ನಾಲ್ಕಾಣೆ ಇಲ್ಲದಿದ್ದರೂ ಮುನ್ನೂರು ಜನರ ಹೊಟ್ಟೆ ಹಸಿವು ತಣಿದಿತ್ತು.!

ವಿಠ್ಠಲ ಮೂರ್ತಿ

ಮದುವೆ ನಡೆಯುತ್ತಿದ್ದ ಛತ್ರಕ್ಕೆ ನುಗ್ಗಿ
ಹೊಟ್ಟೆ ಹಸಿವು ತಣಿಸಿಕೊಂಡಿದ್ದೆವು

ಅವತ್ತು ಹೊಟ್ಟೆ ರಣಗುಡುತ್ತಿತ್ತು.

ಹಸಿವು ಎಂದರೆ ಎಂತಹ ಹಸಿವು?ಬೆಂಕಿ ಬಿದ್ದ ನೆಲದಂತೆ ರಣ, ರಣ, ಆ ರಣ ಹಸಿವನ್ನು ಒಂದು ಕಲ್ಯಾಣ ಮಂಟಪ ತಣಿಸಿತು. ನೆನಪಿಸಿಕೊಂಡರೆ ಇವತ್ತೂ ಮನಸ್ಸು ಆರ್ದವಾಗುತ್ತದೆ ಅಂತ ಹೇಳಿದ ಅವರು ಮೌನಕ್ಕೆ ಜಾರಿದರು.

ಅವರ ಹೆಸರು ವಾಟಾಳ್‌ ನಾಗರಾಜ್‌.

ಸುಮಾರು ಆರು ದಶಕಗಳಿಂದ ನಾಡು, ನುಡಿಗಾಗಿ ಹೋರಾಡುತ್ತಿರುವ ಅವರಿಗೆ ಇದೊಂಥರಾ ಆತ್ಮಕಥೆ ಪುಸ್ತಕ ಕೊಡಲು ಇವತ್ತು ಕಬ್ಬನ್‌ ಪಾರ್ಕ್‌ ನ ವಾಟಾಳ್‌ ಪಾಯಿಂಟ್‌ ಗೆ ಹೋಗಿದ್ದೆ.

ಈ ವಾಟಾಳ್‌ ಪಾಯಿಂಟ್‌ ಅಂದರೆ ಒಂದು ಕಲ್ಲುಬೆಂಚು. ಈ ಕಲ್ಲು ಬೆಂಚು ಎಂದರೆ ವಾಟಾಳ್‌ ನಾಗರಾಜ್‌ ಅವರಿಗೆ ಬಹಳ ಇಷ್ಟ. ಅದೇನೇ ಕೆಲಸದ ಒತ್ತಡವಿರಲಿ, ಬಿಡುವು ಮಾಡಿಕೊಂಡು ಅವರು ವಾರದ ಬಹುತೇಕ ದಿನ ಆ ಜಾಗಕ್ಕೆ ಬಂದು ಕೂರುತ್ತಾರೆ.

ಹೀಗೆ ಅವರು ಬಂದು ಕೂತರೆ ಸಾಕು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುವ ಜನರ ದಂಡು. ಸಾರ್‌, ನನ್ನ ಜತೆಗೊಂದು ಸೆಲ್ಫಿ ಅನ್ನುವವರ ಪೈಕಿ ಬಹುತೇಕರು ಯುವಕ, ಯುವತಿಯರು.

ಹೀಗೆ ಆರು ದಶಕಗಳ ಕಾಲದುದ್ದಕ್ಕೂ ಒಂದು ಹೆಸರು ಆ ತರದ ಜನಮೆಚ್ಚುಗೆಯನ್ನು ಉಳಿಸಿಕೊಂಡು ಬರುವುದಿದೆಯಲ್ಲ?ಅದು ಸಣ್ಣ ವಿಷಯವೇನಲ್ಲ.

ಇರಲಿ, ಮುಖ್ಯ ವಿಷಯಕ್ಕೆ ಬರುತ್ತೇನೆ. ಇತ್ತೀಚೆಗೆ ಬಿಡುಗಡೆಯಾದ ಇದೊಂಥರಾ ಆತ್ಮಕಥೆ ಪುಸ್ತಕ ಕೊಡಲು ವಾಟಾಳ್‌ ಪಾಯಿಂಟ್‌ ಗೆ ಹೋದೆನಲ್ಲ?ಅಲ್ಲೇ ಇದ್ದರು ವಾಟಾಳ್‌. ನೋಡಿದ ಕೂಡಲೇ ಅದೇ ಪ್ರೀತಿ. ಪುಸ್ತಕವನ್ನು ತಿರು ತಿರುವಿ ನೋಡಿದರು. ಪಿ.ಕಾಳಿಂಗರಾಯರ ಬಗ್ಗೆ ಅವರೇ ಹೇಳಿದ್ದನ್ನು ಮತ್ತೆ ಓದಿಕೊಂಡರು.

ನಾನು ಸುಮ್ಮನಿರಲಾಗದೆ:ಸಾರ್‌, ಈ ಚಳವಳಿಗಳನ್ನು ಮಾಡುವ ಕಷ್ಟದ ಬಗ್ಗೆ ತುಂಬ ಜನರಿಗೆ ಗೊತ್ತೇ ಇರುವುದಿಲ್ಲ. ನಿಮ್ಮ ಹೋರಾಟದ ದಾರಿ ಬಹುದೊಡ್ಡದು. ಅಲ್ಲಿ ಮರೆಯಲಾಗದ ನೂರಾರು ಕತೆಗಳಿವೆ. ಅದರಲ್ಲಿ ನಿಮ್ಮ ಹೃದಯಕ್ಕೆ ಅಂಟಿಕೊಂಡ ಒಂದು ಕತೆ ಹೇಳಿ ಸಾರ್‌ ಎಂದೆ.

ಒಂದು ಸಲ ಚಳವಳಿ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದೆವು ವಿಠ್ಠಲಮೂರ್ತಿ. ಹೊರಬಂದರೆ ಜೇಬಿನಲ್ಲಿ ನಾಲ್ಕಾಣೆಯೂ ಇಲ್ಲ. ಆದರೆ ಹೊಟ್ಟೆ ಚುರುಗುಡುತ್ತಿತ್ತು. ಒಬ್ಬಿಬ್ಬರದಲ್ಲ, ಜತೆಗಿದ್ದ ಮುನ್ನೂರಕ್ಕೂ ಹೆಚ್ಚು ಜನರದು ಎಂದರು ವಾಟಾಳ್.‌

ನಾನು ಸುಮ್ಮನೆ ಕುಳಿತು ಆಲಿಸತೊಡಗಿದೆ.ವಾಟಾಳ್‌ ಹೇಳತೊಡಗಿದರು. ಅದಾಗಿದ್ದು ಹೀಗೆ ವಿಠ್ಠಲಮೂರ್ತಿ. ಸರ್ಕಾರ ಕನ್ನಡಿಗರ ಸಂಕಟದ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಒಂದು ಸಲ ನಾವು ಚಳವಳಿ ಹಮ್ಮಿಕೊಂಡೆವು. ಅದು ಮಂತ್ರಿಗಳನ್ನು ತಡೆಯುವ ಚಳವಳಿ.

ಮಂತ್ರಿಗಳು ವಿಧಾನಸೌಧಕ್ಕೆ ಬರದಂತೆ ತಡೆಯುವ, ಅವರನ್ನು ಬಲವಂತವಾಗಿ ನಾವೇ ಹಿಡಿದುಕೊಳ್ಳುವ ಚಳವಳಿ ಅದು. ಸರಿ, ಚಳವಳಿಯ ದಿನ ನೂರು ಜನ ಸೇರಿದೆವು.  ಪಾಪ, ಸಮಸ್ಯೆ ಹೇಳಿಕೊಂಡು ಇನ್ನೂರೈವತ್ತು ಮಂದಿಯ ತಂಡವೊಂದು ಅವತ್ತು ನಾನಿರುವ ಜಾಗಕ್ಕೆ ಬಂದಿತ್ತು.

ರೀ.. ನಿಮ್ಮ ಸಮಸ್ಯೆ ಪರಿಹರಿಸುತ್ತೇವೆ. ಆದರೆ ನೀವು ಈ ಚಳವಳಿಗೆ ಬರಬೇಕು. ಅಲ್ಲಿ ಮಂತ್ರಿಗಳನ್ನು ನಮ್ಮವರು ಹಿಡಿದುಕೊಳ್ಳುತ್ತಾರೆ. ಬಲಕ್ಕೆ ಅಂತ ಹಿಂದೆ ನೀವಿರಿ ಅಂತ ಅವರಿಗೆ ನಾನು ಷರತ್ತು ಹಾಕಿದೆ.

ಅದಕ್ಕವರು ಒಪ್ಪಿದರು. ಗಂಡಸರು, ಹೆಂಗಸರು ಅಂತ ಎಲ್ಲರೂ ಸಧೃಡ ಮೈಕಟ್ಟಿನ ಜನ. ಅವತ್ತು ಅವರೂ ಚಳವಳಿಗೆ ಅಂತ ಜತೆಗೆ ಬಂದರು. ಸರಿ, ವಿಧಾನಸೌಧದ ಪಶ್ಚಿಮದ್ವಾರದ ಬಳಿ ಸೇರಿಕೊಂಡ ನಾವು ಮೊದಲು ಬಂದ ಸಚಿವ ವೈ.ರಾಮಚಂದ್ರ ಅವರನ್ನು ಹಿಡಿದುಕೊಂಡೆವು.

ನಾವು ಚಳವಳಿ ಮಾಡುವುದು ಸರ್ಕಾರಕ್ಕೆ ಗೊತ್ತಿತ್ತು. ಹಾಗಂತ ಮೊದಲೇ ಪೊಲೀಸರಿಗೆ ಮುನ್ಸೂಚನೆ ಕೊಟ್ಟಿತ್ತು. ಹೀಗಾಗಿ ನಾವು ಮಂತ್ರಿಗಳನ್ನು ತಡೆಯುವ ಚಳವಳಿ ಆರಂಭಿಸಿದ್ದೇ ತಡ ಎಲ್ಲ ಕಡೆಯಿಂದ ಪೊಲೀಸರು ನುಗ್ಗತೊಡಗಿದರು.

ಅಷ್ಟೊತ್ತಿಗಾಗಲೇ ನಮ್ಮವರಿಂದ ಮುತ್ತಿಗೆಗೆ ಒಳಗಾಗಿದ್ದ ಸಚಿವ ವೈ.ರಾಮಚಂದ್ರ ಅವರು, ಇದೇನ್ರೀ ಉದ್ಧಟತನ. ಮಂತ್ರಿಗಳು ವಿಧಾನಸೌಧಕ್ಕೆ ಬರುವುದನ್ನು ತಡೆಯುವುದು ಎಂದರೇನು? ಇದು ಒಂದು ಸರ್ಕಾರವನ್ನೇ ತಡೆದಂತೆ ಅನ್ನುವುದು ನಿಮಗೆ ಗೊತ್ತಾ? ಎಂದು ಕೂಗಾಡತೊಡಗಿದ್ದರು.

ಹೀಗೆ ಎಲ್ಲವೂ ಸೇರಿ ಪರಿಸ್ಥಿತಿ ಅಯೋಮಯವಾಯಿತು. ಆದರೆ ಮೊದಲೇ ಸಿದ್ಧವಾಗಿ ಬಂದಿದ್ದ ಪೋಲೀಸರು ಮುನ್ನೂರಕ್ಕೂ ಹೆಚ್ಚು ಜನರನ್ನು ಅರೆಸ್ಟ್‌ ಮಾಡಿದರು. ನೇರವಾಗಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಗೆ ಕರೆದುಕೊಂಡು ಹೋದರು.

ಕೋರ್ಟ್‌ ನಮಗೆಲ್ಲ ಜೈಲು ಶಿಕ್ಷೆ ವಿಧಿಸಿತು. ಹೀಗಾಗಿ ನಮ್ಮನ್ನೆಲ್ಲ ಹೊತ್ತ ವ್ಯಾನುಗಳು ಸೆಂಟ್ರಲ್‌ ಜೈಲಿಗೆ ಧಾವಿಸಿದವು. ನಮಗೆ ಇದೇನೂ ಹೊಸತಲ್ಲ, ಆದರೆ ಬೆಳಗ್ಗೆ ಕೆಲಸ ಮಾಡಿಕೊಡಿ ಎಂದು ಬಂದಿದ್ದ ಇನ್ನೂರೈವತ್ತು ಜನರ ಗತಿ?

ಆ ಪೈಕಿ ಹೆಂಗಸರು ಜೈಲಿನ ಹೊರಭಾಗದಲ್ಲಿ ನಿಂತು ಜೋರಾಗಿ ಅಳತೊಡಗಿದರು. ಅವರನ್ನು ನೋಡಿ ಒಳಗೆ ಬಂದ ಗಂಡಸರೂ ಅಳತೊಡಗಿದರು. ಆದರೆ ಒಂದೆರಡು ದಿನವಾಯಿತು. ಅಷ್ಟರಲ್ಲಿ ಜೈಲು ಸೇರಿದ ಆ ಜನರೂ ಹೊಂದಿಕೊಂಡು ಬಿಟ್ಟರು.

ಆಗೆಲ್ಲ ಜೈಲಿನಲ್ಲಿ ಅಡುಗೆ ಮಾಡುತ್ತಿದ್ದುದು ಹಿರಿಯ ಖೈದಿಗಳು. ಅವರಿಗೆಲ್ಲ ವಾಟಾಳ್‌ ನಾಗರಾಜ್‌ ಜೈಲಿಗೆ ಬಂದಿದ್ದಾರೆ ಎಂಬುದೇ ಸಂಭ್ರಮ. ಹಾಗಂತಲೇ ತಮ್ಮ ಕೈಲಿ ಸಾಧ್ಯವಿರುವಷ್ಟನ್ನು ಮಾಡಿ ಬಡಿಸುತ್ತಿದ್ದರು. ಆದರೆ ಎಷ್ಟೇ ಮಾಡಿ ಬಡಿಸಿದರೂ ಇರುವುದು ಮುನ್ನೂರೈವತ್ತು ಜನ. ಹೀಗಾಗಿ ಪೂರ್ತಿ ಹೊಟ್ಟೆ ತುಂಬುತ್ತಿರಲಿಲ್ಲ.

ಹೀಗೇ ಒಂಭತ್ತು ದಿನಗಳು ಕಳೆದಿವೆ. ನಮ್ಮನ್ನು ಜಾಮೀನಿನ ಮೇಲೆ ಹೊರಗೆ ಬಿಟ್ಟರು. ಜೈಲಿನ ಹೊರಗೆ ಬಂದು ನಿಲ್ಲುತ್ತೇವೆ. ಆಗಲೇ ಮಧ್ಯಾಹ್ನ ಒಂದು ಗಂಟೆ. ಹೊಟ್ಟೆ ಹಸಿವು ಎಂದರೆ ಹೇಳಬಾರದು. ಆ ತರದ ಹಸಿವು. ಜೇಬಿನಲ್ಲಿ ನೋಡಿದರೆ ನಾಲ್ಕಾಣೆ ಇಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿದ್ದುದು ಮುನ್ನೂರಕ್ಕಿಂತ ಹೆಚ್ಚು ಜನ. ಮುಂದೇನು ಮಾಡುವುದಪ್ಪ ಅಂತ ಯೋಚಿಸುತ್ತಾ ರಸ್ತೆಗೆ ಬಂದರೆ ಒಬ್ಬ ವ್ಯಕ್ತಿ ನಮ್ಮ ದಾರಿಗೆ ಅಡ್ಡ ಬಂದರು. ತಮ್ಮೆರಡೂ ಕೈಗಳನ್ನು ಅಗಲಿಸಿ, ಸ್ಟಾಪ್‌, ಸ್ಟಾಪ್‌ ಎಂದರು.

ಯಾರು ಅಂತ ನೋಡಿದರೆ ಅವರು ನಮ್ಮ ದೀನಬಂಧು ವಿ.ಆರ್.ನಾಯ್ಡು. ಅವತ್ತಿನ ಕಾಲದಲ್ಲಿ ಅವರ ಹೆಸರು ಕೇಳದವರೇ ಇಲ್ಲ. ಯಾರೇ ಕಷ್ಟ ಅಂತ ಬರಲಿ, ತಕ್ಷಣ ನೆರವಿಗೆ ಧಾವಿಸುತ್ತಿದ್ದ ಮಹಾ ವ್ಯಕ್ತಿ ವಿ.ಆರ್.ನಾಯ್ಡು. ಅದಕ್ಕಾಗಿಯೇ ಅವರಿಗೆ ದೀನಬಂಧು ಅಂತ ಹೆಸರು ಬಂದಿತ್ತು.

ಅವರು ನಮಗೆ ಅಡ್ಡ ನಿಂತವರು:ವಾಟಾಳ್‌ ನಾಗರಾಜ್‌ ಅವರೇ, ಗುಂಪು ಕಟ್ಟಿಕೊಂಡು ಎಲ್ಲಿಗೋ ಹೊರಟಿದ್ದೀರಿ ಎಂದು ಪ್ರಶ್ನಿಸಿದರು. ಚಳವಳಿ ಮಾಡಿ ಜೈಲಿಗೆ ಹೋಗಿದ್ದಿವಿ ಅಂತ ನಾನು ಹೇಳಿದೆ.

ಸರಿ..ಸರಿ.. ಇಲ್ಲೇ ಜನರಲ್‌ ಹಾಸ್ಟೆಲ್‌ ಪಕ್ಕ ಇರುವ ಛತ್ರದಲ್ಲಿ ನಮ್ಮ ಕುಟುಂಬದವರದೊಂದು ಮದುವೆ ಇದೆ. ಮದುವೆಗೆ ಬನ್ನಿ. ಅಲ್ಲೇ ಊಟ ಮಾಡುವಿರಂತೆ ಎಂದರು. ನನಗೆ, ನನ್ನ ಜತೆಗಿದ್ದವರಿಗೆ ಜೀವ ಬಂದಂತಾಯಿತು.

ಆದರೂ ಸುಮ್ಮನಿರದೆ, ಅಯ್ಯೋ, ಇಲ್ಲ..ಇಲ್ಲ.. ಇನ್ನೊಂದು ಚಳವಳಿಗೆ ಹೋಗಬೇಕು ಅಂತ ನಾನು ಹೇಳಿದೆ. ಆದರೆ ಮನಸ್ಸು ಅವರು ಹಿಡಿದ ಪಟ್ಟು ಬಿಡದಿರಲಿ ಅಂತ ಬಯಸುತ್ತಿತ್ತು. ಪಾಪ ಅವರೂ ಮೂರ್ನಾಲ್ಕು ಬಾರಿ ಕರೆದರು.

ನಾನು ಮುಜುಗರ ವ್ಯಕ್ತಪಡಿಸುತ್ತಲೇ ಇದ್ದೆ. ಆದರೆ ನನ್ನ ಅಕ್ಕ-ಪಕ್ಕದಲ್ಲಿದ್ದರಲ್ಲ?ಅವರು ನನ್ನ ತೋಳು ಹಿಡಿದವರೇ:ಅಯ್ಯೋ, ಅವರು ಅಷ್ಟು ಕರೀತಿದ್ದಾರೆ. ಬೇಡ ಅನ್ನೋಕಾಗತ್ತಾ ಸ್ವಾಮಿ. ನಡೀರಿ ಹೋಗಾಣ ಎಂದು ಎಳಕೊಂಡು ನಡೆದೇ ಬಿಟ್ಟರು.

ಸರಿ, ಮದುವೆ ನಡೆಯುತ್ತಿದ್ದ ಛತ್ರಕ್ಕೆ ಹೋದಿವಿ. ಅಲ್ಲಿ ವರ ಯಾರು?ವಧು ಯಾರು?ಅನ್ನುವುದೇ ನಮಗೆ ಗೊತ್ತಿಲ್ಲ. ಆದರೆ ಹೋದವರೇ ಊಟದ ಟೇಬಲ್‌ ಮುಂದೆ ಕುಳಿತು ಬಿಟ್ಟೆವು. ನಮ್ಮ ಜತೆಗೆ ಬಂದವರು ಮೊದಲೇ ಭರ್ಜರಿ ಮೈಕಟ್ಟಿನ ಜನ. ಹಸಿವು ಬೇರೆ ರಣ,ರಣ, ಹೀಗಾಗಿ ಎಲ್ಲರೂ ಹಾ,ಹೋ ಅನ್ನುತ್ತಾ ಬಡಿಸುವವರ ಬಳಿ:ಅದು ತನ್ನಿ,ಇದು ತನ್ನಿ ಎಂದು ಆರ್ಡರು ಮಾಡುತ್ತಾ ಊಟ ಬಾರಿಸತೊಡಗಿದರು.

ಪಾಪ, ಮದುವೆ ಮಾಡುವವರು ಅದೆಷ್ಟು ಜನರನ್ನು ಕರೆದಿದ್ದರೋ? ಏನು ಕತೆಯೋ? ನಾವು ಮುನ್ನೂರಕ್ಕೂ ಹೆಚ್ಚು ಜನ ಕುಳಿತು ಆರು ನೂರು ಜನರು ಮಾಡುವಷ್ಟು ಊಟ ಮಾಡಿ ನಿಟ್ಟುಸಿರು ಬಿಟ್ಟೆವು.

ಊಟದ ನಂತರ ಎಲ್ಲರಿಗೂ ತೆಂಗಿನಕಾಯಿ ಉಪಚಾರ. ನಾವು ಅದನ್ನೂ ಬಿಡಲಿಲ್ಲ. ಎಲ್ಲವನ್ನೂ ಸಂಗ್ರಹಿಸಿದವರು ಮೈಸೂರು ಬ್ಯಾಂಕ್‌ ಸರ್ಕಲ್‌ ಗೆ ತಂದು ಮಾರಿಬಿಟ್ಟೆವು. ಕೈಗೆ ಬಂದ ಹಣ ಮೇಲು ಖರ್ಚಿಗಾಗಲಿ ಅಂತ. ಹೀಗೆ ಅವತ್ತು ಜೇಬಿನಲ್ಲಿ ನಾಲ್ಕಾಣೆಯೂ ಇಲ್ಲದೆ ಮುನ್ನೂರಕ್ಕೂ ಹೆಚ್ಚು ಜನರ ಹೊಟ್ಟೆ ಹಸಿವು ತಣಿದಿತ್ತು.

ಅವತ್ತಿನ ಈ ಘಟನೆಯನ್ನು ನೆನಪಿಸಿಕೊಂಡರೆ ಇವತ್ತೂ ಮನಸ್ಸು ಆರ್ದವಾಗುತ್ತದೆ ವಿಠ್ಠಲಮೂರ್ತಿ ಎಂದ ವಾಟಾಳ್‌ ನಾಗರಾಜ್‌ ಇನ್ನೂ ಹಲವು ಕತೆಗಳನ್ನು ಹೇಳಿದರು.

ನಾಡು ಕಂಡ ಖ್ಯಾತ ನಟ ಸುಬ್ಬಯ್ಯ ನಾಯ್ಡು ಅವರು ತೀರಿಕೊಂಡ ವಿಷಯ ಕೇಳಿದ ಅವರ ಪತ್ನಿ ಕೂಡಾ ತೀರಿಕೊಂಡಿದ್ದು, ದಂಪತಿಗಳ ಪಾರ್ಥೀವ ಶರೀರಗಳನ್ನು ಅಂತ್ಯ ಸಂಸ್ಕಾರಕ್ಕೆ ಅಂತ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋದರೆ ಲಕ್ಷಕ್ಕೂ ಅಧಿಕ ಜನ ಸೇರಿದ್ದು, ಬದುಕಿನ ಶುರುವಿನ ಕಾಲಘಟ್ಟದಲ್ಲಿ ಪತ್ರಕರ್ತರಾಗಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರನ್ನು ನೋಡಿದ್ದು, ಕನ್ನಡ ಚಿತ್ರರಂಗದ ದಿಗ್ಗಜರೊಬ್ಬರು ಬದುಕಿನ ಕೊನೆಯ ದಿನಗಳಲ್ಲಿ ಹೊಟ್ಟೆ ಪಾಡಿಗಾಗಿ ವಾಮಾಚಾರ ನಡೆಸುತ್ತಿದ್ದುದು.. ಹೀಗೆ ಅವರ ನೆನಪಿನ ಬತ್ತಳಿಕೆಯಿಂದ ಒಂದಕ್ಕಿಂತ ಒಂದು ಇಂಟರೆಸ್ಟಿಂಗ್‌ ಕತೆಗಳು ಚಿಮ್ಮಿದವು.

ಮುಂದೆ ನಿಮ್ಮ ಬಳಿ ಹೇಳಿಕೊಳ್ಳಲು ಆ ಕತೆಗಳು ಬೇಕಲ್ಲ?ಹಾಗಂತಲೇ ನನ್ನ ನೆನಪಿನ ತಿಜೋರಿಯಲ್ಲಿ ಅದನ್ನು ಭದ್ರವಾಗಿಟ್ಟುಕೊಂಡು ಬಂದಿದ್ದೇನೆ.ಹ್ಯಾವ್‌ ಎ ನೈಸ್‌ ಟೈಮ್.

‘ಇದೊಂಥರಾ ಆತ್ಮಕಥೆ’
ಪುಸ್ತಕ ಖರೀದಿಸಲು ಈ ಲಿಂಕ್ ಬಳಸಿ.
https://bahuroopi.in/product/idonthara-atmakathe/

‍ಲೇಖಕರು avadhi

November 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: