ಎರವಲು ಪುಸ್ತಕಗಳು ಬಾಡಿಗೆಯ ಮನೆಯಂತೆ..

ಇಂದು ವಿಶ್ವ ಪುಸ್ತಕ ದಿನ

ಸುಧಾ ಆಡುಕಳ 

ಎಲ್ಲರಿಗೂ ವಿಶ್ವಪುಸ್ತಕ ದಿನದ ಶುಭಾಶಯಗಳು. ಈ ಸಂದರ್ಭದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಪುಟ್ಟ ಮಕ್ಕಳ ಪಾಲಕರು ಖಂಡಿತ ಓದಿ.

ಪುಸ್ತಕವೇ ಆಸ್ತಿಯಾಗಿರಬೇಕಾದ ಅಕಾಡೆಮಿಕ್ ವಲಯದವರಲ್ಲಿ ಕೂಡಾ ಪುಸ್ತಕಗಳ ಬಗ್ಗೆ ತೀರ ಅನಾಸಕ್ತಿಯಿರುವುದನ್ನು ನಾನು ಗಮನಿಸಿದ್ದೇನೆ. ಅವರಿವರಿಂದ ಕೊಡುಗೆಯಾಗಿ ಬರುವ ಪುಕ್ಕಟೆ ಪುಸ್ತಕಗಳನ್ನು ಹರಳಿನ ಕಪಾಟಿನಲ್ಲಿ ಹಿಡಿದಿಟ್ಟು ಶೋ ಕೊಡುವ ಜನರೇ ಹೆಚ್ಚಿದ್ದಾರೆ. ಅನಿವಾರ್ಯವಾಗಿ ಪುಸ್ತಕಕ್ಕೆ ಹಣ ಕೊಡಬೇಕಾದಾಗ ಆ ಹಣವು ಉಪಯೋಗಕ್ಕಿಲ್ಲದೇ ಖರ್ಚಾಯಿತೆಂದು ಕೊರಗುವುದನ್ನು ನಾನು ನೋಡಿದ್ದೇನೆ.

ಇನ್ನು ಕೆಲವರಿಗೆ ಓದುವ ಬಗ್ಗೆ ಅತ್ಯಾಸಕ್ತಿಯಿದ್ದರೂ ಆ ಆಸೆಯೆಲ್ಲವೂ ಲೈಬ್ರರಿಯಿಂದ ಪಡೆದ ಅಥವಾ ಬೇರೆಯವರಿಂದ ಎರವಲು ಪಡೆದ ಪುಸ್ತಕಗಳಿಂದಲೇ ಪೂರೈಕೆಯಾಗಬೇಕೆಂಬ ತಪ್ಪು ಗ್ರಹಿಕೆಯಲ್ಲಿರುತ್ತಾರೆ. ಇನ್ನು ಕೆಲವರಿಗಂತೂ ತಮ್ಮ ಕ್ಷೇತ್ರಕ್ಕೆ ಸಂಬಂಧಿಸದ  ಪುಸ್ತಕ ಓದುವುದು ಸಮಯದ ವ್ಯರ್ಥ ಎಂದೇ ಭಾವಿಸುತ್ತಾರೆ.

ಓದಿನ ಬಗೆಗೆ ನಮ್ಮ ಭಾವನೆಗಳೇನೇ ಇರಲಿ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ತಿಳಿದಿರಬೇಕಾಧ್ದು ಅವಶ್ಯ. ತಿಂಡಿ, ಬಟ್ಟೆ, ಅಲಂಕಾರಿಕ ಸಾಮಗ್ರಿಗಳಂತೆ  ಪುಸ್ತಕಗಳು ಕೂಡಾ ಮಗುವಿನ ಪ್ರಾಥಮಿಕ ಅವಶ್ಯಕತೆಯಾಗಿದೆ. ಓದುವುದೆಂದರೆ ಅದು ಮಾತನಾಡುವುದರ  ಮುಂದಿನ ಭಾಗ. ಇಡಿಯ ಜಗತ್ತೇ ಮಾತು ಕಳಕೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ ಮಾತನಾಡುವ ಅವಕಾಶವನ್ನು ಓದು ಮಕ್ಕಳಿಗೆ ನೀಡುತ್ತದೆ.

ಪುಸ್ತಕಗಳ ಆಯ್ಕೆ ಮಾಡುವಾಗ ತೀರ ಎಚ್ಚರಿಕೆ ಅಗತ್ಯ. ಪ್ರತಿಯೊಂದು ಮಗುವಿನ ಆಸಕ್ತಿಯ ಕ್ಷೇತ್ರ ವಿಭಿನ್ನವಾಗಿರುತ್ತದೆ. ಅದರ ಆಸಕ್ತಿಯನ್ನು ಅರಿಯುವುವವರೆಗೆ ವಿಭಿನ್ನ ಮಾದರಿಯ ಪುಸ್ತಕಗಳು ಮನೆಗೆ ಬರುತ್ತಿರಲೇಬೇಕು. ಇಷ್ಟಪಟ್ಟು ನೀವು ಆರಿಸಿದ ಡ್ರೆಸ್ ನ್ನು ನಿಮ್ಮ ಮಗು ಧರಿಸಲು ನಿರಾಕರಿಸಿದಾದ ನೀವೇನು ಮಾಡುತ್ತೀರಿ?  ನಿಮಗಿಷ್ಟ ಕಂಡ ಹತ್ತಿರದವರಿಗೆ ನೀಡುತ್ತೀರಿ. ಇಲ್ಲೂ ಅದೇ ನಿಯಮ ಪಾಲಿಸಿ. ಅದನ್ನು ಇಷ್ಟಪಡುವ ಮಕ್ಕಳಿಗೆ ಉಡುಗೊರೆಯಾಗಿ ನೀಡಿ.

ಬಲವಂತದಿಂದ ಮಕ್ಕಳನ್ನು ಓದಿಸಲಾಗದು. ಅವರಿರುವ ಸ್ಥಳದ ಸುತ್ತಲೂ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಹರಡಿರಲಿ. ಕೆಲವೇ ದಿನಗಲ್ಲಿ ಅದನ್ನವರು ಪ್ರೀತಿಯಿಂದ ಎದೆಗೊತ್ತಿಕೊಳ್ಳುವ ವಿಸ್ಮಯಕ್ಕೆ ನೀವೇ ಬೆರಗಾಗುತ್ತೀರಿ. ದಿನದ ಕೊನೆಯ ಸಂಜೆಯಲ್ಲಿ ಹೀಗೇ ಮನೆಮಂದಿಯೆಲ್ಲ ಒಂದೊಂದು ಪುಸ್ತಕ ಎತ್ತಿಕೊಂಡು ಮೌನವಾಗುವ ಸಂಪ್ರದಾಯವನ್ನು ಪಾಲಿಸಿ.

ಹೀಗೆ ಓದುವುದರಿಂದ ಪರೋಕ್ಷವಾದ ಅನೇಕ ಪ್ರಯೋಜನಗಳಿವೆ. ಓದು ಮಕ್ಕಳ ಮನದೊಳಗೊಂದು ಭಾವಕೋಶವನ್ನು ಬೆಳೆಸುತ್ತದೆ. ಪಠ್ಯಪುಸ್ತಕದ ಓದಿನ ವೇಗವನ್ನು ಅತಿಶಯವಾಗಿ ಹೆಚ್ಚಿಸುತ್ತದೆ. ಅಂತರ್ಜಾಲಗಳು ತೆರೆದಿಡುವ ಭ್ರಮಾಲೋಕದಿಂದ ವಾಸ್ತವಕ್ಕಿಳಿಯಲು ಸಹಾಯ ಮಾಡುತ್ತದೆ. ಅವರ ಬಿಡುವಿನ ವೇಳೆಯನ್ನು ಮೌಲ್ಯಯುತವಾಗಿ ಕಳೆಯುವ ಬಗೆಯನ್ನು ಕಲಿಸುತ್ತದೆ. ಜೀವನದ ಕಠಿಣ ಸನ್ನಿವೇಶದಲ್ಲಿ ಉತ್ತಮ ಜೊತೆಗಾರನಾಗುತ್ತದೆ. ಎದೆಯೊಳಗೊಂದು ಆರ್ದೃ ಲೋಕವನ್ನು ಸೃಷ್ಟಿಸುತ್ತದೆ. ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಲು ನೆರವಾಗುತ್ತದೆ. ಗುರಿಸಾಧನೆಗೆ ಮಾರ್ಗದರ್ಶಿಯಾಗುತ್ತದೆ.

ಧರಿಸುವ ಬಟ್ಟೆ ಚಿಕ್ಕದಾದಾಗ ಬದಿಗಿಡುವಂತೆ ಬೆಳೆಯುವ ಮಕ್ಕಳು ಹಿಂದಿನ ಓದನ್ನು ಬದಿಗೆ ಆರಿಸುತ್ತಾರೆ. ಅದನ್ನೇ ಪದೇಪದೇ ಓದಲು ಒತ್ತಾಯಿಸದಿರಿ. ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ದೊಡ್ಡ ಪುಸ್ತಕದ ಮಳಿಗೆಯೊಳಗೆ ನಿಲ್ಲಿಸಿ ಬೇಕಾದ ಪುಸ್ತಕಗಳನ್ನು ಬಾಚಿಕೊಳ್ಳಲು ಹೇಳಿ. ಹಣದ ಲೆಕ್ಕಾಚಾರ ಬೇಡ. ಅದಕ್ಕಿಂತ ದುಪ್ಪಟ್ಟು ಪ್ರತಿಫಲವನ್ನು ಪುಸ್ತಕಗಳು ಖಂಡಿತ ನಿಮಗೆ ನೀಡುತ್ತವೆ.

ಮನೆಯಲ್ಲಿ ಮಕ್ಕಳಿಗೆಂದೇ ಪ್ರತ್ಯೇಕವಾದ ಪುಟ್ಟ ಲೈಬ್ರರಿಯಿರಲಿ. ಮನೆಗೆ ಬಂದವರೊಂದಿಗೆ ನಿಮ್ಮ ಮಕ್ಕಳು ಈಗ ಓದುತ್ತಿರುವ ಪುಸ್ತಕದ ಬಗ್ಗೆ ಹೇಳಿ. ಅವರ ಪುಸ್ತಕ ಸಂಗ್ರಹವನ್ನೂ ನಿಮ್ಮ ಮನೆಯ ಅಪರೂಪದ ವಸ್ತುವಿನಂತೆ ತೋರಿಸಿ. ಪುಟ್ಟ ಮಕ್ಕಳಿದ್ದರೆ ಅವು ಮಲಗುವ ಮೊದಲು ಹಾಸಿಗೆಯ ತುಂಬೆಲ್ಲ ಪುಸ್ತಕಗಳನ್ನು ಹರಡಿ, ಅದನ್ನು ಆಟವಾಡುತ್ತಲೇ ಅವರು ನಿದ್ರಿಸಲಿ.

ಓದು ಕಲಿಸಲು ತಾಳ್ಮೆ, ಆಯ್ಕೆ, ಆಸಕ್ತಿಯ ಅರಿಯುವಿಕೆ, ಮಾದರಿಗಳು ಮುಖ್ಯವೆಂದು ನೆನಪಿಡಿ. ಮಕ್ಕಳ ಹುಟ್ಟುಹಬ್ಬಕ್ಕೆ ಡ್ರೆಸ್ ಗೆಂದು ಸಾವಿರಾರು ರೂಪಾಯಿ ವ್ಯಯಿಸುವ ನಾವು ಅದರರ್ಧ ಹಣವನ್ನು ಪುಸ್ತಕಗಳಿಗೆ ಮೀಸಲಿಟ್ಟರೂ ಸಾಕು. ಮಕ್ಕಳು ಖಂಡಿತ ಒಳ್ಳೆಯ ಓದುಗರಾಗುತ್ತಾರೆ.

ಎರವಲು ಪುಸ್ತಕಗಳು ಬಾಡಿಗೆಯ ಮನೆಯಂತೆ. ಓದುವ ಸುಖವನ್ನು ಇಡಿಯಾಗಿ ನೀಡಲಾರವು. ಸ್ವಂತ ಪುಸ್ತಕ ಖರೀದಿಸಿ, ಮಕ್ಕಳ ಓದನ್ನು ಪ್ರೋತ್ಸಾಹಿಸಿ. ಚಿಕ್ಕ ಮಕ್ಕಳಿರುವವರು ಮೇಲೆ ಹೇಳಿರುವುದನ್ನೆಲ್ಲ ಪಾಲಿಸಿದರೆ ಖಂಡಿತ ನಿಮ್ಮ ಮಕ್ಕಳ ಓದಿನ ಚಿಂತೆಯನ್ನು ಮೀರಬಹುದು

‍ಲೇಖಕರು avadhi

April 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sarayu

    Nija Sudha neevu barediruvudu aksharasaha nija. Ella palakaru idannu palisuvantadare eshtu chenna alwe.

    ಪ್ರತಿಕ್ರಿಯೆ
  2. Kiran

    These are very simple but very powerful thoughts.
    If every parents follow this the society will be much more mature and sensible.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: