ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು, ಅಜ್ಜಿ ಮತ್ತು ಗುಡ್ಡ..

ನಭಾ

ನಾನು ನಡೆಯಲು ಕಲಿತ
ನಾನು ನೋಡಲು ಕಲಿತ
ಆ ಊರ ಬೆನ್ನಿಗಿತ್ತು ಬೋಳುಗುಡ್ಡ
ಚಂದ್ರ ಆ ಗುಡ್ಡದಲಿ
ಎಣ್ಣೆಯ ಬಟ್ಟಲಿನಂತೆ ಹೊಳೆಯುತ್ತಿದ್ದ
ಸೂರ್ಯ ಬಿಸಿಲಿಗೆ ಬೆವರಿ
ಗುಡ್ಡದ ಕನ್ನಡಿಯಲಿ ಬೆವರೊರೆಸಿಕೊಳ್ಳುತ್ತಿದ್ದ.

ಮಳೆಯೆಂದರೆ ಗುಡ್ಡದ ಮೈನೀರೆಂದೇ ತಿಳಿದಿದ್ದೆ
ದೊಡ್ಡ ದನಿಯ ಕಿರುಚು ರೆಕಾರ್ಡಿನ ಟ್ಯ್ರಾಕ್ಟರುಗಳು
ಒಂದೇ ಸಮ ಗುಡ್ಡದ ಕಲ್ಲು ಹೊರುತ್ತಿದ್ದವು.
ಅಷ್ಟು ನಯವಾಗಿ ತನ್ನಪಾಡಿಗೆ ತಾನಿದ್ದ ಗುಡ್ಡಕ್ಕೆ ,
ಮ್ಯಾಗ್ನೇಟ್ ಹಾಕಿ ಸಿಡಿಸಿದರು.
ಬಡವರೆಲ್ಲ ಆ ಗದ್ದಲದಲ್ಲೂ
ಕಲ್ಲು ವಡೆಯುತ್ತಿದ್ದರು.

ಗುಡ್ಡ ಹತ್ತಿಳಿದು ಕಾಲಿನ ಕೀಲು ಕಳಚಿದ
ಅಜ್ಜಿಯೊಬ್ಬಳು ನನ್ನ ಬಾಲ್ಯದ ಸಂಗಾತಿ
ಅವಳ ಕಣ್ಣೊಳಗೆ ದಟ್ಟ ಕಾಡಿದ್ದ
ಅವಳ ಬಾಲ್ಯದ ಗುಡ್ಡ
ಅಲ್ಲಿ ಹಣ್ಣೋಡೆದು ವಾಸನೆ ಮುಕುರುವ
ಸಾವಿರ ಸೀತಾಫಲಗಳು
ಕಾಣುತ್ತಿದ್ದೆ ನಾನು ಅವಳ ಕಣ್ಣೊಳಗಿಣುಕಿ
ಆ ಲೋಕ
ಗುಡ್ಡವನು ದಿನವೂ ಸಿಡಿ ಸಿಡಿಸಿ ತುಂಬಿದರೂ…

ಹೇಳುತ್ತಿದ್ದಾಳೆ , ಕಂದಾ ಗುಡ್ಡ ಬೆಳೆಯುತ್ತದೆ
ಮರ ಬೆಳೆದಂತೆ
ಗಿಡ ಬೆಳೆದಂತೆ
ನೀನು ಬೆಳೆದಂತೆ…..
ಇದೀಗ ಗುಡ್ಡವೆಂಬ ಗುರುತು ಪತ್ರವೂ ಕಳೆದು ಹೋಗಿದೆ.
ಹಸಿರಿಲ್ಲದೂರ ಹೆದ್ದಾರಿಗುಂಟ ಹಸಿರು ಬೋರ್ಡು ಬಂದಿವೆ.
ಹರಿವ ನದಿಯ ಕಾಲು ಮುರಿದು ಹಿತ್ತಲಿನ ನಳಕ್ಕೆ ತುಂಬಿ ಮಿಂದು ಮಡಿಯುಟ್ಟವರು
ಕಾಯುತ್ತಿದ್ದಾರೆ….

ಮಾರಿಕೊಳ್ಳಲು ಮತ್ತೇನಿದೆ ????
ಓಡಾಡಲು ಅಂಗಳವಿಲ್ಲದ
ನೋಡಲು ಗುಡ್ಡವೂ ಇಲ್ಲದ
ಬೇಸರದ ದಿನಗಳಲ್ಲಿ ಆ ಅಜ್ಜಿ ನೆನಪಾಗುತ್ತಾಳೆ.
ಗುಡ್ಡ ಬೆಳೆಯುತ್ತದೆ ಕಂದಾ ಎಂದವಳ ಮಾತು,
ಪುಸ್ತಕದ ಪಾಟಕ್ಕಿಂತಲೂ ಹಿತವಾಗಿ ಕೇಳುತ್ತದೆ…

ನಭಾ: ಚಿತ್ರಕಲಾ ವಿದ್ಯಾರ್ಥಿನಿ ಮತ್ತು ಕವಯತ್ರಿ

‍ಲೇಖಕರು Avadhi

18 October, 2020

1 Comment

  1. ವಿಠ್ಠಲ

    ಚೆನ್ನಾಗಿ ಮೂಡಿ ಬಂದಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading