-ವ್ಯಾಸ ದೇಶಪಾಂಡೆ, ಹುಬ್ಬಳ್ಳಿ
೧
ನಾನು ತೇಜಸ್ಸು, ನಾನು ಓಜಸ್ಸು, ನಾನು ಚೈತನ್ಯ,
ನಾನು ಜ್ಯೋತಿರ್ಲಿಂಗ, ನಾನು ಸಚ್ಚಿದಾನಂದ, ನಾನು ಓಂಕಾರ,
ನಾನು ಜ್ಞಾನ, ನಾನು ನಾದ, ನಾನು ವಿಜ್ಞಾನ,
ನಾನು ಸೃಷ್ಟಿಯ ಆದಿ, ನಾನು ಸೃಷ್ಟಿಯ ಮಧ್ಯ, ನಾನು ಅನಂತ,
ನಾನು ಅಜ.. ನಾನು ಅಜರ, ನಾನು ಅಜರಾಮರ..
ನನಗೆ ನನ್ನ ಅಜ್ಜಿಗೆ ನಡುವೆ ಒಂದು ತಂಬಿಟ್ಟಿನುಂಡಿ
ನಾಲಿಗೆ ಸವಿ ಕೊಂಡಿ
ನನ್ನ ಅಮ್ಮ ನನ್ನ ಅಪ್ಪ ಜೀಕುತ್ತಿದ್ದಾರೆ, ಕ್ಷಿತಿಜದಿಂದ,
ಟ್ರೆಪೀಜುಗಳ ಹಿಡಿದು
ಒಮ್ಮೆ ಅಲ್ಲಿ, ಒಮ್ಮೆ ಇಲ್ಲಿ, ಮೇಲೆ ಕೆಳಗೆ ನಡುವಿನಲ್ಲಿ
ಜೋತು ಬಿದ್ದಿದ್ದೇನೆ
ತಪ್ಪಿದರೆ ಜಾರಿದರೆ ಅತಳ ವಿತಳ ಪಾತಾಳದಲ್ಲಿ
೨
ಗಾಜಿನ ಮೇಲೆ ಸಿಡಿಸಿದ ಹನಿ ದ್ರವಸಮುದ್ರ
ಮೇಲೆ ತೇಲುವ ಅಂಟಿನ ಹಾಸಿಗೆ
ಅಂಟಿನಲ್ಲಿ ಕಂಪಿಸುತ್ತಿದ್ದೇನೆ
ಜ್ಯಾಮಿತಿಯ ಘನ ತತ್ವಗಳ ಹಾಗೆ
ಶಕ್ತಿಯ ಒಂದು ಕಣ ಮಿಂಚಿದಂತೆ
ಚಂಡ ಮಾರುತದಂಥ ಉಚ್ಛಾಸ ಶ್ವಾಸಗಳಲ್ಲಿ
ಹೊರನುಗ್ಗುತ್ತೇನೆ ಒಳನುಗ್ಗುತ್ತೇನೆ
ಜೀವಕೋಶದ ಕೋಟೆಯ
ಗೋಡೆ ಸೀಳುತ್ತೇನೆ ಒಳನುಗ್ಗುತ್ತೇನೆ
ಜೀವಕೋಶ ಛೇದಕ ಭೇದಕ ನಾನು ವೀರ ಸೈನಿಕ ನಾನು
ಕಣದ ಕಣದ ಕಣದ ಕಂಕಣದ ಕಂಕಣ ನಾನು
ಒಂದು ಢಮ್ಮೆಂದರೆ ಎರಡು ಢಮ್ಮೆಂದರೆ ನಾಲ್ಕು
ಢಮ್ಮೆಂದರೆ ಎಂಟು ಢಮ್ಮೆಂದರೆ…
ಮಿಲಿಯನ್ನುಗಳು ಢಮ್ಮೆಂದರೆ ಬಿಲಿಯನ್ನುಗಳು
ಢಮ್ಮೆಂದರೆ ಟ್ರಿಲಿಯನ್ಗಳು ಢಮ್ಮೆಂದರೆ
… … …

ಬುರುಡೆಗಳು ಢಂ ಢಂಢಂ ಢಢಂಢಂ ಸಿಡಿಸಿಡಿದು ಸಿಡಿಸಿಡಿದು
ವಾಣಿಜ್ಯ ಸಮುಚ್ಚಯಗಳು ಮಾಲುಗಳು ಬುಲೆಟ್ ಟ್ರೇನುಗಳು
ಕಾರುಗಳ ಇರುವೆ ಸಾಲುಗಳು
ಕನ್ವೇಯರ್ ಬೆಲ್ಟುಗಳಲ್ಲಿ ಚುಕುಬುಕು ಸಾಗಿರುವ
ಕರೆನ್ಸಿ ನೋಟುಗಳು ನಿನ್ನ ಎಲ್ಲ ವರ್ತಮಾನಗಳೂ ಎಲ್ಲ ಭವಿಷ್ಯಗಳೂ
ಇದ್ದಲ್ಲಿಯೇ ನಿಂತಲ್ಲಿಯೇ ಉಸಿರು ಕಟ್ಟಿ ಹಲ್ಲು ಕಿಸಿಯುತ್ತಿವೆ
ನನ್ನ ನಿನ್ನ ಯುದ್ಧ
ನಾಲ್ಕು ಯುಗಗಳ ನಿರಂತರ ಯುದ್ಧ
ನಾನು ಸೂಕ್ಷ್ಮಾತಿ ಸೂಕ್ಷ್ಮನು
ಬರಿ ಒಂದು ಅಣು… ಅಲ್ಲಲ್ಲ ವೈರಾಣು
ನೀನೋ ಬಾಹುಬಲಿ ಗಾತ್ರದವನು…
೩
ಎತ್ತಲಿಂದೋ ಹೇಗೋ ಚಿಮ್ಮಿ ಬಂದಿದೆ
ಒಂದು ರೇಡಿಯೋ ಸಿಗ್ನಲ್ಲು
ನಿಹಾರಿಕೆಗಳಾಚೆಯ…
ಬೋಧೀ ಮೂಲದ…
ಗುರುತಿರದ ಹೊಸ ಅರಿವಿನ ತರಂಗ
ಬಿಡಿಸಿದಾಗ ಹೇಳಿದೆ…
‘ಸೃಷ್ಟಿಯ ಗರ್ಭದ ಹೊಕ್ಕಳೊಳಗಿನ ಮೂಲ
ಅಂತರ್ಯುದ್ಧವೇ
ನಿಮ್ಮಿಬ್ಬರ ಈ ಯುದ್ಧ’






0 Comments