ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾವೆತ್ತ ನಡೆಯುತ್ತಿದ್ದೇವೆ? ಒಂದು ಕ್ಷಣ ಚಿಂತಿಸಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿದೆ (೨೪, ೨೫ ಮತ್ತು ೨೬ ನವೆಂಬರ್ ೩೦೧೭) ಕನ್ನಡ ಭಾಷೆ, ಸಂಸ್ಕೃತಿ, ಜನಜೀವನ ಮತ್ತು ಈ ಎಲ್ಲ ಸಂಗತಿಗಳ ಸುತ್ತ ಹಬ್ಬಿಕೊಂಡ ಬಹುಮುಖ್ಯ ಸಮಸ್ಯೆಗಳನ್ನು ಚಿಂತಿಸುವುದು, ಚರ್ಚಿಸುವುದು ಮತ್ತು ಅಗತ್ಯ ಕ್ರಿಯೆಗೆ ಮುಂದಾಗುವುದು ಈ ಹೊತ್ತಿನ ತುರ್ತು ಎಂದು ಭಾವಿಸಿರುವ ಕಾರಣ ಈ ದಿಕ್ಕಿನಲ್ಲಿ ನಿಮ್ಮೆಲ್ಲರ ಗಮನ ಸೆಳೆಯುವುದು ಈ ಬರಹದ ಉದ್ದೇಶವಾಗಿದೆ.

ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಬದುಕು, ರಾಷ್ಟ್ರ, ಪ್ರಜಾಪ್ರಭುತ್ವ ವ್ಯವಸ್ಥೆ-ಇವುಗಳಿಗೆ ಸಂಬಂಧಿಸಿದಂತೆ ಭಾರತೀಯರಿಗೆ ಡಾ.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಅತ್ಯಂತ ಮಹತ್ವದ್ದು ಮತ್ತು ಸಮಾಜದ ಮುನ್ನಡೆಗೆ ಪ್ರಯೋಜನಕಾರಿಯಾದದ್ದು. ಪ್ರಜಾಪ್ರಭುತ್ವದ ಆಶಯಗಳಿಗೆ ಮತ್ತು ಮೂಲ ಉದ್ದೇಶಗಳಿಗೆ ಮಿಡಿದಿರುವ ಈ ಸಂವಿಧಾನ ಪ್ರತಿಯೊಬ್ಬ ಭಾರತೀಯನ ಗೌರವಕ್ಕೆ ಪಾತ್ರವಾಗಬೇಕಾದದ್ದು.

ಆದರೆ ನಮ್ಮ ಸಂವಿಧಾನವನ್ನೇ ಧಿಕ್ಕರಿಸಿದಂತೆ, ಹೊಣೆಗೇಡಿತನದ ಮಾತುಗಳನ್ನು ಜನಪ್ರತಿನಿಧಿಗಳೇ (ಒಬ್ಬಿಬ್ಬರು) ಆಡುತ್ತಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಬಂದೆರಗುವ ಅಪಾಯದಂತೆಯೂ ಕಾಣಿಸುತ್ತಿದೆ. ಸಂವಿಧಾನವನ್ನು ಮತ್ತೆ ಮತ್ತೆ ಪರಿಶೀಲಿಸುವುದು, ಸಮಾಜದ ಒಟ್ಟು ಮುನ್ನಡೆಗೆ ಕೆಲವು ಮಾರ್ಪಾಟುಗಳು ಅಗತ್ಯವಾಗಿ ಕಂಡರೆ ಅಂಥದನ್ನು ಮಾಡಿಕೊಳ್ಳಲು ಅವಕಾಶ ಇದ್ದೇ ಇದೆ. ಸಂವಿಧಾನ ತಿದ್ದುಪಡಿಗಳನ್ನು ನಾವು ಮಾಡುತ್ತಲೂ ಬಂದಿದ್ದೇವೆ. ಆದರೆ ಹೊಣೆಗೇಡಿತನದಿಂದ ಸಂವಿಧಾನವನ್ನು ಧಿಕ್ಕರಿಸಿ ಮಾತನಾಡುವುದು ಪ್ರಜಾಪ್ರಭುತ್ವವನ್ನು ಕಡೆಗಣಿಸುವ ಇನ್ನೊಂದು ದಾರಿಯಾಗಿಯೂ ಕಾಣಿಸುತ್ತಿದೆ. ಇದನ್ನು ನಾವೆಲ್ಲ ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಹೊಣೆಗೇಡಿತನದ ನಡೆಗೆ ತಡೆ ಹಾಕುವುದು ನಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ.

ಮುಕ್ತವಾಗಿ ಚಿಂತಿಸುವ, ಮಾತನಾಡುವ, ಬರೆಯುವ, ಸಾಹಿತ್ಯ ಮತ್ತು ಕಲೆಗಳನ್ನು ನಿರ್ಭಯವಾಗಿ, ಹೊಣೆಗಾರಿಕೆಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಬಳಸುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ. ಇದು ಪ್ರಜಾಪ್ರಭುತ್ವದ ಜೀವಾಳವೂ ಹೌದು.

ಆದರೆ ಪ್ರಜಾಪ್ರಭುತ್ವದ ಈ ಉಸಿರನ್ನೇ ಇಲ್ಲವಾಗಿಸುವ ವಿದ್ಯಮಾನಗಳು ಬಹಳ ವೇಗವಾಗಿ ನಡೆಯುತ್ತಿವೆ. ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರ ‘ಪದ್ಮಾವತಿ’ಯ ಬಿಡುಗಡೆಗೆ ಸಂಬಂಧಿಸಿದಂತೆ ಎದ್ದಿರುವ ಗದ್ದಲವನ್ನೇ ಉದಾಹರಣೆಗೆ ನೋಡಬಹುದು.

ಈ ಚಿತ್ರದಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ ಅದನ್ನು ಸಾರ್ವಜನಿಕ ಚರ್ಚೆಗೆ ಒಡ್ಡಬಹುದು. ಸೆನ್ಸಾರ್ ಮಂಡಳಿ, ನ್ಯಾಯಾಲಯ ಇತ್ಯಾದಿ ವೇದಿಕೆಗಳನ್ನೂ ಬಳಸಿಕೊಂಡು ತಮ್ಮ ವಿರೋಧವನ್ನು ಸೂಚಿಸಬಹುದು. ಆದರೆ ಚಿತ್ರದಲ್ಲಿ ನಟಿಸಿರುವ ನಟಿಯನ್ನು ಮತ್ತು ಚಿತ್ರ ನಿರ್ಮಾಪಕರನ್ನು ಕೊಲ್ಲುವ, ಅವರ ತಲೆಯನ್ನು ತಂದುಕೊಟ್ಟವರಿಗೆ ಹತ್ತು ಕೋಟಿ ರೂಪಾಯಿ ಕೊಡುವುದಾಗಿ ಹೇಳುವುದು ಇವೆಲ್ಲ ಪ್ರಜಾಪ್ರಭುತ್ವದ ವಿದ್ಯಮಾನಗಳಲ್ಲ.

ಭಯೋತ್ಪಾದಕ ಸಂಘಟನೆಗಳು ಇಂಥ ಮಾತುಗಳನ್ನು ಆಡಬಹುದು; ಸರ್ವಾಧಿಕಾರ ಇರುವ ರಾಷ್ಟ್ರಗಳಲ್ಲಿ ಇಂಥ ಮಾತುಗಳಿಗೆ ಮಾನ್ಯತೆ ಇದ್ದೀತು. ಆದರೆ ಪ್ರಜಾಪ್ರಭುತ್ವದಲ್ಲಿ ಇಂಥ ನಡೆಗೆ ಅವಕಾಶವೇ ಇಲ್ಲ.

ಇನ್ನೊಂದು ಉದಾಹರಣೆಯನ್ನು ನೋಡಿ: ಪ್ರಧಾನಿಯವರ ವಿರುದ್ಧ ಬೆರಳು, ಕೈ ತೋರಿಸುವವರ ಬೆರಳುಗಳನ್ನು, ಕೈಗಳನ್ನು ಕತ್ತರಿಸಲಾಗುವುದು. ಇಂಥ ಮಾತುಗಳನ್ನು ಆಡಿರುವವರು ಹೊಣೆಗೇಡಿ ಜನರಲ್ಲ. ಕೇಂದ್ರದಲ್ಲಿ ಸರ್ಕಾರವನ್ನು ನಡೆಸುತ್ತಿರುವ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಇಂಥ ಮಾತನ್ನು ಆಡಿದ್ದಾರೆ. ಇಂಥವರನ್ನು ತಡೆಯುವ ಪ್ರಯತ್ನಗಳನ್ನು ಆ ಪಕ್ಷವಾಗಲಿ, ಸರ್ಕಾರವಾಗಲಿ ಮಾಡುತ್ತಿಲ್ಲ ಎಂದರೆ ಇದು ಏನನ್ನು ತೋರಿಸುತ್ತದೆ?

ಆ ಪಕ್ಷ ಮತ್ತು ಸರ್ಕಾರದ ಧೋರಣೆ ಇದೇ ಆಗಿರಬಹುದೇ? ಹೌದು ಎನ್ನಿಸುವಂತೆಯೂ ಆ ಪಕ್ಷ ಮತ್ತು ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವುದನ್ನು ನಾವು ನೀವೆಲ್ಲ ನೋಡುತ್ತಲೇ ಬಂದಿದ್ದೇವೆ: ಹೊಣೆಯರಿತು ಮಾತನಾಡುವ, ಬರೆಯುವ, ಕಲೆಯ ಪ್ರಕಾರಗಳಲ್ಲಿ ನಿರ್ಭಯವಾಗಿ ಕೆಲಸ ಮಾಡುವ ಅವಕಾಶವನ್ನೇ ಇಲ್ಲವಾಗಿಸುವ ಸ್ವೇಚ್ಛಾಚಾರದ ಕ್ರಿಯೆಗಳಿಗೆ ಬೆಂಬಲ ನೀಡುವಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ.

ಮುಕ್ತವಾಗಿ ಕ್ರಿಯಾಶೀಲವಾಗಿರಬೇಕಾಗಿದ್ದ ‘ಪ್ರಸಾರ ಭಾರತಿ’ಯನ್ನು ಕೇಂದ್ರ ಸರ್ಕಾರ ಹೇಗೆ ನಿಯಂತ್ರಿಸಿದೆ ನೋಡಿ. ಅನೇಕ ಸ್ವಾಯತ್ತ ಸಂಸ್ಥೆಗಳು ದಿನದಿಂದ ದಿನಕ್ಕೆ ತಮ್ಮ ಉಸಿರನ್ನೇ ಕಳೆದುಕೊಳ್ಳುವಂತೆ ಮಾಡುತ್ತಿರುವವರು ಯಾರು? ಆಕಾಶವಾಣಿ ಮತ್ತು ದೂರದರ್ಶನಗಳು ಯಾರ ಕೈಗೊಂಬೆಗಳಂತೆ ಕೆಲಸ ಮಾಡುತ್ತಿವೆ? ನಮ್ಮ ಸಮಾಜದ ಬಹುಮುಖೀ ಸ್ವರೂಪಕ್ಕೆ ಅಡ್ಡಿ ಬರುತ್ತಿರುವುದು ಯಾರಿಂದ?

ಮತಧರ್ಮ ನಿರಪೇಕ್ಷ ಸಮಾಜವೇ ನಮ್ಮ ಗುರಿಯಾಗಬೇಕು. ನಮ್ಮ ಸಂವಿಧಾನದ ಪ್ರಮುಖ ಆಶಯವೂ ಇದೇ. ಇದನ್ನು ಧಿಕ್ಕರಿಸಿ, ಮತಧರ್ಮಗಳನ್ನೇ ಮೆರೆಸುತ್ತ, ಮತಧರ್ಮಗಳ ಆಧಾರದಲ್ಲಿಯೇ ಸಮಾಜವನ್ನು, ಮನುಷ್ಯರನ್ನು, ಸಹಬಾಳ್ವೆಯನ್ನು ನಾಶಮಾಡುತ್ತಿರುವ ಶಕ್ತಿಗಳು ಯಾವುವು? ನಿರಾಶ್ರಿತರಾಗಿ ವಲಸೆ ಬರುವ ಮಕ್ಕಳನ್ನು, ಮಹಿಳೆಯರನ್ನು ಮತ್ತು ಅಸಹಾಯಕರನ್ನು ಭಯೋತ್ಪಾದಕರಂತೆ ನೋಡುವ ಮನೋಧರ್ಮ ಎಲ್ಲಿಂದ ಬಂತು? -ಇಂಥ ಪ್ರಶ್ನೆಗಳನ್ನು ಹಿಂದೆಂದಿಗಿಂತಲೂ ಇಂದು ಗಂಭೀರವಾಗಿ ನೋಡಬೇಕಾದ ಸಂದರ್ಭ, ಸನ್ನಿವೇಶಗಳು ನಮ್ಮ ಕಣ್ಮುಂದಿವೆ.

ನಾವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತು ಮಾತನಾಡುತ್ತಿರುವಾಗಲೇ ನಮ್ಮ ಚಿಂತಕರ, ವೈಚಾರಿಕರ, ಸಾಮಾಜಿಕ ಕಾರ್ಯಕರ್ತರ, ಕ್ರಿಯಾಶೀಲರ, ಪತ್ರಕರ್ತರ ಕೊಲೆಗಳು ನಡೆದು ಹೋಗಿವೆ.

ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ತೀರ ಇತ್ತೀಚಿನ ಉದಾಹರಣೆ ಮಾತ್ರ. ಇವರು ಏಕೆ ಕೊಲೆಯಾದರು? ತಮ್ಮ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಂಡ, ಸಾರ್ವಜನಿಕ ಸಂವಾದಕ್ಕೆ ಒಡ್ಡಿದವರನ್ನು ಗುಂಡಿಟ್ಟು ಕೊಲ್ಲುವ ಸಮಾಜವನ್ನು ನಾವು ಕಟ್ಟಿಕೊಂಡದ್ದಾದರೂ ಹೇಗೆ?

ವ್ಯಕ್ತಿಗಳ ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಎಲ್ಲ ಆಗುಹೋಗುಗಳನ್ನು ತೀವ್ರವಾಗಿ ವಿರೋಧಿಸುವಾಗಲೂ ನಮಗೆ ಇನ್ನೊಂದು ಎಚ್ಚರವೂ ಇದೆ : ಈಚಿನ ದಿನಗಳಲ್ಲಿ ‘ದೃಶ್ಯಮಾಧ್ಯಮ’, ‘ಸುದ್ದಿಮಾಧ್ಯಮ’ ಮತ್ತು ‘ಸಾಮಾಜಿಕ ಮಾಧ್ಯಮಗಳು’ ಕೂಡ ಹಲವು ಬಗೆಯ ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಹಿತಾಸಕ್ತಿಗಳ ಕೈಗೊಂಬೆಗಳಾಗಿರುವುದನ್ನೂ ಗಮನಿಸಿದ್ದೇವೆ.

ಆಕ್ರಮಣಶೀಲವೂ, ಅಭಿರುಚಿಹೀನವೂ ಆದ ಶೈಲಿಯೇ ನಿಯಮವಾಗಿರುವ ಈ ಹೊತ್ತಿನಲ್ಲಿ ಗಾಂಧೀಜಿಯಂಥವರು ರೂಪಿಸಿಕೊಟ್ಟ ‘ನೀತಿಸಂಹಿತೆ’ಯನ್ನು ಎಲ್ಲ ಅಭಿವ್ಯಕ್ತಿಗಳು ಅಳವಡಿಸಿಕೊಳ್ಳಬೇಕಾದ ಅಗತ್ಯ ಕೂಡ ಇದೆ ಎಂಬುದನ್ನು ವಿನಮ್ರವಾಗಿಯೇ ಸೂಚಿಸುತ್ತೇವೆ.

ಪರಸ್ಪರ ಹೊಂದಿಕೊಂಡು ನೆಮ್ಮದಿಯ ಬದುಕನ್ನು ನಡೆಸುವ ಸಹಬಾಳ್ವೆ, ವೈಯಕ್ತಿಕ ನಂಬಿಕೆಗಳು, ಆಚರಣೆಗಳು ಭಿನ್ನವಾಗಿದ್ದರೂ ಒಂದು ರಾಷ್ಟ್ರದ ಪ್ರಜೆಗಳಾಗಿ, ಸಂವಿಧಾನದ ಚೌಕಟ್ಟನ್ನು ಗೌರವಿಸುತ್ತ, ಸಹಿಷ್ಣುತೆಗಳನ್ನು ಪಾಲಿಸಿಕೊಂಡು ಬಂದ ನಮ್ಮ ಸಮಾಜ ಇವತ್ತು ಏಕೆ ಇಷ್ಟು ಅಸಹನೆಯಿಂದ ಕುದಿಯುತ್ತಿದೆ. ಈ ಉರಿಗೆ ತುಪ್ಪಹಾಕುತ್ತ ಇದನ್ನೊಂದು ಜ್ವಾಲಮುಖಿಯಾಗಿ ಮಾಡುತ್ತಿರುವರು ಯಾರು?

ನಾವು ಬಹುಕಾಲದಿಂದ ಉಳಿಸಿಕೊಂಡು ಬಂದ ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವವರು ಯಾರು? ಇವೆಲ್ಲವನ್ನು ತಡೆಯುವುದು ಹೇಗೆ ಮತ್ತು ನಮ್ಮ ಪ್ರಜಾಪ್ರಭುತ್ವ ಛಿದ್ರವಾಗದಂತೆ ನೋಡಿಕೊಳ್ಳುವ ಮಾರ್ಗ ಯಾವುದು?
ಇಂಥ ಪ್ರಶ್ನೆಗಳನ್ನು ನಾವು ಚಿಂತಿಸಲು ಇದು ಸಕಾಲ. ಸಾಹಿತ್ಯ ಸಮ್ಮೇಳನದ ನೆಪದಲ್ಲಾದರೂ ನಾವು ಇತ್ತ ಮುಖಮಾಡಬೇಕಾಗಿದೆ.

ಪಂ. ರಾಜೀವ ತಾರಾನಾಥ * ಪ. ಮಲ್ಲೇಶ್ * ಎಂ. ಸತ್ಯನಾರಾಯಣರಾವ್ * ಡಿ.ಎಸ್. ನಾಗಭೂಷಣ * ಡಾ. ವಿಷ್ಣು ನಾಯ್ಕ * ಪ್ರೊ. ಶಬ್ಬೀರ್ ಮುಸ್ತಾಫಾ * ಡಾ. ಕೃಷ್ಣಮೂರ್ತಿ ಹನೂರು * ಪ್ರೊ.ಸಿ.ಎನ್. ರಾಮಚಂದ್ರನ್ * ಪ್ರೊ.ಎಚ್.ಎಸ್. ರಾವೇಂದ್ರರಾವ್ * ಕೆ ಸತ್ಯನಾರಾಯಣ * ಡಾ.ವಿಠಲ ಭಂಡಾರಿ * ಡಾ.ಟಿ. ಸುಬ್ರಹ್ಮಣ್ಯಂ, * ಡಾ.ಪಂಡಿತಾರಾಧ್ಯ * ಜಿ.ಪಿ. ಬಸವರಾಜು * ಜಿ.ಎನ್. ಮೋಹನ್ * ಸತ್ಯನಾರಾಯಣರಾವ್ ಅಣತಿ * ಸವಿತಾ ನಾಗಭೂಷಣ * ಆರ್.ಪಿ. ವೆಂಕಟೇಶಮೂರ್ತಿ * ಡಾ.ಎಚ್.ಎಸ್. ಅನುಪಮಾ * ಪಿ.ಚಂದ್ರಿಕಾ * ಬಸವರಾಜ ಸೂಳಿಭಾವಿ * ಜಗದೀಶ್ ಕೊಪ್ಪ * ಅಕ್ಷತಾ ಹುಂಚದಕಟ್ಟೆ * ಎಂ.ಆರ್. ಭಗವತಿ * ಶಶಿಧರ ಡೋಂಗ್ರೆ * ಕೆ.ಪಿ. ಸುರೇಶ * ಸ.ರ. ಸುದರ್ಶನ * ಎಂ. ಕಲೀಂ ಅಹ್ಮದ್ * ಕೆ. ಮುದ್ದುಕೃಷ್ಣ * ಡಿ.ಎಸ್.ರಾಮಸ್ವಾಮಿ * ಜಿ.ಎನ್.ನರಸಿಂಹಮೂರ್ತಿ

—-
ಮೈಸೂರಿನಲ್ಲಿ ೨೦೧೭ ನವೆಂಬರ್ ೨೪, ೨೫ ಮತ್ತು ೨೬ರಂದು ನಡೆಯುತ್ತಿರುವ ಅಖಿಲ ಭಾರತ ೮೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಿದೆ.

‍ಲೇಖಕರು avadhi

26 November, 2017

1 Comment

  1. No name

    ನಮ್ಮ ಬುದ್ಧಿ ಜೀವಿಗಳ ಐಚ್ಛಿಕ ಕುರುಡುತನ ನಿಜವಾಗಿಯೂ ಬೆರಗುವಡೆಸುವMತಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading