ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ನಾನೆ ಎಂದು..

ಚಂದ್ರು ಎಂ ಹುಣಸೂರು

ಅವನು ಸತ್ತು ಹೋಗಿದ್ದಾನೆ

ಸಾಗರಕಟ್ಟೆಯ ಅಂಚಿನ ನೀರು
ಅಜ್ಜಿಯೂರಿನ ದಣಿವಾರಿಸುತ್ತದೆ
ಟ್ರೇನು ಹಳಿಗಳ
ದಾಟಿ ಬಂದು
ಹಿಂದೊಬ್ಬ ಗೆಳೆಯ
ಕೆರೆಯ ನುಂಗುವಂತೆ
ದುಡುಮ್ಮನೆ ಹಾರುತ್ತಿದ್ದ
ಕೆರೆಯೇ ಅವನನ್ನು ಮತ್ತೆ ಮತ್ತೆ
ದಡ ಸೇರಿಸುತ್ತಿತ್ತು

ಎಂತದೊ ಪೋಲಿತನ
ಕೆಲಸಕ್ಕೆ ಬಾರದ ಜಗಳಕ್ಕೆಲ್ಲ
ಪೋಲೀಸ್ ಸ್ಟೇಷನ್ನಿಗೆ
ಗಿರಾಕಿಯಂತೆ
ಆಗಾಗ ಹೋಗಿ ಬರುತ್ತಿದ್ದ
ರಸ್ತೆಯಲ್ಲಿ
ಯಾರೊ ಇವನನ್ನು ಕೆಣಕಿದಂತೆ
ಅಂಗಿಯ ಮೊದಲೆರೆಡು ಗುಂಡಿ
ತೆರೆದುಕೊಂಡು
ಬೀಸುಗಾಲು ಹಾಕಿಕೊಂಡು
ಬಿರುಸಾಗಿ ನಡೆಯುತ್ತಿದ್ದ

ಮತ್ತೊಮ್ಮೆ ಸಿಗುವಾಗ ಅವನಿಗೆ ಮದುವೆಯಾಗಿತ್ತು
ಚೂರು ಮೈ ಕೈ ತುಂಬಿಕೊಂಡಂತೆ
ಹೊಸದಾಗಿ ನಗು‌
ಖರೀದಿಸಿದವನಂತೆ
ನಗುತ್ತಿದ್ದ
ಪುಟ್ಟ ಮಗುವಿನ
ಎಳಸು ಬೆರಳುಗಳ ಹಿಡಿದು
ಯಾವುದೊ ಲೋಕಕ್ಕೆ ಹೋಗುತ್ತಿದ್ದ

ಇನ್ನೊಂದು ಗಲಾಟೆಯಲ್ಲಿ
ಕಾಣಿಸಿಕೊಂಡರೂ
ರೌಡಿ ಶೀಟರ್ ನೀನು ಬೋಳಿಮಗನೆ
ಎಂದು ಪೋಲೀಸರು ಎಚ್ಚರ ಹೇಳಿದ್ದರು
ಇವನೇ ಮುಖ್ಯವಾಗಬೇಕಿದ್ದ
ಜಗಳಕ್ಕೆ ಇವ ಹೋಗದಂತೆ
ಅವನ ಹೆಂಡತಿ ಬುದ್ದಿ ಹೇಳಿ‌
ಕಿವಿ ಹಿಂಡಿ
ಮಗ್ಗುಲಲ್ಲಿ ಬಿಗಿದಪ್ಪಿ
ಮುದ್ದು ಮಾಡಿ
ಅವನನ್ನು ಕರಗಿಸಿಬಿಟ್ಟಳು
ನಾಲ್ಕು ವರ್ಷಗಳ ಹಿಂದೆ
ತಲೆ ಓಳಾಗಿ
ಬಿದ್ದ ಒಲಿಗೆಗಳ ಮೇಲೆ
ಅವಳ ಕೈ ಬೆರಳು ಆ ರಾತ್ರಿ
ಹೆಚ್ಚು ಓಡಾಡಿದವು

ಈಗಷ್ಟೆ ಅವನು
ಕನಸಿನಲ್ಲಿ ಬಂದು
ಮತ್ತದೇ ಗಲಾಟೆಯಲ್ಲಿ
ಬಟ್ಟೆಯಲ್ಲಾ ರಕ್ತವಾಗಿಸಿಕೊಂಡು
ತಾನು ಬದಲಾದಂತೆ ಇದ್ದವನಷ್ಟೆ
ನಾನು ನಾನೆ ಎಂದು
ಮೀಸೆ ತಿರುವುತ್ತಿದ್ದಾನೆ
ಎಚ್ಚರವಾಗಿ ಅವನ
ಕೊರಳ ಹಿಡಿದು
ಮಗುವಿನ ಬೆರಳುಗಳು
ಮತ್ತು
ಹೆಂಡತಿಯ ಬೆರಳುಗಳ
ಮರೆತೇಯೇನೊ
ಅನ್ನೋಣವೆಂದರೆ
ಕಳೆದ ವರ್ಷ
ನೇಣುಬಿಗಿದುಕೊಂಡು
ಅವನು ಸತ್ತು ಹೋಗಿದ್ದಾನೆ
ಕಾರಣ ಇನ್ನೂ ನನಗೆ ಗೊತ್ತಾಗಲೇ ಇಲ್ಲ

‍ಲೇಖಕರು Admin

28 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading