ಸುಮಾ ವೀಣಾ, ಹಾಸನ
“ಮಲೆನಾಡಿನ ಅಮೃತ” ಅಂದರೆ ಕಾಫಿನೇ ಅಲ್ವೆ ! ಕೊರೆಯುವ ಮೈಚಳಿ ಬಿಡಿಸಲು ಸುಖೋಷ್ಣ ಸ್ಥಿತಿಯಲ್ಲಿರುವ ಹಿತವಾದ ಪರಿಮಳ ಬೀರುವ ಕಾಫಿ ಬೇಕು! ಇರಬೇಕು! ಹಾಗಂತ ಇರಲೇಬೇಕು ಎಂದು ಹೇಳಲಾರೆ ಆಯ್ಕೆ ನಿಮಗೆ ಬಿಟ್ಟಿದ್ದು. ಕಾಫಿ ತನ್ನ ಪರಿಮಳ ಮತ್ತು ಬಣ್ಣದಿಂದ ಫೇಮಸ್. ಹಾಗಾಗಿ ಕಡು ಕಂದು ಬಣ್ಣವನ್ನು ಕಾಫಿ ಕಲರ್ ಅಥವಾ ಕಾಫಿಬ್ರೌನ್ ಎಂದು ಕರೆಯುವುದು. ಯುಗಾದಿ ಕಳೆದ ನಂತರ ಬರುವ ಮಳೆಯಿಂದ ಕಾಫಿ ಹೂ ಅರಳುತ್ತದೆ, ಅದರ ಪರಿಮಳವೇ ಚೇತೋಹಾರಿ. ಹೂವಿಂದ ಮೊದಲ್ಗೊಂಡು ಅರೋಮ್ಯಾಟಿಕ್ ಕಾಫಿಯವರೆಗೆ ಕಾಫಿ ಹೂ, ಕಾಫಿ ಹಣ್ಣು, ಕಾಫಿ ಕೊಯ್ಲು ,ಕಾಫಿಕಣ , ಕಾಫಿ ಪಲ್ಪ್, ಕಾಫಿ ಬೇಳೆ, ರೊಬೊಸ್ಟ , ಪಾರ್ಚ್ಮೆಂಟ್ ,ಚೆರ್ರಿ, ಕಾಫಿ ಪ್ಲ್ಯಾಂಟರ್, ಕಾಫೀ ಪ್ಲಾಂಟೇಶನ್, ಕಾಫಿ ಬೋರ್ಡ್,ಎಸ್ಟೇಟ್ ಮ್ಯಾನೇಜರ್, ಕಾಫಿ ಕ್ಯೂರಿಂಗ್ ಪದಗಳನನ್ನೇ ಕೇಳಿ ಬೆಳೆದ ಕಾಫಿ ಮಂದಿ ನಾವು.
ಮಲೆನಾಡಿನಲ್ಲಿ ಸಹಜವಾಗಿ ಪ್ಲ್ಯಾಂಟೇಶನ್ ಮಾಡಿಸುವಾಗ ತೆಗೆದ ಕಾಫಿ ಬುಡಗಳನ್ನು ವ್ಯರ್ಥವಾಗಿಸದೆ ಅಲಂಕಾರಿಕ ವಸ್ತಗಳನ್ನಾಗಿ ಪರಿವರ್ತಿಸಿ ಬಳಸುತ್ತಾರೆ. ನಮ್ಮಜ್ಜಿ, ನಮ್ಮಮ್ಮ ,ನಾನು, ನನ್ನ ತಮ್ಮಂದಿರು ಎಲ್ಲಾರು ಕಾಫಿ ಪ್ರಿಯರೆ. “ಕಾಫಿಯಲ್ಲೂ ಆರೋಗ್ಯ ಕಂಡು ಕೊಂಡವರು!” ಆದರೆ ಚಟವಾಗಿಸಿಕೊಂಡವರಲ್ಲ. ನನ್ನ ಪ್ರಕಾರ ಕಾಫಿ ಅಂದರೆ ಅದೊಂದು ‘ಕಂಫರ್ಟ್!” ಹೆಚ್ಚು ಮಾತನಾಡುವವರು, ಹಾಡುಗಾರರು, ಪದೇ ಪದೇ ಕಾಫಿ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಏರುಧ್ವನಿಯಲ್ಲಿ ಮಾತನಾಡಿ ಆಯಾಸವಾದ ಗಂಟಲಿಗೆ ಬಿಸಿ ಕಾಫಿ ಆರೈಕೆ ಮಾಡುತ್ತದೆ.
ಯಾರಾದರೂ ಮಾತಿಗೆ ಸಿಕ್ಕರೆ ಕಾಫಿ ಆಯಿತ ? ಸಂಜೆ ಕಾಫಿಗೆ ಏನು? ಎನ್ನುತ್ತಾರೆಯೇ ವಿನಃ ಟೀ ಆಯಿತ ಎನ್ನುವುದಿಲ್ಲ. ಕಾಫಿ ಬ್ರೇಕ್ನಂತೆ ಟೀ ಬ್ರೇಕ್ ಪದವೂ ಇದೆ ಒಪ್ಪಿಕೊಳ್ಳುತ್ತೇನೆ. ಕ್ಯಾರೆಟ್ -ಬಿಟ್ರೋಟ್, ಜಹಾಂಗಿರ್- ಜಿಲೇಬಿ ಅನ್ನುವಂತೆ ಕಾಫಿ ಯ ಹೆಸರು ಕೂಡ ಟೀ ಹರೆಸರಿನ ಜೊತೆಗೆ ಕೇಳಿ ಬರುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಮಾಡುವಾಗ ‘’ಏನ್ ಮಾಡ್ಲಿ ಕಾಫಿನೋ ಟೀನೋ’’ ಅನ್ನುತ್ತಾರೆ. ನಿಜವಾಗಿ ಸತ್ಕಾರ ಮಾಡುವವರು ಅತಿಥಿಗಳು ಬಾಯ್ಬಿಡುವ ಮೊದಲೆ ಕಾಫಿಯನ್ನು ತಂದು ಇಟ್ಟೂ ಬಿಡುತ್ತಾರೆ. ಅದರೆ ಮೇಲ್ಮಾತಿನ ಉಪಚಾರ ಮಾಡುವವರಿಗೆ ಅತಿಥಿಗಳು ಏನೂ ಹೇಳದೆ ಇದ್ದರೆ “ಕಾಫಿ ನೂ No, ಟೀ ನೂ No” ಹೋದವರು ಹಾಗೆ ಎದ್ದು ಬರಬೇಕು ಅಷ್ಟೆ.
ಕಾಫಿ ಕುಡಿಯುವುದಕ್ಕೂ, ಹೀರುವುದಕ್ಕೂ, ಸವಿಯುವುದಕ್ಕೂ ವೆತ್ಯಾಸವಿದೆ. ಕಾಫಿ ಕಪ್ಗಳಲ್ಲಿ ಎಷ್ಟು ವಿಧ ! ಅಬ್ಬಾ! ಸ್ಟೀಲ್, ಹಿತ್ತಾಳೆ, ಬೆಳ್ಳಿ , ಪಿಂಗಾಣಿ ಕಪ್ ಸಾಸರ್, ಗಾಜಿನ ಲೋಟಗಳು, ಬಾಂಬೆಕಪ್, ಪೇಪರ್ಗ್ಲಾಸ್, ಪ್ಲಾಸ್ಟಿಕ್ ಗ್ಲಾಸ್ ಇತ್ಯಾದಿ ಇತ್ಯಾದಿ.. ನಾವು ಮಲೆನಾಡಲ್ಲಿ ಇರುವವರೆಗೂ ನನಗೆ ಇವುಗಳಲ್ಲಿ ಕಾಫಿ ಕುಡಿದು ಅಭ್ಯಾಸವಿರಲಿಲ್ಲ ಮಗ್ ಗಳಲ್ಲಿ ಕುಡಿದು ಅಬ್ಯಾಸವಿತ್ತು. ಸ್ಟ್ರಾಂಗ್ ಕಾಫಿಯನ್ನಲ್ಲ ಲೈಟ್ ಕಾಫಿಯನ್ನು. ಬೈಟು ಕಾಫಿ, ಬೈತ್ರಿಕಾಫಿ ಪದಗಳನ್ನು ಮಲೆನಾಡು ಬಿಟ್ಟಮೇಲೆ ನಾನು ಪರಿಚಯಿಸಿಕೊಂಡದ್ದು.
ಮನುಷ್ಯನ ಆಲೋಚನಾ ರೀತಿಯನ್ನು , ಅನುಭವಿಸುವ ತಳಮಳವನ್ನು,ಅವರ ಮನಸ್ಥಿತಿಯನ್ನು ಅವರವರು ಕಾಫಿ ಕಪ್ ಹಿಡಿಯುವ ಬಗೆ, ಅದನ್ನು ಸೇವಿಸುವ ಬಗೆ ಇತ್ಯಾದಿಗಳಲ್ಲಿ ಅವರ ಅಧ್ಯಯನ ಮಾಡಬಹುದು. ಕುಡಿದು ಉಳಿಸಿದ ಕಾಫಿ ಕಪ್ನಿಂದ ಭವಿಷ್ಯವನ್ನೂ ಹೇಳುವುದಿದೆ. ಒರಗಲು ಸಲೀಸಾದ ಒಂದು ಅರಾಮ ಕುರ್ಚಿ, ಶುಶ್ರಾವ್ಯವಾದ ಹಿನ್ನೆಲೆ ಸಂಗೀತ, ಪರಿಮಳ ಭರಿತವಾದ ಕಾಫಿ ಜೊತೆಗೆ ಸುದ್ದಿಪತ್ರಿಕೆಯಿದ್ದ ಮಾರ್ನಿಂಗ್ ನಿಜ ಅರ್ಥದಲ್ಲಿ ಮಾರ್ನಿಂಗ್ ಸ್ವರ್ಗವೇ ಸರಿ!.
ಕಾಫೀ ಜೊತೆಗೆ ಬನ್, ಬಿಸ್ಕೆಟ್ ಅದರಲ್ಲೂ ಕಡಿಮೆ ಸಿಹಿಯಿರುವ ಬಿಸ್ಕೆಟ್ ಉತ್ತಮ. ಆದರೆ ಕಾಫಿ ಶಾಪ್ಗಳಲ್ಲಿ ಬೇರೆ ಬೇರೆ ಸ್ನ್ಯಾಕ್ಸ್ ಕೊಡುತ್ತಾರೆ. ಸ್ಟಾರ್ ಹೋಟೇಲ್ನಿಂದ ರಸ್ತೆ ಬದಿಯ ಕ್ಯಾಂಟಿನವರೆಗೂ ಕಾಫಿ ಸಿಕ್ಕಿಯೇ ಸಿಗುತ್ತದೆ ಅವುಗಳ ರುಚಿಯೂ ಭಿನ್ನವಾಗಿರುತ್ತದೆ. ಹೊಟೇಲ್ಗಳಲ್ಲಿ ‘ಕಾಫಿ ಭಟ್ರು’ ಅನ್ನುವ ಪರಿಭಾಷೆಯೇ ಇದೆ. ಕಾಫಿ ಕುಡುವುದರ ಹೊರತು ಅವರಿಗೆ ಬೇರೆ ಕೆಲಸವಿಲ್ಲ. Cold coffe, elachi coffee, green coffe ,daglona coffee, cream coffee , ಶುಗರ್ಲೆಸ್ ,ಸಕ್ಕರೆ ಕಾಫಿ, ಬೆಲ್ಲದ ಕಾಫಿ, ಇತ್ತೀಚೆಗೆ ಜೇನು ಹಾಕಿದ ಕಾಫಿಯೂ ಜನಪ್ರಿಯವಾಗಿದೆ.

ಕಾಫಿ ಮೇಲಿನ ನೊರೆ ತರಿಸುವುದೂ ಒಂದುಕಲೆ ( ಎತ್ರಕ್ಕೆ ಕಾಫಿ ಇರುವ ಎರಡು ಗ್ಲಾಸ್ಗಳನ್ನು ಏರಿಸಿ ನೊರೆ ತರಿಸುವುದು ಇದನ್ನು ಮೀಟರ್ ಕಾಫಿ ಎನ್ನುತ್ತಾರೆ) ಆದರೆ ಕಾಫಿ ಕುಡಿಯುವುದು ಕೂಡ ಒಂದು ಕಲೆ ಎನ್ನಬಹುದ ? ಗೊತ್ತಿಲ್ಲ! ಕೆಲವರ್ ಸೊರ್`~~~ ಎಂದು ಸದ್ದು ಮಾಡಿದರೆ ಬಹು ದೂರದಲ್ಲಿದ್ದವರೂ ತಿರುಗಿ ನೋಡುವಂತಾಗಬಾರದು. ಕೆಲವರು ಕಾಫಿ ಗ್ಲಾಸಿಗೆ ತುಟಿ ತಾಗಿಸಿ ಕುಡಿಯುತ್ತಾರೆ. ಆದರೆ ನಮ್ಮ ಹಿರಿಯರು ಗ್ಲಾಸ್ ಎತ್ತಿ ಕುಡಿಯುತ್ತಿದ್ದರು. ಆದರೆ ಈಗ ಕಾಫಿ ಕುಡಿಯಲು ಸ್ಟ್ರಾಗಳು ಬಂದಿವೆ.
ಏನೇ ಹೇಳಿ! ಕಾಫಿ ಮಟ್ಟಿಗೆ ಬಿಸಿ ಇರೆಬೇಕು! ನಾವು ಚಿಕ್ಕವರಿದ್ದಾಗ ಬಿಸಿ ಕಾಫಿಯನ್ನು ತಣ್ಣಗಾಗಿಸಿಕಜೊಳ್ಳಲು ಎರಡೆರಡು ಗ್ಲಾಸ್ ತೆಗೆದುಕೊಂಡು ಅಜ್ಜಿಯಿಂದ ಬೈಸಿಕೊಳ್ಳುತ್ತಿದ್ದದ್ದು ಈಗ ನೆನಪಾಗುತ್ತದೆ. ಬಿಸಿ ಕಾಫಿಗೆ ಪುರಿ ಹಾಕಿ ಅರ್ಧಂಬರ್ಧ ಚೆಲ್ಲಿಕೊಂಡು ಸ್ಪೂನ್ನಲ್ಲಿ ತಿನ್ನುತ್ತಿದ್ದೆವು. ನಿಜವಾಗಿಯೂ ಕಾಫಿಯ ಘಮವನ್ನು ಹೆಚ್ಚಿಸುವುದು ಬಜ್ಜಿ ,ಬೋಂಡ. ಯಾರಾದರೂ ಮನೆಗೆ ಬಂದರೆ ಕಾಫಿ ಜೊತೆಗೆ ಬಿಸ್ಕೆಟ್ ಕೊಡುವುದು ರೂಢಿ, ಹಾಗೆ ಅತಿಥಿಗಳು ಬಿಸಿ ಕಾಫಿಯಲ್ಲಿ ಬಿಸ್ಕೆಟ್ ಅದ್ದಿ ತಿನ್ನುವಾಗ ಬಿಸ್ಕೆಟ್ ಕೈ ಬಿಟ್ಟು ಬಾಯಿ ಸೇರದೆ ಗ್ಲಾಸನಲ್ಲಿಯೇ ಉಳಿದರಂತೂ ಆಗುವ ಮುಜುಗರ ಹೇಳತೀರದು .
“ಕಾಫಿ ಮಾಡು”, “ಕಾಪಿ ಕಾಸು”, , “ಕಾಫಿ ಇಡು” , “ಕಾಫಿ ಬೆರೆಸು” , “ಕಾಫಿ ಮಿಕ್ಸ್ ಮಾಡು”, ಎನ್ನುವ ಪದಗಳು ಕಾಫಿ ಮಾಡುವ ಬೇರೆ ಬೇರೆ ಪ್ರಕಾರಗಳನ್ನು ತಿಳಿಸುತ್ತದೆ. ಹಿಂದೆ ಸಕ್ಕರೆ ಕಾಫಿ ಪುಡಿಯನ್ನು ಬೇಯಿಸಿ ಹಾಲು ಹಾಕಿ ಸೋಸುತ್ತಿದ್ದರು, ನಂತರ ಕಾಫಿ ಪುಡಿಯನ್ನು ಲೋಟಕ್ಕೆ ಹಾಕಿ ಕುದಿಯುವ ಹಾಲನ್ನು ಹಾಕಿ ಒಂದು ನಿಮಿಷ ಬ್ಲೆಂಡ್ ಆಗಲು ಬಿಟ್ಟು ಸೋಸುವುದಿತ್ತು. ನಂತರ ಫಿಲ್ಟರ್ ಕಾಫಿ ಬಂತು. ಈಗ instant ಕಾಫಿ! ಪ್ಯಾಕನ್ನು ಕತ್ತರಿಸಿ ಬಿಸಿ ಹಾಲಿಗೆ ಸೇರಿಸುವುದು ಅಷ್ಟೇ.
ಫಿಲ್ಟರ್ ಕಾಫಿ, ಹಾಲಲ್ಲಿ ಕಾಫಿ , ನೀರಲ್ಲಿ ಕಾಫಿ, ಎನೇ ಅದರೂ ಒಳ್ಳೆಯ ಕಾಫಿಗೆ ಒಳ್ಳೆಯ ಹಾಲೂ ಬೇಕು! ಹಸುವಿನ ಹಾಲಿಗಿಂತ ಎಮ್ಮೆ ಹಾಲಿನಲ್ಲಿ ಕಾಫಿ ಚೆನ್ನಾಗಾಗುತ್ತದೆ. ತೆಂಗಿನ ಹಾಲಿನಲ್ಲಿಯೂ ಕಾಫಿ ಮಾಡಬಹುದು ಬಹಳ ರುಚಿಯಾಗಿರುತ್ತದೆ. ಕೆಲವರಿಗೆ ಕಾಫಿಯಲ್ಲಿ ಹಾಲಕೆನೆ ಇದ್ದರೆ ಖುಷಿ, ಇನ್ನಕೆಲವರಿಗೆ ಕೆನೆ ವರ್ಜ್ಯ ಅವರವರ ಭಾವಕ್ಕೆ ತಕ್ಕಂತೆ! ಈಗ ಪ್ಯಾಕೆಟ್ ಹಾಲಿನ ಕಾಫಿ!, ಹಾಲಿನ ಪೌಡರಿನ ಕಾಫಿ! .
ಇತ್ತೀಚಿನ ದಿನಗಳಲ್ಲಿ ಕಾಫಿ ಇನ್ನಷ್ಟು ಸುಲಭವಾಗಿದೆ. ರೆಡಿ ಕಾಫಿಯೇ ಟೆಟ್ರಾ ಪ್ಯಾಕ್ಗಳಲ್ಲಿ ಬಂದಿದೆ. ಕಾಫಿ ವಿಚಾರದಲ್ಲಿ ನಾವು ಇನ್ನು ಎತ್ತರಕ್ಕೆ ಏರಲಾರೆವೇನೋ? . ಮತ್ತದೆ ಬ್ಲ್ಯಾಕ್ ಕಾಫಿ ಅದೇ ಬರಗಾಫಿ ಅನ್ನುತ್ತಾರಲ್ಲ ಅಲ್ಲಿಗೆ ನಾವು ಬಂದಿದ್ದೇವೆ. ಹಿಂದೆ ಸರಿ ಸುಮಾರು ಎಲ್ಲಾ ಮಲೆನಾಡಿನ ಮನೆಗಳಲ್ಲಿ ಕಡಿಮೆ ಬೆಲ್ಲ ಕಾಫಿ ಪುಡಿ ಹಾಕಿದ ಕಾಫಿ ಇದ್ದೇ ಇರುತ್ತಿತ್ತು. ಅದೇ ಈಗ ಬ್ಲ್ಯಾಕ್ ಕಾಫಿ ಆಗಿದೆ, ಫ್ಯಾಷನ್ ಕಾಫಿ ಆಗಿದೆ. ಅದರಲ್ಲೂ ಆರ್ಗ್ಯಾನಿಕ್ ಬೆಲ್ಲ ಹಾಕಿದ ಖಾಲಿ ಕಾಫಿ ಈಗಿನ ಟ್ರೆಂಡ್.
ಮನೆಯ ಆಚೆಯ ಒಲೆಯ ಮೇಲೆ ಮರಳು ಬಿಸಿ ಮಾಡಿ ಕಾಫಿ ಬೇಳೆ ಹುರಿಯುತ್ತಿದ್ದರು. ಇಲ್ಲಿ ರನ್ನ ಗದಾಯುದ್ದದಲ್ಲಿ ಬರುವ” ಪುರಿಗಡಲೆಗೆ ಮರಳ್ ಕಾಯ್ವ ತೆರದಿ” ಎಂಬ ಮಾತು ನೆನಪಾಗುತ್ತದೆ. ಇಲ್ಲಿ “ಕಾಫಿ ಬೀಜ ಹುರಿಯಲ್ ಮರಳ್ ಕಾಯ್ವ ತರೆದಿ” ಅನ್ನಬಹುದೇನೋ… ಕಾಫಿ ಬೇಳೆಯನ್ನು ಹದವಾಗಿ ಹುರಿದು ಒರಳಲ್ಲಿ ಕುಟ್ಟಿ ಪುಡಿ ಮಾಡಿ ಜರಡಿ ಹಿಡಿದು, ಡಬ್ಬಗಳಲ್ಲಿ ತುಂಬಿಸುತ್ತಿದ್ದ ದಿನಗಳು ಸರಿದು ಓಬಿರಾಯನ ಕಾಲವಾಗಿದೆ.
ನಂತರ ಅದೇ ಹೋಂಮೇಡ್ ಪುಡಿಗೆ ಚಿಕೋರಿ ತಂದು ಬೆರೆಸಿಕೊಳ್ಳುತ್ತಿದ್ದ ದಿನಗಳು.ಚಿಕೋರಿ 70:30,70;35 ರ ಪ್ರಮಾಣದಲ್ಲಿದ್ದರೆ ಚಂದ. ನಂತರದ ದಿನಗಳಲ್ಲಿ ಮಿಕ್ಸಿಯಲ್ಲಿ ಕಾಫಿ ಪುಡಿ ಮಾಡಿಕೊಂಡ ದಿನಗಳೂ ಇವೆ .ಅವೂ ಕಳೆದು ಕಾಫಿ ಪುಡಿ ಮಿಲ್ಲಿಗೆ ಕಾಫಿಬೇಳೆಯನ್ನು ಕೊಟ್ಟು ನೈಸ್ ಇಲ್ಲವೆ, ಫಿಲ್ಟರ್ ಕಾಫಿ ಪುಡಿ ತರುತ್ತಿದ್ದ ದಿನಗಳೂ ಸರಿದಿವೆ. ಈಗ ಬ್ರ್ಯಾಂಡ್ ನೇಮ್ ನೋಡುವ , ಆಫರ್ ಇರುವ ಕಾಫಿ ಪುಡಿ, instsnt ಕಾಫಿ ಪುಡಿ ತರುವ, ರೆಡಿ ಡಿಕಾಕ್ಷನನ್ನೇ ತಂದಿಟ್ಟುಕೊಳ್ಳುವ ಕಾಲ.

“ತೊಂಬತ್ಮೂರು ಡಿಗ್ರಿಯಲ್ಲಿ ಬಿಸಿ ಮಾಡಿದ ನೀರಿಗೆ…. ಭಯಬೇಡ ಕಾಫಿ ಮಾಡಲು ಥರ್ಮೋಮೀಟರ್ ಖಂಡಿತಾ ಬೇಡ! ಸರಿಸುಮಾರು ತೊಂಬತ್ಮೂರು ಡಿಗ್ರಿಯಲ್ಲಿ ಕುದಿಸಿದ ನೀರಿಗೆ ಕಾಫಿ ಪುಡಿ, ಸ್ವಲ್ಪಸಕ್ಕರೆ ಹಾಕಿ ಸ್ಟವ್ ಆಫ್ ಮಾಡಿ ತೆಗೆದ ಡಿಕಾಕ್ಷನ್ಗೆ ಹಾಲು ಬೆರೆಸಿದರೆ ಕಾಫಿ ಬಹಳ ಚೆನ್ನಾಗಿರುತ್ತದೆ. ಇನ್ನು ಕಾಫಿ ಫಿಲ್ಟರ್ಗೆ ಪುಡಿ ಹಾಕಿ ಎರಡು ಚಿಟಿಕೆ ಸಕ್ಕರೆ, ಅಗತ್ಯವಾದಷ್ಟು ನೀರು ಸೇರಿಸಿ ಇಳಿಸಿದ ಡಿಕಾಕ್ಷನ್ ಬಳಸಿದರೆ ಕಾಫಿ ಸ್ಟ್ರಾಂಗ್ ಆಗಿ ಚೆನ್ನಾಗಿರುತ್ತದೆ. ಒಮ್ಮೆ ಹಾಲಿನಲ್ಲಿ ಮಾಡಿದ ಕಾಫಿಯನ್ನು ತಕ್ಷಣ ಕುಡಿಯಬೇಕು ಮತ್ತೆ ಬಿಸಿ ಮಾಡಿದರೆ ನಾಲಗೆ ಸುಡುತ್ತದೆ ರುಚಿ ಗೊತ್ತಾಗುವುದಿಲ್ಲ.
ನಾನು ಎರಡನೆ ಮಗುವಿನ ಹೆರಿಗೆಗೆ ಹೊರಡುವ ಸಲುವಾಗಿ ಆಸ್ಪತ್ರೆಗೆ ಬೇಕಾದ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡುವಾಗ ನೆನಪಿಂದ ತೆಗೆದಿಟ್ಟ ವಸ್ತಗಳು ಅಂದರೆ ಸಕ್ಕರೆ, ಕಾಫಿ ಪುಡಿ. ಕಾಫಿ ಮಾಡಲೆಂದೇ ಖರೀದಿಸಿದ ಹೊಸ ಪಾತ್ರೆ. ಆಸ್ಪತ್ರೆಗೆ ‘ಮಗು’ ಹುಟ್ಟಿದೆ ಎಂದು ಬರುವ ಜನರಿಗಿಂತ ‘ಮಗ’ ಹುಟ್ಟಿದ್ದಾನೆ ಎಂದೋಡಿ ಬರುವ ಜನರೆ ಹೆಚ್ಚಾದಾಗ ಅವರನ್ನು ತಣಿಸಿದ್ದು ಹೋಮ್ ಮೇಡ್ ಕಾಫಿಯಲ್ಲ! ಹಾಸ್ಪಿಟಲ್ ಮೇಡ್ ಕಾಫೀ…!,
ಆಗ ನನಗೆ ಆಗಿದ್ದು ಸಿಝೇರಿಯನ್ ಹೆರಿಗೆ. ಕಾರಣ ಏನು ಗೊತ್ತಿಲ್ಲ? ಆದರೆ ವಿಪರೀತ ತಲೆನೋವು ಬರಲು ಪ್ರಾರಂಭವಾಗಿತ್ತು. ಆಗ ನನ್ನ ಡಾಕ್ಟರ್ ಅರಿವಳಿಕೆ ತಜ್ಞರಲ್ಲಿ ನನ್ನ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಅವರು “ಸ್ಟ್ರಾಂಗ್ ಕಾಫಿ ಕುಡಿಯಿರಿ” ಎಂದರು ನನಗೋ ಬಹಳ ಖುಷಿಯಾಯಿತು! (ಸಿಜೇರಿಯನ್ನ ಹೆರಿಗೆನೋ ಇಲ್ಲ ನಾರ್ಮಲ್ಲೋ ಹೆರಿಗೆಗೆ ಮುನ್ನ ಸ್ಟ್ರಾಂಗ್ ಕಾಫಿ ಕುಡಿಯುವುದು ಉತ್ತಮ ಎನ್ನುತ್ತಾರೆ). ಹಾಗೆ ಅಲ್ಲಿದ್ದ ವೈದ್ಯ ಪ್ರಶಿಕ್ಷಣಾರ್ಥಿಯನ್ನು “ಕಾಫಿಯಲ್ಲಿ ಏನಿರುತ್ತದೆ?” ಅಂದರೆ ಪ್ರಶಿಕ್ಷಣಾರ್ಥಿ “ಕಾಫಿಯಲ್ಲಿ ಡಿಕಾಕ್ಷನ್ ಇರುತ್ತೆ” ಅಂದರು. ನಾನು ತಲೆನೋವಿನ ಭಾರದಲ್ಲೇ “ಕೆಫೆನ್” ಅಂದೆ ಅವರಿಗೆ ಕೇಳಿಸಲಿಲ್ಲ. ಕಾಫಿಯಲ್ಲಿ ಕೆಫೇನ್ ಇರುತ್ತದೆ” ಎಂದು ಅರಿವಳಿಕೆ ತಜ್ಞರು ಹೇಳಿ ಹೊರಟರು.
ಅತೀ ಅದರೆ ಯಾವುದೂ ವಿಷವೇ ಸರಿ ! ಕಾಫಿಯಲ್ಲಿಯೂ ಆರೋಗ್ಯ ಸಹಾಯಕ, ಹಾಗು ಆರೋಗ್ಯ ಕೆಡಿಸುವ ಗುಣಗಳಿವೆ. ಕುಡಿಯುವ ಕಾಫಿಗೆ ಸ್ವಲ್ಪ ಜಜ್ಜಿದ ಶುಂಠಿ ಹಾಕುವುದರಿಂದ ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ . “ಅಮ್ಮಾ ಸ್ವಲ್ಪ ಕಾಫಿ…, ಕಾಫಿ ಪ್ಲೀಸ್! ಒಂದೊಟ್ಟು ಕಾಫಿ ಸಿಗಬಹುದ…..” ಎಂದು ಕೆಲವರು ಕೇಳುತ್ತಾರೆ. ಅಂದರೆ ಕಾಫಿಗೆ ಒತ್ತಡವನ್ನು ತಗ್ಗಿಸುವ ಶಕ್ತಿ ಇದೆ ಎಂದಾಯಿತಲ್ಲವೇ.
ಪ್ರತಿ ದಿನ ಮೂರು ಕಪ್ಗಳಷ್ಟು ಕಾಫಿ ಸೇವನೆ ಮಾಡಿದರೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆ ,ಆರು ಕಪ್ಗಳಿಗಿಂತ ಹೆಚ್ಚು ಕುಡಿದರೆ ಪಾರ್ಶ್ವವಾಯುವಿನ ಸಾಧ್ಯತೆ ಕಡಿಮೆ ಎಂದು ವೈಜ್ಞಾನಿಕ ಅಧ್ಯಯನ ಹೇಳುತ್ತದೆ. ಇದಕ್ಕೆ ಕಾರಣ ಕಾಫಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಗಳು. ಇತ್ತೀಚೆಗೆ ಗ್ರೀನ್ ಕಾಫಿ ಕೂಡ ಬಂದಿದೆ. ವ್ಯಾಯಾಮದ ನಂತರ ಕಾಫಿ ಕುಡಿದರೆ ಸ್ನಾಯು ನೋವು ಕಡಿಮೆ ಆಗುತ್ತದೆ ಎನ್ನುತ್ತಾರೆ. ಇನ್ನು ಎಲ್ಲರಿಗು ತಿಳಿದಿರುವಂತೆ ತಲೆ ನೋವಿಗೆ ಕಾಫಿ ರಾಮಬಾಣ. “ಶಿರಶೂಲಾವ್ಯಾಧಿನಿವಾರಣಾರ್ಥಂ ಕಾಫಿ ಅದ್ಭುತಂ” ಎನ್ನಬಹುದು ಒಂದು ಹಂತಕ್ಕೆ ನೈಸರ್ಗಿಕ ನೋವು ನಿವಾರಕ ಈ ಕಾಫಿ ಎಂದರೂ ತಪ್ಪಿಲ್ಲ.

ಕಾಫಿಯಲ್ಲಿ ಮೂತ್ರವರ್ಧಕ ಶಕ್ತಿ ಇರುವುದರಿಂದ ದೇಹ ಬೇಗ ನಿರ್ಜಲೀಕರಣಗೊಳ್ಳುತ್ತದೆ. ಇದು ಮೂತ್ರ ಪಿಂಡ ಸಮಸ್ಯೆಗೂ ಎಡೆಯಾಗಬಹುದು. “ಬೆಡ್ ಕಾಫಿ ಬ್ಯಾಡ್ ಕಾಫಿಯೇ ಸರಿ!” ಮೊದಲು ನೀರು ಸೇವಿಸಿ ಆನಂತರ ಕಾಫಿ ಸವಿಯಬಹುದು, ಖಾಲಿ ಹೊಟ್ಟೆಗೆ ಕಾಫಿ ಸೇವಿಸಬಾರದು ಹಾಗೆ ಮಾಡಿದರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಗ್ಯಾಸ್ಟ್ರಿಕ್ ಸಮಸ್ಯೆ, ಎದೆಯುರಿಯಂಥಹ ಸಮಸ್ಯೆ ಬರುತ್ತದೆ.
ಪಾರಂಪರಿಕ ಕಾಫಿ ಅಷ್ಟೇನು ಅಪಾಯಕಾರಿಯಲ್ಲ ತ್ವರಿತಕಾಫಿ, (instsnt cofee) ಯಕೃತ್ ನ ಕಾರ್ಯುಕ್ಷಮತೆಯನ್ನು ಕುಗ್ಗಿಸುತ್ತದೆ. ಡಿಕಾಫೈನೈಟೇಡ್ ಕಾಫಿ ಅಂದರೆ ಕೆಫೆನ್ ಅಂಶ ತಗೆದ ಕಾಫಿ ಬಳಸುವುದರಿಂದ ಆರೋಗ್ಯ ಕ್ಷೀಣಿಸುತ್ತದೆ. ಕಾರಣ ಇಂಥ ಕಾಫಿಗೆ ರುಚಿ ಮತ್ತು ಬಣ್ಣ ಕೊಡುವ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ರಾಸಾಯನಿಕಗಳು ದೇಹದಲ್ಲಿ ಕ್ಯಾಲ್ಸಿಯಂ ಅಂಶವನ್ನು ಸಹಜವಾಗಿ ಕಡಿಮೆ ಮಾಡುತ್ತದೆ.
ಆದರೆ ಹೊರದೇಹ ಚಿಕಿತ್ಸೆಯಲ್ಲಿ ಕಾಫಿ ಪುಡಿ ಪರಿಣಾಮಕಾರಿ. ಚರ್ಮ ಚಿಕಿತ್ಸೆಯಲ್ಲಿಯೂ ಕೂಡ ಒಣ ಚರ್ಮವನ್ನು ತೆಗೆಯುವ ಶಕ್ತಿ ಇದಕ್ಕೆ ಇರುತ್ತದೆ. ಕೂದಲ ಆರೈಕೆ, ಮೆನಿಕ್ಯೂರ್, ಹಾಗು ಪೆಡಿಕ್ಯೂರ್ ಗಳಲ್ಲಿ ಮುಖಕ್ಕೆ ಹಾಕುವ ಫೇಸ್ ಪ್ಯಾಕ್ಗಳಲ್ಲಿ ಕಾಫಿ ಪುಡಿ ಜೊತೆಗೆ ಜೇನು ಇಲ್ಲವೆ ನಿಂಬೆ ಹಣ್ಣನ್ನು ಬಳಸುತ್ತಾರೆ..
ಏನೆ ಆಗಲಿ ಲವಲವಿಕೆಗೆ ಇನ್ನೊಂದು ಹೆಸರು ಕಾಫಿ! ನಾವು ಹೊಳೆನರಸೀಪುರದಲ್ಲಿದ್ದಾಗ ಒಳ್ಳೆಯ ಕಾಫಿ ಬೇಕೆಂದರೆ ಗೀತಾ ಆನಂದ್ ಅವರ ಮನೆಗೆ ಹೋಗುತ್ತಿದ್ದೆ. ಹೊಸ ಊರಿನ ಆ ಹೊಸ ಪರಿಚಯಕ್ಕೆ, ನಮ್ಮ ಆತ್ಮೀಯತೆಗೆ ಅಂದು ಕಾಫಿ ಮೀಡಿಯೇಟರ್ ಆಗಿತ್ತು ಎಂದರೆ ತಪ್ಪಿಲ್ಲ. ಅದರೆ ಅಲ್ಲೇ ಪರಿಚಯವಾದ ಗೆಳತಿಯರ ಮನೆಗೆ ಹೋಗಲು ನನಗೆ ಭಯವಾಗುತ್ತಿತ್ತು “ಅದೇ ಕೆಟ್ಟ ಕಾಫಿ ಕೊಡುತ್ತಾರೆ ಕುಡಿಯುವವರೆಗೂ ಬಿಡುವುದಿಲ್ಲ ಎಂದು” ಹೀಗೆ ಇಂಥ ಕಾಫಿಯ ಕಹಿ ಅನುಭವದ ನಂತರ ಹೊರಗೆಲ್ಲಿಯೂ ಕಾಫಿ ಕುಡಿಯುತ್ತಿರಲಿಲ್ಲ.
ನನ್ನ ಹಾಗೆ ನನ್ನ ತಮ್ಮಂದಿರೂ ಕಾಫಿಯಲ್ಲಿ ಫರ್ಫೆಕ್ಷನ್ ಬಯಸಯವವರು. ಕೊಡುವ ಕಾಫಿಯ ಬಿಸಿಯಲ್ಲಿ , ಹಾಕುವ ಹಾಲಿನ ಪ್ರಮಾಣದಲ್ಲಿ ಏರು ಪೇರುಗಳಾದರೆ, ಕಾಫಿ ಡಿಕಾಕ್ಷನ್, ಇಲ್ಲ ಕಾಫಿ ಪುಡಿ ಹಾಕುವುದರಲ್ಲಿ , ಚಿಟಿಕೆ ಸಕ್ಕರೆಯಲ್ಲಿ ಹೆಚ್ಚು ಕಡಿಮೆ ಆದರೂ ಆಕ್ಷೇಪ ಮಾಡುವವರು. ಹಾಗಾಗಿ ನಮಗೆ ಕಾಫಿ ಕೊಡುವ ಧೈರ್ಯ ಮಾಡುವವರ ಸಂಖ್ಯೆ ಸ್ವಲ್ಪ ಕಡಿಮೆ.

ಕಾಫಿಯನ್ನು copy ಮಾಡಲಾಗುವುದಿಲ್ಲ .ಅನುಭವದಿಂದ ಕಣ್ಣು ಕೈ ಅಳತೆಯಲ್ಲೇ ಮಾಡಬೇಕು ಅಲ್ವೇ! ವಿಚಿತ್ರ ಅನ್ನಿಸಿದರೂ, ಆರೋಗ್ಯ ದೃಷ್ಟಿಯಿಂದಲೂ ಕೆಟ್ಟದ್ದು ಅನ್ನಿಸಿದರೂ ಊಟವಾದ ಮೇಲೂ ಕೆಲವೊಮ್ಮೆ ಕಾಫಿ ಬಯಸುವ ಕಾಫಿ ಮಂದಿ ನಾವು. ಚಿಕ್ಕವರಾಗಿದ್ದಾಗ ಒಂದೇ ರೀತಿ ಕಾಫಿ ಕುಡಿಯುತ್ತಿದ್ದೆವು. ಏನೂ ಹೇಳುತ್ತಿರಲಿಲ್ಲ. ಆದರೆ ಈಗ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿರುವಂತೆ ನಾವು ಬಯಸುವ ಕಾಫಿಗಳಲ್ಲೂ ಬದಲಾವಣೆಯಾಗಿದೆ. ಶುಗರ್ಲೆಸ್, ಲೈಟ್ಕಾಫಿ, ಬ್ಲ್ಯಾಕ್ಕಾಫಿ ಹೀಗೆ…
ಹತ್ತು ವರ್ಷಗಳ ಹಿಂದಿನ ಮಾತು ನಾನು ಬೆಂಗಳೂರಿಗೆ ಹೋದಾಗಲೆಲ್ಲ ನಾನು, ನನ್ನ ತಮ್ಮ ಕಾಫಿಗೆಂದೇ ಆಚೆ ಹೋಗುತ್ತಿದ್ದೆವು. ಮಯ್ಯಾಸ್ ಕಾಫಿ, ಇಂಡಿಯನ್ ಕಾಫಿ ಹೌಸ್, ಮಾವಳ್ಳಿ ಟಿಫನ್ಸ್, ಅಡಿಗಾಸ್ ಹೊಟೇಲಿನ ಕಾಫಿಗಳ ರುಚಿಯನ್ನು ತೋರಿಸಿದ್ದ. ಆದರೆ ಈಗ ಸಮಯವಿಲ್ಲ, ಆದರೆ ಕಾಫಿಗಂತೂ ಹೋಗುತ್ತೇವೆ.ಈಗಲೂ ಬೆಂಗಳೂರಿನಿಂದ ಹಾಸನಕ್ಕೆ ಬಸ್ ಹತ್ತಲು ನವರಂಗ್ ಬಳಿ ನನ್ ತಮ್ಮ ನನ್ನನ್ನು ಬಿಡಲು ಬರುತ್ತಾನೆ.
ಆಗ ಮಲ್ಲೇಶ್ವರಂನ ಯಾವುದಾದರೂ ಕಾಫಿ ಶಾಪ್ ಹೊಕ್ಕೇ ಹೊಕ್ಕುತ್ತೇವೆ. ಕಾಫಿಯನ್ನು ನಿಧಾನವಾಗಿ ಗುಟುಕಿಸಿಕೊಳ್ಳುತ್ತಾ ಮಾತನಾಡಿಕೊಳ್ಳುತ್ತೇವೆ. ಕಡೆಯ ಗುಟುಕು ಬಂದರೆ “ ಸಿಗಣ! ಹುಷಾರು, ಫೋನ್ ಮಾಡು, ಬಾಯ್” ಅನ್ನುವ ಅಧಿಕೃತ ಸಂದೇಶ ಬಂದಂತೆ ಸರಿ! ಅದೇ ನಮ್ಮ ಕಾಫಿ ವಿದಾಯ! ಈಗಲೂ ಈ ಬರೆಹವನ್ನು ಮುಗಿಸುತ್ತಿರುವುದು ಸಹೃದಯರಿಗೆ ಕಾಫಿ ವಿದಾಯ ಹೇಳಿಯೇ . ಆದರೆ ನನಗಿದು ಕಾಫಿ ವಿರಾಮ!






0 Comments