ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಾನು ಮಾಧವಿ, ರಾಜ ಯಯಾತಿಯ ಮಗಳು…’ – ಅನಿತಾ ಮಂಚಿ

ಇನ್ನೂರು ಅಶ್ವಗಳು..

ಅನಿತಾ ನರೇಶ್ ಮಂಚಿ

ಕಡಲು

ರಾಜಾ ಯಯಾತಿ .. ಪೃಥ್ವಿಪತಿಗಳಲ್ಲಿ ಶ್ರೇಷ್ಠನೆನಿಸಿಕೊಂಡವನು. ಅವನ ಮಗಳಾದ ನನಗೆ ಅಂದರೆ ‘ಮಾಧವಿಗೆ ಹರೆಯ ಉಕ್ಕಿ ಹರಿದು, ಮದುವೆಯ ವಯಸ್ಸು ಬಂದಿರುವುದು ಸಾಮಾನ್ಯ ಸುದ್ಧಿಯೇ..? ಹೂವ ಕಂಪು ಎಲ್ಲೆಲ್ಲೂ ಪಸರಿಸುವಂತೆ ನನ್ನ ಅಂದ ಚಂದದ ಬಗೆಗಿನ ಮಾತುಗಳು ದೇಶದಲ್ಲೆಲ್ಲಾ ಹಬ್ಬಿತ್ತು.. ಇಂದೇಕೋ ಉದ್ಯಾನವನದ ತಂಪು ನೆರಳು ಮನಕ್ಕೆ ತಂಪೀಯದೆ ಬಿಸಿ ಅಲೆಗಳನ್ನೆಬ್ಬಿಸುತ್ತಿತ್ತು. ತಿಳಿಗೊಳದಲ್ಲಿ ಕಾಣುತ್ತಿರುವುದು ನನ್ನದೇ ಬಿಂಬವಲ್ಲವೇ..? ನೋಡುತ್ತಾ ಮೈ ಮರೆತೆ. ಆಹಾ.. ಎಷ್ಟು ಸುಕುಮಾರ ಸುಂದರ ದೇಹ.. ಒಂದಿಷ್ಟಾದರೂ ಕುಂದುಕೊರತೆಗಳಿಲ್ಲ.. ಪ್ರಮಾಣ ಬದ್ಧ ಶರೀರ, ಯಾರಿಗೆ ಒಲಿದೀತು ಈ ಸೌಂದರ್ಯ.. ಯಾರಾಗಬಹುದು ಈ ಐಸಿರಿಯ ಒಡೆಯ..

ಬಂಗಾರ ವರ್ಣದ ಮೀನೊಂದು ಮೇಲೆದ್ದು ಚಿಮ್ಮಿ ನೀರೊಳಗೆ ಬಿತ್ತು. ನನ್ನ ಬಿಂಬ ಒಂದಿದ್ದದ್ದು ಎರಡಾಗಿ , ನಾಲ್ಕಾಗಿ, ನೂರಾಗಿ ಹರಡಿ ಹೋಯಿತು. ಅದರಲ್ಲಿ ನನ್ನನ್ನು ಹುಡುಕುವ ಪ್ರಯತ್ನ ಬಿಟ್ಟೆ. ಸುಮ್ಮನೆ ಕುಳಿತಿದ್ದರಿಂದಾಗಿ ಕಾಲು ನೋಯುತ್ತಿತ್ತು. ಒಮ್ಮೆ ಎದ್ದು ಕುಳಿತಿದ್ದ ಭಂಗಿ ಬದಲಿಸಿದೆ.
ನನ್ನ ಮದುವೆಯ ಬಗೆಗಿನ ವಿಷಯಗಳು ಆಗೀಗ ನನ್ನ ಕಿವಿಗೆ ಬೀಳುತ್ತಿತ್ತು. ಹೇಗಿರಬಹುದು ನನ್ನ ರಾಜಕುಮಾರ.. ಹುಂ.. ಇರುವುದು ಹೇಗೆ..? ಇನ್ನೂ ಹಸಿ ಯೌವನವನ್ನು ಹೊತ್ತಿರುವ ತನ್ನಪ್ಪನಂತೆ..!! ಉಹೂಂ.. ಹೋಲಿಕೆ ಸರಿಯಲ್ಲ.. ಅಣ್ಣ ಪುರು ತನ್ನ ಯೌವನವನ್ನೆಲ್ಲಾ ಅಪ್ಪನಿಗಾಗಿ ಧಾರೆಯೆರೆದಿದ್ದ. ಹುಚ್ಚು ಕೆಲಸ ಅವನದು ಎಂದೆನಿಸಿತ್ತು ಆಗ.. ಅಪ್ಪನೊಳಗಿರುವುದು ಅಪ್ಪನೋ.. ಅಣ್ಣನೋ.. ? ಅಥವಾ ಇನ್ನೂ ಮುಗಿಯದ ಅವನ ವಾಂಛೆಯೋ.. ? ತಾನು ರಾಜಾ ಯಯಾತಿಯ ಮಗಳೇನೋ ಸರಿ.. ಆದರೆ ಅಮ್ಮ.. ಅವಳೋ ನೂರಾರು ಅಂತಃಪುರದ ರಾಣಿಯರಲ್ಲಿ ಒಬ್ಬಳು..ಹೆಸರಿತ್ತೇ ಅವಳಿಗೆ.. ಯಾರಿಗೆ ಗೊತ್ತು.. ದೇವಯಾನಿ, ಶರ್ಮಿಷ್ಟೆಯನ್ನುಳಿದು ಮತ್ತೆಲ್ಲರೂ ರಾಜನಿಗೆ ಮಾತ್ರ ರಾಣಿಯರು ರಾಜ್ಯಕ್ಕಲ್ಲ.. ಥತ್.. ಇಂದ್ಯಾಕೆ ಇಂತಹ ಯೋಚನೆಗಳು..ತಲೆ ಕೊಡವಿಕೊಂಡೆ.

ಸಖಿಯ ಗೆಜ್ಜೆಯ ನಿನಾದ ಹತ್ತಿರದಲ್ಲೇ..
ಮೆಲ್ಲನೆ ಕೈಯೂರಿ ಏಳ ಹೊರಟವಳನ್ನು ಕೈ ಹಿಡಿದು ಅವಸರವಾಗಿ ಎಬ್ಬಿಸಿದಳು. ಅದುರುತ್ತಿತ್ತು ಅವಳಧರಗಳು.. ಏನನ್ನೋ ಹೇಳಹೊರಟವಳು ಗೊಣಗಿಕೊಂಡಂತೆ ಅತ್ತ ತಿರುಗಿ ಮುಖ ಮರೆಸಿ ಏನೋ ನುಡಿದು ಮೌನವಾದಳು..
ತನಗರಿಯದೇ..!! ಅವಳು ಹೇಳುವ ವಿಚಾರ.. ಯಾವುದೋ ದೇಶದ ರಾಜಕುಮಾರನ ಪತ್ರ ಬಂದಿರಬಹುದು ನನ್ನನ್ನು ಅವನ ವಧುವಾಗಿ ಬೇಡಲು .. ಯಾರಿರಬಹುದು..? ನಾನೇ ಕೇಳೋಣವೆಂದರೆ ನಾಚಿಕೆಯ ತೆರೆ .. ಅವಳಿಗೋ ನನ್ನನ್ನು ಸತಾಯಿಸುವುದೆಂದರೆ ಬಲು ಪ್ರೀತಿ. ಹೇಳಬಾರದೇ.. ದೀನಳಾಗಿ ನೋಡಿದೆ.
ಅವಳ ಕಣ್ಣುಗಳಲ್ಲಿ ಆತಂಕದ ನೆರಳು. “ಮಹಾರಾಜರ ಅಪ್ಪಣೆಯಾಗಿದೆ ಕುವರಿ, ಕೂಡಲೇ ರಾಜಸಭೆಗೆ ಹೊರಡು..” ಅಪ್ಪನ ಪ್ರೀತಿಯ ಮಗಳು ನಾನು .. ನನ್ನ ಬಗ್ಗೆ ಅಪ್ಪನಿಗೆ ಭಾರೀ ಹೆಮ್ಮೆ. ನನ್ನನ್ನು ಯೋಗ್ಯ ವರನ ಕೈಗೆ ಕೊಡುವ ಮೊದಲು ನನ್ನ ಅಭಿಪ್ರಾಯ ಅವನಿಗೆ ಮುಖ್ಯವಲ್ಲವೇ..?ಆದರೆ ರಾಜಸಭೆಯಲ್ಲಿ ನನ್ನ ಮದುವೆಯ ಮಾತೇ..? ರಾಜನಾದವನಿಗೆ ಅಂತರಂಗ ಬಹಿರಂಗ ಎಂದು ಬೇರೆ ಬೇರೆ ಇರಲಾರದೇನೋ..?
ನಾಚುತ್ತಲೇ ರಾಜಸಭೆ ಪ್ರವೇಶಿಸಿದೆ. ನನ್ನ ಸೊಬಗಿನ ಬೆಳಕಿಗೆ ಅಲ್ಲಿರುವವರೆಲ್ಲ ಸ್ತಬ್ಧರಾದಂತೆ ಅನಿಸಿತು. ಜಂಬದಿಂದಲೇ ಅಪ್ಪನ ಬಳಿ ಸಾರಿದೆ. ಅಲ್ಲೇ ನಿಂತಿದ್ದ ಮುನಿ ಕುವರನೋರ್ವನ ದೃಷ್ಟಿ ನನ್ನನ್ನು ಇರಿಯುತ್ತಿತ್ತು.
ರಾಜನಲ್ಲಿಗೆ ಸಹಾಯ ಯಾಚಿಸಿ ಬರುವ ಇಂತಹ ಅನೇಕ ಋಷಿ ಮುನಿಗಳನ್ನು ಕಂಡಿದ್ದೇನೆ. ಅವರೆಲ್ಲಾ ನಮಗೆ ಪೂಜನೀಯರು. ತಲೆ ಬಾಗಿ ವಂದಿಸಿದೆ. ವನವಾಸಿಗಳಾದ ಅವರು ಕಷ್ಟಕ್ಕೆ ಸಿಲುಕುವುದು, ಸಹಾಯ ಬೇಡಿ ರಾಜನತ್ತ ಮುಖ ಮಾಡುವುದು ಹೊಸದೇನಲ್ಲ. “ಗಾಲವನಂತೆ ಅವನು.. ಮಹರ್ಷಿ ವಿಶ್ವಾಮಿತ್ರರ ಪ್ರಿಯ ಶಿಷ್ಯ..” ಪಕ್ಕದಲ್ಲೇ ಇದ್ದ ಸಖಿಯ ಪಿಸುಗುಟ್ಟುವಿಕೆ ಇನ್ನೂ ಮುಗಿದಿರಲಿಲ್ಲ..
ರಾಜ ಯಯಾತಿಯ ಕಂಚಿನ ಕಂಠ ಮೊಳಗಿತು. “ಗಾಲವರ ಬಯಕೆಯಂತೆ ಶುದ್ಧ ಶ್ವೇತ ವರ್ಣದ,ಒಂದು ಕಿವಿ ಮಾತ್ರ ಕಪ್ಪಿರುವ ಗುಣಲಕ್ಷಣಗಳುಳ್ಳ ಎಂಟು ನೂರು ಅಶ್ವಗಳ ಅವರ ಕೋರಿಕೆಯನ್ನು ಪೂರ್ತಿ ಮಾಡುವುದು ಸಾಧ್ಯವಿಲ್ಲವಾದ್ದರಿಂದ, ಅದರ ಬದಲಿಗೆ ಸರ್ವ ಗುಣ ಸಂಪನ್ನೆಯಾದ ನನ್ನ ಕುವರಿಯನ್ನು ಅವರಿಗೆ ದಾನವಾಗಿ ನೀಡುತ್ತಿದ್ದೇನೆ. ಅವಳನ್ನು ಬಳಸಿಕೊಂಡು ಅವರು ಅಶ್ವಗಳನ್ನು ಪಡೆಯಲಿ…”
ಸಭೆ ರಾಜನಿಗೆ ಜಯಕಾರವಿಕ್ಕಿತು.
ಸಾವಿರ ಸಿಡಿಲುಗಳ ಪ್ರಹಾರ ಏಕಕಾಲಕ್ಕೆ ನನ್ನ ಮೇಲಾದಂತೆ..ನಾನು ಬುಡ ಕಡಿದ ಬಾಳೆಯಂತೆ ನೆಲಕ್ಕೊರಗುತ್ತಿದ್ದೆ.. ಸಖಿ ಆಧರಿಸಿ ಹಿಡಿದಿದ್ದಳು. ಸಾವರಿಸಿಕೊಂಡು ಎದ್ದೆ. ನೂರಾರು ಆಸ್ಥಾನಿಕರ, ಬಂಧು ಬಾಂಧವರ ಸಮ್ಮುಖದಲ್ಲಿ ಮೆಚ್ಚಿದ ವರನ ಕೈ ಹಿಡಿದು,ಎಲ್ಲರ ಉಡೊಗೊರೆ,ಪ್ರೀತಿಯ ಹಾರೈಕೆಗಳಲ್ಲಿ ಎದೆ ತುಂಬಿ ಹೊರಡಬೇಕಾಗಿದ್ದ ನನಗೆ ಈ ಸ್ಥಿತಿ! ನಾನು ಬಯಸಿದ್ದೆಲ್ಲವನ್ನೂ ನನ್ನಿಚ್ಚೆಯಂತೆ ಕ್ಷಣ ಹೊತ್ತಲ್ಲಿ, ಪೂರೈಸುತ್ತಿದ್ದ ನನ್ನಪ್ಪನೆಲ್ಲಿ ಈಗ.. ಈ ಕಠೋರ ನುಡಿಗಳು ಅವನ ಬಾಯಿಯಿಂದಲೇ ಬಂದಿತೇ..ಅಥವಾ ಕುಳಿತಲ್ಲೇ ಕೆಟ್ಟ ಕನಸೇನಾದರು ಬಿತ್ತೇ ನನಗೆ..!! … ಇಲ್ಲ.. ಇದು ಸತ್ಯ.. ಬಳಸಿ ಹಿಡಿದ ಸಖಿಯ ಕೈಯನ್ನು ಸರಿಸಿದೆ. ಅಪ್ಪನೆಡೆಗೆ ತಿರುಗಿದೆ.. ಅಲ್ಲೆಲ್ಲಿದ್ದ ಅವನು! ರಾಜಾ ಯಯಾತಿಗೆ ಋಷಿಗಳ ಕೋಪಕ್ಕೆ ಸಿಲುಕದೆ ನುಣುಚಿಕೊಳ್ಳಲು ಮುನ್ನಡೆಸಬೇಕಾಗಿದ್ದ ಚದುರಂಗದ ಕಾಯಿ ನಾನಾಗಿದ್ದೆ.
ಪುರಜನರಿಗೆಲ್ಲ ವಿಷಯ ತಿಳಿಯುವ ಮೊದಲೇ ನಾನು ಗಾಲವನೊಡನೆ ರಾಜ್ಯದ ಪರಿಧಿ ದಾಟಿದ್ದೆ. ಸ್ವಲ್ಪ ಹೊತ್ತಿನ ಮೊದಲು ನಾನು ಹೆಮ್ಮೆ ಪಡುತ್ತಿದ್ದ ನನ್ನ ಸೊಬಗು ಸೌಂದರ್ಯಕ್ಕೆ ಸಿಕ್ಕ ಬೆಲೆ ಇದುವೆ..? ಇದರ ಬದಲು ಕುರೂಪಿಯಾಗಿದ್ದರೇ ಚೆನ್ನಿತ್ತು ಎಂದು ಹಾರೈಸಿದೆ. ಗೋಳಾಡಿದೆ, ಅತ್ತೆ.. ಸಾವಾದರೂ ಬರಬಾರದೇ ನನಗೆ .. ಈ ಬದುಕಿಗಿಂತ..ಆದರೆ ನಾನೀಗ ಇನ್ನೊಬ್ಬನ ಅಧೀನಳು.. ಕೊಂದುಕೊಳ್ಳೋಣವೆಂದರೆ ನನ್ನದಾಗಿರಲಿಲ್ಲ ನನ್ನ ದೇಹ..
ಗಾಲವ ಯಾವುದನ್ನೂ ಕೇಳಿಸಿಕೊಳ್ಳದೇ ಮುಂದೆ ಸಾಗುತ್ತಲೇ ಇದ್ದ. ಅವನ ಕಡೆಗೆ ಉರಿನೋಟ ಬೀರಿದೆ. ಗುರು ವಿಶ್ವಾಮಿತ್ರನನ್ನು ಒತ್ತಾಯಪಡಿಸಿ ತನ್ನ ಅಳತೆಯನ್ನು ಮೀರಿ ಗುರುದಕ್ಷಿಣೆಯನ್ನು ಕೊಡುವುದಾಗಿ ಒಪ್ಪಿಕೊಂಡಿದ್ದ.ತಾನೇನು, ತನ್ನ ಯೋಗ್ಯತೆಯೇನು ಎಂಬುದರ ಅರಿವೂ ಇಲ್ಲದ ಇವನ ವಿದ್ಯೆ ಇದ್ದೇನು ಲಾಭ.. ಇಂತಹ ಹುಚ್ಚು ಮುನಿ ಈಗ ನನ್ನನ್ನು ಕರೆದೊಯ್ದು ಯಾರಿಗೆ ಒಪ್ಪಿಸುತ್ತಾನೆಯೋ.. ಎತ್ತ ಕಡೆಗೆ ನನ್ನ ಪಯಣ.. ನನಗೇ ತಿಳಿದಿರಲಿಲ್ಲ.. ನಿಟ್ಟುಸಿರ ಬೇಗುದಿಯೊಂದಿಗೆ ಹೆಜ್ಜೆಗಳು ಸಾಗುತ್ತಿತ್ತು..

ಅಯೋಧ್ಯಾ ನಗರಿಯ ದ್ವಾರ.. ಅಲ್ಲಿನ ರಾಜ ಹರ್ಯಾಸ್ವನಿಂದ ಸ್ವಾಗತ.. ಅದೇನು ಮಾತನಾಡಿದರೋ..ಮಕ್ಕಳಿರದ ರಾಜನ ನೋಟದಲ್ಲಿ ಹೊಸ ಬಯಕೆ.. ಪ್ರಾಯ ಸಂದ ರಾಜನ ಅಂತಃಪುರ ಆಗಲೇ ರಾಣಿಯರಿಂದ ತುಂಬಿತ್ತು. ಆದರೂ ನಾನೊಬ್ಬಳು ಹೆಚ್ಚಾದೇನೇ..!!
ಎಲ್ಲಿಯ ನನ್ನ ಕನಸಿನ ಮದುಮಗ! ಎಲ್ಲಿ ಈ ಮುದಿ ರಾಜ..!! ಕತ್ತಲಿನ ವ್ಯವಹಾರಕ್ಕೆ ಶರೀರ ಮಾತ್ರ ಮುಖ್ಯ.. ವಯಸ್ಸು, ಸೌಂದರ್ಯ, ಭಾವನೆಗಳೆಲ್ಲ ಕಾಣುವುದು ಹಗಲ ಬೆಳಕಿನಲ್ಲಿ ಮಾತ್ರ.. ಅವನ ರಾಣಿಯರಿಗೆ ನನ್ನ ಅಂದದ ಬಗ್ಗೆ ಮತ್ಸರ. ಸದಾ ನನ್ನ ಹಿಂದೆ ಮುಂದೆ ಅಲೆಯುವ ರಾಜನನ್ನು ಒಲಿಸಿಕೊಳ್ಳುವ ಅವರ ಪ್ರಯತ್ನ ನನಗೆ ಮರುಕ ಉಕ್ಕಿಸುತ್ತಿತ್ತು. ನನಗೋ ಅವನ ಸ್ಪರ್ಷ ಮುಳ್ಳಿನ ಕೋಲನ್ನು ಮೈ ಮೇಲೆ ಎಳೆದಂತೆ..
ಕಾಲವೇನು ಕಾದು ನಿಲ್ಲುವುದೇ..? ಮೈಯಲ್ಲೇನೋ ಪುಳಕ, ನನ್ನೊಳಗೆ ಉಲ್ಲಾಸ ತುಂಬಿಕೊಂಡಂತೆ.. ನಾನೂ ಹೊಸಬಳಾದಂತೆ.. ಯಾಕೋ ಪಲ್ಲಂಗದಿಂದ ಕೆಳಗಿಳಿಯಲೂ ಮನಸ್ಸಿಲ್ಲ.. ವಯಸ್ಸಾದ ಪರಿಚಾರಿಕೆಯ ಮೊಗದಲ್ಲಿ ತುಂಟ ನಗು, ತಾಯಾಗುತ್ತಿದ್ದೇನೆಯೇ ನಾನು.. ಇಷ್ಟೊಂದು ಸುಖಕರವೇ ಈ ಅನುಭವ.. ಇದನ್ನು ನನಗೆ ನೀಡಿದ್ದಕ್ಕಾಗಿ ಅಂದು ನನ್ನ ಹತ್ತಿರ ಬಂದ ರಾಜ ಪ್ರಿಯನಾದ, ಪತಿಯಾದ. ಅವನಿಗೂ ಸುದ್ಧಿ ತಿಳಿದು ರ್ಹಸುತ್ತಲೇ ನನ್ನ ಮಗ್ಗುಲಿನಿಂದ ಎದ್ದವನ ಮುಖ ದರ್ಶನ ಮತ್ತೆ ನನಗಾಗಿದ್ದು ಪಕ್ಕದಲ್ಲಿ ಮಗು ಅಳತೊಡಗಿದಾಗಲೇ.. ನನಗೇನೂ ಬೇಸರವಿರಲಿಲ್ಲ. ಪುಟ್ಟ ಕಂದನ ಹವಳದ ಬಣ್ಣದ ಕಾಲುಗಳು, ಕನಸಲ್ಲೇನೋ ಎಂಬಂತೆ ಬಿರಿಯುವ ತುಟಿಗಳ ನಗು, ನನ್ನನ್ನು ಮಾಯಾಲೋಕಕ್ಕೆಳೆಯುತ್ತಿತ್ತು.
ಹಾಲೂಡಹೊರಟರೆ, ಅಲ್ಲೇ ಇದ್ದ ದಾಸಿ ತಡೆದಳು. “ಬೇಡ ತಾಯಿ .. ಅಭ್ಯಾಸವಾದರೆ ಕುವರನಿಗೆ ಕಷ್ಟ..ಮತ್ತೆ ಬಿಟ್ಟಿರಲಾರ ನಿಮ್ಮನ್ನು..” ಅಂದರೆ.. ನನ್ನ ಮಗುವಿಗೆ ನಾನು ಅಭ್ಯಾಸವಾಗುವುದು ಬೇಡ ಅಂದರೇನರ್ಥ..??
ಕೋಣೆಯ ಹೊರಗೆ ತಲೆ ತಗ್ಗಿಸಿ ಕಾಯುತ್ತಿದ್ದ ಗಾಲವ ನುಡಿದ.. “ರಾಜಾ ಹರ್ಯಾಸ್ವನಲ್ಲಿ ಕೇವಲ ಇನ್ನೂರು ಅಶ್ವಗಳಿವೆ ಅಷ್ಟೇ.. ಇನ್ನುಳಿದ ಅಶ್ವಗಳಿಗಾಗಿ ನೀನು ನನ್ನೊಡನೆ ಮತ್ತೆ ಬರಬೇಕು.. ನಿನ್ನ ಮಗುವಿಗೆ ತಾಯಾಗಲು ಇಲ್ಲಿ ಬೇಕಾದಷ್ಟು ಜನರಿದ್ದಾರೆ.. ನೀನು ಅನಿವಾರ್ಯವಲ್ಲ. ನಿನ್ನ ಅಗತ್ಯ ಇರುವುದು ನನಗೆ.. ನೀನೀಗ ಹೊರಡು ನನ್ನೊಡನೆ..”
ಜಗತ್ತು ಇಷ್ಟೊಂದು ಕ್ರೂರವಾಗಬಲ್ಲುದೇ..ಎಳೆ ಮಗುವನ್ನು ತೊರೆದು,ಎಳೆದೊಯ್ಯುತ್ತಿದ್ದ ಕಾಲುಗಳ ಕಡೆ ನನ್ನ ಗಮನವೇ ಇರಲಿಲ್ಲ.. ಮತ್ತೆ ಮತ್ತೆ ಹಿಂದೆ ತಿರುಗಿ ನೋಡುವ ತವಕ.. ನನ್ನ ಪಾಲಿಗೆ ಮುಚ್ಚಿದ್ದ ಕೋಟೆ ಬಾಗಿಲುಗಳ ಚಿತ್ತಾರವಷ್ಟೇ ಕಂಡಿದ್ದು..
ಕಾಶಿ ರಾಜನಂತೆ .. ದಿವೋದಾಸ.. ನನ್ನ ಸೌಂದರ್ಯದ ದಾಸನೇ ಆದ. ನನ್ನ ಸೊಬಗನ್ನು ಸಿಂಗರಿಸಿ ದಣಿದ. ಹಾಡಿ ಹಾಡಿ ಹೊಗಳಿದ. ಆದರೂ ತೃಪ್ತಿಲ್ಲ ಅವನಿಗೆ .. ಹೆಣ್ಣು ಎಂದರೆ ನೀನು.. ನಿನ್ನಲ್ಲಿ ಕಂಡ ಸುಖ ಬೇರೆಲ್ಲೂ ಕಂಡಿಲ್ಲ.. ಎಂದು ನನ್ನ ಮೈ ಮರೆಸಿದ. ಹಳೆಯ ನೆನಪ ಕೊಳೆಯನ್ನು ಕಿತ್ತು ಬಿಸುಟೆ. ಅವನವಳೇ ಆದೆ.. ಅವನ ಪ್ರೀತಿ ವರ್ಷಕ್ಕೆ ಹಸಿರಾದೆ, ಹೂಬಿಟ್ಟೆ, ಕಾಯಿ ಕಚ್ಚಿದ್ದು ನನ್ನರಿವಿಗೆ ಬಂತು. ಅವನೋ ಸಂತಸದಿಂದ ನನ್ನನ್ನಪ್ಪಿ ಕುಣಿದಿದ್ದ. ಅವನ ಪುರುಷತ್ವದ ಸಾರ್ಥಕತೆ ನನ್ನಲ್ಲಿತ್ತಂತೆ. ಯಾಕೋ ಅವನನ್ನು ಮುದ್ದಿಸುವ ಬಯಕೆಯಾತು.. ನನ್ನ ಬಯಕೆಗೆ ಅವನೂ ಹುಚ್ಚೆದ್ದು, ಬೋರ್ಗರೆದ. ಮತ್ತೊಮ್ಮೆ ತುಂಬಿದ ಮಡಿಲು.. ಎಲ್ಲವನ್ನೂ ಮರೆತೆ.. ನಾನು ನನ್ನೊಡಲ ಜೀವ, ಪ್ರೀತಿಸುವ ರಾಜ.. ಸ್ವರ್ಗ ನನ್ನೊಳಗೇ ಇತ್ತು.
ಪಕ್ಕದಲ್ಲಿ ಬೆಟ್ಟು ಚೀಪುತ್ತಾ ಮಲಗಿದ್ದ ನನ್ನ ಕಂದ.. ನೋಡುವುದಕ್ಕೆ ಎರಡು ಕಣ್ಣು ಸಾಲದು.. ಪಕ್ಕನೆ ಮೊದಲ ಮಗ ನೆನಪಿಗೆ ಬಂದ .. ಹೀಗೇ ಇದ್ದನೇ ಅವನೂ..
ಅತ್ತಿತ್ತ ನೋಡಿ ಸಖಿಯನ್ನು ಕರೆದು ಕೂಸನ್ನೆತ್ತಿ ಮಡಿಲಿಗಿಡ ಹೇಳಿದೆ. ಹೂವಂತಿತ್ತು ಹಸು ಕಂದ.. ಜೀವನದ ಎಲ್ಲಾ ಹಸಿವೆಯನ್ನು ತೀರಿಸಿಕೊಳ್ಳುವಂತೆ ಹಾಲು ಹೀರುತ್ತಿದ್ದ. ನಾನು ಆ ಸುಖದ ಅನುಭೂತಿಯನ್ನು ಕಣ್ಣು ಮುಚ್ಚಿ ಅನುಭವಿಸುತ್ತಿದ್ದೆ.
ಪುತ್ರನನ್ನು ನೋಡ ಬಂದ ರಾಜ.. ನಾಚಿದೆ.. ನಿದ್ದೆ ಬಂದಿದ್ದರೂ ಹಾಲು ಹೀರುವಂತೆ ತುಟಿ ಅಲ್ಲಾಡಿಸುತ್ತಿದ್ದ ಪುಟ್ಟ ಕಂದನ ಕಡೆಗೆ ಗರ್ವದಿಂದ ನೋಡಿ ಅವನೆದುರಿಗೆ ಹಿಡಿದೆ.
ನೋವಿನ ನಗೆ ನಕ್ಕು ನುಡಿದ.. ” ನನ್ನಲ್ಲಿರುವುದು ಕೇವಲ ಇನ್ನೂರು ಅಶ್ವಗಳು..”
ಮತ್ತೆ ಬಿಸಿಲ ಬಯಲಿಗೆ ಬಿದ್ದಿದ್ದೆ.. ನಡೆದಷ್ಟೂ ಮುಗಿಯದ ಹಾದಿ.. ಕಲ್ಲು ಮುಳ್ಳುಗಳು ನನ್ನರಿವಿಗೇ ಬರುತ್ತಿರಲಿಲ್ಲ. ಜೀವನದ ಕಹಿ ಎಲ್ಲವನ್ನೂ ಸಹಿಸಿಕೊಳ್ಳುವುದನ್ನು ಕಲಿಸಿತ್ತೇ..? ಗಾಲವ ನಿರ್ವಿಕಾರವಾಗಿ ಯಾವುದೋ ಗಮ್ಯದೆಡೆಗೆ ನಡೆವಂತೆ ನಡೆಯುತ್ತಲೇ ಇದ್ದ. ನಾನೂ ನಡೆಯುತ್ತಿದ್ದೆ. ಆದರೆ ಅವನದಾಗಿತ್ತು ಗುರಿ.. ನನ್ನದಲ್ಲ..
ಮತ್ತೊಂದು ದೇಶ ..ಮತ್ತೊಬ್ಬ ರಾಜ.. ಹೆಸರು ಉಶೀನರ.. ಹೆಸರೇಕೆ ಬೇಕು..? ಅವನು ಗಂಡು, ನಾನು ಹೆಣ್ಣು ಅಷ್ಟೇ.. ಅವನಿಗೆ ಬೇಕಾಗಿದ್ದುದು ಇನ್ನೊಂದು ಹೆಣ್ಣಿನ ಸುಖ, ಅನುಭವ.. ಅದೆಲ್ಲ ನನ್ನ ಸುಂದರ ದೇಹ ಅವನಿಗೆ ನೀಡಬಲ್ಲದಾಗಿತ್ತು. ಗಾಲವನಿಗೆ ಬೇಕಿದ್ದುದು ಅಶ್ವಗಳು .. ನಡುವಿದ್ದ ನಾನು ಕೇವಲ ವಿನಿಮಯದ ವಸ್ತು.. ನನ್ನದಾಗಿದ್ದ ಯಾವುದೂ ನನ್ನದಾಗಿ ಉಳಿದಿರಲಿಲ್ಲ.. ಅದು ನನ್ನದೇ ಆಗಿತ್ತು ಎಂದು ನಾನು ಅಂದುಕೊಂಡದ್ದೆ ತಪ್ಪೇನೋ..!!
ಕತ್ತಲೆ ಬೆಳಕಿನ ಅದೇ ದೇಹ ದೇಹಗಳ ಮಿಲನ. ಮತ್ತೆ ಬಸುರಾದೆ. ಪ್ರೀತಿ ಬೇಕೇ ಬಸುರಾಗಲು.. ಕೇವಲ ಕೂಟ ಸಾಲದೇ.. ಅವನಿಗೆ ಸಿಗಬೇಕಿದ್ದುದು ಸಿಕ್ಕಿತ್ತು.. ವಂಶ ಬೆಳಗಲು ಮತ್ತೊಂದು ಮಗು.. ಪ್ರೇಮದ ಅಮಲಿಲ್ಲ.. ಪ್ರೀತಿಯ ಗಮಲಿಲ್ಲ.. ಮೋಹದ ತೆವಲು ಮಾತ್ರವಿತ್ತು.. ಇದೂ ಕೂಡಾ ಒಂದು ವ್ಯಾಪಾರದಂತೆ..
ಮತ್ತೆ ಹೆತ್ತೆ.. ಅಳುತ್ತಿದ್ದ ಮಗುವಿನೆಡೆಗೆ ನೋಡಲೇ ಇಲ್ಲ..ತನ್ನ ಪೌರುಷದ ಪತಾಕೆಯನ್ನು ನೋಡುವ ಕುತೂಹಲದಿಂದ ಬಂದ ರಾಜನಲ್ಲಿ ಕೇಳಿದೆ “ನಿನ್ನ ಬಳಿ ಬೇಕಾದಷ್ಟು ಅಶ್ವಗಳಿವೆಯೇ..?”
ತಲೆ ತಗ್ಗಿಸಿದ.. “ಇಲ್ಲ.. ಕೇವಲ ಇನ್ನೂರು ಅಶ್ವಗಳಿವೆ..”
ನಾನೇ ಎದ್ದೆ. ಗಾಲವನನ್ನು ಬರಹೇಳಿ ಎಂದೆ.. ಅವನತಮುಖಿಯಾಗಿ ಹೋದ ರಾಜ ಮತ್ತೆ ನನ್ನೆದುರು ಬರಲೇ ಇಲ್ಲ..
ಮುಂದೆ ಗಾಲವ , ಹಿಂದೆ ನಾನು.. ಮತ್ತದೇ ನೋಟ..
“ರಾಜಕುಮಾರಿ” ಯಾರೋ ಕರೆದಂತಾಯಿತು
ಯಾರಿದು ಮಾತನಾಡಿದ್ದು.. ಅರೇ..! ಗಾಲವ ಮಾತನಾಡುತ್ತಿದ್ದಾನೆ..ಅದೂ ನನ್ನೊಡನೆ.. ಇಷ್ಟು ವರ್ಷಗಳ ಮೌನದ ಕಟ್ಟೆಯೊಡೆದು.. ಪಶ್ಚಾತ್ತಾಪವಿರಬಹುದೇ..?? ಕ್ಷಮಿಸು ಎಂದು ಬೇಡಬಹುದೇ..?? ಎಷ್ಟೆಲ್ಲ ಕಲ್ಪನೆಗಳು ನನ್ನೊಳಗೆ..
“ರಾಜಕುಮಾರೀ” ಮತ್ತದೇ ವಾಣಿ.. ಕುಮಾರಿಯೇ ನಾನು.. ಹೌದಲ್ಲವೇ.. ನನ್ನ ಮೇಲೇ ಕಣ್ಣಾಡಿಸಿಕೊಂಡೆ. ನನ್ನ ಯೌವನ ಒಂದಿಷ್ಟು ಮಾಸಿಲ್ಲ.. ಈಗಷ್ಟೇ ಹರೆಯಕ್ಕೆ ಕಾಲಿಟ್ಟ ಹೊಸ ಹೆಣ್ಣಿನಂತೆ ಇದ್ದೇನೆ.. ಮತ್ತೆ ದೇಹದ ಮೋಹ..
“ಇನ್ನಾರ ಬಳಿಯೂ ನಾನು ಬಯಸುವ ಅಶ್ವಗಳಿಲ್ಲ.. ಅವುಗಳನ್ನು ಇನ್ನು ಅರಸುವ ಚೈತನ್ಯವೂ ನನ್ನಲ್ಲಿಲ್ಲ. ಹಾಗಾಗಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಮಹರ್ಷಿ ವಿಶ್ವಾಮಿತ್ರನಿಗೇ ನಿನ್ನನ್ನು ಒಪ್ಪಿಸುತ್ತಿದ್ದೇನೆ. ಅತ್ತ ಕಡೆಗೀಗ ನಮ್ಮ ಪಯಣ..”
ನಗು ಬಂತು.. ಮೊದಲ ಬಾರಿಗೆ ನಕ್ಕಿದ್ದೆ.. ಸ್ವಲ್ಪವಲ್ಲ .. ಹುಚ್ಚು ಹೊಳೆಯೇ ಹರಿಯಿತು.. ನನ್ನೊಳಗಿನ ದುಃಖ ದುಗುಡಗಳೆಲ್ಲ ನಗುವಾಗಿ ಮಾರ್ಪಟ್ಟಿತೇನೋ..
“ಇನ್ನುಳಿದ ಇನ್ನೂರು ಅಶ್ವಗಳ ಬದಲಿಗೆ ಈ ಬಳಸಿ ಎಂಜಲಾದ ದೇಹವಾಗಬಹುದು ಎಂದಾದರೆ ಎಂಟು ನೂರು ಅಶ್ವಗಳ ಬದಲಿಗೆ ನನ್ನ ಮೊದಲಿನ ಯೌವನ ಸಾಲುತ್ತಿರಲಿಲ್ಲವೇ..??”
ದಿಗ್ಬ್ರಾಂತನಂತೆ ನನ್ನ ಕಡೆಗೆ ನೋಡಿದ. ನನ್ನ ಪ್ರಶ್ನೆ ಅವನಿಗೆ ಉತ್ತರಿಸಲು ಕಷ್ಟಕರವಾಗಿದೆ ಎಂದನಿಸಿರಬೇಕು.. ಮೌನದ ಚಿಪ್ಪೊಳಗೆ ಬಂಧಿಯಾದ.. ಹೆಜ್ಜೆ ಮುಂದಕ್ಕಿಟ್ಟ..
ವನದ ನಡುವಿನ ಕಷ್ಟಕರ ಜೀವನಕ್ಕೆ ನಲುಗಿ, ಒಣಗಿದೆಲೆಯ ಬಣ್ಣ ಹೊತ್ತ ಸುಕ್ಕುಗಟ್ಟಿದ ಮೈಯ ನೀಳ ಜಡೆಯ, ಸಿಡುಕು ಮುಖದ ಮುನಿ ವಿಶ್ವಾಮಿತ್ರ.ನನ್ನ ಕಡೆಗೆ ಕಡೆಗಣ್ಣ ನೋಟ ಬೀರುತ್ತಲೇ, ನನ್ನನ್ನು ಅವನಿಗೊಪ್ಪಿಸಿದ ಗಾಲವನನ್ನು ನೋಡಿ, ತುಟಿಗಳ ಮೇಲೆ ಲಾಲಸೆಯ ನಾಲಗೆಯನ್ನಾಡಿಸುತ್ತಾ, “ನನ್ನ ಗುರುದಕ್ಷಿಣೆ ಸಂದಿತು.. ನೀನು ಇನ್ನು ಋಣ ಮುಕ್ತ.. ಹೋಗು” ಎಂದ.
ನನ್ನನ್ನು ಮತ್ತೊಂದು ಬಂಧನಕ್ಕೆ ದೂಡಿ ಗಾಲವ ಬಿಡುಗಡೆ ಪಡೆದಿದ್ದ..!!

ಹೊರಡುವಾಗ ನನ್ನನ್ನು ಕಂಡು, ನನ್ನ ಪುಣ್ಯ ಸಂಚಯವನ್ನೆಲ್ಲ ನೀನು ಹೆತ್ತ ಮಕ್ಕಳಿಗೆ ಹಂಚಿಬಿಡುತ್ತೇನೆ. ಅವರು ಪ್ರತಿಭಾಶಾಲಿಗಳಾಗುವರು.. ಎಂದು ಹರಸಿದ.
ಪುಣ್ಯವೇ.. ಒಂದು ಹೆಣ್ಣಿನ ಜೀವನವನ್ನೇ ಕೊಂದವರಿಗೆ ಸ್ತ್ರೀ ಹತ್ಯಾ ದೋಷ ಬರುವುದಿಲ್ಲವೇ..? ಕೊಲ್ಲುವುದು ಅಂದರೆ ದೇಹಕ್ಕೆ ಸಾವು ಬರಬೇಕೇನೋ.. ಅವಳ ಅಂತರಾಳದ ನೋವಿಗೂ ಸಾವಿಗೂ ಸಂಬಂಧವಿರಲಾರದು..ನನ್ನನ್ನು ಪಾಪಕೂಪಕ್ಕೆ ದಬ್ಬಿ ,ಈಗ ಇದು ನಾನು ಸಂಗ್ರಹಿಸಿದ ಪುಣ್ಯ ಎನ್ನುವರಲ್ಲ .. ಯಾರಿಗೆ ಬೇಕು.. ಅದೂ ಇವನ ಫಲ ಸಿಗುವುದು ನನಗಲ್ಲ .. ಮಕ್ಕಳಿಗೆ .. ನಾ ಹೆತ್ತ ಮಕ್ಕಳೇ..?? ನನ್ನದೆಂದು ಒಂದು ದಿನ ಮಡಿಲಿಗೆತ್ತಿ ಕೂರಿಸಿಕೊಳ್ಳುವ ಭಾಗ್ಯವಿಲ್ಲದಿದ್ದರೂ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ಇಂತಹ ಪುಣ್ಯದ ಪಾಲುದಾರರು..
ಅವನತ್ತ ಹೋಗುವುದನ್ನೇ ಕಾಯುತ್ತಿದ್ದ ವಿಶ್ವಾಮಿತ್ರ.. ಅಲ್ಲಿಯವರೆಗೆ ಕಟ್ಟಿಟ್ಟಿದ್ದ ಪೌರುಷವನ್ನೆಲ್ಲಾ ಒಡ್ಡು ಗಟ್ಟಿ ನನ್ನೆಡೆಗೆ ಹರಿಸಿದ… ಕಾಲಗಳಿಂದ ಹಸಿದಿದ್ದವನು ಉಣ್ಣುವಂತೆ.. ತೃಪ್ತಿಯ ಕೇಕೆ ಅರಣ್ಯದಲ್ಲಿ ಮಾರ್ಧನಿಸಿತು. ಉಂಡ ನಂತರ ಬಾಳೆಲೆಯ ಹಂಗೇಕೆ..??
ಪ್ರಕೃತಿ ತನ್ನ ಕೆಲಸವನ್ನೂ ಸುಮ್ಮನೆ ಮಾಡುತ್ತಲೇ ಹೋಗುತ್ತದೆ.ಇಲ್ಲದಿದ್ದರೆ ಹೀಗೆ ಮತ್ತೆ ಮತ್ತೆ ಹಸಿರಾಗುವ ಕಾಡಿನಂತಾಗುತ್ತಿದ್ದೆನೇ ನಾನು..?? ಬೇಸಿಗೆಗೆ ಒಣಗಿ ಮತ್ತೆ ನೀರ ಸ್ಪರ್ಷಕ್ಕೆ ಚಿಗುರೊಡೆಯುತ್ತೇನೆಯೇ..??
.. ಮತ್ತೆ ಬಸಿರೊಳಗೆ ಒದೆಯುತ್ತಿರುವ ಪಿಂಡ.. ನನ್ನ ದೇಹ ಲಕ್ಷಣವನ್ನು ಗಮನಿಸಿದ ವಿಶ್ವಾಮಿತ್ರನೀಗ ನನ್ನ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದ.ಯಾವುದೋ ತಪ್ಪು ಮಾಡಿದವನಂತೆ ಚಡಪಡಿಸುತ್ತಿದ್ದ.. ತಾನು ಇಲ್ಲಿಯವರೆಗೆ ಮಾಡಿದ ತಪಸ್ಸು, ಕಾಪಿಟ್ಟ ಸಂಯಮ, ನಿಗ್ರಹಿಸಿದ ದೇಹ ಶಕ್ತಿ ಎಲ್ಲವನ್ನೂ ನಾನು ಅಪಹರಿಸಿ ಬಿಟ್ಟಿದ್ದೇನೆ ಎಂಬ ಧೋರಣೆ ಅವನಲ್ಲಿ..
ವ್ಯಂಗದ ನಗೆ ಬೀರಿದೆ..
ಏನಿತ್ತೋ ಅವನ ಮನದೊಳಗೆ.. ಗಡ್ಡ ಮೀಸೆಗಳಿಂದ ಮುಚ್ಚಿ ಹೋದ ಕಠಿಣ ಮುಖದಲ್ಲಿ ಯಾವುದೇ ಭಾವಗಳೂ ಕಾಣುತ್ತಿರಲಿಲ್ಲ.
ಆಹ್.. ನರ ನರಗಳಲ್ಲಿ ವ್ಯಾಪಿಸಿದ ನೋವು.. ಭೂಮಿಗಿಳಿದ ಇನ್ನೊಂದು ಜೀವದ ಅಳು..ಮತ್ತೊಮ್ಮೆ ತಾಯಾದೆ.. ಹೌದೇ.. ಇಷ್ಟು ಮಕ್ಕಳನ್ನು ಹೆತ್ತದ್ದಲ್ಲದೇ ತಾಯಾಗಿದ್ದೆನೇ..?? ಯಾರದೋ ಬಯಕೆಯ ಅಗ್ನಿಗೆ ಎದ್ದ ಜ್ವಾಲೆಗಳಷ್ಟೇ ಇವು.. ಅಗ್ನಿ ಕುಂಡಕ್ಕೆ ಬಿಸಿಯರಿವು ಇದೆಯೇ.. ಕಟ್ಟಿಗೆ ಮಾತ್ರವಲ್ಲವೇ ಉರಿದುರಿದು ಬೂದಿಯಾಗಿದ್ದು.. ವಿಶ್ವಾಮಿತ್ರನೆಡೆಗೆ ನೋಡಿದೆ.
“ನಾನು ತಪಸ್ಸನ್ನಾಚರಿಸಲು ಈ ಜಾಗ ಬಿಟ್ಟು ದೂರ ಹೋಗುತ್ತಿದ್ದೇನೆ. ನೀನಿನ್ನು ನನ್ನೊಡನೆ ಬರುವ ಅಗತ್ಯವಿಲ್ಲ. ನಿನ್ನ ರಾಜ್ಯಕ್ಕೆ ಕರೆ ಕಳುಹಿದ್ದೇನೆ..ಬಂದಾರು ನಿನ್ನನ್ನು ಕರೆದೊಯ್ಯಲು.. ನೀನೀಗ ಸ್ವತಂತ್ರಳು.. ನನ್ನ ಅಧೀನಳಲ್ಲ”
ನನ್ನ ರಾಜ್ಯಕ್ಕೆ ಕರೆಯೇ.. ಯಾವುದು ನನ್ನ ರಾಜ್ಯ.. ಯಾರು ನನ್ನವರು.. ಕಂಡು ಕೇಳರಿಯದವನೊಂದಿಗೆ ‘ಬಳಸಿಕೊಳ್ಳಿ ಇವಳನ್ನು’ ಎಂದು ನೂಕಿದ ಯಯಾತಿಯೇ..?? ಅಥವಾ ತಮ್ಮಲ್ಲಿರುವುದು ಇನ್ನೂರು ಅಶ್ವಗಳು ಮಾತ್ರ ಎಂದು ತಿಳಿದಿದ್ದರೂ ಅದರ ಬೆಲೆಯಾಗಿ ಮಕ್ಕಳನ್ನು ಪಡೆದು ನನ್ನನ್ನು ತಳ್ಳಿದ ರಾಜರುಗಳೇ..?? ನಾನು ಯಾರಿಗೆ ಏನಾಗಬೇಕು.. ಯಾರ ಮಗಳು .. ಯಾರ ಮಡದಿ .. ಯಾರ ತಾಯಿ ..
ಮಗುವಿನೆಡೆಗೆ ನೋಡಿದೆ. “ಅವನು ನನ್ನ ಫಲ.. ನೀನು ಕೇವಲ ಭೂಮಿ ಮಾತ್ರ.. ಬೀಜದಿಂದೊಡೆದ ಸಸ್ಯದ ಪ್ರತಿಫಲ ಏನಿದ್ದರೂ ನೆಟ್ಟವನದೇ..”
ಹೌದಲ್ಲವೇ.. ಇವನೂ ಆ ಗಂಡುಗಳಿಂದ ಬೇರೆಯವನಾಗುವುದು ಹೇಗೆ ಸಾಧ್ಯ..
ನನಗೀಗ ಯಾವುದೇ ಬಂಧನವಿರಲಿಲ್ಲ.. ನನ್ನನ್ನಿಲ್ಲಿ ಒಂಟಿಯಾಗಿ ಬಿಟ್ಟು ಎಲ್ಲರೂ ಹೋಗಿದ್ದರು. ಆಶ್ರಮ ಸಮೀಪದಲ್ಲಿದ್ದ ತಿಳಿಗೊಳದಲ್ಲಿ ನನ್ನನ್ನೇ ನೋಡುತ್ತಾ ಕುಳಿತಿದ್ದೆ. ಹದಿ ಹರೆಯದ ಕನಸುಗಳ ಹೊತ್ತ ಅಂದಿನ ಮುಖ ಎಲ್ಲಿ.. ಏನೆಲ್ಲಾ ಇದ್ದೂ ಏನೊಂದನ್ನೂ ನನ್ನದಾಗಿಸಿಕೊಳ್ಳದ ಅಥವಾ ನನ್ನದಾಗಿಸಿಕೊಳ್ಳಲಾರದ ಇಂದಿನ ಮುಖವೆಲ್ಲಿ..
ಅರಮನೆಯ ಮೇನೆಗಳು ಬಂದು ಹತ್ತಿರದಲ್ಲಿ ನಿಂತಿತ್ತು. ಮೌನವಾಗಿ ಏರಿದೆ. ನಾನು ಬರುತ್ತೇನೆಂದು ಎಲ್ಲರಿಗೂ ತಿಳಿದಿತ್ತು.. ಎಲ್ಲರ ಕುತೂಹಲದ ಕಣ್ಣು ನನ್ನ ಮೇಲೆ.. ಇಳಿದೊಡನೇ ಹತ್ತಿರ ಬಂದ ಸಖಿ ನನ್ನನ್ನಪ್ಪಿ ಬಿಕ್ಕಿದಳು. ಶರ್ಮಿಷ್ಟೆಯ ಮುಖದಲ್ಲಿ ನನ್ನ ಬಗೆಗೆ ಮರುಕವಿತ್ತು. ತನ್ನ ಮಗನನ್ನೂ ರಾಜನಿಗಾಗಿ ಬಲಿ ಕೊಟ್ಟವಳಲ್ಲವೇ ಅವಳು.. ದೇವಯಾನಿ ಯಾವುದೋ ಅಸಹ್ಯವನ್ನು ನೋಡುತ್ತಿರುವವಳಂತೆ ಸಿಂಡರಿಸಿದ ಮೊಗ ಹೊತ್ತಿದ್ದಳು. ಯಾವುದನ್ನೂ ಲೆಕ್ಕಿಸದೇ ಕೆಳಗಿಳಿದೆ.
ತಲೆ ಸವರಿದ ಕೈಗಳೆಡೆಗೆ ನೋಡಿದೆ.. ” ರಾಜಾ ಯಯಾತಿ”
“ಅಪ್ಪಾ ಎನ್ನಬಾರದೇ ಮಗಳೇ.. ಎಷ್ಟು ಕಾಲವಾಯಿತು ನಿನ್ನ ಬಾಯಿಯಿಂದ ಅಪ್ಪಾ ಎನಿಸಿಕೊಳ್ಳದೇ..” ಉಸಿರುಗರೆದ.
“ಯಾರು ಅಪ್ಪ.. ನೀನೇ..?? ಒಬ್ಬ ಮಗನ ಯೌವನವನ್ನು ಆಪೋಷನ ತೆಗೆದುಕೊಂಡೆ. ಮಗಳ ಯೌವನವನ್ನು ಬೀದಿಗಿಟ್ಟೆ. ನಿನ್ನನ್ನು ಕರೆಯಬೇಕೇ.. ಅಪ್ಪಾ..ಎಂದು..”
ಅವನ ಸ್ವರ ಮತ್ತೊಮ್ಮೆ ಕೊಂಚ ನಡುಕಗೊಂಡು ಉಲಿಯಿತು.. ” ಮಗಳೇ ನಿನ್ನ ಯೌವನಕ್ಕೆ ಒಂದಿಷ್ಟು ಮುಕ್ಕಾಗಿಲ್ಲ. ನಿನಗೆ ತಕ್ಕ ವರನಿಗಾಗಿ ಸ್ವಯಂವರವನ್ನೇ ಏರ್ಪಡಿಸುತ್ತೇನೆ. ಎಲ್ಲಾ ದೇಶದ ರಾಜರಿಗೂ ಆಮಂತ್ರಣ ಕಳುಹಿಸುತ್ತೇನೆ. ನಿನಗೆ ಯಾರು ಇಷ್ಟವೆಂದೆನಿಸುತ್ತದೋ ಅವನ ಕೊರಳಿಗೆ ವರಮಾಲೆ ಹಾಕು..”
ಹುಂ .. ಈ ಮಾತನ್ನು ಕೇಳಲು ಕಾತರಗೊಂಡಿದ್ದ ಕಿವಿಗಳೂ ಇತ್ತು ನನ್ನಲ್ಲಿ.. ಆಗ ಮಾತುಗಳಿರಲಿಲ್ಲ.. ನನ್ನ ದೇಹದೆಡೆಗೆ ನೋಡಿಕೊಂಡೆ. ಇನ್ನೂ ಕೆಲವು ಕಾಲ ಗಂಡಿಗೆ ಸುಖ ನೀಡಲು ಶಕ್ಯವೇನೋ.. ಯೌವನ ದೇಹದಲ್ಲಿತ್ತು.. ಮನಸ್ಸಿನಲ್ಲಲ್ಲ.. ಹೊರಗೆ ಗೋಚರಿಸುತ್ತಿದ್ದುದೇ ಸತ್ಯವಾಗಿ ಅವರಿಗೆ ಕಂಡಿತ್ತು.. ನನಗಲ್ಲ..
” ರಾಜಾ.. ನೀನು ಕನ್ಯಾದಾನ ಮಾಡದೇ ಈ ಮಗಳಿಗೆ ಎಷ್ಟು ಮದುವೆ ಆಗಿದೆ ಎಂದಾದರು ಬಲ್ಲೆಯಾ..ಗಣಿಕೆಯರಿಗಾದರೂ ಇವನು ಬೇಡ ಎಂದು ಹೇಳುವ ಸ್ವಾತಂತ್ರ್ಯ ಒಂದು ದಿನಕ್ಕಾದರೂ ಸಿಕ್ಕೀತೇನೋ ..!! ನನಗೆ ಅದನ್ನೂ ಇಲ್ಲದಂತೆ ಮಾಡಿದೆ ನೀನು .. ಮತ್ತೆ ಮತ್ತೆ ದೇಹದ ಯೌವನದ ಮಾತು.. ನೀನು ಕೂಡಾ ಹೊದ್ದುಕೊಂಡಿದ್ದೀಯಲ್ಲ ಕೃತ್ರಿಮ ಯೌವನದ ಆ ಹೊದಿಕೆ .. ಬಿಚ್ಚಿ ಎಸೆದರೆ ಎಷ್ಟು ವೃಣಗಳು ಕೊಳೆತು ನಾರುತ್ತಿದೆಯೋ ಅಲ್ಲಿ.. ಒಮ್ಮೆ ನಿನ್ನನ್ನು ನೀನೇ ನೋಡಿಕೋ.. ನೀನು ಅಂದು ನನ್ನನ್ನು ದಾನ ಮಾಡಿದಾಗಲೇ ನನ್ನ ಹಕ್ಕನ್ನು ಕಳೆದುಕೊಂಡೆ.. ನಾನೀಗ ಯಾರ ಸ್ವಾಮ್ಯವೂ ಅಲ್ಲ. ಯಾರ ಸ್ವಾಮಿತ್ವದ ಅಡಿಯಾಳೂ ಅಲ್ಲ. ಇನ್ನು ನನ್ನ ಬದುಕು, ನನ್ನಿಚ್ಚೆಯಂತೆ ..ಯಾರ ಅಪ್ಪಣೆಯೂ ನನ್ನನ್ನು ಕಟ್ಟಿ ಹಾಕದು.. ಯಾರ ತಳ್ಳುವಿಕೆಯೂ ಹೊರ ನೂಕದು.. ಮನುಷ್ಯತ್ವವೇ ಇಲ್ಲದ ನರ ರಾಕ್ಷಸರ ನಡುವಿನಲ್ಲಿ ಬದುಕುವುದಕ್ಕಿಂತ ಕ್ರೂರ ಪ್ರಾಣಿಗಳಿರುವ ಕಾನನವೇ ನನಗೆ ಹಿತ..”
ನನ್ನ ಹೆಜ್ಜೆಗಳೀಗ ತಡಬಡಾಯಿಸುತ್ತಿರಲಿಲ್ಲ .. ದಿಟ್ಟ ನಡಿಗೆ ನನ್ನ ಹೊಸ ಬದುಕಿನೆಡೆಗೆ.. ಯಾರ ಹಂಗೂ ಇಲ್ಲದ ನನ್ನ ಸ್ವಾತಂತ್ರ್ಯದೆಡೆಗೆ..

‍ಲೇಖಕರು G

22 January, 2013

50 Comments

  1. ನೀಲು

    ಯಾಕೋ ಕಣ್ಣ ತುಂಬ ನೀರು, ಇದು ಕೇವಲ ಕತೆಯಾಗಿರಲಿ.

    • Anonymous

      ಅದ್ಬುತವಾಗಿದೆ
      ಶುಭವಾಗಲಿ

  2. prashant adur

    ಅನಿತಾರವರೆ, ತುಂಬಾ ಅದ್ಭುತವಾಗಿ ಬಂದಿದೆ. ಯಯಾತಿಯ ಮಗಳನ್ನ ಪರಿಚಯಿಸಿದ್ದಕ್ಕೆ ವಂದನೆಗಳು. ಒಂದು ಒಳ್ಳೇಯ ಓದನ್ನು ಕೊಟ್ಟಿದ್ದಕ್ಕೆ ಅವಧಿಗೆ ಧನ್ಯವಾದಗಳು. ಮುಂದಿನವಾರ ” ಒಂದು ಕೆಟ್ಟ ಕನಸು: ದೇವಯಾನಿ” ನನ್ನ ಹಾಸ್ಯ ಪ್ರಹಸನ ಕೆಂಡಸಂಪಿಗೆಯಲ್ಲಿ ಬರಬಹುದು, ಬಿಡುವಿನಲ್ಲಿ ಓದಿ.

  3. Rakesh Holla

    ಯಾಕೋ ಮಾತೇ ಹೊರಡುತ್ತಿಲ್ಲ … ಮನಸ್ಸಿನ ಭಾವನೆಗಳು ಪ್ರಭಾವಶಾಲಿಗಲ ಕೈಯಲ್ಲಿ ತ್ರಣವಾಗಿ ಅದರ ಬೆಲೆ, ಅಸ್ತಿತ್ವವ ಕಳೆದುಕೊಂಡು ಶೋಷಣೆಯ ಅಲೆಯಲ್ಲಿ ಕೊಚ್ಚಿ ಹೋಗುವುದು ತಲೆ-ತಲಾಂತರದಿಂದ ಪರಂಪರಾಗತವಾಗಿ ಬಂದಿರುವ ಹಾಗಿದೆ…
    ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ…

  4. Prasad V Murthy

    ಮನ ಮಿಡಿಯುವ ಕಥಾನಕ ಅನೀತಕ್ಕ. ಆ ಮಾಧವಿಯ ಜೀವನದ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟಿದ್ದೀರಿ. ನಿಮ್ಮ ಲೇಖನಿಯಿಂದ ಹೆಚ್ಚು ಹಾಸ್ಯ ಮಿಳಿತ ಲಘು ಬರಹಗಳನ್ನಷ್ಟೇ ಆಸ್ವಾದಿಸಿದ್ದ ನಮಗೆ ಇಂತಹದ್ದೊಂದು ಗಾಢ ಪರಿಣಾಮ ಬೀರಬಲ್ಲ ಪುರಾಣದ ಛಾಯೆಯುಳ್ಳ ಕಥೆ ಹೆಣ್ಮನದ ಸೂಕ್ಷ್ಮಗಳಿಗೆ ಹಿಡಿದ ಕನ್ನಡಿಯಾಗಿದೆ. ಓದಿದ ನಂತರ ಕಣ್ಣಾಲಿಗಳಲ್ಲಿ ನೀರಿನ ಪಸೆಯಾಡಿದ ಕುರುವಿತ್ತು.

  5. ಉಷಾಕಟ್ಟೆಮನೆ

    ಅದ್ಭುತವಾದ ಬರಹ . ಬೆಳಿಗ್ಗೆ ಪತ್ರಿಕೆ ನೋಡಿ ರಂಗಭಂಡಾರ ನಡೆಸುತ್ತಿರುವ ’ ಮಾಧವಿ’ ಕಾರ್ಯಕ್ರಮಕ್ಕೆ ಹೋಗಬೇಕು ಅಂದುಕೊಂಡಿದ್ದೆ. ಇದನ್ನೊದಿದ ಮೇಲೆ ಹೊಸ ಹೊಳಹಿನೊಡನೆ ಇಂದು ’ಮಾಧವಿ’ ಯನ್ನು ನನ್ನೊಳಗೆ ಬರಮಾಡಿಕೊಳ್ಳುತ್ತೇನೆ ಅನಿತಾ.
    ”ಮಾಧವಿ’ ಈಗಾಗಲೇ ಹಲವು ಭಾರಿ ರಂಗಪ್ರಯೋಗಗಳನ್ನು ಕಂಡ ಯಶಸ್ವಿ ನಾಟಕ. ಈ ಕಾಲಕ್ಕೆ ಇನ್ನಷ್ಟು ಒಳನೋಟಗಳನ್ನು ನೀಡಬಲ್ಲುದು. ಅಂದ ಹಾಗೆ ಅವಳು ಕೊನೆಯಲ್ಲಿ ’ಅಕ್ಷತಾ ಯೋನಿ’ ಎಂಬ ವರವನ್ನು ಪಡೆದಳಂತೆ ಅನಿತಾ.. ಆದರೆ ಯಾರಿಂದ ಎಂಬುದನ್ನು ಮರೆತಿದ್ದೇನೆ.

  6. Suguna

    ಹೆಣ್ಣು ಭೋಗದ ವಸ್ತುವಾಗುವುದು ಅಂದಿನಿಂದಲೂ ರೂಢಿಯಲ್ಲಿದೆ. ನಿಜಕ್ಕೂ ಮನತಟ್ಟುವ ಕಥೆ ಅನಿತಾ. ನಿರೂಪಣೆ ತುಂಬಾ ಚೆನ್ನಾಗಿದೆ. ಯಯಾತಿಯಂತಹ ತಂದೆ ಯಾರಿಗೂ ಬೇಡ 🙁

  7. ಜಿ.ಎನ್. ನಾಗರಾಜ್

    ಅನುಪಮ ನಿರಂಜನರವರ ಕಾದಂಬರಿಯನ್ನು ಮತ್ತೆ ನೆನಪಿಸಿತು.ಸಣ್ಣ ಕಥೆಯಾಗಿ, ಮಾತಿನ ಸಂಯಮ,ಹೃದಯ ಕರಗಿಸುವ ಸನ್ನಿವೇಶದ ಚಿತ್ರಣ ಮನಮುಟ್ಟುವಂತಿದೆ. ಯಾರಿಗಾದರೂ ಭವ್ಯ ಭಾರತದಲ್ಲಿನ ಮಹಿಳೆಯ ಸ್ಥಾನದ ವಾಸ್ತವ ಪರಿಸ್ಥಿತಿಯನ್ನು ತೆರೆದಿಟ್ಟಿದೆ.
    ಮನುಸ್ಮೃತಿಯಲ್ಲಿ ಇರುವುದೆಲ್ಲವನ್ನೂ ಮಾಧವಿಯ ಮೇಲಿನ ಕ್ರೌರ್ಯ concentrated ರೂಪದಲ್ಲಿ ಎತ್ತಿ ತೋರಿಸಿದೆ.

  8. usha rai

    ಅನಿತಾ, ನಿಮ್ಮ ಬರಹ ಮನಸ್ಸು ಮತ್ತು ಹೃದಯವನ್ನು ಹೆಪ್ಪುಗಟ್ಟಿಸಿತು. ಅನುಪಮಾ ನಿರಂಜನರ ಕಥೆ ಓದಿ ನೋವಾಗಿತ್ತು. ಈಗ ನೀವು ಅದೇ ನೋವನ್ನು ಪುನಹ ಅನುಭವಿಸುವಂತೆ ಮಾಡಿದ್ದೀರಿ. ಬಹಳ್ ಅಪರಿಣಾಮಕಾರಿ ಬರಹ.

  9. malathi S

    wah!! musings of Madhavi..awesome narration Anitha
    malathi S

  10. Ashoka Bhat

    ಅದ್ಭುತ ಬರಹ…

  11. veda

    Tumba hrudayasparshi kathe Anitha. Odtha odtha manassu bharavaythu.

  12. Sathish Poojari

    Great one madam idu nijana

  13. Arathi Adiga

    ಕಥೆ ಹೇಳುವವರು ಹಲವರಿರಬಹುದು , ಆದರೆ ದೇಹ ಮಿಸುಕಾಡದಂತೆ ಬಡಿದು ಕೂರಿಸುವ narration ನಿಮ್ಮಂಥ ಕೆಲವೇ ಕೆಲವರಿಗೆ ಸಿದ್ದಿಸಿದೆ. ಮಾದವಿಯ ಪರಿಚಯ ತಿಳಿದಿದ್ದರೂ ನಿಮ್ಮ ಕಥೆಯಲ್ಲಿ ಅವಳು “ನಿರ್ಭಯ ” ಳಾಗಿ ಕಂಡಳು .
    ಮತ್ತಷ್ಟು ನಿರೀಕ್ಷೆಗಳೊಂದಿಗೆ ನಿಮ್ಮ ಅಭಿಮಾನಿ
    AA

  14. ashok kumar Valadur

    ಅಕ್ಕ , ಮಾಧವಿ ಯ ಕಥೆ ತುಂಬಾ ಹೃದಯಂಗಮವಾಗಿ ಮೂಡಿದೆ. ಹೆಣ್ಣಿನ ಹಕ್ಕಿನ ಬಗ್ಗೆ ಪುರುಷ ಪ್ರಧಾನ ವ್ಯವಸ್ಥೆ ಏನೆಲ್ಲಾ ಮಾಡಿಸುತ್ತದೆ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸಿದೆ.

  15. Sandhya, Secunderabad

    Manassannu bahalavaagi kalakida kathe. Tumba chennagi barediddiri Anita.

  16. GONWAR KISHAN RAO

    ವೇದ ಪುರಾಣ ಗಳ ಭಾರತೀಯ ನಾರಿಯನ್ನು ನೋಡುವಾಗ ಆಧುನಿಕ ಮಹಿಳೆಯರೇ ಊತ್ತಮವಲ್ಲವೇ ?
    ಇವರು ಯರನ್ನಾದರೂ ತಿರಸ್ಕರಿಸುವ ಸ್ವಾತಂತ್ರವನ್ನಾದರೂ ಪಡೆದಿದ್ದಾರೆ.!!!. ಮಗನ ಮತ್ತು ಮಗಳ ಯೌವ್ವನವನ್ನು ಹಾಳುಗೆಡಹಿದ
    ಯಯಾತಿ ಬಹುಶ ಅತೀ ದೊಡ್ಡ ಕಳಂಕಿತ. ಹಾಗೆಂದು ಯದುವನ್ನು ಇಲ್ಲಿ ತಾರೀಫ಼ು ಮಾಡುತ್ತಿಲ್ಲ ಅವನ ವಂಶಜರೂ ಮಹಭಾರತದಲ್ಲಿ
    ಹೆಣ್ನನ್ನು ಹೀನಾವಾಗಿಯೇ ಕಂಡಿರುವರಲ್ಲ !!!!!!!

  17. Sheela Bhat

    ತುಂಬಾ ತಟ್ಟಿತು. ಕನ್ನಡ ಶಾಲೆ, ಹೈಸ್ಕೂಲಿನಲ್ಲಿದ್ದಾಗ ಓದುತ್ತಿದ್ದ ಮಹಾಭಾರತದ ಪ್ರತಿಪರ್ವದಲ್ಲೂ ಇಂತಹ ಬಹಳಷ್ಟು ಕಥೆಗಳು ಕಣ್ಣಾಲಿಗಳನ್ನು ತುಂಬುತ್ತಿದ್ದವು. ಆದರೆ ಸ್ವಾತಿಮನೆ ಎಂಬ ಲೈಂಗಿಕ ಕಾರ್ಯಕರ್ತೆಯರ ಸರ್ಕಾರೇತರ ಸಂಸ್ಥೆಯಲ್ಲಿ ಹೆಣ್ಣುಮಕ್ಕಳನ್ನು ಸಂದರ್ಶಿಸಿದಾಗ ಇಂತಹ ಎಷ್ಟೋ ಮಾಧವಿಯರನ್ನು ನೋಡಿದೆ. ಅಂತಹ ಎಷ್ಟೋ ಮಾಧವಿಯರ ಮನದಾಳದ ಮಾತುಗಳನ್ನು ಕಟ್ಟಿಕೊಟ್ಟಿದ್ದು ಈ ಕಥೆಯ ನಿರೂಪಣೆಯ ಗೆಲುವು.

  18. veena

    thumbha chennagide

  19. ಹನುಮಂತ ಹಾಲಿಗೇರಿ

    ಅದ್ಭುತ!!! ಪುರಾಣ ಸ್ತ್ರೀಯರ ಒಡಲು ನಿಮ್ಮಿಂದ ಇನ್ನಷ್ಟು ಬಯಲಾಗಲಿ.

  20. Girish.S

    ಅನಿತಾ ಅವರೇ,ನಾನು ಇತ್ತೀಚಿಗೆ ಓದಿದ ಒಂದು ಅದ್ಭುತ ಕಥೆ ಇದು.ನಿರೂಪಣಾ ಶೈಲಿ ತುಂಬ ಹಿಡಿಸಿತು….

  21. Arpitha

    Manamuttuva baraha.

  22. ಡಾ.ನಾಗಮಣಿ

    ನಿರೂಪಣೆ ಇಷ್ಟವಾಯಿತು ಅನಿತಾ,ಅಭಿನಂದನೆಗಳು.

  23. Gopaal Wajapeyi

    ಓದುತ್ತ ಓದುತ್ತ ಮನಸ್ಸು ಭಾರ ಮಾಡಿಕೊಂಡೆ. ಭಾರವಾದ ಮನಸ್ಸಿನಿಂದಲೇ ಮತ್ತೆ ಮತ್ತೆ ಮುಂದುವರಿದೆ.ಮಾಧವಿಯನ್ನು ನಮ್ಮ ಮುಂದೆ ಕೂರಿಸಿ ಮಾತಾಡಿಸಿದ ನಿಮ್ಮ ಪರಿ ತುಂಬಾ ಅದ್ಭುತ…

  24. Gopaal Wajapeyi

    ಓದುತ್ತ ಓದುತ್ತ ಮನಸ್ಸು ಭಾರ ಮಾಡಿಕೊಂಡೆ. ಭಾರವಾದ ಮನಸ್ಸಿನಿಂದಲೇ ಮತ್ತೆ ಮತ್ತೆ ಮುಂದುವರಿಸಿದೆ.ಮಾಧವಿಯನ್ನು ನಮ್ಮ ಮುಂದೆ ಕೂರಿಸಿ ಮಾತಾಡಿಸಿದ ನಿಮ್ಮ ಪರಿ ತುಂಬಾ ಅದ್ಭುತ…

  25. ಮಂಜುನಾಥ ದಾಸನಪುರ

    ಪ್ರಸ್ತುತ ನಡೆಯುತ್ತಿರುವ ಸರಣಿ ಅತ್ಯಾಚಾರಕ್ಕೂ, ಮಾಧವಿಯ ಮೇಲೆ ನಡೆದ ಸರಣಿ ಅತ್ಯಾಚಾರಕ್ಕೂ ಸಂಬಂಧವಿದೆ. ಸೌಂದರ್ಯದ ಅರಿವೆ ಇಲ್ಲದ ಸಮಾಜಕ್ಕೆ ನಿಮ್ಮ ಕಥೆ ಶಾಕ್ ಟ್ರೀಟ್ ಮೆಂಟ್…..

  26. subbanna

    ಮನಮುಟ್ಟುವ ಬರಹ, ಮ೦ಟಪ ಪ್ರಭಾಕರ ಉಪಾಧ್ಯರ ಮಾಧವಿ, ಗೋವಿ೦ದ ಭಟ್ಟರ ಯಯಾತಿ, ಚಪ್ಪರಮನೆಯವರ ಗಾಲವ ಹಾಗೂ ಕೊ೦ಡದಕುಳಿಯವರ ವಿಶ್ವಾಮಿತ್ರ, ಹೇಗಿರಬಹುದು ಅ೦ತ ಆಲೋಚನೆ ಆಯಿತು. ಮ೦ಟಪದವರಿಗೆ ಹೇಳಿ, ಒಪ್ಪಿಸಿ, ಕನಿಷ್ಟ ಏಕವ್ಯಕ್ತಿ ಪ್ರದರ್ಶನವಾದರೂ ನಮ್ಮೂರಲ್ಲಿ ಮಾಡಬಹುದೇ ? ವ೦ದನೆಗಳು

  27. Mohan V Kollegal

    ಇಂದು ಮುಂಜಾನೆಯಿಂದಲೂ ನನ್ನ ಗಣಿತದ ಪಿ.ಎಚ್ ಡಿ ಕೆಲಸಗಳು ತಲೆತಿಂದು ದೇಹ ಮತ್ತು ಮನಸ್ಸನ್ನು ಗಜಿಬಿಜಿ ಮಾಡಿತ್ತು. ನಿಮ್ಮ ಕಥೆಯನ್ನು ಓದಿದೊಡನೆ ಕಥೆ ಕಟ್ಟಿದ ಶ್ರಮಕ್ಕೆ ಮನಸ್ಸು ಖುಷಿ ಪಟ್ಟಿತ್ತಾದರೂ ಕಥೆ ಮತ್ತೂ ಮನಸ್ಸನ್ನು ಭಾರವಾಗಿಸಿತು. ಕಥೆ ಎಣೆದು ನೀವು ಗೆದ್ದಿದ್ದೀರಿ. ಅದ್ಭುತ ಅಕ್ಕ…

  28. D.Ravivarma

    ಒಂದು ಅದ್ಬುತವಾದ ಕಥೆ ಓದಿಸಿದ್ದಿರಿ …ನಾನು ಕಥೆ ಓದುತ್ತ ಅಳಲು ಪ್ರಾರಮ್ಬಿಸಿದೆ..ನನಗೆ ಈ ಕಥೆ ಗೊತ್ತಿರಲಿಲ್ಲ… ಕಥೆ ಓದುತ್ತ ಹೋದಂತೆ ನನ್ನ ಅಳು ಹೆಪ್ಪುಗಟ್ಟಿತು .ನಮ್ಮ ಪುರಾಣಗಳಲ್ಲಿ ಇನ್ನೆಸ್ತು ಮುಚ್ಚಿಹೋದ ರೋದನಗಳಿವೆಯೋ …ಮತ್ತೊಮ್ಮೆ ಈಗ ಯಯಾತಿಯನ್ನು ಓದುವ ಮನಸ್ಸಾಗುತ್ತಿದೆ…ಒಬ್ಬ ರಾಜಕುಮಾರಿಯ ಅಸಹಾಯಕಥೆ ..ಆಕೆಯ ಅಳಲು.ನೋವು,ಆಕೆಯ ಮಾನಸಿಕ ಸ್ತಿತಿ ,ಎಲ್ಲವು ದೃಶ್ಯ ರೂಪದಲ್ಲಿ ಮನಮುಟ್ಟುವಂತೆ,ಮನ ಕಾಡುವಂತೆ .. ಬರೆದಿದ್ದೀರಿ,ಅಲ್ಲ ಚಿತ್ರಿಸಿದ್ದೀರಿ ..ನಿಮಗೆ ಅಬಿನಂದನೆ ಸಲ್ಲಿಸದೆ ಇರಲಾರೆ….ಅದೆಸ್ತು ಕಾಲ ಈ ಕಥೆ ನನ್ನನ್ನು ಕಾಡುತ್ತಿರುತ್ತದೋ ನಾನರಿಯೆ…
    .
    ರವಿವರ್ಮ ಹೊಸಪೇಟೆ

  29. Dr. M. Byregowda

    ಅನಿತಾ ಅವರೆ
    ನಿಮ್ಮ ಕತೆಯನ್ನು ಓದಿದೆ… ಈಗಾಗಲೇ ಮಾಧವಿ ನಾಟಕವಾಗಿದೆ… ಆದರೆ ನಿಮ್ಮ ಕಥೆಯಲ್ಲಿ ಅನೇಹ ಹೊಸ ಹೊಳಹುಗಳಿವೆ… ದಯಮಾಡಿ ಇದೇ ಕಥೆಯನ್ನು ನಾಟಕವಾಗಿಸಿಕೊಡಿ… ನಿಮ್ಮದೇ ಆಲೋಚನಾ ಕ್ರಮದಲ್ಲಿ… ಒಳ್ಳೆ ನಿರ್ದೇಶಕರೊಬ್ಬರಿಂದ ನಮ್ಮ ಸಂಸ್ಥೆಯಿಂದ ರಂಗದ ಮೇಲೆ ತರುವ ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತೇನೆ…
    ವಂದನೆಗಳು
    ಎಂ. ಬೈರೇಗೌಡ

  30. Roopa Satish

    Hi Ani,
    Congrats….
    Adhbutha…… ! kathe heLiruva style, bhaashe, niroopaNe sooperb…………
    Odugaranna inchoo kadalade, odale bekanisuvashta ishtavaagisuva nimma baravanigeya shaili tumbaa ishtavaaythu.
    Roopa

  31. anand prasad

    ಸಂಘದ ಮುಖಂಡ ಭಾಗವತ್ ಅವರ ಭಾರತದಲ್ಲಿ ಓರ್ವ ರಾಜನ ಮಗಳ ಮೇಲೆ ಮುನಿವರ್ಯರು ಹಾಗೂ ಬೇರೆ ಬೇರೆ ರಾಜರುಗಳು ಅತ್ಯಾಚಾರ ಮಾಡುವುದು ನ್ಯಾಯಸಮ್ಮತ ಹಾಗೂ ಧರ್ಮಸಮ್ಮತ ಎಂದಿದ್ದರೆ ಸಾಮಾನ್ಯ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗಿದ್ದಿರಬಹುದು ಎಂದು ಊಹಿಸಲು ಹೆಚ್ಚಿನ ಪಾಂಡಿತ್ಯ ಬೇಕಾಗಿಲ್ಲ. ಅತ್ಯಾಚಾರಗಳು ಇಂಡಿಯಾದಲ್ಲಿ ಮಾತ್ರ ನಡೆಯುತ್ತವೆ ಭಾರತದಲ್ಲಿ ಅಲ್ಲ ಎಂದು ಹೇಳಿರುವ ಭಾಗವತರಿಗೆ ಈ ಕಥೆಯನ್ನು ಹಿಂದಿಗೆ ಅನುವಾದಿಸಿ ಕಳುಹಿಸಬೇಕಾದ ಅಗತ್ಯ ಇದೆ.

  32. ಮೌನ ವೀಣೆ

    ಚೆನ್ನಾಗಿದೆ ಬರಹ. ದುಃಖವಾಯಿತು.ಹೃದಯ ಕರಗಿಸುವ ಸನ್ನಿವೇಶದ ಚಿತ್ರಣ ಮನಮುಟ್ಟುವಂತಿದೆ.

  33. Ganesh Nempe

    ಅಪ್ಪಟ ಕಾವ್ಯದಂತಹ ಕಥೆ. ಇತ್ತೀಚಿನ ದಿನಗಳಲ್ಲಿ ಓದಿದ ಅತ್ಯುತ್ತಮವಾದ ಕಥೆ. ಅಭಿನಂದನೆಗಳು.

  34. chalam

    ನನ್ನನ್ನು ದಾನ ಮಾಡಿ
    ನನ್ನ ಅಪ್ಪ ನಿರಾಳನಾದ,
    ನನ್ನ ಯೌವನ
    ಹಲವರ ನಡುವೆ ದುಡಿಯಿತು.
    ನನಗೆ ಆಸೆಗಳಿಲ್ಲ..ಇರಬಾರದು
    ನಾನು ರಾಜ ಯಯಾತಿಯ ಮಗಳು
    ಇಲ್ಲಿ ಮಲಗಿದ್ದೇನೆ
    ಅಶ್ವಗಳಿಗಾಗಿ, ನನ್ನ ಸವಾರಿಗಲ್ಲ
    ಕೌಮಾರ್ಯ ಹಿಂಡಲಾಗುತ್ತಿದೆ
    ಎಂಟನೂರು ಅಶ್ವಗಳನ್ನು
    ನನ್ನ ದೇಹ ಸಂಪಾದಿಸುವುದೇನೋ ಸರಿ
    ನಿಮ್ಮ ವೀರ್ಯಕ್ಕೆ ಇರುವ
    ತಾಕತ್ತಾದರೂ ಏನು..?
    ನಾನು ರಾಜಕುಮಾರಿ
    ಅರಮನೆ,ಐಶ್ವರ್ಯ,ಸ್ವಯಂವರ
    ಎಲ್ಲಾ ಮಣ್ಣಂಗಟ್ಟಿ…
    ರಾಜಕುಮಾರಿ,ರಾಣಿ,ಸಖಿ
    ಕೆಲಸದವಳು,ಮಗಳು,ತಂಗಿ
    ಹೀಗೇ..ಎಂತದ್ದೂ ಇಲ್ಲ
    ನಾನು ಒಂದು ಹೆಣ್ಣು ಅಷ್ಟೇ..!
    ಬನ್ನಿ..ಬನ್ನಿ
    ಇನ್ನೆಷ್ಟು ಅಶ್ವಗಳು ಬೇಕಿವೆ?
    ಈಗಾಗಲೇ ಆರನೂರು ಅಶ್ವಗಳು
    ನನ್ನೊಳಗೆ ನುಗ್ಗಿವೆ
    ಇನ್ನೇನು ವಿಶ್ವಾಮಿತ್ರರುಗಳ
    ತಪಸ್ಸು ಮುಗಿಯಲಿದೆ.
    ಅವರ ಗುರುದಕ್ಷಿಣೆ
    ಮತ್ತೆ ಕರೆಯಲಿದೆ.
    ಇದು ದೌರ್ಜನ್ಯವಲ್ಲ
    ನನಗೇ ಗೊಂದಲವಿದೆ
    ದೌರ್ಜನ್ಯದ ವಿವರಣೆ
    ತಪ್ಪಿರಬಹುದು.
    ಅದೂ ತಪ್ಪಿರಬಹುದು…..ನನಗೆ ಅಅಬಿಪ್ರಾಯಗಳಿಲ್ಲ.

  35. Sandhya Bhat

    ಓದಿ ಮುಗಿದಮೇಲೆ ಉಳಿದಿದ್ದು ಮೌನ ಮತ್ತು ಕಣ್ಣ ತುಂಬಾ ನೀರು…
    ಇನ್ನೊಮ್ಮೆ ಯಯಾತಿ ಓದಬೇಕೆಂದುಕೊಂಡಿದ್ದೆ. ಆದರೆ ಮತ್ತೆ ಪುಸ್ತಕ ಹಿಡಿದರೆ ಶರ್ಮಿಷ್ಠೆ , ದೇವಯಾನಿ , ಪುರು ಎಲ್ಲರಿಗಿಂತ ಹೆಚ್ಚ್ಹಾಗಿ ” ಮಾಧವಿ” ಯೇ ಎದುರು ಬಂದು ನಿಲ್ಲುತ್ತಾಳೆನೋ. ಅವಳೇ ಕಾಡುತ್ತಾಳೇನೋ ..

  36. samyuktha

    Anitha,
    Abhinandanegalu. Ittechege odida best barahagalalli nimmadoo ondu!
    atyanta sogasaada niroopane.

  37. mansore

    ಉತ್ತಮ ಬರಹ.

  38. harsha

    ಅಯ್ಯೋ ಮಾಧವಿ ನಮ್ಮ ಕಾಲಕ್ಕೆ ಹುಟ್ಟಬೇಕಿತ್ತು. ಮುಕ್ತ ಮಾರುಕಟ್ಟೆಯೊಂದಿಗೆ ಬಂದ ಮುಕ್ತ ಲೈಂಗಿಕತೆಯನ್ನೂ ಕೈ ಬೀಸಿ ಅಪ್ಪಿ ಕೊಂದವರು ನಾವು. ಆಫೀಸ್ ಸ್ಪೌಸ್ ಬೇರೆ ಮನೆ ಸ್ಪೌಸ್ ಬೇರೆ ಎಂದು ಬದುಕುವ ನಮಗೆಲ್ಲಿ ಅರ್ಥವಾಗಬೇಕು ನಿನ್ನ ಕಷ್ಟ. ಶಾಲಾ ದಿನಗಳಲ್ಲೇ ಬಾಯ್ ಫ್ರೆಂಡ್ ಶೇರ್ ಮಾಡಿದ ನಾವು ಮದುವೆಯಾಗಿ ಉನ್ನತ ಹುದ್ದೆಯಲ್ಲಿರಿವ ಪತಿಯನ್ನೇ ಸ್ವಾಪ್ ಮಾಡುವವರು. ವಾರಾಂತ್ಯಕ್ಕೆ ಅರಮನೆ ಮೈದಾನದ ರೊಕ್ ಕಚೇರಿಗಳಲ್ಲಿ ಇಲ್ಲ ಬೀದಿ ಬೀದಿಗಳಲ್ಲಿರುವ ಪುಬ್ನಲ್ಲಿ ಕಳೆಯುವ ನಮೆಗೆ, ನಿಜಕ್ಕೂ ನೀನು ನಮ್ಮೊಂದಿಗಿರಬೇಕಿತ್ತು ಅನಿಸುತ್ತದೆ.

  39. D.Ravivarma

    “ಯಾರು ಅಪ್ಪ.. ನೀನೇ..?? ಒಬ್ಬ ಮಗನ ಯೌವನವನ್ನು ಆಪೋಷನ ತೆಗೆದುಕೊಂಡೆ. ಮಗಳ ಯೌವನವನ್ನು ಬೀದಿಗಿಟ್ಟೆ. ನಿನ್ನನ್ನು ಕರೆಯಬೇಕೇ.. ಅಪ್ಪಾ..ಎಂದು..”
    ಅವನ ಸ್ವರ ಮತ್ತೊಮ್ಮೆ ಕೊಂಚ ನಡುಕಗೊಂಡು ಉಲಿಯಿತು.. ” ಮಗಳೇ ನಿನ್ನ ಯೌವನಕ್ಕೆ ಒಂದಿಷ್ಟು ಮುಕ್ಕಾಗಿಲ್ಲ. ನಿನಗೆ ತಕ್ಕ ವರನಿಗಾಗಿ ಸ್ವಯಂವರವನ್ನೇ ಏರ್ಪಡಿಸುತ್ತೇನೆ. ಎಲ್ಲಾ ದೇಶದ ರಾಜರಿಗೂ ಆಮಂತ್ರಣ ಕಳುಹಿಸುತ್ತೇನೆ. ನಿನಗೆ ಯಾರು ಇಷ್ಟವೆಂದೆನಿಸುತ್ತದೋ ಅವನ ಕೊರಳಿಗೆ ವರಮಾಲೆ ಹಾಕು..”
    ಹುಂ .. ಈ ಮಾತನ್ನು ಕೇಳಲು ಕಾತರಗೊಂಡಿದ್ದ ಕಿವಿಗಳೂ ಇತ್ತು ನನ್ನಲ್ಲಿ.. ಆಗ ಮಾತುಗಳಿರಲಿಲ್ಲ.. ನನ್ನ ದೇಹದೆಡೆಗೆ ನೋಡಿಕೊಂಡೆ. ಇನ್ನೂ ಕೆಲವು ಕಾಲ ಗಂಡಿಗೆ ಸುಖ ನೀಡಲು ಶಕ್ಯವೇನೋ.. ಯೌವನ ದೇಹದಲ್ಲಿತ್ತು.. ಮನಸ್ಸಿನಲ್ಲಲ್ಲ.. ಹೊರಗೆ ಗೋಚರಿಸುತ್ತಿದ್ದುದೇ ಸತ್ಯವಾಗಿ ಅವರಿಗೆ ಕಂಡಿತ್ತು.. ನನಗಲ್ಲ..
    ” ರಾಜಾ.. ನೀನು ಕನ್ಯಾದಾನ ಮಾಡದೇ ಈ ಮಗಳಿಗೆ ಎಷ್ಟು ಮದುವೆ ಆಗಿದೆ ಎಂದಾದರು ಬಲ್ಲೆಯಾ..ಗಣಿಕೆಯರಿಗಾದರೂ ಇವನು ಬೇಡ ಎಂದು ಹೇಳುವ ಸ್ವಾತಂತ್ರ್ಯ ಒಂದು ದಿನಕ್ಕಾದರೂ ಸಿಕ್ಕೀತೇನೋ ..!! ನನಗೆ ಅದನ್ನೂ ಇಲ್ಲದಂತೆ ಮಾಡಿದೆ ನೀನು .. ಮತ್ತೆ ಮತ್ತೆ ದೇಹದ ಯೌವನದ ಮಾತು.. ನೀನು ಕೂಡಾ ಹೊದ್ದುಕೊಂಡಿದ್ದೀಯಲ್ಲ ಕೃತ್ರಿಮ ಯೌವನದ ಆ ಹೊದಿಕೆ .. ಬಿಚ್ಚಿ ಎಸೆದರೆ ಎಷ್ಟು ವೃಣಗಳು ಕೊಳೆತು ನಾರುತ್ತಿದೆಯೋ ಅಲ್ಲಿ.. ಒಮ್ಮೆ ನಿನ್ನನ್ನು ನೀನೇ ನೋಡಿಕೋ.. ನೀನು ಅಂದು ನನ್ನನ್ನು ದಾನ ಮಾಡಿದಾಗಲೇ ನನ್ನ ಹಕ್ಕನ್ನು ಕಳೆದುಕೊಂಡೆ.. ನಾನೀಗ ಯಾರ ಸ್ವಾಮ್ಯವೂ ಅಲ್ಲ. ಯಾರ ಸ್ವಾಮಿತ್ವದ ಅಡಿಯಾಳೂ ಅಲ್ಲ. ಇನ್ನು ನನ್ನ ಬದುಕು, ನನ್ನಿಚ್ಚೆಯಂತೆ ..ಯಾರ ಅಪ್ಪಣೆಯೂ ನನ್ನನ್ನು ಕಟ್ಟಿ ಹಾಕದು.. ಯಾರ ತಳ್ಳುವಿಕೆಯೂ ಹೊರ ನೂಕದು.. ಮನುಷ್ಯತ್ವವೇ ಇಲ್ಲದ ನರ ರಾಕ್ಷಸರ ನಡುವಿನಲ್ಲಿ ಬದುಕುವುದಕ್ಕಿಂತ ಕ್ರೂರ ಪ್ರಾಣಿಗಳಿರುವ ಕಾನನವೇ ನನಗೆ ಹಿತ..”
    ನನ್ನ ಹೆಜ್ಜೆಗಳೀಗ ತಡಬಡಾಯಿಸುತ್ತಿರಲಿಲ್ಲ .. ದಿಟ್ಟ ನಡಿಗೆ ನನ್ನ ಹೊಸ ಬದುಕಿನೆಡೆಗೆ.. ಯಾರ ಹಂಗೂ ಇಲ್ಲದ ನನ್ನ ಸ್ವಾತಂತ್ರ್ಯದೆಡೆಗೆ…..
    nimma ii maatugalu..nannannu matte matte kaaduttive…nannannu atiyaagi manamuttida.manatattida kathe idu..maadhavi matra nanna manada muleyali kutu kaaduttale iddale….nanna samajada sutta kannu bittu nodidare saaku elli nodidaru yayaati,gaalava,avarivara madye nondu,belali,vyaktitvavanne kaledukolluttiruva,olagolage novundu kaalavashavaaguttiruva maadhaviyaru kaanuttiddare…
    RAVIVARMA HOSAPETE

  40. S L MURTHY

    ಸೊಗಸಾದ ಕಥಾಶೈಲಿ ಬಹಳ ಚೆನ್ನಾದ ಕಣ್ಣು ತೆರೆಯಿಸುವ ಕಥಾವಸ್ತು,ಹೆಣ್ಣಿನ ಶೋಶಣೆ ಅಂದಿನಿಂದ ಇಲ್ಲಿಯವರೆಗೂ ಮತ್ತು ಮುಂದೆಯೂ ನಡೆಯುವ ರೀತಿ ತಿಳಿಸುವ ಪ್ರಯತ್ನವನ್ನು ಚೆನ್ನಾಗಿ ಮಾಡಿರುವಿರಿ ಅಭಿನಂದನೆಗಳು ಅನಿತಾ ಅವರೆ ಇನ್ನೂ ಒಳ್ಳೆಯ ಕಥೆಗಳು ಮೂಡಿಬರಲಿ.

  41. Asha Rao

    Thumba sogasaagidhe,nimma niroopane.
    Yayathiya ee magalla parichaya nanage iralilla,namma deshadalliya henina paristithi nenedhare thumba noovaguthadhe.

  42. Vasanth

    Very interesting. Thought Provoking.

  43. Ashoka Bhat

    It feels really great to see your story attracting so many comments by the readers. There is no doubt many more people have read and enjoyed your story than the number of comments here. Congratulations Anitha 🙂

  44. Shailaja s bhat

    ಅನಿತ,
    ಮಾಧವಿಯ ಈ ಕಥೆ ತುಂಬಾ ಸೊಗಸಾಗಿ ಬಂದಿದೆ. ತಿಳಿದವರು, ನಮ್ಮ ಸಾವಿರಾರು ವರ್ಷಗಳ ಚರಿತ್ರೆ ಬಲ್ಲವರು ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿನ ಸ್ಥಾನ ತುಂಬ ಮೇಲ್ಮಟ್ಟದಲ್ಲಿದೆ, ನಮ್ಮ ಆರಾಧ್ಯ ದೇವರಿಗೂ ಹೆಣ್ಣಿನ ರೂಪವಿದೆ ಎಂದೆಲ್ಲ ಹೇಳುತ್ತಾರೆ, ಅದೆಲ್ಲ ಕೇವಲ ಯೋಚನೆಗಳಲ್ಲಿ,ಮಾತುಗಳಲ್ಲಿ,ಕಣ್ಣುಕಟ್ಟು. ಹೆಣ್ಣು ಯಾವತ್ತೂ ಗಂಡಿನ ಕೈಕೆಳಗಿದ್ದವಳು,ವಿಧೇಯಳಾಗಿರಬೇಕಿದ್ದವಳು. ಬಹುಶಃ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಗಬಹುದೇನೋ !!!
    ಶೈಲಜ

  45. Sangeeta Kusugal

    ನಮಸ್ಕಾರ…
    ಅನುಪಮಾ ನಿರಂಜನರ ಮಾಧವಿ ಎರಡು ದಿನಗಳ ಹಿಂದೆಯಸ್ಟೆಯೆ ಓದಿದೆ. ಕಥೆ ಅದ್ಭುತವಾಗಿತ್ತು. ಹೆಣ್ಣು ಯಾವ ಯಾವ ರೀತಿಯಲ್ಲಿ, ಬಡತನ ಸಿರಿತನ ಎನ್ನದೆಯೆ ಶೋಶಣೆಗೊಳಪಡ್ತಿದಾಳೆ, ಬಲಿಪಶುವಾಗ್ತಿದಾಳೆ ಎನ್ನೊದನ್ನ ಕಂಡು ಬೇಸರವಾಗುತ್ತೆ. ನಿಮ್ಮ ನಿರುಪನಾ ಶೈಲಿ ಅತ್ಯಂತ ಸುಂದರವಾಗಿದೆ, ನಿಮ್ಮ ಬರವಣಿಗೆಯಲ್ಲಿಸರಳವಾಗಿ ಅರ್ಥೈಸುವ ಶಕ್ತಿ ಇದೆ. ಕಥೆಗೆ ತಕ್ಕ ಚಿತ್ರಗಳು… ಬರವಣಿಗೆ ಓದಿ ಖುಷಿ ಅಯ್ತು, ಹೆಣ್ಣಿನ ಮೇಲಿನ ದಬ್ಬಾಳಿಕೆ ನೋಡಿ ವ್ಯೆಥೆಯು ಆಗುತ್ತೆ…..!

  46. Anonymous

    Really It is very well story………@

  47. Kariyappa Y

    Really it is very well I like it…….@

  48. lakshmipriya

    Heart touching

  49. Gopalakrishna

    ಹೃದಯ ಸ್ಪರ್ಶಿಯಾದ ನಿರೂಪಣೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading