ನಾನು ತಿರಸ್ಕರಿಸಲಾಗದ 'ಟೈಪಿಸ್ಟ್ ತಿರಸ್ಕರಿಸಿದ ಕಥೆ'

ಟೈಪಿಸ್ಟ್ ತಿರಸ್ಕರಿಸಿದ ಕಥೆ ಶಿವಕುಮಾರ್ ಮಾವಲಿ ಅವರ ಕಥಾ ಸಂಕಲನ.
ಆಧುನಿಕ ಜಗತ್ತಿನ ತಲ್ಲಣಗಳನ್ನು ತಮ್ಮದೇ ಶೈಲಿಯಲ್ಲಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ.
ಮೊಬೈಲ್, ವಾಟ್ಸಾಪ್, ಫೇಸ್‍ಬುಕ್‍ಗಳಿಂದ ಆಗಬಹುದಾದ ಆಘಾತಗಳನ್ನು ಈ ಕಥಾ ಸಂಕಲನದಲ್ಲಿ ವಿವರಿಸಿದ್ದಾರೆ.
ಕವಿತಾ ಭಟ್ ಅವರು ಈ ಕೃತಿಯ ಬಗ್ಗೆ ವಿಮರ್ಶಿಸಿದ್ದಾರೆ..

   ಕವಿತಾ ಭಟ್

ಒಂದು ಕಥೆ ಓದಿ ನೆನಪಿನಲ್ಲುಳಿದ ಕಥೆಗಾರ ಶಿವಕುಮಾರ್ ಮಾವಲಿ. ಅವರ ಕಥಾಸಂಕಲನ ಹೊರ ಬಂದಾಗ ನವಕರ್ನಾಟಕ ಆನ್ಲೈನ್ನಲ್ಲಿ ತಡಕಾಡಿ ಆರ್ಡರ್ ಮಾಡಿದ್ದೆ. ಅವರ ಕಥೆಗಳನ್ನು ಮೆಚ್ಚಿ ನನ್ನ ಮುಂದೆ ಕೊಚ್ಚುವ ಸ್ನೇಹಿತ ಮಾತ್ರ ಇದನ್ನು ಕೇಳಿ ಕಿಡಿಕಿಡಿಯಾಗಿದ್ದ! ಆತುರ ಕಣೇ ನಿಂಗೆ, ನಾನು ಒಂದಿಷ್ಟು ಪುಸ್ತಕ ಒಟ್ಟಿಗೇ ಕಳಿಸ್ತಿದ್ದೆ.
ಸುಮ್ಮನೆ ನಲ್ವತ್ತು ರೂಪಾಯಿ ತೆತ್ತೆ ನೋಡು ಬರೀ ಒಂದು ಪೋಸ್ಟಿಗೆ ಅಂದಾಗ ಅಸ್ಸಲೂ ನನಗೆ ಕೇಳಿಸಿಯೇ ಇಲ್ಲವೆಂಬಂತೆ ಬೈಗುಳಗಳನ್ನ ಒರೆಸಿಕೊಂಡೆ. ಆಗಷ್ಟೇ ಮುದ್ರಣಗೊಂಡ ಹೊಸ ಪುಸ್ತಕಗಳ ಘಮಕ್ಕಾದರೂ ಹೀಗೆ ಆತುರಕ್ಕೆ ಬೀಳಬೇಕು ಬಿಡಿ.

ಶಿವಕುಮಾರ್ ಮಾವಲಿ


ಪುಸ್ತಕ ಕೈಗಿಟ್ಟ ಪೋಸ್ಟಿನವನು ನಗುತ್ತಾ ಮುಖಕ್ಕಿಡಿದ ಹಾಳೆಯ ಮೇಲೆ ನಾನು ಗೀಚಿದ ಸಹಿ ಬಹುಶಃ ಪೂರ್ತಿಯಾಗಿ ಆರಿರಲಿಕ್ಕಿಲ್ಲವೇನೋ ನಾನಿಲ್ಲಿ ಮೊದಲ ಕಥೆಯ ಅಥವಾ ಕಥೆಗಾರ ಸೃಷ್ಟಿಸಿದ ಪಾತ್ರಗಳೇ ಲೋಕದಲ್ಲಿ ಹುಟ್ಟಿಕೊಳ್ಳುತ್ತವೆಯೋ!? ಎಂಬ ಕೊನೆಯ ಸಾಲನ್ನು ಓದುತ್ತಿದ್ದೆ.!
ಹೌದು.. ನನಗೆ ಕಥೆಗಳ ಹುಚ್ಚು. ನನಗೆ ದಕ್ಕದ ಕಥೆಗಳನ್ನು ಇನ್ನೊಬ್ಬರಲ್ಲಿ ತಡಕುವ ಹುಚ್ಚು. ಇಷ್ಟೇ ಇಷ್ಟು ಸೋಕಿ ಹಿಡಿಯಬೇಕೆನ್ನುವಷ್ಟರಲ್ಲಿ ಹಾರಿ ಹೋದ ನನ್ನ ಕಥೆಗಳು ಮತ್ಯಾರೋ ಬರಹಗಾರನ ಹಾಳೆಗಿಳಿದದ್ದನ್ನು ಓದುವ ಹುಚ್ಚು. ಅದರಲ್ಲೂ ಸಣ್ಣ ಕಥೆಗಳೆಂದರೆ ಇನ್ನಿಲ್ಲದ ಹುಚ್ಚು. ಒಂದು ದೊಡ್ಡ ಕಾದಂಬರಿ ಹೇಳಬೇಕಿರುವುದನ್ನು ಒಂದು ಪುಟ್ಟ ಕಥೆಯೂ ಹೇಳಿಬಿಡಬಹುದು. ಬರಹಗಾರ ಸಶಕ್ತವಾಗಿ ಕಥೆ ಕಟ್ಟಿಕೊಡುವವನಾದರೆ, ಅವನು ಪಡೆದ ಹೊಸ ಅನುಭವಗಳನ್ನು ಓದುಗನಿಗೆ ಗಿಟ್ಟಿಸಿಕೊಡುವಂತಿದ್ದರೆ ಕಥೆಗಾರ ಗೆದ್ದಂತೆಯೇ. ಮಾವಲಿಯವರು ಕಥೆ ಹೇಳುವುದರಲ್ಲಿ ಗೆದ್ದಿದ್ದಾರೆ. ಅವರ ಕಥೆಗಳಿಗೆ ನಮ್ಮ ಕಥೆಗಳೂ ಆಗುವ ಖಾಸಾತನವಿದೆ.
ಇಂದಿನ ಯುವ ಜನತೆಯ ತಲ್ಲಣಗಳೇ ಅವರ ಕಥೆಗಳ ಒಟ್ಟಾರೆ ವಸ್ತು. ಹೇಳಬೇಕಿರುವುದನ್ನು ಎಲ್ಲೂ ಎಳೆದಾಡದ ಸರಳ ನಿರೂಪಣೆಯಲ್ಲಿ ತೆರೆದುಕೊಂಡ ಈ ಕಥೆಗಳನ್ನು ಓದುವಾಗ ಅರೇ! ಹೀಗೆ ನಾವೂ ಬರೆಯಬಹುದಿತ್ತಲ್ಲ, ಬರೆಯಬಹುದಲ್ಲ! ಎನ್ನಿಸದೇ ಇರದು. ಒಳಗೆ ಕಥೆಗಳಿದ್ದೂ ಹೊರ ಹಾಕಲು ತಿಳಿಯದೇ ಪರದಾಡುವ ಯುವ ಬರಹಗಾರರಿಗೆ ಮಾವಲಿಯವರ ಕಥೆಗಳು ಸ್ಫೂರ್ತಿಯಾದಾವು.
ಓಡಾಡುತ್ತಾ ಓದಿ ಬಿಡಬಹುದಾದ ಪುಟ್ಟ ಕಥೆಗಳಿವು. ನಾನು ಒಂದೇ ಸಲ ಹತ್ತು ಕಥೆಗಳನ್ನೂ ಓದಿದ್ದಿದೆ. ಹೀಗೇ ಓದಿದರೆ ನೆನಪಿನಲ್ಲಿ ಉಳಿದಾವಾ? ಎಂದರೆ, ನಾನಂತೂ ಉಳಿಯುವುದೇ ಬೇಡ ಎನ್ನುತ್ತೇನೆ. ಓದಿಯಾದ ಮೇಲೆ ಈ ಕಥೆಗಳ ಹಂಗಾದರೂ ಯಾಕಿರಬೇಕು ಅಲ್ವಾ? ಮರೆತದ್ದಕ್ಕೆ ಬೇಸರವಿಲ್ಲ, ನೆನಪಿನಲ್ಲುಳಿದು ಕಾಡುವ ಕಥೆಗಳ ಬಗ್ಗೆ ಚಿಂತೆಯಿಲ್ಲ. ಕಥೆಗಳನ್ನು ಓದುವಾಗ ಅವು ಸೃಷ್ಟಿಸುವ ಹೊಸ ಜಗತ್ತಿನಲ್ಲಿ ಮೈಮರೆಯುವ, ಪಾತ್ರಗಳ ಚಡಪಡಿಕೆಗಳನ್ನು ಅನುಭವಿಸುವ ಹಸಿತನ ಮನಸಿಗಿದ್ದರಾಯ್ತು.. ಒಟ್ಟಾರೆ ಚಂದದ ಓದು.

‍ಲೇಖಕರು avadhi

September 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Amba

    ಮಾವಲಿ ಅವರ ಕಥೆಗಳನ್ನು ನಾನು ಅವಧಿಯಲ್ಲಿ ಒದ್ದಿದ್ದೇ, ಮೆಚ್ಚಿದ್ದೆ. ಒಳ್ಳೆಯ ಕಥೆಗಳನ್ನು ಓದುವಾಗ ಓದುಗನಿಗೆ/ಓದುಗಳಿಗೆ ಆಗುವ ಅನುಭವ ಮತ್ತು ತೃಪ್ತಿಯನ್ನ ಕವಿತಾ ಭಟ್ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ ಅವರ ಬುಕ್ ರಿವ್ಯೂನಲ್ಲಿ. ಥ್ಯಾಂಕ್ಸ್ ಕವಿತಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: