ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಕನ್ನಡ ಮೇಷ್ಟ್ರಾಗಿದ್ದು…

ಕನ್ನಡ ಕಲಿಸುವ ಕಷ್ಟಗಳು

ಸೂರಿ ಹಾರ್ದಳ್ಳಿ


ಬೆಂಗಳೂರಿನಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಯೊಂದರ ತರಬೇತಿ ಕೇಂದ್ರದ ಅಧಿಕಾರಿಗಳೊಬ್ಬರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಹೊರ ರಾಜ್ಯದವರು ಮತ್ತು ಹೊರ ದೇಶದವರು ಕನ್ನಡ ಕಲಿಯಲು ಆಸಕ್ತಿ ತೋರಿದ್ದಾರೆ, ಯಾರಾದರೂ ಭೋಧಕರು ಸಿಗುತ್ತಾರೆಯೇ ಎಂದು ನನ್ನನ್ನು ಕೇಳಿದರು. ಕಂಪನಿಯಲ್ಲಿ ಜರ್ಮನಿಯೇ ಮೊದಲಾದ ವಿದೇಶೀ ಭಾಷೆಗಳನ್ನು ಕಲಿಸುವ ವ್ಯವಸ್ಥೆ ಇದ್ದರೂ ಹೊರ ರಾಜ್ಯಗಳಿಂದ ಮತ್ತು ಹೊರ ದೇಶಗಳಿಂದ, ಪ್ರಮುಖವಾಗಿ ಜರ್ಮನಿಯವರು. ಬಂದು ಕೆಲಸ ಮಾಡುತ್ತಿರುವ ಕನ್ನಡಾಸಕ್ತರು ಇದ್ದಾರೆ. ಸ್ಥಳೀಯರೊಡನೆ ವ್ಯವಹರಿಸುವಾಗ ಕನ್ನಡ ತಿಳಿದಿದ್ದರೆ ಉಪಯುಕ್ತ ಎಂಬುದು ಕಂಪನಿಯ ಧೋರಣೆಯಾದರೂ ಕೆಲವರಿಗೆ ಕನ್ನಡ ಕಲಿಯುವ ಕುತೂಹಲ, ಆಸಕ್ತಿಗಳಿದ್ದವು ಎಂಬುದು ತಿಳಿದು ಬಂತು. ಕನ್ನಡದವರೇ ಕನ್ನಡವನ್ನು ನಿರ್ಲಕ್ಷಿಸುವ ಈ ಕಾಲದಲ್ಲಿಯೂ ಕನ್ನಡ ಅಭ್ಯಾಸ ಮಾಡಲು ಬಯಸುವವರಿದ್ದಾರಲ್ಲಾ ಎಂದು ಸಂತೋಷವಾಯಿತು.
ನಂತರ ನಾನು ಕನ್ನಡವನ್ನು ಕಲಿಸುವ ಉಪಾಧ್ಯಾಯರು ಎಲ್ಲೆಲ್ಲಿ ಇದ್ದಾರೆ ಎಂದು ಹುಡುಕತೊಡಗಿದೆ. ಇಂಟರ್ನೆಟ್ಗಳಲ್ಲಿ ಹಲವರು ತಮ್ಮ ಹೆಸರುಗಳನ್ನು ದಾಖಲಿಸಿದ್ದರು. ಆದರೆ ಅವರ ಅರ್ಹತೆಗಳ ಬಗ್ಗೆ ಸರಿಯಾದ ವಿವರಗಳು ಸಾಲವು. ರಾಜ್ಯ ಸರಕಾರದ ಅಧೀನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ ಹೋಗಿ ವಿವರ ಸಂಗ್ರಹಿಸಿದೆ. ಅವರು ಬೋಧಕ ತರಬೇತಿ ನೀಡುತ್ತಾರೆ ಮತ್ತು ಆಸಕ್ತ ಸಂಸ್ಥೆಗಳು ಅರ್ಜಿ ಸಲ್ಲಿಸಿದರೆ ಬೋಧಕರನ್ನು ಒದಗಿಸುವರಲ್ಲದೇ, ಶುಲ್ಕವನ್ನು ಇಲಾಖೆಯವರೇ ಕೊಡುತ್ತಾರೆ ಎಂದು ತಿಳಿಯಿತು. ಕಲಿಕೆಯ ಅವಧಿ ಮೂರು ತಿಂಗಳು, ವಾರಕ್ಕೆ ಆರುಗಂಟೆ. ಕಂಪನಿಗೆ ಇದು ಬಹು ದೀರ್ಘ ಅವಧಿ ಎನಿಸಿತು.
ಆದರೆ ನನಗೆ ಅನಧಿಕೃತವಾಗಿ ನನಗೆ ತಿಳಿದು ಬಂದಿದ್ದೆಂದರೆ ಅನೇಕ ಬೋಧಕರು ಬರೀ ಶುಲ್ಕಕ್ಕಾಗಿ ಹೇಳಿಕೊಡುವ ಶಾಸ್ತ್ರ ಮಾಡುತ್ತಾರೆ, ಕಲಿಕಾರ್ಥಿಗಳಿಗೂ ಅದೇ ಬೇಕು. ಅವರಿಗೆ ಕನ್ನಡ ಕಲಿಯುವುದಕ್ಕಿಂದ ಕಲಿತಿದ್ದೇನೆ ಎಂಬು ಪ್ರಮಾಣ ಪತ್ರ ಸಾಕು. ಇವರಲ್ಲಿ ಬಹು ಮುಖ್ಯವಾಗಿ ಸರಕಾರಿ ಅಧಿಕಾರಿಗಳು, ಎಂಬುದು. ಇದು ಸತ್ಯವೋ ಅಲ್ಲವೋ ತಿಳಿಯದು. ಆದರೆ ನನ್ನ ಕಂಪನಿಯು ಉತ್ಕೃಷ್ಟ ಗುಣಮಟ್ಟದ ವಸ್ತುಗಳಿಗೂ ತರಬೇತಿಗಳಿಗೂ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ. ನಾನು ಸರಕಾರ ಹೊರತಾದ ಮೂಲಗಳಿಂದ ಯಾರಾದೂ ಶಿಕ್ಷಕರು ಸಿಗುತ್ತಾರೆಯೇ ಎಂದು ಪರಿಶೀಲಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತರಬೇತಿ ಪಡೆದ ಇಬ್ಬರನ್ನು ಸಂಪರ್ಕಿಸಿ ಈ ಕಂಪನಿಯ ಉದ್ಯೋಗಿಗಳಿಗೆ ಪಾಠ ಹೇಳಿಕೊಡುವಿರಾ ಎಂದು ಕೇಳಿದೆ.
ಶುಲ್ಕದ ಮತ್ತು ಸೌಲಭ್ಯಗಳ ವಿಷಯದಲ್ಲಿ ಸಹಮತಕ್ಕೆ ಬರಲು ಆಗದ್ದರಿಂದ ಕಂಪನಿಯ ಅಧಿಕಾರಿಯವರು ಮತ್ತೆ ನನ್ನನ್ನು ಸಂಪರ್ಕಿಸಿ ನೀವೇ ಪಾಠ ಮಾಡಬಲ್ಲಿರಾ ಎಂದು ಕೇಳಿದರು. ಕಂಪನಿಯ ಕನ್ನಡ ಗೃಹಪತ್ರಿಕೆಯನ್ನು ಹದಿನಾಲ್ಕು ವರ್ಷಗಳ ಕಾಲ ಏಕೈಕವಾಗಿ ನಡೆಸಿದ, ಪತ್ರಿಕೆಗಳಿಗೆ ಕತೆ-ಹಾಸ್ಯಲೇಖನಗಳನ್ನು ಬರೆದ ಹಿನ್ನೆಲೆಯಿತ್ತು ನನಗೆ. ನಾನು ಎಂದೂ ಬೋಧಿಸುವ ಶ್ರಮ ತೆಗೆದುಕೊಂಡಿರಲಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಹೇಳಿಕೊಡುವುದು ಪುಸ್ತಕದಲ್ಲಿರುವುದನ್ನು ಹೇಳಿಕೊಡುವುದು ಮಾತ್ರ. ಇದೊಂದು ಸವಾಲು ನನಗೆ. ಹಾಗಾಗಿ ಕ್ಷಣದಲ್ಲಿ ಒಪ್ಪಿಕೊಂಡೆ.. ಆದರೆ ಅದು ಸಾಕೇ ಎಂಬ ಅಳುಕೂ ಇತ್ತು. ಹೀಗೆ ತರಗತಿಗಳನ್ನು ನಡೆಸಿದವರು ನನಗೆ ಸಹಾಯ ಮಾಡಿಯಾರು ಎಂಬ ಭರವಸೆಯೂ ಇತ್ತು, ನಿಗದಿತ ವಿಧಾನವೇ ಇಲ್ಲ ಎಂದು ತಿಳಿದಾಗ ನನಗೆ ನಿರಾಸೆಯಾಯಿತು ಕೂಡಾ.
ಮೊದಲನೆಯದು ಕಲಿಸುವ ಅವಧಿ. ಬರೀ ಮಾತನಾಡಲು ಹೇಳಿಕೊಡಬೇಕೇ ಅಥವಾ ಬರೆಯಲು ಮತ್ತು ಓದಲು ಕಲಿಸಬೇಕೇ ಎಂಬುದು ಎರಡನೆಯ ಪ್ರಶ್ನೆ. ಮಾತನಾಡುವುದಕ್ಕೆ ಹೇಳಿಕೊಡುವುದೆಂಧರೆ ಬಾಯಿ ಪಾಠ ಮಾಡಿಸುವುದು. ಆಗ ಸವಾಲಾಗುವುದು ಬರೆಹದ, ಮಾತಿನ ಪ್ರಕಾರಗಳ ನಡುವೆ ತಾಕಲಾಟ. ಅಲ್ಪ ಪ್ರಾಣ, ಮಹಾಪ್ರಾಣ, ದೀರ್ಘ-ಹೃಸ್ವಗಳ ಸ್ಪಷ್ಟತೆ ಇರುವುದಿಲ್ಲ. ಶ, ಷ, ಸ, ಗಳ ವ್ಯತ್ಯಾಸ ಮಾತಿನಲ್ಲಿ ಸ್ಫುಟವಾಗಿರುವುದಿಲ್ಲ. ಹಾಗಾಗಿ ನಾನು ಅಕ್ಷರಗಳನ್ನು ಕಲಿಸುವ ವಿಧಾನವನ್ನು ಆರಿಸಿಕೊಂಡೆ. ಮಾತನಾಡುತ್ತೇನೆ, ಮಾತಾಡ್ತೀನೆ/ನಿ, ಮಾತನಾಡ್ತೀನೆ/ನಿ, ಮಾತನ್ನು ಆಡುತ್ತೇನೆ/ನಿ, ಮಾತಾಡ್ತೆ, ಈ ಉಚ್ಚಾರ ಕ್ರಮಗಳು ಅವರನ್ನು ಗೊಂದಲದಲ್ಲಿ ದೂಡುವುದು ಸಹಜ. ಮೊತ್ತ ಮೊದಲು ಕನ್ನಡದ ಬಗ್ಗೆ ಅವರಿಗೆ ಪ್ರೀತಿ ಹುಟ್ಟುವಂತೆ ಮಾಡಬೇಕು. ಪ್ರೀತಿ ಬಂದರೆ ಕಲಿಕೆಯ ದಾರಿ ಸುಲಭವೂ ಸರಳವೂ ಆಗುತ್ತದೆ. ಕಂಪನಿಯ ಸ್ಥಳ ಬೆಂಗಳೂರಾಗಿದ್ದರಿಂದ ಬೆಂಗಳೂರಿನ ಮಾತಿನ ಪ್ರಕಾರಕ್ಕೆ ನಾನು ಆದ್ಯತೆ ಕೊಟ್ಟೆ.
ವಿವಿಧ ರಾಜ್ಯಗಳಿಂದ ಬಂದವರಿಗೆ ಅವರ ಮಾತೃಭಾಷೆಗಳ ವಿಧಾನವೇ ವಿಭಿನ್ನವಾಗಿರುತ್ತವೆ. ತಮಿಳಿನಲ್ಲಿ ಮಹಾಪ್ರಾಣಗಳಿಲ್ಲ, ಪ್ರತ್ಯೇಕ ಅಕ್ಷರಗಳು ಇದ್ದರೂ ಸ ವನ್ನು ಚ ಎಂತಲೂ, ಹ ವನ್ನು ಗ ಎಂತಲೂ ಉಚ್ಚರಿಸುತ್ತಾರೆ. ಹಿಂದಿಯಲ್ಲಿ ಳ, ಏ ಮತ್ತು ಓ ಅಕ್ಷರಗಳಿಲ್ಲ. ಅದನ್ನು ಅವರಿಗೆ ತಿಳಿಸುವುದು ಹೇಗೆ? ಹಾಗಾಗಿ ನಾನು ಆರಿಸಿಕೊಂಡ ಮಾಧ್ಯಮ ಇಂಗ್ಲಿಷ್. ಕನ್ನಡ ಅಕ್ಷರಗಳನ್ನು ಇಂಗ್ಲಿಷಿನಲ್ಲಿ ಬರೆದು ತೋರಿಸುವ ವಿಧಾನ ಯಾವುದು?
ಬೇಕಾದ ವಿಷಯಗಳನ್ನು ಅರಸತೊಡಗಿದೆ. ಪುಸ್ತಕದ ಅಂಗಡಿಗಳಿಗೆ ಅಲೆದು ಅನೇಕ ಪುಸ್ತಕಗಳನ್ನು ಖರೀದಿಸಿದೆ. ಗ್ರಂಥಾಲಯಗಳನ್ನು ಸುತ್ತಿ ಹೊತ್ತಗೆಗಳನ್ನು ಗರ್ಭ ಜಾಲಾಡಿದೆ. ಇಂಟರ್ನೆಟ್ಗಳನ್ನು ಹೊಕ್ಕು ಯಾವುದಾದರೂ ವಿಧಾನಗಳು ದೊರಕುತ್ತವೆಯೇ ಎಂದು ಪರಿಶೀಲಿಸಿದೆ. ಆದರೆ ನನಗೆ ಆಘಾತವಾಗಿದ್ದು ಏನೆಂದರೆ ಎಲ್ಲಿಯೂ ಏಕಪ್ರಕಾರದ ಸೂತ್ರವಿಲ್ಲ ಎಂಬುದು. ಅವುಗಳನ್ನು ರಚಿಸಿದವರಿಗೆ ಕನ್ನಡದ ಮೂಲಭೂತ ಪರಿಚಯವೂ ಇರಲಿಕ್ಕಿಲ್ಲ ಎಂಬುದು ನನಗೆ ಅರಿವಾಯಿತು. ಸರಿಗಳ ಬದಲಾಗಿ ತಪ್ಪುತಳ ರಾಶಿಯೇ ಅನೇಕ ಎಂಬುದು ನಾನು ಕಂಡುಕೊಂಡ ಆಘಾತಕಾರಿ ಸತ್ಯ.
ಒಂದು ಪುಸ್ತಕದಲ್ಲಿ ಅಕ್ಷರಗಳನ್ನು ಹೇಗೆ ಉಚ್ಚರಿಸಬೇಕೆಂದು ಇಂಗ್ಲಿಷಿನಲ್ಲಿ ಬರೆದುದು ತಮಾಷೆಯಾಗಿತ್ತು ಮಾತ್ರವಲ್ಲ, ಸಿಟ್ಟು ಬರೆಸುವಂತಿತ್ತು. ‘ನಾಲಿಗೆಯನ್ನು ತಿರುವಿ ಮೇಲಿನ ದವಡೆಗೆ ಮುಟ್ಟಿಸಿ ಗಾಳಿಯನ್ನು ಊದಿದರೆ ‘ಡ’ ಅಕ್ಷರವನ್ನು ಹೊರಡಿಸಬಹುದು,’ ಎಂಬುದದಾಗಿತ್ತು. ಇಂತಹ ‘ಭಯಂಕರ’ ದೋಷಗಳು ಕಂಡು ಬಂದು ನಾನು ಕರುಬಿದೆ. ಮುಖ್ಯವಾಗಿ ಕನ್ನಡ ಅಕ್ಷರಗಳನ್ನು ಆಂಗ್ಲ ಭಾಷೆಯಲ್ಲಿ ಬರೆಯುವುದು ಹೇಗೆ ಎಂಬುದು ನನ್ನ ಮೊದಲ ಸಮಸ್ಯೆಯಾಗಿತ್ತು. ಅದರಲ್ಲಿಯೂ ಕನ್ನಡದ ಡ, ಳ, ಣ, ಷ, ಙ, ಞ, ಇವುಗಳನ್ನು ಬರೆಯುವುದು ಹೇಗೆ? ಒಂದು ಇಂಗ್ಲಿಷ್ ಪದದ ಮೂಲಕ ಅವುಗಳ ಉಚ್ಚಾರಣೆಯನ್ನು ತಿಳಿಸಬೇಕಿತ್ತು. ಇಂಟರ್ನೆಟ್ಗಳಲ್ಲಿ ಬರೆದಿರುವುದಂತೂ ಹೇಸಿಗೆ ಹುಟ್ಟಿಸುವಂತಿತ್ತು. ಉದಾಹರಣೆಗೆ ಬೆಂಗಳೂರು ಬ್ಲಾಗ್ನಲ್ಲಿ ಪದಗಳ ಅರ್ಥಗಳನ್ನು ಹೀಗೆ ಬರೆಯಲಾಗಿತ್ತು:
ಹೇಗೆ – hege
ಸ್ನೇಹಿತ – snehitra
ಇದ್ದೀರಾ – iddir
ಧನ್ಯವಾದಗಳು – dhanyavadu
ಇದ್ದೀನಿ – iddini
ತಗೊ – tago
ಹೇಳು – helu
ಯಾವಾಗ – yevag
ನನಗೆ – nannige

ಸ್ವರ ಋವನ್ನು ಹೇಗೆ ಬರೆಯಬೇಕೆಂಬುದರ ಬಗ್ಗೆ ಎಲ್ಲಿಯೋ ಒಮ್ಮತವಿಲ್ಲ. ಕೆಲವರು ಕೃಷ್ಣ ಎನ್ನುವುದನ್ನು Krshna, krishna, krushhna ಎಂದೆಲ್ಲಾ ಬರೆದಿದ್ದರು. ಹೀಗೆ ಪಟ್ಟಿ ಸಾಗುತ್ತದೆ. ಹೇಳು ಎನ್ನುವುದನ್ನು ಹೇಲು ಎಂದು ಓದಬಹುದೆಂಬುದೂ ಇದನ್ನು ಬರೆದವರಿಗೆ ಯಾಕೆ ಹೊಳೆಯಲಿಲ್ಲವೋ ಕಾಣೆ. ಕನ್ನಡದ ಅಕ್ಷರಗಳನ್ನು ಕಂಪ್ಯೂಟರ್ ಕೀಬೋರ್ಡ್ಡಗೆ  ಅಳವಡಿಸುವ ವಿಧಾನದಲ್ಲಿ ಕೂಡಾ ಹಲವಾರು ರೀತಿಗಳನ್ನು ನಾವು ಕಾಣಬಹುದು. ನುಡಿ, ಬರೆಹ, ಶ್ರೀಲಿಪಿ, ಪುಸ್ತಕ, ತುಂಗಾ, ಇವೆಲ್ಲಾ ಒಂದು ನಿರ್ಧಿಷ್ಟ ಕ್ರಮದಲ್ಲಿ ಕೀಬೋರ್ಡ್ಡ ಬಳಕೆಯನ್ನು ತಿಳಿಸಿಲ್ಲ. ಇಂದಿಗೂ ಕೆಲ ಸಾಫ್ಟ್ವೇರ್ಗಳು ಪೂ, ಹೂ, ಎಂದೇ ಬರೆಯುತ್ತವೆ. ವಿಸರ್ಗ ಮತ್ತು ಕೊಲನ್ಗಳನ್ನು ಒಂದೇ ರೀತಿಯಲ್ಲಿ ಬಳಸುತ್ತಾರೆ.
languageshome ಎಂಬ ನೆಟ್ ಪರಿಶೀಲಿಸಿದೆ. ಅಲ್ಲಿ ‘a’ ಎಂಬುದಕ್ಕೆ ‘ವಂದು’, ‘came’ ಎಂಬುದನ್ನು baandha ಎಂದೂ, ‘come’ ಎಂಬುದನ್ನು ‘barithene’ ಎಂದು ಬರೆದಿದೆ ಎಂಬುದು ಕೆಲ ಉದಾಹರಣೆಗಳಷ್ಟೇ. ಈ ಯಾವುದೇ ಕ್ರಮವೂ ಸಮರ್ಪಕವಾಗಿಲ್ಲ ಎನಿಸಿತು. ನಾನೇ ಒಂದು ವಿಧಾನ ಅಳವಡಿಸಿಕೊಂಡರೆ ಹೇಗೆ? ಅದು ನನ್ನ ಮೊದಲ ಪ್ರಾಶಸ್ತ್ಯವಾಯಿತು.
 

ನಂತರ ಇದನ್ನು ಕಂಪ್ಯೂಟರಿಗೆ ಅಳವಡಿಸಿಕೊಳ್ಳುವ ಕೆಲಸ. ಸಹಜವಾಗಿಯೇ ಎಂ.ಎಸ್.ನ ಪವರ್ಪಾಯಿಂಟ್ ಆರಿಸಿಕೊಂಡೆ. ಎಲ್ಲಾ ಸರಿಯಾಗಿ ಮುಂದುವರಿದರೂ ಆ ಸಾಫ್ಟ್ವೇರ್ನಲ್ಲಿ ಕನ್ನಡದ ಬ, ಭ ಮತ್ತು ಶ ಅಕ್ಷರಗಳನ್ನು ಟೈಪ್ ಮಾಡಿದರೆ ಇನ್ನೇನೋ ಅಕ್ಷರಗಳನ್ನು ತೋರಿಸಲು ಶುರುಮಾಡಿತು. ‘ನುಡಿ’ಯನ್ನು ಮತ್ತೊಮ್ಮೆ ಇನ್ಸ್ಟಾಲ್ ಮಾಡಿದೆ, ಉಪಯೋಗವಾಗಲಿಲ್ಲ. 2003 ಆವೃತ್ತಿಯ ಎಂ.ಎಸ್. ವಡರ್್ ಅನ್ನು 2007ರ ಆವೃತ್ತಿಗೆ ಏರಿಸಿದೆ. ಫಲ ಶೂನ್ಯ. ಎರಡು ಭಾಷೆಗಳನ್ನು ಟೈಪಿಸುವುದೂ ಸುಲಭವಾಗಲಿಲ್ಲ. ಒಂದು ಸಾಫ್ಟ್ವೇರ್ನಿಂದ ಇನ್ನೊಂದಕ್ಕೆ ಕಾಪಿ ಮಾಡಿ ಅಂಟಿಸಿದರೂ ಹೊಸ ಹೊಸ ಸಮಸ್ಯೆಗಳ ಉದ್ಭವಿಸಿದವೇ ವಿನಃ ಸಮಸ್ಯೆ ಪರಿಹಾರವಾಗಲಿಲ್ಲ.
ಕೊನೆಗೆ ಎಕ್ಸೆಲ್ ಮೊರೆಹೋದೆ. ಒಂದು ಕಾಲಂ ಅನ್ನು ಕನ್ನಡಕ್ಕಾಗಿಯೇ ಬಳಸಿಕೊಂಡೆ, ಇನ್ನೆರಡನ್ನು ಕನ್ನಡ ಪದಗಳನ್ನು ಇಂಗ್ಲಿಷಿನಲ್ಲಿ ಬರೆಯುವುದು ಹೇಗೆ ಮತ್ತು ಸೂಕ್ತ ಇಂಗ್ಲಿಷ್ ಪದಗಳು ಯಾವುವು ಎಂಬುದನ್ನು ಸೂಚಿಸಲು ಉಪಯೋಗಿಸಿಕೊಂಡೆ. ಟೈಪಿಸುವುದು ಸುಲಭವಾಯಿತು. ಆದರೆ ಎಕ್ಸೆಲ್ ಕೂಡಾ ಕನ್ನಡಸ್ನೇಹಿ ಆಗಿರಲಿಲ್ಲ. ಅರ್ಧಾಕ್ಷರ ಒತ್ತಿದಾಗ ಹಿಂದಿನ ಅಕ್ಷರ ಎರಡು ಬಾರಿ ಕಾಣಿಸಿಕೊಳ್ಳುತ್ತಿತ್ತು. ಎಂ.ಎಸ್. ವರ್ಡ್ ನಲ್ಲಿ ಆಟೊ ಕರೆಕ್ಟ್ ನಿಷ್ಕ್ರಿಯಗೊಳಿಸಿಕೊಂಡು ಬರೆದಾಗ ಪರವಾಗಿಲ್ಲ ಎನಿಸಿದರೂ ಪ್ರೊಜೆಕ್ಷನ್ ಪ್ರೆಸೆಂಟೇಶನ್ಗೆ ಆ ಸಾಫ್ಟ್ವೇರ್ ಸಮರ್ಪಕವಾಗಿರಲಿಲ್ಲ.
ಕೊಟ್ಟ ಕೊನೆಗೆ ನಾನು ಮೊರೆಹೋಗಿದ್ದು ಪೇಜ್ಮೇಕರ್ ಸಾಫ್ಟ್ವೇರ್ಗೆ. ಅದರಲ್ಲಿ ಟೈಪ್ ಮಾಡಿ ಪಿಡಿಎಫ್ಗೆ ವರ್ಗಾಯಿಸಿಕೊಂಡಾಗ ಒಂದು ಸಮಸ್ಯೆ ಪರಿಹರಿದಂತಾಯಿತು.
ನನಗೆ ಅಚ್ಚರಿಯೆಂದರೆ ಈ ಪ್ರಕಟಣೆಯನ್ನು ಕಂಡಾಗ ಇಷ್ಟೊಂದು ಜನ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರಲ್ಲ, ಎಂಬುದು. ನಾನು ಎದುರಿಸಬೇಕಾದ ವಿಷಯವೆಂದರೆ ಆ ಸಂಖ್ಯೆಯನ್ನು ಉಳಿಸಿಕೊಳ್ಳುವುದು, ಅದಕ್ಕಾಗಿ ಪಾಠವನ್ನು ಎಲ್ಲಿಯೂ ಬೋರ್ ಆಗದಂತೆ ಹೇಳಿಕೊಡುವುದು. ಕನ್ನಡವನ್ನು ಇತರ ಭಾಷೆಗಳಿಗೆ ಹೋಲಿಸಿ, ವೈರುಧ್ಯಗಳನ್ನು, ವಿಶೇಷತೆಗಳನ್ನು ಗುರುತಿಸಿಕೊಂಡೆ. ಭಾಷೆಗಳಿಗೆ ಸಂಬಂಧಿಸಿದ ಜೋಕುಗಳನ್ನು ಗುರುತಿಸಿಕೊಂಡೆ. ಪಂಕ್ಚುವೇಶನ್ ಮಾರ್ಕುಗಳು ಬದಲಾದರೆ ವಾಕ್ಯಗಳ ಅರ್ಥ ಹೇಗೆ ಬದಲಾಗುತ್ತವೆ ಎಂಬುದನ್ನು ಹೇಳಿದೆ. ಹೀಗೆ ಪಾಠವನ್ನು ಆಕರ್ಷಕಗೊಳಿಸಲು ಯತ್ನಿಸಿದೆ.
ನಾನು ಪಾಠವನ್ನು ಆರಂಭಿಸಿದ್ದು, ನಮ್ಮ ದೇಶದ ಭಾಷೆಗಳ ಬಗ್ಗೆ,  ಕರ್ನಾಟಕದ ಮುಖ್ಯ ಭಾಷೆ, ಉಪಭಾಷೆಗಳು, ಅವುಗಳ ಚರಿತ್ರೆ, ಕನ್ನಡದ ಹಿರಿಮೆ, ಇವುಗಳ ಬಗ್ಗೆ. ನಂತರ ಕನ್ನಡ ಅಕ್ಷರಗಳನ್ನು ಓದುವುದು ಹೇಗೆ, ಇಂಗ್ಲಿಷಿನಲ್ಲಿ ಬರೆಯುವುದು ಹೇಗೆ ಎಂದು ತೋರಿಸಿಕೊಟ್ಟೆ. ಇಲ್ಲಿ ಲ, ಳ, ಡ, ದ, ನ, ಣ, ಇವುಗಳ ಗೊಂದಲ ಆಗದಂತೆ ನೋಡಿಕೊಂಡೆ.
ನಂತರ ಕನ್ನಡ ಅಕ್ಷರಗಳನ್ನು ಒದುವುದು ಹೇಗೆ ಎಂದು ತಿಳಿಸಿದೆ. ಮನೆಯೊಳಗೆ, ಕಚೇರಿಯಲಿ, ತರಕಾರಿ ಅಂಗಡಿಗಳಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಮತ್ತು ಕನ್ನಡ ಅಕ್ಷರಗಳನ್ನು ಮೇಲೆ ಕಾಣಿಸಿದ ವಿಧಾನದಲ್ಲಿ ಇಂಗ್ಲಿಷಿನಲ್ಲಿ ಬರೆದು ತಿಳಿಸಿದೆ. ನಮ್ಮ ಸುತ್ತಮುತ್ತಲಲ್ಲಿ ಜನರು ಬಳಸುವ ಪದಗಳನ್ನು, ಅವುಗಳನ್ನು ಹೋಲುವ ಪದಗಳನ್ನು ಪರಿಚಯಿಸಿದೆ. ಉದಾಹರಣೆಗೆ ಅಂಗಿ ಕಳಚು, ತೊಡು, ಹಾಕಿಕೊಳ್ಳು, ತೆಗೆ, ಬಾಗಿಲು ತೆರೆ, ಕೀಲಿಕೈ ತೂರಿಸು, ಡಬ್ಬ ತೆಗೆ, ಕೋಡುಬಳೆ ಕಡಿ, ಅಗಿ, ನುಂಗು, ಉಗುಳು, ಕಾಫಿ ಕುಡಿ, ಚಪ್ಪರಿಸು, ಗಲಬರಿಸು, ಮುಕ್ಕಳಿಸು, ಹೀಗೆ ಸಂಬಂಧಿತ ಪದಗಳನ್ನು ಪರಿಚಯಿಸಿದೆ. ನಂತರ ಚಾರ್ಟ್  ಒಂದನ್ನು ತಯಾರಿಸಿ ಕ್ರಿಯಾ ಪದಗಳ ಭೂತ, ವರ್ತಮಾನ, ಭವಿಷ್ಯ ಮತ್ತು ನಿರಂತರ ಕಾಲಗಳ ರೂಪಾಂತರವನ್ನು ಹೇಳಿಕೊಟ್ಟೆ. ಅವುಗಳ ಜೊತೆಗೇ ಲಿಂಗ ಪರಿವರ್ತನೆ, ಏಕವಚನ, ಬಹುವಚನಗಳನ್ನೂ ತಿಳಿಸಿದೆ.
ಮಾತ್ರಾಗಣಗಳು, ಸಂಧಿ-ಸಮಾಸಗಳು, ಪ್ರಥಮ-ದ್ವಿತೀಯ-ತೃತೀಯ ಪುರುಷಗಳು, ಕನ್ನಡದ ಅಂಕೆ-ಸಂಖ್ಯೆಗಳು, ವಾಕ್ಯಗಳ ವಿವಿಧ ರೂಪಗಳು, ಸಂಯುಕ್ತ ವಾಕ್ಯಗಳು, ಇವನ್ನೂ ತಿಳಿಸಿದೆ. ತರಗತಿಯ ಕೊನೆಯ ಹತ್ತು ನಿಮಿಷ ಪ್ರಶ್ನೆ-ಉತ್ತರಗಳಿಗಾಗಿ ಮೀಸಲಿಟ್ಟು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದೆ. ಕನ್ನಡದಲ್ಲಿ ಬಳಸುವ ಅರ್ಥಹೀನ ಪದಗಳನ್ನೂ ವಿವರಿಸಿದೆ. ಉದಾಹರಣೆಗೆ ಮದುವೆ-ಗಿದುವೆಯಲ್ಲಿ ಗಿದುವೆ, ಸಾಲ-ಸೋಲಗಳಲ್ಲಿ ಸೋಲ, ಹರಕು-ಪರಕುಗಳಲ್ಲಿ ಪರಕು, ಇತ್ಯಾದಿ. ಅಂತೂ ಕೊನೆಯವರೆಗೆ ಅವರಲ್ಲಿ ಭಾಷೆಗಳ ಬಗ್ಗೆ ಆಸಕ್ತಿ ಉಳಿಸಿಕೊಂಡೆ.
ಕನ್ನಡ ಭಾಷೆಯನ್ನು ಕಲಿಯುವವರಿಗೆ ಸಮಗ್ರವಾದ ಬೋಧನಾ ವಿಧಾನವನ್ನು ರೂಪಿಸುವುದು ಅತೀ ಅವಶ್ಯಕ. ಇಲ್ಲವಾದರೆ ಸರಿಗಿಂತಲೂ ತಪ್ಪನ್ನು ಕಲಿಯುವವರೇ ಜಾಸ್ತಿ ಆಗಿ, ತಪ್ಪನ್ನು ಬೇರೆಯವರು ಲೇವಡಿ ಮಾಡತೊಡಗಿ, ಈ ಕನ್ನಡದ ಸಹವಾಸವೇ ಬೇಡ ಎನಿಸುವುದೇ ಜಾಸ್ತಿ. ಅದಕ್ಕೆ ಬಾಲಂಗೋಚಿಯಾಗಿ ಕನ್ನಡ ಒಂದು ಕಠಿಣ ಭಾಷೆ ಎಂದೂ ಹೇಳುವವರಿದ್ದಾರೆ. ಇದು ಸರಿಯಲ್ಲ, ಸುಲಭವಾಗಿ ಹೇಳಿದರೆ ಕನ್ನಡ ಕಲಿಕೆ ಒಂದು ಆನಂದ. ನಾನು ನನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ ದಯವಿಟ್ಟು ಕನ್ನಡ ವಾರ್ತಾ ವಾಹಿನಿಗಳನ್ನು ನೋಡಬೇಡಿ, ನಿಮ್ಮ ಕನ್ನಡ ಹಾಳಾಗುತ್ತದೆ, ಎಂದು. ದುಂಡಿರಾಜ್ರವರ ‘ಕನ್ನಡವ ಕಾಪಾಡಿ ಕನ್ನಡಿಗರಿಂದ’ ಎಂಬುದು ನನ್ನ ನೆನಪಿಗೆ ಬಂತು.
ಮುಂದೊಂದು ಕಾಲ ಕನ್ನಡದ ಸೊಗಡನ್ನು ಕಂಡ ವಿದೇಶೀಯರು ಅದನ್ನು ಪ್ರಕಟಿಸಿದರೆ ಮತ್ತೆ ಕನ್ನಡಿಗರಲ್ಲಿ ಕನ್ನಡ ಕಲಿಯುವ ಉತ್ಸಾಹ ಬರುತ್ತದೋ ಏನೋ ಕಾಣೆ. ಅಥವಾ ನಶಿಸುತ್ತಿರುವ ಭಾಷೆಗಳ ಪಟ್ಟಿಗೆ ಕನ್ನಡವೂ ಸೇರುತ್ತದೋ ಏನೋ!
 

‍ಲೇಖಕರು G

10 October, 2013

3 Comments

  1. Aravind

    This is a very nice write-up.

    • Soory Hardalli

      Thank you.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading