ನಾನು ಪೂಜಾರಿ ಅಣ್ಣನ ಪಡಚಾಕರಿ

ಅಣ್ಣನ ನೆನಪು 26

ಕೊನೆಗೂ ನಮ್ಮೂರಲ್ಲಿ ಹಲವರಿಗೆ ಅಣ್ಣ ಅರ್ಥವೇ ಆಗಲಿಲ್ಲ. ಕುವೆಂಪು ಅವರ ಬಗ್ಗೆ ಹೇಳುವಾಗಲೂ ಈ ಸಮಸ್ಯೆ ಇತ್ತು. (ಕ್ಷಮಿಸಿ, ಈ ಹೋಲಿಕೆ ಸರಿ ಇಲ್ಲ ಎಂದು ಗೊತ್ತು. ಮತ್ತೆ ಕುವೆಂಪು ಅವರ ದೇವರ ನಂಬಿಕೆಗೂ, ಅಣ್ಣನ ದೇವರ ನಂಬಿಕೆಗೂ ತುಂಬಾ ವ್ಯತ್ಯಾಸ ಇದೆ ಎನ್ನುವ ಎಚ್ಚರದಿಂದಲೇ ಇದನ್ನು ಬಳಸಿದ್ದೇನೆ.)

ಕುವೆಂಪು ಅವರು ಎಂದೂ ದೇವಸ್ಥಾನವನ್ನು ಹೊಕ್ಕಿದವರಲ್ಲ; ಆದರೆ ಧ್ಯಾನ ಮಾಡುತ್ತಿದ್ದರು. ಪೂಜಾರಿಯನ್ನು ನಂಬಿದವರಲ್ಲ; ಪುರೋಹಿತಶಾಹಿಯನ್ನು ವಾಚಾಮಗೋಚರವಾಗಿ ಬೈದರು. ಆದರೆ ಪೂಜಾ ಕೊಠಡಿಗೆ ಹೋದರೆ 1-2 ತಾಸು ಹೊರ ಬರುತ್ತಿರಲಿಲ್ಲ….. ಯಾಕೆ ಹೀಗೆ?

ಒಂದೆಡೆ ಲೆನಿನ್‍ನ್ನು ಹಾಡಿ ಹೊಗಳುತ್ತಾರೆ. ಇನ್ನೊಂದೆಡೆ ರಾಮನನ್ನು ಕೇಂದ್ರವಾಗಿಸಿಕೊಂಡು ಮಹಾಕಾವ್ಯ ಬರೆಯುತ್ತಾರೆ? ಏನಿದು ವಿಚಿತ್ರ! ಶಂಭೂಕ, ರಾಮ ಇಬ್ಬರೂ ಒಟ್ಟಾಗುತ್ತಾರೆ? ಬ್ರಾಹ್ಮಣ ಬಂದು ಶಂಭೂಕನ ಕಾಲಿಗೆರಗುತ್ತಾನೆ. ಇದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಇದೆಲ್ಲಾ ನಮ್ಮ ಕಾಲದ ಬಾಲ್ಯದ ಗೊಂದಲವಾಗಿತ್ತು.

ಅಣ್ಣನ ಕುರಿತು ಹಲವರು ಯೋಚಿಸಿದ್ದು ಹೀಗೆ. ಪೂಜೆಗಾಗಿ ದೇವಸ್ಥಾನಕ್ಕೆ ಹೋಗುವುದಿಲ್ಲ. ಪುರಾಣದ ವಸ್ತುವನ್ನುಳ್ಳ ತಾಳಮದ್ದಲೆಯ ಅರ್ಥ ಹೇಳಲು ಹೋಗುತ್ತಾರೆ! ಮನೆಯಲ್ಲಿ ದೇವರ ಪೂಜೆ ಇಲ್ಲ. ಹಬ್ಬದ ಮನೆಗೆ ಊಟಕ್ಕೆ ಹೋಗುತ್ತಾರೆ!! ಬ್ರಾಹ್ಮಣ್ಯವನ್ನು ವಿರೋಧಿಸುತ್ತಾರೆ. ಆತನ ಖಾಸಾ ಗೆಳೆಯರಲ್ಲಿ ಹಲವರು ಬ್ರಾಹ್ಮಣರು!! ಏನಿದು? ನಮಗೂ ಎಳೆವೆಯಲ್ಲಿ ಇದೇ ಸಮಸ್ಯೆ ಇತ್ತು.

ಇಂಥದ್ದೊಂದು ಚರ್ಚೆ ಹುಟ್ಟು ಹಾಕಿದ್ದು ನಮ್ಮ ಮನೆಯಲ್ಲಿ ನಡೆಯುವ ಪೂಜೆ ಮತ್ತು ಹಬ್ಬ. ಪ್ರತಿ ವರ್ಷ ಮನೆಯಲ್ಲಿ ಮೂರೋನಾಲ್ಕೋ ಜಾನಪದ ಹಬ್ಬ ಮತ್ತು ಎರಡೋಮೂರೋ ರಾಷ್ಟ್ರೀಯ ಹಬ್ಬ ಆಚರಿಸಲಾಗುತ್ತಿತ್ತು.
ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ಅಂಬೇಡ್ಕರ್ ದಿನಾಚರಣೆ ಆಚರಿಸುವ ರಾಷ್ಟ್ರೀಯ ಹಬ್ಬಗಳು. ಸ್ವಾತಂತ್ರ್ಯೋತ್ಸವಕ್ಕೆ ಪಾಯಸ ಮಾಡುತ್ತಿದ್ದರು. ಅಂಬೇಡ್ಕರ್ ದಿನಾಚರಣೆಗೆ ಮಾಂಸಹಾರದ ಅಡಿಗೆ. ಇದು ತುಂಬಾ ವರ್ಷಗಳ ಕಾಲ ನಡೆದಿತ್ತು. ಒಂದೆರಡು ಬಾರಿ ಬುದ್ಧ ಜಯಂತಿಯನ್ನು ಅಣ್ಣ ಮತ್ತು ಮಾಧವಿ ಒಂದಿಷ್ಟು ಕವಿತೆ ಓದುವ ಮೂಲಕ ಆಚರಿಸಿದ್ದರು.

ಒಂದೆರಡು ಬಾರಿ ಗೆಳೆಯ ಎಂ ಲೋಕೇಶ ಕೂಡ ಸೇರಿಕೊಂಡ ನೆನಪು. ಅಗಸ್ಟ್ 15, ಜನವರಿ 26 ರಂದು ಒಂದಿಷ್ಟು ಚಾಕಲೇಟ್ ತರುತ್ತಿದ್ದ. ಟಿ.ವಿ. ಬಂದ ಮೇಲೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೆಡ್ ವೀಕ್ಷಿಸಲು ನಮಗೆಲ್ಲಾ ಹೇಳುತ್ತಿದ್ದ. ಅವನೂ (ನಿವೃತ್ತಿಯ ನಂತರ) ಕೂತು ನೋಡುತ್ತಿದ್ದ. ಅಕ್ಕ ಪಕ್ಕದ ಮಕ್ಕಳನ್ನು ಕರೆದು ತೋರಿಸುತ್ತಿದ್ದ. ಒಂದು ರೀತಿಯಲ್ಲಿ ಅದೆಲ್ಲಾ ಅವನಿಗೆ ಸಂಭ್ರಮದ ಘಳಿಗೆಗಳು. ಪೆರೇಡ್ ನೋಡುವಾಗ, ಹಿಂದೆ ರಾಧಾಕೃಷ್ಣನ್ ಅವರೆಲ್ಲ 7 ಕುದುರೆಯ ಸಾರೋಟಿನಲ್ಲಿ ಬರುವುದನ್ನು, ಅವರು ಗಂಭಿರವಾಗಿ ಅದರಲ್ಲಿ ಕುಳಿತುಕೊಂಡಿದ್ದನ್ನು ಅಭಿನಯ ಪೂರ್ವಕವಾಗಿ ವಿವರಿಸುತ್ತಿದ್ದ.

ಇದನ್ನೆಲ್ಲಾ ಹೇಳುವಾಗ ಅವನಿಗೇ ರೋಮಾಂಚನ ಆಗುತ್ತಿತ್ತು ಅಂದ ಮೇಲೆ ನಮಗೆ ಆಗದಿರುತ್ತದೆಯೇ?
ವಿದ್ಯಾರ್ಥಿಗಳು ಇದನ್ನು ನೋಡಿದರೆ ತಾವೂ ರಾಷ್ಟ್ರಪತಿಯಾಗುವ ಕನಸನ್ನು ಕಾಣಬಹುದು ಎನ್ನುವುದು ಅವನ ನಂಬಿಕೆಯಾಗಿತ್ತು. ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತವಾದ ಕನಸು ಕಟ್ಟಬೇಕೆನ್ನುವುದು ಅವನ ಯಾವತ್ತಿನ ಕನಸು. ದೇಶದ ತುಂಬಾ ಜನವರಿ 26 & ಅಗಸ್ಟ್ 15 ರಂತ ರಾಷ್ಟ್ರೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸದೆ ಧಾರ್ಮಿಕ ಹಬ್ಬವನ್ನು ಆಚರಿಸುವುದರಲ್ಲೇ ತಮ್ಮ ಶಕ್ತಿ, ಉತ್ಸಾಹ ಕಳೆದುಕೊಳ್ಳುತ್ತಿರುವ ಯುವಜನರ ಬಗ್ಗೆ ಅವನಿಗೆ ವಿಷಾದವಿತ್ತು.

ನಮ್ಮ ಮನೆಯಲ್ಲಿ ಆಚರಿಸುವ ಜಾನಪದ ಹಬ್ಬವೆಂದರೆ ದೀಪಾವಳಿ, ಗಂಟಿ ಹಬ್ಬ (ಆಕಳ ಹಬ್ಬ) ಮತ್ತು ತುಳಸಿ ಪೂಜೆ.(ತುಳಸಿ ಪೂಜೆಯ ಹಿಂದಿನ ಶಿಷ್ಟ ನಂಬಿಕೆ ಮಾತ್ರ ಅಸಹ್ಯಕರವಾದದ್ದು ಮತ್ತು ಮನುಷ್ಯ ವಿರೋಧಿಯಾದದ್ದು. ಇದು ಹಲವರಿಗೆ ತಿಳಿದಿಲ್ಲ.) ಇವು ಮೂರು ಅಕ್ಕ ಮತ್ತು ಆಯಿಯ ಆಯ್ಕೆಯಾದರೂ ಅಣ್ಣನ ವಿರೋಧವಿರಲಿಲ; ಅಥವಾ ವಿರೋಧವನ್ನು ತೋರ್ಪಡಿಸುತ್ತಿರಲಿಲ್ಲ.

ಮೊದಲಿಂದಲೂ ನಮ್ಮ ಮನೆಯಲ್ಲಿ ಆಕಳನ್ನು ಸಾಕುತ್ತಿದ್ದರು. ಹಿಂದೆ ‘ಚಂದ್ರಿ’ ಎನ್ನುವ ಎಮ್ಮೆಯನ್ನೂ ಸಾಕಿದ್ದರಂತೆ. ನನಗೆ ನೆನಪಿನ ಶಕ್ತಿ ಬಂದ ಮೇಲೇನೂ ಎಮ್ಮೆ ಇರಲಿಲ್ಲ. ಒಂದು ಎಮ್ಮೆ ತೆಗೆದುಕೊಳ್ಳಬೇಕೆಂದು ಅಕ್ಕ ಹೇಳುತ್ತಿದ್ದರೂ ತೆಗೆದುಕೊಂಡಿರಲಿಲ್ಲ. ಕೊಟ್ಟಿಗೆ ತುಂಬಾ ಆಕಳಿರುತ್ತಿತ್ತು. ಹಿಂದೆ ಹೇಳಿದಂತೆ ಇಷ್ಟೆಲ್ಲಾ ಆಕಳಿದ್ದರೂ ಒಂದೇ ಒಂದು ದಿನ ಗಟ್ಟಿ ಮೊಸರು ತಿಂದಿದ್ದಿಲ್ಲ. ಎಲ್ಲಾ ಆಕಳೂ ‘ಸೊಲಿಗೆ ಲಕ್ಷ್ಮೀ’ ಎಂದು ಬೈಯುತ್ತಿದ್ದರು. ಮತ್ತೆ ಪ್ರೀತಿಯ ಆರೈಕೆ ಇದ್ದೇ ಇರುತ್ತಿತ್ತು.

ಆಕಳ ಹೆಸರುಗಳೋ…. ರಾಮಾಯಣ, ಮಹಾಭಾರತದ ಪಾತ್ರಗಳೆ. ಮಾದೇವಿ, ರಾಮ, ಲಕ್ಷ್ಮಣ, ಸೀತೆ, ಕುಂತಿ, ದ್ರೌಪದಿ, ಅಮೃತಮತಿ, ಗಾಂಧಾರಿ (ಬೆಕ್ಕಿಗೂ ಇಂತದೇ ಹೆಸರಿಡುತ್ತಿದ್ದೆವು.) ದೋಸೆ, ಇಡ್ಲಿ…… ಹೀಗೆ ಎಲ್ಲವೂ ಹೆಸರಿಡಿದು ಕರೆದರೆ ಪ್ರೀತಿಯಿಂದ ಓಡಿ ಬರುವುದು ಆದರೆ ಹಾಲು ಕರೆಯಲು ಹೋದರೆ ಒದ್ದು ತಟ್ಟೆ-ಕೌಳ್ಗಿಯನ್ನು ಆಚೆಗೆ ಒಗೆಯುತ್ತಿತ್ತು. ಆಗೆಲ್ಲಾ ಅಕ್ಕನೊಂದಿಗೆ ನಾನು ಹಾಲು ಕರೆಯಲು ಹೋಗಿದ್ದು ಇದೆ. ಅದೂ ಪ್ರಯೋಜನ ಇಲ್ಲದಿದ್ದಾಗ ಇಡಿಸ್ಲು ಅಂತ ಮಾಡಿ ಅದರಲ್ಲಿ ಆ ಆಕಳನ್ನು ಕೂಡಿ, ಅದರ ಹಿಂದಿನ ಕಾಲನ್ನು ಕಟ್ಟಿ ಹಾಲು ಕರೆಯುತ್ತಿದ್ದರು. ಇಷ್ಟೆಲ್ಲಾ ಆದ ಮೇಲೆ ಚಹಾಕ್ಕೇನೂ ಕೊರತೆ ಇರಲಿಲ್ಲ.

ಹಾಗಾಗಿ ನಮ್ಮೂರಲ್ಲಿ ಯಾವಾಗ ಆಕಳ ಪೂಜೆಯಾಗುತ್ತದೋ ಆಗ ನಮ್ಮಲ್ಲೂ ಪೂಜೆ. ನಮಗಂತೂ ಸಂಭ್ರಮ. ಶೇಡಿಯಿಂದ ಕೊಲಚು ಬರೆಯುವುದು, ಚಂದ್ರಕಾಯಿಯಿಂದ ಕೆಂಪು ಬಣ್ಣ ತಯಾರಿಸಿ ಶಿದ್ದೆಯ ಬಾಯಿಂದ ಆಕಳಿಗೆ ಹುಬ್ಬಿಡುವುದು, ಕೋಡಿಗೆ ಬಣ್ಣ ಹಚ್ಚುವುದು, ಹಣ್ಣು ಅಡಿಕೆ ಸುರಿದು ಸಿಂಗಾರ, ಎಲೆ ಹಾಕಿ ಅಡಿಕೆ ಸರ ಮಾಡುವುದು, ಬೆಳಿಗ್ಗೆ ಎದ್ದು ಎಲ್ಲ ಆಕಳನ್ನು ಎಬ್ಬಿಸಿ ಸ್ನಾನ ಮಾಡಿಸಿ ಸಿಂಗರಿಸುವುದು…. ಪೂಜೆ ಮಾಡಿ ಬಿಟ್ಟ ಮೇಲೆ ನಮ್ಮ ಪ್ರೀತಿಯ ಕರುವಿನ ಅಡಿಕೆ ಸರ ಯಾರೂ ಹರಿಯದೆ ಮನೆಗೆ ತಂದು ಬಿಡಲಿ ಎಂಬ ಹಾರೈಕೆ; ಮತ್ತು ಸಂಜೆ ಆ ಕರು ಮನೆಗೆ ಬರುವವರೆಗೆ ಕುತೂಹಲ, ಕೊರಳಲ್ಲಿ ಅಡಿಕೆ ಸರ ಇಲ್ಲದ್ದು ನೋಡಿ ನಿರಾಸೆ.

ಸಣ್ಣ ಕರುವಾದರೆ ಕೊಟ್ಟಿಗೆಯಲ್ಲಿಯೇ ಕಟ್ಟಿಡುತ್ತಿದ್ದರು. ಇರುವುದರಲ್ಲಿ ಸೀನಿಯರ್ ಹೆಣ್ಣು ಆಕಳಿಗೆ ಒಂದು ಕಾಯಿ ಕಡಿಯನ್ನು ಸೇರಿಸಿದ ಇನ್ನೊಂದು ಸರ. ಎಲ್ಲದಕ್ಕೂ ಸರ ಕಟ್ಟಿದ ಮೇಲೆ ಅದರ ಸರ ಇದು, ಇದರ ಸರ ಅದು ಹರಿದು ತಿನ್ನಲು ಹವಣಿಸುತ್ತಿತ್ತು. ಅದನ್ನು ಕಾಯಬೇಕು. ಇರುವ ದೊಡ್ಡ ಗೂಳಿಗೆ ಕೋಡಿಗೂ ಒಂದು ಸರ ಕಟ್ಟಿ ಬಿಡುವುದು….. ಹೀಗೆ ನಮ್ಮ ಸಂಭ್ರಮವೇ ಅಣ್ಣನಿಗೆ ತೀರಾ ಇಷ್ಟವಾಗುತ್ತಿತ್ತು. ದಿನ ನಿತ್ಯ ಹಾಲು ಕರೆದು ಕುಡಿದ ಜನಕ್ಕೆ ವರ್ಷಕ್ಕೊಮ್ಮೆಯಾದರೂ ಪ್ರೀತಿಯಿಂದ ಹಬ್ಬ ಮಾಡಿ ಸಂಭ್ರಮಿಸುವ ಮಾನವೀಯತೆ ಉಳಿಸಿಕೊಂಡಿದ್ದಾರಲ್ಲ ಎಂಬ ಬಗ್ಗೆ ಸಂತೃಪ್ತಿ ಇತ್ತೆಂದು ಕಾಣುತ್ತದೆ.

ಪೂಜೆ ಯಾಕೆ ಬೇಕು…? ಇಷ್ಟು ಅಲಂಕಾರ ಮಾಡಿ ಅದಕ್ಕೆ ಮಾಡಿದ ಗೋಗ್ರಾಸ್ ಕೊಟ್ಟು -ಗೋಗ್ರಾಸ ಎಂದರೆ ಅನ್ನ, ಬೆಲ್ಲ, ಬಾಳೇಹಣ್ಣು, ತುಪ್ಪ, ಹಸಿ ಅರಿಶಿಣ ಹಾಕಿ ಮಾಡಿದ ಹಳದಿ ತೆಳ್ಳೇವುಗಳನ್ನು ಹಾಕಿ ಮಾಡಿದ ತಿಂಡಿ- ಹೊಟ್ಟೆ ತುಂಬಾ ಕೊಟ್ಟು ಒಟ್ಟು ಬಿಡಿ? ಎಂದು ಅಣ್ಣ ಹೇಳಿದರೆ ಮನೆಯಲ್ಲಿ ಒಪ್ಪಿಗೆ ಇಲ್ಲ. ನೀವು ಪೂಜೆ ಮಾಡಿ, ಇಲ್ಲದಿದ್ದರೆ ಪೂಜೆಗೆ ಭಟ್ಟರನ್ನೋ ಬೇರೆಯಾರನ್ನೋ ಕರೆಸುತ್ತೇನೆ ಎಂದಾಗ ಅಣ್ಣ ಪೂಜೆ ಮಾಡುತ್ತಿದ್ದ. ಒಂದೆರಡು ಬಾರಿ ಮಾಡಿರಬೇಕೇನೋ ಅಷ್ಟೆ. ಆಮೇಲೆ ಪೂಜೆಗೆ ಶ್ರೀಧರ ಮಾವ ಬರುತ್ತಿದ್ದ.

ಪೂಜೆ ಪ್ರಾರಂಭ ಆಗುವಾಗ ಮೇಲಿನ ಮನೆಯ ಸುಬ್ರಾಯ ಶೆಟ್ಟರ ಮನೆಯವರನ್ನು ಪಕ್ಕದ ಅಮಾಸೆ ಗೌಡರ ಮನೆಯವರನ್ನು ಕರೆಯಲು ಮರೆಯುತ್ತಿರಲಿಲ್ಲ. ಮನೆಯಲ್ಲಿ ಯಾವುದೇ ಹಬ್ಬ ಮಾಡಿದರೂ ಪಕ್ಕದ ಮನೆಗಳ ಮಕ್ಕಳನ್ನು ಕರೆಯಬೇಕು ಮತ್ತು ಅವರಿಗೆ ತಿಂಡಿಕೊಡಬೇಕು; ಇದು ಅಣ್ಣ ಅಕ್ಕ, ಆಯಿಯರ ನಿಯಮ.

ನಮಗಂತೂ ಖುಷಿಯೇ ಖುಷಿ. ಅಲ್ಲೇ ದೊಣಕಲು (ಬಿದಿರು ಗೂಟ ಹಾಕಿದ ಗೇಟು) ಪಕ್ಕ ನಿಂತು ಆಕಳು ಹೊರ ಹೋಗುವಾಗ ಕುತ್ತಿಗೆಗೆ ಕೈ ಹಾಕಿ ಅಡಿಕೆ ಸರ ಹರಿಯುತ್ತಿದ್ದರು. ನಮ್ಮ ರಾಮ-ಲಕ್ಷ್ಮಣ ಎನ್ನುವ ಗೂಳಿ ಯಾರ ಕೈಗೂ ಸಿಗದೆ ಓಡುತ್ತಿತ್ತು. ಯಾರ ಕೈಗೂ ಸಿಗದೆ ಓಡಿದ ಆಕಳ ಮೇಲೆ ನಮಗೆ ಹೆಮ್ಮೆಯೇ ಹೆಮ್ಮೆ. ಅದು ಯಾರ ಕೈಗೂ ಸಿಗದೆ ಜೋರಾಗಿ ಓಡಲಿ ಅಂತ ಕೊಟ್ಟಿಗೆಯಲ್ಲಿ ಹಗ್ಗದ ಕಣ್ಣಿ ಬಿಚ್ಚುತ್ತಿದ್ದಂತೆ ಹಿಂಬದಿಯಿಂದ ಜೋರಾಗಿ ಜಂವಟೆ ಬಡಿಯುತ್ತಿದ್ದೆವು. ತಪ್ಪಿಸಿಕೊಂಡು ಹೋದ ಆಕಳ ಬಗ್ಗೆ ಮರುದಿನ ಶಾಲೆಯಲ್ಲಿ ಕೈಯಿಂದ ಒಂದಿಷ್ಟು ಮಸಾಲೆ ಸೇರಿಸಿ ಕತೆ ಕಟ್ಟಿ ಹೇಳುತ್ತಿದ್ದೆವು.

ಆದರೆ ಅಣ್ಣ ಮಾತ್ರ ಹೀಗೆ ಯಾರ ಕೈಗೂ ಸಿಗದೆ ಇರಲಿ ಎಂದು ಬಯಸುತ್ತಿರಲಿಲ್ಲ. ಪೂಜೆಗೆ ಬಂದ ಅಕ್ಕಪಕ್ಕದ ಮನೆಯವರು ಈ ಸರವನ್ನು ಹರಿದುಕೊಳ್ಳಲಿ ಎಂದೂ, ಹೀಗೆ ಅಡಿಕೆ ಸರ ಇಟ್ಟು ಹೊರಗೋದರೆ ಬೇರೆ ಯಾರಾದರೂ ಅದನ್ನು ಬೆರಸಿ ಬೆರಸಿ ತೊಂದರೆ ಕೊಡುತ್ತಾರೆ ಎಂದು ಹೇಳಿದಾಗ ಹೌದೆನ್ನಿಸಿದರೂ ಮರುದಿನ ಶಾಲೆಯಲ್ಲಿ ಉಳಿದ ಗೆಳೆಯರು ಸಾಹಸದ ಕತೆ ಹೇಳುವಾಗ ನಾನೇನು ಹೇಳಲಿ ಎಂಬ ಚಿಂತೆ ಕಾಡುತ್ತಿತ್ತು. ಹಾಗಾಗಿ ಆಕಳು ಎಲ್ಲರ ಕೈ ತಪ್ಪಿಸಿಕೊಂಡು ಓಡಿ ಹೋಗಲಿ ಎಂದೆ ಮನ ಬಯಸುತ್ತಿತ್ತು. ಆದರೆ ಅಲ್ಲಿಗೇ ಇರುವ ನಮ್ಮ ಫೆವರಿಟ್ ಕರುವಿನ (3-4 ತಿಂಗಳ ಕರುವಿದ್ದರೆ) ಸಿಂಗರಿಸಿದ ಸರವನ್ನು ಯಾರೂ ಹರಿಯದಂತೆ ಕಾಳಜಿ ವಹಿಸುತ್ತಿದ್ದೆವು.

ನಮ್ಮ ಮನೆಯ ಪೂಜೆಯ ನಂತರ ನಾವೂ ಬೇರೆ ಮನೆಗೆ ಪೂಜೆಗೆ ಹೋಗಿ ಅವರ ಮನೆ ಆಕಳ ಸರ ಹರಿಯುವ ಕಾಯಕಕ್ಕೆ ತೊಡಗುತ್ತಿದ್ದೆವು. ಆಗ ನಾನು ನರಪೇತಲನ ಹಾಗೆ ಇರುವುದರಿಂದ ಈ ಕಾರ್ಯದಲ್ಲಿ ತುಂಬಾ ಯಶಸ್ವಿ ಆಗುತ್ತಿರಲಿಲ್ಲ. ಆದರೂ ಬಾಳೆ ಹಣ್ಣಿನ ಸಿಪ್ಪೆ ಹಿಡಿದೋ, ಕೈಯಲ್ಲೊಂದು ಕೊಕ್ಕೆ ಹಿಡಿದೋ ಒಂದೆರಡು ಸರವನ್ನಾದರೂ ಹರಿಯಲು ಪ್ರಯತ್ನಿಸಿ, ಯಶಸ್ವಿಯಾಗುವುದೂ ಇತ್ತು.

ನಾನು ಸ್ವಲ್ಪ ದೊಡ್ಡವನಾದ ಮೇಲೆ ಪೂಜೆ ಮಾಡುವ ಕೈಂಕರ್ಯ ನನ್ನದೆ….. ತೊಳಸಿ ಪೂಜೆಯಾಗಲಿ, ಶಾರದಾ ಪೂಜೆಯಾಗಲಿ, ಗಂಟಿ ಪೂಜೆಯಾಗಲಿ….. ನನ್ನದೇ ಅದು. ಸ್ನಾನಕ್ಕೆ ಬಿಸಿನೀರು ಮಾಡಿಡುತ್ತಿದ್ದರು. ಸ್ನಾನ ಮಾಡಿ ಬರಬೇಕೆಂದು ಅಕ್ಕ. ಈ ಚಳಿಯಲ್ಲಿ ಅವನಿಗೇಕೆ ಸ್ನಾನ ಪೂಜೆಯನ್ನು ಹಾಗೆ ಮಾಡಲಿ ಬಿಡು ಅಂತ ಅಣ್ಣ.
ನನಗೋ ನನ್ನ ಪೂಜೆ ಮುಗಿಯುವುದರೊಳಗೆ ಪಕ್ಕದ ಮನೆಯ ತಂಗಿ, ತಮ್ಮ, ಜ್ಯೋತಿ ಎಲ್ಲಾ ಸೇರಿ ಮಾಡಿದ ತಿಂಡಿ ತಿಂದು ಖರ್ಚಾದರೆ? ತಂದ ಪಟಾಕಿಯನ್ನು ಹೊಡೆದು ಮುಗಿಸಿದರೆ ಎಂಬ ಚಿಂತೆ.

ಅಂತೂ ಪೂಜೆ ಪ್ರಾರಂಭವಾದರೆ ಆರತಿ ಕೈ ಮತ್ತು ಗಂಟೆ ಹಿಡಿದ ಕೈ ಎರಡು ಒಟ್ಟೊಟ್ಟಿಗೆ ತಿರುಗುತ್ತಿತ್ತು. ಗಂಟೆ ಹಿಡಿದ ಕೈ ಒಂದೆಡೆ ನಿಂತು ಆರತಿ ಹಿಡಿದ ಕೈ ದೇವರ ಮೂರ್ತಿಯ ಮೇಲೆ ಕೆಳಗೆ ಗೋಲಾಕಾರದಲ್ಲಿ ತಿರುಗುತ್ತಿರಲಿಲ್ಲ. ನಿಂತರೆ ಎರಡು ಕೈ ನಿಂತಿರುತ್ತಿತ್ತು. ತಿರುಗಿದರೆ ಎರಡು ಕೈ ತಿರುಗುತ್ತಿತ್ತು. ಆಗೆಲ್ಲ ಅಣ್ಣ ಪಕ್ಕದಲ್ಲಿ ಕೂತು ಗಂಟೆ ತೂಗುತ್ತಿದ್ದ. ನಾನು ಆರತಿ ಬೆಳಗುತ್ತಿದ್ದೆ. ಆರತಿ ಹಚ್ಚಿ ಕೊಡುವುದು, ಕಾಯಿ ಒಡೆದುಕೊಡುವುದು, ನೈವೇದ್ಯ ಮಾಡುವ ವಿಧಾನ ಹೇಳಿಕೊಡುವುದು ಇದೆಲ್ಲಾ ಅಣ್ಣನ ಕೆಲಸ. ನಾನು ಪೂಜಾರಿಯಾದಾಗ ಆತ ನನ್ನ ಸಹಾಯಕ ಪಡಿಚಾಕರಿಯಾಗುತ್ತಿದ್ದ. ಬಹುಶಃ ಇದು ಮೂರ್ನಾಕು ವರ್ಷ ನಡೆದ ನೆನಪು.

ದೀಪಾವಳಿಯೆಂದರೆ ಅಣ್ಣನಿಗೆ ತೀರಾಪ್ರೀತಿ. ಅಂದು ನಮ್ಮ ಕೈಯಲ್ಲಿ ದೀಪ ಹಚ್ಚಿಸುತ್ತಿದ್ದ. ಅವನಿಗೆ ಬೆಳಕು ಮತ್ತು ಬೆಳಕಿಗೆ ಸಂಬಂಧಿಸಿದ ಕ್ರಿಯೆಗಳೆಲ್ಲವೂ ಇಷ್ಟವೇ.

ಆಮೇಲೆ ನಾನೂ ಪೂಜೆ ಮಾಡುವುದು ಬಿಟ್ಟೆ. ಅಕ್ಕನೇ ಕೆಲವು ದಿನ ಪೂಜೆ ಮಾಡಿದಳು. ಕೆಲವು ದಿನ ಅಕ್ಕ ತನ್ನ ತಮ್ಮನನ್ನು ಕರೆಸಿ ಮಾಡಿಸಿದಳು. ಕ್ರಮೇಣ ಅದೂ ನಿಂತು ಹೋಯಿತು. ಹಬ್ಬ, ಹಬ್ಬದ ತಿಂಡಿ ಮಾತ್ರ ಯಾವ ತೊಡಕಿಲ್ಲದೇ ಮುಂದುವರಿಯಿತು.

‍ಲೇಖಕರು avadhi

September 22, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Lalitha Siddabasavaiah

    ಖುಷಿಯಾಗ್ತದೆ ಓದ್ತಾ ಇದ್ರೆ

    ಪ್ರತಿಕ್ರಿಯೆ
  2. ದೀಪಾ ಹಿರೇಗುತ್ತಿ

    ಚೆನ್ನಾಗಿದೆ. ಆಪ್ತ ಬರೆಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: