ನಮ್ಮ ನಾಡಿನ ರಸ್ತೆಗಳು ಸಾಕಷ್ಟು ಉತ್ತಮಿಕೆಯನ್ನು ಕಾಣುತ್ತಿದ್ದರೂ ಒಮ್ಮೆ ಹಾಳುಬಿದ್ದು ಮಲಗಿದರೆ ಅದನ್ನು ಆ ಕೂಡಲೇ ಸರಿಪಡಿಸುವ ಚಿಂತೆಯನ್ನೇ ಮಾಡುವ ಕ್ರಮ ನಮ್ಮಲ್ಲಿಲ್ಲ.
ಅದೇ ಯುರೋಪಿನ ಯಾವುದಾದರೊಂದು ಮೂಲೆಯಲ್ಲಿ ರಸ್ತೆಗೆ ತುಸು ಗಾಯವಾಗಿದೆ ಎಂಬ ಸುದ್ದಿ ಸಂಬಂಧಪಟ್ಟ ಇಲಾಖೆಗೆ ಸಿಕ್ಕಿದರೆ ಸಾಕು, ತಕ್ಷಣ ಅವರು ಕಾರ್ಯಪ್ರವೃತ್ತರಾಗುತ್ತಾರೆ.ಆ ನಿರ್ದಿಷ್ಟ ಜಾಗದ ಸುತ್ತಣ ಇನ್ನೊಂದಿಷ್ಟು ಜಾಗವನ್ನೂ ಕೊರೆದುತೆಗೆದು ಅಷ್ಟೂ ಜಾಗವನ್ನು ಲವಲೇಶ ಕಲೆ ಕಾಣದಂತೆ ಸಾಫುಗೊಳಿಸುತ್ತಾರೆ. ನಮ್ಮಲ್ಲಿನಂತೆ ಹೊಂಡದಲ್ಲಿ ಬಿದ್ದು ಹೊರಳಾಡುವ, ಆ ಹೊಂಡದಲ್ಲೇ ಗಿಡನೆಟ್ಟು ಕೃಷಿಮಾಡುವ ಪರಿಸ್ಥಿತಿ ಎಲ್ಲೂ ಕಂಡುಬರುವುದಿಲ್ಲ. ತೇಪೆಗಳು ತುಸು ಪ್ರಮಾಣದಲ್ಲಿ ಕಂಡುಬಂದುದು ಇಟೆಲಿಯಲ್ಲಿ. ಉಳಿದ ಕಡೆ ಅದೂ ಇಲ್ಲ. ಅಂಥ ನೈಸ್ ರೋಡು. ಒಂದೊಂದು ಕಡೆ ಐದು ಆರು ಟ್ರ್ಯಾಕ್ಗಳು. ಹೋಗಲಷ್ಟು, ಬರಲಷ್ಟು. ಒಂದೊಂದು ವಾಹನಕ್ಕೆ ಬೇಕಾದಷ್ಟು ಜಾಗಬಿಟ್ಟು ಹಾಕುವ ದಪ್ಪನೆಯ ಗೆರೆ ಯಾವತ್ತೂ ಮಸುಕಾಗುವುದಿಲ್ಲವೇನೊ! ಹಂಪ್ಗಳ ತಾಪತ್ರಯವೂ ಇಲ್ಲ.
ಒಂದೇ ಸವನೆ ಅಷ್ಟು ವಾಹನಗಳು ಓಡಾಡುವುದಿದ್ದರೂ ಆಂಬ್ಯುಲೆನ್ಸ್ ಸದ್ದು ಕೇಳಿದ ತಕ್ಷಣ ಇತರ ವಾಹನಗಳು ಬದಿಗೆಸರಿದು ಜಾಗಮಾಡಿಕೊಡುವುದನ್ನು ನಿಜಕ್ಕೂ ನೋಡಿಕಾಣಬೇಕು. ಆ ವೇಗವನ್ನು ನಿಯಂತ್ರಣಕ್ಕೆ ತಂದು ಪಕ್ಕದ ಟ್ರ್ಯಾಕ್ನ ವಾಹನ ನಿಧಾನಗೊಳ್ಳವುದನ್ನು ಖಾತ್ರಿಗೊಳಿಸಿ ಅತ್ತ ತೆವಳುವುದಿದೆಯಲ್ಲ; ಅದರಲ್ಲಿರುವ ಪ್ರಾಣ ಉಳಿಸುವ ಕಾಳಜಿ ಮೆಚ್ಚತಕ್ಕ ಅಂಶ. ಹೀಗೆ ಮಾಡುವಾಗ ಸಹಜವಾಗಿಯೇ ಟ್ರ್ಯಾಫಿಕ್ ಜಾಮ್ ಉಂಟಾಗುತ್ತದೆ
ಕೆಲವೆಡೆ ಚತುಷ್ಚಕ್ರ ವಾಹನಗಳ ರಸ್ತೆಗೂ ಅದರ ಪಕ್ಕದ ಸೈಕಲ್ ರಸ್ತೆಗೂ ನಡುವೆ ಇರುವ ಉದ್ದನೆಯ ಲಂಗೋಟಿಯಲ್ಲಿ ಥರಥರದ ಹೂ ಬೆಳೆಸಿದ್ದನ್ನು ಕಾಣಬಹುದು. ಹೀಗೆ ಪಟ್ಟಿ ಹೂ ಬೆಳೆಸುವುದು ಯುರೋಪಿಯನ್ನರಿಗೆ ಬಹಳ ಪ್ರಿಯವಾದ ವಿಚಾರ. ಸ್ವಿಟ್ಸರ್ಲ್ಯಾಂಡ್ನಲ್ಲಿ ಒಂದು ಕಟ್ಟಿಗೆಯ ಸೇತುವೆಯಿದೆ. ಅದರ ಇಕ್ಕೆಲಗಳಲ್ಲಿ ಉದ್ದಕ್ಕೆ ಹೂಚಟ್ಟಿಗಳ ನೇಲುವ ಪಟ್ಟಿಯಿದೆ. ನೋಡಲಂತೂ ಬಲುಸುಂದರ. ಅಂತೆಯೇ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳ ಕಿಟಿಕಿಗಳಲ್ಲಿಯೂ ಬಣ್ಣ ಬಣ್ಣದ ಹೂಗಳ ಮನಮೋಹಕ ದೃಶ್ಯ.
ಅಂತಹ ಹೆಚ್ಚಿನ ಮನೆಗಳ ಕಿಟಿಕಿಗಳಲ್ಲಿ ಹೂಚಟ್ಟಿಗಳಿರುತ್ತವೆಯಾದರೆ ಕೆಲವು ಕಟೆ ನೆಲದಿಂದ ಹೊರಟ ಗುಲಾಬಿಗಿಡ,ಕ್ಷಮಿಸಿ, ಗುಲಾಬಿಮರ ಮೊದಲ ಮಹಡಿಯನ್ನು ಮೀರಿ ಕೆಂಪುಕಂಪು ಗುಲಾಬಿಹೊತ್ತು ಮುಂದೆಲ್ಲಿಗೆ ಎಂದು ಇಣುಕುತ್ತಿರುತ್ತವೆ. ಗುಲಾಬಿಗಿಡಗಳು ಹೀಗೆ ದೈತ್ಯಾಕಾರದಲ್ಲಿ ಬೆಳೆದು ನಿಂತು ಕಂಡದ್ದು ಹೆಚ್ಚಾಗಿ ಇಂಗ್ಲೆಂಡಿನಲ್ಲಿ , ಆಮೇಲೆ ಜರ್ಮನಿಯಲ್ಲಿ. ಇಂಗ್ಲಂಡಿನ ಸಸೆಕ್ಸ್ನಲ್ಲಿ ಕೆಲವು ಥೇಚ್ಡ್ ಮನೆಗಳನ್ನು ಕಂಡಿದ್ದೆ.
ಇದು ನಿಜಕ್ಕೂ ಅಪರೂಪದ ಹಾಗೂ ನಿರ್ಗಮನದ ಹಂತದಲ್ಲಿರುವ ಮನೆಗಳು. ದಪ್ಪಕ್ಕೆ ಮುಳಿಹುಲ್ಲು ಹಾಸಿ ಮಾಡುವ ಮನೆಗಳು. ತುಂಬ ದುಬಾರಿ ಮನೆಗಳು ಎಂದು ಹೇಳುವುದನ್ನು ಕೇಳಿದ್ದೇನೆ. ಅದರ ಒಂದನೆಯ ಮಹಡಿಯ ಭಾಗದಲ್ಲಿ ಗುಲಾಬಿಯನ್ನು ಆಲಂಕಾರಿಕವಾಗಿ ದುಡಿಸಿದ್ದನ್ನೂ ಕಂಡಿದ್ದೇನೆ. ದಪ್ಪದ ಮುಳಿಯನ್ನು ಕತ್ತರಿಸಿ ಒಂದನೆಯ ಮಹಡಿಯ ಕಿಟಿಕಿಗಳ ಮೇಲೆ ನವಿಲುಗಳಂತೆಯೋ ಮೊಸಳೆಗಳಂತೆಯೋ ನಿಲ್ಲಿಸಿದ್ದನ್ನು ಕಂಡಿದ್ದೇನೆ. ಅವುಗಳ ಮೇಲ್ಭಾಗದಲ್ಲಿ ಈ ಗುಲಾಬಿಗಳು ನರ್ತಿಸುವುದನ್ನು ನೋಡುವುದೇ ಒಂದು ಮೋಜು.
ರಸ್ತೆಯ ಇಕ್ಕೆಲಗಳ ಗೋಡೆಗಳಲ್ಲಿ ಗ್ರಾಫಿಟಿಯಿದೆ. ಈ ಗ್ರಾಫಿಟಿಯ ಬಗ್ಗೆ ಒಂದೆರಡು ಮಾತು ಹೇಳಬೇಕು. ಇದಕ್ಕೆ ಯುರೋಪಿನಲ್ಲಿ ಬಹುದೊಡ್ಡ ಹಿನ್ನೆಲೆಯಿದೆ. ಪ್ರಾಚೀನ ಗ್ರೀಕರ, ರೋಮನ್ನರ ಸಂಸ್ಕೃತಿಯ ಹಿನ್ನೆಲೆಯಲ್ಲೂ ಗ್ರಾಫಿಟಿಯಿದ್ದುದಾಗಿ ಕೇಳಿದ್ದೇವೆ. ಇಂದೀಗ ಜಗತ್ತಿನ ಹೆಚ್ಚಿನ ದೇಶಗಳಿಗೆ ಅದು ಪಸರಿಸಿದೆ. ಭಾರತ ದೇಶಕ್ಕೆ ಅದರ ಗಾಳಿ ಅಂಥ ತೀವ್ರವಾಗಿ ಬೀಸಿದಂತಿಲ್ಲ. ಗ್ರಾಫಿಟಿ ಎಂಬುದು ಒಂದು ಬಗೆಯ ಬರೆಯುವ ಕಲೆ. ಆ ಕಲೆಯನ್ನು ಕಲಿಸುವುದಕ್ಕಾಗಿಯೇ ಯುರೋಪಿನಲ್ಲಿ ಪ್ರತ್ಯೇಕ ಶಾಲೆಗಳಿವೆ. ಹಿಂದೆ ದೇಶದ ಸಂಸ್ಕೃತಿಯ ಕುರಿತಾದ ಚಿತ್ರಕಲೆ, ಬರಹಗಳಿಗೆ ಅದು ಪೂರಕವಾಗಿತ್ತು. ಅಕ್ಷರಗಳನ್ನು ಅತ್ಯಂತ ಮೋಡಿಮಾಡಿ ಅಷ್ಟೇ ಸುಂದರ ಹಾಗೂ ಆಕರ್ಷಕಮಾಡಿ ಬರೆಯುವುದು. ಇಂದೀಗ ಆ ಬರೆಹಗಳೆಲ್ಲ ಬೀದಿಬದಿಗೆ ಬಂದಿವೆ.ರಸ್ತೆ ಬದಿಯ ಗೋಡೆತುಂಬ ಬರೆದು ಹಾಕುವುದು ಈಗಿನ ಬೆಳವಣಿಗೆ. ಈಗ ಬ್ರಷ್ ಬಳಸುವುದು ಕಡಿಮೆ. ಬಣ್ಣವನ್ನು ಸ್ಪ್ರೇಯ ಮೂಲಕವೇ ಬಳಸಲಾಗುತ್ತದೆ.
ಸಾಮಾಜಿಕ ಅಡೆತಡೆಗಳ ಕುರಿತಾದ ಬೀದಿನಾಟಕ ಮಾಡುವುದು ನಮ್ಮಲ್ಲಿ ಚಾಲ್ತಿಯಲ್ಲಿದ್ದರೆ ಅಲ್ಲಿ ಈ ಥರದ ಬರವಣಿಗೆಯ ಮೂಲಕ ಸರಕಾರವನ್ನೋ ಸಂಬಂಧಿತ ಸಂಘಸಂಸ್ಥೆಗಳನ್ನೋ ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯ. ಕೆಲವು ಕಡೆಗಳಲ್ಲಂತೂ ಪೋಲಿಸರಿಗೆ, ಸರಕಾರಕ್ಕೆ ವಿರುದ್ಧವಾದ ತುಚ್ಛ ಪದಬಳಕೆಯ ಗ್ರಾಫಿಟಿಯನ್ನು ಕಾಣಬಹುದು. ಇನ್ನು ಕೆಲವೆಡೆ ಕುಡುಕರು ತಮಗಿಷ್ಟಬಂದ ಭಾಷೆಯಲ್ಲಿ ಅಶ್ಲೀಲ ಸಾಹಿತ್ಯವನ್ನೂ ಬರೆದಿಡುತ್ತಾರೆ. ಅಶ್ಲೀಲ ಚಿತ್ರವನ್ನೂ ಮಾಡಿಡುತ್ತಾರೆ. ಈ ಥರದ ಬರವಣಿಗೆಗೆ ಆಯಾ ಪ್ರದೇಶದ ಭಾಷೆಯನ್ನು ಬಳಸುತ್ತಾರೆ. ಇಂಗ್ಲಿಷ್ ಬರೆಹಗಳು ಬಲು ಅಪರೂಪ. ಹೆಚ್ಚಾಗಿ ರೈಲು ಸಂಚಾರ ಮಾಡುವಾಗ ಇಕ್ಕೆಲದ ಗೋಡೆಗಳಲ್ಲಿ ಆಕರ್ಷಕ ಬಣ್ಣಗಳ ಸಹಾಯದಿಂದ ಬಿಡಿಸಿದ ಚಿತ್ರಗಳನ್ನು,ಬರೆದ ಬರೆಹಗಳನ್ನು ಕಾಣಬಹುದು. ಹಾಗಾಗಿ ಗ್ರಾಫಿಟಿ ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಏಕರೀತಿಯಾಗಿ ಉಪಯೋಗಿಸಲ್ಪಡುವ ಕಲೆ.








ಎಲ್ಲೋ ಕನಸಲ್ಲಿ ತೇಲಿ ಬಂದಂತಾಯ್ತು. ಒಟ್ಟಲ್ಲಿ ನಮ್ಮ ಹೊಟ್ಟೆ ಉರಿಸೋಕೆ ಬರೆದಂತಾಯ್ತು! 😀 😉
naavoo aa stithi thalupabahudu
bahudu…bahudu…