ಹನುಮಂತ ಅನಂತ ಪಾಟೀಲ
ಪಾತ್ರ ವರ್ಗ
ರವಿ – ಪ್ರಾಥಮಿಕ ಶಾಲಾ ಬಾಲಕ
ರಾಮಯ್ಯ – ರವಿಯ ಅಜ್ಜ
ಸಾವಿತ್ರಮ್ಮ – ರವಿಯ ಅಜ್ಜಿ
ವೈದೇಹಿ – ರವಿಯ ತಾಯಿ
ರಾಮ – ರಾಮಯ್ಯನ ಬಾಲ್ಯದ ಪಾತ್ರ
ಮೋಹನ – ರಾಮನ ಸ್ನೇಹಿತ
ಬಸವ – ರಾಮನ ಸ್ನೇಹಿತ

ದೃಶ್ಯ – 1
(ಒಂದು ಮೇಲ್ಮಧ್ಯಮ ವರ್ಗದ ಮನೆ, ಮನೆಯ ಅಡುಗೆ ಮನೆಯಲ್ಲಿ ಮನೆಯ ಯಜಮಾನಿ ವೈದೇಹಿ ಶಾಲೆಯಿಂದ ಬರಲಿರುವ ಮಗ ರವಿಗಾಗಿ ಆತನ ಪ್ರೀತಿಯ ತಿಂಡಿ ಶ್ಯಾವಿಗೆ ಭಾತ್ ತಯಾರಿಯಲ್ಲಿ ತೊಡಗಿದ್ದಾಳೆ. ರವಿಯ ಅಜ್ಜಿ ಸಾವಿತ್ರಮ್ಮ ಮನೆಯ ಒಳ ಹಜಾರದಲ್ಲಿ ಕಾಲೊತ್ತಿ ಕೊಳ್ಳುತ್ತ ಕುಳಿತಿದ್ದಾಳೆ. ರವಿಯ ಅಜ್ಜ ರಾಮಯ್ಯ ತಮ್ಮ ರೀಡಿಂಗ್ ರೂಮ್ನಲ್ಲಿ ಪುಸ್ತವೊಂದನ್ನು ಓದುತ್ತ ಕುಳಿತಿದ್ದಾರೆ. ಸಾಯಂಕಾಲ 5=30 ಗಂಟೆಯ ಸಮಯ. ರವಿ ಕನಿಷ್ಕ ಆಂಗ್ಲ ಮಾದ್ಯಮಿಕ ಶಾಲೆಯ ಬಸ್ಸಿನಿಂದ ಕೆಳಗಿಳಿದು ಮನೆಯ ಗೇಟನ್ನು ಅವಸರವಾಗಿ ತೆಗೆದು ಮನೆಯೊಳಕ್ಕೆ ಓಡಿ ಬಂದು ಹೊರ ಹಜಾರದಲ್ಲಿದ್ದ ಸೋಫಾ ಮೇಲೆ ಕುಳೀತು ಸ್ಕೂಲ್ ಬ್ಯಾಗ್, ಟಿಫನ್ ಬಾಕ್ಸ್ ಮತ್ತು ವಾಟರ್ ಬ್ಯಾಗ್ಗಳನ್ನು ಎಲೆಲೆಂದರಲ್ಲಿ ಎಸೆದು ಅವಸರದಲ್ಲಿ ಬೂಟ್ಸ್ ಕಳಚಿ ಸಾಕ್ಸ್ಗಳನ್ನು ತೆಗೆಯುವ ಸನ್ನಾಹದಲ್ಲಿದ್ದಾನೆ ಅಡುಗೆ ಮನೆಯಿಂದ ಹೊರ ಹಜಾರಕ್ಕೆ ಬಂದ ಆತನ ತಾಯಿ)
ವೈದೇಹಿ – ಏ ಕತ್ತೆ!, ಏನೋ ಅದು ! ಸ್ಕೂಲ್ ಬ್ಯಾಗ್ ಆ ಥರಾ ಎಸೆಯೋದೇನೋ ನೀಟಾಗಿ ಇಟ್ಕೊಳ್ಳೊಕೆ ಬರೋಲ್ವೇನೋ? ನಿನ್ನ ಸ್ನೇಹಿತ ಪ್ರಶಾಂತನ್ನ ನೋಡು ಎಂಥಾ ಡೀಸೆಂಟ್ ಬಾಯ್ ! ನೀನೂ ಇದೀಯಾ ದಂಡಕ್ಕ.
ರವಿ – ಅಮ್ಮಾ ಅಂವ ಭಾಳ ಡೀಸೆಂಟ್ ಬಾಯ್ ! ನನಗೆಲ್ಲ ಗೊತ್ತದ, ಅಂವ ಮನಿಯೋಳಗನ ಬೂಟ್ ಹಾಕ್ಕೊಂಡು ಅಡ್ಡಾಡತಾನ ನಿನಗೇನರ ಗೊತ್ತದ ಏನು?
ವೈದೇಹಿ – ಮತ್ತ ಅಂವ ಭಾಳ ಶಿಸ್ತಿನ ಹುಡುಗ ಅಂತ ಅವನಮ್ಮ ಆವಾಗಾವಾಗ ಹೇಳ್ತಾನ ಇರ್ತಾಳಲ್ಲೊ..
ರವಿ – ಅವರೆಲ್ಲ ಅವರವರ ಮಕ್ಕಳ್ನ ವಹಿಸಕೊಂಡ ಮಾತಾಡೋದು ನಿನ್ಹಾಂಗ ಅಲ್ಲ ಗೊತ್ತನು ?
ವೈದೇಹಿ – ಸರಿ ಸರಿ ! ಸ್ಕೂಲ್ ಬ್ಯಾಗ್ ಮತ್ತು ಯೂನಿಫಾರ್ಮ ಎಲ್ಲ ನೀಟಾಗಿ ತಗದ ಇಟ್ಕೊಂಡು ಕೈಕಾಲು ಮುಖ ತೊಳ್ಕೊಂಡು ಬಾ, ನಿನ್ನ ಇಷ್ಟದ ಶ್ಯಾವಿಗೆ ಭಾತ್ ಮಾಡಿ ಇಟ್ಟೇನಿ (ಎಂದವಳೆ ಅಡುಗೆ ಮನೆಯ ಕಡೆಗೆ ತೆರಳಿದಳು)
(ಬಚ್ಚಲು ಮನೆಗೆ ತೆರಳಿದ ರವಿ ಕೈಕಾಲು ಮುಖ ತೊಳೆದುಕೊಂಡು ಬಂದು ಕೈ ಟವಲ್ನಿಂದ ಮುಖ ಒರೆಸಿಕೊಳ್ಳುತ್ತ ಬಂದು ಡೈನಿಂಗ್ ಟೇಬಲ್ ಮೇಲೆ ಕುಳಿತ. ಆತನ ತಾಯಿ ವೈದೇಹಿ ತಿಂಡಿಯ ತಟ್ಟೆ ಮತ್ತು ನೀರಿನ ಲೋಟದೊಡನೆ ಬಂದು ಆತನ ಮುಂದೆ ಇಟ್ಟಳು. ತಿಂಡಿಯ ತಟ್ಟೆಯನ್ನು ತನ್ನೆಡೆಗೆ ಎಳೆದುಕೊಂಡ ರವಿ ನಿಧಾನವಾಗಿ ತಿಂಡಿಯನ್ನು ಮೆಲ್ಲುತ್ತ)
ರವಿ – ಅಮ್ಮ ! ನಾಳೆ ನಮ್ಮ ಶಾಲೆಗೆ ರಜೆ.
ವೈದೇಹಿ – ಯಾಕೋ ನಿಮ್ಮ ಶಾಲೆಗೆ ನಾಳೆ ರಜೆ?
ರವಿ – ನಾಳೆ ಟೀಚಸರ್್ ಮೀಟಿಂಗ್ ಇದೆಯಂತೆ ಅದಕ್ಕೆ ರಜೆ.
ವೈದೇಹಿ – ನಿಮ್ಮ ಶಾಲೆಗೆ ಎಷ್ಟು ಸಲ ರಜೆಯೋ? ಒಂದು ತಿಂಗಳ ಹಿಂದೆ ಸಹ ಟೀಚಸರ್್ ಮೀಟಿಂಗ್ ಅಂತ ರಜೆ ಕೊಟ್ಟಿದ್ರಲ್ಲ. ಸರಿ ಬೇಗ ಬೇಗ ತಿಂಡಿ ಮುಗಿಸಿ ಹೋಮ್ ವಕರ್್ ಮಾಡಿಕೋ.
ರವಿ – ಇಲ್ಲಮ್ಮ ನಾನು ನಾಳೆ ಹೋಮ್ ವಕರ್್ ಮಾಡಿಕೋತೇನಿ, ಸತೀಶ ಸೈಕಲ್ ತರತಾನ ನಾನೂ ಸೈಕಲ್ ಕಲಿಬೇಕು ನನಗೂ ಭಾಡಿಗೆ ಸೈಕಲ್ ತರಲಿಕ್ಕೆ ಎರಡು ರೂಪಾಯಿ ಕೊಡು.
ವೈದೇಹಿ – ಸೈಕಲ್ ಗಿಯಕಲ್ಲು ಏನೂ ಬೇಡ ಸುಮ್ಮನ ಬೇಕಾದರ ಒಂದರ್ಧ ಗಂಟೆ ಆಟ ಆಡಿಕೊಂಡ ಬಂದು ಹೋಮ್ ವಕರ್್ ಮಾಡು.
ರವಿ – ಇಲ್ಲಮ್ಮ ನಮ್ಮ ಕ್ಲಾಸ್ನೊಳಗ ಎಲ್ಲಾರೂ ಸೈಕಲ್ ಹೊಡಿಯೋದು ಕಲತಾರ, ಸೈಕಲ್ ಕಲಿದವನು ಅಂದರ ನಾ ಒಬ್ಬನ ನಾನೂ ಸೈಕಲ್ ಕಲಿಬೇಕು ಅದಕ್ಕ ನಾ ಹೋಗೋವನ.
ವೈದೇಹಿ – ನಿನ್ನ ಸೈಕಲ್ ವಿಚಾರ ನನಗೇನೂ ಹೇಳಬ್ಯಾಡ ಈಗ ಸ್ವಲ್ಪ ಹೊತ್ರತಿನ್ಯಾಗ ನಿಮ್ಮಪ್ಪ ಬರತಾರ ಅವರ್ನ ಕೇಳಕೊಂಡು ಎಲ್ಲಿಗರ ಹೋಗು ಅಲ್ಲಿತನಕ ಸುಮ್ಮನ ಹೋಮ್ ವಕರ್್ ಮಾಡಿಕೋತ ಕೂಡು.
(ಸಣ್ಣ ಮೋರೆ ಮಾಡಿಕೊಂಡು ತಿಂಡಿ ತಿನ್ನುತ್ತ ಕುಳಿತ ಮೊಮ್ಮಗ ರವಿಯ ಚಲನ ವಲನವನ್ನು ಗಮನಿಸುತ್ತಿದ್ದ ಆತನ ಅಜ್ಜಿ ಸಾವಿತ್ರಮ್ಮ)
ಸಾವಿತ್ರಮ್ಮ – ಹೋಗಲಿ ಬಿಡೆ ವೈದೇಹಿ ! ಪಾಪ ಏನೋ ಮಗು ಸೈಕಲ್ ಕಲಿಬೇಕನ್ನತ್ತೆ ಕಲೀಲಿ ಬಿಡು, ಹ್ಯಾಗೂ ನಾಳೆ ಶಾಲೆಗೆ ರಜೆ ಅಂತೆ
ರಾತ್ರಿನೋ ಇಲ್ಲ ನಾಳೇನೋ ಹೊಮ್ ವಕರ್್ ಮಾಡಿಕೋತಾನ ಬಿಡು.
(ಅಜ್ಜಿಯ ಬೆಂಬಲವನ್ನು ಗಮನಿಸಿದ ರವಿ ಮತ್ತೆ ಉತ್ಸುಕನಾಗಿ ತಿಂಡಿಯನ್ನು ಮುಗಿಸಿದ, ಆತನ ತಟ್ಟೆ ಖಾಲಿಯಾದುದನ್ನು ಗಮನಿಸಿದ ಆತನ ತಾಯಿ)
ವೈದೇಹಿ – ರವಿ ಇನ್ನೂ ಸ್ವಲ್ಪ ತಿಂಡಿ ಹಾಕಲೇನೋ?
ರವಿ – ಅಮ್ಮ ನನ್ನ ಹೊಟ್ಟೆ ತುಂಬಿತು ತಿಂಡಿ ಸಾಕು ನನಗೀಗ ಸೈಕಲ್ ಭಾಡಿಗೆ ತರಲು ಎರಡು ರೂಪಾಯಿ ಕೊಡು
ವೈದೇಹಿ – ನಿನ್ನ ಸೈಕಲ್ ವಿಚಾರ ನನಗೇನೂ ಗೊತ್ತಿಲ್ಲ ಆವಾಗ್ಲೆ ಹೇಳೆನಲ್ಲ ಅಷ್ಟ.
ಸಾವಿತ್ರಮ್ಮ – ರವಿ ಹೋಗು ಮಗ ನಿನ್ನಮ್ಮಗ ನಾ ಹೇಳತೇನಿ ನಿಮ್ಮಜ್ಜನ ಹತ್ರ ದುಡ್ಡು ಇಸಕೊಂಡು ಹೋಗು.
(ಅಜ್ಜಿಯ ಪ್ರೋತ್ಸಾಹದ ಮಾತುಗಳಿಂದ ಉಲ್ಲಸಿತನಾದ ರವಿ ಇನ್ನಷ್ಟು ಉತ್ಸುಕತೆಯಿಂದ ಡೈನಿಂಗ್ ಟೇಬಲ್ ಮೇಲಿನಿಂದ ಎದ್ದು ಮೂಲೆಯಲ್ಲಿದ್ದ ವಾಶ್ ಬೇಸಿನ್ನೆಡೆಗೆ ಸಾಗಿ ಕೈಬಾಯಿ ತೊಳೆದುಕೊಂಡು ಅಜ್ಜ ಕುಳಿತಿದ್ದ ರೀಡಿಂಗ್ ರೂಮಿನೆಡೆಗೆ ಓಡಿದ. ರವಿಯ ಅಜ್ಜ ರಾಮಯ್ಯ ಪೇಪರ್ ಹಿಡಿದುಕೊಂಡು ಓದುತ್ತ ಕುಳಿತಿದ್ದರೂ ಅವರು ಆ ವರೆಗೆ ನಡೆದ ಎಲ್ಲ ಮಾತುಕತೆಗಳನ್ನು ಆಲಿಸಿ ಮೊಮ್ಮಗನ ಆಗಮನದ ನಿರೀಕ್ಷೆಯಲ್ಲಿದ್ದರು.)
ರವಿ – ಅಜ್ಜ ನಾ ಸೈಕಲ್ ಕಲೀಲಿಕ್ಕೆ ಹೋಗಬೇಕು ಎರಡು ರೂಪಾಯಿ ಕೊಡು.
(ಆತನನ್ನು ಸ್ವಲ್ಪ ಛೇಡಿಸ ಬೇಕೆನಿಸಿದ ರಾಮಯ್ಯ)
ರಾಮಯ್ಯ – ಮತ್ತ ನಿನ್ನಮ್ಮ ಸೈಕಲ್ ಕಲಿಯೋಕೆ ಹೋಗೋದು ಬ್ಯಾಡ ಅಂತಾಳಲ್ಲೊ.
ರವಿ – ಇಲ್ಲ ಅಜ್ಜಿ ನಿನ್ನ ಹತ್ತರ ದುಡ್ಡು ಇಸಗೊಂಡು ಹೋಗು ಅಂತ ಹೇಳ್ಯಾಳ ಎರಡು ರೂಪಾಯಿ ಕೊಡು (ಎಂದು ಅವಸರ ಮಾಡಿದ)
ರಾಮಯ್ಯ – ಎರಡು ರೂಪಾಯಿ ಕಾಯಿನ್ ಇಲ್ವಲ್ಲೋ ಐದು ರೂಪಾಯಿದು ಅದ, ನಿಮ್ಮಪ್ಪ ಬರಲಿ ಎರಡು ರೂಪಾಯಿ ಇಸಗೊಂಡು ಹೋಗೂವಂತಿ.
(ಎಂದು ರಾಮಯ್ಯ ಅವನ ಉತ್ಸಾಹಕ್ಕೆ ಕಡಿವಾಣ ಹಾಕಲು ನೋಡಿದರು)
ರವಿ – ಇಲ್ಲ ಅಜ್ಜ ಅದನ್ನ ಕೊಡು ನಾ ನಿನಗ ಉಳದ ಚಿಲ್ಲರೆ ಹಣ ತಂದ ಕೊಡ್ತೀನಿ.
(ಎನ್ನುತ್ತ ಆ ಐದು ರೂಪಾಯಿಯ ನಾಣ್ಯವನ್ನು ಇಸಿದು ಕೊಂಡು ಮನೆಯ ಗೇಟ್ ಕಡೆಗೆ ಓಡಿದವನು, ಗೇಟ್ ತೆಗೆದು ರಸ್ತೆಯಲ್ಲಿ ಸಾಗಿ ಕಣ್ಮರೆಯಾದ. ಆತನ ಹೋಗುವಿಕೆಯನ್ನೆ ಗಮನಿಸುತ್ತಿದ್ದ ರಾಮಯ್ಯ ತಮ್ಮ ಬಾಲ್ಯದ ನೆನಪಿಗೆ ಜಾರಿದರು)
***
ದೃಶ್ಯ – 2
(ಸ್ವಾತಂತ್ರೋತ್ತರ ಭಾರತದ ಪ್ರಾರಂಭಿಕ ದಿನಗಳವು, ಸುರಗಿಹಳ್ಳಿ ಆಗಿನ ಎಲ್ಲ ಕುಗ್ರಾಮಗಳತೆ ಅದು ಒಂದು ಕುಗ್ರಾಮ. ಈಗಿನ ರಾಮಯ್ಯ ಆಗ ಬರಿ ರಾಮನಾಗಿದ್ದ ದಿನಗಳವು. ಆ ಗ್ರಾಮದ ರಾಮ ಮೋಹನ ಮತ್ತು ಬಸವ ಸಹಪಾಠಿಗಳು ನವರಾತ್ರಿ ಹಬ್ಬದ ರಜೆಯ ದಿನಗಳವು. ಸುರಗಿಹಳ್ಳಿ ಗ್ರಾಮದ ಹೊರ ವಲಯದ ಅರಣ್ಯ ಇಲಾಖೆಯ ಕಟ್ಟಡದ ಬದಿಗೆ ಇದ್ದ ವಿಶಾಲವಾದ ಬಯಲಿನಲ್ಲಿ ಬಸವ ಸೈಕಲ್ ಹೊಡೆಯುತ್ತಿದ್ದ. ಆ ಬಯಲಿನ ಕಡೆಗೆ ಹೊರಟಿದ್ದ ರಾಮ ಮತ್ತು ಮೋಹನರು ಇದನ್ನು ಗಮನಿಸಿ ತಾವೂ ಆ ಬಯಲಿನೆಡೆಗೆ ಓಡಿದರು. ಇವರು ಬಂದುದನ್ನು ಗಮನಿಸಿದ ಬಸವ ಕಡೆಗಣ್ಣಿನಿಂದ ಇವರು ಬರುವುದನ್ನು ಗಮನಿಸಿ ಇನ್ನಷ್ಟು ಠೇಂಕಾರದಿಂದ ಸೈಕಲ್ ಹೊಡಯುತ್ತ ಹ್ಯಾಂಡಲ್ ಬಿಟ್ಟು ಸೈಕಲ್ ಹೊಡೆಯುವುದು, ಎರಡೂ ಕೈ ಕಟ್ಟಿಕೊಂಡು ಸೈಕಲ್ ಬಿಡುವುದು ಮುಂತಾದ ವರಸೆಗಳನ್ನು ತೋರಿಸಿದ. ಶಾಲೆಯಲ್ಲಿ ದಡ್ಡನಾಗಿದ್ದ ಆತ ತನ್ನ ಸಹಪಾಠಿಗಳ ಅವಗಣನೆ ಗುರುಗಳ ಬೈಗುಳ ಮತ್ತು ಹೊಡೆತಕ್ಕೆ ತುತ್ತಾಗಿ ಅವಮಾನಿನಾಗುತ್ತಿದ್ದ. ಹೀಗಾಗಿ ಸೈಕಲ್ ಬಾರದ ರಾಮ ಮತ್ತು ಮೋಹನರ ಎದುರು ತಾನೂ ಸಹ ಅವರಂತೆ ಓದಿನಲ್ಲಿ ಅಲ್ಲವಾದರೂ ಸೈಕಲ್ ಸವಾರಿಯಲ್ಲಿ ತಾನು ಪರಣಿತ ಎನ್ನುವುದನ್ನು ತೋರಿಸ ಬೇಕೆನ್ನುವ ಉಮೇದಿನಲ್ಲಿದ್ದ ಆತ ಆಯ ತಪ್ಪಿ ಚರಂಡಿಗೆ ಸೈಕಲ್ ಸಮೇತ ಬಿದ್ದು ಬಿಟ್ಟ. ಇದನ್ನು ಕಂಡ ರಾಮ ಕಿಸಕ್ಕನೆ ನಕ್ಕ. ಇದರಿಂದ ಅವಮಾನಿತನಾದ ಬಸವ ಅದನ್ನು ತೋರಿಗೊಡದೆ ಸೈಕಲ್ ಮಡ್ಗಾಡರ್್ ಮೇಲೆ ಕುಳಿತು ಸೈಕಲ್ ಹ್ಯಾಂಡಲ್ ಅತ್ತಿತ್ತ ತಿರುಗಿಸಿ ನೋಡಿ ಸೈಕಲ್ ಮೇಲೆ ಹತ್ತಿ ಇವರನ್ನು ಮಾತನಾಡಿಸದೆ ಮತ್ತೆ ಸೈಕಲ್ ಹೊಡೆಯಲು ಪ್ರಾರಂಭಿಸುತ್ತಾನೆ.)
ರಾಮ – ಮೋಹನ ನೋಡೋ ನನ್ಮಗನಿಗೆ ಎಷ್ಟು ಸೊಕ್ಕು ನಾವು ಬಂದದ್ದು ಕಂಡರೂ ಕಾಣಿಸದವರ್ಹಾಂಗ ಹ್ಯಾಂಗ ಹೋದ ನನ್ಮಗ ಭಾಳ ದಿಮಾಕಲೆ ಇವನಿಗೆ.
ಮೋಹನ – ಹೌದಪಾ ಅಂವ ಸೈಕಲ್ ಮ್ಯಾಲಿಂದ ಬಿದ್ದಾಗ ನೀ ಯಾಕ ಕಿಸಕ್ಕಂತ ಹಲ್ಲ ಕಿಸ್ತು ನಕ್ಕೆ? ಅದಕ್ಕ ಅಂವಗ ಸಿಟ್ಟ ಬಂದು ಮಾತಾಡಸ್ದಾಂಗ ಹೋದ.
ರಾಮ – ಅರೆ ಅಂವ ಬಿದ್ದ ನಗಿ ಬಂತು ನಕ್ಕೆ, ಅಷ್ಟಕ್ಕ ಸ್ನೇಹಿತರ್ನ ಮಾತಾಡಸದ್ಹಾಂಗ ಹಂಗ ಹೋಗೋದ? ಏನ ಅನ್ನಲೆ ಮೋಹನ ಇಂವಗ ಭಾಳ ಸೊಕ್ಕು ಬಿಡಲೆ.
ಮೋಹನ – ಪುಗಸೆಟ್ಟಿ ಸೈಕಲ್ ಕಲಿಯಾಕ ಬಂದವ್ರು ನಾವು ಅಂವ ಬಿದ್ದದ್ದು ನೋಡಿ ನಕ್ಕರ ಅಂವ ಯಾಕ ನಮಗ ಸೈಕಲ್ ಕೊಡತಾನ?
ರಾಮ – ಹೋಗಲಿ ಬಿಡಲೆ ಅಂವ ಏನ್ ದೊಡ್ಡ ಮನಸ್ಯಾ ಅಂತ ಅಂವಗ ಸಲಾಮ ಹೊಡಿಬೇಕು ಬಾರಲೆ ಮನಿ ಕಡಿಗೆ ಹೋಗೋಣ.
ಮೋಹನ – ಮನಿ ಕಡಿಗೆ ಹೋಗೋಣಂತ ಸುಮ್ನಿರು ಅಂವ ತಿರಗಿ ಬರ್ಲಿ ಒಂದ ಸಲ ಕೇಳೋಣ.
(ಬಸವ ತಿರುಗಿ ಬಂದುದನ್ನು ಗಮನಿಸಿದ ಮೋಹನ ಅಡ್ಡ ನಿಂತು ಸೈಕಲ್ ತಡೆದ)
ರಾಮ – ಬಸವ ನಮಗೂ ಸ್ವಲ್ಪ ಸೈಕಲ್ ಕಲಸೊ.
ಮೋಹನ – ಹೌದೋ ಬಸವಾ ನಮಗೂ ಸ್ವಲ್ಪ ಸೈಕಲ್ ಹೊಡಯೋದು ಕಲಸೋ. ನಾವು ನಿನ್ನ ಸ್ನೇಹಿತರು ಅಲ್ವೇನೋ?
ಬಸವ – ಓಹೋ ! ಈಗ ನಾ ನಿಮಗ ಸ್ನೇಹಿತ ಅಲ್ಲೇನ್ರೋ. ಆದರ ಸಾಲಿ ಒಳಗ ಮಾಸ್ತರು ನನಗ ಹೊಡಿಯೋ ಮುಂದ ಬೈಯೋ ಮುಂದ ಎಲ್ಲಾರೂ ಸೇರಿ ನಗತಿರತೀರಿ. ಈಗ ಸೈಕಲ್ ಕಲೀಬೇಕು ಅಂತ ಸ್ನೇಹಿತರು ಅಂತ ನಾಟಕ ಮಾಡತೀರಾ ಮಕ್ಕಳ. ಈ ಸೈಕಲ್ ಏನೂ ಪುಗಸೆಟ್ಟಿ ಬಂದಿಲ್ಲ. ಈ ಸೈಕಲ್ಗೆ ನಾನು ಒಂದಾಣೆ ಭಾಡಿಗೆ ಕೊಟ್ಟು ತಂದೇನಿ ಗೊತ್ತಾ !
ಮೋಹನ – ನಮ್ಮನ್ಯಾಗ ತಾಯವ್ವನ ಜಾತ್ರಿಗೆ ಹಣ ಕೊಡತಾರ ಆವಾಗ ಅದರಾಗ ಒಂದಾಣೆ ಇಟಗೊಂಡು ನಿನಗ ತಂದ ಕೊಡತೀವಿ, ಆವಾಗ ಭಾಡಗಿ ಸೈಕಲ್ ತರೋಣ ಆವಾಗ ನೀನೂ ಸೈಕಲ್ ಹತ್ತೂವಂತಿ. ಈಗ ನಮಗೂ ಸ್ವಲ್ಪ ಸೈಕಲ್ ಕಲಸೊ. (ಎಂದು ದುಂಬಾಲು ಬೀಳುತ್ತಾನೆ)
ಬಸವ – ಹೋಗ್ರಲೆ ಹೋಗ್ರಿ ನಾ ಸೈಕಲ್ ಮ್ವಯಾಲಿಂದ ಬಿದ್ದಾಗ ನಗ್ತೀರಾ ನನ್ಮಕ್ಕಳ.
ಮೋಹನ – ಏ ನಾನಲ್ಲ ಕಣಲೆ ನಕ್ಕಿದ್ದು ರಾಮ ನಕ್ಕಿದ್ದು.
ಬಸವ – ಹಂಗಾದರ ನಾ ನಿನಗೊಬ್ಬಗ್ತ ಸೈಕಲ್ ಕೊಡತೇನಿ ಆ ನನ್ನ ಮಗ ರಾಮಗ ಕೊಡೊದಿಲ್ಲ.
ರಾಮ – ಏ ಹೋಗಲೆ ! ಕೊಡದ ಹೋದ್ರ ಕತ್ತೆ ಬಾಲ ಹೋತು ಬಾರಲೆ ಮೋನ್ಯಾ ಹೋಗೋಣ ಮನಿ ಕಡಿಗೆ.
ಬಸವ – ಏ ಹೋಗಲೆ ಹೋಗೋ! ನಾ ಏನೂ ನಿನ್ನ ಸೈಕಲ್ ಕೊಡತೇನಿ ಬಾ ಅಂತ ಕರದಿಲ್ಲ. ಬಾರಲೆ ಮೋನ್ಯಾ ಬಾ ಸೈಕಲ್ ಹತ್ತ ಬಾ.
ಮೋಹನ – ಕೊಡೊದಾದ್ರ ಇಬ್ಬರಿಗೂ ಕೊಡು ಇಲ್ಲಾ ಅಂದ್ರ ಇಲ್ಲ.
ಬಸವ – ಆತು ಬಾ ಸೈಕಲ್ ಹತ್ತ ಬಾ.
ಮೋಹನ – ಮದ್ಲ ರಾಮ ಹತ್ತಲಿ ಆ ಮ್ಯಾಲ ನಾ ಹತ್ತತೇನಿ.
(ಬಸವ ಮೋಹನ ಇಬ್ಬರೂ ಸೇರಿ ರಾಮನನ್ನು ಆಸರೆ ಕೊಟ್ಟು ಸೈಕಲ್ ಹತ್ತಿಸಿದರು)
ಬಸವ – ರಾಮ ಎರಡೂ ಹ್ಯಾಂಡಲ್ ಸರಿಯಾಗಿ ಹಿಡಕೋ, ಎದರಗಡೆ ನೋಡಿಕೋತನ ಸೈಕಲ್ ಪೆಡಲ್ ನಿಧಾನಕ್ಕ ತುಳೀತಾ ಹೋಗು, ನಾವೂ ಜೊತಿಗೆ ಬರ್ತೀವಿ.
(ರಾಮ ನಿಧಾನಕ್ಕೆ ಪೆಡಲ್ ತುಳಿಯುತ್ತ ಸಾಗಿದ. ಎರಡು ಸುತ್ತು ರಾಮ ಸೈಕಲ್ ತುಳಿದ ನಂತರ ಆತ ಕೆಳಗಿಳಿದ . ನಂತರ ರಾಮ ಮತ್ತು ಬಸವ ಸೇರಿ ಮೋಹನನನ್ನು ಸೈಕಲ್ ಹತ್ತಿಸಿದರ)
ರಾಮ – ಮೋಹನ ಸರಿಯಾಗಿ ಹ್ಯಾಂಡಲ್ ಹಿಡಕೊಂಡು ನಿಧಾನಕ್ಕ ಮುಂದ ನೋಡತನ ಪೆಡ್ಲು ತುಳಿ.
(ಮೋಹನ ಎರಡು ಸುತ್ತು ಸೈಕಲ್ ಹೊಡೆದ ನಂತರ ಬಸವ ಮತ್ತು ರಾಮರ ಸಹಾಯದಿಂದ ಸೈಕಲ್ ನಿಂದ ಕೆಳಗಿಳಿದ )
ರಾಮ – ಬಸವ ನೀ ದಿವಸಾ ಸೈಕಲ್ ತರ್ತಿ ಏನೋ, ಸೈಕಲ್ ಭಾಡಿಗಿ ಹಣಕ್ಕ ಏನ್ ಮಾಡತಿ?
ಬಸವ – ನಮ್ಮವ್ವನ ಹತ್ತರ ಇಸಗೋತೇನಿ.
ಮೋಹನ – ಯಾಕ ನಿಮ್ಮಪ್ಪ ಕೊಡೊದಿಲ್ಲೇನೊ?
ಬಸವ – ನಮ್ಮಪ್ಪನ ! ಬೇಕಾದರ ಬಾರಕೋಲ್ ಏಟು ಕೊಡ್ತಾನ ನೋಡು. ನೀವು ಒಂದೊಂದಾಣೆ ತರ್ರಿ ನಿಮಗೂ ಸೈಕಲ್ ಕಲಸ್ತೀನಿ.
ಮೋಹನ – ಒಂದಾಣೆ ದುಡ್ಡು ಎಲ್ಲಿಂದ ತರೋದೋ ?
ಬಸವ – ನಿಮ್ಮ ನಿಮ್ಮ ಅಪ್ಪಂದಿರ ಹತ್ತರ ಇಸಗೊಂಡು ಬರ್ರಿ.
ಮೋಹನ – ನಮ್ಮಪ್ಪನ ಕೊಟ್ಟಂಗ್ಹಾತು ನಾ ಇಸಗೊಂಡ್ಹಂಗ ಆತು.
ಬಸವ – ಮತ್ತ ನನಗ ಕೇಳ್ತಿ ಮಗನ ನಿಮ್ಮಪ್ಪ ಡುಡ್ಡು ಕೊಡೋದಿಲ್ಲನು ಅಂತ , ಎಲ್ಲಾರ ಹಣೆಬರಾನೂ ಅಷ್ಟ ತಿಳಕೋ ಗೊತ್ತಾತ.
ರಾಮ – ಮೋನ್ಯಾ ದುಡ್ಡು ಹ್ಯಾಂಗ ತರೋದೊ, ನಮ್ಮಪ್ಪ ಸೈಕಲ್ ಕಲೀತೀನಿ ಅಂದ್ರ ಸಾಕು ಹುಣಸೆ ಬರ್ಲು ತುಗೊಂಡು ನಾಕು ಬಿಡ್ತಾನ, ಏನೋ ಮಾಡೋದು?
ಮೋಹನ – ರಾಮ ಒಂದ ಕೆಲಸ ಮಾಡೋಣ ಹ್ಯಾಂಗೂ ನಮಗ ದೀಪಾವಳಿ ಆದ ಮ್ಯಾಲ ಬರೋ ತಾಯವ್ವನ ಜಾತ್ರಿಗೆ ದುಡ್ಡು ಕೊಡ್ತಾರ ಒಂದೊಂದಾಣೆ ಜಾಸ್ತಿ ಕೇಳಿದ್ರ ಆತು.
ರಾಮ – ಕೇಳೋದೇನೊ ಕೇಳಬಹುದು ಆದ್ರ ದುಡ್ಡ ಸಿಗೋ ಗ್ಯಾರಂಟಿ ಮಾತ್ರ ಇಲ್ಲ.
ಮೋಹನ – ಮಾಡೋ ಪ್ರಯತ್ನ ಮಾಡೋದು ಒಂದಾಣೆ ಜಾಸ್ತಿ ಸಿಕ್ರ ಛೊಲೋನ ಆತು, ಇಲ್ಲಾಂದ್ರ ನಮಗ ಜಾತ್ರಿಗೆ ಕೊಡೋ ದುಡ್ಡನ್ಯಾಗನ ಒಂದೊಂದಾಣೆ ಉಳಿಸಿಕೊಂಡು ಸೈಕಲ್ ಕಲತ್ರಾತು. ಏ ! ಇನ್ನೊಂದು ವಿಷಯ ಗೊತ್ತಾತನು ?
ರಾಮ – ಏನೋ ಅದು ?
ಮೋಹನ – ರಾಮ ಈ ಸಲ ತಾಯವ್ವನ ಜಾತ್ರಿಗೆ ಸೈಕಲ್ ಮ್ಯಾಲನ ಬರ್ತಾನಂತ. ಅಂವಗೇನಪ ಅವರವ್ವ ದುಡ್ಡು ಕೊಡ್ತಾಳ ಬರ್ತಾನ ನಮ್ಮ ಕಥಿ ಹೇಳು. ಏನ ಆಗಲಿ ಈ ಸತರ್ಿ ಸೈಕಲ್ ಕಲಿಯೋದನ.
ರಾಮ – ಏನೋಪ ನನಗ ನಂಬಿಕಿ ಇಲ್ಲ ದುಡ್ಡಿಂದ ಒಂದು ಸಮಸ್ಯೆ ಆಗೇದ !
ಮೋಹನ – ಏ ಆ ತಾಯವ್ವ ಏನರ ದಾರಿ ತೋರಸ್ತಾಳ ಬಿಡಲೆ.
ರಾಮ – ಏನ ದಾರಿ ತೋರಸ್ತಾಳೋ ಏನ್ ಬಿಡ್ತಾಳೋ, ಹೊತ್ತು ಮುಣಗ್ತಾ ಬಂತು ನಡಿಯಲೆ ಹೋಗೋಣ.
( ಇಬ್ಬರೂ ಮನೆಯ ಕಡೆಗೆ ತೆರಳುತ್ತಾರೆ )
ದೃಶ್ಯ. 3
(ಅದೊಂದು ಭಾನುವಾರ ಬೆಳಗಿನ 9 ಗಂಡೆಯ ಸಮಯ, ರಾಮ ಮತ್ತು ಮೋಹನರು ಸೈಕಲ್ ಕಲಿಯಲು ನಿರ್ಧರಿಸಿದ ದಿನವದು. ತನ್ನ ಮನೆಯ ಮುಂದಿನ ಬೇಲಿಯ ಹತ್ತಿರ ರಾಮ ಮೋಹನನ ಬರುವ ವಿಕ್ಯನ್ನು ಗಮನಿಸುತ್ತ ನಿಂತಿದ್ದಾನೆ. ಇದನ್ನು ಗಮನಿಸಿದ ರಾಮನ ತಂದೆ ಭೀಮಯ್ಯ)
ಭೀಮಯ್ಯ – ಏ ರಾಮ ಏನೋ ಅದು ಬೇಲಿ ಹತ್ರ ಏನು ಮಾಡ್ತಾ ಇದೀಯೋ? ರಜಾ ದಿನಾ ಅಂದ್ರ ನಿನಗ ತಿರಗಾಟಕ್ಕ ಪರವಾನಗಿ ಅಂದಕೊಂಡಿ ಏನು ? ಹೋಗು ಓದಿಕೋ ಹೋಗು.
ರಾಮ – ಇಲ್ಲ ಅಪ್ಪ ! ಮೋಹನ ನನ್ನ ನೋಟ್ ಪುಸ್ತಕ ಒಯ್ದಿದ್ದ ಅದನ್ನ ತಂದು ಕೊಡ್ತೇನಿ ಅಂದಿದ್ದ ಅದಕ್ಕ ಕಾಯ್ತಾ ಇದೀನಿ.
ಭೀಮಯ್ಯ – ಅಂವ ಬಂದರ ಒಳಗ ಬಂದು ಕೊಟ್ಟು ಹೋಗ್ತಾನ, ಈ ಕಳ್ಳಾಟ ಎಲ್ಲ ಬ್ಯಾಡ ಓದಿಕೋ ಹೋಗು.
ರಾಮ – ಈ ನನ್ಮಗ ಮೋನ್ಯಾ ಲಗೂನ ಬರೋದ ಬಿಟ್ಟು ಪ್ಲ್ಯಾನೆಲ್ಲ ಎಡವಟ್ಟ ಮಾಡಿಬಿಟ್ಟ.
(ಎಂದು ನಿರುಪಾಯನಾದ ರಾಮ ಬೇಗನೆ ಬಾರದ ಮೋಹನನ್ನು ಶಪಿಸುತ್ತ ಓದುವ ನಾಟಕ ಮಾಡುತ್ತ ಬೇಲಿಯ ಕಡೆಗೆಯೆ ದಿಟ್ಟಿಸುತ್ತ ಅಪ್ಪ ಹೊರಗೆ ಹೋಗುವ ಅವಕಾಶಕ್ಕಾಗಿಯೆ ಕಾಯುತ್ತ ಕುಳಿತು ಕೊಳ್ಳುತ್ತಾನೆ.)
ಭೀಮಯ್ಯ – ಓದಿಕೋ ಅಂದ್ರ ರಸ್ತೆ ಕಡಿಗೆ ನೋಡತಾ ಕೂತಿಯೇನೋ? ಪಾಠ ಇರೋದು ಪುಸ್ತಕದಾಗ ರಸ್ತೆ ಮ್ಯಾಲ ಅಲ್ಲ. ತುಗೊಳ್ರೋ ಇಂವಗ ಹುಣಸಿ ಬರ್ಲು.
(ಮಧ್ಯಾನ್ಹ ಮೂರು ಗಂಟೆಯ ನಂತರ ಭೀಮಯ್ಯ ಜಮೀನಿನ ಕಡೆಗೆ ಹೊರಟರು. ಇದನ್ನು ಗಮನಿಸಿ ರಾಮ ಮನೆಯಿಂದ ಹೊರ ನಡೆದು ಮೋಹನನ ಮನೆಗೆ ತೆರಳಿದ. ರಾಮ ಬಂದುದನ್ನು ಗಮಿನಿಸಿದ ಆತ)
ಮೋಹನ – ರಾಮ ನೀನು ಬರ್ತಿ ಅಂತ ನಾನು ಬೆಳಗಿನಿಂದ ಕಾದೆ. ನಿಮ್ಮ ಮನಿ ಹತ್ರಾನೂ ಬಂದಿದ್ದೆ ನಿಮ್ಮಪ್ಪ ಇದ್ರು ಅಂತ ಒಳಗೆ ಬರಲಿಲ್ಲ, ಸುಮಾರು ಹೊತ್ತು ಕಾದು ಮನೆಗೆ ಮರಳಿ ಬಂದೆ.
ರಾಮ – ನಾನೂ ಬೆಳಿಗ್ಗೇನ ಬರಬೇಕು ಅಂತ ಮನಿಯಿಂದ ಹೊರಟಿದ್ದೆ, ನಮ್ಮಪ್ಪ ನನ್ನ ನೋಡಿ ಬೈದು ಪಾಠ ಮಾಡಿಕೊಳ್ಳೊಕ ಕೂಡಿಸಿದರು, ಹಿಂಗಾಗಿ ಬರಲಿಕ್ಕೆ ಆಗಲಿಲ್ಲ.
(ಇಬ್ಬರೂ ಸೇರಿ ಬಸವನ ಮನೆಯ ಕಡೆಗೆ ಹೊರಟು ಬಂದರು, ಇವರು ತನ್ನ ಮನೆೆಗೆ ಬಂದುದನ್ನು ಗಮನಿಸಿದ ಆತ)
ಬಸವ – ಹೋಗ್ರಲೆ ಈಗ ಬಂದಾರ ! ನಾನು ನೀವು ಬತರ್ೀರಿ ಅಂತ ಬೆಳಗಿನಿಂದನ ಕಾದ ಕೂತಿದ್ದೆ, ಈಗ ನಾನು ದನಕ್ಕ ಹುಲ್ಲು ತರೋಕ ಜಮೀನಿನ ಕಡೆಗೆ ಹೊಗಬೇಕು. (ಎಂದು ಬಿಗುಮಾನ ತೋರಿದ)
ರಾಮ – ಏನ್ಮಾಡೋದೊ ಬೆಳಿಗ್ಗೇನ ಬರಬೇಕು ಅಂತನ ಹೊರಟಿದ್ದೆ ಅದನ್ನ ನೋಡಿ ನಮ್ಮಪ್ಪ ಬೈದರು ಬರಲಿಕ್ಕೆ ಆಗಲಿಲ್ಲ.
ಬಸವ – ಅದ್ಯಾಕೋ ಬೈತಾರೆ? ಸೈಕಲ್ ಕಲಿಯೋಕೆ ಹೋಗ್ತೇನಿ ಅಂದರಾತು.
ರಾಮ – ಹಾಂಗೇನರ ಹೇಳೀದರ ಮುಗದು ಹೋತು ನಾ ಸೈಕಲ್ ಕಲತಂಗ್ಹನ ! ನಮ್ಮಪ್ಪನ ವಿಷಯ ನಿನಗೇನು ಗೊತ್ತು?
ಬಸವ – ಮತ್ತೇನು ನಮ್ಮಪ್ಪ ನನಗ ಸೈಕಲ್ ಕಲಿಯಾಕ ಹೋಗು ಅಂತ ಕಳಸ್ತಾನೇನು? ಯಾರಪ್ಪಂದ್ರೂನು ಕಳಸೋದುಲ್ಲ ತಮ್ಮ, ನಾವ ಏನರ ಐಡಿಯಾ ಮಾಡಿ ಬರಬೇಕು ಗೊತ್ತಾ,, ಎಲ್ಲೆ ಸೈಕಲ್ ಭಾಡಿಗೆ ರೊಕ್ಕಾ ತಂದೀರಿ ?
(ರಾಮ ಮತ್ತು ಮೋಹನರು ತಮ್ಮ ಜೋಬುಗಳಿಂದ ಒಂದೊಂದಾಣೆ ತಗದು ಬಸವನ ಕೈಗೆ ಇಟ್ಟರು)
ಮೋಹನ – ಬಸವ ನೀ ಸೈಕಲ್ ತುಗೊಂಬಾ ನಾವಿಬ್ರೂ ನಾಕಾದ ಬೈಲಿನ ಹತ್ತರ ಕಾಯ್ತಾ ಇರ್ತೀವಿ.
ಬಸವ – ಸರಿ ನೀವು ಅಲ್ಲಿಗೆ ಹೋಗರಿ ನಾನು ರಫಿಕ್ ಶಾಪಿನಿಂದ ಸೈಕಲ್ ತುಗೊಂಡು ಬಂದು ಬಿಡತೀನಿ.
ರಾಮ – ಮತ್ತ ಸೈಕಲ್ ತುಗೋಡು ಅಲ್ಲೆ ಇಲ್ಲೆ ತಿರಗಾಡಾಕ ಹೋಗಿ ಬಿಡ ಬ್ಯಾಡಲೆ ಲಗೂನ ಬಂದ ಬಿಡು.
ಬಸವ – ಓಹೋ ! ನಾನೇನು ಸೈಕಲ್ ಕಂಡೇ ಇಲ್ಲ ನೋಡು ನಿಮ್ಮ ದುಡ್ಡಿನ ಸೈಕಲ್ ನನಗ ಬೇಕಾಗಿಲ್ಲ , ಹೋಗಲೆ ಭಾಳ ಕೊಸಿ ಬ್ಯಾಡ್ರಿ ಮೊನ್ನೆ ನಾ ನಿಮಗ ಸೈಕಲ್ ಕೊಟ್ಟದ್ದು ಮರಿ ಬ್ಯಾಡ್ರಲೆ ಗೊತ್ತಾತ. (ಎಂದು ಹೇಳುತ್ತ ಸೈಕಲ್ ತರಲು ತೆರಳಿದ)
ಮೋಹನ – ಏ ಹಂಗ್ಯಾಕ ಹೇಳೋಕ ಹೋಗಿದ್ದೆಲೆ? ಅಂವ ಅದಕ ಏನರ ತಿಳಕೊಂಡು ಸೈಕಲ್ ಕಲಸೋದುಲ್ಲ ಅಂದರ ಏನ್ ಮಾಡ್ತಿ?
ರಾಮ – ಏ ಅಂವ ಹಂಗೆಲ್ಲ ಮಾಡೋದುಲ್ಲ ತುಗೋ, ಅಂವ ಬರೆ ವಡ ವಡ ಸಿಂಗಾ ಬರೆ ಹಂಗ ಮಾತಾಡ್ತಾನ ಇರತಾನ.
(ರಾಮ ಮೋಹನ ಇಬ್ಬರೂ ತ್ವರಿತ ಗತಿಯಲ್ಲಿ ನಾಕಾದ ಬಯಲಿನ ಕಡೆಗೆ ಹೋದರು. ರಸ್ತೆಗೆ ಹತ್ತಿರದಲ್ಲಿದ್ದ ಓಂದು ದೊಡ್ಡ ಹುಲುಗಲ ಮರದ ಕೆಳಗೆ ಬಸವನ ಆಗಮನದ ನಿರೀಕ್ಷೆಯಲ್ಲಿ ಕಾದು ನಿಂತರು. ಆ ವಿಶಾಲ ಬಯಲನ್ನೊಮ್ಮೆ ಗಮನಿಸಿದ ಅದರ ವಿಶಾಲವಾದ ವಿಸ್ತಾರವನ್ನು ಕಂಡ ರಾಮ ಅಚ್ಚರಿಗೋಂಡು ಅದನ್ನು ಸುತ್ತಲೂ ಗಮನಿಸುತ್ತ ನಿಂತ)
ರಾಮ – ಮೋಹನ ಎಷ್ಟು ದೊಡ್ಡ ಬಯಲು ಅಲ್ವೇನೋ ? ಒಂದು ರೌಂಡು ಸೈಕಲ್ ಮ್ಯಾಲ ಹೋಗಿ ಬರಲಿಕ್ಕೆ ಕಾಲು ಗಂಟೇನ ಬೇಕಾಗ್ತದೋ ಏನೋ ಅಲ್ಲೇನೋ ?
ಮೋಹನ – ಸೈಕಲ್ ಕಲ್ಯಾಕ ಇಷ್ಟು ದೊಡ್ಡ ಬಯಲ ಇರಬೇಕು.
ರಾಮ – ಮೋಹನ ಇಂವಾ ನಾಕ ಗಂಟೇಕೇನ ಬರ್ತೇನಿ ಅಂದವ ನಾಲ್ಕೂವರೆ ಆದರೂ ಇನ್ನೂ ಬರಲಿಲ್ಲಲ್ಲೊ?
ಮೋಹನ – ರಾಮ ನೀ ಹೇಳಿದ್ಹಾಂಗ ಈ ನನ್ಮಗ ಬಸವ ಸೈಕಲ್ ತುಗೊಂಡು ಊರು ಸುತ್ತಿ ಬರಾಕನ ಹೋಗ್ಯಾನ ನೋಡು.
ರಾಮ – ಮತ್ತ ಆವಾಗನ ನಾ ಹೇಳೀದ್ರ ನನಗ ಬಯ್ಯಾಕ ಬಂದಿ ನೋಡೀಗ ? ಈ ನನ್ಮಗನ ಅಡ್ಡಗೆರಿ ಎಲ್ಲ ನನಗ ಗೊತ್ತು ಗೊತ್ತಾತನು.
(ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ರಸ್ತೆಯ ಮೇಲೆ ಬರುತ್ತಿದ್ದ ಬಸವನನ್ನು ಗಮನಿಸಿದ ಮೋಹನ)
ಮೋಹನ – ಸುಮ್ನಿರಲೆ ಬಸವ ಬರ್ತಾ ಇದಾನೆ ಮತ್ತ ನೀ ಮಾತಾಡೋದು ಕೇಳಿಸ್ಕೊಂಡು ಮತ್ತೇನರ ಅಡ್ಡ ತಕ್ಕೊಂಡು ಕುಂತಾನು, ನೋಡು ನನ್ಮಗ ನಿಧಾನಕ್ಕ ಹ್ಯಾಂಗ ರಾಜಕುಮಾರ ಬಂದ್ಹಾಂಗ ಬರಲಿಕ್ಕೆ ಹತ್ಯಾನ ನೋಡು. ಅಂವ ನಮಗ ಸೈಕಲ್ ಕಲಸೋ ಗುರು ಇಂತಹವನೆಲ್ಲ ಸಹಿಸಿಕೋ ಬೇಕಪಾ.
ರಾಮ – ಸಹಿಸಕೋ ನನ್ಮಗನ ಸಹಿಸಿಕೋ ಒಂದ ಗಂಟೆ ಸೈಕಲ್ ತಾ ಹೊಡದು ಒಂದ ಗಂಟೆ ನಮಗಿಬ್ಬರಿಗೂ ಒಂದ ಗಂಟೆ ಸೈಕಲ್ ಕಲಸ್ತಾನ ನೋಡು.
(ಇವರಿಬ್ಬರೂ ಇದ್ದಲ್ಲಿಗೆ ಬಂದ ಬಸವ ಒಂದು ರೌಂಡ್ ಸೈಕಲ್ ತಾನು ಚೆಕ್ ಮಾಡಿಕೊಂಡು ಬರುವುದಾಗಿ ತಿಳಿಸಿ ಸೈಕಲ್ ತೆಗೆದುಕೊಂಡು ಹೊದ. ರಾಮ ಮೋಹನರಿಬ್ಬರೂ ಪರಸ್ಪರ ಮುಖ ನೋಡಿ ಕೊಂಡರು)
ಮೋಹನ – ರಾಮಾ ನೀ ಹೇಳಿದ್ದು ಸರೀನ ನೋಡು ಅವನ ಒಂದು ಗಂಟೆ ಸೈಕಲ್ ಹೊಡಿತಾನ ನೋಡು.
ರಾಮ – ಮತ್ತ ನಾನು ಹೇಳಲಿಲ್ಲೇನೋ ನಿನಗ, ನಮ್ಮ ದೇವರ ಸತ್ಯ ನನಗ ಗೊತ್ತದನಪಾ.
(ಹತ್ತು ನಿಮಿಷದಲ್ಲಿ ಮರಳಿ ಬಂದ ಬಸವ ಸೈಕಲ್ನಿಂದ ಇಳಿದವನು ರಾಮ ಮೊಹಮರನ್ನು ಉದ್ದೇಶಿಸಿ ಮಾತಿಗೆ ತೊಡಗಿದ)
ಬಸವ – ನೀವು ಸೈಕಲ್ ಮ್ಯಾಲ ಹತ್ತಿ ಕೂತ ಮ್ಯಾಲ ನೀವು ಎರಡೂ ಹ್ಯಾಂಡಲ್ಗಳನ್ನ ಗಟ್ಟಿಯಾಗಿ ಹಿಡಕೋ ಬೇಕು. ನಿಮ್ಮ ದೇಹದ ಭಾರ ಸೀಟಿನ ಮೇಲೆ ಸಮಾನವಾಗಿ ಇರಬೇಕು. ಎದುರುಗಡೆ ನೋಡುತಾ ಪೆಡಲ್ ತುಳೀತಾ ಮುಂದೆ ಹೋಗಬೇಕು. ಎಡಗಡೆ ತಿರುಗಬೇಕು ಅಂದರ ಎಡಗಡೆ ಹ್ಯಾಂಡಲ್ ತಿರುಗಿಸಬೇಕು, ಬಲಗಡೆಗೆ ತಿರುಗಿಸಬೇಕು ಅಂದರ ಬಲಗಡೆಯ ಹ್ಯಾಂಡಲ್ ತಿರುಗಿಸಬೇಕು. ಮೊದಲು ಯಾರು ಹತ್ತತೀರಿ.
(ರಾಮ ಮೊದಲು ಬಂದ ಅವನು ಎರಡು ಸುತ್ತು ಹೋಗಿ ಬಾಂದ ನಂತರ ಮೋಹನ ಸಹ ಎರಡು ಸುತ್ತು ಹೋಗಿ ಬಂದ. ಇನ್ನೊಂದು ಸುತ್ತು ಸೈಕಲ್ ಮೇಲೆ ರಾಮ ಕುಳಿತ. ಆಚೆ ಈಚೆ ಬಸವ ಮತ್ತು ಮೋಹನ ಹಿಡಿದು ಕೊಂಡರು, ಸೈಕಲ್ ಸರಾಗವಾಗಿ ಚಲಿಸುತ್ತಿತ್ತು, ಖುಷಿಯಾದ ರಾಮ ವೇಗವಾಗಿ ಪೆಡಲ್ ತುಳಿಯಲು ಪ್ರಾರಂಭಿಸಿದ, ಇಳಿಜಾರು ನೆಲ, ಸೈಕಲ್ ವೇಗವಾಗಿ ಚಲಿಸುತ್ತಿತ್ತು ರಾಮನಿಗೆ ಗಾಳಿಯಲ್ಲಿ ತೇಲಿದ ಅನುಭವ. ಸೈಕಲ್ ವೇಗಕ್ಕೆ ಹೊಂದಿಕೊಳ್ಳಲಾಗದ ಬಸವ ಮತ್ತು ಮೋಹನರು ಹಿಂದುಳಿದರು. ಏಕೋ ರಾಮನಿಗೆ ಭಯವಾಗಿ ಒಂದು ಕ್ಷಣ ಹಿಂದಿರುಗಿ ನೋಡಿದ, ಬಸವ ಮೋಹನರು ಹಿಂದುಳಿದು ಬಿಟ್ಟಿದ್ದರು. ಗಲಿಬಿಲಿಗೊಂಡ ರಾಮ ಹಿಂದಿನ ಗಾಲಿ ಬ್ರೆಕ್ ಒತ್ತುವ ಬದಲು ಮುಂದಿನ ಗಾಲಿಯ ಬ್ರೆಕ್ ಒತ್ತಿ ಬಿಟ್ಟಿದ್ದ. ರಾಮ ತೆಗ್ಗಿನಲ್ಲಿ ಬಿದ್ದಿದ್ದ ಸೈಕಲ್ ಏರಿಯ ಮೇಲೆ ಹೋಗಿ ಬಿದ್ದಿತ್ತು. ರಾಮನ ಮೈಕೈಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿ ಅಲ್ಲಲ್ಲಿ ರಕ್ತ ಜಿನುಗುತ್ತಿತ್ತು. ಸೈಕಲ್ ಮೇಲಿಂದ ಬಿದ್ದ ಅವಮಾನ ಬಸವನ ನಗು ಅವನನ್ನು ಕೆರಳುವಂತೆ ಮಾಡಿದವು )
ರಾಮ – ಮಗನ ನಾ ಬಿದ್ದದ್ದು ನೋಡಿ ನಗ್ತೀಯಾ ?
ಬಸವ – ಮತ್ತ ಅವತ್ತ ನಾ ಬಿದ್ದಾಗ ನೋಡಿ ನಗ್ತಾ ಇದ್ದೆ?
ರಾಮ – ಅದಕ್ಕ ಇವತ್ತ ನನ್ನ ಬೀಳಿಸಿ ನಗ್ತಾ ಇದ್ದೀಯಾ?
ಬಸವ – ಎಡಗಡೆ ಬ್ರೆಕ್ ಹಾಕಿ ಇಳಿಯೋ ಅಂತ ನಾ ಕೂಗಿಕೋತನ ಇದ್ದೆ ಅದನ್ನ ಕೇಳಿಸಿಕೊಳ್ಳದೇನ ನೀ ತಪ್ಪ ಮಾಡ್ಕೊಂಡು ಬಿದ್ದು ಮತ್ತ ನನ್ನ ಮ್ಯಾಲನ ರೇಗ್ತೀಯಾ?
ರಾಮ – ನೀ ಸರಿಯಾಗಿ ಮಾಹಿತಿ ಕೊಟ್ಟು ಸೈಕಲ್ ಹತ್ತಸಬೇಕಾಗಿತ್ತು
ಬಸವ – ನಾ ಸರಿಯಾದ ಮಾಹಿತೀನ ಕೊಟ್ಟೇನಿ ನೀ ಸರಿಯಾಗಿ ತಿಳಕೊಳ್ಳದನ ಎಡವಟ್ಟು ಮಾಡಿಕೋಂಡರ ನಾ ಏನ್ ಮಾಡ್ಲಿ?
(ಸೈಕಲ್ನ್ನು ಎತ್ತಿತಂದ ಬಸವ ಅದನ್ನು ಪರೀಕ್ಷಿಸಿದ ಅದರ ಹ್ಯಾಂಡಲ್ ಸ್ವಲ್ಪ ಬೆಂಡಾಗಿತ್ತು ಕೆಲವು ಬಾಲ್ ಬೇರಿಂಗ್ಗಳು ಕಳಚಿ ಬಿದಿದ್ದವು)
ಮೋಹನ – ಬಸವ ಸೈಕಲ್ಲಿಗೆ ಏನರ ಆಗೇದೇನೊ?
ಬಸವ – ಹ್ಞೂಂ ಹ್ಯಾಂಡಲ್ ಬೆಂಡ್ ಆಗೇದ, ಕೆಲವು ಬಾಲ್ ಬೇರಿಂಗ್ ಬಿದ್ದು ಹೋಗ್ಯಾವ.
ಮೋಹನ – ಮತ್ತ ಹಿಂಗ ಒಯ್ದು ಕೊಟ್ಟರ ರಫಿಕ್ ಸುಮ್ಮನ ಇರತಾನೇನೋ?
ಬಸವ – ಸ್ವಲ್ಪ ಲೇಟಾಗಿ ಸೈಕಲ್ ಒಯ್ದು ಕೊಟ್ರನ ಒಂದು ಬಿಲ್ಲಿ ತುಗೋತಾನ, ಈಗ ಸೈಕಲ್ ಹಾಳಾಗೇದ ಅಂದ್ರ ಸುಮ್ನ ಬಿಡ್ತಾನಾ ಅಂವ?
ಮೋಹನ – ರಿಪೇರಿ ದುಡ್ಡು ಎಷ್ಟು ಕೇಳ್ತಾನೋ ?
ಬಸವ – ಸುಮಾರು ಒಂದು ರೂಪಾಯಿ ಕೇಳಿದ್ರೂ ಕೇಳಬಹುದು.
ಮೋಹನ – ಅಷ್ಟೊಂದು ದುಡ್ಡು ಎಲ್ಲಿಂದ ತರೋದೋ ?
ಬಸವ – ಎಲ್ಲಿಂದ ತರೋದು ಅಂದ್ರ ಮನ್ಯಾಗ ಇಸಗೊಂಡು ಬರಬೇಕಪಾ.
(ಮೋಹನ ರಾಮನ ಮುಖ ನೋಡಿದ, ಅವನಿಗೆ ವಾಸ್ತವದ ಸ್ಥಿತಿಯ ಅರಿವಾಗಿತ್ತು ಜೊತೆಗೆ ಆತನ ಮುಖ ಬಾಡಿತ್ತು, ಆದರೂ ಪರಿಸ್ಥಿತಿ ಎದುರಿಸ ಬೇಕಿತು)
ಮೋಹನ – ರಾಮ ಈಗ ಏನ್ಮಾಡೋದೋ?
ರಾಮ – ನಮ್ಮನ್ಯಾಗ ನಮ್ಮಪ್ಪಗ ಗೊತ್ತಾದರ ನನಗ ಹಿಡಕೋಂಡು ಬಡೀತಾರ
(ರಾಮ ಅಳಲು ಪ್ರಾರಂಭಿಸಿದ, ಆತನ ಪರಿಸ್ಥಿತಿಯ ಅರಿವು ಬಸವ ಮತ್ತು ಮೋಹನರಿಗಾಗಿತ್ತು. ಒಂದು ರೂಪಾಯಿಯ ಮೊತ್ತ ಅವರಿಗೂ ದೊಡ್ಡದೆ, ಅವರೂ ಯೋಚನೆಗೆ ಬಿದ್ದರು. ಒಂದು ತರಹದ ನೀರವ ಮೌನ ಅಲ್ಲಿ ವ್ಯಾಪಿಸಿತು. ಈ ಘಟನೆಗೆ ಯಾರೂ ನೇರ ಹೊಣೆಗಾರರಲ್ಲ. ರಾಮ ಮತ್ತು ಮೋಹನರು ತಮ್ಮಲ್ಲಿದ್ದ ಸೈಕಲ್ ಭಾಡಿಗೆ ಹಣವನ್ನು ಆಗಲೆ ಕೊಟ್ಟಾಗಿತ್ತು.. ಅವರಿಂದ ಬೇರೆ ಹಣ ನಿರೀಕ್ಷಿಸುವಂತಿರಲಿಲ್ಲ ಸಂಜೆ 6 ಗಂಟೆಯ ಸಮಯ ಮೀರಿತೆಂದರೆ ಸೈಕಲ್ ಶಾಪ್ ರಫಿಕ್ಗೆ ಮತ್ತೆ ಹೆಚ್ಚಿಗೆ ಹಣ ಕೊಡಬೇಕು ಸೈಕಲ್ ತಂದವ ತಾನು, ತಾನೇ ಒಯ್ದು ಸೈಕಲ್ ಕೊಡಬೇಕು. ಇಂತಹ ಅನೇಕ ಘಟನೆಗಳನ್ನು ಚಾಲಾಕಿತನದಿಂದ ನಿಭಾಯಿಸಿದ ಅನುಭವವಿದ್ದ ಬಸವ ಎಲ್ಲರಿಗೂ ಒಪ್ಪಿತವಾಗುವ ಒಂದು ಆಲೋಚನೆಯನ್ನು ಮುಂದಿಟ್ಟ.)
ಬಸವ – ಈಗ ಒಂದು ಕೆಲಸ ಮಾಡೋಣ, ಈ ಸೈಕಲ್ ನಿಧಾನಕ್ಕೆ ಒಯ್ದು ಸೈಕಲ್ ಶಾಪ್ನ ಗೋಡೆಗೆ ಸಮಯ ನೋಡಿ ಒರಗಿಸಿಟ್ಟು ಸೈಕಲ್ ಭಾಡಿಗೆ ಹಣ ರಫಿಕ್ಗೆ ಕೊಟ್ಟು ಅಲ್ಲಿಂದ ಹೊರಟು ಬಿಡೋಣ. ಮುಂದೆ ಸ್ವಲ್ಪ ದಿನ ಆ ಓಣಿಯಲ್ಲಿ ಯಾರೂ ಒಡಾಡುವದು ಬೇಡ. ಅಕಸ್ಮಾತಾಗಿ ರಫಿಕ್ ಸೈಕಲ್ ಗಮನಿಸಿ ರಿಪೇರಿ ಹಣ ಕೇಳಿದರೆ ನಾನಂತೂ ಏನೂ ಮಾಡೋಕಾಗಲ್ಲ ಸೈಕಲ್ ಕೆಡವಿ ಹಾಳು ಮಾಡಿದ್ದು ರಾಮ ಅವನೆ ರೆಪೇರಿ ಹಣ ಕೊಡಬೇಕು.
ರಾಮ – ಆ ರೀತಿ ಸೈಕಲ್ ಇಟ್ಟು ಬರೋದು ಮೋಸ ಅಲ್ವೇನೋ?
ಬಸವ – ಹೌದಯ್ಯಾ ಅದು ಮೋಸಾನ, ಈಗ ನಮ್ಮ ಯಾರ ಹತ್ರಾನೂ ಅಷ್ಟು ಹಣ ಇಲ್ಲ ಏನ್ಮಾಡೋದು ನೀನ ಹೇಳು.
(ವಸ್ತು ಸ್ಥಿತಿಯ ಅರಿವಾದ ರಾಮ ಸುಮ್ಮನಾದ, ಸೈಕಲ್ ತೆರಗೆದುಕೊಂಡು ಹೊರಟ ಬಸವನನ್ನು ರಾಮ ಮತ್ತು ಮೋಹನರು ಅವನನ್ನು ಅನುಸರಿಸಿದರು. ರಫಿಕ್ ತನ್ನ ಶಾಪ್ನಲ್ಲಿ ಸೈಕಲ್ ಟ್ಯೂಬ್ನ ಪಂಕ್ಚರ್ ಹಾಕುತ್ತ ಕುಳಿತಿದ್ದ. ಸೈಕಲ್ ಹಿಂದಿರುಗಿಸಿ ಬರಲು ಇದೇ ಸಮಯವೆಂದು ಭಾವಿಸಿದ ಬಸವ ನಿಧಾನಕ್ಕೆ ಶಾಪ್ನ ಪಕ್ಕದ ಗೋಡಗೆ ಸೈಕಲ್ ಒರಗಿಸಿಟ್ಟು ಬಾಡಿಗೆ ಹಣವನ್ನು ರಫಿಕ್ನ ಕೈಗಿತ್ತ. ತನ್ನ ಕೆಲಸದಲ್ಲಿ ಗಾಢವಾಗಿ ತೊಡಗಿಸಿ ಕೊಂಡಿದ್ದ ರಫಿಕ್ ಗೋಡೆ ಗಡಿಯಾರದ ಕಡೆಗೆ ನೋಡಿ ಭಾಡಿಗೆ ಹಣವನ್ನು ತನ್ನ ಜೋಬಿಗೆ ಇಳಿಸಿ ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ. ಹೊರಗೆ ರಸ್ತೆಗೆ ಬಂದ ಬಸವ ಅವರಿಬ್ಬರಿಗೂ ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ಸನ್ನೆ ಮಾಡಿ ತಾನೂ ತನ್ನ ಮನೆಯ ಕಡೆಗೆ ನಡೆದ. ರಾಮ ಮೋಹನರೂ ತಮ್ಮ ತಮ್ಮ ಮನೆಗಳ ಕಡೆಗೆ ತೆರಳಿದರು.
ಈ ಘಟನೆ ಮುಂದೆ ಬಹಳ ದಿನ ರಾಮನನ್ನು ಕಾಡುತ್ತಲೆ ಇತ್ತು. ಅಪರಾಧ ಪ್ರಜ್ಞೆಯಿಂದ ಆತ ಕುಗ್ಗಿ ಹೋಗಿದ್ದ. ಮುಂದೆ ಆತ ತನ್ನ ಸೈಕಲ್ ಕಲಿಯುವ ತನ್ನ ಆಶೆಯನ್ನು ಬಿಟ್ಟು ಬಿಡುತ್ತಾನೆ. ಮುಂದೆ ಪದವೀಧರನಾದ ರಾಮಯ್ಯ ಎಲ್ಐಸಿಯಲ್ಲಿ ಉದ್ಯೋಗಕ್ಕೆ ಸೇರಿ ಉನ್ನತ ಹುದ್ದೆಗೇರಿ ನಿವೃತ್ತರಾಗುತ್ತಾನೆ. ಅದೇ ಗುಂಗಿನಲ್ಲಿಯೆ ಇದ್ದ ಅವರು ಯೋಚಿಸುತ್ತಾರೆ. ಆಗಿನ ಕಾಲದ ಕಟ್ಟು ಪಾಡುಗಳು ಎಷ್ಟು ಕಠಿಣವಾಗಿದ್ದವು. ಆಗಿನ ಸಮಾಜದಲ್ಲಿ ವಿಶೇಷವಾಗಿ ಹಳ್ಳಿಗಾಡಿನಲ್ಲಿ ಆಧುನಿಕತೆ ಮತ್ತು ನೂತನ ವೈಜ್ಞಾನಿಕ ಆವಿಷ್ಕಾರಗಳನ್ನು ಅಷ್ಟು ಮುಕ್ತ ಮನದಿಂದ ಒಪ್ಪಿಕೊಳ್ಳುತ್ತಿರಲಿಲ್ಲ.
ಆತನ ತಂದೆ ಭೀಮಯ್ಯ ಗತಿಸಿ ಎಪ್ಪತ್ತು ವರ್ಷಗಳೇ ಸಂದಿವೆ. ಆಗಲೆ ಮೂರನೆ ತಲೆಮಾರು ಅವರ ಮನೆಗೆ ಬಂದಿದೆ. ಅವರ ಮೊಮ್ಮಗ ರವಿ ಆ ಮೂರ್ತನೆ ತಲೆಮಾರಿನವ. ತಾವು ಆ ದಿನಗಳಲ್ಲಿ ಸೈಕಲ್ ಭಾಡಿಗೆ ಹಣ ಹೊಂದಿಸಲು ಪಟ್ಟ ಕಷ್ಟವೆಷ್ಟು? ಆದರೆ ಈಗ ತಮ್ಮ ಮೊಮ್ಮಗ ಎಷ್ಟು ನಿರ್ಭಯದಿಂದ ಸೈಕಲ್ ಕಲಿಯಲು ಭಾಡಿಗೆಗೆ ಹಣ ಪಡೆದು ಹೋದ. ಕಾಲದ ಬದಲಾವಣೆ ಅವರಿಗೆ ವಿಸ್ಮಯ ವೆನಿಸಿತು. ಕಾಲ ಪಡೆಯುತ್ತಿರುವ ವೇಗ ಮತ್ತು ಸುಧಾರಣೆಯ ದಿಕ್ಕು ಅವರನ್ನು ಅಚ್ಚರಿಗೆ ದೂಡಿತು.)
ದೃಶ್ಯ . 4
ರವಿ – ಅಜ್ಜ ನಾನು ಸೈಕಲ್ ಕಲಿತೆ ಇನ್ನೊಂದು ವಾರದಲ್ಲಿ ನಾನೂ ಸಹ ಊರಿನಲ್ಲಿ ಸೈಕಲ್ ಹೊಡೆಯಬಲ್ಲೆ (ಎಂದು ಹೆಮ್ಮೆಯಿಂದ ಬೀಗಿದ, ವಾಸ್ತವ ಪ್ರಪಂಚಕ್ಕೆ ಬಂದ ರಾಮಯ್ಯ)
ರಾಮಯ್ಯ – ಹೌದೇನೋ ರವಿ ನಿಜಕ್ಕೂ ಸೈಕಲ್ ಹೊಡೆಯಲು ಕಲಿತೆಯೇನೋ? (ಎಂದು ಅಚ್ಚರಿ ವ್ಯಕ್ತ ಪಡಿಸಿದರು)
ರವಿ – ಹೌದು ಅಜ್ಜ ನಿಜಕ್ಕೂ ಸೈಕಲ್ ಕಲಿತೆ, ಚಿಲ್ಲರೆ ಹಣ ತೆಗೆದುಕೋ (ಎಂದು ತನ್ನ ಜೋಬಿನಿಂದ ತೆಗೆದು ಕೊಡಲು ಹೋದ)
ರಾಮಯ್ಯ – ಬೇಡ ನಿನ್ನ ಹತ್ತಿರಾನ ಇಟ್ಟುಕೋ ಮತ್ತೆ ಸೈಕಲ್ ಕಲಿಯೋಕೆ ಬರುತ್ತೆ
ರವಿ – ಇಲ್ಲ ಅಜ್ಜ ! ನಿನ್ನ ಹತ್ತಿರವೆ ಇರಲಿ ನನಗೆ ಬೇಕಾದಾಗ ಕೇಳಿ ತುಗೋತೀನಿ.
(ರಾಮಯ್ಯ ಆ ಚಿಲ್ಲರೆ ಹಣವನ್ನು ತಮ್ಮ ಜೋಬಿಗೆ ಹಾಕಿ ಕೊಂಡರು, ಅಷ್ಟರಲ್ಲಿ ಅಲ್ಲಿಗೆ ಬಂದ ರವಿಯ ತಾಯಿ ವೈದೇಹಿ)
ವೈದೇಹಿ – ಆಯಿತು ಸೈಕಲ್ ಹೊಡೆದು ಬಂದು ಆತಲ್ಲ, ಇನ್ನಾದರೂ ಕೈಕಾಲು ಮುಖ ತೊಳೆದುಕೊಂಡು ಬಂದು ದೇವರಿಗೆ ಕೈ ಮುಗಿದು ಪಾಠ ಮಾಡಲು ಕೂಡು.
ರವಿ – ಆಯಿತಮ್ಮ.
(ತಾಯಿ ಮಗ ಅಲ್ಲಿಂದ ನಿರ್ಗಮಿಸುತ್ತಿದ್ದಂತೆ ಅಲ್ಲಿಯೆ ಖುಚರ್ಿಯ ಮೇಲೆ ಕುಳಿತ ರಾಮಯ್ಯ ಪಶ್ಚಿಮದ ದಿಗಂತವನ್ನು ದಿಟ್ಟಿಸುತ್ತ ಕುಳಿತರು. ಅಲ್ಲಿನ ವರ್ಣ ವೈಭವ ವಿಶೇಷ ರಂಗಿನಿಂದ ಕೂಡಿತ್ತು. ತಣ್ಣನೆಯ ಗಾಳಿ ಬೀಸಲು ಪ್ರಾರಂಭಿಸಿತ್ತು, ಹೊರೆಗ ಬಂದ ಸಾವಿತ್ರಮ್ಮ)
ಸಾವಿತ್ರಮ್ಮ – ಇದೇನಿದು ಹೊತ್ತು ಮುಳುಗ್ತಾ ಇದೆ ಥಂಡಿ ಗಾಳಿ ಬೀಸ್ತಾ ಇದೆ ಒಳಗೆ ಬನ್ನಿ (ಎಂದು ಒಳಕ್ಕೆ ಹೋದರು)
ರಾಮಯ್ಯ – ಹೌದು ಹೊತ್ತು ಮುಳುಗ್ತಾ ಇದೆ (ಎಂದು ಸ್ವಗತವಾಗಿ ಹೇಳಿ ಕೊಳ್ಳುತ್ತ ಮನೆಯ ಒಳಕ್ಕೆ ನಡೆದರು. ರವಿ ತನ್ನ ಓದಿನ ಕಡೆಗೆ ಗಮನ ಹರಿಸಿದ್ದ)
***








ಸರ್ ನಮಸ್ಕಾರ. ರಾಮನ ಸೈಕಲ್ ಸವಾರಿ ತುಂಬ ಚನ್ನಾಗಿ ಮೂಡಿಬಂದ ನಾಟಕ. ನೈಜ ಘಟನೆಯಂತೆ ತುಂಬ ಕುತೂಹಲಭರಿತವಾಗಿದೆ. ಅಂದಿನ ದಿನಗಳಿಗೆ ಬಹಶ: ಓದುಗರನ್ನು ಕರೆದೊಯ್ಯುವಲ್ಲಿ ಸಫಲಗೊಂಡಿದೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು ನಾಟಕದ ಕುರಿತು ಬರೆದ ಪ್ರತಿಕ್ರಿಯೆಗೆ ಧನ್ಯವಾದಗಳು.