ನಾವು ಏನನ್ನು ಕಾಯಲು ಸಿದ್ಧ ?

ನಾ ದಿವಾಕರ

ಪ್ರಸ್ತುತ ಲೋಕಸಭಾ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ – “ಭಾರತದ ಪ್ರಜೆಗಳಾದ ನಾವು” ಕಳೆದುಕೊಳ್ಳುತ್ತಿರುವುದೇ ಹೆಚ್ಚುಎಂದು ಸ್ಪಷ್ಟವಾಗುತ್ತಿದೆ. ಪ್ರಪ್ರಥಮ ಬಾರಿಗೆ ಈ ದೇಶ ವ್ಯಕ್ತಿ ಪ್ರತಿಷ್ಠೆಯ ಗೀಳಿಗೆ ಬಲಿಯಾಗುತ್ತಿದ್ದು ಸಮಷ್ಟಿ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವುದನ್ನು ಹೆಜ್ಜೆ ಹೆಜ್ಜೆಗೂ ಗಮನಿಸಬಹುದು.

ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಎಂದರೆ ಪ್ರತಿಷ್ಠೆಗಳ ಸಂಘರ್ಷವಲ್ಲ, ವ್ಯಕ್ತಿತ್ವಗಳ ಸಂಘರ್ಷವಲ್ಲ, ಘೋಷಣೆಗಳ ಸಂಘರ್ಷವಲ್ಲ . ಈ ಕನಿಷ್ಟ ಪ್ರಜ್ಞೆಯನ್ನೂ ನಾವು ಕಳೆದುಕೊಂಡಿರುವಂತೆ ಭಾಸವಾಗುತ್ತಿದೆ. ನಿಜ, ಪಕ್ಷ ರಾಜಕಾರಣದ ವಾತಾವರಣದಲ್ಲಿ ನಾಯಕತ್ವವೂ ಒಂದು ನಿರ್ಣಾಯಕ ಅಂಶ. ಆದರೆ ನಾಯಕತ್ವವನ್ನು ಶೋಧಿಸಬೇಕಿರುವುದು ಸಂವಿಧಾನದ ಚೌಕಟ್ಟಿನಲ್ಲಿ, ಮೌಲ್ಯಗಳ ನೆಲೆಯಲ್ಲಿ, ಜನಪರ ನಿಲುವಿನ ನಡುವಿನಲ್ಲಿ.

ದುರಂತ ಎಂದರೆ ಈ ಮೂರೂ ಅಂಶಗಳು ಪ್ರಸ್ತುತ ಚುನಾವಣೆಯಲ್ಲಿ ಕಳೆದುಹೋಗಿವೆ. 70 ವರ್ಷಗಳ ಕಾಲ ಯಾವುದೇ ಶತ್ರು ರಾಷ್ಟ್ರಗಳಿಗೆ ಮಣಿಯದೆ ಅಸ್ತಿತ್ವ ಉಳಿಸಿದಕೊಂಡಿರುವ ಒಂದು ಬೃಹತ್ ರಾಷ್ಟ್ರವನ್ನು ಸೇನೆಯ ಮಡಿಲಿಗೆ ಹಾಕಿ, ದೇಶದ ಸುರಕ್ಷತೆಯನ್ನೇ ಘೋಷವಾಕ್ಯವನ್ನಾಗಿ ಬಳಸುತ್ತಿರುವ ಕ್ಷುದ್ರ ರಾಜಕಾರಣ ಈ ದೇಶದ ಜನಸಾಮಾನ್ಯರನ್ನು ಅವಮಾನಿಸಿದಂತಲ್ಲವೇ ? ಪ್ರಪ್ರಥಮ ಬಾರಿಗೆ ಸೇನೆ ಮತ್ತು ಸೇನಾ ಬಲ ಸಾಂವಿಧಾನಿಕ ಚೌಕಟ್ಟಿನಲ್ಲಿ ಬಳಕೆಯ ವಸ್ತುವಾಗಿದೆ.  ಪಾಕಿಸ್ತಾನದಲ್ಲಿ ಇದು ಸಹಜ, ಸಾಮಾನ್ಯ ಸಂಗತಿ ಆದರೆ ಭಾರತ ?

“ಭಾರತದ ಪ್ರಜೆಗಳಾದ ನಾವು”  ಸಂವಿಧಾನದ ಈ ಪದಗಳನ್ನು ಉಚ್ಚರಿಸುವಾಗ ಪ್ರಜೆಗಳು ಎಂದರೆ ಯಾರು ಎಂಬ ಪ್ರಶ್ನೆಯೂ ನಮಗೆ ಎದುರಾಗುತ್ತಿದೆ. ಏಕೆಂದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳಲಾಗುತ್ತದೆ. ಹಾಗಾದರೆ ಪ್ರಭುಗಳು ಎಂದರೆ ಯಾರು ? ನಮ್ಮನ್ನು ಆಳುವವರೇ ಅಥವಾ ಆಳುವ ಪ್ರತಿನಿಧಿಗಳನ್ನು ಆಯ್ಕೆ ಮಾಡುವವರೇ ?

ಪ್ರಸ್ತುತ ಉನ್ಮಾದ ಪೂರ್ಣ ವಾತಾವರಣದಲ್ಲಿ ಈ ಪ್ರಶ್ನೆಯೇ ದೇಶದ್ರೋಹದ ಚೌಕಟ್ಟಿಗೆ ಸಿಲುಕುವ ಸಾದ್ಯತೆಗಳಿವೆ. ಆದರೆ ನಮ್ಮ ಸಂವಿಧಾನ ಈ ಹಕ್ಕನ್ನು ಪ್ರಜೆಗಳಿಗೆ ನೀಡಿದೆ. ಆಡಳಿತಾರೂಢ ಪಕ್ಷಗಳು ಮತ್ತು ಅಧಿಕಾರಪೀಠಕ್ಕಾಗಿ ಹಂಬಲಿಸುತ್ತಿರುವ ಮುಖ್ಯವಾಹಿನಿಯ ಪಕ್ಷಗಳು ಪ್ರಜೆಗಳ ಸಾರ್ವಭೌಮತ್ವಕ್ಕೆ ಮನ್ನಣೆಯನ್ನೇ ನೀಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ ನಾಗರಿಕ ಸಮಾಜ ನಿರುಮ್ಮಳವಾಗಿರುವುದನ್ನು ನೋಡಿದರೆ , ನಾವು – ಭಾರತದ ಪ್ರಜೆಗಳು – ಯಾವುದೋ ಒಂದು ಸಮೂಹ ಸನ್ನಿಗೆ ಒಳಗಾಗಿರುವುದು ಸ್ಪಷ್ಟವಾಗುತ್ತದೆ. ಜಾತಿ, ಧರ್ಮ ಮತ್ತು ಹಣಬಲದೊಂದಿಗೆ ಇದೀಗ ಸೇನೆಯೂ ಸಮೂಹ ಸನ್ನಿ ತಯಾರಿಸುವ ಕಚ್ಚಾವಸ್ತುವಾಗಿರುವುದನ್ನೂ ಮೌನವಾಗಿ ಸಹಿಸಿಕೊಳ್ಳುತ್ತಿದ್ದೇವೆ.

ಪರಿಣಾಮ ? 25 ವರ್ಷಗಳಿಂದಲೂ ಕಾಗದ, ಕಡತ ಮತ್ತು ಘೋಷಣೆಗಳಲ್ಲೇ ಉಳಿದಿರುವ ಒಂದು ಆಶಯ ಅನಾಥವಾಗಿಬಿಟ್ಟಿದೆ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ವಿಚಾರದಲ್ಲಿ ಯಾವೊಂದು ಪಕ್ಷವೂ ಸೊಲ್ಲೆತ್ತುತ್ತಿಲ್ಲ. ಯಾವ ಪಕ್ಷದಲ್ಲೂ ಮಹಿಳೆಯರು ತಮ್ಮ ಹಕ್ಕು ಪ್ರತಿಪಾದನೆಯಲ್ಲಿ ತೊಡಗಿಲ್ಲ. ಕೆಲವೇ ಪ್ರಗತಿಪರ ದನಿಗಳನ್ನು ಹೊರತುಪಡಿಸಿದರೆ ಮಹಿಳಾ ಸಂಘಟನೆಗಳೂ ಸಹ  ಮರೆತುಹೋಗಿವೆ. ಏಕೆ ಹೀಗೆ ?

ಸಮೂಹ ಸನ್ನಿಯ ಫಲವೋ ಅಥವಾ ಇದೇನೂ ಅಷ್ಟು ಮುಖ್ಯವಲ್ಲ ಎನ್ನುವ ನಿಕೃಷ್ಟ ಭಾವನೆಯೋ ? ಇದು ರಾಜಕೀಯ ಬದುಕಿನ ಪ್ರಶ್ನೆ ನಿತ್ಯ ಬದುಕಿನ ಪ್ರಶ್ನೆಯಲ್ಲ. ಆದರೆ ನಿತ್ಯ ಬದುಕಿನ ಪ್ರಶ್ನೆಯಾಗಿರುವ ರೈತರ ಆತ್ಮಹತ್ಯೆ ಮತ್ತು ಕೃಷಿ ಬಿಕ್ಕಟ್ಟನ್ನು ಕುರಿತು ಯಾವುದೇ ಪಕ್ಷ ಸ್ಪಷ್ಟವಾಗಿ ಮಾತನಾಡುತ್ತಿದೆಯೇ  ? ಸೂಕ್ಷ್ಮ ದರ್ಶಕದ ಮೂಲಕ ಹುಡುಕಿದರೂ ಅಕ್ಷರಗಳು ಸಿಗಲಾರವು.

ವಿದರ್ಭದಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ಮೋದಿ ಹಿಂದೂ ಭಯೋತ್ಪಾದನೆಯ ಸುತ್ತ ಉಪನ್ಯಾಸ ಮಾಡಿದರೇ ಹೊರತು, ನೇತಾಡಿದ ರೈತರ ಶವಗಳ ಬಗ್ಗೆ ಪ್ರಸ್ತಾಪಿಸಿಯೂ ಇಲ್ಲ. ಅಂದರೆ  ರೈತರ ಸಮಸ್ಯೆ, ಕೃಷಿ ಬಿಕ್ಕಟ್ಟು ಇಲ್ಲವೇ ಇಲ್ಲ ಎಂದೆಣಿಸಬಹುದೇ ? 40 ಹುತಾತ್ಮರಿಗೆ ಮಿಡಿದು ಕಂಬನಿ ಸುರಿಸುವ ಮನಸುಗಳು ಮೂರು ಲಕ್ಷ ಹುತಾತ್ಮರಿಗೇಕೆ ಸ್ಪಂದಿಸುವುದಿಲ್ಲ ? ಮೃತ ರೈತರು ಕೇವಲ ಪ್ರೇತಾತ್ಮಗಳೇ ?

ಈ ರೀತಿಯ ಪ್ರೇತಾತ್ಮಗಳ ಸಂಖ್ಯೆ ಹೆಚ್ಚಾಗಿಯೇ ಇವೆ.  ರೈತರ ಆತ್ಮಹತ್ಯೆ ಗೋಚರಿಸುತ್ತಿದೆ. ಏಕೆಂದರೆ ಬೇಕೋ ಬೇಡವೋ ಅದು ರಾಜಕೀಯ ಸಂಕಥನದ ಭಾಗವಾಗಿಬಿಡುತ್ತದೆ. ವಿರೋಧ ಪಕ್ಷಗಳ ಬ್ರಹ್ಮಾಸ್ತ್ರವಾಗಿಯಾದರೂ ಮನ್ನಣೆ ಪಡೆಯುತ್ತದೆ. ಆದರೆ ಅಬ್ಬೇಪಾರಿಗಳೆಂದರೆ ಸದ್ದಿಲ್ಲದೆ ಸಾಯುತ್ತಿರುವ ವಲಸೆ ಸ್ವಚ್ಚತಾ ಕಾರ್ಮಿಕರು, ವಲಸೆ ಕಾರ್ಮಿಕರು, ಆದಿವಾಸಿಗಳು ಮತ್ತು ಜಾತಿ ದೌರ್ಜನ್ಯಕ್ಕೆ ದಿನನಿತ್ಯ ಬಲಿಯಾಗುತ್ತಿರುವ ದಲಿತರು, ಅವಕಾಶವಂಚಿತರು.

ತಮ್ಮ ಭವಿಷ್ಯದ ಹೆಜ್ಜೆಗಳನ್ನು ಗುರುತಿಸಲೂ ಪರದಾಡುತ್ತಿರುವ ನಿರುದ್ಯೋಗಿ ಯುವ ಪಡೆಯನ್ನೂ ಇದೇ ಗುಂಪಿಗೆ ಸೇರಿಸಬಹುದು. ಏಕೆಂದರೆ ಹೊಸ ರಾಜಕೀಯ ಪರಿಭಾಷೆಯಲ್ಲಿ ಉದ್ಯೋಗ  ಎಂದರೆ ಎರಡು ಹೊತ್ತಿನ ಕೂಳು ಸಂಪಾದಿಸುವುದಷ್ಟೇ ? ಹಾಗೆ ನೋಡಿದರೆ ಭಿಕ್ಷಾಟನೆಯೂ !                ಈ ಗ್ರಹಿಕೆಯ ಬೌದ್ಧಿಕ ವಿಕೃತಿಯನ್ನು ಸಫಾಯಿ ಕರ್ಮಚಾರಿಗಳ ಪಾದ ತೊಳೆಯುವ ಪ್ರಕ್ರಿಯೆಯಲ್ಲಿ ಕಾಣಬಹುದು. ಹಾಗೆಯೇ ನಾನೂ ಚೌಕಿದಾರ  ಎನ್ನುವ ಘೋಷಣೆಯಲ್ಲೂ ಕಾಣಬಹುದು.

‘ಮೈ ಭೀ ಚೌಕಿದಾರ್ – ನಾನೂ ಕಾವಲುಗಾರ’ ಈ ಘೋಷಣೆಯ ಸಮೂಹ ಸನ್ನಿಗೆ ಒಳಗಾಗಿರುವ ಸಮಸ್ತ ನಾಗರಿಕ(?)ರೂ ತಮ್ಮನ್ನೇ ಕೇಳಿಕೊಳ್ಳಬೇಕಾದ ಹಲವು ಪ್ರಶ್ನೆಗಳಿವೆ. ಸಾಮಾನ್ಯವಾಗಿ ನಾವು ಕಾವಲುಗಾರರನ್ನು ನೋಡುವುದು ಹೇಗೆ ? ಸದಾ ನಮ್ರತೆಯಿಂದ  ಇರಬೇಕು. ತಲೆ ತಗ್ಗಿಸಿಯೇ ನಡೆಯಬೇಕು.ಎದುರು ಮಾತನಾಡಕೂಡದು.  ತನ್ನ ಸ್ಥಾನದಿಂದ ಕದಲ ಕೂಡದು. ರಾತ್ರಿ ಪಾಳಿಯಲ್ಲಿ ತೂಕಡಿಸುವುದೂ  ಅಪರಾಧ. ಇತ್ಯಾದಿ.

ಇನ್ನು ನಾವು ಅವರನ್ನು ಗೌರವಿಸುವ ಬಗೆ ಹೇಗೆ ? ಎಷ್ಟೇ ಹಿರಿಯರಾದರೂ ಏಕವಚನದಲ್ಲೇ ಸಂಬೋಧಿಸುವುದು. ಸರ್ ಎಂದೋ ಸ್ವಾಮಿ ಎಂದೋ ಎಂದಾದರೂ ಕರೆದಿದ್ದುಂಟೇ ? ಮಕ್ಕಳು ಅಂಕಲ್ ಎನ್ನುತ್ತಾರೆ ಅದು ಆಂಗ್ಲ ವ್ಯಾಮೋಹದ ಪರಿಣಾಮವಷ್ಟೇ ಭಾವನಾತ್ಮಕವಾಗಿ ಅಲ್ಲ. ಅಂದರೆ ನಾನೂ ಕಾವಲುಗಾರ ಎಂಬ ಘೋಷಣೆಯ ಹಿಂದಿರುವ ಉದ್ದೇಶ, ನಾವು ನಮ್ಮ ದೇಶವನ್ನು ಕಾಯುತ್ತೇವೆ ಎನ್ನುವ ಧೋರಣೆಯಲ್ಲ. ಭವಿಷ್ಯದಲ್ಲಿ ಈ ದೇಶ ಕಾರ್ಪೋರೇಟ್ ವಶವಾಗಿ ಪ್ರಜಾತಂತ್ರ ಮೌಲ್ಯಗಳನ್ನು ಕಳೆದುಕೊಂಡು ಯಾವುದೋ ಒಂದು ಏಕಸ್ವಾಮ್ಯಕ್ಕೆ ಒಳಪಟ್ಟಾಗ ನಾವು, ಭಾರತದ ಪ್ರಜೆಗಳು, ಕಾವಲುಗಾರರಂತೆ ಇರುತ್ತೇವೆ ಎಂದು.

ಆದರೆ ಎಂದಾದರೂ ನಾವು ಈ ದೇಶದ ಅವಕಾಶವಂಚಿತರಿಗೆ, ದುರ್ಬಲರಿಗೆ, ಜಾತಿ ದೌರ್ಜನ್ಯವನ್ನು ನಿರಂತರವಾಗಿ ಅನುಭವಿಸುತ್ತಿರುವ ಸಮುದಾಯಗಳಿಗೆ, ನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಮಹಿಳೆಯರಿಗೆ ,  ಇಂದಿನ ಪರಿಸ್ಥಿತಿಯಲ್ಲಿ ಬಾಲಕಿಯರಿಗೆ, ಹೆಣ್ಣು ಹಸುಳೆಗಳಿಗೆ, ವೃದ್ಧೆಯರಿಗೆ ಎನ್ನಲೂಬಹುದು,  ವಲಸೆ ಕಾರ್ಮಿಕರಿಗೆ ಕಾವಲುಗಾರರಾಗಲು ಮುಂದಾಗಿದ್ದೇವೆಯೇ ? ಹೌದು ಎನ್ನುವ ಧೀಶಕ್ತಿ ನಮಗಿದೆಯೇ ? ಇಲ್ಲ ಎಂದಾದರೆ ನಾನೂ ಕಾವಲುಗಾರ  ಎಂದರೆ ಕಾಯುವುದು ಏನನ್ನು ? ಯಾರನ್ನು ? ಇದು ಪ್ರಜ್ಞೆಗೆ ಸಂಬಂಧಿಸಿದ ಪ್ರಶ್ನೆ.
ಪ್ರಜ್ಞೆ ಮತ್ತು ಪ್ರಶ್ನೆಗಳ ತಾಕಲಾಟದಲ್ಲಿ ನಾವು ಶೋಧಿಸುತ್ತಿರುವುದು ಏನನ್ನು ? ಇದು ಈ ಚುನಾವಣೆಗಳ ಸಂದರ್ಭದಲ್ಲಿ ನಮ್ಮನ್ನು ಕಾಡಬೇಕಾದ ಅಂಶ.

‍ಲೇಖಕರು avadhi

April 9, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: