
ಜಯಪ್ರಕಾಶ್ ಶೆಟ್ಟಿ ಉಪ್ಪಳ
ನಾನು ಸಾವಿನಂಚಿನಲ್ಲಿ ‘ಬದುಕಿಗಾಗಿ’ ಬೊಬ್ಬಿರಿದಾಗ ಫೋಟೋ/ ವೀಡಿಯೋ ತೆಗೆದು ವಾಟ್ಸಪ್ ನಲ್ಲಿ ಹರಿಯಬಿಟ್ಟವರಿಗೆ,
ಪ್ರಿಯರೆ,
ನಾನು ಸ್ವರ್ಗದಲ್ಲಿ ಕ್ಷೇಮವಾಗಿದ್ದೇನೆ. ನೀವು ನನ್ನ ಬದುಕಿನ ಕೊನೆ ಕ್ಷಣದ ಫೋಟೋ/ ವೀಡಿಯೋ ತೆಗೆಯಲು ನಡೆಸಿದ ನೂಕುನುಗ್ಗಲು, ಸ್ವಲ್ಪವೂ ಅನುಕಂಪ ತೋರಿಸದ ಕಣ್ಣುಗಳು, ನನ್ನ ನೋವಿಗಾಗಿ ಮಿಡಿಯದ ನಿಮ್ಮ ಹೃದಯ ಇವುಗಳನ್ನೆಲ್ಲಾ ಹತ್ತಿರದಿಂದ ಕಂಡವ ನಾನಾದುದರಿಂದ ನಿಮಗೆ ನಿಮ್ಮ ಬದುಕಿನಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಹಾಯಾಗಿರಬಹುದು ಎಂದು ನಾನು ನಂಬಿದ್ದೇನೆ.
ಸಾವು ಯಾರನ್ನೂ ಬಿಡುವುದಿಲ್ಲ ಬಿಡಿ. ನನ್ನ ಬದುಕಿಗೆ ಆ ದಿನವೇ ಕೊನೆ ಎಂದು ದೇವರೇ ಬರೆದಿರಲೂ ಸಾಕು. ಆದರೂ ಸಹ ನನ್ನನ್ನು ಮತ್ತೆ ಮತ್ತೆ ಕಾಡುತ್ತಿರುವುದು ನೀವು ಆ ಕ್ಷಣ ವರ್ತಿಸಿದ ರೀತಿ. ನಾನು ನಿಮ್ಮನೆಲ್ಲಾ ಆಗಲೇ ಕೇಳಬೇಕೆಂದಿದ್ದೆ; ಸಾಯುತ್ತಿರುವ ನನ್ನ ವೀಡಿಯೋ ತೆಗೆದು ಏನು ಸಾಧಿಸಿದಿರಿ ಎಂದು!.
ವಿಪರೀತ ರಕ್ತ ಹೋದುದರಿಂದವೋ ಏನೋ ನನಗೆ ಸ್ವರವೇ ಬರಲಿಲ್ಲ. ಅಷ್ಟೇ ಅಲ್ಲ, ಮಂಜಾಗುತ್ತಿದ್ದ ನನ್ನ ಕಣ್ಣುಗಳಿಗೆ ನಿಮ್ಮ ಮುಖಗಳೂ ಅಸ್ಪಷ್ಟವಾಗಿ ಕಾಣುತ್ತಿದ್ದವು. ಹಾಗಾಗಿ ನಿಮ್ಮನ್ನು ಸರಿಯಾಗಿ ಗುರುತಿಸಲೂ ನನ್ನಿಂದಾಗಲಿಲ್ಲ. ಇಲ್ಲದಿದ್ದರೆ ನೀವೊಂದು ದಿನ ಸತ್ತು ನನ್ನ ಬಳಿ ಬಂದಾಗಾದರೂ ಖಂಡಿತಾ ಆ ಪ್ರಶ್ನೆಯನ್ನು ನಿಮಗೆಲ್ಲಾ ಕೇಳುತ್ತಿದ್ದೆ.
ನಾನು ಬರಿ ಸಾವಿಗೆ ಹೆದರಿ ನಿಮ್ಮ ಸಹಾಯ ಯಾಚಿಸಲಿಲ್ಲ. ಸಾವಿಗೆ ಹೆದರಿ ಬದುಕುವುದೂ ಇಲ್ಲ ಎಂದೂ ಸಹ ನಾನು ಗರ್ವದಿಂದ ಹೇಳಬಲ್ಲೆ. ಆದರೆ, ನಾನು ಸಾಯುತ್ತಿರುವಾಗ ಕೇವಲ ವರ್ಷದ ಹಿಂದೆಯಷ್ಟೇ ನನ್ನ ಮದುವೆಯಾಗಿದ್ದ ನನ್ನ ಮಡದಿ ನೆನಪಾದಳು. ಆಕೆಯ ಗರ್ಭದಲ್ಲಿ ಬೆಳೆದು ಹೊರಬರಲು ಹವಣಿಸುತ್ತಿದ್ದ ನನ್ನ ಮಗುವಿನ ನೆನಪಾಯಿತು. ನನ್ನ ಈ ಬದುಕಿಗೋಸ್ಕರ ತಮ್ಮ ಬದುಕನ್ನೇ ಸವೆದ ಅಪ್ಪ-ಅಮ್ಮನ ವಯಸ್ಸಾದ ಮುಖಗಳು ನನ್ನ ಕಣ್ಣೆದುರು ಮತ್ತೆ ಮತ್ತೆ ಗೋಚರಿಸಿದವು.
ಇವೆಲ್ಲಾ ನೆನಪಾಗಿಯೇ ನಾನು ನಿಮ್ಮನ್ನು ಕರೆದಿದ್ದು. ನಿಮಗೆ ಗೊತ್ತಿಲ್ಲ ಬಿಡಿ. ನನ್ನ ಬೈಕ್ ನ ಸಾಲ ಸಹ ಇನ್ನೂ ಸಂದಿಲ್ಲ. ಆ ಕ್ಷಣ ನಿಮ್ಮಲ್ಲಿ ಯಾರಾದರೊಬ್ಬ ಸಹಾಯ ಮಾಡುತ್ತಿದ್ದರೆ ನಾನು ಬದುಕುತ್ತಿದ್ದೆ. ನೀವು ನನ್ನ ಸುತ್ತ ನಿಂತು ಫೋಟೋ ತೆಗೆಯಲು ನಿಮಗೆ ಬೇಕಿದ್ದ ಸಮಯ ಸಾಕಿತ್ತು ನನ್ನನ್ನು ಅಲ್ಲೇ ಹತ್ತಿರವಿದ್ದ ಆಸ್ಪತ್ರೆಗೆ ಸಾಗಿಸಲು. ನೀವು ಮಾಡಿದ ಉಪಕಾರಕ್ಕಾಗಿ ನನ್ನ ಕುಟುಂಬ ಜೀವನವಿಡೀ ನಿಮಗೆ ಋಣಿಯಾಗಿರುತ್ತಿತ್ತು.
ಒಂದು ಸಲ ನನ್ನ ಜಾಗದಲ್ಲಿ ನೀವಿದ್ದಿದ್ದರೆ ಎಂದು ಆಲೋಚಿಸಿ ನೋಡಿ. ನನ್ನ ಹತ್ತಿರವೇ ಹರಿದು ನೆಲ ಸೇರುತ್ತಿದ್ದ ರಕ್ತ, ನನ್ನ ದೇಹದಿಂದ ಬೇರೆಯಾಗಿದ್ದ ಕಾಲುಗಳು, ಒಣಗುತ್ತಿದ್ದ ಗಂಟಲು, ಸಹಿಸಲಾಗದ ನೋವು ಇವುಗಳನ್ನೆಲ್ಲಾ ನಿಮ್ಮದೇ ಆಗಿದ್ದರೆ? ಅಥವಾ ನಿಮ್ಮ ಸಂಬಂಧಿಗಳದೋ ಆಗಿದ್ದರೆ?. ಬೇರೆಯವರು ನಿಮ್ಮ ಫೋಟೋ ತೆಗೆವಾಗ ಏನು ಅನ್ನಿಸಬಹುದು ಎಂದು ಒಮ್ಮೆ
ಯೋಚಿಸಿ. ಊಹಿಸಿಕೊಳ್ಳುವುದು ಸಹ ಕಷ್ಟ ಅಲ್ಲವೇ. ಹೋಗಲಿ, ಅಷ್ಟೊಂದು ನಿಮ್ಮಲ್ಲಿ ಅಂಗಲಾಚಿದ್ದ ನಾನು ನಿಮ್ಮ ಸಹೋದರನೇ ಆಗಿದ್ದಿದ್ದರೆ?. ಆ ಅಸಹಾಯಕ ಪರಿಸ್ಥಿತಿಯಲ್ಲಿ ನನಗಾದ ಆ ನೋವು ಅಷ್ಟಿಟ್ಟಲ್ಲ. ಆ ನೋವಿನಲ್ಲಿ ನಿಮ್ಮನ್ನು ಶಪಿಸಿದ್ದೇನೆ ಕೂಡ!. ನಾನು ಅಷ್ಟಲ್ಲದೆ ಬೇರೆನು ಮಾಡಬಹುದಿತ್ತು ಆ ಕ್ಷಣದಲ್ಲಿ?. ನನಗೆ ಆ ಬಗ್ಗೆ ಬೇಸರವಿದೆ.
ನಾನು ಸತ್ತಿದ್ದೇನೆ ನನ್ನದಲ್ಲ ತಪ್ಪಿಗೆ. ನನ್ನ ಕುಟುಂಬ ಮುಂದೆ ಅನುಭವಿಸಬಹುದಾದ ಕಷ್ಟ ನಷ್ಟಗಳನ್ನೆಲ್ಲಾ ಊಹಿಸಿ ನನ್ನ ತಲೆ ಕೆಡುತ್ತಿದೆ. ಮುದ್ದು ಮಗುವಿನ ಮುಖ ನೋಡುವ ಆಸೆ ಯಾವ ಅಪ್ಪನಿಗೆ ತಾನೆ ಇರುವುದಿಲ್ಲಾ?. ಆದರೆ, ಆ ಭಾಗ್ಯವೂ ನನಗಿಲ್ಲವಲ್ಲ ಎಂಬ ಕೊರಗು ನನ್ನನ್ನು ಪದೇ ಪದೆ ಹಿಂಸಿಸುತ್ತಿದೆ. ನನ್ನನ್ನೆ ನಂಬಿ ಬಂದ ನನ್ನ ಮುದ್ದಿನ ಮಡದಿಯ ಬಾಳನ್ನೇ ಹಾಳು ಮಾಡಿದೆ ಎಂದು ನನಗನ್ನಿಸಿ ಆಗಾಗ ಗಾಳಿಯಲ್ಲಿ ಗುದ್ದುತ್ತೇನೆ, ಕಾಲುಗಳಲ್ಲಿ ಝಾಡಿಸಿ ಒದೆಯುತ್ತೇನೆ. ನನ್ನ ಈಗಿನ ಅಸಹಾಯಕತೆ ನಿಮ್ಮ ಬಗ್ಗೆ ಅಸಹನೆಯನ್ನು ಮೂಡಿಸುತ್ತಿದೆ. ನೀವಂದು ಮನಸ್ಸು ಮಾಡಿದ್ದರೆ ನಾನೀಗ ಭೂಮಿಯಲ್ಲೆ ಸ್ವರ್ಗ ಸುಖವನ್ನು ಅನುಭವಿಸುತ್ತಿದ್ದೆ.
ಕೊನೆಗೊಂದು ವಿನಂತಿ. ನೀವು ತೆಗೆದ ಆ ಫೋಟೋಗಳನ್ನು ದಯವಿಟ್ಟು ನನ್ನ ಅಪ್ಪ ಅಮ್ಮನಿಗೆ ಕಳುಹಿಸಬೇಡಿ. ಇನ್ನೊಮ್ಮೆ ಯಾರನ್ನಾದರು ನಾನು ಅಂದಿದ್ದ ಪರಿಸ್ಥಿತಿಯಲ್ಲಿ ಕಂಡರೆ ಅವರಿಗೆ ಸಹಾಯ ಮಾಡಿ. ಒಂದುವೇಳೆ ಸಹಾಯ ಮಾಡಲು ಸಾಧ್ಯವಿಲ್ಲದಿದ್ದರೆ ಸುಮ್ಮನ್ನೆ ಮುಂದೆ ಹೋಗಿ. ಆದರೆ, ಆ ರೀತಿ ಫೋಟೋ/ ವೀಡಿಯೋಗಳನ್ನು ಮಾತ್ರ ತೆಗೆಯಬೇಡಿ. ಸಾಧ್ಯವಾದರೆ ಒಂದೆ ಒಂದು ಸಲ ಕನ್ನಡಿಯ ಮುಂದೆ ನಿಂತು ನಿಮ್ಮನ್ನೆ ನೀವು ಕೇಳಿ ಬಿಡಿ, ” ಸಾಯುತ್ತಿರುವ ನನ್ನ ವೀಡಿಯೋ ತೆಗೆದು ಏನು ಸಾಧಿಸಿದಿರಿ ಎಂದು!”.
ಇತೀ ನಿಮ್ಮ ಸಹೋದರ.






ನಮ್ಮ ”ಅಮಾನವೀಯ” ನಡವಳಿಕೆ ಅವಮಾನದಿಂದ ತಲೆ ತಗ್ಗಿಸುವಂತಿದೆ. ಈ ಬರಹ.
ಜನರಲ್ಲಿ ಈ ಬಗೆಯ ದಪ್ಪ ಚರ್ಮವನ್ನು ಬೆಳೆಸುವಲ್ಲಿ ಟಿವಿ ನ್ಯೂಸ್ ಚ್ಯಾನಲ್ ಗಳ ಪಾತ್ರವೂ ಇದೆ ಎಂಬುದನ್ನು ಮರೆಯುವಂತಿಲ್ಲ. ಜಯಪ್ರಕಾಶ್ ಶೆಟ್ಟಿ ಅವರೆ, ಬರಹ ಮನ ಕಲುಕಿತು.
ಕರುಳು ಕಿವುಚಿ ಬರುವಂತಿದೆ ನಿಮ್ಮ ಬರಹ. ಓದುತ್ತ ಹೋದಂತೆ ಈಗಿನ ಸೆಲ್ಫಿ ತೆಗೆಯುವವರ ಗೀಳು ನೆನಪಿಗೆ ಬಂತು. ಈ.ಸೆಲ್ಫಿ ತೆಗೆದುಕೊಳ್ಳುವುದೂ ಹಾಗೆ ಅಲ್ಲವೇ? ಸತ್ತವರ ಜೊತೆ ಪೋಸು ಕೊಡೋದು. ಇಂತಹ ಬರಹ ನಿಜವಾಗಿಯೂ ಎಲ್ಲರೂ ಓದಬೇಕಾದ್ದೆ.
ಕತ್ತಿ ಮಸೆದಂತಿದೆ ಬರಹ! ಧನ್ಯವಾದಗಳು.
ಜಯಪ್ರಕಾಶ ಸರ್…. ಮನ ಕಲುಕುವಂತೆ ಬರೆದಿರುವಿರಿ. ಓದಿದ ಕೆಲವರಾದರೂ ಈ ಬುದ್ಧಿ ಬಿಟ್ಟರೆ ಸಾರ್ಥಕ
ಕಣ್ಣು ತೇವಗೊಳಿಸಿದ ಓದು.
“ದೇವಸ್ಥಾನಗಳಲ್ಲಿ ದೇವರಿದ್ದಾನೋ ಇಲ್ಲವೋ ಎನ್ನುವುದಕ್ಕಿಂತ ಮನುಷ್ಯನೊಳಗೆ ಮಾನವೀಯತೆ ಇದೆಯೋ ಇಲ್ಲವೋ ಅನ್ನೋದು ಮುಖ್ಯ” ನೆನಪಾಯಿತು.. ನನ್ನ ನೆನಪು ಸರಿಯಾಗಿದ್ದರೆ ಈ ಸಾಲುಗಳನ್ನ ಬರೆದವರು ವಸುದೇವ ಭೂಪಾಲಂ ಇರಬೇಕು.