ಅಖಿಲ ಭಾರತದ ಪ್ರಜ್ಞಾವಸ್ಥೆಯಲ್ಲಿರೋ ಪ್ರಜೆಗಳು, ಗೆಳೆಯರು, ಬಂಧು-ಬಾಂಧವರೆಲ್ಲರೂ ಇಷ್ಟುದ್ದ ಬರಹವನ್ನು ಓದಲೇಬೇಕಾಗಿ,
ನಂತರ ಈ ಬರಹದ ಕೊನೆಯಲ್ಲಿ ಅಟ್ಯಾಚ್ ಮಾಡಿರುವ ವಿಡಿಯೋ ನೋಡಲೇಬೇಕಾಗಿ ವಿನಂತಿ..
ಅಂತ ಕೇಳಿದ್ದಾರೆ ವೈರಸ್ ವೀರು. ಇಲ್ಲಿ ಸಾಕಷ್ಟು ಗಂಭೀರ ಪ್ರಶ್ನೆಗಳಿವೆ.
ಚರ್ಚೆಗೆ ಸ್ವಾಗತ

ವೈರಸ್ ವೀರು
ನಾವುಗಳು ಚಿಕ್ಕ ವಯಸ್ಸಲ್ಲಿದ್ದಾಗ ಒಂದು ಕುತೂಹಲವಿರುತ್ತಿತ್ತು.. “ಮಕ್ಕಳು ಹೆಂಗ್ ಹುಟ್ತಾರೆ?” ಅಂತ, ನಮ್ಮಲ್ಲಿ ಹುಟ್ಟಿದ ಪ್ರಶ್ನೆಯನ್ನ ತಣಿಸಲು ನಮ್ಮ ಹೆತ್ತವರು ಮತ್ತು ದೊಡ್ಡವರು ಕೊಡುತ್ತಿದ್ದ ಉತ್ತರಗಳು ಥರಥರ ನಾನಾಥರ ಇರೋದು.. “ದೇವರು ಮಗು ಕೊಡ್ತಾನೆ” ಅನ್ನೋರು, “ನೀನು ದೊಡ್ಡವನಾದ ಮೇಲೆ ನಿಂಗೆ ಗೊತ್ತಾಗತ್ತೆ”, “ಕೂಸಮ್ಮ ಕತ್ಲೊತ್ತಲ್ಲಿ ಬಂದು ಮಕ್ಕಳನ್ನ ಕೊಡ್ತಾಳೆ..!” ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಕೊಟ್ಟು ಮಕ್ಕಳನ್ನ ಸಮಾಧಾನ ಮಾಡ್ತಾ ಇದ್ರು.. ಆ ವಯಸ್ಸಿನ ಮಕ್ಕಳಿಗೆ “ಸೆಕ್ಸ್” ಅಂತ ಒಂದು ಪದ ಪರಿಚಯ ಮಾಡೋ ಧೈರ್ಯ ಯಾರಿಗೂ ಇರಲ್ಲ ಬಿಡಿ.. ನಿಧಾನವಾಗಿ ನಮ್ಮಗಳಿಗೇ ಒಂದು ವಿಷಯ ಅರ್ಥ ಆಗೋಯ್ತು, ಈ ದೊಡ್ಡೋರು ಅನ್ನಿಸ್ಕೊಂಡೋರು ನಮಗೆ ಸುಳ್ಳು ಹೇಳಿದ್ದಾರೆ.. “ಮಕ್ಕಳಾಗೋದು ಮದ್ವೆ ಆದ್ಮೇಲೆ” ಅಂತ ತಿಳ್ಕೊಂಡ್ವಿ.. “ಮದ್ವೆ ಆದ್ಮೇಲೆ ಗಂಡ ಹೆಂಡ್ತಿ ಸೇರಿಕೊಂಡು ಹೇಗೆ ಮಕ್ಕಳನ್ನ ಮಾಡ್ತಾರೆ” ಅನ್ನೋದು ನಮಗೆ ಹೊಚ್ಚ ಹೊಸಾ ಸರ್ಪ್ರೈಸ್ ಪ್ರಶ್ನೆ..!?
ಇದೊಂದು ಉತ್ತರರೂಪದ ಪ್ರಶ್ನೆ ಸಿಕ್ಕಿದ್ದರ ಬೆನ್ನಿಗೆ ಇನ್ನೂ ಒಂದು ಹೊಸಾ ಉತ್ತರ ಕಂಡುಕೊಳ್ತೀವಿ, ಅವರಿಬ್ಬರ ಮಧ್ಯೆ “ಸೆಕ್ಸ್” ಆಗತ್ತೆ ಅಂತ..! ಅದನ್ನ ತಿಳಿಸುವವರು ನಮ್ಮ ಸುತ್ತಲೇ ಇರುವ ಪೋಲಿ ಅಂಕಲ್ಲುಗಳು ಅಥವ ನಮಗಿಂತ ಮೊದಲೇ ಒಂಚೂರು ಬೇಗ “ಪುರುಷಾರ್ಥವನ್ನು ಅಡಿಗೇರಿಸಿಕೊಂಡ” ಗಂಡೈಕ್ಳು..! ಆದ್ರೆ ಅವರೂ ಕೂಡ ‘ಸೆಕ್ಸ್’ ಕುರಿತು ಪೂರ್ತಿ ಡೀಟೈಲ್ಸ್ ಕೊಡಲ್ಲ..! ಅದೇನೂ ಸ್ವಾರ್ಥವೋ? ಸೆಕ್ಸ್ ಅನ್ನೋದು ದೊಡ್ಡೋರಿಗೆ ಮಾತ್ರ ಕಾದಿರಿಸಲಾದ ಹಕ್ಕೋ? ಅಥವ ದೊಡ್ಡೋರಾದ ಮೇಲೆ ಮಾತ್ರ ತಿಳಿದುಕೊಳ್ಳಬಹುದಾದಷ್ಟು ಕ್ಲಿಷ್ಟಕರವಾದ ಸಂಗಂತಿಯೋ?? ಒಟ್ಟಲ್ಲಿ ಅದನ್ನ ತಿಳ್ಕೋಳೋಕ್ಕಾದ್ರೂ ಇಮ್ಮೀಡಿಯಟ್ ದೊಡ್ಡೋರಾಗಬೇಕು ಅನ್ನೋ ‘ಆತುರ, ಕಾತುರ, ಸಂಕಟಗಳು’ ಹೊಟ್ಟೆ ಒಳಗೆ ‘ಮಿಳಮಿಳ’ ಅಂತ ಒದ್ದಾಡೋಕೆ ಶುರುವಾಗತ್ತೆ..
ಒಂದು ಹಂತಕ್ಕೆ ಕುತೂಹಲ ಮಿತಿಮೀರಿದಾಗ ಬಸ್ ಸ್ಟಾಂಡ್ ಅಕ್ಕಪಕ್ಕದ ಪೇಪರ್ ಅಂಗಡಿಗಳಲ್ಲಿ ನೇತುಹಾಕಿದ್ದ ‘ಸೆಕ್ಸ್’ ಮ್ಯಾಗಝೀನುಗಳು ನಮ್ಮನ್ನ ಸೆಳೆಯತ್ತೆ.. ಅದನ್ನು ತಗೊಂಡು ಓದ್ತೀವಿ, ಅದರಲ್ಲಿ ಒಂದಷ್ಟು ಚಿತ್ರಗಳು ಮತ್ತು ಕಾಮಕೇಳಿಯ ಕಥೆಗಳ ಜೊತೆ ನಮ್ಮ ಕುತೂಹಲವನ್ನು ಸಾಧ್ಯಂತ ತಣಿಸಿಬಿಡ್ತಾರೆ.. ಅದಕ್ಕೆ ಫೈನಲ್ ಟಚ್ ಕೊಟ್ಟಿದ್ದು ಹೈಸ್ಕೂಲಿನಲ್ಲಿ ನಮ್ಮ ಸೈನ್ಸ್ ಮೇಸ್ಟ್ರು! “ಅದ್ರಲ್ಲೇನ್ರುಡ ಇದ್ದದು? ವಯಸ್ಸಿಗೆ ಬರ್ತಿದ್ದಂಗೆ ಹುಡುಗ್ರಲ್ಲಿ ವೀರ್ಯಾಣು ಉತ್ಪತ್ತಿ ಆಗತ್ತೆ, ಹುಡುಗೀರಲ್ಲಿ ಅಂಡಾಣು ಉತ್ಪತ್ತಿ ಆಗತ್ತೆ..” ಅಂತ ಒಂದೇ ಕ್ಲಾಸಲ್ಲಿ ವೀರ್ಯ-ಅಂಡದ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಕೊಡ್ತಾರೆ ಮತ್ತು ಅವೆರಡೂ ಸೇರಿ ಮಗು ಗರ್ಭಕಟ್ಟೋ ಬಗ್ಗೆ ಹೇಳಿಬಿಡ್ತಾರೆ.. ಚಿಕ್ಕ ವಯಸ್ಸಿನ ಕುತೂಹಲಕ್ಕೆ ತಕ್ಕ ಉತ್ತರ ಹೈಸ್ಕೂಲಿಗೆ ಬಂದಾಗ ಸಿಕ್ಕಿದ್ದು..!! ಕೆಲವರಿಗೆ ಅದನ್ನು ತಿಳಿಯುವ ಮುನ್ನವೇ ಅವರ ಪುರುಷಾರ್ಥದ ಪರಿಚಯವಾಗಿರತ್ತೆ, ಕೆಲವರು ಅದನ್ನು ತಿಳಿದ ನಂತರ ಸ್ವಪ್ರಯತ್ನದಿಂತ ತಮ್ಮಲ್ಲಿರಬಹುದಾದ ಸೃಷ್ಟಿಶಕ್ತಿಯ ಪರೀಕ್ಷೆಗೆ ಮುಂದಾಗಿರುತ್ತಾರೆ.. ಅದರೊಟ್ಟಿಗೇ ಮದುವೆಯಾಗದೆಯೂ ಮಕ್ಕಳಾಗ್ತವೆ ಅನ್ನೋದನ್ನೂ ತಿಳ್ಕೊಂಡು ಆ ಮ್ಯಾಟ್ರು ಅಲ್ಲಿಗೆ ಬಿಡುವ, ಅದು ನಮ್ ಜಮಾನದ್ ಕಥೆ..!
ಈ ಜಮಾನ ಹಂಗಿಲ್ಲವೇ ಇಲ್ಲ.. ಏನೇ ತಿಳಿದುಕೊಳ್ಳಲು ಪ್ರಯತ್ನಿಸಿದರೂ ಅದು ಬೆರೆಳ ತುದಿಯಲ್ಲಿ ಇದೆ.. ಫಟಾಫಟ್ ವಿಡಿಯೋ ರೆಫರೆನ್ಸ್ ವಿಥ್ ರಿವ್ಯೂ ಅಂಡ್ ರೇಟಿಂಗ್ಸ್!! ಮೇಸ್ಟ್ರುಗೇ ಸೆಕ್ಸ್ ಎಜುಕೇಷನ್ ಕೊಡೋ ಅಷ್ಟರ ಮಟ್ಟಿಗೆ ಸ್ಟುಡೆಂಟ್ಸ್ ಸುಶಿಕ್ಷಿತರಾಗಿದ್ದಾರೆ..! ಇಂಥಾ ಸೂಪರ್ ಸ್ಪೀಡ್ ಆಧುನಿಕ ಕಾಲದಲ್ಲಿ ಅಸ್ಥಿತ್ವದಲ್ಲಿರುವ ನಮ್ಮ ಸೆನ್ಸಾರ್ ಮಂಡಳಿಯ ರೂಲ್ಸುಗಳು ಮತ್ತು ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಮನಸ್ಥಿತಿಗಳು ಅದ್ಯಾವುದೋ ತಾತನ ಕಾಲದ ‘ಶೀಲ’ಯುಗದಲ್ಲಿ ಉಳಿದುಹೋಗಿರುವುದು ಅವರ ಬೌದ್ಧಿಕ ದಾರಿದ್ರ್ಯವನ್ನು ಎತ್ತಿ ತೋರಿಸುತ್ತದೆ..
ನಮ್ಮದೇ ಸಮಾಜದಲ್ಲಿ ಬದುಕುತ್ತಿರುವ ಯುವಕ-ಯುವತಿಯರು ತಮ್ಮೊಳಗಿನ sex desire ಕುರಿತು ಎಷ್ಟು ಓಪನ್ನಾಗಿದ್ದಾರೆ, ಅವರು ಯಾವುದೇ ವಿಚಾರಗಳನ್ನು ಮಾತನಾಡಲು ಮತ್ತು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳೋದರಲ್ಲಿ ಎಷ್ಟು ಮುಂದಿದ್ದಾರೆ ಮತ್ತು ಅವರ ದೃಷ್ಟಿಕೋನ ಹೇಗಿದೆ, ಇತ್ಯಾದಿಗಳನ್ನ ತಿಳಿದುಕೊಳ್ಳಲು ಅವರುಗಳ ಜೊತೆ ಐದು ನಿಮಿಷ ಮುಕ್ತವಾಗಿ ಮಾತನಾಡಿದರೆ, ಅರ್ಧ ಗಂಟೆ ಕುಂತು ಯೂಟ್ಯೂಬಲ್ಲಿ ನೋಡಿದರೇ ಸಾಕು.. ಸೆಕ್ಸ್ ಅನ್ನೋದು ಎಲ್ಲ ವಿಷಯಗಳಂತೆ ಸರ್ವೇ ಸಾಮಾನ್ಯ ಅನ್ನೋ ಮನಸ್ಥಿತಿ ನಿರ್ಮಾಣವಾಗಿದೆ.. ‘ಸೆಕ್ಸ್’ ಅನ್ನೋದು ಮಾತಾಡಿದ್ರೆ ನಾಲಿಗೇಲಿ ಹುಳ ಬಿಳ್ತವೆ ಅನ್ನೋ ಅಷ್ಟು ನೀಚವಾದ ವಿಷಯವಾಗಿ ಉಳಿದಿಲ್ಲ ಮತ್ತು ಯಾವ ಕಾಲಕ್ಕೂ ಅದು ನೀಚವಾದುದಾಗಿರಲಿಲ್ಲ.. “ಬೋಜನ-ಮೈಥುನ-ಶಯನ” ಈ ಮೂರೂ ಮನುಷ್ಯನಿಗೆ ಅತ್ಯಾವಶ್ಯಕ ಅನ್ನೋದು ಸಾಮಾನ್ಯ ಜ್ಞಾನ! ಆದ್ರೆ ಸೆಕ್ಸ್ ಸಂಬಂಧೀ ದೃಶ್ಯಗಳಿಗೆ, ಮಾತುಗಳಿಗೆ ‘cut-beep’ ಕೊಡುವ ಸೆನ್ಸಾರ್ ಮಂಡಳಿ, ಈಗಿನ ಫಾಸ್ಟ್ ಜನರೇಷನ್ನಿನ ದೃಷ್ಟೀಲಿ “ಜೀವನದಲ್ಲಿ ಜಿಗುಪ್ಸೆ ಬಂದು, ಸಂಸಾರ ಮತ್ತು ಮೈಥುನಗಳಿಂದ ವಿರಕ್ತರಾಗಿ ಶತಮಾನಗಳಷ್ಟು ಹಿಂದೆ ಉಳಿದ ಸನ್ಯಾಸಿಗಳ ಮಂಡಳಿಯಂತೆ ಕಾಣ್ಸತ್ತೆ..!”
ಕೆಲವು ಉದಾಹರಣೆಗಳನ್ನು ಗಮನಿಸಿ :
1. ‘ಆ್ಯಂಗ್ರಿ ಇಂಡಿಯನ್ ಗಾಡೆಸ್’ ಮತ್ತು ‘ಹೇಟ್ ಸ್ಟೋರಿ ಥ್ರೀ’ ಈ ಎರಡೂ ಹಿಂದಿ ಸಿನೆಮಾಗಳಲ್ಲಿ ‘Fuck’ ಅನ್ನೋ ಪದಕ್ಕೆ ಬೀಪ್ ಸೌಂಡ್..
2. ‘ಪ್ರೇಮ್ ರಥನ್ ಧನ್ ಪಾಯೋ’ ಸಿನೆಮಾದಲ್ಲೊಂದು ಡೈಲಾಗ್ ಇದೆ ‘ರಖೈಲ್’ ಅಂದ್ರೆ ‘ಇಟ್ಕೊಂಡೋಳು’ ಅಂತ ಅರ್ಥ, ಆ ಪದ mute.
3. ‘ಲವ್ ಶುಧಾ’ ಸಿನೆಮಾದ ಟ್ರೈಲರ್ ನಲ್ಲಿ ಹೀರೋಯಿನ್ ಬಾಯಲ್ಲಿ ಬರೋ “Bed” ಅನ್ನೋ ಪದಕ್ಕೆ ಬೀಪ್ ಕೊಡಲಾಗಿದೆ.. ಬೆಡ್ ಅಂದ್ರೆ ಬರೀ ಸೆಕ್ಸ್ ಗೆ ಇರೋದಲ್ಲ, ನಿದ್ರೆ ಮಾಡೋಕೂ ಅನ್ನೋದು ಕಾಮನ್ ಸೆನ್ಸು!
4. ‘ಶೋಲೆ’ ಸಿನೆಮಾದ ಇಡೀ ಕ್ಲೈಮ್ಯಾಕ್ಸಿಗೆ ಕ್ಲೈಮ್ಯಾಕ್ಸನ್ನೇ Violence ಅಂತ ಚಿತ್ರದಿಂದ ತೆಗೆದು ಹಾಕಲಾಗಿ, ನಿರ್ದೇಶಕ ರಮೇಶ್ ಸಿಪ್ಪಿ ಕ್ಲೈಮ್ಯಾಕ್ಸನ್ನ ಮರುಚಿತ್ರೀಕರಣ ಮಾಡಿದ್ದಾರೆ.
5. ‘ಕಟ್ಟಿ ಬಟ್ಟಿ’ ಸಿನೆಮಾದಲ್ಲಿ ಕಂಗನಾ ಹೇಳುವ ‘Boobs’ (ಸ್ತನ) ಅನ್ನೋ ಪದವನ್ನ mute ಮಾಡಲಾಗಿದೆ.. “ಮೊಲೆಹಾಲು ಕುಡಿದು ಬೆಳೆದ ಮಗು” ಅನ್ನೋ ಡೈಲಾಗ್ ಇದ್ರೆ ಬಿಡ್ತಾರೇನೋಪಾ!!?
5. ‘ನೋ ಒನ್ ಕಿಲ್ಡ್ ಜೆಸ್ಸಿಕಾ’ ಸಿನೆಮಾದಲ್ಲಿ ರಾಣಿ ಮುಖರ್ಜಿ ಮಿಡಲ್ ಫಿಂಗರ್ ತೋರಿಸೋ ಶಾಟ್ ಡಿಲೀಟ್/blur ಆಗಿದೆ..
6. ‘ಸ್ಪೆಕ್ಟರ್’ ಸಿನೆಮಾದಲ್ಲಿ ಜೇಮ್ಸ್ ಬಾಂಡ್ ಮೊನಿಕಾ ಬೆಲ್ಲುಚಿ ನಡುವೆ ಸಂಭವಿಸುವ ಲಿಪ್ ಕಿಸ್ ಡಿಲೀಟ್!! ಪ್ರಕೃತಿಸಹಜ ಮಧುರ ಚುಂಬನ ನೋಡೋ ಭಾಗ್ಯ ನಮಗಿಲ್ಲದೇ ಹೋಯ್ತು..!
7. ‘ಲೈಫು ಇಷ್ಟೇನೆ’ ಕನ್ನಡ ಸಿನೆಮಾದ ಕ್ಯಾಪ್ಷನ್ “Move on sucker” ಅಂತ ಇತ್ತು, ಅದರಲ್ಲಿ Sucker ಪದವನ್ನ ಕಿತ್ತು ಹಾಕಲಾಯ್ತು.. ಕಾರಣ ಆ ಪದ ಅಶ್ಲೀಲವಂತೆ.. Suck ಅನ್ನೋ ಪದದ ಅರ್ಥ ತಿಳಿಯದ ಮೌಢ್ಯದ ಪರಮಾವಧಿ ನಮ್ಮ ಸೆನ್ಸಾರ್ ಅಧಿಕಾರಿಗಳದ್ದು!! Sucker ಅನ್ನೋ ಪದ ಕಿತ್ತು ಹಾಕಿಯೂ U/A ಸರ್ಟಿಫಿಕೇಟ್ ಕೊಡಲಾಯ್ತು.. ಕಾರಣ ಇಷ್ಟೇ, ಹಾಡೊಂದರಲ್ಲಿ “ದಿಗಂತ್ ಮತ್ತು ಸಂಯುಕ್ತ ನಡುವೆ ಅತೀ ಸಣ್ಣ ಅವಧಿಯ ಚುಂಬನದ ಚಿತ್ರಿಕೆ” ಇದೆ ಮತ್ತು ಸಿನೆಮಾದ ಒಂದು ದೃಶ್ಯದಲ್ಲಿ ‘ಕಾಂಡೋಮ್’ ಅನ್ನೋ ಪದ ಬಳಸಲಾಗಿದೆ..! ಆ ಕಡೆ ಸರ್ಕಾರದ ಒಂದು ಇಲಾಖೆ ಕಾಂಡೋಮ್ ಬಗ್ಗೆ “ಮಾತಾಡೋನೆ ಮಹಾಶೂರ, ಮುಕ್ತವಾಗಿ ಮಾತನಾಡಿ” ಅಂತ ಹೇಳತ್ತೆ, ಅದೇ ಸರ್ಕಾರದ ಮತ್ತೊಂದು ಅಂಗವಾದ ಸೆನ್ಸಾರ್ ಮಂಡಳಿ “ಕಾಂಡೋಮ್” ಪದವನ್ನ ನಿಷಿದ್ಧ ಅಂತ ಹೇಳತ್ತೆ!!
8. ‘ಲೂಸಿಯಾ’ ಕನ್ನಡ ಸಿನೆಮಾದ ಒಂದು ದೃಶ್ಯದಲ್ಲಿ ಸತೀಶ್ ಒಂದು ಸಿನೆಮಾ ಪೋಸ್ಟರ್ ಮುಂದೆ ಮೂತ್ರ ವಿಸರ್ಜೆನೆ ಮಾಡೋವಾಗ ಪೊಲೀಸನೊಬ್ಬ “ಏಯ್ ಸಿನೆಮಾ ಪೋಸ್ಟರ್ ಮುಂದೆ ಲಾಟಿ ಹಿಡ್ಕೊಂಡು ಏನ್ ಮಾಡ್ತಾ ಇದೀಯೋ?” ಅಂತ ಕೇಳುವ ಸಂಭಾಷಣೆ ಇದೆ.. ‘ಲಾಟಿ’ ಅನ್ನೋ ಪದ ಕೇಳ್ಸಲ್ಲ, ಸೆನ್ಸಾರ್ ಕಟ್!!
9. ‘ಗೂಗ್ಲಿ’ ಸಿನೆಮಾದಲ್ಲಿ ಸಾಧು ಕೋಕಿಲ ಹೇಳುವ “ಖಾಕಿ ಕಲರ್ ಕುಲ್ಫಿ” ಅನ್ನುವ ಇಡೀ ಸಂಭಾಷಣೆ ಡಿಲೀಟ್ ಆಗಿದೆ.. ಅದೇ ಸಿನೆಮಾದ ಒಂದು ಹಾಡಿನ ಹಿನ್ನೆಲೆಯಲ್ಲಿ ವಿದೇಶಿ ಜೋಡಿಯೊಂದು ಲಿಪ್ ಕಿಸ್ ಮಾಡುವ ಚಿತ್ರಿಕೆ blur ಮಾಡಲಾಗಿದೆ..
ಇಂಥ ಸಾವಿರ ಬಾಲಿಶವೆನ್ನಬಹುದಾದಂತಹ ನಿರ್ಧಾರಗಳು ನಮ್ಮ ಸೆನ್ಸಾರ್ ಮಂಡಳಿಯಿಂದ ತಗೆದುಕೊಳ್ಳಲ್ಪಡುತ್ತಿವೆ.. ಒಂದು ಸಿನೆಮಾದಲ್ಲಿ ಯಾವುದೇ ಒಂದು ಪಾತ್ರ ಒಬ್ಬ ಸ್ಟಾರ್ ನಟನ ಹೆಸರು ಹೇಳಿ “ತಾನು ಆತನ ಅಭಿಮಾನಿ” ಅಂದಿದ್ದರೂ ಆ ನಟನಿಂದ NOC ತೆಗೆದುಕೊಂಡು ಬರಲು ಹೇಳಿದ್ದಾರೆ, ಇಲ್ಲವಾದ್ದಲ್ಲಿ ಆ ಸಂಭಾಷಣೆಗೆ ಕತ್ತರಿ.. ಧೂಮಪಾನ ಮತ್ತು ಮದ್ಯಪಾನದ ದೃಶ್ಯಗಳಿರುವಲ್ಲಿ ‘ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಅಡಿಬರಹ ಕೊಡಬೇಕು.. ಒಬ್ಬ ಸಿನೆಮಾಕರ್ತೃ ಸಿನೆಮಾ ಮಾಡೋದು ತನ್ನೊಳಗಿನ ಆಶಯವನ್ನು ಜನರಿಗೆ ತಲುಪಿಸಲೆಂದೋ, ತನ್ನ ಅಭಿವ್ಯಕ್ತಿ ಸ್ವಾತಂತ್ರವನ್ನು ವ್ಯಕ್ತಪಡಿಸಲೋ ಅಥವ ದೂಮಪಾನ ಮತ್ತು ಮದ್ಯಪಾನದ ವಿರುದ್ಧದ ಸಂದೇಶ ಕೊಡಲೋ, ನಗ್ನತೆ, ಅರೆನಗ್ನತೆ, ಚುಂಬನ ಮತ್ತು ಸೆಕ್ಸ್ ಸಂಬಂಧಿ ವಿಷಯಗಳು ಮೈಲಿಗೆ ಎಂದು ಜನರನ್ನು ಅವುಗಳಿಂದ ದೂರ ಇಡುವುದಕ್ಕೋ ಅನ್ನುವ ಸಂದೇಹ ಹುಟ್ಟಿಬಿಡತ್ತೆ..!?
ಸರಿ, ಸಿನೆಮಾದಲ್ಲಿ ಧೂಮಪಾನ ಮತ್ತು ಮದ್ಯಪಾನವನ್ನು ತೋರಿಸುವುದರಿಂದ, ಅದನ್ನು ವೈಭವೀಕರಿಸುವುದರಿಂದ, ನಗ್ನತೆ ಅರೆನಗ್ನತೆ, ಚುಂಬನ, ಇತ್ಯಾದಿಗಳಿಂದ ಜನ ದಾರಿತಪ್ಪುತ್ತಾರೆಂದುಕೊಳ್ಳೋಣ.. ಸಿನೆಮಾಗಳಲ್ಲಿ ಸಿಗರೇಟ್ ಪ್ಯಾಕ್ ಮತ್ತು ಮದ್ಯದ ಬಾಟ್ಲುಗಳ ಬ್ರಾಂಡ್ ಕಾಣದಂತೆ blur ಮಾಡಬೇಕು.. ಆದರೆ ಅಂಗಡಿಗಳ ಮುಂದೆ ಅಂಟಿಸಿರುವ ಸಿಗರೇಟ್ ಜಾಹೀರಾತನ್ನ ಎಲ್ಲಾ ವಯೋಮಾನದವರೂ ನೋಡಬಹುದು., ಬಾರುಗಳ ಮುಂದೆ, MRP outlet ಗಳ ಮುಂದೆ, ಬಾರ್ ಅಂಡ್ ರೆಸ್ಟೋರೆಂಟುಗಳ ಮುಂದೆ, ಪಂಚತಾರ ಹೊಟೆಲ್ಲುಗಳು ಹಾಗೂ ರೆಸಾರ್ಟುಗಳ ಹೊರಗೂ ಒಳಗೂ ಮದ್ಯದ ವಿವಿದ ಬ್ರಾಂಡುಗಳ ದೊಡ್ಡ ದೊಡ್ಡ ಬೋರ್ಡುಗಳು, ಮಾದಕತೆಯೇ ಮೈವೆತ್ತ ಅರೆನಗ್ನ ಮತ್ತು almost ನಗ್ನ ಹೆಣ್ಣಿನ ಚಿತ್ರವಿರುವ ಫ್ಲೆಕ್ಸುಗಳು, ಸ್ಟಾಂಡಿಗಳು ರಾರಾಜಿಸುತ್ತವೆ ಮತ್ತು ಅವುಗಳನ್ನ ನೋಡಲು ಜನರಿಗೆ ಮುಕ್ತ ಅವಕಾಶವಿದೆ.. ಸಿನೆಮಾಗಳಲ್ಲಿ ಮಾತ್ರ Blur ಮಾಡಬೇಕು..! ಈ ಸೌಭಾಗ್ಯಕ್ಕೆ ನಮ್ಮ ದೇಶದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ’ಕ್ಕೆ ಅವಕಾಶವಿದೆ ಅನ್ನೋ ಒಣ ಢಂಗೂರ ಬೇರೆ!! ಕೆಲವೊಮ್ಮೆ ಕೆಲವು ಸಿನೆಮಾಗಳಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಅರ್ಹವೆನಿಸಿಕೊಂಡಂಥಹದ್ದೇ ವಿಷಯಗಳು ಇನ್ನು ಕೆಲವೊಮ್ಮೆ ಕೆಲವು ಸಿನೆಮಾಗಳಲ್ಲಿ ಪ್ರದರ್ಶನಯೋಗ್ಯವಲ್ಲ ಅಂತ ತಿರಸ್ಕರಿಸಲ್ಪಡುತ್ತವೆ.. ಹಾಗಿದ್ದರೆ ಯಾವ ಮಾನದಂಡದಲ್ಲಿ ಸೆನ್ಸಾರ್ ಮಾಡಲಾಗುತ್ತದೆ? ಸಂದರ್ಭೋಚಿತವಾಗಿ ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮಂಡಳಿಗಿದೆ.. ಆದ್ರೆ ಸೆನ್ಸಾರ್ ಮಂಡಳಿಯ ನಿರ್ಧಾರಗಳನ್ನು ಪ್ರಶ್ನಿಸುವ ಹಕ್ಕು ಸಿನೆಮಾಕರ್ತೃಗಳಿಗಿಲ್ಲ..!! ಜಗತ್ತಿನಲ್ಲಿ ಏನೆಲ್ಲಾ ಆಗುತ್ತಿರುವಾಗ ‘ಸಿನೆಮಾಗಳಿಗೆ ಮಾತ್ರ ಸೆನ್ಸಾರ್ ಅನ್ನೋ ತಡೆ’ ಎಷ್ಟು ನ್ಯಾಯ?





Aksharashaha Arthapoorna Lekhana…
Thanks Virus Veeru
P.S. (Taleharate Prashne) – Nimma hesarigeke ‘Virus’ Antirodu?
ಅದು, ಎರಡು ಸಾವಿರದ ಏಳನೆ ಇಸವಿಯ ಪೂರ್ವಾರ್ಧದಲ್ಲಿ ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಸದಾಕಾಲ ಕಂಪ್ಯೂಟರ್ರು ಮತ್ತು ಮೊಬೈಲ್ ಫೋನಿನನಲ್ಲಿ ಮುಳುಗಿದ್ದ ನನ್ನ ನೋಡಿ ನನ್ನ ಗುರುಗಳೊಬ್ಬರು ನಾಮಕರಣ ಮಾಡಿದ್ರು, ವೀರೇಂದ್ರನೆಂಬೋ ನನ್ನನ್ನು ‘ವೈರಸ್’ ಅಂತಲೇ ಕರೆಯೋಕೆ ಶುರು ಮಾಡಿದ್ರು.. ಅದಾಗಿ ನನ್ನ ಹೆಸರು ವೈರಸ್ ಅಂತ ಉಳಿದುಹೋಯ್ತು, ನಂಗೂ ಅದೇ ಇಷ್ಟವಾಯ್ತು..
ಸೆಕ್ಸ್ ಅನ್ನೋದು ಎಲ್ಲ ವಿಷಯಗಳಂತೆ ಸರ್ವೇ ಸಾಮಾನ್ಯ ಅನ್ನೋ ಮನಸ್ಥಿತಿ ನಿರ್ಮಾಣವಾಗಿದೆ….
ಸೆಕ್ಸ್ ಅನ್ನೋದು ಪ್ರದರ್ಶನಕ್ಕಿಲ್ಲ. ನಮ್ಮ ಕಡೆ ಜಾಗೃತಿಗೂ ಪ್ರದರ್ಶನಕ್ಕೂ ವ್ಯತ್ಯಾಸವಿದೆ.
ಮಧ್ಯಪ್ರದೇಶದ ಖಜುರಾವೋ ಮತ್ತು ಪಡವಲಿ, ಗುಜರಾತ್ ಮತ್ತು ಕೊನಾರಕ್ ಸೂರ್ಯ ದೇವಸ್ಥಾನ, ಉದಯಪುರದ ಜಗದೀಶ್ ಮಂದಿರ್, ಮಹಾರಾಷ್ಟ್ರದ ಮಾರ್ಕಂಡೇಶ್ವರ, ರಾಜಸ್ಥಾನದ ಒಸಯಾನ್ ಮತ್ತು ರಾಣಕ್ಪುರ್, ಎಲ್ಲೋರದ ಕೈಲಾಸ, ಛತ್ತೀಸಘಡದ ಬೋರಮ್ಡಿಯೋ, ಅಲ್ಮೋರದ ನಂದಾದೇವಿ ದೇವಸ್ಥಾನ, ಭುವನೇಶ್ವರದ ಲಿಂಗರಾಜ ದೇವಸ್ಥಾನಗಳಲ್ಲಿ ಮತ್ತು ಕರ್ನಾಟಕದ ಬೇಲೂರು, ಹಳೆಬೀಡು, ಹಂಪಿಯ ದೇವಸ್ಥಾನಗಳಲ್ಲಿ ಕಾಮಸೂತ್ರದ ಭಂಗಿಗಳಿರುವ ಶಿಲ್ಪಕಲಾಕೃತಿಗಳನ್ನ ನೋಡಿ..
ಯಾವ ಪುರಾಣದಲ್ಲಿದೆ ಹೇಳಿ ಸರ್ ಸೆಕ್ಸ್ ಪ್ರದರ್ಶನಕ್ಕಿಲ್ಲ ಅಂತ.. ನಾವೇನು ಬಹಿರಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ರತಿಕ್ರೀಡೆ ನೆಡೆಸಲು ಕರೆಕೊಡುತ್ತಿಲ್ಲ.. ಸಿನೆಮಾ ಕೂಡ ಒಂದು ಕಲಾಮಾಧ್ಯಮ., ಕಥೆಗೆ ಅವಶ್ಯಕತೆ ಬಿದ್ದಾಗ ನಗ್ನತೆ, ಕಾಮ ಪ್ರದರ್ಶನ ಮಾಡಬೇಕಾಗ್ತದೆ.. ನವರಸಗಳಲ್ಲಿ ಶೃಂಗಾರರಸವೊಂದಿದೆ.. ನಿಮಗೆ ಅದು ಗೊತ್ತಿಲ್ಲದ ವಿಚಾರವೇನಲ್ಲ.. ಸಿನಿಮಾಕರ್ತೃಗಳಿಗೆ ಅಷ್ಟು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ ಇರದಿದ್ದರೆ ಹೇಗೆ? ಇದು ನನ್ನ ಪ್ರಶ್ನೆ!
ಚೆನ್ನಾಗಿದೆ .. 🙂
ಧನ್ಯವಾದಗಳು 🙂
ಕನ್ನಡ ಸಿನಿಮಾ ನಿರ್ದೇಶಕ ವೈರಸ್ಸು,
ಯಾಕಪ್ಪಾ ಬಾಲಿವುಡ್ ಸಿನಿಮಾದ ಖಾಲಿ ಉಪರಾಟಿ ರೆಫರೆನ್ಸು ?
ಸಿನೆಮಾನೇ ಒಂದ್ ಭಾಷೆ ಮಚ್ಚಿ, ಬಾಲಿವುಡ್ಡು ಸ್ಯಾಂಡ್ಲುವುಡ್ಡು ಕ್ಯಾಂಡ್ಲುವುಡ್ಡು ಅವೆಲ್ಲಾ ಆಮ್ಯಾಕೆ.. ಕನ್ನಡ ಸಿನೆಮಾಗಳ ರೆಫರೆನ್ಸೂ ಕೊಟ್ಟಿದೀನಲ್ಲ ಓದಿಲ್ವೇ?