ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಲಿಗೆ ತೊಡರು..

-ತಾರಿಣಿ ಶುಭದಾಯಿನಿ

೧ . ದೂಳು ಹಿಡಿದ ಆತ್ಮಕತೆ

ಯಾಕಾದರೂ ಸಾಯಬೇಕು?
ನಿಮ್ಮದೊಂದು ಡೆತ್ ನೋಟ್ ಓದಲು
ಪುರುಸೊತ್ತಿರದವರ ಮಧ್ಯೆ

ಯಾಕಾದರೂ ಬದುಕಿರಬೇಕು?
ನಿಮ್ಮ ಮೂಗಿನ ಹತ್ತಿರ ಕೈಯಿಟ್ಟು ನೋಡಿ
ನೀವು ಇದ್ದೀರೊ ಇಲ್ಲವೊ ಎಂದು
ನೋಡಲೂ ಆಗದವರ ಮಧ್ಯೆ

ಮಡಸಿಟ್ಟ ಪುಸ್ತಕದ ಹಾಳೆಗಳು
ಅಡಗಿಸಿಟ್ಟ ಡೈರಿಗಳ ಪುಟಗಳು
ಮನೆಮಠದ ಲೆಕ್ಕ ಪುಸ್ತಕಗಳು
ಮಧ್ಯೆ ಮಧ್ಯೆ ಗುರುತು ಮಾಡಿ, ಮಡಚಿಟ್ಟ
ಕತೆಗಳು
ಕಾದಂಬರಿಗಳು
ಆತ್ಮಕತೆಗಳು

ಗAಟು ಕಟ್ಟಿ ಕಟ್ಟಿ ಎಸೆದ ಅಟ್ಟಗಳು
ಕೊನೆಗೊಮ್ಮೆ ಮನೆ ಮಾರುವಾಗ
ಬಟಾ ಬಯಲಾಗಿ
ಗಿಂಡಿ, ತಾಲಿ, ತೊಟ್ಟಿಲು, ನೇಯ್ಗೆಗಳೆಲ್ಲ
ಗಟಾರ ಸೇರುತ್ತವೆ

ದೂಳು ತುಂಬಿದ ಜೀವಕ್ಕೆ ಆಂಟಿಕ್ ಮೌಲ್ಯ
ಬರುವುದೇ ಎಂದಾದರೊಮ್ಮೆ?
ದಫನಾದ ನೆನಪೋಲೆಗಳ ಓದುವವರು
ಸಿಗಬಹುದೇ ಮುಂದೆ ಎಂದಾದರೂ?
*

೨ . ನಾಲಿಗೆ ತೊಡರು

ದೊಡ್ಡದೊಡ್ಡ ಆಡಂಬರದ ಮಾತುಗಳೆಲ್ಲವೂ ಇಲ್ಲಿ
ಒದಗಿ ಬರುವುದಿಲ್ಲ ಒಪ್ಪನುಡಿ
ಬೆಪ್ಪನಿಗೊಲಿದು ನಲಿವ ಉಲಿ
ನಾಲಿಗೆ ಚಾಚಿಲ್ಲಿ ಬರೆಯುವೆ,
ಓಂಕಾರ, ಮಗನೆ ನಾಲಿಗೆ ತಿರುಗಲಿ
ನಿನಗೆ ಬಯ್ಯಲು, ಅಂದು ಆಡಲು
ಸರಿಯಾಗಿ ಆದರೂ ಇನ್ನೊಬ್ಬರ
ತೇಜೋವಧೆ ಮಾಡಲು

ಕಾಳಿ ಬಂದಾಗ ಈ ಸಾರಿ ಹಿಡಕೊ
ಬಿಡಬೇಡ, ಸಂಚಾರಿ ದೇವಿಯೆ
ಗಂಟಲ ತೊಡರ ಬಿಡಿಸಬೇಕಮ್ಮ
ಸುಮ್ಮನೆ ಅಲ್ಲ, ಪಾಡು ಪಾಡಲು, ನಿನ್ನ
ಹೊಳೆವ ಮೂಗುತಿಯ ಹೊಗಳಲು

ಪದಪದಪದ ಕಿವಿಗಪ್ಪಳಿಸಬೇಕು
ಏನೊಂದೂ ಅರ್ಥವಾಗದ ಮೋಡಿಯಲಿ
ಕೋದುಕೊಳ್ಳಬೇಕು, ಗಟ್ಟಿಗಟ್ಟಿ,
ಗಂಟು ಗಂಟು ಹಿಟ್ಟು ನಾದಿದರೂ
ಹದವಾಗದು ಬಹಳ ಸಾರಿ

ನಾಲ್ಕಕ್ಷರದ ಮಹಿಮೆ
ಎದೆ ಸೀಳಿದರೂ ಬಾರದೆ
ಎದೆಗೆ ಬಿದ್ದು ಅಕ್ಷರವಾಗದೆ
ಸೋತು ಗೊಣ್ಣೆಸೋರಿದ ಹುಳ
ಜೊಲ್ಲಿನಲಿ ಮಾತು

‍ಲೇಖಕರು Admin

9 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading