'ನಾನೂ ನನ್ನ ಶೇಕ್ಸ್ ಪಿಯರ್ರು’ – ಸಂಯುಕ್ತಾ ಪುಲಿಗಳ್

ಅಲೆಕ್ಸಾಂಡರ್ರೂ…ಶೇಕ್ಸ್ ಪಿಯರ್ರೂ

ಮೊದಲಿನಿಂದಲೂ ನಾಟಕ ಅಂದ್ರೆ ಸ್ವಲ್ಪ ಜಾಸ್ತಿ ಹುಚ್ಚು. ಶಾಲೆಯಲ್ಲಿ ಪ್ರತಿ ವಾರ್ಷಿಕೊತ್ಸವಕ್ಕೂ ಒಂದೊಂದು ಪಾತ್ರ ಧರಿಸಿ, ಪ್ರಭಾತ್ ಕಲಾವಿದರಿಂದ ಗಡ್ಡ ಮೀಸೆ, ಕಿರೀಟ ತಂದು ಗೋಂದ್ ಹಾಕಿ ಮೆತ್ತಿ, ನೋವಾದರೂ ತೋರಗೊಡದೆ ಸಕತ್ ಹುರುಪಿನಿಂದ ನಾಟಕವಾಡುವುದು. ನಮ್ಮ ಶಾಲೆಯ ವಾರ್ಷಿಕೋತ್ಸವದ ಅಭ್ಯಾಸದ ಪ್ರಕಾರ, ಕೆಲವೊಂದಷ್ಟು ಕಾರ್ಯಕ್ರಮ ಆದ ನಂತರ ಮುಖ್ಯ ಅತಿಥಿಗಳ ಭಾಷಣ ನಂತರ ಉಳಿದ ಕಾರ್ಯಕ್ರಮಗಳು ಜರುಗುತ್ತಿದ್ದವು. ನನ್ನ ಸರತಿ ಯಾವಾಗಲೂ ಅತಿಥಿ ಭಾಷಣದ ನಂತರ ನಡೆಯುತ್ತಿತ್ತು. ಪಾಪ ಅವರೋ, ತಮ್ಮದೇ ದಿನ ಎಂದು ಸ್ಟೇಜು ಬಿಡಲೊಪ್ಪರು, ದಿನವಿಡೀ ಗಡ್ಡ ಮೀಸೆ ಕಿರೀಟಗಳ ಹೊತ್ತು ನಾವು ಸುಸ್ತಾಗಿ ಸೊರಗಿಹೋಗುತ್ತಿದ್ದೆವು. ಕೊನೆಕೊನೆಗೆ ನಮ್ಮ ಸರತಿ ಮುಗಿದು, ಆ ಪೋಷಾಕುಗಳನ್ನ ಕಳಚಿದರೆ ಸಾಕು ಅನ್ನುವ ಪರಿಸ್ಥಿತಿಗೆ ತಲುಪುತ್ತಿದ್ದೆವು.
ಆಗ ಐದನೇ ತರಗತಿ ಇರಬಹುದು. ಪುರೂರವನ ಪಾತ್ರ ಹಾಕಿದ್ದೆ. ನನ್ನ ಸ್ನೇಹಿತನೊಬ್ಬ ಅಲೆಕ್ಸಾಂಡರ್ ನ ಪಾತ್ರ ವಹಿಸಿದ್ದ. ಭರ್ಜರಿ ಕಾಸ್ಟ್ಯೂಮ್ ಗಳಲ್ಲಿದ್ದ ನಾವು ಆ ಪಾತ್ರದಲ್ಲಿ ಮುಳುಗಿ ನಿಜವಾದ ಪುರೂರವ ಮತ್ತು ಅಲೆಕ್ಸಾಂಡರ್ ಆಗಿಬಿಟ್ಟಿದ್ದೆವು. ವೇದಿಕೆಯ ಮೇಲೆ ಮುಖ್ಯ ಅತಿಥಿಯ ಭಾಷಣ ಜರುಗುತ್ತಿತ್ತು. ಎಷ್ಟು ಹೊತ್ತಿಗೂ ಮಾತು ಮುಗಿದಂತೆ ಕಾಣದ ನಮಗೆ ತಾಳ್ಮೆ ಮೀರುವ ಮುನ್ನ ಒಮ್ಮೆ ಪೂರ್ವಾಭ್ಯಾಸ ಮಾಡಿಬಿಡೋಣ ಎಂದು ನಾಟಕದ ಸಾಲುಗಳನ್ನು ಜೋರಾಗಿ ಹೇಳತೊಡಗಿದ್ದೆ. ಆಗ ಪರಕಾಯ ಪ್ರವೇಶನಾದ ನಮ್ಮ ‘ಅಲೆಕ್ಸಾಂಡರ್’ ಒಮ್ಮೆಲೇ ಅದ್ಯಾವುದೋ ಇಂಗ್ಲಿಷ್ ಪದ್ಯ ಉಲಿಯತೊಡಗಿದ . ನನ್ನನ್ನೂ ಸೇರಿಸಿ ಅಲ್ಲಿದ್ದವರೆಲ್ಲಾ ಕಕ್ಕಾಬಿಕ್ಕಿ, ನಾಟಕದ ಸಾಲು ಬಿಟ್ಟು ಇದ್ಯಾವುದೋ ಪದ್ಯ ಹೇಳುತ್ತಿದ್ದಾನಲ್ಲ ಎಂದು! ಬೇರೇನೂ ನೆನಪಿಲ್ಲದಿದ್ದರೂ ಅವನು ಹೇಳಿದ್ದ ಒಂದು ಸಾಲು ಮಾತ್ರ ಹಾಗೆ ನೆನಪಿನ ಪುಟಗಳಲ್ಲಿ ಅಚ್ಚಾಗಿ ಬಿಟ್ಟಿತ್ತು. ಆಮೇಲೆ ಬಹಳ ಕಾಲಗಳ ನಂತರ ತಿಳಿದ ವಿಷಯ, ಆ ನನ್ನ ಸ್ನೇಹಿತ, ಅಚಾನಕ್ ಆಗಿ ಉಲಿದದ್ದು, ತಾನು ಯಾರಿಂದಲೋ ಕೇಳಿದ್ದ ಶೇಕ್ಸ್ ಪಿಯರ್ ಸಾನೆಟ್ಟಿನ ಒಂದು ಸುಂದರ ಸಾಲು ಎಂದು.
ಮನು ಚಕ್ರವರ್ತಿ ಸರ್, ತರಗತಿಯಲ್ಲಿ “Shall I compare thee to a summer’s day” ಎಂದು ಪ್ರಾರಂಭಿಸಿದಾಗಲೇ, ನನ್ನ ನೆನಪಿನ ಆ ಪುಟಗಳು ಪಟಪಟನೆ ತಿರುವಿ ಐದನೇ ತರಗತಿಯ ‘ಅಲೆಕ್ಸಾಂಡರ್’ ನನ್ನು ನೆನೆದಾಗಿತ್ತು. ಏನೂ ಅರ್ಥವಾಗದಿದ್ದರೂ, ಆ ಪದ್ಯದ ಕುಲ ಗೋತ್ರ ಗೊತ್ತಿಲ್ಲದಿದ್ದರೂ, ಆ ಪುಟ್ಟ ವಯಸ್ಸಿನಿಂದಲೇ ಈ ಸಾಲುಗಳ ಬಗ್ಗೆ ಕೊಂಚ ಹೆಚ್ಚು ಕುತೂಹಲ. ಇದು ‘ಮಾಮೂಲಿ’ ಇಂಗ್ಲಿಷ್ ತರಹ ಇಲ್ಲ ಎಂಬ ಅಸಮಾಧಾನ, ಕೌತುಕ. ಈ ರೀತಿ ನನ್ನನ್ನು ಚಿಕ್ಕಂದಿನಲ್ಲೇ ಕೆಣಕಿದ್ದ ಆ ಸಾನೆಟ್ಟಿನ ಸಾಲು ಈಗ ತರಗತಿಯಲ್ಲಿ ಕೇಳಿಬರುತ್ತಿದೆ ಎಂದರೆ ಕೇಳಬೇಕೆ! ನನಗೆ ಅತ್ಯಂತ ಸಂತೋಷವಾದದ್ದೂ, ಆ ಸಂತೋಷ ಸಾನೆಟ್ಟು ಪಾಠ ಮುಗಿದ ಮೇಲೆ ನೂರ್ಮಡಿಸಿದ್ದೂ, ಎಲ್ಲವೂ ಈಗ ನೆನಪು. ಇತ್ತೀಚೆಗೆ ಓದಿದ ಕೆಲವು ಸಾನೆಟ್ಟುಗಳು ನನ್ನನ್ನು ಐದನೇ ತರಗತಿಯ ಪುರೂರವನ ಪಾತ್ರದಿಂದ ಹಿಡಿದು, ಕಾಲೇಜಿನ ಬೆಂಚುಕಲ್ಲ ಮೇಲೆ ಕುಳಿತು ಕಂಡ ಶೇಕ್ಸ್ ಪಿಯರ್ ನ ನೆನಪನ್ನು ತಂದದ್ದಂತೂ ನಿಜ. ಸ್ಟ್ರೀಮ್ ಆಫ್ ಕಾನ್ಷಿಯಸ್ ನೆಸ್!
ನಾನು ಇತ್ತೀಚಿಗೆ ಓದಿದೆ ಎಂದೆನಲ್ಲ, ಇದರಲ್ಲಿ ಎರಡು ಪ್ರಮುಖ ಸಾನೆಟ್ಟುಗಳು ನನ್ನ ಗಮನ ಸೆಳೆದಿದ್ದವು. ಅವುಗಳಿಂದ ಅನೇಕ ರೀತಿಯ ಅರ್ಥವಿವರಣೆ ಸಾಧ್ಯವೆಂದು ಅನಿಸಿತು. ಅವೆರಡು ಯಾವುವೆಂದರೆ, ಶೇಕ್ಸ್ ಪಿಯರ್ ಸಾನೆಟ್ 18 ಮತ್ತು 130.
ಸಾನೆಟ್ 18:
Shall I compare thee to a summer’s day?
Thou art more lovely and more temperate:
Rough winds do shake the darling buds of May,
And summer’s lease hath all too short a date:
Sometime too hot the eye of heaven shines,
And often is his gold complexion dimm’d;
And every fair from fair sometime declines,
By chance or nature’s changing course untrimm’d;
But thy eternal summer shall not fade
Nor lose possession of that fair thou owest;
Nor shall Death brag thou wander’st in his shade,
When in eternal lines to time thou growest:
So long as men can breathe or eyes can see,
So long lives this, and this gives life to thee.
 
ಸಾನೆಟ್ 130:
My mistress’ eyes are nothing like the sun;
Coral is far more red than her lips’ red;
If snow be white, why then her breasts are dun;
If hairs be wires, black wires grow on her head.
I have seen roses damask’d, red and white,
But no such roses see I in her cheeks;
And in some perfumes is there more delight
Than in the breath that from my mistress reeks.
I love to hear her speak, yet well I know
That music hath a far more pleasing sound;
I grant I never saw a goddess go;
My mistress, when she walks, treads on the ground:
And yet, by heaven, I think my love as rare
As any she belied with false compare.
ಮೊದಲನೇ ಸಾನೆಟ್ (ಅಂದರೆ ಹದಿನೆಂಟನೆ ಸಾನೆಟ್), ಮೊದಲನೇ ನೋಟಕ್ಕೆ ಒಂದು ಪ್ರೆಮಗೀತೆಯಂತೆ ಕಂಡರೂ, ಇದು ಯೌವ್ವನ-ಮುಪ್ಪುಗಳ ಅನಾವರಣ. ಯೌವ್ವನದ ಹೊಳೆವ ಮೆರುಗನ್ನು, ಹುರುಪನ್ನು, ಮುಪ್ಪಿನ ಅಸಹಾಯಕತೆ, ನಿಷ್ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಬಹುಷಃ ಆಗ್ಗೆ ತನ್ನ ಮುಪ್ಪಿನ ಕಾಲ ನೋಡ ಹತ್ತಿದ ಕವಿ, ಒಬ್ಬ ತರುಣ ಯುವಕನ ಯೌವ್ವನ ಕಂಡು ಉಲ್ಲಸಿತನಾಗುತ್ತನೆ. ಅವನಲ್ಲಿ ಕಳೆದುಹೋದ ಹುರುಪು, ಜೀವನಾಸಕ್ತಿ ಈ ಯುವಕನನ್ನು ಕಂಡು ಮರುಕಳಿಸುತ್ತದೆ. ಆದರೆ, ತಕ್ಷಣ ಜೀವನವ ವಾಸ್ತವಿಕತೆಯನ್ನು ನೆನಪಿಸಿ, ಆ ಯುವಕನೂ ತನ್ನಂತೆಯೇ ಮುಪ್ಪು ಕಾಣುವುದಾಗಿ, ಆದರೆ, ತಾನು ಆ ಯುವಕನ ಯೌವ್ವನದ ಶಕ್ತಿಯನ್ನು ಈ ಪದ್ಯದಲ್ಲಿ ಹಿಡಿದಿಟ್ಟಿರುವುದಾಗಿ ಹೇಳುತ್ತಾನೆ. ಈ ಸಾಲುಗಳಿಂದ ಆ ಯುವಕನ ಯೌವ್ವನ ಚಿರಾಯು ಎಂದು ತನ್ನ ಸಾಲುಗಳನ್ನು ಕೊನೆಗೊಳಿಸುತ್ತಾನೆ.
ಸಾನೆಟ್ 130 ನನಗೆ ತುಂಬಾ ಹಿಡಿಸಿದ ಪದ್ಯಗಳಲ್ಲಿ ಒಂದಾಗಿದೆ. ಇದು ನಿಜ ಪ್ರೇಮದ ಕುರುಹು. ಒಲವಿನ ಸತ್ಯಕಾಮನೆಯನ್ನು, ನೈಜತೆ, ಸಹಜತೆಗಳನ್ನು ಈ ಪದ್ಯ ಎತ್ತಿ ತೋರಿಸುತ್ತದೆ. ಇಲ್ಲಿ ಕವಿ ಹೇಳುತ್ತಾನೆ, ತನ್ನ ಪ್ರಿಯತಮೆಗೆ ಯಾವ ಅದ್ಭುತ, ವಿಶಿಷ್ಟ ರೂಪವಿರದಿದ್ದರೂ, ಆಕೆ ಒಂದು ಘಮಿಸುವ ಕುಸುಮದಂತೆ, ಹೊಳೆಯುವ ಹರಳಿನಂತೆ ಇರದಿದ್ದರೂ, ಆಕೆಯ ಕೆನ್ನೆಗಳು ಕೆಂಗುಲಾಬಿಯಂತೆ ಬಿರಿಯದಿದ್ದರೂ, ಆಕೆ ತನಗೆ ಪ್ರಿಯ, ಇಂತಹ ಸುಳ್ಳು ಹೋಲಿಕೆಗಳಿಗೆಲ್ಲ ಹೊರತಾದ್ದು ಪ್ರೇಮ ಎಂದು. ಇದರಲ್ಲಿ ಅಡಗಿರುವ ಮತ್ತೊಂದು ಅಂಶವೆಂದರೆ, ಕವಿ ಈ ಪದ್ಯದ ಮೂಲಕ ಅನೇಕ ರೂಪಕಗಳಿರುವ, ಆಡಂಬರದ ಸಾಂಪ್ರದಾಯಿಕ ಪದ್ಯಗಳನ್ನು ಕುರಿತು ನಮೂದಿಸಿರುವ ಅಣಕು! “ಕಮಲದಂತಹ ನಯನ, ಸಂಪಿಗೆಯಂತಹ ಮೂಗು, ದಾಳಿಂಬೆಯಂತಹ ದಂತಪಂಕ್ತಿ” ಎಂಬ ಈ ರೀತಿ ಸಾಲುಗಳಿಂದ ಹೆಣ್ಣಿನ ಇರುವಿಕೆಯನ್ನು ವ್ಯಾಖ್ಯಾನಿಸಿರುವ, ಇವೇ ಇಲ್ಲಿ ಹೇಳಿರುವಂತಹ ಇತ್ಯಾದಿ ರೂಪುರೇಖೆಗಳೇ ‘ಹೆಣ್ಣು’ ಅನ್ನಿಸಿಕೊಳ್ಳಲು ಇರುವ ಗುಣಗಳು ಎಂದು ಸೂತ್ರಿಸಿರುವ ಅನೇಕರಿಗೆ ಶೇಕ್ಸ್ ಪಿಯರ್ ನ ಈ ಪದ್ಯದ ಸಾಲುಗಳು ಉಳಿಪೆಟ್ಟು. ಈ ನಿಟ್ಟಿನಲ್ಲಿ ಶೇಕ್ಸ್ ಪಿಯರ್ ಒಬ್ಬ ಫೆಮಿನಿಸ್ಟ್ ಆಗಿದ್ದ ಎಂದು ಹೇಳಬಹುದಲ್ಲವೇ!
ಈ ಎರಡೂ ಪದ್ಯಗಳಲ್ಲೂ ನಾವು ಗಮನಿಸಬೇಕಾದ ಅಂಶ ಮತ್ತೊಂದಿದೆ. ಎರಡೂ ಜೀವನದ ಕೆಲವು ಗಾಢ ವಿಚಾರಗಳ ಕುರಿತಾದ್ದೇ ಆಗಿದೆ. ಆದರೆ ಎರಡರಲ್ಲೂ ಪ್ರಯೋಗಿಸಿರುವ ಪ್ರಾಕಾರ ಮಾತ್ರ ತದ್ವಿರುಧ್ಧ! ಒಂದು ಪದ್ಯ ಪ್ರಾರಂಭವಾಗುವುದೇ ಹೋಲಿಕೆಯಿಂದ, ಇನ್ನೊಂದು, ಹೋಲಿಕೆಯನ್ನು ಖಂಡಿಸಿ. ಈ ಸೂಕ್ಷ್ಮ ಸಂವೇದನೆಗಳ, ಕಾವ್ಯ ರಚನಾ ಭಾವಗಳ ಬದಲಾವಣೆ ಕಾಲಯುಕ್ತವಾದದ್ದಿರಬಹುದೇ! ಒಬ್ಬ ವ್ಯಕ್ತಿ ಬೆಳೆಯುತ್ತಾ ಬೆಳೆಯುತ್ತಾ ಎಷ್ಟೆಲ್ಲಾ ಅರಿವಿನ ಮತ್ತ ಬದಲಾಗುತ್ತದೆ ಎಂಬುದಕ್ಕೆ ಇದು ನಿದರ್ಶನವೇ! ಅಥವಾ ಕಾವ್ಯ ರಚನೆಯ ಒಂದು ಸಿಧ್ಧಾಂತ ಸೂಚಿಸುವಂತೆ, ಕಾವ್ಯ ಒಂದು ಕ್ಷಣದಲ್ಲಿ ಮೂಡುವ ಭಾವ ಲಹರಿಯೇ! ಈ ಆಲೋಚನೆ ನನಗೆ ಬೇಂದ್ರೆಯ ಸಾಲುಗಳನ್ನು ನೆನಪಿಗೆ ತರುತ್ತದೆ: “ಬೇಂದ್ರೆ ಬರದ, ಅವ ಸತ್ತ, ನಾ ಅಂಬಿಕಾತನಯದತ್ತ” ಎಂದು. ಒಟ್ಟಿನಲ್ಲಿ ಒಂದು ಪದ್ಯಕ್ಕೆ ಎಷ್ಟೆಲ್ಲಾ ಮುಖಗಳಿರುತ್ತವೆ, ಅದರ ಓಘ ಓದಿದಷ್ಟೂ ಆಳ, ಅಪಾರ!
 

‍ಲೇಖಕರು G

January 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. D.Ravivarma

    “ಬೇಂದ್ರೆ ಬರದ, ಅವ ಸತ್ತ, ನಾ ಅಂಬಿಕಾತನಯದತ್ತ” ಎಂದು. ಒಟ್ಟಿನಲ್ಲಿ ಒಂದು ಪದ್ಯಕ್ಕೆ ಎಷ್ಟೆಲ್ಲಾ ಮುಖಗಳಿರುತ್ತವೆ, ಅದರ ಓಘ ಓದಿದಷ್ಟೂ ಆಳ, ಅಪಾರ!
    arthapurnavagide nimma lekhana…..

    ಪ್ರತಿಕ್ರಿಯೆ
  2. samyuktha

    ಕ್ಷಮಿಸಿ. ಕೊನೆ ಸಾಲಿನಲ್ಲಿ ಬೇಂದ್ರೆಯ ಒಂದು ಹೇಳಿಕೆ ದೋಷ ಇದೆ. ಸರಿಯಾದ್ದು “ಅಂಬಿಕಾತನಯದತ್ತ ಬರೆದ ಆವಾ ಸತ್ತ, ನಾ ಬೇಂದ್ರೆ” ಎಂದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: