ನಾನು ಹೇಳುತ್ತಿದ್ದದ್ದು 'ಒಂದು ಮೊಟ್ಟೆಯ ಕಥೆ' ಖಂಡಿತಾ ಅಲ್ಲ..


‘ಮಹಾತ್ಮ ಗಾಂಧಿ’ ಅಂದೆ..’ಆಮೇಲೆ?’ ಅಂದರು
‘ಜವಾಹರಲಾಲ್ ನೆಹರೂ’ ಅಂದೆ
ಅವರು ಬೆರಳು ಮಡಚುತ್ತಾ ಹೋಗುತ್ತಿದ್ದರು..
‘ಆಮೇಲೆ..??’ ಎನ್ನುವ ಪ್ರಶ್ನೆ ಮತ್ತೆ ಬರುವ ಮುನ್ನವೇ ನಾನು ಸರ್ದಾರ್ ವಲ್ಲಭ ಬಾಯಿ ಪಟೇಲರನ್ನೂ ನಡೆಸಿಕೊಂಡು ಬಂದೆ. ರಾಜಗೋಪಾಲ ಆಚಾರಿ ಅವರೂ ಜೊತೆಯಾದರು.
ಲೆಕ್ಕ ಹಾಗೇ ಮುಂದುವರಿಯಿತು. ಎಲ್ ಕೆ ಅಡ್ವಾಣಿ, ಟಿ ಎನ್ ಶೇಷನ್, ಓಂ ಪುರಿ, ಶ್ಯಾಮ್ ಬೆನಗಲ್, ರಜನೀಕಾಂತ್, ಅನುಪಮ್ ಖೇರ್, ಕಟ್ಟಪ್ಪ… ವೀರೇಂದ್ರ ಸೆಹ್ವಾಗ್, ಲಾಲ್ ಬಹದ್ದೂರ್ ಶಾಸ್ತ್ರಿ, ಕರುಣಾನಿಧಿ..
ಎದುರಿಗಿದ್ದವರ ಹತ್ತೂ ಬೆರಳು ಮಡಚಿ ಹೋಗಿ ಆಗಲೇ ಸಾಕಷ್ಟು ಸಮಯವಾಗಿತ್ತು.
ಎದುರಿಗಿದ್ದವರು ಗಹಗಹಿಸಿ ನಗಲು ಶುರು ಮಾಡಿದರು ಅವರಿಗೆ ನನ್ನ ‘ಕ್ವಿಜ್’ ನ ಉತ್ತರ ಗೊತ್ತಾಗಿ ಹೋಗಿತ್ತು. ‘ಸರಿಯಪ್ಪ ನಿನ್ನ ಹೆಸರೇ ಬಿಟ್ಟುಬಿಟ್ಟೆಯಲ್ಲ..’ ಎಂದು ನಕ್ಕರು. ನಾನು ಗಂಭೀರವಾಗಿ ‘ನೋಡು ಗುರೂ, ಮೋಹನದಾಸ ಕರಮಚಂದ ಗಾಂಧಿ ಅವರಿಂದ ಹಿಡಿದು ಈ ಜಿ ಎನ್ ಮೋಹನ್ ಅವರವರೆಗೆ ನಮ್ಮ ಸಂತತಿ ಜೋರಾಗಿಯೇ ಇದೆ’ ಎಂದೆ.
ನಾನು ಹೇಳುತ್ತಿದ್ದದ್ದು ‘ಒಂದು ಮೊಟ್ಟೆಯ ಕಥೆ’ ಖಂಡಿತಾ ಅಲ್ಲ, ಹಲವು.. ಹಲವು ಮೊಟ್ಟೆಯ ಕಥೆ.
‘ಒಂದಾನೊಂದು ಕಾಲದಾಗ ಏಸೊಂದ ಮುದ ಇತ್ತಾ…’ ಅನ್ನುವಂತೆ ನಾನು ‘ನನಗೆ ಚೆಗೆವಾರನಷ್ಟೇ ಧಟ್ಟ ಕೂದಲಿತ್ತು ಗೊತ್ತಾ’ ಎಂದರೆ ಎದುರಿಗಿದ್ದವರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ನಾನೋ ಮಂಗಳೂರಿಗಿಷ್ಟು, ಗುಲ್ಬರ್ಗಕ್ಕಿಷ್ಟು, ಹೈದರಾಬಾದ್ ಗಿಷ್ಟು ಎಂದು ಮೂರು ಮಕ್ಕಳಿಗೆ ಆಸ್ತಿ ಮೂರು ಪಾಲು ಮಾಡಿಕೊಟ್ಟ ಹಿರಿಯನಂತೆ ನನ್ನ ಕೂದಲನ್ನು ಪಾಲು ಮಾಡಿಕೊಟ್ಟುಬಿಟ್ಟಿದ್ದೆ. ಮೂರೂ ಸ್ಥಳದಲ್ಲಿನ ಗಡಸು ನೀರು ನನ್ನ ಸೊಂಪು ಕೂದಲನ್ನು ನನ್ನ ಕಣ್ಣ ಮುಂದೆಯೇ ಬಚ್ಚಲ ಪಾಲಾಗಿಸಿತ್ತು.
ಆದರೆ ನನಗೇನೂ ಎದೆ ಧಸಕ್ ಅನ್ನಲಿಲ್ಲ. ಯಾಕೆಂದರೆ ನನ್ನ ತಲೆ ನನಗೆ ಕಂಡರೆ ತಾನೇ. ಅದು ಎದುರಿಗಿದ್ದವರ ಸಮಸ್ಯೆ ಎಂದು ಕೈ ಚೆಲ್ಲಿ ನಿರಾಳನಾಗಿಬಿಟ್ಟಿದ್ದೆ. ಹೀಗಿರುವಾಗಲೇ ನನಗೆ ಟಿ ಎನ್ ಸತ್ಯನ್, ಖ್ಯಾತ ಛಾಯಾಗ್ರಾಹಕ ಸತ್ಯನ್ ಸಿಕ್ಕಿ ಹಾಕಿಕೊಂಡುಬಿಟ್ಟಿದ್ದು. ಅಂತರ್ಜಾಲ ತಾಣ ‘ಚುರುಮುರಿ’ ಮೇಲೆ ಕೈಯಾಡಿಸುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ‘ಯುರೇಕಾ!’ ಎಂದು ಕೂಗಿಬಿಡಬೇಕು ಎನಿಸಿತು. ಯಾಕೆಂದರೆ ಆ ಟಿ ಎಸ್ ಸತ್ಯನ್ ಬಾಲ್ಡಿ ಜಗತ್ತಿನ ಮೇಲೆ ಚಂದನೆಯ ಸ್ಪಾಟ್ ಲೈಟ್ ಚೆಲ್ಲಿದ್ದರು.
ಮಾರ್ಕ್ಸ್ ಗೊತ್ತಲ್ವಾ.. ಅದೇ ಕಾರ್ಲ್ ಮಾರ್ಕ್ಸ್. ಆತ ‘ಜಗತ್ತಿನ ಕಾರ್ಮಿಕರೇ ಒಂದಾಗಿ ನೀವು ಕಳೆದುಕೊಳ್ಳುವುದೇನಿಲ್ಲ, ಸಂಕೋಲೆಗಳನ್ನು ಹೊರತು…’ ಅಂತ ಕರೆ ಕೊಟ್ಟಿದ್ದ. ಅದೇ ರೀತಿ ದೆಹಲಿಯಲ್ಲೂ ಒಂದು ಮಹತ್ವದ, ಸುವರ್ಣಾಕ್ಷರದಲ್ಲಿ ಕೆತ್ತಿ ಇಡಬೇಕಾದ ಘೋಷಣೆಯೊಂದು ಹೊರಹೊಮ್ಮಿತು. ‘ಜಗತ್ತಿನ ಬಾಲ್ದಿಗಳೇ ಒಂದಾಗಿ, ನೀವು ಕಳೆದುಕೊಳ್ಳುವುದೇನಿಲ್ಲ, ಕೂದಲೊಂದನ್ನು ಬಿಟ್ಟು..’
ಹಾಂ.. ಹೀಗೂ ಉಂಟೇ! ಅಂತ ನನ್ನ ಕೇಳಿದರೆ ನಾನು ತಾನೇ ಏನು ಹೇಳಲು ಸಾಧ್ಯ. ‘ಹೀಗೂ ಉಂಟು..’ ಎಂದು ಸಂಭ್ರಮಪಡುವುದನ್ನು ಬಿಟ್ಟು..
ಒಂದು ದಿನ ದೆಹಲಿಯ ವಕೀಲರೊಬ್ಬರು ನೋಡುತ್ತಾರೆ. ತಮ್ಮ ಮನೆಯಲ್ಲಿ ಕುಳಿತಿದ್ದ ಅಷ್ಟೂ ಜನರನ್ನು.. ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಹೇಗೆ ಜ್ಞಾನೋದಯವಾಗಿಹೋಯ್ತೋ ಆ ರೀತಿ ಆ ವಕೀಲರಿಗೂ ಆ ಕ್ಷಣದಲ್ಲಿ ಜ್ಞಾನೋದಯವಾಗಿಹೋಯ್ತು ಯಾಕೆಂದರೆ ಅವರ ಮನೆಯಲ್ಲಿ ಆಗ ಕುಳಿತಿದ್ದ ೨೦ ಜನರಲ್ಲಿ ೧೫ ಮಂದಿ ಬಾಲ್ದಿಗಳೇ.. ಆಗಲೇ ಅವರಿಗೆ ಅನಿಸಿಹೋಯಿತು. ಬಾಲ್ದಿಗಳನ್ನು ಕಾಪಾಡಬೇಕು ಎಂದು. ‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಬಿಸಿ ಅರಿವಾಗುತ್ತದೆ’ ಎನ್ನುವಂತೆ ಬಾಲ್ದಿಗಳಿಗಷ್ಟೇ ಬಾಲ್ದಿಗಳ ದುಃಖ ಗೊತ್ತಾಗಲು ಸಾಧ್ಯ ಎಂದು ತೀರ್ಮಾನಿಸಿದವರೇ ಸಂಘ ಸ್ಥಾಪಿಸಿಯೇಬಿಟ್ಟರು. ಅದೂ ಅಂತಿಂತ ಸಂಘವಲ್ಲ- ಅದರ ಹೆಸರು ‘ಬಾಲ್ಡೀಸ್ ಇಂಟರ್ನ್ಯಾಷನಲ್’. ಅದರ ಕಾರ್ಯಾಚರಣೆಯ ಸ್ಥಳವೂ ಅಂತಿಂತಹದ್ದಲ್ಲ ಫೈವ್ ಸ್ಟಾರ್ ಹೋಟೆಲ್
ಪ್ರತೀ ತಿಂಗಳ ಮೊದಲ ಹಾಗೂ ಕೊನೆಯ ಗುರುವಾರ ಬಾಲ್ದಿಗಳ ಸಭೆ. ಕಷ್ಟ ಸುಖ ಮಾತಾಡಿಕೊಂಡು ಸಿಕ್ಕಿದ್ದೆಲ್ಲಾ ಹೀರುತ್ತಾ ತಾವು ಬಾಲ್ದಿಗಳಾಗಲು ತಮ್ಮ ಹೆಂಡತಿಯರು ಕಾರಣವೋ, ಹೆಲ್ಮೆಟ್ ಗಳು ಕಾರಣವೋ, ದೆಹಲಿಯ ಈ ದರಿದ್ರ ಹವಾಮಾನ ಕಾರಣವೋ ಅಥವಾ ಜೀನ್ಸ್ ಗಳೇ  ಈ ನಡುವೆ ಎಕ್ಕುಟ್ಟಿಹೋಗಿದೆಯೋ ಎಂದು ಚರ್ಚಿಸುತ್ತಾ ಕೂತು ಎದ್ದು ಹೋಗುತ್ತಿದ್ದರು.
೧೯ ಜನ ಬಾಲ್ದಿಗಳ ಘನ ಸದಸ್ಯತ್ವದಲ್ಲಿ ಸಂಘ ಆರಂಭವಾಗಿ ಹೋಯ್ತು. ಆದರೆ ಈ ಸಂಘ ಬದುಕುಳಿಯುತ್ತೆ ಎನ್ನುವ ನಂಬಿಕೆ ಆ ಸದಸ್ಯರಿಗೇ ಇರಲಿಲ್ಲ. ತಮ್ಮ ಕಣ್ಣ ಮುಂದೆಯೇ ತಮ್ಮ ಕೂದಲುಗಳು ಉದುರಿಹೋದಂತೆ ಈ ಸಂಘವೂ ಉದುರಿಹೋಗುತ್ತದೆ ಎಂದು ಭಾವಿಸಿದ್ದರು. ಆದರೆ ಆಶ್ಚರ್ಯ ಪರಮಾಶ್ಚರ್ಯ ಸಂಘದ ಸದಸ್ಯತ್ವ ನೋಡ ನೋಡುತ್ತಿದ್ದಂತೆ ೧೫೦ಕ್ಕೇರಿತು.
ಸಂಘದ ಸದಸ್ಯರಾಗಲು ಇದ್ದ ಎರಡು ಕಂಡೀಷನ್ ಪೈಕಿ ಒಂದನ್ನು ಹೇಳಲೇಬೇಕಿಲ್ಲ ಅವರು ಬಾಲ್ಡ್ ಆಗಿರಬೇಕು.. ಅಂದ ಮಾತ್ರಕ್ಕೆ ಸಂಘದ ಸದಸ್ಯತ್ವ ಸಿಕ್ಕಿಬಿಡುತ್ತಿರಲಿಲ್ಲ ತಾವು ಬಾಲ್ಡ್ ಎನ್ನುವ ಬಗ್ಗೆ ಹೆಮ್ಮೆ ಇರಬೇಕು, ಅಹಂ ಇರಬೇಕು, ಕೊಬ್ಬಿರಬೇಕು.. ಇದು ಎರಡನೆಯ ಕಂಡೀಶನ್. ಕೂದಲಿದ್ದ ತಲೆ ನೋಡಿದರೆ ಸಾಕು ಉಕ್ಕೀ ಉಕ್ಕಿ ನಗು ಬರಬೇಕು..

ಈ ಸಂಘ ಘನಂಧಾರಿ ಸಂಘವೇ. ಇದು ಗೌರವ ಸದಸ್ಯತ್ವವನ್ನೂ ಕೊಡುತ್ತಿತ್ತು. ಹಾಗೆ ಒಂದು ಸಲ ಗೌರವ ಸದಸ್ಯತ್ವ ಕೊಟ್ಟಿದ್ದು ಯಾರಿಗೆ ಗೊತ್ತಾ- ಐ ಕೆ ಗುಜ್ರಾಲ್ ಗೆ. ಬಾಲ್ಡಿ ಸಂಘದಲ್ಲಿ ಬರೀ ಆಟ ಕೂಟ ಅಲ್ಲ, ವಿಚಾರ ವಿನಿಮಯವೂ ಆಗುತ್ತಿತ್ತು ಆದರೆ ಭಾಷಣಕಾರರಾಗಿ ಬರುವವರು ಸಹಾ -.ಗೊತ್ತಾಯ್ತಲ್ವಾ..
ಒಂದು ಸಲ ಹೀಗೆ ಎಲ್ಲಾ ಸಭೆ ಸೇರಿದ್ದಾರೆ. ಆಗ ಒಬ್ಬ ಸರ್ದಾರ್ಜಿ ಅಲ್ಲಿಗೆ ಎಂಟ್ರಿ ಕೊಟ್ಟರು. ತಮಗೂ ಸಂಘದ ಸದಸ್ಯತ್ವ ಕೊಡಬೇಕು ಅಂತ. ತಲೆಗೆ ಭಾರೀ ಪಂಜಾಬಿ ಪಗಡಿ. ಇವರು ಸಂಘಕ್ಕೆ ಅರ್ಹರೋ ಇಲ್ಲವೋ ಯಾರಿಗೆ ಗೊತ್ತು. ಪಗಡಿ ಬಿಚ್ಚಿ ಎನ್ನೋಣ ಅಂದರೆ ಆ ದಿನ ಸದಸ್ಯರ ಹೆಂಡಿರು ಮಕ್ಕಳೆಲ್ಲಾ ಇದ್ದಾರೆ. ಕೊನೆಗೆ ಆ ಮಹನೀಯರನ್ನ ಒಂದಷ್ಟು ಜನ ಪಕ್ಕದಲ್ಲಿದ್ದ ಟಾಯ್ಲೆಟ್ ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿಂದಲೇ ವಿಜಯದ ಕಹಳೆ ಮೊಳಗಿಸಿದರು. ಆ ಸರ್ದಾರ್ಜಿ ಹೊರಬಂದಾಗ ಎಲ್ಲರೂ ತಬ್ಬಿದ್ದೇನು, ಚಿಯರ್ಸ್ ಹೇಳಿದ್ದೇನು..
ಅಲ್ಲಿದ್ದ ಬಾಲ್ದಿಗಳಲ್ಲೇ ಸುಮಾರು ಕೆಟಗರಿಗಳಿತ್ತು- ಮೂನ್ ಶೈನ್, ಸನ್ ಶೈನ್, ವಿಲ್ ಶೈನ್..
ಹಸ್ತಸಾಮುದ್ರಿಕೆ ಎನ್ನುವುದನ್ನೇ ಈ ಸಂಘ ಗೇಲಿ ಮಾಡುತ್ತಿತ್ತು. ಏಕೆಂದರೆ ಈ ಸಂಘದ ಸದಸ್ಯರ ಥಿಯರಿ ಪ್ರಕಾರ ಭವಿಷ್ಯ ಹುಡುಕಲು ಕೈಯನ್ನೇ ನೋಡಬೇಕಾದ್ದೇನಿಲ್ಲವಂತೆ. ಫಳ ಫಳ ಹೊಳೆಯುವ ತಲೆ ನೋಡಿದರೆ ಸಾಕು ಎನ್ನುವುದು ಎಲ್ಲರ ನಂಬಿಕೆಯಾಗಿತ್ತು. ಈ ಸಂಘದ ಅತಿ ಹಿರಿಯ ಸದಸ್ಯರಾದ ಉದ್ಯಮಿ ಕೆ ಜಿ ಕೋಸ್ಲಾ ಯಾವಾಗಲೂ ಹೇಳುತ್ತಿದ್ದರು. ಮುಂದೆ ಬಾಲ್ಡಿ ಆಗಿದ್ದರೆ ಆತ ಚಿಂತಕ, ಹಿಂದೆ ಬಾಲ್ಡಿ ಆಗಿದ್ದರೆ ರಸಿಕ. ಹಿಂದೆ ಮುಂದೆ ಎರಡೂ ಬಾಲ್ಡಿ ಆಗಿದ್ದವರು ಚಿಂತಕ -ರಸಿಕರು.. ಹೀಗೆ.. ಆಹಾ ಎನ್ನದೆ ನನಗೇನು ಬೇರೆ ದಾರಿಯಿದೆ?.
ಹೀಗಿರುತ್ತಲೊಂದು ದಿನ ಈ ಸಂಘಕ್ಕೆ ಹೊಳೆದು ಹೋಯ್ತು. ಜಗತ್ತಿನ ಬಾಲ್ದಿಗಳೇ ನೀವು ಕಳೆದುಕೊಳ್ಳುವುದೇನಿಲ್ಲ ಎಂದು ಹೇಳಿದ್ದು ಆಗಿದೆ. ಹಾಗಾದರೆ ಕಳೆದುಕೊಳ್ಳುವವರಾದರೂ ಯಾರು ಅಂತ ಯೋಚಿಸಿದಾಗ ಫಕ್ಕನೆ ಹೊಳೆದದ್ದು ಯಸ್! ನಿಮ್ಮ ಊಹೆ ಸರಿ ಅದು- ಕ್ಷೌರಿಕರು..
ಹೀಗೆಲ್ಲಾ ಓದುತ್ತಾ ಓದುತ್ತಾ ಕುಳಿತಾಗ ನನ್ನ ಎದುರಿದ್ದ ಫೋನ್ ‘ಟ್ರಿಣ್’ ಎಂದಿತು. ಫೋನ್ ಎತ್ತಿದೆ. ಆ ಕಡೆ ಇದ್ದವರು ಏನು ಗೊತ್ತಾ ನಮ್ಮ ರಾಮೋಜಿ ಫಿಲಂ ಸಿಟಿಗೆ ಸಿಹಿಕಹಿ ಚಂದ್ರು ಬಂದಿದ್ದಾರೆ, ಸೀರಿಯಲ್ ಡಿಸ್ಕಷನ್ ಗೆ ಎಂದರು. ನಾನು ಆಗ ಈಟಿವಿ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥ. ಹಾಗೆ ಬೆಂಗಳೂರಿನಿಂದ ಬಂದ ಯಾರೇ ಆದರೂ ನಮ್ಮ ಹುಡುಗರ ಬಳಿ ಕರೆತರುತ್ತಿದ್ದೆ. ತೆಲುಗುವೀಡಿನಲ್ಲಿ ಒಂದಷ್ಟು ಕನ್ನಡದಲ್ಲಿ ಮಾತಾಡಿ ಬರ ತೀರಿಸಿಕೊಳ್ಳಲಿ ಅಂತ.
ಹಾಗೆ ಬಂದ ಸಿಹಿ ಕಹಿ ಚಂದ್ರುಗೆ ಒಬ್ಬ ಹುಡುಗ, ಸೊಂಪುಗೂದಲಿನವ ಕೇಳಿಯೇಬಿಟ್ಟ- ‘ನಿಮ್ಮ ಬಾಲ್ಡಿ ತಲೆಯ ರಹಸ್ಯವೇನು?’ ಅಂತ. ಚಂದ್ರು ಹಿಂದೆ ಮುಂದೆ ನೋಡಲೇ ಇಲ್ಲ- ಸಿಂಪಲ್, ಕೂದಲು ಸೊಂಪಾಗಿ ಬೆಳೆಯಲು ಗೊಬ್ಬರ ಬೇಕು. ಯಾರ ತಲೆಯಲ್ಲಿ ಗೊಬ್ಬರ ತುಂಬಿದೆಯೋ ಅವರಿಗೆ ಕೂದಲಿದೆ. ನನ್ನ ತಲೆಯಲ್ಲಿ ಗೊಬ್ಬರ ಇಲ್ಲ. ಹಾಗಾಗಿ ನಾನು ಬಾಲ್ಡಿ ಎಂದರು.
ಸುತ್ತಾ ಇದ್ದವರೆಲ್ಲಾ ಶಾಕ್ ಆಗಿ ನಿಂತಿದ್ದರು. ಒಂದೇ ಒಂದು ದನಿ ‘ಹೋ’ ಎಂದು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡುತ್ತಿತ್ತು. ಆ ದನಿ ಯಾರದು ಎಂದು ಸುತ್ತಾ ನೋಡಿದೆ. ಅದು ನನ್ನದೇ …

‍ಲೇಖಕರು sakshi

July 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shama Nandibetta

    ಮಂಗಳೂರಿನ ನೀರು ಗಡಸು ಎಂದವರ ತಲೆ ಕೂದಲು ಪೂರ್ತಿ ಉದುರಿ ಹೋಗಿ ಅವರ ತಲೆ ಮಂಗಳೂರಿಗರ ಮನಸಿನಷ್ಟೇ ನಯವಾಗಲಿ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: