ವಿ.ಕ.ಸ. ಸರ್ಕಾರದಲ್ಲೇ ಗೊಂದಲಗಳಿವೆ
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರ ಆಯ್ಕೆ ಸಂಬಂಧಿ ಸಾಕಷ್ಟು ವಾದವಿವಾಗಳು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಆರೋಗ್ಯಕರವಾಗಿಯೇ ಚರ್ಚೆ ನಡೆದಿದೆ. ಅವಧಿ’ಯ ಜುಗಾರಿ ಕ್ರಾಸ್ ಅದನ್ನು ನಿಭಾಯಿಸಿದ ರೀತಿ ಗಮನಾರ್ಹ. ವಿ.ಕ.ಸ ಗೊಂದಲಗಳಿಗೆಲ್ಲಾ ಸರ್ಕಾರದ ಮಟ್ಟದಲ್ಲಿಯೇ ಗೊಂದಲಗಳಿರುವುದು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದಕ್ಕೆ ಸಂಬಂಧಪಟ್ಟಂತೆ ಇಂದಿನ ಪ್ರಜಾವಾಣಿಯ ಎರಡು ಸುದ್ದಿಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಸಂದರ್ಶನದಲ್ಲಿ ಸಮಚಿತ್ತದಿಂದ ಉತ್ತರಿಸಿರುವ ನಾರಾಯಣಮೂರ್ತಿಯವರು ಒಂದು ಅಂಶವನ್ನು ಹೊರಹಾಕಿದ್ದಾರೆ. ‘ಸ್ವತಃ ನಾನೇ ಈ ಪ್ರಶ್ನೆಯನ್ನು ಮುಖ್ಯಮಂತ್ರಿಯವರ ಮುಂದೆ ಇಟ್ಟಿದ್ದೆ’ ಎಂದಿದ್ದಾರೆ. ಮುಂದುವರೆದು ಹಲವಾರು ಕನ್ನಡ ಸಾಹಿತಿಗಳನ್ನು ಉದಾಹರಿಸಿ ‘ಅವರನ್ನು ಸಮ್ಮೇಳನದ ುದ್ಘಾಟಕರಾಗಿ ಏಕೆ ಆಹ್ವಾನಿಸುತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಮುಖ್ಯಮಂತ್ರಿಯವರು ನೀಡಿರುವ ಉತ್ತರ ‘ಇದು ಕೇವಲ ಕನ್ನಡ ಭಾಷೆಗೆ ಸಂಬಂಧಿಸಿದ ಸಮ್ಮೇಳನವಲ್ಲ. ಹಿಂದಿನ 25 ವರ್ಷಗಳ ಅವಧಿಯಲ್ಲಿ ವಿವಿಧ ರಂಗಗಳಲ್ಲಿ ಕರ್ನಾಟಕ ಸಾಧಿಸಿರುವ ಪ್ರಗತಿಯನ್ನು ಪ್ರದರ್ಶಿಸುವ ಕಾರ್ಯಕ್ರಮ’ ಎಂಬುದಾಗಿದೆ. ಸರ್ಕಾರದ ಪ್ರಕಾರ ಇದು ಕನ್ನಡ ಭಾಷೆಗೆ ಸಂಬಂಧಿಸಿದ್ದಲ್ಲ. ಭಾಷೆಗೆ ಸಂಬಂಧಿಸಿದ್ದಲ್ಲ ಎಂದ ಮೇಲೆ ಕನ್ನಡ ಸಾಹಿತ್ಯಕ್ಕೂ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗಿಯೇ ಇದೆ.
ಎರಡನೆಯ ಸುದ್ದಿ: ವಿ.ಕ.ಸ.ದಲ್ಲಿ 101 ಮೇರುಕೃತಿಗಳು ಬಿಡುಗಡೆಯಾಗುತ್ತಿರುವ ವಿಚಾರ. ಬಿಡುಗಡೆಯಾಗುತ್ತಿರುವ ಬಹುತೇಕ ಎಲ್ಲಾ ಪುಸ್ತಕಗಳು ಸಾಹಿತ್ಯದ ವಿವಿಧ ಪ್ರಾಕಾರಗಳಿಗೆ ಸಂಬಂಧಿಸಿದವುಗಳಾಗಿವೆ. ಪಟ್ಟಿ ಹೀಗಿದೆ. 25 ಕಾದಂಬರಿಗಳು, 24 ಕವನಸಂಕಲನಗಳು, 8 ಕಥಾಸಂಕಲನಗಳು, 25 ವಿಚಾರಸಾಹಿತ್ಯ, 11 ಸಂಕೀರ್ಣ ಕೃತಿಗಳು, ತಲಾ 3 ಪ್ರಬಂಧಗಳು ಹಾಗೂ ನಾಟಕಗಳು. 2 ವೈದ್ಯಸಾಹಿತ್ಯ ಸಂಬಂಧಿ ಕೃತಿಗಳು. ಅಂದರೆ ಬಿಡುಗಡೆಯಾಗುತ್ತಿರುವ 101 ಕೃತಿಗಳು ಸಾಃಇತ್ಯಕ್ಕೆ ಸಂಬಂಧಿಸಿದವುಗಳಾಗಿವೆ. ಸ್ವತಃ ಮುಖ್ಯಮಂತ್ರಿಯವರು ಶ್ರೀ ನಾರಾಯಣಮೂರ್ತಿಯವರಿಗೆ ನೀಡಿದ ಮಾಹಿತಿಯ ಪ್ರಕಾರ ಸಮ್ಮೇಳನ ಭಾಷೆ ಹಾಗೂ ಸಾಹಿತ್ಯಕ್ಕೆ ಸಂಬಂಧಪಟ್ಟದ್ದಲ್ಲ. ಕಳೆದ 25 ವರ್ಷಗಳ ಸಾಧನೆಗಳ ಪ್ರದರ್ಶನ. ಅಂತಹ ಸಾಧನೆಗಳ ಬಗ್ಗೆ ಒಂದಾದರೂ ಪುಸ್ತಕವನ್ನು ಪ್ರಕಟಿಸಬೇಕೆಂದು ಸರ್ಕಾರಕ್ಕೆ ಹೊಳೆಯಲೇಇಲ್ಲವೇ? ನೀರಾವರಿ, ಕೃಷಿ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮೊದಲಾದ ಕ್ಷೇತ್ರದಲ್ಲಿ ರಾಜ್ಯ ಸಾಧಿಸಿದ ಪ್ರಗತಿಯನ್ನು ಕುರಿತು ಆಯಾಯಾ ವಿಷಯತಜ್ಞರುಗಳಿಂದ ಪುಸ್ತಕಗಳನ್ನು ಬರೆಯಿಸಿ ಪ್ರಕಟಿಸಬಹುದಾಗಿತ್ತಲ್ಲ! ಸಾಹಿತ್ಯ (101) ಕೃತಿಗಳನ್ನೇ ಪ್ರಕಟಿಸುತ್ತಿರುವ ಸರ್ಕಾರದ ನಿರ್ಧಾರದಲ್ಲಿ ಗೊಂದಲವಿಲ್ಲವೆ?
ಹಲವಾರು ಗಣ್ಯರ ಜೊತೆಯಲ್ಲಿ ಸಾಹಿತಿಗಳನ್ನು ಉಲ್ಲೇಖಿಸಿದ ಬರಗೂರು ರಾಮಚಂದ್ರಪ್ಪನವರ ಹಾಗೂ ಸಾಹಿತಿಗಳನ್ನು ಏಕೆ ಉದ್ಘಾಟಕರಾಗಿ ಕರೆಯುತ್ತಿಲ್ಲ ಎಂಬ ನಾರಾಯಣಮೂರ್ತಿಯರ ಅಭಿಪ್ರಾಯಗಳಲ್ಲಿ ತಪ್ಪೇನಿದೆ. ಈ ವಿಷಯದಲ್ಲಿ ಸಾಹಿತಿಗಳನ್ನು ಖಳನಾಯಕರಂತೆ ಚಿತ್ರಿಸಿ ವೈಯಕ್ತಿಕ ನಿಂದನಗೆ ಇಳಿದಿದ್ದು ಮಾತ್ರ ಸಾಧುವಲ್ಲ. ಈ ಹಿಂದಿನ ವಿ.ಕ.ಸ.ದಲ್ಲಿ ಕಾರಂತ ಕುವೆಂಪು ಇದ್ದರು. ಆಗಲೂ ನೂರಾರು ಕನ್ನಡ ಸಾಹಿತ್ಯ ಕೃತಿಗಳು ಪ್ರಕಟವಾಗಿದ್ದವು. ಸಹಜವಾಗಿಯೇ ವಿ.ಕ.ಸ. ಅಂದರೆ, ಅದು ಭಾಷೆಗೂ, ಸಾಹಿತ್ಯಕ್ಕೂ ಸಂಬಂಧಪಟ್ಟಿರುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ.
ಸಾಹಿತಿಗಳು ಅನಭಿಷಕ್ತ ಶಾಸಕರು, ಕವಿಗಳು ಅಭಿನವ ಸೃಷ್ಟಿಕರ್ತರು ಎಂಬ ಮಾತು ಸುಮ್ಮನೆ ಬೆಳೆದು ಬಂದಿದೆಯೆ? ಸಾಹಿತ್ಯವೆಂದರೆ ಹೊತ್ತು ಹೋಗಲು ಓದುವ ಕಥೆ ಕಾದಂಬರಿ ಹರಟೆ ಮಾತ್ರವೇ? ಸಾಹಿತ್ಯ ಮನುಷ್ಯನ ಬದುಕಿಗೆ ಹಿಡಿದ ಕೈಗನ್ನಡಿಯಲ್ಲವೆ? ಒಂದು ಕಾಲದ ಸಾಹಿತ್ಯ ಕೃತಿ, ಆ ಕಾಲದ ಜನಜೀವನದ ಪ್ರತಿಬಿಂಬವಲ್ಲವೆ? ಒಂದು ಕಾಲದಲ್ಲಿ ರಾಜಾಸ್ಥಾನದಿಂದ ಜನಾಸ್ಥಾನದ ಕಡೆಗೆ ಸಾಹಿತ್ಯ ದಿಕ್ಕು ಬದಲಾಗಿದ್ದನ್ನು ಸಾಹಿತ್ಯಲೋಕ ಶ್ಲಾಘಿಸುತ್ತದೆ. ಆದರೆ ಮತ್ತೊಂದು ಕಡೆ ಸಾಹಿತ್ಯವನ್ನು ಮತ್ತೆ ಸರ್ಕಾರದ ಅಂಕೆಗೆ ತೆಗೆದುಕೊಂಡು ಆಸ್ಥಾನದೊಳಗೆ ಬಂಧಿಸಿಡುವಂತೆ ಕಾಣುತ್ತದೆ.
ಕುವೆಂಪು ಅವರ ಅಖಂಡ ಕರ್ನಾಟಕ ಕವಿತೆ ಪ್ರಸತುತವಾಗುವುದು ಇದೇ ಕಾರಣಕ್ಕೆ.
ಅಖಂಡ ಕರ್ನಾಟಕ:
ಅಲ್ತೊ ನಮ್ಮ ನಾಲ್ಕುದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ,
ತನಗೆ ರುಚಿರ ಕುಂಡಲ!
ನಿಜ ಒಮ್ಮೆ ಆಹ್ವಾನಿಸಿ ಆನಂತರ ಬರಬೇಡಿ ಎಂದು ಸರ್ಕಾರವಾಗಲಿ, ಆಹ್ವಾನಿಸಿದವರಾಗಲಿ ಹೇಳುವುದು ಸಜ್ಜನಿಕೆಯಾಗುವುದಿಲ್ಲ. ನಾರಾಯಣಮೂರ್ತಿಯವರ ಬಗ್ಗೆ ಇಲ್ಲಿ ವೈಯಕ್ತಿಕ ವಿರೋಧವೂ ಇಲ್ಲ; ಅವರ ಉದ್ಯಮಕ್ಷೇತ್ರದ ಸಾಧನೆಯನ್ನು ಅಲ್ಲಗಳೆಯುತ್ತಲೂ ಇಲ್ಲ; ಅಗೌರವ ತೋರಿಸುವ ಪ್ರಶ್ನೆಯೂ ಇಲ್ಲ. ಆದರೆ ಅವರ ಆಯ್ಕೆಯ (ಸರ್ಕಾರದ) ವಿವೇಕವನ್ನು ಒಪ್ಪುವುದಿಲ್ಲ ಎಂಬ ಬರಗೂರರ ಮಾತು ಗಮನಾರ್ಹ!
ಕನ್ನಡ ಕನ್ನಡಿಗ ಕರ್ನಾಟಕ ಇವುಗಳಿಂದ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೇರ್ಪಡಿಸಿ ನೋಡುವ ಮನಸ್ಥಿತಿಯೇ ಹಾಸ್ಯಾಸ್ಪದ. ಕೆಲವರು ಅತಿ ಬುದ್ಧಿವಂತಿಕೆಯಿಂದ ಮಗುವನ್ನು ಜಿಗುಟಿ ತೊಟ್ಟಿಲನ್ನು ತೂಗುತ್ತಾರೆ. ಆದರೆ ಇನ್ನು ಕೆಲವರು ಮಗುವನ್ನು ಮಾತ್ರ ಜಿಗುಟಿ ತಮಾಷೆ ನೋಡುತ್ತಾರೆ. ಈಗ ಆಗಿರುವುದೂ ಅದೇ! ತೊಟ್ಟಿಲನ್ನು ಸರ್ಕಾರ ಮತ್ತು ನಾರಾಯಣಮೂರ್ತಿಯವರು ತೂಗಬೇಕಾಗಿದೆ!








“ಅದಕ್ಕೆ ಮುಖ್ಯಮಂತ್ರಿಯವರು ನೀಡಿರುವ ಉತ್ತರ ‘ಇದು ಕೇವಲ ಕನ್ನಡ ಭಾಷೆಗೆ ಸಂಬಂಧಿಸಿದ ಸಮ್ಮೇಳನವಲ್ಲ. ಹಿಂದಿನ 25 ವರ್ಷಗಳ ಅವಧಿಯಲ್ಲಿ ವಿವಿಧ ರಂಗಗಳಲ್ಲಿ ಕರ್ನಾಟಕ ಸಾಧಿಸಿರುವ ಪ್ರಗತಿಯನ್ನು ಪ್ರದರ್ಶಿಸುವ ಕಾರ್ಯಕ್ರಮ’ ಎಂಬುದಾಗಿದೆ. ಸರ್ಕಾರದ ಪ್ರಕಾರ ಇದು ಕನ್ನಡ ಭಾಷೆಗೆ ಸಂಬಂಧಿಸಿದ್ದಲ್ಲ. ಭಾಷೆಗೆ ಸಂಬಂಧಿಸಿದ್ದಲ್ಲ ಎಂದ ಮೇಲೆ ಕನ್ನಡ ಸಾಹಿತ್ಯಕ್ಕೂ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗಿಯೇ ಇದೆ.”
ಕೇವಲ ಕನ್ನಡ ಭಾಷೆಗೆ ಸಂಬಂಧಿಸಿಸ ಸಮ್ಮೇಳನವಲ್ಲ ಅಂದರೆ “ಸರ್ಕಾರದ ಪ್ರಕಾರ ಇದು ಕನ್ನಡ ಭಾಷೆಗೆ ಸಂಬಂಧಿಸಿದ್ದಲ್ಲ” ಎನ್ನುವ ಅರ್ಥ ತೆಗೆದುಕೊಳ್ಳುವ ಜಾಣ್ಮೆಯನ್ನು ಏನನ್ನಬೇಕು? ನಾನಾದರೆ ಅದನ್ನು ಹೀಗೆ ಅರ್ಥೈಸಿಕೊಂಬೆ: “ಸರ್ಕಾರದ ಪ್ರಕಾರ ಇದು ಕೇವಲ ಕನ್ನಡ ಭಾಷೆಗೆ ಸಂಬಂಧಿಸಿದ್ದಲ್ಲ. ಭಾಷೆಗೂ ಸೇರಿ ಕನ್ನಡನಾಡಿನ ಇನ್ನೂ ಅನೇಕ ವಿಷಯಗಳಿಗೂ ಸಂಬದಿಸಿದ್ದು”
ರಾಜಕಾರಣಿಗಳಿಂದ ವ್ಯಾಕರಣಬದ್ಧ ಮಾತುಗಳನ್ನು ನಿರೀಕ್ಷಿಸಲಾಗದು.
ಅಲ್ಲದೇ ಇಲ್ಲೆಲ್ಲಾ ವರದಿಗಾರರ ಜಾಣ್ಮೆಯೂ ಪ್ರಶ್ನಾರ್ಹವಾಗುತ್ತದೆ.