥೆಯ ಅಂಶವಾಗಿ ಪರಿಗಣಿಸಿದ್ದ ಪ್ರಭುತ್ವಕ್ಕೆ ತನ್ನ ಸಾಂವಿಧಾನಿಕ ಮತ್ತು ಮಾನವೀಯ ಹೊಣೆಗಾರಿಕೆಯ ಅರಿವಾಗಲೂ ಈ ಘಟನೆ ನೆರವಾಗಿತ್ತು. ಇದರ ಪರಿಣಾಮವೇ ನ್ಯಾ. ವರ್ಮಾ ಸಮಿತಿ, ಕಠಿಣ ಶಾಸನದ ಜಾರಿ, ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಇತ್ಯಾದಿ, ಇತ್ಯಾದಿ.
ಆದರೆ ಪ್ರಭುತ್ವದ ಅರೆ ಮನಸ್ಸಿನ ಕಾನೂನಾತ್ಮಕ ಕ್ರಮಗಳಿಗೆ ಪ್ರತಿಯಾಗಿ ಭಾರತದ ಪುರುಷ ಸಮಾಜ ತನ್ನದೇ ಆದ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ನಿರ್ಭಯ ಪ್ರಕರಣದ ಮುನ್ನ ಮತ್ತು ನಂತರದಲ್ಲಿ ಅಂತಹ ಅನೇಕ ಪ್ರಕರಣಗಳು ನಡೆದಿವೆ, ನಡೆಯುತ್ತಲೂ ಇವೆ. ಕಾನೂನು, ಶಿಕ್ಷೆ ಮತ್ತು ಅಪರಾಧಗಳ ಅರಿವು ಇದ್ದರೂ ತಮ್ಮ ಕಾಮತೃಷೆಯನ್ನು ನೀಗಿಸಿಕೊಳ್ಳಲು ಬಯಸುವ ಕಾಮುಕ ಪುರುಷರು ತಮ್ಮ ಮನೋಭಾವವನ್ನು ತೊರೆಯುವುದಿಲ್ಲ. ಇದು ಸಾರ್ವತ್ರಿಕ ಸತ್ಯ. ಶಿಕ್ಷೆ ಮತ್ತು ಶಿಕ್ಷೆಯ ಪ್ರಮಾಣ ಅಪರಾಧ ಸಂಭವಿಸಿದ ನಂತರದ ಪ್ರಕ್ರಿಯೆಗಳೇ ಹೊರತು, ಅಪರಾಧವನ್ನು ತಡೆಗಟ್ಟುವ ಅಸ್ತ್ರಗಳಾಗಲಾರದು. ಈ ಅಂಶವನ್ನು ದೆಹಲಿಯಲ್ಲಿ ಐದು ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿರುವ ಮನೋಜ್ ಕುಮಾರ್ ನಿರೂಪಿಸಿದ್ದಾನೆ. ಮನೋ ನಿಗ್ರಹವಿಲ್ಲದ ಪುರುಷ ಸಮಾಜ, ಮಹಿಳೆಯನ್ನು ಅಥವಾ ಸ್ತ್ರೀಲಿಂಗವನ್ನು ತನ್ನ ನಿಯಂತ್ರಣದಲ್ಲಿರಬೇಕಾದ ಭೋಗದ, ಬಳಕೆಯ, ವಿಕ್ರಯಿಸಬಹುದಾದ, ವಿನಿಮಯಿಸಬಹುದಾದ ಒಂದು ವಸ್ತು ಎಂದು ಪರಿಗಣಿಸುವವರೆಗೂ ಭಾರತೀಯ ಮಹಿಳೆ ಅಪಾಯದ ಅಂಚಿನಲ್ಲೇ ಬದುಕುವುದು ಅನಿವಾರ್ಯ ಎನಿಸುತ್ತದೆ.
ನ್ಯಾ. ವರ್ಮಾ ಸಮಿತಿಯ ವರದಿ ಮತ್ತು ನಂತರದ ಕಠಿಣ ಶಾಸನದ ಹಿನ್ನೆಲೆಯಲ್ಲಿ ಭಾರತೀಯ ಮಹಿಳೆಯರು ಸುರಕ್ಷಿತವಾಗಿರುತ್ತಾರೆ ಎಂಬ ಹುಸಿ ಭಾವನೆ ನಮ್ಮ ಸಾಮಾಜಿಕ ಪ್ರಜ್ಞೆಯಲ್ಲಿನ ನ್ಯೂನತೆಯ ಪ್ರತೀಕವಾಗಿ ತೋರುತ್ತದೆ. ಆಧುನಿಕ ಭಾರತದಲ್ಲಿ ಸಂಭವಿಸಬಹುದಾದ ಅತ್ಯಾಚಾರಗಳು ಸಾಂಪ್ರದಾಯಿಕ ಭಾರತದಲ್ಲಿ ಸಂಭವಿಸುವುದಿಲ್ಲ ಎಂದು ಹೇಳುವ ಭಾರತೀಯ ಸಂಸ್ಕೃತಿಯ ಹರಿಕಾರರು ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಐದು ವರ್ಷದ ಹಸುಳೆಗೆ ಏನು ಉತ್ತರ ನೀಡಿಯಾರು ? ಈ ಹಸುಳೆಗೆ ಸಾಮಾಜಿಕ ಪರಿಜ್ಞಾನ ಇರಲಿ, ತನ್ನ ಅಂಗಾಂಗಗಳ ಪರಿವೆಯೇ ಇರುವುದಿಲ್ಲ. ಇಂತಹ ಒಂದು ಅಮಾಯಕ ಕೂಸಿನ ಮೇಲೆ ದಾಳಿ ಮಾಡುವ ಪುರುಷ ಪ್ರತಿನಿಧಿಸುವುದು ಅಮಾನವೀಯ ಪುರುಷ ಸಮಾಜದ ಕಾಮುಕ ಧೋರಣೆಯನ್ನೇ ಅಲ್ಲವೇ ? ಭಯೋತ್ಪಾದನೆ, ಮಾವೋವಾದವನ್ನು ಭಾರತೀಯ ಸಮಾಜದ ಪ್ರಥಮ ವೈರಿಗಳೆಂದು ಪರಿಗಣಿಸುವ ಪ್ರಭುತ್ವದ ದೃಷ್ಟಿಯಲ್ಲಿ, ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಬಾಧಿಸುತ್ತಿರುವ ಪುರುಷ ಸಮಾಜದ ದೌರ್ಜನ್ಯ ಶತ್ರು ಎನಿಸುವುದಿಲ್ಲ. ಅಥವಾ ದೇಶದ ಬಹುಸಂಖ್ಯಾತರನ್ನು ದಮನಿಸುವ ಜಾತಿ ಪ್ರಜ್ಞೆಯ ಸಮಾಜ ಶತ್ರು ಎನಿಸುವುದಿಲ್ಲ. ಹಾಗಾಗಿಯೇ 23 ವರ್ಷದ ನಿರ್ಭಯ, ಐದು ವರ್ಷದ ಹಸುಳೆ, 70 ವರ್ಷದ ವೃದ್ಧೆ ಎಲ್ಲರೂ ದೌರ್ಜನ್ಯಕ್ಕೊಳಗಾಗುತ್ತಾರೆ. ಶಿಕ್ಷೆಯ ಭೀತಿ ಇಲ್ಲದೆ.
ದೆಹಲಿಯಲ್ಲಿ ಸಂಭವಿಸಿದ ಆತ್ಮ ಸ್ಫೋಟಕ ಘಟನೆಯ ಹಿಂದೆಯೇ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಮಲ್ಲೇಶ್ವರದ ಬಿಜೆಪಿ ಕಚೇರಿಯ ಮುಂದೆ, ಹಾಡು ಹಗಲಿನಲ್ಲಿ ಬಾಂಬ್ ಸ್ಪೋಟಿಸಿದ್ದು ಸ್ಪೋಟದ ಹಿಂದಿನ ಗುಂಪುಗಳು ಯಾವುದೆಂದು ಇನ್ನೂ ಸಾಬೀತಾಗಿಲ್ಲ. ಬಾಂಬ್ ಸ್ಪೋಟದ ಹಿಂದೆ ಯಾವುದೇ ಸಂಘಟನೆ ಇರಲಿ, ಬಾಂಬ್ ಸ್ಫೋಟದ ಉದ್ದೇಶ ಏನೇ ಇರಲಿ ಇಲ್ಲಿ ಮುಖ್ಯವಾಗಿ ಎದ್ದು ಕಾಣುವುದು ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಘಟನೆಯಲ್ಲ. ಬದಲಾಗಿ ಈ ಘಟನೆಯ ಬಗ್ಗೆ ರಾಜಕೀಯ ಪಕ್ಷಗಳು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು. ಈ ಘಟನೆ ಭಯೋತ್ಪಾದಕ ಕೃತ್ಯವೇ ಅಲ್ಲವೇ ಎಂದು ಸಾಬೀತಾಗುವ ಮುನ್ನವೇ ನಮ್ಮ ರಾಜಕೀಯ ಪಕ್ಷಗಳು ತಮ್ಮ ಭಯಾನಕ ಸ್ವರೂಪವನ್ನು ಪ್ರಕಟಪಡಿಸಿರುವುದು ಇನ್ನೂ ಆಘಾತಕಾರಿಯಾದ ಸಂಗತಿಯಾಗಿದೆ. ಬಿಜೆಪಿ ಕಚೇರಿಯ ಮುಂದೆಯೇ ಘಟನೆ ಸಂಭವಿಸಿರುವುದರಿಂದ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಶಕೀಲ್ ಅಹಮದ್ ಹೇಳುತ್ತಾರೆ. ಚುನಾವಣೆಗಳಲ್ಲಿ ಗೆಲ್ಲಲೇ ಬೇಕೆಂಬ ಛಲದಿಂದ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ಪಕ್ಷವೇ ಈ ಕೃತ್ಯ ಎಸಗಿವೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹೇಳುತ್ತಾರೆ. ಸ್ಪೋಟ ಸಂಭವಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ನಾಮಪತ್ರ ಸಲ್ಲಿಸಲು ಹುಬ್ಬಳ್ಳಿಯಲ್ಲಿದ್ದರೂ, ಶೆಟ್ಟರ್ ಬೆಂಗಳೂರಿಗೆ ಆಗಮಿಸುವ ಕಾರ್ಯಕ್ರಮವಿದ್ದುದರಿಂದಲೇ ಸ್ಪೋಟ ಸಂಭವಿಸಿದೆ, ಇದು ವಿರೋಧಿಗಳ ಕುತಂತ್ರ ಎಂದು ಸಜ್ಜನ ರಾಜಕಾರಣಿ ಎಂದೇ ಗುರುತಿಸಲ್ಪಟ್ಟಿರುವ ಸುರೇಶ್ ಕುಮಾರ್ ಹೇಳುತ್ತಾರೆ. ಮತ್ತೊಂದೆಡೆ ಚುನಾವಣೆಯಲ್ಲಿ ಲಾಭ ಗಳಿಸಲು ಆರೆಸ್ಸೆಸ್ ಬಾಂಬ್ ಸ್ಪೋಟಿಸಿದೆ ಎಂದು ಸಂಸದ ವಿಶ್ವನಾಥ್ ಹೇಳುತ್ತಾರೆ.
ಇಲ್ಲಿ ಪ್ರಜ್ಞಾವಂತ ಸಮಾಜವನ್ನು ಕಾಡುವ ಪ್ರಶ್ನೆ ಬಾಂಬ್ ಸ್ಫೋಟಕ್ಕಿಂತಲೂ ಆಳುವ ವರ್ಗಗಳ ಪ್ರತಿನಿಧಿಗಳ ಸಂವೇದನೆ ಮತ್ತು ಮನೋಭಾವ. ಜನತೆಯಲ್ಲಿ ಭೀತಿ ಉಂಟುಮಾಡುವ, ಸಮಾಜವನ್ನು ವಿಭಜಿಸಲು ಯತ್ನಿಸುವ, ದೇಶದ ಸಾಮಾಜಿಕ-ಸಾಂಸ್ಕೃತಿಕ ಕೊಂಡಿಗಳನ್ನು ಕಳಚಲು ಪ್ರಯತ್ನಿಸುವ ವಿಧ್ವಂಸಕ ಕೃತ್ಯಗಳನ್ನು ತಮ್ಮ ರಾಜಕೀಯ ಲಾಭ ನಷ್ಟಗಳ ದೃಷ್ಟಿಯಿಂದ ಪರಾಮಶರ್ಿಸುವ ರಾಜಕಾರಣಿಗಳಿಗೂ, ದೆಹಲಿಯಲ್ಲಿ ಏನೂ ಅರಿಯದ ಕಂದಮ್ಮನ ಮೇಲೆ ಅತ್ಯಾಚಾರ ಎಸಗುವ ದುಷ್ಕರ್ಮಗಳಿಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಅಪರಾಧದ ನಿಷ್ಕರ್ಷೆಯ ನಿಟ್ಟಿನಲ್ಲಿ ಮಾತ್ರ. ನೈತಿಕತೆಯ ದೃಷ್ಟಿಯಿಂದ ನೋಡಿದಾಗ ಈ ಎರಡೂ ಪ್ರಸಂಗಗಳಲ್ಲಿ ಮಾನವ ಸಮಾಜದ ಕ್ರೌರ್ಯ, ಪ್ರಬಲ ವರ್ಗಗಳ ದಬ್ಬಾಳಿಕೆ, ಊಳಿಗಮಾನ್ಯ ಮನೋಭಾವದ ಅಧಿಕಾರ ದಾಹ ಮತ್ತು ಸಾಮಾಜಿಕ ಸಂವೇದನೆಯನ್ನೇ ಲೆಕ್ಕಿಸದ ಬರ್ಬರತೆ ಎದ್ದು ಕಾಣುತ್ತದೆ. ಭೌದ್ಧಿಕ ನೆಲೆಗಟ್ಟಿನಲ್ಲಿ ಹಸುಳೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೂ, ಬಾಂಬ್ ಸ್ಪೋಟವನ್ನು ರಾಜಕೀಯ ದಾಳವಾಗಿ ಬಳಸುವ ರಾಜಕಾರಣಿಗೂ ಕಿಂಚಿತ್ತೂ ವ್ಯತ್ಯಾಸ ಕಾಣಲಾರದು.
ಎರಡೂ ಮನೋಭಾವಗಳ ಹಿಂದೆ ಕ್ರೌರ್ಯ ಅಡಗಿದೆ, ಅಮಾನವೀಯತೆ ಅಡಗಿದೆ, ಸಂವೇದನೆ ಇಲ್ಲವಾಗಿದೆ, ಆತ್ಮರತಿಯ ಮನೋಭಾವ ವ್ಯಕ್ತವಾಗಿದೆ. ಈ ಎರಡೂ ಪ್ರಸಂಗಗಳಿಗೆ ಸಂಬಂಧವಿಲ್ಲದಿದ್ದರೂ ಮಹಾರಾಷ್ಟ್ರದ ರಾಜಧಾನಿಯ ಒಂದು ಪ್ರಸಂಗ ಇಲ್ಲಿ ಪ್ರಸ್ತುತ. ಅಲ್ಲಿನ ವಿದರ್ಭ ಪ್ರಾಂತ್ಯದಲ್ಲಿನ ಬರಗಾಲ ಮತ್ತು ಭೀಕರ ಜಲಕ್ಷಾಮ ಈಗ ಸುದ್ದಿಯೇ ಆಗದಷ್ಟು ಸಾಮಾನ್ಯ ಸಂಗತಿಯಾಗಿ ಹೋಗಿದೆ. ಕ್ಷಾಮ ಮತ್ತು ರೈತರ ಆತ್ಮಹತ್ಯೆಗೆ ವಿದರ್ಭ ಪರ್ಯಾಯ ಪದವಾಗಿ ಪರಿಣಮಿಸಿದೆ. ಆದರೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಇದರ ಪರಿವೆಯೇ ಇಲ್ಲವೆನಿಸುತ್ತದೆ. ಅಣೆಕಟ್ಟಿನಲ್ಲಿ ನೀರು ಲಭ್ಯವಿಲ್ಲದ ಬೆಳೆಗಳು ಒಣಗಿ ಹೋಗುತ್ತಿರುವ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಸಂಘದ ನಿಯೋಗಕ್ಕೆ ಮಾನ್ಯ ಉಪಮುಖ್ಯಮಂತ್ರಿಗಳು ಸಾಂತ್ವನ ಹೇಳುವ ಬದಲು, ಡ್ಯಾಂನಲ್ಲಿ ನೀರಿಲ್ಲದಿದ್ದರೆ ನಾನೇನು ಉಚ್ಚೆ ಹೊಯ್ಯಲು ಸಾಧ್ಯವೇ ? ಎಂದು ಕೇಳುವ ಮೂಲಕ ತಮ್ಮ ಅಪ್ರಬುದ್ಧತೆ, ಅಶ್ಲೀಲತೆ ಮತ್ತು ಅಸಭ್ಯತೆಯ ವಿರಾಟ್ ಪ್ರದರ್ಶನ ಮಾಡಿದ್ದಾರೆ. ಮತ್ತೊಂದು ಸಂದರ್ಭದಲ್ಲಿ ವಿದ್ಯುತ್ ಅಭಾವವನ್ನು ಕುರಿತು ಮಾತನಾಡುತ್ತಾ ರಾತ್ರಿಯ ವೇಳೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿ ತಮ್ಮ ಪಾಂಡಿತ್ಯ ಮೆರೆದಿದ್ದಾರೆ.
ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಿದಾಗ ಮನದಟ್ಟಾಗುವ ಒಂದು ಅಂಶವೆಂದರೆ, ಭಾರತದ ಸಾಂವಿಧಾನಿಕ ಪ್ರಭುತ್ವವನ್ನು ಪ್ರತಿನಿಧಿಸುವ ಆಳ್ವಿಕರು ಮತ್ತು ನಮ್ಮ ದೇಶದ ಪಾರಂಪರಿಕ ಸಾಮಾಜಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಭುತ್ವವನ್ನು ಪ್ರತಿನಿಧಿಸುವ ಪುರುಷ ಸಮಾಜ ಎರಡೂ ಸಹ ತನ್ನ ಸಂವೇದನೆಯನ್ನು ಕಳೆದುಕೊಂಡು ನಿಷ್ಕ್ರಿಯವಾಗಿದೆ. ಭಾರತ ದೇಶದ ಜನಸಾಮಾನ್ಯರ ಪ್ರಥಮ ಶತ್ರುಗಳು ಮಾವೋವಾದಿಗಳೋ, ಭಯೋತ್ಪಾದಕರೊ ಎಂಬ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿರುವ ನಾವು ಈ ದೇಶದ ಅರ್ಧದಷ್ಟು ಜನಸಂಖ್ಯೆಗೆ ಅಪಾಯಕಾರಿಯಾಗುವ ಪುರುಷ ಪ್ರಧಾನ ಸಮಾಜವನ್ನು, ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸದೆ ಸಂವೇದನಾರಹಿತವಾಗಿ ತಮ್ಮ ಸ್ವ ಹಿತಾಸಕ್ತಿಗಳಿಗಾಗಿ ಸಾರ್ವಜನಿಕ ಹಿತಾಸಕ್ತಿಗಳನ್ನು ಬಲಿ ಕೊಡುವ ರಾಜಕಾರಣಿಗಳನ್ನು ಮತ್ತು ವಿಧ್ವಂಸಕ ಕೃತ್ಯಗಳನ್ನೂ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಸ್ವಾರ್ಥಿಗಳನ್ನು ಪರಾಮರ್ಶಿಸಲು ವಿಫಲರಾಗುತ್ತಿದ್ದೇವೆ. ಒಂದು ಪ್ರಜ್ಞಾವಂತ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸ ಬಯಸುವ ಪ್ರತಿಯೊಬ್ಬ ಪ್ರಜೆಗೂ, ಸಮಾಜದ ಸ್ವಾಸ್ಥ್ಯವನ್ನು ಯಾವುದೇ ವಿಧದಲ್ಲಿ ಹಾಳು ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಶತ್ರುವಾಗಿಯೇ ಕಾಣಬೇಕು. ಆಗಲೇ ಸುಸ್ಥಿರ, ಸ್ವಾಸ್ಥ್ಯ, ಸೌಹಾರ್ದಯುತ, ಮಾನವೀಯ ಸಮಾಜ ನಿರ್ಮಾಣ ಸಾಧ್ಯ.
ನಾ ದಿವಾಕರ್ ಕಾಲಂ : ಎರಡು ರಾಜಧಾನಿಗಳ ಎರಡು ಘಟನೆಗಳು
ನಿಮಗೆ ಇವೂ ಇಷ್ಟವಾಗಬಹುದು…




0 Comments