ನಾನು ಮತ್ತು ನನ್ನ ಬಟ್ಟೆಗಳು – ಮಂಜುಳ ಆರ್

1012963_395306823950747_723265219314332123_n

ಮಂಜುಳ ಆರ್

ನಂಗೆ ನೆನಪಿರಂಗೆ ಚಿಕ್ಕುಡ್ಗಿಯಾಗಿದ್ದಾಗ ಹೆಚ್ಚಾಗಿ ಫ್ರಾಕ್ನೇ ಹಾಕ್ತಿದ್ದೆ, ಚಿಕ್ಕುಡ್ಗಿ ಅಲ್ವಾ ಏನಾಗಲ್ಲಾ ಬಿಡು ಅಂತ ನಮ್ಮಮ್ಮ ಅವ್ರಕ್ಕನ ಮಕ್ಳು ಹಾಕೋ ಫ್ರಾಕ್ನೋಡಿ ನಂಗೀರೋಳ್ ಒಬ್ಳೇ ಮಗ್ಳು ಇನ್ಯಾರಿಗ್ ಕೊಡುಸ್ಲಿ ಅಂತ ಚಿತ್ತಾರದ್ದು, ಬಣ್ ಬಣ್ದ್ದ್ ಫ್ರಾಕ್ನ ತಗಬರೋದ್ರು ಜತೆಗೆ ಅದಕ್ ಮ್ಯಾಚ್ ಆಗೋ ಬಳೆ, ಸರ, ಚಪ್ಲೀನೂ ತಗಂಡ್ ಬರೋದು.
ನನ್ ಬೆಳವಣಿಗೆ ಜೊತೆಗೆ ನನ್ ಬಡತನಾನೂ ಬೆಳೀತಿತ್ತು, ಇವೆರೆಡರ ಪರಿಣಾಮ ನಮ್ಮಮ್ಮ ನಂಗೆ ಫ್ರಾಕ್ ತರೋದುಮನ್ನೇ ನಿಲ್ಲುಸ್ತು, ಆಮೇಲೇನಿದ್ರು ವರ್ಷಕ್ಕೊಂದ್ಸಲ ಬರೋ ಯುಗಾದಿಗೋ ಇಲ್ಲ ಮಾರ್ನಾಮಿಗೋ ಮಾತ್ರ ತಂದ್ಕೊಡ್ತಿತ್ತು. ಅವ್ಳಿಜವ್ಳಿ ಮಕ್ಕ್ಳೀಗ್ ತರಂಗೆ ನಂಗೂ ನನ್ ತಮ್ಮಂಗೆ ಇಬ್ರಗೂನು ಒಂದೇ ಡಿಸೈನ್ ಇರ್ತಿದ್ದ, ನಾವು ನಂದು ನಂದು ಅಂತ ಜಗ್ಳ ಆಡ್ಬಾರ್ದು ಅಲ್ವಾ… ಅದುಕ್ಕೆ ಬೇರೆ ಬೇರೆ ಬಣ್ಣದ ಎರಡ್ ಟೀ ಶಟರ್್, ಒಂದೇ ಬಣ್ಣದ ಪ್ಯಾಂಟ್ ತಗಂಡ್ ಬಂದ್ ಕೊಡೋದು, ಅದ್ರಲ್ಲೂ ನಾನ್ ಯಾವ್ ಬಣ್ಣದ್ ಟೀ ಶಟರ್್ ಇಷ್ಟ ಪಡ್ತೀನೋ ಅದೇ ಬೇಕಂತ ಜಗ್ಳ ಆಡ್ತಿದ್ದ. ನಕ್ಕಿಂತ ಚ್ಚಕ್ಕೋನು ಅಂತೇಳಿ ಅಪ್ಪ ಅಮ್ಮ ಇಬ್ರೂ ಅವ್ನಿಗೇ ಮೊದಲ ಆಧ್ಯತೆ ಕೊಡ್ತುದ್ರು, ನಾನು ಅತ್ಕೊಂಡು, ಕೋಪ ಮಾಡ್ಕಂಡು ತಗೊಳೋ ನಾಯಿ ಆಕಂಡ್ ಸಾಯಿ ಅಂತ ಎಸೀತಿದ್ದೆ.
ನನ್ನ ಪ್ಯಾಂಟು ಶಟರ್್ ಭಾಗ್ಯನೂ ತುಂಬಾ ದಿನ ಇರ್ಲಿಲ್ಲ, ಕತ್ತೆ ಬೆಳ್ದಂಗೆ ಬೆಳ್ದವ್ಳೆ ಅವ್ಳು, ಕುಂಡಿ ಮ್ಯಾಲ್ಕಿರೋ ಟೀ ಶಟರ್್ನ ಕೊಡುಸ್ತೀಯಲ್ಲೇ ನೀನೆಂತ ಮಾನ್ಗೆಟ್ಟೋಳು ಅಂತ ಅಮ್ಮನ್ನ ಅಜ್ಜಿ ಬೈತ್ತಿದ್ರಿಂದ ಪ್ರತೀ ವರ್ಷ ಸಮವಸ್ತ್ರ ಆಗಿದ್ದ ಫ್ಯಾಂಟ್ ಶಟರ್್ ಕಟ್ಟಾಯ್ತು. ಯಾವಾಗ್ಲೂ ಹುಡ್ಗೂರ್ ತರ ಫ್ಯಾಂಟು ಶರ್ಟ್ ನೇ ಹಾಕಿ ಹಾಕಿ ನಂಗೂ ಬೇಜಾರ್ ಆಗಿದ್ರಿಂದ ಅಜ್ಜಿ ಮಾತೀಗ್ ನಂಗೇನು ಬೇಜಾರ್ ಆಗ್ಲಿಲ್ಲ. ಬದ್ಲಿಗೆ ಎರಡೇ ತರದ್ ಬಟ್ಟೆ ಆಕಿದ್ ನಂಗೆ ಮೂರ್ನೇ ಸ್ಟೈಲ್ ಬಟ್ಟೆ ಹಾಕ್ಬೋದಲ್ಲಾ ಖುಷಿ ಆಯ್ತು.
ಪ್ಯಾಂಟು ಶರ್ಟ್, ಫ್ರಾಕ್ ಹಾಕ್ಕಂಡು ಸಿಟಿ ಹುಡ್ಗೀರ್ ತರ ಪೋಸ್ ಕೊಡ್ತದ್ದ ನಂಗೆ ಆಮೇಲೆ ಪ್ರತಿ ಅಮವಾಸ್ಯೆ, ಪೂರ್ಣಿಮೆ, ಹಬ್ಬ ಹುಣ್ಣಿಮೆ ಎಲ್ಲಾದಕ್ಕೂ ಮಿಸ್ಸೇ ಇಲ್ದಂಗೆ ಅಳೇ ಸೀರೆಲ್ಲಿ ನಮ್ಮಜ್ಜಿ ಒಲ್ಸೊ, ಸೊಂಟ್ದಿಂದ ಪಾದ್ಗಂಟ ಲಂಗ, ಮೋಣಕೈ ಗಂಟ ಇರೋ ಜಾಗೀಟು ಆಕಂಡು, ಅಳ್ಳೆಣ್ಣೆ ತೀಡ್ಕಂಡು, ಎರಡ್ ಜಡೆ ಎತ್ತಿ ಮೇಲಕ್ ಕಟ್ಕಂಡು ಓಡಾಡ್ತಿದ್ದೆ, ಹೊಸುದ್ರಾಗೆ ಅಗ್ಸ ಎತ್ತೆತ್ತಿ ಎಸ್ದ ಅನ್ನಂಗೆ ನಾನೂ ಲಂಗ ಜಾಗೀಟ್ ಬೇಜಾರ್ ಆಗಗಂಟ ಹಾಕಂಡ್ ಚೆನ್ನಾಗ್ ಮೆರ್ದೆ, ಎಂಗೂ ಹಳೇ ಸೀರೆನ ಗಂಟ್ ಕಟ್ಟಿ ಮಡಿಕಂಡಿದ್ ನಮ್ ಗೌರ, ತೆಗ್ದೂ ತೆಗ್ದೂ ಕೊಡೋಳು, ಹೊಸಾ ಬಟ್ಟೆ ಇಲ್ಲಾಂತ ಉಸೂರ್ ಅನಬ್ಯಾಡ, ತಗೊ ವಲಾಕು ಅನ್ನೋಳು, ಅಲ್ಲಾ… ಹಳೇಸೀರೆಯಿಂದ ಲಂಗಾ ಜಾಗೀಟ್ ಅಂತ ಹೊಸ ರೂಪ ಕೊಟ್ ಮಾತ್ರಕ್ಕೆ ಅದೆಂಗ್ ಹೊಸ ಬಟ್ಟೆ ಆದತ್ತು!? ಆದ್ರೆ ನಮ್ ಗೌರುಂಗೆ ಇದೆಲ್ಲಾ ತಿಳ್ಯಲ್ಲ, ನಾನು ಹೊಸ ಬಟ್ಟೆ ಆಕಂಡಿಲ್ವಲ್ಲಾ ಉಸೂರ್ ಅನ್ಬಾರ್ದು ಅಷ್ಟೇ ಅವ್ಳಿಗೆ ಬೇಕಾಗಿದ್ದು. ಆದ್ರೆ ನನ್ ಮನ್ಸಲ್ ಮಾತ್ರ ಇದು ಹಳೇ ಸೀರೆನೇ ಅಂತ ಬೇಜಾರ್ ಆತಿದ್ದು ಗೌರುಂಗೆ ಗೊತ್ತಾತಿರ್ಲಿಲ್ಲ.
121
ಆಮೇಲಾಮೇಲೆ ಅದೂವರ್ಗೆ ಮುಂದೆನೇ ಹುಕ್ಕಿಡುಸ್ಕಂಡು ಜಾಗೀಟ್ ಹಾಕೊಳೋ ನನ್ ಕಣ್ಣಿಗೆ ಹಿಂದೆ ಹುಕ್ಕ್ ಇಡುಸ್ಕಂಡಿರೋ ಜಾಗೀಟ್ ನೋಡಿ, ಚೆನಾಗಯ್ತೆ ಅಂತ ನಾನೂ ಅಂಗೇನೆ ಹೊಲುಸ್ಕಣಕ್ಕೆ ಶುರು ಮಾಡ್ದೆ. ನಾನೂ ದಿನಾಗ್ಲೂ ಲಂಗ ಜಾಗೀಟ್ನೇ ಆಕಂಡ್ ಓತಿದ್ದ್ ನಮ್ ಸ್ಕೂಲ್ನಲ್ಲಿ ಚೂಡಿದಾರ ಹಾಕಂಡ್ ಬರೋದ್ನ ನೋಡಿ, ಪ್ರಾಕ್ನಿಂದ ಪ್ಯಾಂಟು ಶಟರ್್ ಭಾಗ್ಯ, ಆಮೇಲೆ ಲಂಗ ಜಾಗೀಟ್ ಭಾಗ್ಯ ಇದರಿಂದ ವಿಮಮುಕ್ತಳಾಗಿ ಚೂಡಿದಾರದ್ ಭಾಗ್ಯ ಇನ್ಯಾವಾಗ್ ಬರುತ್ತೋ ಅಂತ ತುದಿಗಾಲ್ನಲ್ಲೇ ಕಾಯ್ತಾಯಿದ್ದೆ.
ಒಂದ್ ವರ್ಷ ಸ್ವತ್ರಂತ್ರ ದಿನಾಚಾರಣೆ ಪ್ರಯುಕ್ತ ಚುಕು ಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡುತೈತೊ ಅನ್ನೋ ಡಾನ್ಸಿಗೆ ಚೂಡಿದಾರನೇ ಬೇಕಂತ ನಮ್ಮಿಸ್ಸು ಹೇಳುದ್ರು, ನಮ್ಮನೇವ್ರು ನಂಗೆ ಈ ಭಾಗ್ಯನ ಕರಿಣಿಸೋಕ್ ಮುಂಚೆ , ನನ್ ಪ್ರಂಡ್ ದಿವ್ಯಾ ಡಾನ್ಸಿಗೆ ಅವಳದೇ ಚೂಡಿದಾರ ಕೊಟ್ಟಿ, ಪ್ಯಾಂಟಿನ ಲಾಡಿದಾರನೂ ಅವ್ಳೇ ಕಟ್ಟಿದ್ಲು. ಅಮ್ಮಾ……….ಅವತ್ತಿನ ನನ್ ಖುಷಿಗೆ ಪಾರನೇ ಇರ್ಲಿಲ್ಲ, ಎಟಡ್ ವರ್ಷದ ನನ್ ಕನಸು ನನಸಾಯ್ತಲ್ಲ ಅಂತ ನನ್ ಮನ್ಸು ಆಕಾಶ್ದಾಗೆ ತೇಲ್ತಾಯಿತ್ತು.
ಆ ಬಟ್ಟೇಲಿ ನನ್ನನ್ನ್ ನೋಡಿ ಚೆನ್ನಾಗದೆ ಅಂತ ಹೇಳಿ, ನೂರು ರುಪಾಯಿ ಕೊಟ್ಟು ನಮ್ಮಜ್ಜಿ ಕಪ್ಪು ಬಣ್ಣ ಮತ್ತು ಮಣ್ಣ್ ಬಣ್ಣದ್ ಟಾಪು, ಮಣ್ಣಿನ್ ಬಣ್ಣದ್ ಪ್ಯಾಂಟಿರೋ ಚೂಡಿದಾರದ್ ಪೀಸ್ ಕೊಡ್ಸಿತ್ತು. ಇದು ನಂದೇ ಆದ ನನ್ನ ಮೊದಲ, ಪ್ರೀತಿಯ,ಅಚ್ಚು ಮೆಚ್ಚನ ಚೂಡಿದಾರ ಆಗಿತ್ತು. ಇದ್ರು ಮೇಲೆ ನಂಗೆಷ್ಟು ಪ್ರೀತಿ ಇತ್ತಂದ್ರೆ ನಾನ್ ಸ್ವಲ್ಪ ದೊಡ್ಡೋಳ್ ಆದ್ಮೇಲೆ ಅದು ನಂಗೆ ಚಿಕ್ಕ ಆದ್ರೂ, ಅರ್ದೋಗಿದ್ರು ಪಿನ್ ಆಕಂಡ್, ಪ್ಯಾಂಟ್ ಚಿಕ್ಕ ಕಾಣ್ಬಾರ್ದು ಅಂತ ಸ್ವಲ್ಪ ಕೆಳೀಕ್ ಕಟ್ಕಂಡು ಓಡಾಡ್ತಿದ್ದೆ.
ನಾನು ಎಂಟನೇ ಕ್ಲಾಸಿಗ್ ಬಂದ್ಮೇಲೆ ನಮ್ ಸ್ಕೂಲ್ನಲ್ಲಿದ್ದ ಸುವರ್ಣ ಪ್ರತಿ ಬುಧವಾರ ಬಣ್ ಬಣ್ಣದ್ದು, ಹೊಸ ಹೊಸ ಚೂಡಿದಾರ ಆಕಂಡ್ ಬಂದು, ನಮ್ ಹೊಟ್ಟೆ ಉರುಸ್ತದ್ಲು. ನಾಲ್ಕ್ ದಿನದ್ ಎನ್.ಎಸ್.ಎಸ್ ಕ್ಯಾಂಪಿಗೆ ಅಂತ ನಮ್ ಸ್ಕೂಲ್ನಿಂದ ದೇವನಹಳ್ಳಿಗ್ ಹೋಗ್ಬೇಕು, ಎಲ್ರೂ ಸ್ವಲ್ಪ ಚೆನ್ನಾಗಿರೋ ಬಟ್ಟೆ ತಗಂಡ್ ಬರ್ರಿ ಅಂತ ನಮ್ಮ್ ಹಿಂದಿ ಟೀಚರ್ ಉಮಾ ಮಿಸ್ಸು ಹೇಳುದ್ರು. ನನ್ನತ್ರ ಇದ್ದಿದ್ ಒಂದೇ ಚೂಡಿದಾರ, ಅದೂ ಹಳೇದ್ ಆಗಿತ್ತು ಅಂತ, ನಂಕಿನ್ನ ಒಂದ್ ವರ್ಷ ಸೀನಿಯರ್ ಆಗಿದ್ದ ಅಶ್ವಿನಿ ಅಕ್ಕನತ್ರ ಒಂದ್ ಜೊತೆ ಹಸ್ರು ಬಣ್ಣದ್ ಚೂಡಿದಾರ ಈಸ್ಕಂಡೆ, ಆವಕ್ಕ ಕೊಡ್ಬೇಕಾದ್ರೆ, ನೂರ್ ಸಲ ಉಷಾರ್ ಇದು ಹೊಸ ಡ್ರಸ್ಸು, ನನ್ನಂಕ್ಕಂದು ಅಂತ ಹೇಳಿ ಹೇಳಿ ಕೊಟ್ಟಿತ್ತು. ಈ ಡ್ರಸ್ ಆಕಂಡ್ ದೇವ್ನಳ್ಳಿಗೋದ್ಮೇಲೆ, ನನ್ ಗ್ರಾಚಾರ ಕೆಟ್ಟು, ಇದೇ ಡ್ರಸ್ನಲ್ಲೇ ನಾನು ಮೊದಲ್ನೆ ಸಲ ರುತುಮತಿಯಾಗಿದ್ದಕ್ಕೆ ಆ ಡ್ರಸ್ನ ಅಗಸ್ರಿಗೆ ಕೊಟ್ಬಿಟ್ರು, ಆಮೇಲೆ ನಮ್ಮಮ್ಮನತ್ರ ಕಂಡೋರ್ ಬಟ್ಟೆನೇ ಬೇಕ ನಿಂಗೆ ಅಂತ ಬೈಸ್ಕಂಡು, 350 ರಪಾಯಿ ಇಸ್ಕಂಡು ಮನೇಗೆ ಹುಡಿಕಂಡ್ ಬಂದ್ ಅಶ್ವನಿ ಅಕ್ಕಂಗೆ ಕೊಟ್ಟು ನನ್ನ್ ಮಾನ ಮರ್ಯಾದೆನ ಉಳುಸ್ಕಂಡಿದ್ದೆ.
ರುತುಮತಿಯ ಸೂತ್ಕ ಕಳ್ದಕೊಳ್ಳೋ ಫ್ರೋಗ್ರಾಂನಲ್ಲಿ ಎಷ್ಟೋಂದ್ ಚೂಡಿದಾರದ್ ಪೀಸ್ ಗಿಫ್ಟ್ ಕೊಟ್ಟಿದ್ರು. ಅವಾಗ ತಾನೇ ನಮ್ಮೂರ್ನಲ್ಲಿ ಪ್ಯಾಂಟು ಶರ್ಟ್ ಹವಾ ಶುರುವಾಗ್ತಾಯಿತ್ತು. ಆಥರ್ಿಕ ಪರಿಸ್ಥಿತಿ ಚೆನ್ನಾಗಿರೋರು ಪ್ಯಾಂಟು ಶಟರ್್ನ ಹಾಕ್ತದ್ರು, ನಾನು ಜೀನ್ಸ್ ಪ್ಯಾಂಟ್ ಆಕುದ್ರು ಶಾರ್ಟ್ ಟಾಪಾಗ್ಲಿ, ಟೀಶರ್ಟ್ ಆಗ್ಲಿ ಆಕ್ತರ್ಲಿಲ್ಲ. ಇದುನ್ನೆಲ್ಲಾ ಹಾಕಂಡಿರೋರ್ನ ನೋಡಿ ನಾನು ಆಕಂಡ್ರೆ ಎಂಗ್ ಕಾಣುಸ್ತೀನಿ ಅಂತ ಕನ್ಸ್ ಕಾಣ್ತಾಯಿದ್ದೆ. ತುಂಬಾ ಸಲ ಟ್ರೈಮಾಡ್ದೆ ಆದ್ರೆ ಆಗ್ಲಿಲ್ಲ, ನಮ್ಮೂರ್ನಲ್ಲಿ ನನ್ ಕನ್ಸು ನನಸಾಗಲ್ಲ ಅಂತ ನಂಗೊತ್ತಾಯ್ತು. ನಾವು ಡಿಗ್ರಿ ಮಾಡಕ್ಕೆ ಅಂತ ದೊಡ್ಡಬಳ್ಳಾಪುರದಲ್ಲಿ ಹಾಸ್ಟೆಲ್ಲಿಗೆ ಸೇರ್ಕಂಡು ಅಲ್ಲಿ ನನ್ನ ಕನಸನ್ನ ನನಸ್ಮಾಡೋಕೆ ಶುರುಮಾಡ್ದೆ. ಹಾಕ್ಬೇಕಂತ ಹಾಕಂಡ್ರೂನೂ ಓಡಾಡಕ್ಕೆ ಮುಜುಗರ ಆಗಿ ಕನ್ನಡಿ ಮುಂದೆ ನಿತ್ಕಂಡು ತೃಪ್ತಿ ಆಗೋವಷ್ಟು ನೋಡ್ಕಂಡು, ಆಮೇಲೆ ಬೇರೆ ಬಟ್ಟೆ ಆಕಂತಿದ್ದೆ. ಅಂಗೋ ಇಂಗೋ ಮಾಡಿ ಮೊದಲ್ನೆ ಸಲ ಮುರುಳಿ ಸರ್ ಮದ್ವೇಲಿ ನನ್ ಕನಸು ನನಸಾಯ್ತು.
ಈ ಕನಸ್ ಕಾಣೋ ಪ್ರಕ್ರಿಯೆ ಮುಗ್ಯದೇ ಇಲ್ಲ. ಒಂದಿಡೇರುದ್ರೆ ಇನ್ನೊಂದು, ಮತ್ತೊಂದು ಅಂತ ಒಂದೊಂದು ಹಂತದಲ್ಲೂ ಒಂದೊಂದ್ ತರ, ಕನ್ಸ್ ಕಾಣಕ್ಕೆ ದುಡ್ಡೇನ್ ಕೊಡಂಗ್ಲ್ಲ ಅಂತ ನಿರಂತರವಾಗಿ ಬಳೀತನೇ ಇದೆ. ಎಷ್ಟೋ ಸಲ ನಾನು ವರ್ಷ ಪೂತರ್ಿ ದುಡುದ್ರೂನು ನಂಗೆ ಇಷ್ಟ ಆಗೋ ಬಟ್ಟೆ ತಗಳ್ಳಾಕ್ ಆಗ್ದೆ ಬೇಜಾರ್ ಮಾಡ್ಕಂಡಿದ್ದೂ ಇದೆ. ಬೇರೆ ಬೇರೆ ಕಾರಣಗಳಿಂದ ನನ್ ಮದ್ವೇಲಿ ನಂಗೆ ಅಂತ ಒಂದ್ ಜೊತೆ ಬಟ್ಟೆ ತಗಳಕ್ಕಾಗ್ದೆ ಇದ್ದಾಗ, ಹಳದಿ ಬಣ್ಣ್ದ್ ಸೀರೆ ತಕ್ಕೊಟ್ಟಿ ನನ್ ಬೇಸ್ರಾನ ಮಾಯ ಮಾಡಿದ್ರು, ದುಡ್ಡು ಕೊಡೋಕೆ ಅಂತ ಬಟ್ಟೆ ಅಂಗಡೀಗೆ ಹೋದಾಗ ಕ್ರೀಮ್ ಕಲರ್ ಕಾಟನ್ ಸೀರೆ ಇಷ್ಟ ಆಗಿ ಉದ್ರಿಗೆ ಆ ಸೀರೆನ ತಗಂಡ್ ಬಂದಿದ್ದೆ. ಹಳೇದ್ ಆಗುತ್ತೆ ಅಂತ ಆ ಸೀರೆ ಅಂಗೇ ಮಡ್ಗಿ ಮೊದಲ್ನೆ ವರ್ಷದ ನನ್ನ ವೆಡ್ಡಿಂಗ್ ಸೀರೆ ಅಂತ ಹೆಸ್ರು ಕೊಟ್ಟಿ, ಉಟ್ಕಂಡು ಖುಷಿ ಪಟ್ಟಿದ್ದೆ.
ಬಟ್ಟೆಗಳ ಹಿಂದೆ ಇರೋ ರಾಜಕಾರಣ ನೋಡುದ್ರೆ ಕೆಲವೊಂದು ಸಲ ಬಟ್ಟೇನೆ ಹಾಕ್ಬಾರ್ದು ಅನಿಸುತ್ತೆ. ಬಟ್ಟೆ ಅನ್ನೋ ಪರಿಕಲ್ಪನೇನೆ ಇರ್ಲಿಲ್ಲ ಅಂದ್ರೆ ಈ ಜಗತ್ತು ಹೆಂಗಿರ್ತಿತ್ತು?! ಹುಟ್ಟಿದಾಗಿಂದ ಹೆಣ್ಣು ಮಕ್ಳಿಗೊಂತರ ಗಂಡ್ ಮಕ್ಳಿಗೊಂತರ ಡ್ರಸ್ ಕೋಡನ್ನ ಕೊಟ್ಟು, ಇಂತದ್ದೇ ಆಕ್ಬೇಕು ಅಂತ ನಮ್ಮ ಮೇಲೆ ಏರಿದ್ದಾರೆ. ಬಟ್ಟೆ ಮೇಲೆ ಬೇಜಾರಾದಾಗ ನಂಗೂ ಹುಟ್ಗೂರ್ ತರ ಬರೀ ಚೆಡ್ಡಿ ಮತ್ತೆ ಬನಿಯನ್ ಆಕ್ಬೇಕಂತ ಆಸೆ ಆಗುತ್ತೆ. ಆದ್ರೆ ಇಷ್ಟು ಮುಕ್ತವಾಗಿರಕ್ಕೆ ನನ್ನಿಂದ ಇನ್ನೂ ಸಾಧ್ಯ ಆಗಿಲ್ವಲ್ಲ ಅಂತ ನನ್ ಮೇಲೆ ನಾನೇ ಬಾಜಾರ್ ಮಾಡ್ಕಂಡು, ಬಟ್ಟೆಯ ರಾಜಕಾರಣವನ್ನು ಸೃಷ್ಟಿ ಮಾಡಿರೋ ಈ ವ್ಯವಸ್ಥೆ ಮೇಲೆ ಅಸಹ್ಯ ಪಟ್ಕಂಡು, ಆ ಕ್ಷಣದ ನನ್ನ ಅಸಹಾಯಕತೆಯನ್ನು ಸಮಥರ್ಿಸಿಕೊಂಡು, ಮತ್ತೆ ಕಣ್ಣಿಗೆ ಚೆನ್ನಾಗ್ ಕಾಣೋ ಬಟ್ಟೆ ನೋಡ್ತಾ ಕನಸ್ ಕಾಣೋ ಪ್ರಕ್ರಿಯೆ ಇಂದಿಗೂ ನಿರಂತರವಾಗಿ ನಡಿತನೇ ಇದೆ.

‍ಲೇಖಕರು G

September 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನಾಗರಾಜ ಹ

    ನಿರೂಪಣೆ ತುಂಬಾ ಚೆನ್ನಾಗಿತ್ತು. ನನ್ನ ಬಾಲ್ಯದಲ್ಲಿಯೂ ಸಹ ಇದೇ ರೀತಿಯಲ್ಲಿ ಬಟ್ಟೆಗಳ ಬಗ್ಗೆ ಪರಿತಪಿಸುತ್ತಿದ್ದೆ. ಮಂಜುಳರವರಿಗೆ ಶುಭ ಹಾರೈಕೆಗಳು.
    ನಾ.ಬೆಳಕೆರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: