ನಾ ಅವನ ತೋಳುಗಳಲ್ಲಿ ಕರಗಿಹೋದೆ..

ಇಂದು ಏಪ್ರಿಲ್ 23 -ಶೇಕ್ಷಪೀಯರ್ ಹುಟ್ಟಿದ ಮತ್ತು ಇಲ್ಲವಾದ ದಿನ. ಈ ಸಂದರ್ಭದಲ್ಲಿ ಅವಧಿಯ ಪರಿಚಿತ ಬರಹಗಾರ, ಲಿಬ್ಯಾದಲ್ಲಿ ಸಾಕಷ್ಟು ವರ್ಷ ಅಧ್ಯಾಪನ ಮಾಡಿದ, ಆ ಕುರಿತು ಪ್ರವಾಸ ಕಥನವನ್ನೂ ಬರೆದಿರುವ ಉದಯ ಇಟಗಿ ಅವರ ಹೊಸ ಮಾಲೆಯನ್ನು ಪ್ರಕಟಿಸುತ್ತಿದ್ದೇವೆ

ಇದು ಷೇಕ್ಸ್ ಪಿಯರ್ ನನ್ನು ಅವನ ಹೆಂಡತಿಯ ಕಂಗಳ ಮೂಲಕ ನೋಡುವ ಪ್ರಯತ್ನ. ಷೇಕ್ಸ್ ಪಿಯರ್ ನನ್ನು ನಾವು ನೋಡುವದಕ್ಕೂ ಮತ್ತು ಆತನ ಹೆಂಡತಿ ನೋಡುವದಕ್ಕೂ ವ್ಯತ್ಯಾಸವಿದೆ ಅಲ್ವೇ?
ನಾನಿದನ್ನು ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ, ಷೇಕ್ಸ್ ಪಿಯರ್ ನ ಜೀವನದಲ್ಲಿ ಹೀಗ್ಹೀಗೇ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ  ಲಭ್ಯವಿರುವ ಅವನ ಒಂದಿಷ್ಟುಜೀವನ ಘಟನೆಗಳು, ನಟರಾಜ್ ಹುಳಿಯಾರ್ ಅವರು ಬರೆದ ಒಂದು ಲೇಖನ ಹಾಗೂ ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ಕನ್ನಡಕ್ಕೆ ಅನುವಾದಿಸಿದ ಷೇಕ್ಸ್ ಪಿಯರ್ ನ ಸುನೀತಗಳನ್ನು ಆದಾರವಾಗಿಟ್ಟುಕೊಂಡು  ಈ ಕೃತಿಯನ್ನು ಸಿದ್ಧಪಡಿಸಿದ್ದೇನೆ.
ಇದನ್ನು ಅನುವಾದವೆಂದು ಕರೆಯಬೇಕೋ? ರೂಪಾಂತರವೆಂದು ಕರೆಯಬೇಕೋ? ಗೊತ್ತಿಲ್ಲ.
ಅಂದಹಾಗೆ ಇದು ಶೀಘ್ರದಲ್ಲಿಯೇ ಏಕವ್ಯಕ್ತಿ ಪ್ರದರ್ಶನವಾಗಿ ರಂಗದ ಮೇಲೆ ಬರಲಿದೆ.
-ಉದಯ ಇಟಗಿ

(ರಂಗದ ಮೇಲೆ ಕತ್ತಲು.  ಮಿಸೆಸ್ ಷೇಕ್ಸ್ ಪಿಯರ್ ತನ್ನ ಗೋರಿಯಿಂದ ನಿಧಾನವಾಗಿ ಹೊರಬರುತ್ತಿದ್ದಂತೆ ರಂಗದ ಮೇಲೆ ಸ್ವಲ್ಪ ಸ್ವಲ್ಪ ಬೆಳಕು ಬೀಳುತ್ತಾ ಹೋಗುತ್ತದೆ. ಅವಳು ಗೋರಿಯಿಂದ ಸಂಪೂರ್ಣವಾಗಿ ಹೊರಬಂದು ಮಾತನಾಡತೊಡಗಿದಾಗ ಪೂರ್ತಿ ಬೆಳಕು ಬೀಳುತ್ತದೆ.) 
“Life … is a tale
Told by an idiot, full of sound and fury,
Signifying nothing.”
“Fair is foul, foul is fair”
“To be or not to be that’s the question”
“Men should be what they seem.”
“There is nothing either good or bad, but thinking makes it so.”
“Nothing will come of nothing”
ನೀವೆಲ್ಲಾ ಇವನ್ನು ಕೇಳೇ ಕೇಳಿರ್ತಿರಲ್ವಾ? ವಾವ್, ಎಂಥಾ ಅದ್ಭುತ quotations ಇವೆಲ್ಲಾ! ಏನು ಆ ಪದಗಳ ಜೋಡಣೆ! ಏನು ಆ ಶಬ್ದಗಳ ಅರ್ಥ! ಎಷ್ಟೊಂದು ಸುಂದರ ಸಾಲುಗಳು! ಈ ರೀತಿಯ quotationಗಳನ್ನು ಬೇರೆ ಯಾರಾದರು ಬರೆದಿದ್ದಾರಾ? ನನಗೆ ಗೊತ್ತಿಲ್ಲ! ಅದನ್ನು ನೀವು ಹೇಳಬೇಕು ನನಗೆ!
ರೋಮಿಯೋ-ಜೂಲಿಯೆಟ್, ಹ್ಯಾಮ್ಲೆಟ್-ಒಫಿಲಿಯಾ, ಒಥೆಲೋ-ಡೆಸ್ಡಿಮೋನಾ, ಕಿಂಗ್ ಲಿಯರ್-ಕಾರ್ಡಿಲಿಯಾ, ಮ್ಯಾಕ್ಬೆಥ್-ಲೇಡಿ ಮ್ಯಾಕ್ಬೆಥ್, ಇಯಾಗೋ, ಗರ್ಟ್ರುಡ್, ಪೋಲೋನಿಯಸ್… ಒಂದೇ ಎರಡೇ ಅವನು ಸೃಷ್ಟಿಸಿದ ಪಾತ್ರಗಳು? (ನಗುತ್ತಾ) ನಿಜಾ ಹೇಳ್ಲಾ? ನಾನು ಇವ್ಯಾವ ಪಾತ್ರಗಳ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ.. ಆದರೆ ಹೀಗೀಗೆ ಅಂತಾ ನಾನೂ ಯಾರದೋ ಬಾಯಿಂದ ಕೇಳಿ ತಿಳ್ಕೊಂಡಿದ್ದು ಅಷ್ಟೇ!
ಅಂದ್ಹಾಗೆ ನಾನು ಯಾರ ಬಗ್ಗೆ ಮಾತನಾಡ್ತಾ ಇದ್ದೇನೆ ಅಂತಾ ನಿಮಗೆ ಈಗಾಗಲೇ ಗೊತ್ತಾಗಿರಬೇಕಲ್ವ?
ಹೌದು, ನಾನು ಷೇಕ್ಸ್ ಪಿಯರ್ ನ ಬಗ್ಗೆ ಮಾತನಾಡ್ತಾ ಇದ್ದೇನೆ. ಅಂದರೆ ನನ್ನ ಗಂಡನ ಬಗ್ಗೆ ಮಾತನಾಡ್ತಾ ಇದ್ದೇನೆ; the Late Mr William Shakespeare of Stafford and London, Son of John and Mary Shakespeare, gentleman of New Place, Chapel Street, the second biggest house in the whole of Stafford.
ನಾನು ಮಿಸೆಸ್ ಷೇಕ್ಸ್ ಪಿಯರ್! ಯ್ಯಾನಿ.., ಯ್ಯಾನಿ ಹ್ಯಾಥ್ವೇ ಷೇಕ್ಸ್ ಪಿಯರ್. ಈ ಜಗತ್ತು ಕಂಡ ಅತ್ಯದ್ಬುತ  ನಾಟಕಕಾರ ಹಾಗೂ ಶ್ರೇಷ್ಠ ಸುನಿತ ಕವಿ ದಿ ಲೇಟ್ ಮಿಸ್ಟರ್ ವಿಲಿಯಂ ಷೇಕ್ಸ್ ಪಿಯರ್ ನ ಹೆಂಡತಿ….. ಮಿಸೆಸ್ ಯ್ಯಾನಿ ಹ್ಯಾಥ್ವೇ ಷೇಕ್ಸ್ ಪಿಯರ್!
ಷೇಕ್ಸ್ ಪಿಯರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ರಂಗಪ್ರೇಮಿಗಳ ಆರಾಧ್ಯ ದೈವ. ರಂಗದಿಗ್ಗಜರ ಅಚ್ಚರಿ, ಪ್ರೇಮಿಗಳ ದೇವತೆ, ಪ್ರಣಯಿಗಳ ಪುಳಕ…. ಪ್ರೇಮ, ಕಾಮ, ಮದ, ಮತ್ಸರ, ಬೀಭತ್ಸ, ಹಾಸ್ಯ, ಕರುಣೆ, ಶಾಂತಿ, ಶೃಂಗಾರ ……ಹೀಗೆ ನೀವೇನು ನವರಸಗಳು ಅಂತಾ ಕರೀತಿರಿ ಅವನ್ನೆಲ್ಲಾ ರಂಗದ ಮೇಲೆ ಅದ್ಭುತವಾಗಿ ಕಟ್ಟಿ ಕೊಟ್ಟವ.  ಒಂದೇ? ಎರಡೇ? ಅವನು ಬರೆದ ನಾಟಕಗಳು? ಬರೋಬ್ಬರಿ 38 ನಾಟಕಗಳನ್ನು ಬರೆದ. ಈ ಜಗವೇ ಒಂದು ನಾಟಕ ರಂಗ, ನಾವೆಲ್ಲಾ ಅದರ ಪಾತ್ರದಾರಿಗಳು ಎಂದು ಹೇಳುತ್ತಲೇ ತನ್ನ ಪಾತ್ರಗಳೊಂದಿಗೆ ತಾನೂ ಒಂದು ಪಾತ್ರವಾಗಿ ಹೋದವ. ಅಂದಿಗೂ, ಇಂದಿಗೂ, ಎಂದೆಂದಿಗೂ ರಂಗ ದಿಗ್ಗಜರಿಂದ ವಿಮರ್ಶೆಗೊಳಪಡುತ್ತಲೇ ಇದ್ದಾನೆ. ಒರೆಗೆ ಹಚ್ಚಲ್ಪಡುತ್ತಿದ್ದಾನೆ.
ಇದಿಷ್ಟು ಷೇಕ್ಸ್ ಪಿಯರ್ ನ ಬಗ್ಗೆ ನಿಮಗೆ ಗೊತ್ತಿರುವ ವಿಚಾರ.
 
ಆದರೆ ಆತನ ಬಗ್ಗೆ ನನಗೆ ಗೊತ್ತಿರುವುದೇ ಬೇರೆ. Of course, ಷೇಕ್ಸ್ ಪಿಯರ್ ನನ್ನು ನೀವು ನೋಡುವದಕ್ಕೂ, ಒಬ್ಬ ಹೆಂಡತಿಯಾಗಿ ನಾನು ನೋಡುವದಕ್ಕೂ ತುಂಬಾ ವ್ಯತ್ಯಾಸವಿದೆಯಲ್ವೆ? ಈ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲಾ ಅವರವರ ಹೆಂಡಂದಿರ ಕಣ್ಣಲ್ಲಿ ಯಾವತ್ತಿದ್ದರೂ ಸಣ್ಣವರೇ! ಯಾಕಂದ್ರೆ ಅವರಿಗೆ ಗೊತ್ತಿರುವಷ್ಟು ಅವರ ದೌರ್ಬಲ್ಯಗಳು, ಹುಳುಕುಗಳು ಬೇರೆ ಯಾರಿಗೂ ಗೊತ್ತಿರುವುದಿಲ್ಲ ನೋಡಿ! ಸದಾ ಜೊತೆಯಲ್ಲೇ ಇದ್ದು ಇದ್ದು ದೂರ ತಳ್ಳುವಷ್ಟು ವಾಕರಿಕೆ ಬಂದುಬಿಟ್ಟಿರುತ್ತಿದೆ. ಅವನೊಟ್ಟಿಗಿನ ಬಾಳ್ವೆ ಸಾಕೋ ಸಾಕು ಎಂದು ಅನಿಸಿಬಿಟ್ಟಿರುತ್ತಿದೆ.
ನಿಮಗೊಂದು ತಮಾಷೆ ಗೊತ್ತಾ? ಎಲ್ಲ ಹೆಂಗಸರು ಬಹಿರಂಗವಾಗಿ ತನ್ನ ಗಂಡನನ್ನು ದೇವರು ಅಂತಾನೇ ಹೇಳೋದು. ಆದರೆ ಆಂತರ್ಯದಲ್ಲಿ ಅವರಿಗೆ ಮಾತ್ರ ಗೊತ್ತಿರುತ್ತದೆ; ಅವನೂ ಎಲ್ಲರ ಹಾಗೆ ಅನೇಕ ದೌರ್ಬಲ್ಯಗಳಿರುವ ಒಬ್ಬ ಯಕಶ್ಚಿತ್ ಮನುಷ್ಯ ಅಂತಾ. ನನ್ನ ಗಂಡನೂ ಕೂಡ ಅಂಥ ಒಬ್ಬ ಯಕಶ್ಚಿತ್ ಮನುಷ್ಯನಾಗಿದ್ದ ಎಂದು ಹೇಳುವುದರಲ್ಲಿ ನನಗೆ ಯಾವ ಸಂಕೋಚವೂ ಇಲ್ಲ! ನನ್ನ ಗಂಡ ಒಬ್ಬನೇ ಏನು? ಎಲ್ಲಾ ಗಂಡಂದಿರು ಒಂದಲ್ಲಾ ಒಂದು ರೀತಿಯಲ್ಲಿ ಹಾಗೆಯೇ! ಎಲ್ಲೋ ಒಂದು ಕಡೆ ನನ್ನ ಗಂಡನೇ ಹೇಳಿದ್ದಾನಂತಲ್ಲ Familiarity breeds to contempt ಅಂತಾ. ಅದು ಎಲ್ಲರ ದಾಂಪತ್ಯದಲ್ಲಿ ನೂರಕ್ಕೆ ನೂರರಷ್ಟು ಸತ್ಯ! ನನ್ನ ವಿಷಯದಲ್ಲೂ ಹಾಗೆ ಆಗಿಬಿಡ್ತು ಅನ್ನಿ.
My husband.
Sweet Mr. Shakespeare,
The dirty devil.
ಅಂದಹಾಗೆ ನನಗೆ ಜ್ಞಾಪಕ ಶಕ್ತಿ ಚೆನ್ನಾಗಿ ಇದೆ. ಒಂದೊಂದು ಸಾರಿ ನನಗೆ ಅನುಮಾನ ಕಾಡುತ್ತೆ. ಅದು ನನಗೆ ವರವಾಗಿದೆಯೋ ಅಥವಾ ಶಾಪವಾಗಿದೆಯೋ ಎಂದು? ಆದರೆ ನನ್ನ-ಅವನ ವಿಷಯ ಬಂದಾಗ ನನ್ನ ಜ್ಞಾಪಕ ಶಕ್ತಿ ಚೆನ್ನಾಗಿಯೇ ಕೆಲಸ ಮಾಡುತ್ತದೆ, ಯಾಕಂದ್ರೆ ನಾವಿಬ್ಬರೂ ಮಾತನಾಡದೆ ಎಷ್ಟೋ ವರ್ಷಗಳನ್ನೇ ಕಳೆದಿದ್ದೇವೆ.
ಇರಲಿ. ನಾನೀಗ ಹೇಳ ಹೊರಟಿರುವದು ನನ್ನ ಕಥೆಯ ಬಗ್ಗೆ, ಅವನ ಕಥೆಯ ಬಗ್ಗೆ, ನನ್ನ-ಅವನ ಕಥೆಯ ಬಗ್ಗೆ, ಬೆಸ್ಟ್ ಬೆಡ್ ಬಗ್ಗೆ, ಹಾಗೂ ಸೆಕೆಂಡ್ ಬೆಸ್ಟ್ ಬೆಡ್ ಬಗ್ಗೆ……..
(ಹಿನ್ನೆಲೆಯಲ್ಲಿ ಹೆಣ್ಣು ದನಿಯೊಂದು ಈ ಸುನಿತವನ್ನು ಹಾಡುತ್ತದೆ…..…)
ಮಧುರ ನೀರವ ಚಿಂತನೆಗಳ ಅಧಿವೇಶನಕೆ
ಗತಘಟನೆ ಸ್ಮರಣೆಗಳನ್ನು ಕರೆಕಳಿಸುವೆನು
ಕುದಿವ ಬಯಸಿದ್ದೆಷ್ಟೊ ಅಲ್ಲಿ ಇಲ್ಲದ್ದಕ್ಕೆ
ಹಳೆವ್ಯಥೆಗೆ ಹಾಳಾದ ಕಾಲಕ್ಕೆ ಮರುಗುವೆನು
“Hasty marriages seldom prove well” ಯಾವುದೋ ನಾಟಕದಲ್ಲಿ ಬರೆದಿದ್ದಾನಂತಲ್ಲ. ಅದು ನನ್ನ ವಿಷಯದಲ್ಲಿ ಸುಳ್ಳಾಗಿದೆಯಾ? ನಿಜವಾಗಿದೆಯಾ? ಈಗಲೂ ನಾನು ಗೊಂದಲದಲ್ಲಿದ್ದೇನೆ.
Any way,
I have a strange story to tell you
Trust me.
It’s true what they say:
Truth is stranger than fiction.
This, then, is what happened.
Listen carefully.
ನಾನು ಷೇಕ್ಸ್ ಪಿಯರ್ ನ ಊರಾದ ಸ್ಟ್ರ್ಯಾಟ್ ಫೋರ್ಡಿನಿಂದ ಕೇವಲ ಒಂದು ಮೈಲಿ ದೂರದಲ್ಲಿರುವ ಪಕ್ಕದ ಊರಿನವಳು. ಅವನು ಮೊಲಗಳನ್ನು ಹಿಡಿಯಲೋ, ಬೇಟೆಯಾಡಲೋ, ಅಥವಾ ಹುಡುಗಿಯರನ್ನು ನೋಡಲೋ ದಿನಾಲೂ ನಮ್ಮೂರಿಗೆ ಬರುತ್ತಿದ್ದ. ಹಾಗೆ ಬಂದವನು ಒಂದು ದಿನ ನನ್ನ ನೋಡಿದ…. ನೋಡುತ್ತಲೇ ಹೋದ… ನಾನೇನೂ ಪ್ರತಿಕ್ರಿಯಿಸಲು ಹೋಗಲಿಲ್ಲ.. ಆಮೇಲೇನಾಯಿತೋ, ನೋಡಿ ಹಾಗೆ ಹೊರಟೇ ಹೋದ. ಮಾರನೆ ದಿನ ಮತ್ತೆ ಬಂದ… ನನ್ನ ನೋಡಿ ಒಂದು ತುಂಟ ನಗೆ ಬೀರಿದ.. ಮೆಲ್ಲಗೆ ಹತ್ತಿರ ಬಂದ.. ಪರಿಚಯ ಮಾಡಿಕೊಂಡ.. ನಾಳೆ ಬರುತ್ತೇನೆ ಎಂದು ಹೇಳಿ ಹೋದ.
ಹೇಳಿದಂತೆ ಮಾರನೆ ದಿವಸ ಮತ್ತೆ ಬಂದ. “ಬರುತ್ತೀಯಾ?” ಎಂದು ಕೇಳಿದ. ನಾನು “ಎಲ್ಲಿಗೆ?” ಎಂದೆ. “ಹೀಗೆ ಕಾಡಿಗೆ….” ಎಂದ. “ಅಯ್ಯಯ್ಯಪ್ಪ! ನಮ್ಮ ಅಪ್ಪ ಅಮ್ಮನಿಗೆ ಗೊತ್ತಾದ್ರೆ ಅಷ್ಟೆ. ಸುಮ್ಮನೆ ಬಿಡಲ್ಲ.” ಎಂದೆ. “ನಿಮ್ಮ ಅಪ್ಪ ಅಮ್ಮನಿಗೆ ಗೊತ್ತಾಗದಂತೆ ಕರೆದುಕೊಂಡು ಹೋಗುತ್ತೇನೆ. ಬರುತ್ತೀಯಾ?” ಅವನ ಧ್ವನಿಯಲ್ಲಿ ಕೀಟಲೆಯಿತ್ತು. ಆ ಕೀಟಲೆಗೆ ಕರಗಿದೆ. ಬೆನ್ನ ಹಿಂದೆ ಹೋದೆ. ಆವತ್ತು ಕಾಡಿನಲ್ಲಿ ಅತ್ತಿತ್ತ ಸುಮ್ಮನೆ ಅಲೆದೆವು. ಅವನು ನನಗೆ ಗೊತ್ತಿರದ ಎಷ್ಟೋ ಹಕ್ಕಿಗಳನ್ನು, ಗಿಡ, ಮರಗಳನ್ನು ಪರಿಚಯಿಸಿದ.
ಮರುದಿವಸ ಮತ್ತೆ ಬಂದ… ಬಂದಾಗ ಮುಸ್ಸಂಜೆಯಾಗಿತ್ತು. ಮತ್ತೆ ಅದೇ ಕಾಡಿಗೆ ಕರೆದುಕೊಂಡು ಹೋದ. ನನ್ನ ಒಂದು ಹುಲ್ಲು ಹಾಸಿನ ಮೇಲೆ ಕೂರಿಸಿದ… ಹತ್ತಿರ ಬಂದ.. ಕೈ ಹಿಡಿದ… ಮೆಲ್ಲಗೆ ಮುಖಕ್ಕೆ ಹೂ ಮುತ್ತನೊತ್ತಿದ… ಉಸಿರು ಬಿಸಿಯಾಗಿತ್ತು… ಕಣ್ಣಲ್ಲಿ ಆಸೆಯಿತ್ತು… ದೇಹ ತಹತಹಿಸುತ್ತಿತ್ತು… ಹಾಗೆ ಮೆಲ್ಲಗೆ ನನ್ನ ಕೆಳಗೆ ಉರುಳಿಸಿದ… ಮೈ ಮೇಲೇರಿ ಬರತೊಡಗಿದ.. ನಾನು ಸರಕ್ಕನೆ ಸರಿದುಕೊಂಡೆ.. ಬೇಡ ಬೇಡವೆಂದು ಪ್ರತಿಭಟಿಸಿದೆ… ಆದರೆ ಅವ ಕೇಳಲಿಲ್ಲ…ಅವನ ಹಿಡಿತ ಬಿಗಿಯಾಗಿತ್ತು… ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದ…ಹುಚ್ಚು ಆವೇಶ.. ಅವನನ್ನು ನಂಬಿದೆ.. ಹಾಗೆ ಮುಂದಿನ ಹತ್ತು ನಿಮಿಷ ಅವನ ತುಟಿಗಳು ನನ್ನ ಮೈ ಮೇಲೆಲ್ಲಾ ಹರಿದಾಡಿದವು… ನಾ ಅವನ ತೋಳುಗಳಲ್ಲಿ ಕರಗಿಹೋದೆ.
 
। ಇನ್ನುಳಿದದ್ದು ನಾಳೆಗೆ ।

‍ಲೇಖಕರು Avadhi Admin

April 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: