ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಾ ಬರೆದ ಕಥೆ

ಯಜಮಾನಿಯ ಬಂಗಲೆ

ನಾ ದಾಮೋದರ ಶೆಟ್ಟಿ

ಅದೊಂದು ಬೃಹತ್ತಾದ ಮನೆ. ಆ ಮನೆ ಕಟ್ಟಿಸಿದವರು ದೂರದೂರಿನಲ್ಲಿದ್ದರಂತೆ. ಅಲ್ಲಿಂದ ಪ್ಲಾನ್ ಹಾಗೂ ದುಡ್ಡು ಕಳುಹಿಸಿಕೊಡುತ್ತಿದ್ದರಂತೆ. ಅವರ ಪ್ಲಾನ್ ಪ್ರಕಾರ ಮನೆ ನಿಮರ್ಾಣವಾಗಿತ್ತಂತೆ. ಕಪ್ಪು ಕಲ್ಲಿನ ಮನೆ. ಆದರೆ ಕಟ್ಟಡ ಯಾಕೋ ತೆಳ್ಳಗಿತ್ತು. ಒಳಗೂ ಅಷ್ಟೆ. ಎಲ್ಲವೂ ತೆಳ್ಳತೆಳ್ಳಗೆ. ಪ್ರವೇಶದಲ್ಲಿ ಪುಟ್ಟದೊಂದು ಚಾವಡಿ. ಅಲ್ಲಿಂದ ಒಳಕ್ಕಿಳಿದು ಕಣ್ಣು ಹಾಯಿಸಿದರೆ ಬಲಕ್ಕೆ ವಿಶಾಲವಾದ ದಿವಾನಖಾನೆ. ಎಡದ ಗೋಡೆಯ ಬದಿಯಿಂದ ಮೇಲಕ್ಕೆ ನೆಗೆದೇಳುವ ಕಲ್ಲುಚಪ್ಪಡಿಯ ಮೆಟ್ಟಿಲು. ಆ ಚಪ್ಪಡಿಕಲ್ಲುಗಳನ್ನು ಅದೇ ಗೋಡೆಗೆ ಸಿಲುಕಿಸಿಡಲಾಗಿದೆ. ಮೇಲಕ್ಕೆ ನಡೆದು ಹೋಗುವಾಗ ಕಲ್ಲುಚಪ್ಪಡಿಗಳೆಲ್ಲಾದರೂ ಮುರಿದು ಬಿದ್ದರೆ? ಅದನ್ನು ಸಿಲುಕಿಸಿಡಲಾಗಿರುವ ಗೋಡೆಯೇ ಬಿರುಕುಬಿಟ್ಟರೆ?-
ಆ ಮನೆಗೆ ಬಾಡಿಗೆದಾರರು ಬಾರದಿರುವುದಕ್ಕೆ ಮೆಟ್ಟಿಲುಗಳೇ ಕಾರಣವಿರಬೇಕೆಂಬುದು ಚಂದು ಶೆಟ್ಟಿಯ ಊಹೆ.

ಈ ಭಾರೀ ಮನೆಗೆ ಬೆಂಗಳೂರಿನಂಥ ನಗರದ ಕೋರಮಂಗಲ ಬಡಾವಣೆಯಲ್ಲಿ ಇಷ್ಟು ಕಡಿಮೆ ಬಾಡಿಗೆ ಯಾಕೆ ಎಂದು ಚಂದು ಶೆಟ್ಟಿ ಅವರಿವರಲ್ಲಿ ವಿಚಾರಿಸಿದರು. ಕಟ್ಟಡ ಸಿದ್ಧವಾದ ಎರಡನೆಯ ವರ್ಷಕ್ಕೆ ಅಮೇರಿಕಾದಲ್ಲಿ ಬಹುಕಾಲವಿದ್ದು ವಯಸ್ಸಾಗಿದ್ದರೂ ವೃದ್ಧಾಶ್ರಮವನ್ನೊಲ್ಲದ ರಘುನಾಥ ಶೇಟ್ ಹಾಗೂ ಅವರ ಪತ್ನಿ ಯಮುನಾ ಶೇಟ್, ‘ಬದುಕಿದರೂ ಸತ್ತರೂ ನಮ್ಮ ಮಣ್ಣಿನಲ್ಲೇ, ನಮ್ಮ ಮನೆಯಲ್ಲೇ’ ಎಂದು ಪಣತೊಟ್ಟವರಂತೆ ಮಕ್ಕಳಿಬ್ಬರನ್ನೂ ತೊರೆದು ಊರಿಗೆ ಬಂದರು.
ಕೋರಮಂಗಲ ಬಡಾವಣೆ ಪ್ರತಿಷ್ಠಿತರು ವಾಸಿಸುವ ತಾಣ. ತಮ್ಮ ಪ್ಲಾನಿನ ಹಾಗೆಯೇ ಬಂಗಲೆ ಸಿದ್ಧವಾಗಿದೆಯೆಂದು ಸಂತುಷ್ಟರಾದ ದಂಪತಿಗಳು ಬಲಗಾಲಿಟ್ಟು ಗೃಹಪ್ರವೇಶ ಮಾಡಿದರು. ತೆಳ್ಳಗಿನ ಗೋಡೆಗಳು, ತೆಳ್ಳಗಿನ ಕಟ್ಟಡ ಇತ್ಯಾದಿ ವಿವರಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಅಮೇರಿಕಾದಿಂದ ಕಳುಹಿಸಿದ ಡಿಸೈನ್ ತಾನೇ? ಅವರು ಸುರಿದ ದುಡ್ಡಿಗೆ ತಕ್ಕ ಹಾಗೆ ಇದೆ ಎಂಬುದು ರಘುನಾಥ್ ಶೇಟರ ಅಭಿಪ್ರಾಯವಾದರೆ ಅವರ ಹೆಂಡತಿಗೆ ಇನ್ನೊಂದೇ ಬಗೆಯ ತಾಪತ್ರಯ.
ವಿಪರೀತ ಗಂಟುನೋವಿನಿಂದ ಬಳಲುತ್ತಿದ್ದ ಯಮುನಾ ಶೇಟ್ ಅಮೇರಿಕಾದಲ್ಲಿದ್ದಾಗಲೇ ‘ವಾಜಪೇಯಿ ಆಪರೇಷನ್’ ಮಾಡಿಸಿಕೊಂಡಿದ್ದರಾದರೂ ಫಲಕಾರಿಯಾಗಿರಲಿಲ್ಲ. ಅಡುಗೆ ಮನೆಯಿಂದ ಮೆಟ್ಟಲಿಳಿದು ಪಡಸಾಲೆಗೆ ಬಂದು ಅಲ್ಲಿಂದ ಮೆಟ್ಟಲೇರಿ ಪ್ರವೇಶದ್ವಾರಕ್ಕೆ ಬರಬೇಕಾಗಿದ್ದರೆ ್ಲ ಬೆಲ್ ಒತ್ತಿ ಬಾಗಿಲಲ್ಲಿ ಕಾಯುತ್ತಿದ್ದಾತ -ಆತ ಯಾರೇ ಆಗಿದ್ದರೂ- ಹಿಂದಕ್ಕೆ ಹೋಗಿ ನಿಮಿಷಗಳೇ ಆಗಿಬಿಟ್ಟಿರುತ್ತಿತ್ತು. ಇನ್ನು, ಮಹಡಿಗೆ ಮೆಟ್ಟಲೇರಿ ಹೋಗುವ ಸಾಹಸ ಅವರಿಗೆ ಯಾವ ಕಾಲಕ್ಕೂ ಬೇಕಾಗಿರಲಿಲ್ಲ.
ಯಮುನಾ ಶೇಟ್ ಒಬ್ಬರೇ ಮನೆಯಲ್ಲಿರಬೇಕಾದ ಪ್ರಮೇಯ ಬಂದಾಗಲೆಲ್ಲ ಪ್ರವೇಶದ್ವಾರದ ಒಳಪಕ್ಕದ ಚಪ್ಪಲಿ ಸ್ಟ್ಯಾಂಡಿನ ಮೇಲೆ ಕುಳಿತೇ ಅವರು ಕಾಲ ಕಳೆಯುತ್ತಿದ್ದರು. ಗಂಡನಾಗಲೀ ಕೆಲಸದಾಕೆ ಭದ್ರೆಯಾಗಲೀ ಬಂದಾಗ ಬಾಗಿಲು ತೆರೆದುಕೊಟ್ಟು ಒಳಗೆ ಹೋಗಿ ಹಾಸಿಗೆಗೆ ಬೆನ್ನು ತಾಗಿಸಿ ಆಯಾಸ ಪರಿಹರಿಸಿಕೊಳ್ಳುತ್ತಿದ್ದರು.
ಕೋರಮಂಗಲದಂತಹ ಜನನಿಬಿಡ ಪ್ರದೇಶದಲ್ಲಿರುವ ಆ ಮನೆಗೆ ಬಾಡಿಗೆಗೆದಾರರು ಸಿಗದಿರುವುದಕ್ಕೆ ಕಾರಣವೇನಿರಬಹುದು? ಅವಿಭಕ್ತ ಕುಟುಂಬಗಳಿಂದ ಕೂಡಿದ ಮನೆಗಳೇ ಇದ್ದ ಕಾಲವೊಂದಿತ್ತು. ಮನೆತುಂಬ ಹೆಂಗಸರು, ಮಕ್ಕಳು, ಮರಿಗಳು, ಕೋಳಿಮರಿಗಳು! ಅದಿಲ್ಲದಿರುವುದೇ ಕಾರಣವಿರಬಹುದೆಂದು ಚಂದು ಶೆಟ್ಟಿ ಶಂಕಿಸಿದರು.
ಮಹಡಿಗೆ ಬೀಗ ಜಡಿದು ಇರಿಸಿಕೊಳ್ಳಬಹುದೆಂದೂ ಮಕ್ಕಳು ಅಮೇರಿಕಾದಿಂದ ಬಂದಾಗ ಬಾಗಿಲು ತೆರೆದು ಗುಡಿಸಿ, ಒರೆಸಿದರೆ ಇಲವಾಲದ ಹಳ್ಳಿಮನೆಗೆ ಹೋಗಬೇಕಾದ ಪ್ರಮೇಯವೇ ಬರಲಿಕ್ಕಿಲ್ಲ ಎಂಬುದು ಯಮುನಾ ಶೇಟ್ರ ಕನವರಿಕೆಯಾಗಿತ್ತು. ಅಮೇರಿಕಾದಲ್ಲಿ ಝಂಡಾವೂರಿದ ಅವರ ಮಕ್ಕಳು ಊರಿಗೆ ಬರುವವರಲ್ಲವೆಂಬುದು ಅವರಿಗೆ ಅದಾಗಲೇ ಮನವರಿಕೆಯಾಗಿತ್ತು. ಆದರೂ…..
ಚಂದು ಶೆಟ್ಟಿ ಮನೆಯ ಒಳಹೊರಗನ್ನೆಲ್ಲ ಅವಲೋಕನ ಮಾಡಿದರು. ಅದರ ವಿನ್ಯಾಸಕ್ಕೆ ನಿಜಕ್ಕೂ ಮಾರುಹೋದರು. ದಢೂತಿ ದೇಹದ ಶೆಟ್ಟರಿಗೂ ಮೆಟ್ಟಲೇರಿ ಮೇಲೆ ಹೋಗುವುದಕ್ಕೆ ಭಯ. ಎಲ್ಲಾದರೂ ಗೋಡೆಗೆ ತಗುಲಿಸಿದ ಚಪ್ಪಡಿಕಲ್ಲ ಮೆಟ್ಟಿಲುಗಳು ಕಳಚಿದರೆ? ಅಥವಾ ಮುರಿದು ಬಿದ್ದರೆ?
ವಾಮನ ಬಾಳಿಗರು ಆ ಮನೆಯನ್ನು ತಮ್ಮ ದ.ಆಫ್ರಿಕಾದಲ್ಲಿರುವ ಮಗಳು ಸೋನಾಲಿ ಕೇಂದ್ರೆಯ ದುಡ್ಡಿನಿಂದ ಕೊಂಡುಕೊಂಡಿದ್ದರು. ಅದನ್ನು ಬಾಡಿಗೆಗೆ ಕೊಟ್ಟು, ಬರುವ ಬಾಡಿಗೆಯನ್ನು ನಿವೃತ್ತ ಬದುಕು ಸಾಗಿಸುತ್ತಿದ್ದ ಅಪ್ಪ, ಅವರ ಅಗತ್ಯಕ್ಕೆ ಬಳಸಿಕೊಳ್ಳಬಹುದೆಂದೂ ಹೇಳಿದ್ದಳು. ಅದು ಅವಳಾಗಿ ಹೇಳಿದಳೋ ಅಥವಾ ಇವರಾಗಿ ಕೇಳಿದರೋ ಗೊತ್ತಿಲ್ಲ. ಅಂತೂ ಬಾಡಿಗೆ ರೂಪದಲ್ಲಿ ಬರುವ ಹಣವನ್ನು ಜೇಬು ತುಂಬಿಕೊಳ್ಳಲು ಆ ಜೀವ ಸದಾ ಹಪಹಪಿಸುತ್ತಿತ್ತು.
ಬಾಳಿಗರ ಮನೆಯಲ್ಲೂ ಇಬ್ಬರೆ. ಸ್ವಂತ ಮನೆ. ಒಂದಷ್ಟು ಬ್ಯಾಂಕ್ಬ್ಯಾಲೆನ್ಸ್ ಗುಡ್ಡ ಹಾಕಬೇಕೆಂಬ ಯೋಚನೆ ಅವರಿಗೆ ಮೊದಲಿನಿಂದಲೂ ಇತ್ತು. ಕಡೆಗಾಲಕ್ಕೆ ಬೇಕಲ್ಲ. ಬಿದ್ದೂ ಗಿದ್ದೂ ಹಾಸಿಗೆ ಹಿಡಿದರೆ ಏನು ಗತಿ? ಹೆಂಡತಿಗೆ ಮುದುಕನ ಕಂಜೂಸಿ ಬುದ್ಧಿ ಅಸಹನೀಯವೆನಿಸುತ್ತಿತ್ತು. ಹೊಟ್ಟೆಗೆ ಹಿಟ್ಟಿಲ್ಲದೆ ಅದೆಂಥ ಬ್ಯಾಂಕ್ ಬ್ಯಾಲೆನ್ಸ್! ಆದರೆ ಬಾಯಿ ತೆರೆಯುವ ಸ್ವಾತಂತ್ರ್ಯ ಕಮಲಮ್ಮನಿಗೆ ಮೊದಲಿನಿಂದಲೂ ಇರಲಿಲ್ಲ. ಅಡುಗೆ ಮನೆಯಲ್ಲಿ ಕುಳಿತು ಗಂಡ ತಂದು ಕೊಟ್ಟದ್ದನ್ನು ಬೇಯಿಸಿಹಾಕುವ ಹೆಂಗಸಾಗಿದ್ದರು ಕಮಲಮ್ಮ. ಗಂಡನಿಲ್ಲದ ವೇಳೆಯಲ್ಲಷ್ಟೇ ನಾಲಗೆ ಚಪಲ ತೀರಿಸಿಕೊಳ್ಳುವುದಕ್ಕೆ ಯಾರಾದರೂ ಸಿಗುತ್ತಾರೋ ಎಂದು ಹೊರಕ್ಕೆ ಇಣುಕುತ್ತಿದ್ದುದು.
ಮೊದಮೊದಲು ವಾಮನ ಬಾಳಿಗರು ಭಾರೀ ಬಾಡಿಗೆ ಹೇಳುತ್ತಿದ್ದರು. ತಾವು ಎಷ್ಟಕ್ಕೆ ಮನೆಯನ್ನು ಕೊಂಡುಕೊಂಡದ್ದೆಂದು ಹೆಂಡತಿಗೂ ಹೇಳಿರದ ಬಾಳಿಗರು ‘ನಾನು ಕೊಟ್ಟ ಹಣದ ಬಡ್ಡಿ ಹುಟ್ಟಬೇಕಿದ್ದರೆ ನಲುವತ್ತು ಸಾವಿರವಾದರೂ ಸಿಗಬೇಕು’ ಎನ್ನುತ್ತಿದ್ದರು. ಬಾಡಿಗೆಗೆ ಕೇಳಲು ಬಂದವರು ‘ಎಷ್ಟಕ್ಕೆ ಎಷ್ಟು ಬಡ್ಡಿ’ ಎಂದು ಲೆಕ್ಕಮಾಡಲೂ ಹೋಗದೆ ಹೊರಟು ಬಿಡುತ್ತಿದ್ದರು!
ಚಂದು ಶೆಟ್ಟಿ ಮನೆ ಬಾಡಿಗೆಗೆ ಸಿಗುತ್ತದೋ ಎಂದು ಕೇಳಲು ಎರಡು ಬಾರಿ ಬಂದಾಗಲೂ ವಾಮನ ಬಾಳಿಗರು ಮನೆಯಲ್ಲಿರಲಿಲ್ಲ. ಕಮಲಮ್ಮ ತನ್ನ ಗಂಡನ ಬಳಿ ವಿಷಯ ತಿಳಿಸಿರಲೂ ಇಲ್ಲ. ತನಗೇಕೆ ಇಲ್ಲದ ಉಸಾಬರಿ ಎಂಬುದು ಆಕೆಯ ಅಂಬೋಣ.
ಮೊದಲ ಬಾರಿ ಬಾಗಿಲನ್ನೇ ತೆರೆಯದಿದ್ದ ಕಮಲಮ್ಮ ಎರಡನೆಯ ಬಾರಿ ಚಂದು ಶೆಟ್ಟಿಯವರು ಬಂದಾಗ ಕುತೂಹಲ ತೋರಿ ಬಾಗಿಲನ್ನು ಅರೆತೆರೆದು ಮಾತಿಗೆ ನಿಂತಿದ್ದರು: ‘ನೋಡಿ, ನಲುವತ್ತು ಸಾವಿರ ಬಾಡಿಗೆ ಹೇಳ್ತಾ ಇದ್ದ ಮನೆಗೆ ಮೊದಲ ವರ್ಷ ಒಬ್ಬರೂ ಬರಲಿಲ್ಲ. ಅದೇನೊ ಮನೆ ನೋಡೋದಕ್ಕಷ್ಟೇ ಚಂದ, ಅದರ ವಾಸ್ತೂನೇ ಸರಿಯಿಲ್ವಂತೆ ನೋಡಿ. ಅದಕ್ಕೇ ಅಲ್ವೋ ಅಷ್ಟೊಂದು ಸಾವು-ನೋವು! ಅದೇನು ಹೇಳಿ ನನ್ನ ಮಗಳಿಗೆ ಮಂಕುಬೂದಿ ಎರಚಿ ಮನೆ ಕೊಂಡ್ಕೊಂಡ್ರೊ ಈ ನನ್ಗಂಡ, ನಂಗೊಂದೂ ಗೊತ್ತಾಗೋದಿಲ್ಲ ನೋಡಿ’ ಎಂದುಬಿಟ್ಟರು.
‘ಏನಿದು ಸಾವು, ನೋವು? ಅಲ್ಲಿ ಯಾರಾದ್ರೂ ಸತ್ರೆ?’
‘ನೋಡಿ, ನನ್ನ ಸುದ್ದಿ ಎತ್ತೋದಿಲ್ಲಾಂತಂದ್ರೆ ಹೇಳ್ತೇನೆ. ಆ ಮೇಲೆ ನಾನು ಹಾಗೆ ಹೇಳಿದೆ; ಹೀಗೆ ಹೇಳಿದೇಂತ ಹೇಳಿ, ನನ್ನನ್ನಿಲ್ಲಿ ಬದುಕ್ಲಿಕ್ಕೆ ಬಿಡ್ಲಿಕ್ಕಿಲ್ಲ. ಇವರೊಂದು ದೊಡ್ಡ ದುಡ್ಡಿನ ಭೂತ ನೋಡಿ, ಗೊತ್ತಾಯ್ತಲ್ವೋ?’ ಕಮಲಮ್ಮನ ಮಾತು ಕುತೂಹಲ ಹುಟ್ಟಿಸಿತು.
‘ಆ ಥರ ಕಚ್ಚಿಸಿ ಹಾಕೋ ಸ್ವಭಾವ ನನ್ದಲ್ಲ. ವಿಷಯ ಏನೂಂತ ಯಾರಾದ್ರೂ ಹೇಳಿದ್ರೆ ತಾನೆ ನಂಗೂ ಗೊತ್ತಾಗೋದು.’ ಚಂದು ಶೆಟ್ಟಿ ಸಭ್ಯರಂತೆ ಮಾತನಾಡಿದ್ದು ಕಮಲಮ್ಮನಿಗೆ ಇಷ್ಟವಾಯಿತು.
‘ನೋಡಿ, ನಿಜವಾಗಿ ಈ ಮನೆ ರಘುನಾಥ್ ಶೇಟ್ ಎಂಬವ್ರಿಗೆ ಸೇರಿದ್ದು. ಅಮೇರಿಕಾದಲ್ಲಿದ್ದೋರು ಇಲ್ಲಿ ಬಂದು ತಾವು ಕಟ್ಟಿಸಿದ ಮನೆಯಲ್ಲಿ ವಾಸ ಪ್ರಾರಂಭಿಸೋ ಹೊತ್ತಿಗೆ ನೋಡಿ, ನಮ್ಮ ಮನೆಯವರೂ ಅವರೂ ಗೆಳೆಯರಾದರು. ನಮ್ಮದೂ ಅವರದೂ ಮನೆಮಾತು ಕೊಂಕಣಿ, ಗೊತ್ತಾಯ್ತಲ್ವೋ?
‘ಹೌದೌದು. ನಾನೂ ಕೇಳಿದ್ದೇನೆ. ಇಬ್ಬರು ಕೊಂಕಣಿಗರು ಮಾತೋಡೋಕೆ ಹೊರಟ್ರೆ ಮೂರನೆಯವರಿಗೆ ಅಲ್ಲಿ ಜಾಗವೇ ಇಲ್ವಂತೆ. ಇರ್ಲಿಬಿಡಿ, ಏನು ಕತೆ?’
‘ಅದೇನೋ ಅತ್ತೆ ಸೊಸೆಯರ ಮಧ್ಯೆ ವೈಮನಸ್ಸು ಬಂದು ಅಮೇರಿಕ ಬಿಟ್ಟು ಬಂದ ಯಮುನಾ ಶೇಟ್ ಅಮೇರಿಕಾದಲ್ಲಿದ್ದ ಮೊಮ್ಮಕ್ಕಳನ್ನು ನೆನೆಸಿ ಕೊರಗಿಯೇ ಹಾಸಿಗೆ ಹಿಡಿದ್ರಂತೆ. ಇಲ್ಲಿಗೆ ಬಂದ ಹೊಸತರಲ್ಲಿ ಒಮ್ಮೆ ಅವರನ್ನು ಕಂಡದ್ದು ಬಿಟ್ಟರೆ ಆಮೇಲೆ ನಾನು ನೋಡಿದ್ದು ಹೆಣವಾಗಿಯೆ! ಅವರ ಗಂಡ ಕೂಡ ಹೆಚ್ಚು ಕಾಲ ಬಾಳಲಿಲ್ಲ ನೋಡಿ. ಒಟ್ಟಿನಲ್ಲಿ ಬಂದ ಎರಡು ವರ್ಷದೊಳಗಾಗಿ ಇಬ್ಬರೂ ಹೋಗಿಬಿಟ್ರು. ಅವರ ಮಗ ಅಶೋಕ್ ಶೇಟ್ ಬಂದು ವ್ಯವಹಾರ ಮಾಡಿದ್ದೆಲ್ಲ ನನ್ನ ಗಂಡನ ಜೊತೆಗೆ. ದ.ಆಫ್ರಿಕಾದಲ್ಲಿರುವ ನನ್ನ ಮಗಳು ಅದೇ ಹೊತ್ತಿಗೆ ಊರಲ್ಲಿ ಜಮೀನು ಕೊಳ್ಬೇಕು, ಕೈಯಲ್ಲಿ ಕಾಸಿಟ್ಟು ಮಾಡೋದೇನು ಅಂದುಬಿಡ್ಬೇಕೆ? ರೋಗಿ ಬಯಸಿದ್ದೂ ಹಾಲು; ವ್ಯೆದ್ಯ ಕೊಟ್ಟದ್ದೂ ಹಾಲು-ಅಂತಾರಲ್ಲ, ಹಾಗಾಯಿತು ನನ್ನ ಗಂಡನಿಗೆ, ಗೊತ್ತಾಯ್ತಲ್ವೋ? ಇದೇ ಜಮೀನು ಮನೆಯನ್ನು ಸಿಕ್ಕಿದ ದುಡ್ಡಿಗೆ ಮಾರಿ ಅಶೋಕ್ ಶೇಟ್ ಅಮೇರಿಕಾಕ್ಕೆ ವಾಪಸ್ ಹೋದ ನೋಡಿ’ ಎಂದರು ಕಮಲಮ್ಮ.
ತನ್ನ ಗಂಡ ಎಂಥ ಜಿಪುಣಾಂತಂದ್ರೆ ತನ್ನನ್ನು ಕೂಡಾ ಸಾಬೀತಿನಲ್ಲಿ ಸಾಯ್ಲಿಕ್ಕೆ ಬಿಡಲಿಕ್ಕಿಲ್ಲ ಎಂಬ ಆಶಂಕೆಯಿತ್ತು ಕಮಲಮ್ಮನಲ್ಲಿ. ಚಂದು ಶೆಟ್ರಿಗೆ ಅದ್ಯಾವುದೂ ಅಂಥ ಭಯ ಪಡಬೇಕಾದ ವಿಷಯಾಂತ ಅನ್ನಿಸಲಿಲ್ಲ:
‘ಇಬ್ಬರಿಗೂ ವಯಸ್ಸಾಗಿತ್ತು ಅಂತ ನೀವೇ ಹೇಳಿದ್ದಿರಿ. ಅವರು ಸತ್ತದ್ದರಲ್ಲಿ ಏನಂಥ ವಿಶೇಷ? ಅದಕ್ಕೂ ವಾಸ್ತುವಿಗೂ ಏನು ಸಂಬಂಧ?’
‘ಅಯ್ಯೋ, ನೀವು ನಾಸ್ತಿಕರಿರಬೇಕು, ಕತೆ ಅಷ್ಟಕ್ಕೇ ಮುಗೀಲಿಲ್ಲ; ಗೊತ್ತಾಯ್ತಲ್ವೋ? ಯಾವಾಗ ನನ್ನ ಗಂಡ ಆ ಮನೆಯ ಜವಾಬ್ದಾರಿ ವಹಿಸಿದ್ರೋ ಆವತ್ತಿಂದ ಒಬ್ಬೊಬ್ಬರೇ ಬಾಡಿಗೆಗೆ ಮನೆ ಕೇಳ್ಳಿಕ್ಕೆ ಬರತೊಡಗಿದ್ರು. ಇವರ ‘ನಲುವತ್ತು’ ಇಳೀಲೇ ಇಲ್ಲ ನೋಡಿ. ಒಂದು ವರ್ಷ ಕಾದ್ರು. ಪ್ರಯೋಜನವಾಗಲಿಲ್ಲ. ನೋಡಿದವರೆಲ್ಲ ಹೇಳೋದು ಒಂದೇ: ಮನೆಯ ವಾಸ್ತು ಸರಿಯಿಲ್ಲಾಂತ. ಕೊನೆಗೆ, ‘ಸಿಕ್ಕಿದ್ದು ಮಕ್ಕಳ ಪುಣ್ಯಾ’ಂತ ಇಪ್ಪತ್ತು ಸಾವಿರಕ್ಕೆ ಕೊಟ್ರು.’ ಆದರೂ ಗಂಡನಿಗೆ ಲಾಭವಾಗಿಬಿಟ್ಟಿತಲ್ಲಾ ಎಂಬ ಚಿಂತೆ ಕಮಲಮ್ಮನ ಮಾತಿನಲ್ಲಿತ್ತು.
‘ಆಯ್ತಲ್ಲ. ಕೊನೆಗೂ ಬಾಡಿಗೆಗೆ ಜನ ಸಿಕ್ರಲ್ಲ.’
‘ಅಯ್ಯೋ, ಅಲ್ಲೂ ಸುಖವುಂಟಾ ಇವರ ಹಣೇಬರಹಕ್ಕೆ? ಬಾಡಿಗೆಗೆ ಬಂದವರು ಮೂರೇ ಜನ ನೋಡಿ. ಅಪ್ಪ, ಅಮ್ಮ, ಮಗ. ಇರೋ ಒಬ್ಬನೇ ಮಗನಿಗೆ ಮದುವೆ ಮಾಡಿಸಬೇಕೂಂತ ಅವ ಕೆಲ್ಸ ಮಾಡೋ ಕಂಪೆನಿ ಹತ್ತಿರದಲ್ಲೇ ಮನೆ ಹುಡುಕಿ ಇಲ್ಲಿಗೆ ಬಂದ್ರು, ಗೊತ್ತಾಯ್ತಲ್ವೊ? ಏನು ಮಾಡೋದು? ಕೊನೆಗೂ ಮಗನಿಗೆ ಮದುವೆ ಮಾಡಿಸ್ಲಿಕ್ಕೆ ಆಗಲೇ ಇಲ್ಲ; ಮೂರೇ ತಿಂಗಳು. ಎಲ್ರೂ ವಾಪಾಸು ಗಂಟು ಮೂಟೆ ಕಟ್ಟಿದ್ರು. ಮಗ ಇಂಗ್ಲಂಡಿಗೆ, ಅಪ್ಪ- ಅಮ್ಮ ಹಳ್ಳಿಗೆ, ಗೊತ್ತಾಯ್ತಲ್ವೋ? ಈಗ ನೀವು ಬಂದಿದ್ದೀರಿ ನೋಡಿ. ಇದೇ ಮನೇಲಿ ಇರ್ಬೇಕೂಂತಾದ್ರೆ ಮೊದ್ಲು ಇವ್ರಿಗೆ ಹೇಳಿ ವಾಸ್ತು ಪ್ರಕಾರ ಏನೇನು ಮಾಡಿಸ್ಬೇಕೋ ಎಲ್ಲ ಮಾಡಿಸಿ. ನಿಮ್ಗೆ ಮನೆ ಬೇಕೂಂತಾದ್ರೆ ಹತ್ತು ಸಾವಿರಕ್ಕಿಂತ ಒಂದು ಪೈಸಾ ಹೆಚ್ಚಿಗೆ ಕೊಡ್ಬೇಡಿ. ದುರಾಸೆ ಮುದುಕ, ಗೊತ್ತಾಯ್ತಲ್ವೋ? ಹಾಲು ಕೊಡುವಷ್ಟೂ ಹಿಂಡೋದೂಂತಾನೇ ಲೆಕ್ಕ. ಇಲ್ಲೆ ಅದ್ಯಾವುದೋ ಒಂದು ಮದುವೆ ಛತ್ರ ಇದೆ. ಅಲ್ಲಿ ಮ್ಯಾನೇಜರ್ ಜೊತೆ ಒಪ್ಪಂದ ಮಾಡ್ಕೊಂಡು ಮದುವೆ ಪಾಟರ್ಿಗೆ ದಿನ ಬಾಡಿಗೇಲಿ ಮನೆ ಕೊಡ್ತಿದ್ರು. ಒಟ್ಟಿನಲ್ಲಿ ದುಡ್ಡು ಬಿಟ್ರೆ ಬೇರೆ ಮಾತಿಲ್ಲ ನೋಡಿ. ಅದ್ಕೇ ಹೇಳಿದ್ದು ನಾನು, ಆ ಮುದುಕನ ಜೊತೆ ಎಚ್ಚರಿಕೆಯಿಂದ ವ್ಯವವಾರ ಮಾಡೀಂತ. ಇಡೀ ಮನೆಗೆ ಸುಣ್ಣ ಬಣ್ಣ ಹೊಸ್ತಾಗಿ ಮಾಡಿಸ್ಕೊಳ್ಳಿ. ಗೋಡೆಗಳಿಂದ ಮರಳು ಉದುರುತ್ತೆ, ತಾರಸಿಯಿಂದ ನೀರು ಸುರಿಯುತ್ತೆ, ಮತ್ತೆ ನಿಮ್ಮ ಹಣೆಬರಹ. ಗೊತ್ತಾಯ್ತಲ್ವೋ?’
‘ಆಯಿತಮ್ಮ. ಎಲ್ಲ ನೀವು ಹೇಳಿದ ಹಾಗೆ’ ಚಂದು ಶೆಟ್ಟರು ಧನ್ಯತೆಯಿಂದ ನಮಸ್ಕರಿಸಿದರು.

ತಟ್ಟನೆ ಕಮಲಮ್ಮ, ‘ಏನದು ನಾನು ಹೇಳಿದ ಹಾಗೆ? ನೋಡಿ, ನಾನೇನು ಹೇಳ್ಳೂ ಇಲ್ಲ; ನೀವೇನು ಕೇಳ್ಳೂ ಇಲ್ಲ; ಗೊತ್ತಾಯ್ತಲ್ವೊ?’ ಎನ್ನುತ್ತಲೇ ಬಾಗಿಲು ಮುಚ್ಚಿ ಒಳಗೆ ಹೋದರು.
ಮರುದಿವಸ ವಾಮನ ಬಾಳಿಗರು ಶೆಟ್ಟರನ್ನು ಹುಡುಕಿಕೊಂಡು ಹೋಗಿ ಮಾತುಕತೆಯಾಡಿ ಅಂತೂ ಇಂತೂ ಹದಿನೈದು ಸಾವಿರಕ್ಕೆ ಒಪ್ಪಿಸಿದರು. ವಾಸ್ತವವೆಂದರೆ ಹದಿನೈದು ಸಾವಿರಕ್ಕೆ ಅಂಥ ಬಂಗಲೆ ಎಲ್ಲಿ ಸಿಕ್ಕೀತು?
ಮನೆ ತೆಳ್ಳಗಿರುವುದರ ಸಮಸ್ಯೆಯನ್ನಿನ್ನೂ ಶೆಟ್ಟರು ಅನುಭವಿಸಬೇಕಷ್ಟೆ. ಚಪ್ಪಡಿಕಲ್ಲಿನ ಭೀತಿಯನ್ನು ಪರಿಹರಿಸುವುದು ಸುಲಭವೆಂದು ಅವರಿಗೆ ತೋರಲಿಲ್ಲ. ಅದಕ್ಕೆ ಪರಿಹಾರ ರೂಪದಲ್ಲಿ, ಅನಗತ್ಯವಾಗಿ ಮಹಡಿಯೇರುವುದಿಲ್ಲ, ಮಕ್ಕಳು ಮರಿಗಳೆಲ್ಲ ಬಂದಾಗ ಅವರು ಬಳಸಿಕೊಳ್ಳಲಿ ಎಂಬ ತೀಮರ್ಾನವನ್ನು ಶೆಟ್ಟರು ಮೊದಲೇ ತೆಗೆದುಕೊಂಡಿದ್ದರು.
ಬಾಳಿಗರು ಮನೆಯಲ್ಲಿಲ್ಲದ ಹೊತ್ತುನೋಡಿ ಕಮಲಮ್ಮ ಶೆಟ್ಟರನ್ನು ಕರೆಸಿ, ‘ನೀವೇನೂ ಪ್ರಯೋಜನ ಇಲ್ಲ ಶೆಟ್ಟರೆ. ನೋಡಿ, ಪೈಪ್ನಲ್ಲಿ ನೀರೇ ಬರೋದಿಲ್ಲಾಂತ ಮೊನ್ನೆ ನಿಮ್ಮ ಕೆಲ್ಸದೋಳು ಹೇಳ್ತಿದ್ಳು.. ಎಲ್ಲಾ ಕಿಲುಬು ಹಿಡಿದಿರಬೇಕು ನೋಡಿ. ಪಟ್ಟು ಹಿಡಿದು ಪೈಪ್ಲೈನ್ ಎಲ್ಲಾ ಚೇಂಜ್ ಮಾಡಿಸ್ಕೊಳ್ಳಿ, ಗೊತ್ತಾಯ್ತಲ್ವೋ?’ ಎಂದರು. ಗಂಡನ ಕೈಯಿಂದ ಹಣ ಪೀಂಕಿಸುವ ಒದ್ದಾಟದಲ್ಲಿ ಕಮಲಮ್ಮ ಇದ್ದರು.
‘ಅಯ್ಯೋ, ನೀವು ಅದು ಹೇಳ್ತೀರಾ. ಎಲ್ರೂ ‘ಮನೆ ತೆಳ್ಳಗಿದೆ ತೆಳ್ಳಗಿದೆ’ ಅನ್ತಿದ್ದರು. ನನಗರ್ಥ ಆಗ್ತಾ ಇರ್ಲಿಲ್ಲ. ಈಗ ನೋಡಿದ್ರೆ ಗೋಡೇಲಿ ನಾಲ್ಕಾರು ಕಡೆ ಬಿರುಕು ಬಿಟ್ಟಿವೆ. ಕಳೆದ ಮಳೆಗಾಲದ ಬೂಸುರು ತಾರಸಿಯ ಒಳಗಡೆ ಮೆತ್ತಿಕೊಂಡದ್ದು ಇನ್ನೂ ಹಾಗೇ ಅಂಟಿ ಕೂತಿದೆ. ಸುಣ್ಣಬಣ್ಣ ಕೂಡ ಹೊಡೆಸದೆ ಹಾಗೇ ಕೊಟ್ಟುಬಿಟ್ಟಿದ್ದಾರೆ. ಇನ್ನು ಮಳೆ ಬರ್ಲಿಕ್ಕೆ ಶುರು ಆದ್ರೆ ಮಾಡೋದೇನು? ನನಗೀಗಲೇ ಚಿಂತೆಯಾಗಿದೆ.’
‘ಅದಕ್ಕೇ ಹೇಳಿದ್ದು ನಾನು -ಹತ್ತು ಸಾವಿರಕ್ಕಿಂತ ಪೈಸೆ ಹೆಚ್ಚಿಗೆ ಕೊಡ್ಬೇಡೀಂತ. ಅವ್ರು ರಿಪೇರಿ ಕೆಲ್ಸ ಮಾಡಿಸ್ಲಿಕ್ಕಿಲ್ಲ. ನೀವಾದ್ರೂ ಯಾರ ಮನೆಗೇಂತ ಮಾಡಿಸ್ತೀರಾ? ಮಗು ಅತ್ರೆ ತಾನೆ ಹಾಲು ಸಿಗೋದು? ನಾಳೆ ಅವರಿರುವಾಲೇ ಬಂದುಬಿಡಿ. ನೋಡಿ, ಅವರು ಏನೇ ಹೇಳ್ಳಿ, ನೀವು ಮಾತ್ರ ಬಿಟ್ಟು ಕೊಡಬೇಡಿ, ಗೊತ್ತಾಯ್ತಲ್ವೋ?’ ಕಮಲಮ್ಮನ ಮಾತಿನಿಂದ ಚಂದು ಶೆಟ್ಟರಿಗೆ ಸಮಾಧಾನವಾಯಿತು.
ಮರುದಿನ ಮುಂಜಾನೆ ವಾಮನ ಬಾಳಿಗರು ಸಕರ್ೀಟು ಹೊರಡುವುದಕ್ಕೆ ಮುನ್ನವೇ ಚಂದು ಶೆಟ್ಟರು ಬಂದು ಕೂತಿದ್ದರು. ಅವರು ಕೇಳುವುದಕ್ಕೆ ಮೊದಲೇ ಈ ಕಾಲದಲ್ಲಿ ಮನೆ ಬಾಡಿಗೆಗೆ ಕೊಡುವುದರಿಂದ ಯಾವ ಲಾಭವೂ ಇಲ್ಲ ಎಂದುಮುಂತಾಗಿ ಕೆಲವಾರು ವಿಚಾರಗಳನ್ನು ಬಾಳಿಗರು ಹೇಳಿ ಮುಗಿಸಿದ್ದರು. ಅಷ್ಟರಲ್ಲಿ ಒಂದು ಲೋಟ ನೀರು ತಂದಿಡಲೆಂದು ಬಂದ ಕಮಲಮ್ಮ ‘ಪಾಪ, ನೀನ್ನೇನೂ ಬಂದಿದ್ದರು.’ ಎಂದುಬಿಟ್ಟರು. ಒಮ್ಮೆಲೆ ಪಿತ್ತ ನೆತ್ತಿಗೇರಿಸಿಕೊಂಡ ಬಾಳಿಗರು ‘ಯಾಕೆ, ನಿನ್ನತ್ರ ಪಟ್ಟಾಂಗ ಮಾಡ್ಲಿಕ್ಕೆ ಬಂದಿದ್ರಾ? ಒಳಗೆ ನಡೀತಿಯೋ ಇಲ್ವೊ, ರಂಡೆ’ ಎನ್ನುತ್ತ ರೌದ್ರರೂಪ ತಾಳಿದರು. ಶೆಟ್ಟರಿಗೆ ಅಷ್ಟೇ ಸಾಕಿತ್ತು. ಆ ಬೈಗಳಿಗೆ ನಿಜವಾದ ವಾರಸುದಾರ ಯಾರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಶೆಟ್ಟರು ಅಲ್ಲಿ ನಿಲ್ಲಲಿಲ್ಲ.
ಅದಾದ ಮರುದಿಂಗಳು ಮಳೆಗಾಲ. ವಾಮನ ಬಾಳಿಗರು ಚಂದು ಶೆಟ್ಟರ ಯಾವುದೇ ಮನವಿಯನ್ನು ಪುರಸ್ಕರಿಸಲಿಲ್ಲ. ತೆಳ್ಳಗಿನ ಮನೆಯ ತಾರಸಿಯ ಕೆಳಗೆ ಸೋರುವಲ್ಲೆಲ್ಲ ತಂಬಿಗೆಗಳು! ರಭಸವಾಗಿ ಸುರಿಯುವಲ್ಲಿಗೆ ಇರಿಸಲೆಂದು ಮನೆಯಲ್ಲಿದ್ದ ಎರಡು ಪೈಂಟ್ ಬಕೆಟ್ಟುಗಳನ್ನು ಬಾಳಿಗರೇ ಸರಬರಾಜು ಮಾಡಿದ್ದರು! ಮಳೆಗಾಲ ಮುಗಿದ ಮೇಲಾದರೂ ತುಸು ರಿಪೇರಿ ಕೆಲಸ ಮಾಡಿಸುವ ಎಂಬ ಮಾತು ಬಾಳಿಗರ ಬಾಯಲ್ಲಿ ಬರಲೇ ಇಲ್ಲ; ಹಾಗೇನೇ ಇಡೀ ವರ್ಷ ಕಳೆದು ಹೋಯಿತು. ಶೆಟ್ಟರಿಗೆ ಆ ಒರಟನಲ್ಲಿ ಕೇಳೋದೇನು ಎಂಬ ಚಿಂತೆ. ಅಮೇರಿಕಾದಲ್ಲಿ ಕುಳಿತು ಭಾರತದಲ್ಲಿ ಕಟ್ಟಿಸಿದ ಮನೆಯಲ್ಲವೆ!?
ಅದೇನೊ! ಯಜಮಾನಿಕೆಯ ಸುಖವನ್ನು ಪೂತರ್ಿಯಾಗಿ ಅನುಭವಿಸುವುದಕ್ಕೆ ಬಾಳಿಗರಿಗೆ ಅದೃಷ್ಟವಿರಲಿಲ್ಲ. ಮೊದಲೇ ಹೃದ್ರೋಗಿಯಾಗಿದ್ದ ಬಾಳಿಗರಿಗೆ ಆವೊಂದು ರಾತ್ರಿ ಎದೆನೋವು ಕಾಣಿಸಿಕೊಂಡದ್ದನ್ನು ಹೆಂಡತಿಗೆ ಹೇಳಿರಲೇ ಇಲ್ಲ. ಕಮಲಮ್ಮನಿಗೂ ಸಾಕಾಗಿತ್ತು. ಇದೊಮ್ಮೆ ಯಾವತ್ತು ಗೊಟಕ್ಕೆನ್ನುತ್ತದೋ ಎಂದು ಅವರೂ ಕಾಯುತ್ತಿದ್ದರು. ಹಾಗೇ ಆಯಿತು ಕೂಡ.
ಆಸ್ಪತ್ರೆಗೆ ಸಾಗಿಸುವುದಕ್ಕೆ ತಡವಾದುದು ಸಾವಿಗೂ ಕಾರಣವಾಯಿತು. ಚಂದು ಶೆಟ್ಟರು ಅಷ್ಟು ಹತ್ತಿರದಲ್ಲಿದ್ದರೂ ಸುದ್ದಿ ತಿಳಿಯುವಾಗ ಬೆಳಗಾಗಿತ್ತು. ದ.ಆಫ್ರಿಕಾದಿಂದ ಬಂದಿದ್ದ ಸೋನಾಲಿ ಕೇಂದ್ರೆ ಹಾಗೂ ವಸಂತ್ ಕೇಂದ್ರೆ ಎರಡು ವಾರ ಊರಲ್ಲಿ ನಿಂತು ತಂದೆಯವರ ಸಕಲ ಕೈಂಕರ್ಯಗಳನ್ನೂ ಮುಗಿಸಿ ಹೊರಟು ನಿಂತರು. ಸೋನಾಲಿ ಕೇಂದ್ರೆ ಶೆಟ್ಟರನ್ನು ಕರೆಸಿ ‘ಇನ್ನು ಮುಂದೆ ನನ್ನ ಮನೆಯ ಜವಾಬ್ದಾರಿ ತಾಯಿಯವರದ್ದು, ಬಾಡಿಗೆ, ರಿಪೇರಿ ಏನೇ ಇದ್ದರೂ ಅವರಿಗೆ ಹೇಳಿದ್ರಾಯಿತು’ ಎಂದು ಹೇಳಿ ಹೊರಟುಹೋದರು.
ಚಂದು ಶೆಟ್ಟರಿಗೆ ಬಾಳಿಗರು ಗತಿಸಿದ್ದರ ಬಗ್ಗೆ ಬೇಸರವಿತ್ತು. ಆದರೆ ಮುಂದಿನ ದಿನಗಳಲ್ಲಿ ಬಾಡಿಗೆದಾರನ ಸಮಸ್ಯೆಗಳಿಗೆ ಪರಿಹಾರಕೊಡಬಲ್ಲ ಯಜಮಾನಿ ಸಿಕ್ಕಿದ್ದರ ಬಗ್ಗೆ ಸಮಾಧಾನವೂ ಇತ್ತು.
ನೋಡುತ್ತಿದ್ದಂತೆಯೆ ಮತ್ತೊಂದು ಮಳೆಗಾಲ ಓಡೋಡಿ ಬಂತು. ಅದಕ್ಕೆ ಪೂರ್ವಭಾವಿಯಾಗಿ ಆ ತೆಳ್ಳಗಿನ ಮನೆ ಬಳುಕಿ ಬಸವಳಿಯದ ಹಾಗೆ ಪ್ರತಿಬಂಧಗಳನ್ನು ರಚಿಸಬೇಕಾಗಿತ್ತು. ಮೂರುನಾಲ್ಕು ಗೋಡೆಗಳ ಪ್ಲಾಸ್ಟರಿಂಗ್ ಕೆತ್ತೆಕೆತ್ತೆಯಾಗಿ ಕೈಗೆ ಬಂದಿತ್ತು. ಒಳತಾರಸಿಯಿಂದ ತುಂಡು ತುಂಡು ಸಿಮೆಂಟು ಧರೆಗುರುಳಿ ಇಡಿಯ ಕೋಣೆಯಲ್ಲಿ ಪಸರಿಸುವುದು ಕಂಡಾಗ ಮಲಗುವ ತಾಣದ ಬಗ್ಗೆ ಭೀತಿ ಕಾಡುತ್ತಿತ್ತು.
ಕಮಲಮ್ಮ ಅರ್ಥಮಾಡಿಕೊಳ್ಳುವಷ್ಟು ಚೆನ್ನಾಗಿ ಸಮಸ್ಯೆಯನ್ನು ಬಾಳಿಗರು ಅರ್ಥಮಾಡಿಕೊಳ್ಳುತ್ತಿರ್ಳಲಿಲ್ಲ. ಇದೀಗ ಅವರಲ್ಲೇ ನಿವೇದಿಸಿದರಾಯಿತು ಎಂದುಕೊಂಡು ಬೆಲ್ ಬಾರಿಸಿದರು.
ಕಮಲಮ್ಮನದು ಒಂದೇ ಮಾತು: ‘ಇಷ್ಟೆಲ್ಲ ಸಮಸ್ಯೆ ಇದೇಂತ ಅವರಿರುವಾಗ ಯಾಕೆ ಹೇಳ್ಳಿಲ್ಲ್ಲ? ಅವ್ರು ಹೋಗ್ಲೀಂತ ಕಾಯ್ತಾ ಇದ್ರ ಇಷ್ಟು ಕಾಲ? ಎಲ್ಲಿಂದ ತರ್ಲಿ ಇಷ್ಟೊಂದು ಹಣ ರಿಪೇರಿಗೆ?’
‘ಇಲ್ಲ ಕಮಲಮ್ಮ, ಈಗ ನೀವೇನೂ ಖಚರ್ು ಮಾಡ್ಬೇಡಿ. ನಾನೇ ಮಾಡ್ತೇನೆ. ಲೆಕ್ಕ ಚುಕ್ತಾ ಆಗೋ ತನಕ ಬಾಡಿಗೆ ಕೇಳದಿದ್ದರೆ ಆಯ್ತು.’
‘ನಾನಿಲ್ಲಿ ನಾಲ್ಕು ಕಾಸು ಕೈಗೆ ಬರುತ್ತೇಂತ ಕೂತ್ರೆ ನೀವು ಬಾಡಿಗೆ ಕೊಡೋದಿಲ್ಲಾಂತ ಅಂತೀರೇನ್ರಿ. ನಿಮ್ಮ ಈ ಆಲೋಚ್ನೆ ಮನಸ್ಸಿನಲ್ಲಿಟ್ಟುಕೊಳ್ಳಿ. ಬಾಡಿಗೆ ಮಾತ್ರ ಕ್ರಮಪ್ರಕಾರ ಕೊಡಿ. ಆ ಮೇಲೆ ಏನು ಬೇಕಾದ್ರೂ ಮಾಡ್ಕೊಳ್ಳಿ.’ ಕಡ್ಡಿ ಮುರಿದಂತೆ ಮಾತನಾಡಿದ ಕಮಲಮ್ಮನ ಮಾತಿನಲ್ಲಿ ಯಜಮಾನಿಯ ಬಿರುಸಿತ್ತು.
ದಂಗು ಬಡಿದಂತಿದ್ದ ಶೆಟ್ಟರು ಹೆಚ್ಚು ಮಾತನಾಡದೆ ಏಳಬೇಕಿದ್ದರೆ ಕಮಲಮ್ಮ ಮತ್ತೂ ಒಂದು ಮಾತು ಸೇರಿಸಿದರು: ‘ಮುಂದಿನ ತಿಂಗಳು ಇಪ್ಪತ್ತು ಪಸರ್ೆಂಟ್ ಸೇರ್ಸಿ ಬಾಡಿಗೆ ಚೀಟಿ ಮಾಡಿಡ್ತೇನೆ. ಗೊತ್ತಿರ್ಲಿಲ್ಲಾಂತ ಇನ್ನೊಂದು ತಗಾದೆ ಎತ್ತೋದು ಬೇಡಾಂತ ಈಗ್ಲೆ ಹೇಳಿದ್ದು, ಗೊತ್ತಾಯ್ತಲ್ವೊ?’
ಕಮಲಮ್ಮ ತಮ್ಮ ಸ್ವತಂತ್ರ ಸಾಮ್ರಾಜ್ಯದ ಸುತ್ತ ಬೇಲಿ ಕಟ್ಟುವುದಕ್ಕೆ ಪ್ರಾರಂಭಿಸಿದ್ದು ಶೆಟ್ಟರ ಅರಿವಿಗೆ ಬಂತು. ಇಷ್ಟು ದಿನ ಮಾತೆತ್ತಿದರೆ ‘ವಾಸ್ತು ಸರಿಪಡಿಸಿ, ಪೈಪು ಸರಿಪಡಿಸಿ, ಹೇಳಿ ಗಂಡನಿಗೆ, ಬಾಡಿಗೆ ಮಾತ್ರ ಕೊಟ್ಟರೆ ಆಯ್ತೆ? ಎನ್ನುತ್ತಿದ್ದ ಕಮಲಮ್ಮನಿಗೆ ಈಗೇನಾಯಿತು? ಬಾಳಿಗರಾದರೂ ಆಗಬಹುದಿತ್ತು; ಈಕೆಯಲ್ಲ’ ಎನ್ನುತ್ತಾ ಶೆಟ್ಟರು ನೇರ ಮನೆಯ ಕಡೆಗೆ ನಡೆದರು.
‘ಲೋಕದಲ್ಲಿ ಬಾಡಿಗೆಗೆ ಮನೆಗಳೇ ಇಲ್ವೆ?’ ಎನ್ನುತ್ತ ಮನೆಯ ಗೋಡೆಯಲ್ಲಿ ಎದ್ದಿದ್ದ ಸಿಮೆಂಟಿನ ಚೆಕ್ಕೆಗೆ ಎಡಗಾಲಿಂದ ಒದ್ದು ಪುಡಿಪುಡಿ ಮಾಡಿದರು.

‍ಲೇಖಕರು avadhi

7 October, 2013

1 Comment

  1. Gopinatha Rao

    ಕತೆ ಖುಶಿಕೊಟ್ಟಿತು ಸರ್..
    ಮಾತು ಮಾತಿಗೆ “ಕಳ್ನಾವೇ..” ಅಂತ ಹೇಳುವ ಕೊಂಕಣಿ ಮಿತ್ರರೊಬ್ಬರ ನೆನಪಾಯಿತು! ಅವರು ಮುಂದೇನು ಮಾತಾಡಬೇಕು ಎಂದು ಯೋಚಿಸುವಾಗ, ನಮ್ಮ ಉತ್ತರ ಹೇಗಿರಬಹುದೆಂದು ಊಹಿಸುವಾಗ, ಅವರ ಮಾತನ್ನು ನಾವು ಕೇಳುತ್ತಿಲ್ಲ ಎಂದು ಅರಿವಾದಾಗ ಅಥವಾ ಬೇರೇನೂ ಶಬ್ದ ಸಿಗದಾಗ- ಹೀಗೆ ಎಲ್ಲೆಲ್ಲ ಮಾತು ಮುಂದುವರೆಯುತ್ತಿಲ್ಲವೋ ಅಲ್ಲೆಲ್ಲ “ಕಳ್ನಾವೆ” ಉಪಯೋಗಿಸಿಕೊಳ್ಳುತ್ತಿದ್ದರು.
    ನಿಮ್ಮ “ಗೊತ್ತಾಯ್ತಲ್ಲವೋ..” ಶಬ್ದ ಸ್ವಲ್ಪ ದೊಡ್ಡದಾದರೂ “ಕಳ್ನಾವೆ” ಯ ಉತ್ತಮ ಕನ್ನಡೀಕರಣ!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading