'ನಾನು ಇಲ್ಲೇ ಓದಿದ್ದು ಸಾರ್' ಅಂದೆ…

Swarna-20150627_002735-150x15011

ಸ್ವರ್ಣ ಎನ್ ಪಿ

A child’s life is like a piece of paper on which every person leaves a mark – Chinese Proverb

ದಶಕಗಳ ನಂತರ ಶಾಲೆಗೆ ಭೇಟಿಯಿತ್ತು ಆಗಬೇಕಾದುದೇನು ? ಕಾಲ ಪ್ರವಾಹದ ರಭಸಕ್ಕೆ ನಮ್ಮ ಗುರುತುಗಳು ಉಳಿದಿರಬಹುದೆಂಬ ಭರವಸೆ ಇರಲಿಲ್ಲ . ಆದರೂ ಗೆಳತಿಯ ಆಸೆಯಂತೆ ನಾವು ಶಾಲೆಯ ದಾರಿ ಹಿಡಿದಿದ್ದೆವು . ಎಣಿಸಿದಂತೆ  ಅಲ್ಲಿ ಹಲವಾರು ಬದಲಾವಣೆಗಳಿದ್ದವು. ಹೊಸ ಅಂಗಡಿಗಳು ಎದ್ದಿದ್ದವು , ಶಾಲೆಯ ಸುತ್ತ ಬೇಲಿ ಹಾಕಲಾಗಿತ್ತು . ನಮ್ಮದಲ್ಲ ಈ ಹಾದಿ ಎಂಬ ಭಾವ ಬಲಿಯುವ ಮೊದಲು ಅಜ್ಜಿ ಕಂಡಿದ್ದಳು . ಅದೇ ಮೂಲೆಯಲ್ಲಿ ಗಾಡಿಯ ಹಿಂದೆ ಕೂತಲ್ಲೇ ನಿದ್ದೆ ಹೋಗಿದ್ದಳು . ಆಕೆ ೩೦ಕ್ಕೂ ಹೆಚ್ಚು ವರ್ಷಗಳಿಂದ ಶಾಲೆಯ ಎದುರಿಗೆ ,  ಹಣ್ಣುಗಳು  , ಇಲಾಯಚಿಕಾಯಿ, ಸೌತೆಕಾಯಿಗಳನ್ನು ಮಾರುತ್ತಾಳೆ . ನಮ್ಮ ಬಾಲ್ಯ ಮತ್ತು ಹರೆಯದ ಪ್ರಮುಖ ಕೊಂಡಿ. ೧೦ ಪೈಸೆಗೆ ಸೌತೆಕಾಯಿ ತುಂಡು, ೨೫ ಪೈಸೆಗೆ ಪೇರಲ ಹಣ್ಣು ದೊರೆಯುತ್ತಿದ್ದ ಕಾಲದಲ್ಲಿ ನಮ್ಮ ಬಳಿ ಪೈಸೆ ಇರುತ್ತಿದ್ದುದೇ ಅಪರೂಪ , ಅಜ್ಜಿಯ ಮುಖದಲ್ಲಿ ಮಂದಹಾಸವಿರುತ್ತಿದ್ದುದು ಇನ್ನೂ ಅಪರೂಪ .

ಹನ್ನೆರಡು ವರ್ಷದ ಶಾಲಾ ಬದುಕಿನಲ್ಲಿ  ಅಜ್ಜಿಯೊಡನೆ ಹೆಚ್ಚೆಂದರೆ ನಾಲ್ಕು ಬಾರಿ ಮಾತನಾಡಿರಬಹುದು. ಆದರೂ ಅವಳ ದನಿ , ಗತ್ತು ಗೈರತ್ತು ನೆನಪಿದೆ. ಎಂದೂ ಆಪ್ತವಾಗಿ ಮಾತನಾಡದ ಅಜ್ಜಿ  ನೆನಪಿನ  ಭಾಗವಾಗಿದ್ದು  ಯಾವಾಗ ? ತನ್ನ ಮಾರಾಟದಿಂದ ಹೆಚ್ಚೆಂದರೆ ದಿನಕ್ಕೆ ೨೦೦-೩೦೦ ರೂಪಾಯಿ ಗಳಿಸುವ ಅಜ್ಜಿ , ಇಂದೂ ಕೂಡ ಅದೇ ಜಾಗದಲ್ಲಿ ತನ್ನ ವಯಸ್ಸನ್ನೂ ಲೆಕ್ಕಿಸದೇ ಕುಳಿತಿರುವುದೇಕೆ ? ಆ ಶ್ರಧ್ಧೆಯನ್ನು  ಇಷ್ಟು ವರ್ಷ ಅವಳು ಕಾಯ್ದುಕೊಂಡಿದ್ದು ಹೇಗೆ ?ಅವಳಿಗಿರುವ ಅಗತ್ಯಗಳಾದರೂ ಏನು? ಅಜ್ಜಿಯೊಡನೆ ಕುಳಿತು ಮಾತನಾಡುವ ಆಸೆ ಬಲವಾಗುತ್ತಿತ್ತು.   ನಮ್ಮ ಮುಂದೆಯೇ ಒಬ್ಬಾತ ಬಂದು ‘ಏನಜ್ಜಿ ಊಟ ಆತಾ ?’ ಎಂದರೆ ‘ಹ್ಞೂ ‘ ಎಂಬ ಚುಟುಕಾದ ಉತ್ತರ ಕೊಟ್ಟು ಮತ್ತೆ ನಿದ್ದೆಗೆ ಜಾರಿದ ಅಜ್ಜಿಯನ್ನು ಕಂಡು ನಮ್ಮ ಪ್ರಶ್ನೆಗಳು ನಮ್ಮಲ್ಲೇ ಉಳಿದವು. ನಮ್ಮ ಕುರುಹೊಂದು ಸಿಕ್ಕಿದ್ದರಿಂದ ಕೊಂಚ ವಿಶ್ವಾಸದಿಂದಲೇ ನಾವು ಶಾಲೆಯ ಒಳನಡೆದೆವು .

ಎಲ್ಲದರಲ್ಲೂ ಮಧ್ಯಮವರ್ಗದಲ್ಲಿದ್ದ  ನಾವುchildren terracota ಅದೆಷ್ಟು ಜನ ಶಿಕ್ಷಕರ ನೆನಪಿನಲ್ಲಿ ಉಳಿದಿರಬಹುದು ? ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳುವುದಕ್ಕೂ  ಬಾಗಿಲಲ್ಲಿ ರಂಗಸ್ವಾಮಿ ಕಾಣುವುದಕ್ಕೂ ಸರಿ ಆಯ್ತು. ‘ನಾವು ಇಲ್ಲೇ ಓದಿದವರು’ ಎಂದರೆ ‘ಗೊತ್ತಾಯ್ತಮ್ಮ ‘ ಎಂದು ಪರಿಚಯದ ನಗೆ ನಕ್ಕಿದ್ದರು. ಹೆಜ್ಜೆಗಳಲ್ಲಿನ ವಿಶ್ವಾಸ ಹೆಚ್ಚಾಯ್ತು.  ಸ್ಟಾಫ್ ರೂಮಿನ ಮುಂದೆ ನಿಂತು ಹಣುಕಿದರೆ ಒಳಗೆ ಬನ್ನಿ ಎಂದಿದ್ದು ಕೊಂಚ ಕಾಲ ಕಲಿಸಿದ ಶಿಕ್ಷಕಿ. ಪರಿಚಯ ಹೇಳಿದೊಡನೆ ‘ಓ ಹೌದಲ್ಲ , ಗೊತ್ತೇ ಆಗಲಿಲ್ಲ ‘ ಎಂಬ ಉತ್ತರ ಬಂತು.   ಮಾಮೂಲಿ ಉಭಯ ಕುಶಲೋಪರಿಯ ನಂತರ ಮಾತು ಹೊರಳಿದ್ದು ಈಗಿನ ಶಿಕ್ಷಣ ಪಧ್ಧತಿಯ ಬಗೆಗೆ. ಆಕೆಯ ದನಿಯಲ್ಲಿ ಅಂದಿನ ಕಾಲ ಚಂದವಿತ್ತು ಎಂಬ ಭಾವವಿತ್ತು. ಕಲಿಸಿದ ಹುಡುಗಿಯರನ್ನು  ದಶಕಗಳ ನಂತರ ಕಂಡ ಖುಷಿ ಇತ್ತು . ಹಲವು ವರ್ಷ ಆಕೆಯನ್ನು ಕಂಡಿದ್ದೇನೆ , ಆಕೆ ಸ್ಥಿಮಿತ ಕಳೆದುಕೊಂಡಿದ್ದನ್ನು ನಾನು ನೋಡಿಲ್ಲ . ಒಂಭತ್ತನೇ ಕ್ಲಾಸಿನಲ್ಲಿದ್ದಾಗ ಈಕೆ ನಮ್ಮ ಕ್ಲಾಸ್ ಟೀಚರ್ ಆಗುವುದು ಬೇಡವೆಂದು ಖ್ಯಾತೆ ತೆಗೆದು ಟೀಚರ್ ನನ್ನು ಬದಲಿಸುವಂತೆ ಮಾಡಿದ್ದೆವು, ಆಗಲೂ ಆಕೆ ಅದೇ ನಗುವಿನೊಂದಿಗೆ ನಮ್ಮನ್ನು ಬೀಳ್ಕೊಟ್ಟಿದ್ದರು . ನಂತರವೂ ನಮ್ಮ ಕ್ಲಾಸಿನ ಯಾವುದೇ ಹುಡುಗಿ ಕಂಡರೂ ಅದೇ ಆಪ್ತತೆಯಿಂದ ಕಂಡಿದ್ದರು .

 

 

ನಮಗೊಬ್ಬ  ‘ಮಿಸ್  ‘ ಇದ್ದರು . ನಾವು   ಹೈಸ್ಕೂಲ್ ನಲ್ಲಿದ್ದಾಗ ಆಕೆ ಬಿ.ಎಡ್ . ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರಿದರು. ಕೆಲವೇ ದಿನಗಳಲ್ಲಿ ಎಲ್ಲರೂ ‘ಭಾಳ ಒಳ್ಳೆಯವರ್ ನಮ್ ಮಿಸ್ಸು ..’ ಹಾಡಿದ್ದೇ ಹಾಡಿದ್ದು. ಆಕೆಗೆ ಚಂದವಿದ್ದವರು , ಜಾಣರು ಅಥವಾ  ಶ್ರೀಮಂತರು ಎಂದರೆ ಹೆಚ್ಚು ಇಷ್ಟ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. ಚಂದನೆಯ ಕಾಟನ್ ಸೀರೆ ಉಡುತ್ತಿದ್ದ , ಸದಾ ಹಸನ್ಮುಖಿಯಾಗಿದ್ದ ಅವರ  ಹಿಂದೆ ಯಾವಾಗಲೂ ಹುಡುಗಿಯರ ಹಿಂಡು  ನೆರೆದಿರುತ್ತಿತ್ತು . ಆಕೆಯ ಇಷ್ಟದ ಸ್ಟೂಡೆಂಟ್ ಆಗಲು ಎಲ್ಲರೂ ಹಾತೊರೆಯುತ್ತಿದ್ದೆವು . ಕಂಡಕೂಡಲೇ  ಆಕೆಗೆ ನಮ್ಮ  ಬ್ಯಾಚಿನ  ಶ್ರೀಮಂತ ಜಾಣೆಯ  ನೆನಪಾಗಿದ್ದಳು ! ಮಾತು ಶುರು ಮಾಡಿದ್ದೇ ‘ಓ ನೀವು ಅವಳ ಬ್ಯಾಚಿನ ಹುಡುಗಿಯರು ಅಲ್ವಾ ?’ ಎಂದು.   ಐ.ಟಿ. ಯಲ್ಲಿನ ದುಡ್ಡು ಬಿಟ್ಟು ಶಾಲೆಯ ಕಡೆ ಬರ್ತೀನಿ ಅಂದವಳು ಮಿಸ್ಸಿಗೆ ಬುಧ್ಧು ತರಹ ಕಾಣಿಸಿದಳು. ಮಿಸ್ ಜೊತೆ ಮಾತು ಮುಂದುವರೆಯಲಿಲ್ಲ , ಮುಂದುವರೆಸಲೇ ಬೇಕೆಂಬ ಆಸೆಯಾಗಲಿಲ್ಲ.

ಹತ್ತನೇ ತರಗತಿಯಲ್ಲಿ ನಮಗೆ ಪಾಠ ಮಾಡಿದ  ಒಬ್ಬ ಟೀಚರ್ ಗೆ ಪಾಠ ಮಾಡುವ ಕಲೆ ಅಷ್ಟೇನೂ ಒಲಿದಿರಲಿಲ್ಲ. ಪುಸ್ತದಲ್ಲಿದ್ದ ಪಾಠವನ್ನು ಯತಾವತ್ತಾಗಿ ಓದಿದರೆ  ಪಾಠ ಮುಗಿದ ಲೆಕ್ಖ.  ನಗು ಮೊಗದ ಆಕೆ ಯಾವ ವಿಧ್ಯಾರ್ಥಿನಿಯನ್ನೂ  ಅಷ್ಟೇನೂ ಹಚ್ಚಿಕೊಂಡವರಲ್ಲ. ಗಡಿಯಾರ ತುಸು ನಿಧಾನವಾದರೂ ಆಗಿರಬಹುದು ಆದರೆ  ದಿನವೂ ೯.೧೫ಕ್ಕೆ ಸರಿಯಾಗಿ ಆಕೆ ತನ್ನಿಬ್ಬರು ಮಗಳಂದಿರೊಂದಿಗೆ ಶಾಲೆಯಲ್ಲಿರುತ್ತಿದ್ದರು.  ಯಾವುದೇ ಸಮಾರಂಭವಾದರೂ ಸಡಗರದಿಂದ ಸರಬರ ಓಡಾಡುತ್ತಿದ್ದರು. ಇಂದು ನಿಧಾನವಾಗಿ ನಡೆದು ಬಂದವರ ಮೊಗದಲ್ಲಿ ಮತ್ತದೇ ಮಂದಹಾಸವಿತ್ತು.  ‘ಈಗ ತಾನೇ ಸ್ಮಾರ್ಟ್ ಕ್ಲಾಸ್ ನಲ್ಲಿ ಹಿಂದಿನ ಬ್ಯಾಚುಗಳ ಹುಡುಗಿಯರು ಅಂತ ಹೇಳುತ್ತಿದ್ದೆ ಕಣ್ರೆ.’ ಎಂದು ಮಾತಿಗಿಳಿದರು . ಗಡಿಯಾರ ಮರೆತಿರಬಹುದು ಈ ಟೀಚರ್ ಇನ್ನೂ ೯.೧೫ ನ್ನು ಮರೆತಿರಲಿಲ್ಲ.  ‘ ಎಷ್ಟು ಚಂದ ಪ್ರಬಂಧಗಳನ್ನ ಬರೆತಿದ್ರೆ ನೀವು , ಈಗ ಅವೆಲ್ಲಾ ಇಲ್ಲ ಕಣೆ ‘ ಎಂದು ಇಂದಿಗಿಂತ ನೆನ್ನೆ ಚಂದವಿತ್ತೆಂಬ ಷರಾ ಬರೆದಿದ್ದರು.

cloud and womenನಾವು ಶಾಲೆಯಲ್ಲಿದ್ದಾಗ ಒಂದನೇ ತರಗತಿಯಿಂದಲೇ ಯಾವುದೇ ಬೇಧವಿಲ್ಲದೇ  ನಮ್ಮ ಕ್ಲಾಸ್ ರೂಂ ಗಳನ್ನು ದಿನವೂ ನಾವೇ ಗುಡಿಸಿ , ವಾರಕ್ಕೊಮ್ಮೆ  ಒರೆಸಬೇಕಿತ್ತು. ‘ಈಗಲೂ ಹಾಗೇನಾ ಮ್ಯಾಮ್’ ಎಂದರೆ ಅವರು ನಕ್ಕು ನಮ್ಮೊಂದಿಗೆ ಮಾತಿಗಿಳಿದಿದ್ದರು. ಈ ಶಿಕ್ಷಕಿ ನಮಗೆ ಯಾವತ್ತೂ ಕಲಿಸಿದವರಲ್ಲ. ಆದರೂ ಆಕೆಗೆ ಹೆಚ್ಚು ಕಡಿಮೆ  ಶಾಲೆಯ ಎಲ್ಲ  ವಿಧಾರ್ಥಿನಿಯರ ಹೆಸರು ಗೊತ್ತಿತ್ತು. ‘ನಮ್ ಹುಡುಗ್ಯಾರು …’ ಎಂದೇ ಆಕೆ ಎಲ್ಲರನ್ನೂ ಕರೆಯುತ್ತಿದ್ದರು . ನಾವು ಪರಿಚಯ ಹೇಳಿ ಸುಮ್ಮನೇ ನಿಂತರೆ ಆಕೆ ಮಾತಿಗಿಳಿದಿದ್ದರು . ಆ ಮಾತುಗಳಲ್ಲಿ ಕೆಲವನ್ನಾದರೂ ಹಂಚಿಕೊಳ್ಳಲೇ ಬೇಕು , ‘ ಈಗ ಎಲ್ಲಾ  ಬದಲಾಗಿದೆ ಕಣ್ರೆ.  ಕಸ , ನೆಲ ಮಾಡಿದ್ರೆ ನಮ್ ಮಕ್ಕಳಿಗೆ ಅಲರ್ಜಿ ಆಗುತ್ತೆ  ಅಂತ ಪೇರೆಂಟ್ಸ್ ಜಗಳ ಆಡಿದರು. ಈಗ ಆ ಕೆಲಸ ರಂಗಸ್ವಾಮಿ ಮಾಡ್ತಾರೆ . ರೂಲ್ಸಿನ ಪ್ರಕಾರ ಒಂಭತ್ತನೇ ಕ್ಲಾಸಿನ ತನಕ ಯಾರನ್ನೂ ಫೇಲ್  ಮಾಡುವಂತಿಲ್ಲ . ಒಂದು ವಾಕ್ಯ ಬರೆಯಲು ಬಾರದಿದ್ದವರೂ ಹತ್ತನೇ ಕ್ಲಾಸಿಗೆ ಬರ್ತಾರೆ. ನಿಮ್ ಅಪ್ಪ ಅಮ್ಮಂದಿರು ಸ್ಕೂಲ್ಗೆ  ಬಂದ್ರೆ ಆಕಿನ ನಿಮ್ ಕೈಯಾಗ್ ಹಾಕಿವಿ . ನೋಡ್ಕೋರಿ . ತಪ್ ಮಾಡಿದ್ರೆ ನಾಲ್ಕು ಹಾಕ್ರಿ ಅನ್ನೋರು. ಈಗ ಹಾಗಿಲ್ಲ, ನಾವು ಫೀಸ್ ಕಟ್ಟಿದ್ದಿವಿ , ನೀವು ಪಾಠ ಮಾಡಿ ಸಾಕು . ಮುಂದಿನದನ್ನು ನಾವು ನೋಡ್ಕೊತಿವಿ ಅಂತ ಡೈರೆಕ್ಟ್ ಆಗೇ ಹೇಳ್ತಾರೆ. ಇಂದಿನ ಶಿಕ್ಷಕಿಯರಿಗೆ ಇವರು ಸ್ಟೂಡೆಂಟ್ಸ್ ಮಾತ್ರ . ಉಳಿದಂತೆ ‘ಸ್ಟೂಡೆಂಟ್ ‘ ಏನು ಮಾಡಿದರೆ ನಮಗೇನು ಪಾಠ ಮಾಡುವುದು ಮಾತ್ರ ನಮ್ಮ ಕೆಲಸ ಅಂತಾರೆ.  ನಾವು ‘ನಮ್ ಮಕ್ಳು’  ಅಂದ್ರೆ ಇವರೇ ನಗ್ತಾರೆ ಕಣ್ರೆ. ಈ ಕಡೆ ನಮ್ಮತನವನ್ನೂ ಬಿಟ್ಟು ಆ ಕಡೆ ಅನ್ಯರಂತೆಯೂ ಆಗದೇ ಉಳಿದುಬಿಟ್ಟೆವಾ  ಅಂತ ಭಯ ಆಗತ್ತೆ. … ‘  ಮಿಸ್ ಮಾತು ಮುಂದುವರೆದಿತ್ತು. ಮುಂದೆ ಕೇಳಲು ನಮಗೂ  ಭಯವಾಗುತ್ತಿತ್ತು. ಬದಲಾವಣೆ ಜಗದ ನಿಯಮ , ಹೌದು ಆದರೆ ವಸಂತದ ಚಿಗುರು ಮಕ್ಕಳ ನಗು ಬದಲಾಗಬಾರದಲ್ಲವೇ ? ಬಾಳ ಪಯಣದಲ್ಲಿ ಒಂದಷ್ಟು ಸಾಧಿಸಿದರೆ , ಚಂದಗೆ ಬದುಕಿದರೆ ‘ ಇದು ನನ್ನ ಮಗು , ನಾ ನಡೆಯಲು ಕಲಿಸಿದ ಮಗು ‘ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶಿಕ್ಷಕರು , ಮಣ್ಣ ಮುದ್ದೆಗಳಿಗೆ ಮೂರ್ತಿಯ ರೂಪ ಕೊಟ್ಟವರು ಇವರೆಂಬ ‘ಸ್ಟೂಡೆಂಟ್ಸ್’ಗಳ ಕೃತಜ್ಞತೆ ಬದಲಾಗಬಾರದಲ್ಲವೇ ?

ಗಣಿತದ ಸೂತ್ರಗಳನ್ನು ಬಾಯಿ ಪಾಠ ಮಾಡಿಸಿದವರು, ವಿಜ್ಞಾನದ ಜಗತ್ತನ್ನು ಪರಿಚಯಿಸಿದವರು , ಭಾಷೆಯ ಸೊಗಸನ್ನು ಕಲಿಸಿದವರು, ಆಸಕ್ತಿ ಇಲ್ಲದಿದ್ದರೂ ಪರವಾಗಿಲ್ಲ ಚಿತ್ರ ಬಿಡಿಸಿ ಎಂದವರು, ಪಾಠವನ್ನೇ ಮಾಡದವರು  ಎಲ್ಲ ಶಾಲೆಗಳಲ್ಲೂ ಎಲ್ಲ ರೀತಿಯ ಶಿಕ್ಷಕರೂ ಇರುತ್ತಾರೆ, ನಮ್ಮಲ್ಲೂ ಇದ್ದರು . ವರುಷಗಳು ಉರುಳಿದರೂ ಅಸಂಖ್ಯಾತ  ವಿಧ್ಯಾರ್ಥಿಗಳನ್ನು ಕಂಡರೂ ಅವರಿಗೆ ನಮ್ಮ ನೆನಪಿತ್ತು , ಬಹುಶಃ ಎಲ್ಲರ ನೆನಪೂ ಇರುತ್ತದೆ. ‘ಯಾವ್ ಮೂಲ್ಯಾಗ್ ಹುಡುಕಿದ್ರೂ ನಮ್ ಹುಡುಗಿಯಾರ್  ಸಿಕ್ತಾರ್ ನೋಡ್ರಿ ‘ ಅಂತ ಒಬ್ಬರಿಗೊಬ್ಬರು ಹೇಳಿಕೊಂಡು ಖುಷಿ ಪಡುತ್ತಿದ್ದರು. ಇದೀಗ ಬಂದ ಹೊಸ ತಲೆಮಾರಿನ ಶಿಕ್ಷಕಿಯರೆದುರು ‘ನಮ್ ಹುಡುಗಿಯರು,  ನೆನಪಿಟ್ ಕೊಂಡು ಬಂದಾರೆ ‘ ಅಂತ ಹೆಮ್ಮೆಯಿಂದ ಹೇಳಿಕೊಂಡರು .

ನಾವು ಅಂದು ಭೇಟಿ ಮಾಡಿದ ಶಿಕ್ಷಕಿಯರೊಡನಿನ ಸಂಭಾಷಣೆಯ ವರದಿಯನ್ನು ಮುಂದುವರೆಸುತ್ತಲೇ ಇರಬಹುದು. ಹಲವು ವಿಷಯಗಳು ವರದಿಗೆ ನಿಲುಕಲಾರವು . ಬದುಕಿನ ಬಹುತೇಕ ಸಂಗತಿಗಳು ಅಮೂರ್ತವಾಗಿ ಆರಂಭವಾಗಿ ಹಂತ ಹಂತವಾಗಿ ಮೂರ್ತವಾಗುತ್ತವೆ. ಈ ಭೇಟಿ , ತಯಾರಾದ ಮೂರ್ತಿ ತನ್ನ ಶಿಲ್ಪಿಯನ್ನು ತನ್ನೊಳಗೇ ಅರಸಬೇಕೆಂಬ ಸತ್ಯದರ್ಶನ ಮಾಡಿಸಿತ್ತು.  ಸಮಯ ಪರಿಪಾಲನೆ, ಸುತ್ತಲಿನವರೆಡೆಗೆ ತೋರಬೇಕಾದ ಪ್ರೀತಿ ,ವಿಶ್ವಾಸ , ಕಾಳಜಿ , ಬದುಕಿನಲ್ಲಿ ಉಳಿಸಿಕೊಳ್ಳ ಬೇಕಾದ  ಜೀವನ ಶ್ರಧ್ಧೆ, ಕಂಡುಕೊಳ್ಳಬೇಕಾದ ಸಮ ಚಿತ್ತ  ಮುಂತಾದ ಮೌಲ್ಯಗಳು  , ಮೀರಲೇ ಬೇಕಾದ ಮೇರೆಗಳು ಇವೆಲ್ಲವೂ ನಮ್ಮ ‘ಮಿಸ್ ‘ ಗಳು  , ಅಜ್ಜಿ ರಂಗಸ್ವಾಮಿಯಂಥವರು ನಮ್ಮ ಬದುಕಿನ  ಕ್ಯಾನ್ವಾಸ್ ಮೇಲೆ ಬಿಡಿಸಿದ ಸುಂದರ ಚಿತ್ರಗಳು  ಎಂಬುದು ಅರಿವಿಗೆ ಬಂದಿತು.

‍ಲೇಖಕರು admin

October 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: