ನಾವು ವಿಶ್ವವಿದ್ಯಾಲಯಕ್ಕೆ ಹೋದರೆ ಅಣ್ಣನಿಗೆ ಸಂಭ್ರಮ..

ಬಾಲ್ಯದಲ್ಲಿ ಅಣ್ಣನ ಬಡತನದ ಕಾರಣಕ್ಕಾಗಿ ಆತ ತನ್ನ ಉನ್ನತ ಶಿಕ್ಷಣವನ್ನು ಕಾಲೇಜು, ವಿಶ್ವವಿದ್ಯಾಲಯಗಳಿಗೆ ಹೋಗಿ ಮಾಡಲಾಗಲಿಲ್ಲ. ಆತ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಬೇಕಾಯಿತು. ಹಾಗಾಗಿ ಆತನ ಬಿ.ಎ, ಎಂ.ಎ ಮತ್ತು ಪಿಎಚ್.ಡಿ ಪದವಿಗಳೆಲ್ಲ ಬಾಹ್ಯವಾಗಿಯೇ ನಡೆದದ್ದು.

ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆ ಆತನಿಗೆ ಇತ್ತು. ತನ್ನ ಸಂಪರ್ಕದಲ್ಲಿದ್ದ ಎಲ್ಲರಿಗೂ ಅದನ್ನು ಒತ್ತಾಯಿಸುತ್ತಿದ್ದ. ಮನೆಯಲ್ಲಿ ಇನ್ನಕ್ಕ ಹೆಚ್ಚು ಕಲಿಯಲಿಲ್ಲ. ಎಸ್.ಎಸ್.ಎಲ್.ಸಿ.ಗೆ ಓದನ್ನು ಮುಕ್ತಾಯ ಮಾಡಿ ಅಕ್ಕನೊಂದಿಗೆ, ಆಯಿಯೊಂದಿಗೆ ಮನೆ ಕೆಲಸಕ್ಕೆ ನಿಂತಳು. ಮಾಧವಿ ಹೆಚ್ಚು ಚುರುಕು. ಅಂದಿನ ಓದನ್ನು ಅಂದೇ ಮಾಡುವ ಶಿಸ್ತಿನವಳು. ಎಲ್ಲಾ ಪರೀಕ್ಷೆಯಲ್ಲಿಯೂ ಮೊದಲ ದರ್ಜೆಯೆ. ಡ್ಯಾನ್ಸ್, ಭಾಷಣ, ಪ್ರಬಂಧ ಸ್ಪರ್ಧೆ ಹಾಡು….. ಹೀಗೆ ಎಲ್ಲದರಲ್ಲಿಯೂ ಆಸಕ್ತಿ.

ಅವಳಿಗೆ ಎಲ್.ಎಲ್.ಬಿ. ಮಾಡಿಸಬೇಕೆಂದು ಅಣ್ಣನ ಆಸೆ. ಹಾಗೆ ಧಾರವಾಡಕ್ಕೆ ಕಳುಹಿಸಿದ. ಎಡ್ಮಿಶನ್ ಕೂಡ ಆಯ್ತು. ರೂಂ ಕೂಡ ಮಾಡಿದರು. ಆದರೆ ಆಕೆ ಅಲ್ಲಿ ಹೆಚ್ಚು ದಿನ ಇರದೆ ವಾಪಸಾದಳು. ಅವಳಿಗೆ ಎಂ.ಎ. ಮಾಡಬೇಕೆಂಬ ಆಸೆ. ಅಣ್ಣ ಧಾರವಾಡದ ವಿ.ವಿಯಲ್ಲಿರುವ ಪ್ರೊ. ಚಂಪಾ ಅವರಿಗೆ ಪತ್ರ ಬರೆದು ಕೇಳಿದ. ಅಷ್ಟರಲ್ಲಿ ಎಂ.ಎ. ಅಡ್ಮಿಶನ್ ಅವಧಿ ಮುಗಿದಿದೆ ಎಂದು ಅವರು ಬರೆದಿರಬೇಕು. ಹಾಗಾಗಿ ಬಿ.ಎಡ್. ಸೇರಿದಳು ಕುಮಟಾದಲ್ಲಿ.

ಅಲ್ಲಿಯೂ ಶಿಕ್ಷಕರಿಗೆ ಆಕೆ ಮೆಚ್ಚಿನ ವಿದ್ಯಾರ್ಥಿ. ಬಿ.ಇಡಿ. ಆಗುತ್ತಿದ್ದಂತೆ ನೌಕರಿ ಸಿಕ್ಕಿತು. ಮನೆಯ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿ ಇಲ್ಲದ್ದರಿಂದ, ಅವಳ ಓದನ್ನು ಬ್ಯಾಂಕ್ ಸಾಲದ ಮೂಲಕ ಮಾಡಿದ್ದರಿಂದ ಅವಳು ತಕ್ಷಣ ನೌಕರಿಯನ್ನು ಆಯ್ಕೆ ಮಾಡಿಕೊಂಡಳು. ಈ ಕಾರಣದಿಂದ ಅವಳಿಗೆ ವಿಶ್ವವಿದ್ಯಾಲಯದ ಪ್ರವೇಶ ಸಾಧ್ಯವಾಗಲಿಲ್ಲ. ಒಂದು ವೇಳೆ ಆಕೆ ಎಂ.ಎ. ಮಾಡಿದ್ದರೆ ಅತ್ಯುತ್ತಮ ಕಾಲೇಜು ಉಪನ್ಯಾಸಕಿ ಆಗಿರುತ್ತಿದ್ದಳು. ಬದುಕಿನ ಬಹು ಭಾಗವನ್ನು ಆಕೆ ಹೈಸ್ಕೂಲು ಶಿಕ್ಷಕಿಯಾಗಿ ಕಳೆದಳು. ಈಗ ಹತ್ತು ವರ್ಷದಿಂದ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದಾಳೆ. ಇವಳನ್ನು ಆಗ ಎಂ. ಎ ಗೆ ಕಳಿಸಬೇಕಾಗಿತ್ತು ಅಂತ ಆತ ಯಾವಾಗಲಾದರೂ ಬೇಸರ ಪಡುತ್ತಿದ್ದ.

ಆದರೆ ನನಗೆ ಎಂ.ಎ. ಮಾಡುವ ಆಸಕ್ತಿ ಇತ್ತು. ಅಣ್ಣನೂ ಬಿ.ಇಡಿ ಗಿಂತ ಎಂ.ಎ. ಮಾಡುವುದು ಒಳ್ಳೆಯದು ಎಂದ. ವಿಶ್ವವಿದ್ಯಾಲಯದಲ್ಲಿ ಕಲಿತರೆ ಒಂದಿಷ್ಟು ಲೋಕಜ್ಞಾನದ ಪರಿಚಯವಾಗುವುದರಿಂದ ಮತ್ತು ಓದಿಗೆ ಒಳ್ಳೆಯ ಗ್ರಂಥಾಲಯ ಲಭ್ಯವಾಗಿರುವುದರಿಂದ ಅವನಿಗೆ ಅದರಲ್ಲಿ ಆಸಕ್ತಿ….

“ಪ್ರಾಥಮಿಕ ಶಾಲೆಯಲ್ಲಿ ಮಾಸ್ತರ ಆಗುವುದು ತೀರಾ ಮಹತ್ವದ ಕೆಲಸವಾದರೂ ಕಾಲೇಜಿನ ಉಪನ್ಯಾಸಕನಾದರೆ ಸಮಾಜದಲ್ಲಿ ಹೆಚ್ಚು ಗೌರವ ಸಿಗುತ್ತದೆ. ನೀನು ಚೆನ್ನಾಗಿ ಓದಿದರೆ ಯಾವುದಾದರೂ ವಿಶ್ವವಿದ್ಯಾಲಯ ಸೇರಬಹುದು. ಬೇಡದಿದ್ದರೆ ಬಿಟ್ಟರಾಯಿತು” ಎನ್ನುತ್ತಿದ್ದ. ಹಿಂದೆ ಯಾವುದು ತನ್ನಿಂದ ಸಾಧ್ಯ ಆಗಿಲ್ಲವೋ ಆ ಆಸೆಯನ್ನು ತನ್ನ ಮಕ್ಕಳ ಮೂಲಕ, ಶಿಷ್ಯರ ಮೂಲಕ ಈಡೇರಿಸಿಕೊಳ್ಳುವ ಸುಖ ಅವನದು.

ಹಾಗೆ ನನಗೆ ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಲು ಹೇಳಿ, ಅಣ್ಣ ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋದ. ಅಲ್ಲಿ ಆಗ ಅಣ್ಣನ ಆತ್ಮೀಯರಾದ ಶಾಂತಿನಾಥ ದೇಸಾಯಿಯವರು ಉಪಕುಲಪತಿಗಳಾಗಿದ್ದರು. ಡಾ. ಕೇಶವ ಶರ್ಮ, ಡಾ. ಶ್ರೀಕಂಠ ಕೂಡಿಗೆ, ಡಾ. ಲಕ್ಕಪ್ಪ ಗೌಡ ಅವರು ಅಧ್ಯಾಪಕರಾಗಿದ್ದರು. ನನ್ನನ್ನು ಅಲ್ಲಿಗೆ ಕಳುಹಿಸಲು ಇದೇ ಮುಖ್ಯ ಕಾರಣವಾಗಿತ್ತು. ‘ಒಳ್ಳೆಯ ಅಧ್ಯಾಪಕರಿದ್ದರೆ ಕಲಿಕೆ ಹೆಚ್ಚು ಮೌಲಿಕ ಆಗಿರುತ್ತದೆ’ ಎಂದು ಆತ ಹೇಳುತ್ತಿದ್ದ.

ಶರ್ಮ ಮೇಷ್ಟ್ರು ಹಲವು ಬಾರಿ ಹೊನ್ನಾವರ ಕಾಲೇಜಿನಲ್ಲಿ ಎಸ್.ಎಫ್.ಐ. ಸಂಘಟಿಸಿದ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದ್ದರಿಂದ ಪರಿಚಿತವಾಗಿದ್ದರು ಮತ್ತು ಹಲವು ಕಡೆ ಬಂಡಾಯ ಸಾಹಿತ್ಯದ ಕಾರ್ಯಕ್ರಮದಲ್ಲಿ ನಾನು ಅವರನ್ನು ಭೇಟಿ ಆಗಿದ್ದೆ. ಹಾಗಾಗಿ ಅವರು ಆತ್ಮೀಯರಾಗಿದ್ದರು.

ಮೊದಲ ಬಾರಿಗೆ ಆದ ನಿರಾಸೆ

ಡಿಗ್ರಿಯಲ್ಲಿ ನಾನು ಧಾರವಾಡ ವಿ.ವಿ.ಗೆ ಯುವಜನ ಮೇಳಕ್ಕಾಗಿ ಹಲವು ಬಾರಿ ಭೇಟಿಕೊಟ್ಟಿದ್ದೆ. ಶ್ರೀಪಾದನ ನಿರ್ದೇಶನದಲ್ಲಿ ನಾವೆಲ್ಲಾ ಅಭಿನಯ ಮಾಡಿದ ‘ಹೆಣದ ಬಟ್ಟೆ’ ನಾಟಕಕ್ಕೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಮೊದಲ ಬಹುಮಾನ ಬಂದು ದಕ್ಷಿಣ ಭಾರತ ಯುವಜನ ಮೇಳಕ್ಕೆ ಆಯ್ಕೆ ಆಗಿತ್ತು. ಹಾಗಾಗಿ ವಿ.ವಿ.ಗೆ ಹಲವು ಬಾರಿ ಭೇಟಿ ಕೊಡುವ ಸಂದರ್ಭ ಬಂದಿತ್ತು. ಆಗಲೇ ವಿಶ್ವವಿದ್ಯಾಲಯದ ಕುರಿತು ಒಂದು ಕಲ್ಪನೆ ಬಂದಿದ್ದು, ಅದರ ವಿಸ್ತಾರ ನೋಡಿ ಪುಳಕಗೊಂಡಿದ್ದೆ. ವಿ.ವಿ.ಯಲ್ಲಿ ಓದಬೇಕೆಂಬ ಹಂಬಲ ಇನ್ನಷ್ಟು ಹೆಚ್ಚಾದದ್ದು ಆಗಲೆ.

ಕುವೆಂಪು ವಿ.ವಿ. ಇರುವ ಶಂಕರಘಟ್ಟಕ್ಕೆ ಅಣ್ಣ ಮೊದಲ ಬಾರಿ ನನ್ನನ್ನು ಕರೆದುಕೊಂಡು ಹೋಗಿದ್ದನು. ಆ ಮೊದಲೇ ಶರ್ಮ ಮೇಸ್ಟ್ರಿಗೆ ಹೇಳಿ ಅರ್ಜಿ ನಮೂನೆ ತರಿಸಿದ್ದ. ಅದನ್ನು ತುಂಬಿಕೊಟ್ಟಿದ್ದೂ ಅವನೆ. ಅದೊಂದು ಸಂಭ್ರಮ ಅವನಿಗೆ. ಪಿಯುಸಿಯಲ್ಲಿ ಢುಮುಕಿ ಹೊಡೆದ ನಾನು ವಿಶ್ವವಿದ್ಯಾಲಯದವರೆಗೆ ಹೋಗುತ್ತೇನೆಂಬ ವಿಶ್ವಾಸ ಅವನಿಗಿರಲಿಲ್ಲ ಅಂತ ಕಾಣ್ತದೆ. ಅದರಲ್ಲೂ ಎಸ್.ಎಫ್.ಐ, ಬಂಡಾಯ ಅಂತ ಡಿಗ್ರಿಯಲ್ಲಿ ಸಂಘಟನಾ ಕೆಲಸಕ್ಕೆ ಓಡಾಡ್ತಿರುವುದರಿಂದ ನಾನು ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳುವ ಕುರಿತೂ ಅವನಿಗೆ ಅನುಮಾನ ಇದ್ದಿರಬೇಕು. ಹಾಗಾಗಿಯೂ ಇದು ಅವನಿಗೆ ಸಂಭ್ರಮದ ಇನ್ನೊಂದು ಕಾರಣ ಇರಬೇಕು. (ಇದು ನನ್ನ ಊಹೆ ಮಾತ್ರ).

ಅಂದು ಶಿವಮೊಗ್ಗದಿಂದ 20-22 ಕಿ.ಮಿ. ದೂರ ಕಾಡಲ್ಲಿ ಬಸ್ ಓಡುತ್ತಿತ್ತು. ಮಳೆಗಾಲ ಬೇರೆ, ಕೆಟ್ಟ ಚಳಿ…… ಎಷ್ಟು ಓಡಿದರೂ ವಿ.ವಿ. ಬರುತ್ತಿಲ್ಲ. ನನಗೆ ವಿ.ವಿಯನ್ನು ತಲುಪುವ  ಕಾತರ…. ಶಿವಮೊಗ್ಗ ನಗರದಿಂದ ಇಷ್ಟು ದೂರ ಎನ್ನುವ ಬೇಸರ…. ದೊಡ್ಡದಾಗಿ, ಕೆಟ್ಟದ್ದಾಗಿ ಊರ ಹೆಸರನ್ನು ಕೂಗುತ್ತಾ ಇರುವ ಖಾಸಗೀ ಬಸ್ ಏಜೆಂಟರ ಕಿರುಚಾಟ; ಅಂತೂ 1 ತಾಸು ಪ್ರಯಾಣದ ನಂತರ ಶಂಕರಘಟ್ಟ ತಲುಪಿದೆವು.

ಅಲ್ಲಿ ಇಳಿದರೆ ರಸ್ತೆ ಅಕ್ಕ ಪಕ್ಕ 3-4 ಅಂಗಡಿ… ಕೆಟ್ಟ ಕಾಡು…. ವಿ.ವಿ. ಕಛೇರಿ ಎಲ್ಲಿ ಎಂದು ಅಣ್ಣ ಯಾರನ್ನೋ ಕೇಳಿದ…. ಅಣ್ಣ ಬಂದಿದ್ದೂ ಇದೇ ಮೊದಲ ಬಾರಿ….. ದಾರಿ ತಪ್ಪಿದೆವೋ ಎನ್ನುವ ಅನುಮಾನ ಕೂಡ ಅವನದು. ಇಬ್ಬರದೂ ಒಂದೇ ಛತ್ರಿ; ಮುಖ್ಯ ರಸ್ತೆಗೆ ತಾಗಿರುವ ಒಂದು ಕಾಲು ಹಾದಿಯಲ್ಲದ, ಟಾರ್ ರಸ್ತೆ ಅಲ್ಲದ, ಕಡಿ ಮತ್ತು ಮಣ್ಣಿನಿಂದ ಕೂಡಿದ ಒಂದು ರಸ್ತೆಯಲ್ಲಿ ಹೋದೆವು. ನನ್ನದು ಹವಾಯಿ ಚಪ್ಪಲಿ ಆಗಿರುವುದರಿಂದ ವಿ.ವಿ. ಕಛೇರಿ ತಲುಪುವುದರೊಳಗೆ ತಲೆಯವರೆಗೆ ಚಪ್ಪಲಿಯ ಮಣ್ಣು ಚಿತ್ತಾರ ಬಿಡಿಸಿತ್ತು.

ಶರ್ಮ ಮೇಷ್ಟ್ರು ನಮಗಾಗಿ ಕಾದಿದ್ದರು. ಅದೇ ನಗು, ಗಡ್ಡ, ಕೈಯಲ್ಲಿ ಬ್ರಿಸ್ಟಲ್ ಸಿಗರೇಟು, (ಈಗಲೂ ಅದೇ ಕಂಪನಿ ಇರಬೇಕು. ಏನೇ ಬದಲಾಯಿಸಿದರೂ ಅವರು ಬ್ರಿಸ್ಟಲ್ ಕಂಪನಿ ಬದಲಿಸಲಿಲ್ಲ) ಅಣ್ಣ ಮತ್ತು ಮೇಷ್ಟ್ರು ಬಂಡಾಯದ ಸುದ್ದಿಯಲ್ಲಿ ತಾವು ಬಂದ ವಿಷಯವನ್ನೇ ಮರೆತಿದ್ದರು.

ಬೇರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಿರುವ ಕೋಟದಲ್ಲಿ ನನಗೆ ಒಂದು ಸೀಟು ಸಿಕ್ಕಿತ್ತು. ಎಡ್ಮಿಶನ್ ಕೂಡ ಆಯ್ತು. ಅಣ್ಣ ನನ್ನನ್ನು ಶಾಂತಿನಾಥ ದೇಸಾಯಿಯವರಲ್ಲಿ (ಶಾಂತಿನಾಥ ದೇಸಾಯಿಯವರು ಮೊದಲ ವಿ.ಸಿ. ಆಗಿದ್ದರು.) ಕರೆದುಕೊಂಡು ಹೋಗಿ ಪರಿಚಯಿಸಿದ. ಅವರು ಅಷ್ಟೊಂದು ಖುಷಿಯಿಂದ ಮಾತನಾಡಿದರು. ಕನ್ನಡವಾದರೂ ಇಂಗ್ಲಿಷ್ ಸಾಹಿತ್ಯವನ್ನು ಹೆಚ್ಚೆಚ್ಚು ಓದಲು ಸಲಹೆ ನೀಡಿದರು. ಅಣ್ಣನ ಬಗ್ಗೆ ಅವರಿಗೂ ತುಂಬಾ ಗೌರವ. ಇವನಿಗಂತೂ ಕೇಳಬೇಕೆ? ಇಬ್ಬರ ನಡುವಿನ ಸಾಹಿತ್ಯದ ಚರ್ಚೆ ಒಂದು ವಿಚಾರ ಸಂಕಿರಣದಂತಿತ್ತು. ಅವರ ಹಲವು ಪತ್ರಗಳು ಅಣ್ಣನಿಗೆ ಬರುತ್ತಿದ್ದವು. ಅಣ್ಣನೂ ಅವರಿಗೆ ಕಾರ್ಡ್ ಬರೆಯುತ್ತಿದ್ದ. ಅದನ್ನೆಲ್ಲಾ ಕಾಲೇಜು ದಿನಗಳಲ್ಲಿ ಓದಿದ ನೆನಪು.

ಮತ್ತೆ ಡಾ. ಲಕ್ಕಪ್ಪ ಗೌಡರು, ಡಾ. ಶ್ರೀಕಂಠ ಕೂಡಿಗೆ, ಎಸ್. ಶಿವಾನಂದ.. ಹೀಗೆ ಅಲ್ಲಿರುವ ಹಲವು ಸಾಹಿತಿಗಳಿಗೆ ನನ್ನನ್ನು ಪರಿಚಯಿಸಿದ. ಇವನನ್ನು ಓದಿಸುವ ಜವಾಬ್ದಾರಿ ನಿಮ್ಮದು; ಬರೀ ಸಂಘಟನೆ ಎಂದು ಓಡಾಡುತ್ತಿರುತ್ತಾನೆ. ಅದೂ ಇರಲಿ, ಸಾಹಿತ್ಯದ ಓದೂ ಇರಲಿ ಅಲ್ಲವೇ?” ಎಂದು, ಹೇಳುವ ಮೂಲಕ ಇನ್‍ಡೈರೆಕ್ಟ್ ಆಗಿ ಆತ ಸಂಘಟನೆಗೆ ಓಡಾಡುವುದು ‘ಅನಿವಾರ್ಯ’ ಎಂದು ಎಲ್ಲರಿಗೆ ಹೇಳಿದಂತಿತ್ತು.

ಇಷ್ಟೆಲ್ಲ ನಡೆಯುವಾಗಲೂ ನನಗೆ ವಿಶ್ವವಿದ್ಯಾಲಯ ಹೇಗಿದೆ? ಎಂಬ ಕಾತರ. ಬಹುಶಃ ಇದು ವಿಶ್ವವಿದ್ಯಾಲಯದ ಆಡಳಿತ ಕಛೇರಿ ಮಾತ್ರ ಅಂದುಕೊಂಡಿದ್ದೆ. ‘ಇದೇ ಕಛೇರಿ, ತರಗತಿ, ಗ್ರಂಥಾಲಯ………’ ಎಲ್ಲವೂ ಎಂದಾಗ ಬಹು ನಿರಾಶೆ ಆಯ್ತು. ದೊಡ್ಡ ವಿಶ್ವವಿದ್ಯಾಲಯದ ಕನಸಿನೊಂದಿಗೆ ಬಂದು ಕೆಟ್ಟ ಚಳಿ ಇರುವ ಕಾಡು ಪಾಲಾಗುವ ಸ್ಥಿತಿ ನನ್ನದಾಯಿತು. ಅಳು ಬರುವ ಸ್ಥಿತಿ. ಆಗ ವಿಶ್ವವಿದ್ಯಾಲಯ ಪ್ರಾರಂಭ ಆಗಿ ಬಹುಶಃ 2-3 ವರ್ಷ ಮಾತ್ರ ಆಗಿರಬೇಕು. ನಾನು ಓದಿದ ಹೊನ್ನಾವರದ ಎಸ್.ಡಿ.ಎಂ. ಕಾಲೇಜು ಇದಕ್ಕಿಂತ ದೊಡ್ಡದಿತ್ತು. ಧಾರವಾಡ ವಿ.ವಿ.ಯ ಒಂದೊಂದು ವಿಭಾಗ ಇದಕ್ಕಿಂತ ದೊಡ್ಡದಿತ್ತು.

ಈ ಕುರಿತು ಅಣ್ಣನಿಗೆ ಪತ್ರ ಬರೆದೆ. ನಿರಾಶೆಯನ್ನು ತಿಳಿಸಿದೆ. ಮರು ಉತ್ತರ ಸಾಂತ್ವನದ್ದು. “ವಿಶ್ವವಿದ್ಯಾಲಯದ ಕಟ್ಟಡ ನೋಡುವುದಲ್ಲ; ಅದರೊಳಗಿನ ಜ್ಞಾನ ನೋಡಬೇಕು. ಒಳ್ಳೆಯ ಅಧ್ಯಾಪಕರಿದ್ದಾರೆ; ‘ಕುವೆಂಪು’ ಹೆಸರಿನ ಸಂಸ್ಥೆಯಲ್ಲಿ ಓದುವುದು ಒಂದು ಹೆಮ್ಮೆ. ಚಿಕ್ಕ ವಿ.ವಿ.ಯಾದರೆ ನಮ್ಮನ್ನು ನಾವು ಬೇಗ ಗುರುತಿಸಿಕೊಳ್ಳಬಹುದು. ಅಧ್ಯಾಪಕರು ವೈಯಕ್ತಿಕವಾಗಿ ಹೆಚ್ಚು ಕಾಳಜಿ ವಹಿಸುತ್ತಾರೆ……”. ಎಂದೆಲ್ಲಾ ಬರೆದಿದ್ದ, ಹೀಗೆ ನನ್ನನ್ನು ಸಮಾಧಾನ ಮಾಡುವ ಕಾರ್ಡ್ ವಾರಕ್ಕೊಂದು ಬರುತ್ತಿತ್ತು. ನಂತರ ಇದು ಸತ್ಯವಾಯಿತು ಅದು ಬೇರೆ!

ಅಲ್ಲಿಂದ ಮುಂದೆ ಬಂಡಾಯ ಸಾಹಿತ್ಯ ಸಂಘಟನೆಯ ಕೊಂಡಿ ಆದೆ. ಶರ್ಮರಿಗೆ ಏನೇ ತಿಳಿಸುವುದಿದ್ದರೂ ನನಗೇ ಪತ್ರ ಬರೆಯುತ್ತಿದ್ದ. ಅಥವಾ ಹಾಸ್ಟೇಲಿಗೆ ಒಂದು ಪೋನ್ ಮಾಡುತ್ತಿದ್ದ. ಆಗ ಕಾಲ್ ಬುಕ್ ಮಾಡಬೇಕಾಗಿತ್ತು. ದೇಸಾಯಿಯವರಿಗೆ, ಎಸ್. ಶಿವಾನಂದ ಅವರಿಗೆ ಪತ್ರ ತಲುಪಿಸುವುದಿದ್ದರೆ ಆ ಕೆಲಸ ನನಗೇ ವಹಿಸುತ್ತಿದ್ದ. ನನಗೆ ಬರೆದ ಕವರ್ ನಲ್ಲಿ ಉಳಿದವರಿಗೆ ಪತ್ರ ಇಟ್ಟು, ಕೊಟ್ಟು ಬರಲು ಹೇಳುತ್ತಿದ್ದ. ಬಹುಶಃ ಅವರೆಲ್ಲರನ್ನು ನಾನು ಭೇಟಿ ಆಗಿ ಮಾತನಾಡಬೇಕೆಂದು ಅವರನ್ನು ಭೇಟಿ ಆಗುವ ಅನಿವಾರ್ಯತೆ ಸೃಷ್ಟಿಸುತ್ತಿದ್ದ.

ಪಾಠದ ಬಗ್ಗೆಯೂ ವಿಚಾರಿಸುತ್ತಿದ್ದ, ಮಾತ್ರವಲ್ಲ ಶರ್ಮ ಅವರು, ಲಕ್ಕಪ್ಪಗೌಡ ಅವರು ಪಾಠ ಮಾಡಿದ್ದನ್ನು ನಾನು ಮನೆಗೆ ಬಂದಾಗ ಅವನಿಗೆ ವಿವರಿಸುತ್ತಿದ್ದೆ. ಒಂದು ಹೊಸ ಅಂಶ ಬಂದರೆ ಖುಷಿಯಿಂದ ನೋಟ್ ಮಾಡಿಕೊಳ್ಳುತ್ತಿದ್ದ.

ವಿ.ವಿ.ಯಿಂದ ಮನೆಗೆ ಬಂದರೆ 2-3 ತಾಸು ಬಿಡುತ್ತಿರಲಿಲ್ಲ. “ಅವನು ಒಳಗೆ ಬರಲಿ, ಆಮೇಲೆ ಮಾತನಾಡಿದರಾಯಿತು” ಅಂತ ಅಕ್ಕ ಹೇಳಿದರೂ ಕೇಳುತ್ತಿರಲಿಲ್ಲ. ಅಲ್ಲಿಯ ಸುದ್ದಿ ಕೇಳಿಯೇ ಒಳಗೆ ಕಳುಹಿಸುವುದು. ಮನೆಗೆ ಹೋದಾಗ ಅಣ್ಣನಿಗೆ ವಿವರಿಸಬೇಕಾಗಿರುವುದರಿಂದ ಪಾಠ ಮಾಡುವಾಗ ಟಿಪ್ಪಣಿ ಮಾಡಿಕೊಳ್ಳಲು ನಾನು ಕಲಿತೆ.

ಬಂಡಾಯದ ಕಾರ್ಯಕ್ರಮಕ್ಕೆ ಹಲವು ಬಾರಿ ಶಿವಮೊಗ್ಗಕ್ಕೆ, ಶಂಕರ ಘಟ್ಟಕ್ಕೆ ಆತ ಬಂದಿದ್ದ. ಆಗೆಲ್ಲಾ ಆತನೇ ವಿ.ವಿ.ಯಲ್ಲಿ ಓದುತ್ತಿದ್ದಷ್ಟು ಸಂಭ್ರಮ ಆತನದು.

ವಾರಕ್ಕೆ ಒಂದೋ ಎರಡೋ ಕಾರ್ಡ ಇರುತ್ತಿತ್ತು. ಅಂತ ಪತ್ರಗಳ ಗಂಟನ್ನು ನಾನು ಕಳೆದುಕೊಂಡೆ. ಎಂತ ಅಮೂಲ್ಯವಾದದ್ದು ಎಂದು ಈಗ ತಿಳಿಯುತ್ತಿದೆ. ಆದರೆ ಕಾಲ ಮಿಂಚಿದೆ.

ಪ್ರತಿ ತಿಂಗಳು ಹಾಸ್ಟೆಲ್ ಗೆ ಮತ್ತು ನನ್ನ ಖರ್ಚಿಗೆ ಹಣ ಕಳುಹಿಸುತ್ತಿದ್ದ. ಪಾಪ ಹಣಕ್ಕಾಗಿ ತುಂಬಾ ಕಷ್ಟಪಡುತ್ತಿದ್ದ. ಆಗ ಕನ್ನಡ ಶಾಲೆಯ ಮಾಸ್ತರರಿಗೆ ಇರುವ ಸಂಬಳವೂ ಅಷ್ಟೆ. ಹಣದ ವಿಷಯದಲ್ಲಿ ಎಷ್ಟು ಪಾರದರ್ಶಕ ಆಗಿದ್ದನೆಂದರೆ 100 ರೂ. ಸಂಬಳ ಹೆಚ್ಚಾದರೂ ಪತ್ರ ಬರೆಯುತ್ತಿದ್ದ. ತಿಂಗಳ ಖರ್ಚಿನ ಲೆಕ್ಕವನ್ನೂ ನನಗೆ ಹೇಳುತ್ತಿದ್ದ. ಹಣ ಇಲ್ಲದಿದ್ದಾಗ ಅಲ್ಲೇ ಹತ್ತಿರ ಕತ್ತಲಗೆರೆಯಲ್ಲಿ ಹೈಸ್ಕೂಲು ಶಿಕ್ಷಕಿಯಾಗಿ ನೌಕರಿ ಮಾಡುತ್ತಿರುವ ಮಾಧವಿಯಿಂದ ಹಣ ಪಡೆಯಲು ಹೇಳುತ್ತಿದ್ದ.

ಒಂದೆರಡು ಪತ್ರದ ಸ್ಯಾಂಪಲ್ ಇದು.

ಆರ್.ವಿ. 13-12-1990

ಪ್ರಿಯ ವಿಠ್ಠಲ, ನಿನ್ನ ಪತ್ರ ಬಂದಿದೆ.

ಶರ್ಮರಿಗೂ ಬರೆಯುತ್ತೇನೆ.

ಮಾದೇವಿ ರೂ. 200 ಕಳಿಸಿದ್ದಾಳೆ. ನನ್ನ ಹತ್ತಿರ 200 ಇದೆ. ಈಗ ಮಾದೇವಿಗೆ ಹಣ ಕೊಡಲು ತೊಂದರೆ ಆಗಬಹುದಲ್ಲಾ? ನಿನಗೆ ಕೊಡಲೇಬೇಕಾದರೆ ಒಂದು ತಂತಿ ಕೊಡು. ನಾನು ಕಳುಹಿಸುತ್ತೇನೆ. ಅದಿಲ್ಲದಿದ್ದರೆ ಹಣ ಮಾದೇವಿ ಕಳಿಸಿದ್ದನ್ನು ಅಪ್ಪಚ್ಚಿ ಅಂಗಡಿಗೆ (ನಾವು ಸಾಮಾನು ತರುವ ಅಂಗಡಿ ಅದು) ಕೊಡುತ್ತೇನೆ. 700 ಕೊಟ್ಟಿದ್ದೇನೆ. ಇನ್ನು ಸುಮಾರು 700 ಆಗುತ್ತದೆ. ತೊಂದರೆ ಇಲ್ಲ.

ಶಾಂತಾರಾಮ (ನಾಯಕ) 25 ಕೇಳಿದ್ದ, ಕಳಿಸಿದ್ದೆ. 25 ಕಟ್ಟೀಮನಿ ಸಂಚಿಕೆಗೆ ಕೇಳಿದ್ದರು ಕಳಿಸಿದೆ. ಅಂಬೇಡ್ಕರ್ ವಾಹಿನಿಗೆ 30 ಕಳಿಸಿದೆ. ಹಾಗೆಯೇ ಕೆಂಬಾವುಟಕ್ಕೆ 35 ಕಳಿಸಿದೆ. ಮುಂದಿನ ತಿಂಗಳು ಸಂಕ್ರಮಣಕ್ಕೆ ಕಳುಹಿಸಬೇಕು 50.

ಇಲ್ಲಿ ಚಳಿ ಬೀಳುತ್ತಿದೆ. ಪ್ರಾರಂಭದಲ್ಲಿ ಒಂದು ಕಂಬಳಿ ಚಳಿ, ರಾತ್ರಿ ಇರುವುದಿಲ್ಲ. ಸಂಕ್ರಮಣದಲ್ಲಿ ವಿ.ಗ. ನಾಯ್ಕ ‘ಒರೆಗಲ್ಲು’ ಬಗ್ಗೆ ನನ್ನ ಬರೆಹ ಬಂದಿದೆ. ನೋಡಿದೆಯಾ.

ಶರ್ಮಾರ ಬಗ್ಗೆ ವಿಷಾದ. ಮತ್ತೆಲ್ಲಾ ಒಳಿತು. ಪತ್ರ ಬರೆ

ನಿನ್ನ ಅಣ್ಣ.”

ಹೀಗೆ ಹಣ ಕಳುಹಿಸಲು ತೊಂದರೆ ಆದಾಗ ನೋವಿನಿಂದ ಪತ್ರ ಬರೆಯುತ್ತಿದ್ದ.

ಪ್ರಿಯ ವಿಠ್ಠಲ ಆಶೀರ್ವಾದ..

ನಿನಗೆ ಈ ತಿಂಗಳು ರೂ. 500/-ದ ಚೆಕ್ ಮೂಲಕ ಕಳುಹಿಸುತ್ತೇನೆ.. ಬೇಗ ಬೇಕು ಎಂದರೆ ಡಿ.ಡಿ.ಯೇ ಯೋಗ್ಯ ಅಂತೂ ಹಣ ಕಳುಹಿಸುತ್ತೇನೆ.

ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮಾದೇವಿಯಿಂದ ಹಣ ಕೇಳಿದೆ. ನನಗೂ ಅವಳಿಂದ ಹಣ ಪಡೆಯುವುದು ಮನಸ್ಸಿಲ್ಲ. ಹಣದ ವಿಷಯದಲ್ಲಿ ನನ್ನಷ್ಟು ಅವಮಾನ ಹೊಂದಿದವರು ಅಪರೂಪವೇನೋ, ಆದರೂ ಉಪಾಯವಿಲ್ಲವಾಗಿದೆ.

ನಿನಗೆ ಹಣ ಕಳಿಸುವುದರಿಂದ ನನ್ನ ಚಟುವಟಿಕೆಗಾಗಿ (ಕುಂಠಿತ ಆಗುವ ಕುರಿತು) ಬೇಸರವಿಲ್ಲ. ಅದು ಅಷ್ಟು ಮುಖ್ಯವೂ ಅಲ್ಲ.”

ನಿನ್ನ ಅಣ್ಣ

ಆದರೆ ನಾನು ನನ್ನ ಅಗತ್ಯಕ್ಕಿಂತ ಕಡಿಮೆ ಹಣ ಕೇಳುತ್ತಿದ್ದೆ. ಸಂಘಟನೆಗಾಗಿ ಭದ್ರಾವತಿ, ಚಿಕ್ಕಮಗಳೂರು, ಶಿವಮೊಗ್ಗ ಓಡಾಡುತ್ತಿದ್ದೆ. ಓಡಾಟಕ್ಕೆ ಒಂದಿಷ್ಟು ಹಣ ಖರ್ಚಾಗುತ್ತಿತ್ತು. ಹಾಸ್ಟೆಲ್ ಬಿಲ್ ಕಟ್ಟಲು ತೊಂದರೆ ಆಗುತ್ತಿತ್ತು. ಕೆಲವೊಮ್ಮೆ ಶರ್ಮ ಮೇಷ್ಟ್ರ ಮನೆಯಲ್ಲಿ ಊಟ. ಒಂದಿಷ್ಟು ದಿನ ಹಾಸ್ಟೆಲ್ ಕಾರ್ಡ್ ವಾಪಸು ಹಾಕುತ್ತಿದ್ದೆ. ಪುಸ್ತಕ ಮನೆಯಲ್ಲಿತ್ತು. ಉಳಿದದ್ದು ಶರ್ಮ ಮೇಷ್ಟ್ರು ಮನೆ. ಹಾಗೂ ಹೀಗೂ ಎಂ.ಎ. ಮುಗಿಯಿತು. ಯಾವ ತೊಂದರೆ ಇಲ್ಲದೆ.

ಈಗಲೂ ಅನ್ನಿಸ್ತದೆ ನಾನು ಕುವೆಂಪು ವಿ.ವಿ. ಬಿಟ್ಟು ಬೇರೆ ಎಲ್ಲೇ ಹೋಗಿದ್ದರೆ ಒಂದಿಷ್ಟು ಓದಲು ಆಗ್ತಿರಲಿಲ್ಲ. ನಮಗೆ ಪಾಠ ಮಾಡುವವರು 4-5 ಜನ ಮಾತ್ರ. ಮಕ್ಕಳ ವೈಯಕ್ತಿಕ ಪರಿಚಯ; ಸಂಜೆ ಅಂಗಡಿ ಕಡೆ ಕಂಡರೆ, ಲೇಡೀಸ್ ಹಾಸ್ಟೆಲ್ ಕಡೆ ಕಂಡರೆ ಮುಗಿಯಿತು! ಬೆಳಿಗ್ಗೆ ಕ್ಲಾಸಿಗೆ ಬಂದೋರೆ ಕೇಳೋರು. ‘ಅಲ್ಲೇನ್ ಕೆಲಸ’ ಅಂತ.

ಹಾಗಾಗಿ ಲವ್ ಇಲ್ಲ, ಹುಡುಗೀರ ಜೊತೆ ಸುತ್ತಾಟ ಇಲ್ಲ…. ಸ್ವಲ್ಪ ‘ಡ್ರೈ’ ಆದ್ರೂ… ಓಕೆ. ಚೆನ್ನಾಗಿತ್ತು. ಆಮೇಲೆ ಇಲ್ಲೆ ಡಾ. ಶರ್ಮ ಮೇಸ್ಟ್ರ ಮಾರ್ಗದರ್ಶನದಲ್ಲಿ ಪಿಎಚ್. ಡಿಯನ್ನೂ ಮಾಡಿದೆ. ಆಗ ಆತನಿಗೆ ಅನಾರೋಗ್ಯ. ಆದರೂ ಕೇಳಿ ಸಂತೋಷ ಪಟ್ಟಿದ್ದ. ಕಣ್ಣಲ್ಲಿ ಹನಿಗೂಡಿದ್ದವು.

ಬರೀ ಸಂಘಟನೆ, ಓಡಾಟ ಅಂತ ಇದ್ಯೋ ಅಥವಾ ಹುಡ್ಗೀರ್ ಅಂತ… ಇದ್ದರೆ ಹೇಳು… ಇರ್ಬಾರ್ದು ಅಂತಿಲ್ಲ.. ವಯಸ್ಸಿನಲ್ಲಿ ಅದಿರೋದೆ. ಅದು ವ್ಯಸನ ಆಗಬಾರದು. ಯಾರಿಗೂ ಮೋಸ ಮಾಡ್ಬಾರ್ದು. ಜಾತಿಗೀತಿ ಏನಿಲ್ಲ. ಯಾವ ಧರ್ಮ ಆದ್ರೂ ತೊಂದರೆ ಇಲ್ಲ…. ಮದ್ವೆ ಮಾಡಿಸ್ತೇನೆ…… ಅಥವಾ ನೀನೇ ಮದ್ವೆ ಆಗಿ ಬಂದು ಮದ್ವೆ ಆಗಿದ್ದೇನೆ ಅಂತ ಹೇಳಿದ್ರೂ ಆಯ್ತು. ನಿನ್ನ ಅಕ್ಕ ಸ್ವಲ್ಪ ಬೇಜಾರು ಮಾಡ್ಕೋಬಹುದು. ಅವಳಿಗೆ ನಾನು ಹೇಳ್ತೇನೆ. ಏನಾದ್ರೂ ಇದ್ರೆ ಹೇಳಿಬಿಡು ಅಂತ ಅರ್ಧ ತಮಾಷೆ ಇನ್ನರ್ಧ ಗಂಭೀರವಾಗಿ ಹೇಳಿದ್ದು ಈಗ ನೆನಪು.

‍ಲೇಖಕರು Avadhi

November 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: