'ಮತ್ತೆ ನೆನಪಾದಳು…' ವಿಜಯಲಕ್ಷ್ಮಿ ಬರೆದ ಸಣ್ಣ ಕಥೆ

Untitled

ಎಸ್  ಪಿ  ವಿಜಯಲಕ್ಷ್ಮಿ

ರುಕ್ಮಿಣಿ ದೊಡ್ಡಮ್ಮ. ಅಡಿಗಡಿಗೆ ನೆನಪಾಗುತ್ತಾಳೆ. ಎಡೆಬಿಡದೆ ಹಿಂಬಾಲಿಸುತ್ತಾಳೆ. ಈಗಲ್ಲ, ಅದೆಷ್ಟೋ ಕಾಲದಿಂದ. ‘ಯಾಕೆ ಕಾಡುತ್ತೀಯೆ ?’ ಎಂದು ಒಮ್ಮೊಮ್ಮೆ ಅವಳ ಮೇಲೆ ಬೇಸರಿಸುತ್ತೀನಿ. ಉತ್ತರ ಹೇಳಲು ಅವಳೆಲ್ಲಿದ್ದಾಳೆ. ಕಾಲನ ತೆಕ್ಕೆಯಲ್ಲಿ ನೆಮ್ಮದಿಯಾಗಿ ಮಲಗಿದ್ದಾಳೆ.ಹಾಗೆಂದು ನಾನು ಭಾವಿಸಿದ್ದೀನಿ ಅಷ್ಟೆ. ಇರುವಾಗ ಕಾಣದ ನೆಮ್ಮದಿ ಶಾಶ್ವತವಾಗಿ ಮಲಗಿದಮೇಲೆ… ಪಾಪ, ದೊಡ್ಡಮ್ಮ -ನೆಮ್ಮದಿ ಸಾಧ್ಯವಾ..? ಎಂದಿಗೂ ಕೂಡಲಾರದ ರೇಖೆಗಳು..!
‘ಅಯ್ಯೋ ಮುಂಡೆಕುರ್ದೆ’, ‘ ಮಾತಿಗೊಮ್ಮೆ ಹೀಗೆ ಬಯ್ಯುತ್ತಿದ್ದಳು. ಯಾರಿಗೆ ? ಯಾರಿಗಾದರೂ ಆದೀತು. ನಂಗೆ, ತಮ್ಮನಿಗೆ, ಚಿಕ್ಕಪುಟ್ಟ ಮಕ್ಕಳಿಗೆ, ಮನೆಯ ಹೊಸ್ತಿಲು ದಾಟಿ ಒಳನುಗ್ಗುವ ಹಸು, ನಾಯಿ, ಬೆಕ್ಕುಗಳಿಗೆ….
‘ ದೊಡ್ಡಮ್ಮ , ಮುಂಡೆಕುರ್ದೆ ಅಂದ್ರೆ ಏನೆ ‘? ನಾನೊಮ್ಮೆ ಕೇಳಿದ್ದೆ.
‘ಅಯ್ಯೋ ಹೋಗತ್ಲಾಗೆ. ಎಂತದೋ ಒಂದು. ‘
‘ಏ ಹೇಳೆ, ‘ ನಾನೂ ಬಿಡಲಿಲ್ಲ.
‘ ಯಂತದೋ ನಂಗೆಂತ ಗೊತ್ತೆ.? ನಮ್ಮಮ್ಮ ಹೀಂಗ್ ಬೈತಿದ್ಲು, ನಂಗ್ ಅಭ್ಯಾಸ್ ಆತು. ಬಿಡು, ಎಲ್ಲಿ ಬಾಚಣ್ಗೆ ತಾ. ಅಶ್ಟ್ ಬಾಚ್ತನಿ.’ ಬೆನ್ನ ಮೇಲೊಂದು ನಿಧಾನದ ಗುದ್ದು ಗುದ್ದಿ ಹೇಳುತ್ತಿದ್ದಳು. ಅವಳು ಹೇಳದಿದ್ದರೂ ಎಲ್ಲರಿಗೂ ಅರ್ಥವಾಗಿತ್ತು ಅದು ಅವಳ ‘ಪ್ರೀತಿಯ ಬೈಗುಳ’ ಎಂದು.
ನನಗೋ ದೊಡ್ಡಮ್ಮನಿಂದ ತಲೆ ಬಾಚಿಸಿಕೊಳ್ಳುವುದೆಂದರೆ ಎಲ್ಲಿಲ್ಲದ ಪ್ರೀತಿ. ಶಾಲೆಗೆ ಹೋಗುವ ನನ್ನ ತಲೆಯಲ್ಲಿ ಆಗಿನ ಎಲ್ಲರಂತೆ ಧಾರಾಳವಾಗಿ ಒಮ್ಮೊಮ್ಮೆ ಹೇನಿನ ಸಂಸಾರ ಠಿಕಾಣಿ ಹೂಡುತ್ತಿದ್ದುದುಂಟು. ಆಗ ಪರಪರನೆ ತಲೆಕೆರೆದುಕೊಳ್ಳುವ ನನ್ನ ಕಂಡರೆ ಸಾಕು,
‘ನೆಟ್ಗಾತು. ತಲೆಲ್ಲಿ ಹೇನು, ಸೀರು ಯಲ್ಲ ನೆಟ್ಕಂಬಿಟ್ಯ. ಎಷ್ಟ್ದಪ ಹೇಳೀನಿ, ಹೇನಿರೋರ್ ಪಕ್ಕ ಕೂತ್ಕಂಬ್ಯಾಡ ಅಂತ, ನೀ ಎಲ್ ಕೇಳ್ತಿ. ಮುಂಡೆಕುರ್ದೆ ತಂದು. ತಾಂಬಾ ಬಾಚಣ್ಗೆ.’ ಕೆಲವೊಮ್ಮೆ ಚೂರೇಚೂರು ಬಾಚಿ ಹೇನು ಹೆಕ್ಕಲಾರಂಭಿಸಿದಳೆಂದರೆ, ಅದೊಂದೆರಡು ತಾಸುಗಳ ಕೆಲಸವೇ ಸರಿ. ದಟ್ಟಕೂದಲನ್ನು ಪದರಪದರಾಗಿ ಎಳೆಎಳೆಗೂ ಬಿಡಿಸುತ್ತ, ಮೇಲಿಂದ ಕೆಳವರೆಗೂ ಹೇನಿನ ತಲಾಷ್ಗೆ ಕೂತೇಬಿಡುತ್ತಿದ್ದಳು ‘ಜೈ’ ಅಂತ. ‘ಅಯ್ಯೋ, ಅಯ್ಯಯ್ಯೋ, ಇಕಾ..ಅಕಾ…ಹಿಡಿಹಿಡಿ, ತಪ್ಪಿಸ್ಕತೀಯಾ, ಬಿಡ್ತೀನಾ’ ಹೀಗೆ ಸಮಯಕ್ಕೆ ತಕ್ಕ ಪದಗಳ ಸುರಿಸುತ್ತ ಹೇನುಗಳಿಗೆ ಶಾಪಹಾಕುವ ಪರಿಗೆ ನಾನಂತೂ ಕ್ಲೀನೌಬೌಲ್ಡ್ ಆಗಿರ್ತಿದ್ದೆ. ಪೂತರ್ಿ ಅದರಲ್ಲೇ ಮುಳುಗುವ ಅವಳಿಗೆ ಮತ್ತಾವುದರ ಚಿಂತೆಯೂ ಇರುತ್ತಿರಲಿಲ್ಲ. ‘ಇಕಾ, ಈ ಗೂಳಿ ನೋಡು. ಹ್ಯಾಂಗ್ ರಕ್ತ ಕುಡ್ದಿದೆ. ಹೆಂಗ್ ಈ ಸಂಸಾರೆಲ್ಲ ತಲೇಲ್ ಹೊತ್ಕಂಡ್ ಮಲಕ್ಕತಿದ್ದೆ. ನಮ್ಮಪ್ಪಾ, ಶಿವ್ನೆ…’ ಒಮ್ಮೆ ಅಗಲಿಸಿದ ಅಂಗೈಯ್ಯಿಂದ ತಲೆಗೊಮ್ಮೆ ಪ್ರೀತಿಯಿಂದ ತುಸುಜೋರಾಗೇ ಕುಟ್ಟುತ್ತಿದ್ದಳು.
‘ಏ ರುಕ್ಕಿ, ಹೋಯ್ತು ನನ್ ತಲೆ. ಹಾ…’ ಅದುವರೆಗೂ ಆ ಹಿತವಾದ ನೇವರಿಕೆಯ ಸ್ಪರ್ಷದಲ್ಲಿ ತೂಕಡಿಕೆಯ ಅಮಲಿನಲ್ಲಿರುತ್ತಿದ್ದ ನಾನು ತುಸು ರೇಗುತ್ತಿದ್ದೆ. ದೊಡ್ಡಮ್ಮನನ್ನು ರುಕ್ಕಮ್ಮ ಎಂದು ಹೆಸರಿಡಿದೇ ಕೂಗುವ ನಾನು ಈ ಹುಸಿಮುನಿಸಿನಲ್ಲಿ ಮಾತ್ರ ‘ರುಕ್ಕಿ’ ಎಂದೇ ಕರೆದುಬಿಡುತ್ತಿದ್ದೆ. ‘ಅಯ್ಯೋ ಮುಂಡೆಕುರ್ದೆ, ಮೆತ್ತಗ್ ಇಂಗ್ ಅಂದೆ. ಏನ್ ಕತ್ ಮುರ್ದ್ ಹೋದಂಗ್ ಆಡ್ತೀಯಾ. ಸೊಟ್ಸೊಟ್ಗೆ ಆಡ್ಬೇಡ. ನೆಟ್ಟಗ್ ಕೂತ್ಕಾ. ‘ ಮತ್ತೊಮ್ಮೆ ಪ್ರೀತಿಯಿಂದಲೇ ಮುಖ ಗಂಟಿಕ್ಕಿದಂತೆ ನಟಿಸುತ್ತ, ಹೇನು ಹೆಕ್ಕುತ್ತ, ಕುಕ್ಕುತ್ತ, ಛಟ್ಛಟಾರೆನಿಸುತ್ತ ಕುಳಿತರೆ, ಗಂಟೆ ಸರಿದಿದ್ದೇ ತಿಳಿಯುತ್ತಿರಲಿಲ್ಲ.
‘ಪದ್ದು, ಮರದ್ ಬಾಚಣ್ಗೆ ಕೊಡಿತ್ಲಾಗೆ, ಒಂದ್ದಪ ಬಾಚಿದ್ರೆ ಪುಳಕ್ ಪುಳಕ್ ಅಂತ ಎಲ್ಲ ಬಿದ್ದೋಗ್ತಾವೆ’ ಎಂದು ನನ್ನಮ್ಮನ ಕರೆದು, ಕೈಗೆ ಬಂದ ಮರದಬಾಚಣಿಗೆ ಹಿಡಿದು ತಲೆಗೆ ಊರಿಊರಿ ಬಾಚಿದರೆ, ಅವಳ ಹಳೇಸೀರೆಯ ಮೇಲೆ ಹತ್ತಾರಾದರೂ ಬೀಳುತ್ತಿತ್ತು. ‘ಇಕಾ ನೋಡಿಲ್ಲಿ, ಸೋಮಾರಸಂತೆಗೆ ಹಾಕ್ಬೋದು, ಅಷ್ಟ್ ಸಾಕ್ಕಂಡಿದೀ.’ ಎನ್ನುತ್ತ ಒಂದೊಂದನ್ನೂ ಹೆಬ್ಬೆರಳ ಉಗುರ ನಡುವೆ ಕೂರಿಸಿ ‘ಛಟ್’ ಎನ್ನಿಸಿ ‘ಕೇಳ್ತನೆ ಈ ಪಾಟಿ ಸದ್ದು’ ಎನ್ನುತ್ತಲೇ, ಮತ್ತಷ್ಟು ಊರಿ ಬಾಚುತ್ತಿದ್ದಳು. ಆ ಹಲ್ಲುಗಳ ಕೈಗೆ ಸಿಕ್ಕ ನನ್ನ ನೆತ್ತಿಯಲ್ಲಿ ಚುರುಚುರು ಹುಟ್ಟುತ್ತಿತ್ತು. ಮತ್ತೆ ತುಸು ಸಿಟ್ಟು ಮೂಗಿನತುದಿಗೇರುತ್ತಿತ್ತು.

‘ಅಬ್ಬಾ, ಮೆತ್ಗೆ ಕಣೆ, ಚರ್ಮಎಲ್ಲ ಕಿತ್ತೋಗತ್ತೆ’ ಎಂದು ಮತ್ತಲ್ಲಿ ಹೆಣಿಗೆ ಊರದಂತೆ ಕೂದಲ ಗಟ್ಟಿ ಹಿಡಿಯುತ್ತಿದ್ದೆ. ಅವಳೆಲ್ಲಿ ಬಿಟ್ಟಾಳು…’ಏಯ್ ತೆಗಿ ಅತ್ಲಾಗ್ ಕೈನ. ಎರಡ್ ದಿನ್ದಲ್ಲಿ ತಲೆ ಶುಬ್ರ ಆಗ್ದಿದ್ರೆ ಮತ್ಯಾಕ್ ಹೇಳು’ ಅಂತ ಬೈದಾಗ ನಾನೂ ತಲೆಕೊಟ್ಟು ಗಂಟೆಗಟ್ಟಳೆ ಮೈಮರೆತು ಬಿಡುತ್ತಿದ್ದೆ.

* * *

2

‘ಎತ್ಲಾಗಾರೂ ಸಾಯ್ರಿ, ಯಾರ್ ಬ್ಯಾಡಾಂತಾರೆ’ ಅದೆಷ್ಟೋಬಾರಿ ದೊಡ್ಡಮ್ಮನ ಬಾಯಿಯಿಂದ ಈ ಆಣಿಮುತ್ತುಗಳು ಉದುರುತ್ತಿತ್ತು. ಕುಳ್ಳಗಿನ ನಿಲುವಿನ ಪುಟ್ಟದೇಹವನ್ನು ಸಿಟ್ಟಿನಲ್ಲಿ ಮತ್ತಷ್ಟು ಕುಗ್ಗಿಸಿಕೊಂಡು ದುಡುದುಡು ಎಂದು ಹಿತ್ತಲಿಗೂ ಅಡಿಗೆಮನೆಗೂ ಓಡಾಡುವಾಗ, ಆಡುವ ವಯಸ್ಸಿನ ನನಗೆ ನಗುಬಂದರೂ, ಆ ನಿಜವಾದ ಸಿಟ್ಟನ್ನು ಕಂಡು ನಾನು ಮೆತ್ತಗೆ ಮನೆಗೋಡಿ ಬಂದುಬಿಡುತ್ತಿದ್ದೆ. ಅವಳೂ ಹೋಗಬೇಡ ಎಂದೇನೂ ಹೇಳುತ್ತಿರಲಿಲ್ಲ. ಮೊದಲೆಲ್ಲಾ ಹೀಗಿರಲಿಲ್ಲ ಎನ್ನಿಸಿದರೂ, ನಾನೇನೂ ಈ ಕುರಿತು ಯೋಚಿಸುತ್ತಿರಲಿಲ್ಲ. ಯೋಚಿಸಲು ನಾನೂ ಬೆಳೆದಿರಲಿಲ್ಲ. ಆದರೂ, ಅವಳು ಮುಂಚಿನಂತಿಲ್ಲ ಎಂದೇನೋ ಒಮ್ಮೊಮ್ಮೆ ಅನ್ನಿಸುತ್ತಿತ್ತು. ಮುಂಚೆ ಎಂದರೆ ಯಾವಾಗ..? ನನಗೆ ಬುದ್ಧಿ ಬಲಿಯುವ ಮುನ್ನ…ನಾನು ಬೆಳೆದಮೇಲೆ ಅಂದರೆ, ನಾನೂ ಕಾಲೇಜುಮೆಟ್ಟಿಲ ಹತ್ತಿದಮೇಲೇ ಮಾನವಸಂಬಂಧದ ಸೂಕ್ಷ್ಮಗಳು ಅರ್ಥವಾಗತೊಡಗಿದ್ದು….

ಒಂಬತ್ತು ವರ್ಷವಾ ನನಗಾಗ, ಇರಬೇಕು, ಅದೊಂದುದಿನ ಸಂಜೆ ಓಡಿದೆ ದೊಡ್ಡಮ್ಮನ ಮನೆಗೆ. ಹಿಂದಿನ ದಿನವೇ ಹೇಳಿದ್ದಳಲ್ಲ, ‘ಏ ಕೂಸೇ, ನಾಳೆ ಬಂದ್ರೆ ನೋಡು ನಿಂಗೆ ಹಲ್ಸಿನ್ಕಾಯ್ ಹುಳಿ ಸಿಗತ್ತೆ. ಇಲ್ದಿದ್ರೆ ಇಲ್ಲ. ಆಮೇಲ್ ನನ್ ಬೈಕಂಬ್ಯಾಡ. ಒಂದೇಒಂದ್ ಕಾಯಿ ಇರಾದು. ಮರದ್ ಫಸ್ಲೆಲ್ಲ ಆಗೋಯ್ತು.’ ಎಚ್ಚರಿಸಿದ್ದಳು. ಅಬ್ಬಬ್ಬಾ ! ದೊಡ್ಡಮ್ಮನ ಕೈಯ್ಯ ಹಲಸಿನಹುಳಿಯನ್ನು ತಪ್ಪಿಸಿಕೊಂಡವರು ನಿಜಕ್ಕೂ ಪೆದ್ದರು, ಅದೆಂಥ ಹುಳಿ ! ತುಂಬಾ ಬೇಳೆ ಹಾಕಿ, ಹುರಿದುತಿರುವಿ ಹಾಕಿದ ಗಟ್ಟಿಹುಳಿ. ಹಾಹಾ..ಎನ್ನುವ ಖಾರ, ಹದವಾಗಿ ಬೆರೆತ ಉಪ್ಪು ಹುಳಿ, ಬಿಸಿ ಅನ್ನದಮೇಲೆ ಬಿಸಿಬಿಸಿ ಹುಳಿ ಬಿದ್ದರೆ ಮುಗಿಯಿತು. ಸಂಜೆ ಹೋದರೆ ದೊಡ್ಡಮ್ಮನ ಕೈತುತ್ತಿನ ಗಮ್ಮತ್ತು. ತುತ್ತಿನಮೇಲೆ ತುತ್ತು ಬೀಳುತ್ತಲೇ ಇತ್ತು, ಹಾಕುವ ಕೈಗೂ ನೀಡುವ ಕೈಗೂ ಸಾಕು ಬೇಡಗಳ ಗೊಡವೆಯೇ ಇರುತ್ತಿರಲಿಲ್ಲ. ತಿಂದಮೇಲೂ ಅಂಗೈ, ಬೆರಳುಗಳನ್ನು ನಾಲಿಗೆಯಿಂದ ನೆಕ್ಕುತ್ತ ಅದೆಷ್ಟೋ ಹೊತ್ತು ಕೈತೊಳೆಯದೇ ಕುಳಿತಾಗ,

‘ಅಯ್ಯೋ ಮುಂಡೆಕುರ್ದೆ, ಕೈತೊಳ್ಕ ನಡೀ. ಅಲ್ ನಿಮ್ಮಮ್ಮ ಕಾಯ್ತಾ ಕೂತಿರ್ತಾಳೆ ಎಷ್ಟೊತ್ತಾದ್ರೂ ಈ ಹುಡ್ಗಿ ಬರ್ಲಿಲ್ಲ ಅಂತ. ಪಾಠಗೀಠ ಓದದಿಲ್ವಾ.’ ‘ನೀನೇ ಹೇಳ್ಕೊಡು’ ನಾನು ಒಮ್ಮೊಮ್ಮೆ ದುಂಬಾಲು ಬೀಳುತ್ತಿದ್ದೆ. ‘ಸರಿ ಪುಸ್ತ್ಕ ತಾಂಬಾ’ ಎನ್ನುತ್ತ,

‘ಆರ್ಏಎಂಏ ರಾಮಾ..ಕೆಏಎಮ್ಏಎಲ್ಏ..ಕಮಲಾ..ದಿಸ್ ಈಸ್ ಕಮಲಾ..ದಟ್ ಈಸ್ ರಾಮಾ..’

‘ರುಕ್ಕಮ್ಮ, ನೀನು ಹಳ್ಳಿಗೊಡ್ಡು ಅಂತ ದೊಡ್ಡಪ್ಪ ಬೈತಿರ್ತಾರೆ, ಆದ್ರೆ, ನಿಂಗೆ ಇದೆಲ್ಲಾ ಬರುತ್ತಲ್ಲೇ’ ನಾನೊಮ್ಮೆ ಕೇಳಿದ್ದೆ.

‘ಅಯ್ಯೋ ಹೋಗತ್ಲಾಗೆ, ಠುಸ್ಸು ಪುಸ್ಸು ಅಂತ ಎಲ್ಡ್ ಪದ ಹೇಳಿದ್ಕೂಡ್ಲೆ ಆಗೋಯ್ತಾ. ಮುಂದೇನಾರ ಕೇಳ್ನೋಡು ಬರುತ್ತಾ ಅಂತ. ಬರೀ ಗೊಯ್ಸಂಭಟ್ಟ ‘ ಎಂದು ತನ್ನ ಮಂಕುತನವನ್ನು ತಾನೇ ಆಡಿಕೊಂಡು ನಕ್ಕಾಗ ನಾನಂತೂ ಅವಳನ್ನು ಮಿಕಿಮಿಕಿ ನೋಡಿದ್ದೆ….ಅವಳೊಂದು ಹೆಣ್ಣಾಗಿ, ಕಣ್ಣಾಗಿ, ಮಣ್ಣೊಳಗೇ ಬಿದ್ದು ಒದ್ದಾಡುವಂತೆ ಭಾಸವಾಗುತ್ತಿತ್ತು.

ಆ ದಿನ ಹಲಸಿನಹುಳಿಯನ್ನ ತಿನ್ನುವ ಕನವರಿಕೆಯಲ್ಲಿ ಓಡಿದ್ದೆ. ತೆರೆದೇ ಇರುತ್ತಿದ್ದ ಮುಂಬಾಗಿಲ ಒಳಹೊಕ್ಕು ‘ರುಕ್ಕಮ್ಮಾ’ ಎಂದು ಕೂಗುತ್ತ ಅಡಿಗೆಮನೆಗೆ ಹೋದೆ. ಅಡಿಗೆಮನೆ ತಣ್ಣಗಿತ್ತು. ಬೆಳಕಿರದ ಆ ಅಡಿಗೆಮನೆ ದಾಟಿ, ಬೆಳಕಿರದ ಊಟದಮನೆಯನ್ನೂ ದಾಟಿ ಹಿತ್ತಲಿಗೆ ನಡೆದೆ. ಭಾವಿಕಟ್ಟೆಯ ರಾಟೆಗೆ ಕೊಡಕಟ್ಟಿ ನೀರುತುಂಬಿಸುತ್ತಿದ್ದ ದೊಡ್ಡಮ್ಮನ್ನ ಕಂಡು, ‘ದೊಡ್ಡಮ್ಮಾ ನಾ ಬಂದೆ’ ಎಂದು ಅವಳ ಸೀರೆ ಜಗ್ಗಿದೆ. ತಿರುಗಿದಳು. ಮುಖ ಉರಿಯುತ್ತಿತ್ತು. ಸಣ್ಣನೆ ಕಣ್ಣಿನಲ್ಲೂ ನೀರು ತುಂಬಿದಂತೆ ಕಾಣಿಸಿತು. ಮೂಗು ಸೊರಭರ ಎನ್ನುತ್ತಿತ್ತು. ತಲೆ ಕೆದರಿತ್ತು. ಎಂದಿನಂತಿಲ್ಲ ಎನಿಸಿದರೂ, ಕೇಳಲೋಬೇಡವೋ ಎನಿಸಿದರೂ ಹಾಳು ಹಲಸಿನಹುಳಿಯ ತೀವ್ರಚಪಲ, ‘ದೊಡ್ಡಮ್ಮ, ಹುಳಿಯನ್ನ ಕಲೆಸ್ಕೊಡೆ’ ಎಂದೆ. ಅಷ್ಟೆ. ಧಡ್ಡನೆ ಕೊಡ ಕಟ್ಟೆಗೆ ಎಳೆದಳು. ಸೀರೆ ಜಗ್ಗುತ್ತಿದ್ದ ಕೈಯ್ಯ ಕಿತ್ತೊಗೆದಳು. ದುರ್ದಾನ ತೆಗೆದುಕೊಂಡಂತೆ ಹಗ್ಗದಿಂದ ಬಿಚ್ಚಿದ ನೀರಿನಕೊಡವನ್ನು ಸೊಂಟಕ್ಕೇರಿಸಿ, ಬಾಯಲ್ಲೇನೋ ಗೊಣಗುತ್ತ, ಬಚ್ಚಲಿಗೆ ನಡೆದೇ ಬಿಟ್ಟಳು. ನಾನೂ ಹಿಂದೇ ಓಡಿದೆ. ‘ರುಕ್ಕಮ್ಮ, ಏನಾಯ್ತೆ’ ಎಂದೆ. ನನ್ನಕಡೆ ತಿರುಗಿಯೂ ನೋಡಲಿಲ್ಲ, ಬಾಯಿಂದ ಈ ಮಾತುಗಳು ಮಾತ್ರ ಹೊರಬಿದ್ದಿತು,
‘ಏನೆಂತು, ಎಲ್ಲ ಆಯ್ತಲಾ.. ನಾನೊಂದು ಗೊಡ್ಡೆಮ್ಮೆ. ಚಾಕ್ರಿಗೈಯ್ಯೋ ಕೆಲಸ್ದೋಳು. ನಮ್ಮ್ ಅಣ್ಣಂದ್ರಿಗೆ ಹೆಣ್ಣ್ ಹೆಚ್ಚಾಗಿತ್ತು. ತಂದಿಲ್ಲಿ ಹಾಕ್ ಹೋದ್ರು.’

ಸ್ವಗತವೆಂಬಂತೆ, ನನ್ನ ಬರಹೇಳಿದ್ದೇ ಮರೆತಂತೆ ಸಿಡುಕುವ ರುಕ್ಕಮ್ಮನನ್ನೇ ದಿಟ್ಟಿಸಿದೆ. ಹಜಾರದ ಪುಟ್ಟಕೋಣೆಯ ಬಾಗಿಲು ತೆರೆಯಿತು. ಅಲ್ಲಿಂದ ದೊಡ್ಡಪ್ಪ ಹೊರಬಂದರು, ಹಿಂದೆಯೇ ಆ ಹೆಣ್ಣು, ಹೊಟ್ಟೆ ದಪ್ಪಗಿದ್ದು ಬಸುರಿಯಂತೆ ತೋರುವ ಆ ಹೆಣ್ಣು ಹೊರಬಂದಳು. ತಿರುಗಿದ ದೊಡ್ಡಮ್ಮನ ಮುಖ ಮತ್ತೆ ಕೆದರಿತು. ಭೂಮಿ ನಡುಗುವಂತೆ ‘ಧಪಧಪ’ ಹೆಜ್ಜೆಹಾಕುತ್ತ ಮತ್ತೆ ಭಾವಿಕಟ್ಟೆಗೆ ನಡೆದಳು. ನಾನು ಆ ಹೊಸಾಹೆಂಗಸನ್ನೇ ನೋಡಿದೆ, ಎತ್ತರಕ್ಕಿದ್ದಳು, ಎಣ್ಣೆಗೆಂಪು ಬಣ್ಣವಾಗಿದ್ದಳು, ಮೂಗಿನತುದಿ ಮೊಂಡಾದರೂ ಬಾಯಿ ಪುಟ್ಟದಿತ್ತು, ಕಂಡ ಹಲ್ಲುಗಳು ಹಳದಿಯಾದರೂ ಕಣ್ಣು ಕಪ್ಪಗಿತ್ತು, ಮೋಟುಜಡೆಯಾದರೂ ಗುಂಗುರಾಗಿತ್ತು. ದೊಡ್ಡಪ್ಪ ಖುಶಿಯಾಗಿದ್ದಂತೆ ಕಂಡರು. ನಾನು ಮತ್ತೆ ರುಕ್ಕಮ್ಮನಿದ್ದಲ್ಲಿಗೆ ಓಡಿದೆ.

‘ದೊಡ್ಡಮ್ಮ ಯಾರೇ ಅದು ? ಬಾಗ್ಲು ಹಾಕ್ಕಂಡು ದೊಡ್ಡಪ್ಪನ ಜೊತೆ ಎಂತ ಮಾಡ್ತಿದ್ರು ? ಎಷ್ಟ್ ಚೆನಾಗಿದಾರೆ ಅಲ್ಲೇನೇ?’ ತೆರೆದ ಕಣ್ಣು ಮುಚ್ಚದೆ ಅವರನ್ನೇ ನೋಡುತ್ತ ನಾನು ಕೇಳಿದ ಈ ಪ್ರಶ್ನೆಗಳು ರುಕ್ಕಮ್ಮನ ಕೋಪಕ್ಕೆ ಬೆಂಕಿ ಸುರಿದವು.

‘ಮುಂಡೇಕುರ್ದೆ, ಅವ್ಳ್ ಯಾರ್ ಅಂತ ಆ ನನ್ ಸವ್ತೀನೇ ಕೇಳೋಗು. ಚಂದ ಅಂತೆ ಚಂದ. ಬಿಳೀಕೊಕ್ಕ್ರೆ ತಂದು…! ಜೇನ್ ತುಪ್ಪ ಹಾಕಿ ನೆಕ್ಲಿ ಆ ರೂಪಾಬಣ್ಣಾನ..ಹಾಳ್ ಹೆಣ್ಣ್ ಜಲ್ಮ. ಸುಡ್ಗಾಡ್ ಸೇರಾ…ನಮ್ಮನೆ ಬೆಕ್ಕೂ ಬೆಳ್ಗೇ ಇದೆ, ಕಳ್ಬೆಕ್ಕು. ಭಂಡ್ ಜಲ್ಮ.. ಥೂ ಥೂ ಮಾನಿಲ್ಲ, ಮರ್ಯಾದೆ ಇಲ್ಲ, ಭಂಡ್ ಜಲ್ಮ ಭಂಡ್ ಜಲ್ಮ..’ ಏನೇನೋ ಬೈಯ್ಯುತ್ತಿದ್ದ, ಕ್ಷಣಕ್ಕೊಮ್ಮೆ ತಿರುತಿರುಗಿ ಹಜಾರದೆಡೆ ನೋಡುತ್ತಿದ್ದ, ಕೆಟ್ಟಕೋಪದ ದೊಡ್ಡಮ್ಮನ ಕಣ್ಣಿಂದ, ಮೂಗಿಂದ ಧಾರಾಕಾರವಾಗಿ ನೀರು ಸುರೀತಿತ್ತು. ಸೆರಗಲ್ಲಿ ಒರೆಸುತ್ತಿದ್ದರೂ ನಿಲ್ಲುತ್ತಿರಲಿಲ್ಲ. ಆ ಕಪ್ಪುಮುಖ ಮತ್ತಷ್ಟು ವಿಕಾರವಾಗಿ ತೋರುತ್ತಿತ್ತು. ನನಗಂತೂ ಏನೂ ಅರ್ಥವಾಗಲಿಲ್ಲ. ಅವಳ ಆ ಆರ್ಭಟ, ಆ ಪರಿ ತೀರಾ ಹೊಸದಿತ್ತು. ನನ್ನ ಹೊಟ್ಟೆ ಹಲಸಿನಕಾಯಿಹುಳಿಯ ನೆನಪಲ್ಲಿ ಹಪಹಪ ಎನ್ನುತ್ತಿತ್ತು. ಆದರೆ, ದೊಡ್ಡಮ್ಮನೋ ಪುಟ್ಟ ‘ರೌದ್ರಾವತಾರ’ದಲ್ಲಿದ್ದಾಳೆ. ಹುಳಿ ಮಾಡಿಟ್ಟು ಮರೆತಿರುವಳೇ…ಕೇಳಲೇ..? ತುಟಿವರೆಗೂ ಆಸೆ ನುಗ್ಗಿಬಂತು. ‘ರುಕ್ಕಮ್ಮಾ’ ಎಂದೆ.
‘ನಡ್ಯೆ ಆಚೆ. ಮುಂಡೇಕುರ್ದೆ. ‘ಮುದ್ಕಿಗ್ ಅರ್ವೆ ಚಿಂತೆ, ಮೊಮ್ಮಗ್ಳಿಗ್ ಮಿಂಡನ್ ಚಿಂತೆ’. ನನ್ ಹೊಟ್ಟೆಗ್ ಬೆಂಕಿ ಬಿದ್ದದೆ, ಎಲ್ರೂ ಎತ್ಲಾಗಾದ್ರೂ ಸಾಯ್ರಿ..’ ಭಯವಾಯ್ತು. ಬಿಟ್ಟಬಾಣದಂತೆ ರಸ್ತೆಗಿಳಿದು ಮನೆಗೋಡಿ ಬಂದೆ. ಮನೆಯಲ್ಲಿ ಅಜ್ಜಿ ಮುಸುಮುಸು ಎನ್ನುತ್ತಿದ್ದಳು. ಅಪ್ಪ ಬಿಗುವಾಗಿದ್ದರು, ಅಮ್ಮ ಹೆದರಿದಂತಿದ್ದಳು. ಇದೆಂಥ ಕಥೆ ! ಅಲ್ ನೋಡಿದ್ರೆ ಹಾಗೆ, ಇಲ್ಲ್ ನೋಡಿದ್ರೆ ಇಲ್ಲೂ ಸರೀಇಲ್ಲ. ಮೆತ್ತಗೆ ಅಮ್ಮನ ಬಳಿ ಕುಳಿತೆ. ‘ಅಮ್ಮ, ಸವತಿ ಅಂದ್ರೆ ಏನೆ ‘ ಎಂದೆ. ಅಮ್ಮ ಸರಕ್ಕಂತ ತಿರುಗಿದಳು. ‘ನಿಂಗೆಂತಕ್ಕೆ ಅದೆಲ್ಲಾ. ಅಲ್ಲಿ ಹಪ್ಳ ಸುಟ್ಟಿಟ್ಟಿದ್ದೀನಿ. ತಿಂದು ಆಡ್ಕಹೋಗು’ ಎಂದು ಗದರಿಬಿಟ್ಟಳು.

ನಾನು ಬೆಳೆಯುತ್ತ ಹೋದಂತೆ ಒಂದಿಷ್ಟು ಅರ್ಥವಾಯ್ತಾ ಹೋಯ್ತು. ದೊಡ್ಡಮ್ಮನ್ನ ಗಮನವಿಟ್ಟು ನೋಡಿದೆ. ಕುಳ್ಳುನಿಲುವು, ಕಪ್ಪುಬಣ್ಣ, ಉರುಟುಮುಖ, ಹೇಗ್ಹೇಗೋ ಹುಟ್ಟಿರುವ ಹಲ್ಲುಗಳು, ಗೊಂಡೆಮೂಗು, ಸಪಾಟಾದ ಎದೆಯಭಾಗ, ಅಂಟಿಸಿಬಾಚಿ ಚೂಪಗೆಹೆಣೆದ ಬೆರಳುಗಾತ್ರದ ಜಡೆ, ನಾಜೂಕಿಲ್ಲದ ನಡೆ, ಹಳ್ಳಿಯಭಾಷೆ ದೊಡ್ಡಮ್ಮ ಚೂರೂ ಚಂದವಿಲ್ಲ ಎನ್ನೋದು ನನಗೆ ತಡವಾಗಿ ತಿಳಿದಿತ್ತು. ನನ್ನನ್ನು ಅತಿಯಾಗಿ ಪ್ರೀತಿಸುವ ಅವಳ ರೂಪವನ್ನು ನಾನೆಂದೂ ಲೋಕದ ಕಣ್ಣಲ್ಲಿ ಕಂಡೇ ಇರಲಿಲ್ಲ. ಪ್ರೀತಿ ತುಂಬಿದ ಎದೆ , ಒಡಲು, ಶರೀರದಲ್ಲಿ ಅಂಕುಡೊಂಕುಗಳನ್ನು ಹುಡುಕುವ ವಯಸ್ಸು ನನ್ನದಿರಲಿಲ್ಲ. ಹಾಗಾದರೆ, ಕಟ್ಟುಮಸ್ತಾಗಿ, ಶಿಸ್ತುಗಾರನಂತಿರುವ ದೊಡ್ಡಪ್ಪ ಇವಳನ್ನು ಮದುವೆಯಾದದ್ದಾದರೂ ಯಾಕೆ..? ಎಷ್ಟೋ ಪ್ರಶ್ನೆಗಳಿಗೆ ಉತ್ತರವಿರೋಲ್ಲ. ಹಾಗೇ ಇದೂ ಕೂಡ. ‘ಋಣಾನುಬಂಧ’.. ಹಿರಿಯರು ಹೇಳುವುದು ಇದೇ ತಾನೇ..?

ಶಿಸ್ತುಗಾರ ದೊಡ್ಡಪ್ಪ ಆಳುವಪುರುಷ. ಶೋಕಿಗೇ ಆದಾಯದ ಅರ್ಧ ಸುರಿಯುವವ. ಮದುವೆಯಾಗಿದ್ದರೂ ಕೆಲಸದ ನೆಪದಲ್ಲಿ ಪದೇಪದೇ ಪಕ್ಕದೂರಿಗೆ ಹೋಗುತ್ತಿದ್ದವ, ಬಸುರಿಮಾಡಿಟ್ಟ ‘ಭಾಮಾಮಣಿ’ಯನ್ನು ಗಂಟುಹಾಕಿಸಿಕೊಂಡು ದಿಢೀರೆಂದು ಕರೆತಂದೇಬಿಟ್ಟ ಮನೆಗೆ. ಪಾಪ ರುಕ್ಕಮ್ಮ, ಸಿಡಿಲಂತೆರಗಿದ ಸವತಿಯನ್ನು ಆರತಿ ಎತ್ತಿ ಕರೆಯಬೇಕೇನಿರಲಿಲ್ಲ, ಹರಿಯೋ ನೀರಿಗೆ ಯಾರಪ್ಪಣೆ ಎನ್ನುವ ಧೋರಣೆಯಲ್ಲಿ ದೊಡ್ಡಪ್ಪ ಪ್ರೇಯಸಿಯನ್ನು ಮನೆತುಂಬಿಸಿಕೊಂಡ. ಗುಟುರಿಕ್ಕುವ ಗೂಳಿಯಂತೆ ಒಳಗಡಿ ಅಲ್ಲಲ್ಲ ಒಳನುಗ್ಗಿದ್ದಳು ಭಾಮೆ. ಹೆಣ್ಣು ಗಂಡನ ಯಾವ ಧೋರಣೆಯನ್ನಾದರೂ ಸಹಿಸುತ್ತಾಳೆ. ಹೊಡೆತ ಬಡಿತ, ಬೈಗುಳ, ಅಸಹನೆ ಏನಾದರೂ ಸರಿಯೇ..ಆದರೆ, ನಿರಾಕರಣೆ…ಪ್ರೀತಿಯ ಅಥವಾ ಕಾಮನೆಯ ಹಂಚಿಕೊಳ್ಳುವಿಕೆ…ಹಾಸಿಗೆಗೆ ಮತ್ತೊಂದು ಹೆಣ್ಣಿನ ಪ್ರವೇಶ… ಸಾಧ್ಯವಾ ಉಕ್ಕುವ ದುಃಖಕ್ಕೆ ಒಡ್ಡುಕಟ್ಟಿಕೊಳ್ಳಲು..? ಗಂಡನ ತೀಟೆಯ ಅರಿವಿತ್ತಾ ದೊಡ್ಡಮ್ಮಂಗೆ ಗೊತ್ತಿಲ್ಲಾ. ದೊಡ್ಡಪ್ಪ ಅವಳನ್ನು ಹೆಂಡತಿಯಂತೆ ನೋಡುತ್ತಿದ್ದರಾ..ಅದೂ ಗೊತ್ತಿಲ್ಲ. ಆಗಿನ ಪದ್ಧತಿಯಂತೆ ಮೂದಲಿಕೆ, ಬೈಗುಳ, ಕೆಲವೊಮ್ಮೆ ಹೊಡೆತ , ಅನಾದರ ಎಲ್ಲವೂ ಧಾರಾಳವೇ ರುಕ್ಕಮ್ಮಂಗೆ. ಆದರೂ ರುಕ್ಕಮ್ಮ ಗೊಣಗುತ್ತಿರಲಿಲ್ಲ, ಒಂದು ದಿನಕ್ಕೂ ಗಂಡನ ಸೇವೆಯಲ್ಲಿ ಬೇಸರ ತೋರಿದವಳಲ್ಲ, ಸಿಟ್ಟುಮಾಡಿ ಕೂತವಳೂ ಅಲ್ಲ. ‘ಛೇ, ದೊಡ್ಡಮ್ಮ ಹೀಗಿರಬಾರದಿತ್ತು. ಹೀಗೆ ಸಹಿಸಿದ್ದಕ್ಕೇ ಅಲ್ಲವೇ ಮನೆಗೆ ಸವತಿಯ ಪ್ರವೇಶವಾಗಿದ್ದು’ ನಾನು ಬುದ್ಧಿತಿಳಿದಮೇಲೆ ಹೀಗಂದುಕೊಂಡಿದ್ದೆ.

‘ಅಲ್ರೀ, ಪಾಪ ಆ ರುಕ್ಮಿಣಿ ಗಾಣದೆತ್ತಿನ್ ಥರ ದುಡೀತಾರೆ. ಇಂಥ ಹೆಣ್ಣಿಗೆ ನಿಮ್ಮಣ್ಣ ಹೀಗ್ಮಾಡಿದ್ದು ಸರೀನಾ..? ನೀವಾದ್ರೂ ಬುದ್ಧಿ ಹೇಳ್ಬಾರ್ದಿತ್ತಾ..?ಸವತಿ ತಂದು ಹೆಣ್ಣಿಗೆ ಅನ್ಯಾಯ ಮಾಡೋದು ಸರಿಯಾ..?’ ಅಮ್ಮ ಅಪ್ಪನ ಬಳಿ ಅಲವತ್ತುಕೊಂಡಾಗ ನಾನಲ್ಲೇ ಇದ್ದೆ. ‘ಅವ್ನು ಹೀಗ್ ಮಾಡ್ತಾನೆ ಅಂತ ನಂಗೇನ್ ಕನಸ್ ಬಿದ್ದಿತ್ತಾ, ಮೊದ್ಲೇ ಗೊತ್ತಿದ್ದಿದ್ರೆ ನಾನೆಲ್ಲಿ ಬಿಡ್ತಿದ್ದೆ’ ಅಪ್ಪನ ಉತ್ತರ ಕೇಳಿದ ನನಗೆ ದೊಡ್ಡಮ್ಮಂಗೆ ಇದರಿಂದ ಅನ್ಯಾಯವಾಗಿದೆ ಎಂದು ಮಾತ್ರ ಅರ್ಥವಾಗಿತ್ತು. ಯಾವ ರೀತಿ..? ಗೊತ್ತಾಗಲಿಲ್ಲ.

‘ರುಕ್ಕಮ್ಮ, ನೀ ಯಾಕೆ ದೊಡ್ಡಪ್ಪಂಗೆ ಬೈಲಿಲ್ಲ. ಅವ್ಳನ್ನ ಮನೆಗೆ ಸೇರ್ಸೋಲ್ಲ ಅಂತ ಹೇಳ್ಬೇಕಿತ್ತು’ ನಾನೊಮ್ಮೆ ಕೇಳಿದೆ.

‘ಅಯ್ಯೋ ಹೋಗತ್ಲಾಗೆ. ಗಂಡ್ಸಿಗ್ಯಾಕ್ ಗೌರಿದುಃಖ ಅನ್ನೋ ಹಂಗೆ ನಿಂಗ್ಯಾಕ್ ಈ ಪಂಚಾತಿ. ಗಂಡ್ಸು ಕೃಷ್ಣನ್ ಹಂಗೆ. ರುಕ್ಮಿಣಿ ಇದ್ಮೇಲೆ ಸತ್ಯಭಾಮೆ ಇಲ್ದಿದ್ರೆ ಹ್ಯಾಗೆ. ಬಂದ್ಲು. ಆ ಪುಣ್ಯಾತ್ಮಂಗೆ ನನ್ ಸುಖ ಸಾಕಾಗ್ಲಿಲ್ಲ, ಅದ್ಕೇ ತಂದ ಬಣ್ಣದ್ ಚಿಟ್ಟೇನಾ. ಹಾರ್ಲಿ ಬಿಡು. ನನ್ನನ್ನೇನು ತೌರಿಗೆ ಸಾಗಹಾಕ್ಲಿಲ್ವಲ್ಲ. ಸಾಕು. ಅದ್ಸರೀ, ಓದದು ಬಿಟ್ಟು ನಿಂಗ್ಯಾಕೆ ಇದೆಲ್ಲಾ. ತೆಪ್ಗಿರು.’ ಭಾವನೆಗಳೇ ಇಲ್ಲದಂತೆ ಮಾತಾಡಿದ ದೊಡ್ಡಮ್ಮನನ್ನೇ ನಾನು ಅಚ್ಚರಿಯಿಂದ ನೋಡಿದೆ. ‘ಆದ್ರೂ ನಿಂಗೆ

ಅನ್ಯಾಯ ಆಯ್ತಲ್ಲೇ’ ಅಪ್ಪ ಅಮ್ಮನ ಮಾತು ನೆನಪಾಗಿ ಕೇಳಿದೆ.

‘ಅಯ್ಯೋ, ಅನ್ಯಾಯನೋ, ಸುಡ್ಗಾಡೋ ಹೋಗತ್ಲಾಗೆ. ಆ ಪುಣ್ಯಾತ್ಮನ್ ಕಾಟ್ವೇ ತಪ್ತು.’ ಮತ್ತೆ ನಿಭರ್ಾವುಕಳಂತೆ ನುಡಿದಳು. ..’ಕಾಟನಾ..ಎಂಥ ಕಾಟವೇ ಅದು. ನಿಂಗೆಲ್ಲಿ ತಪ್ಪಿದೆ. ಈಗೆಲ್ಲ ನಿಂಗೆ ಇನ್ನೂ ಜಾಸ್ತಿ ಬೈತಾರೆ. ಕೆಲ್ಸಾನೂ ಜಾಸ್ತಿ ಆಗಿದೆ. ಮೊನ್ನೆ ಸಾರು ಚೆನ್ನಾಗಿಲ್ಲ ಅಂತ ಹೊಡ್ದಿದ್ದು…ಮತ್ಯಾವ ಕಾಟ ತಪ್ಪಿರೋದು.’ ಅಮಾಯಕಳಾಗಿ ಕೇಳಿದ್ದೆ. ತಕ್ಷಣವೇ ದೊಡ್ಡಮ್ಮನ ಆ ಕಪ್ಪುಮುಖಕ್ಕೂ ರಕ್ತ ನುಗ್ಗಿ ಚೂರು ಕೆಂಪಗೆ ಕಾಣಿಸ್ತು. ಒಮ್ಮೆಯೂ ಕಾಣಿಸದಿದ್ದ ನಾಚಿಕೆ ಕಂಡಿತು. ಉಬ್ಬುಹಲ್ಗಳ ಮುಚ್ಚಿಟ್ಟುಕೊಂಡಿದ್ದ ತುಟಿಗಳಲ್ಲಿ ನಾಚಿಕೆಯನಗು ಒಡೆಯಿತು. ಏನನ್ನು ಹೇಳಲೂ ತೋಚದೆ, ನನ್ನ ಬೆನ್ನ ಮೇಲೊಂದು ಮೆತ್ತಗೆ ಗುದ್ದಿದಳು,

‘ಸಾಕ್ ನಡ್ಯೇ ಆಚೆ. ಚೋಟುದ್ದ ಇದೀಯಾ, ಇಲ್ದೇಇರೋ ಉಸಾಬರೀ ಎಲ್ಲ ನಿಂಗ್ ಬೇಕಾ..? ಕಾಟ್ವಂತೆ ಕಾಟ…’ ಮತ್ತೆ ನಾಚಿದಳು. ‘ನಿಂಗೆಂತಕ್ಕೆ ಅದೆಲ್ಲ, ಅವ್ರು ಹೊಡೀತಾರೋ, ಬೈತಾರೋ ಎಂತಾದ್ರೂ ಆಗ್ಲಿ. ಕೈಹಿಡ್ದ ಮನ್ಷ, ಹ್ಯಂಗ್ ನೋಡ್ಕಬೇಕು ಅಂತ ಅವ್ರಿಚ್ಛೆ. ನಂಗೇನ್ ದುಕ್ಕಿಲ್ಲ. ನಡೀ ಆಟಕ್ಕೆ. ಇಲ್ಲೇ ಕೂತಿದ್ರೆ ಹಿಂಗೆ ಎಂತೆಂತೋ ಕೇಳಿ ನನ್ ತಲೇನೂ ಕೆಸ್ರುಗದ್ದೆ ಮಾಡಿಡ್ತೀ’ ಹೇಳುತ್ತಲೇ, ತಾನೇ ಎದ್ದುಹೋದವಳ ಆ ನಾಚಿಕೆ ಯಾಕಾಗಿ ಎನ್ನುವುದನ್ನು ಅರ್ಥಮಾಡಿಕೊಳ್ಳಲಾಗದೆ ಆದಿನ ಮಿಕಿಮಿಕಿ ನೋಡುತ್ತ ಕುಳಿತಿದ್ದೆ …..

ಈಗನ್ನಿಸುತ್ತೆ, ರೂಪವಿಲ್ಲದಿದ್ದರೇನು ಹೆಣ್ಣಲ್ಲವೇ…ಮುಸುಕಿನೊಳಗೇ ಅತ್ತಿರಬಹುದು ಒಂದಷ್ಟುಕಾಲ…!

* * *

ರುಕ್ಮಿಣಿ ದೊಡ್ಡಮ್ಮ ನೆನಪಾಗುತ್ತಲೇ ಇದ್ದಾಳೆ..

22

ಅವಳು ದಡ್ಡಿಯೇ, ಬುದ್ಧಿವಂತಳೇ, ಸಂಸಾರಿಯೇ, ವಿರಾಗಿಯೇ, ಭಾವುಕಳೇ, ನಿಭರ್ಾವುಕಳೇ…ಊಹೂಂ, ಇದಾವ ಪ್ರಶ್ನೆಗೂ ನನಗೆ ಉತ್ತರ ಸಿಕ್ಕಿರಲಿಲ್ಲ, ಮುಂದೆ ಸಿಗುವುದೂ ಇಲ್ಲ. ಒಂದಂತೂ ಸತ್ಯ, ಅವಳು ಅಪ್ಪಟಚಿನ್ನ. ಕಪಟ,ಮೋಸ, ಅನ್ಯಾಯ ಗೊತ್ತಿಲ್ಲದ ಅಷ್ಟೇಕೆ, ಕಡೆಗೆ ಹೆಣ್ಣಿಗಿರಬೇಕಾದ ಗಂಡಿನ ಬಗೆಗಿನ ಮೋಹಕ್ಕೂ ಬೆನ್ನು ತಿರುಗಿಸಿದವಳು. ಮತ್ತಿನ್ನೇನು, ಯಾವ ಹೆಣ್ಣು ಸವತಿಯ ನಾಲ್ಕು ಬಾಣಂತನವನ್ನು ಜೀವತೇದು ಮಾಡುತ್ತಾರೆ.! ಕೂತಲ್ಲಿ ಆರ್ಡರ್ ಮಾಡುವ ಸವತಿಗಿದ್ದುದು ಒಂದೇ ಯೋಗ್ಯತೆ, ಅದು ದೊಡ್ಡಮ್ಮನನ್ನು ರೂಪದಲ್ಲಿ ಸೋಲಿಸಿಬಿಟ್ಟ ಹೆಗ್ಗಳಿಕೆ, ದೊಡ್ಡಪ್ಪನನ್ನು ಮಂಗನಂತೆ ಕುಣಿಸಲು ಕಾರಣವಾದ ಕುಣಿಕೆ. ಮನೆಯಲ್ಲೇ ಸವತಿಗೆ ದಾಸಿಯಾಗಿ, ಮಕ್ಕಳೇ ಇಲ್ಲದೇ ನಾಲ್ಕು ಮಕ್ಕಳ ಹೊಣೆ ಹೊತ್ತಿದ್ದೇನು ಸುಲಭದ ವಿಷಯವಲ್ಲ. ಒಮ್ಮೆ ಕೇಳಿದೆ, ‘ರುಕ್ಕಮ್ಮ, ನಿಂಗ್ಯಾಕೆ ಮಕ್ಕಳಿಲ್ಲ’ ಎಂದು.

‘ಯಾಕಿಲ್ಲ, ಅದಾವಲ್ಲ ಪ್ರಾಣತಿನ್ನಕ್ಕೆ ಒಂದಲ್ಲ ಅಂತ ನಾಕು. ಹುರ್ದು ಮುಕ್ತಾವೆ.’ ಸಿಡಿಸಿಡಿ ಎಂದಳು. ಮಕ್ಕಳಿಲ್ಲದವಳು, ಪಾಪ, ಅ ಮಲಮಕ್ಕಳನ್ನೇ ತನ್ನವೆಂದು ನೋಡಿಕೊಂಡರೂ ಅವೂ ಅಮ್ಮನಂತೆ ದೊಡ್ಡಮ್ಮನಮೇಲೆ ಹರಿಹಾಯುವ, ವಿವೇಕವಿಲ್ಲದೆ ಬೈಯ್ಯುವಾಗ ರುಕ್ಕಮ್ಮನಾದರೂ ಎಷ್ಟಂತ ಸಹಿಸಿಯಾಳು..! ಅದಕ್ಕೇ ಸಿಡಿಗುಟ್ಟಿದಳು.

‘ಏ, ಇವ್ರೆಲ್ಲ ಭಾಮಾದೊಡ್ಡಮ್ಮನ ಹೊಟ್ಟೇಲಿ ಹುಟ್ದೋರು. ನಿಂಗೆ..?’ ಮತ್ತೆ ಕೇಳಿದೆ. ಕ್ಷಣ ಸುಮ್ಮನಿದ್ದಳು. ಒಳಗೇನು ತೋಟಿ ನಡೆಯಿತೋ ಗೊತ್ತಿಲ್ಲ. ಶೂನ್ಯದೃಷ್ಟಿಯಲ್ಲಿ ಯಾರಿಗೋ ಹೇಳುವಂತೆ ಬಾಯಿತೆರೆದಳು.

‘ ಆಗಿತ್ತು ನಂಗೂ ಒಂದು, ಬಂಜೆ ಅನ್ನೋ ಶಾಪ ಕಳ್ಯಕ್ಕೆ. ಇಟ್ಕಳಕ್ಕೆ ಯೇಗ ಬೇಕಲ್ಲ. ಹತ್ ತಿಂಗ್ಳ ಕೂಸು, ಎರ್ದು ಮಲಗಿಸ್ದೆ. ಗಡದ್ದಾಗಿ ನಿದ್ದೆಹೋತು. ಮಲ್ಗಿದೆ ಅಂದ್ಕಂಡೆ. ಮನೆಚಾಕ್ರಿ ಗೈಯ್ಯದ್ರಲ್ಲಿ ಅದ್ ಯಾಕ್ ಎದ್ದಿಲ್ಲ ಅಂತಾನೂ ತಿಳೀಲಿಲ್ಲ. ರಾತ್ರಿ ಚೂರು ಮೈ ಬೆಚ್ಗಿದ್ದಿದ್ದು ನೆನ್ಪಾತು. ನೋಡಾಣ ಅಂತ ಹೋದ್ರೆ ಬಟ್ಟೇಲಿ ಸುತ್ತಿಟ್ಟಿದ್ದು ಹಂಗೇ ತಣ್ಗಾಗ್ ಹೋಗಿತ್ತು.’ ದೃಷ್ಟಿ ಮುಗಿಲನ್ನೇ ನೋಡ್ತಿತ್ತು. ಮುಂದುವರೆಸಿದಳು, ‘ನಿಮ್ಮಜ್ಜಿ, ಇವ್ರು ಎಲ್ಲ ನಂದೇ ತಪ್ಪು ಅಂದ್ರು. ಜರ ಬಂದಿತ್ತೇನೋ ನೋಡ್ಲಿಲ್ಲ ಮಾಡ್ಲಿಲ್ಲ ನೀರುಹಾಕ್ದೆ, ಸರ್ಯಾಗಿ ಮೈ ಕೂಡ ಒರಸ್ಲಿಲ್ಲ ಅಂತ ಕಾಣ್ಸತ್ತೆ. ಅದ್ಕೇ ಹಿಂಗಾತು ಅಂತ ಹಿಗ್ಗಾಮುಗ್ಗಾ ಬೈದ್ರು.’ ದಢಕ್ಕನೆ ಎಚ್ಚೆತ್ತಂತೆ ನನ್ನ ಕಡೆ ತಿರುಗಿ, ‘ಅದು ಎಷ್ಟ್ ಚೆನಾಗಿತ್ತು ಗೊತ್ತಾ, ನಿನ್ ಹಾಂಗೆ ಕೆಂಪ್ಗೆ, ದುಂಡ್ಗೆ, ತಲೆತುಂಬ ಕೂದ್ಲು, ಕಪ್ಪ್ ಕಣ್ಣು, ನಿನ್ ವಾರ್ಗೆನೇ ಈಗಿದ್ದಿದ್ರೆ..’ ಈಗ ಮಾತ್ರ ದೊಡ್ಡ ನಿಟ್ಟುಸಿರು ಹೊರಬಿತ್ತು. ‘ಅದ್ಕೇ ನಿನ್ ನೋಡ್ದಾಗ್ಲೆಲ್ಲ ನಂಗದೇ ನೆಪ್ಪಾಗತ್ತೆ’ ಹೇಳುತ್ತ ಒಂದೇಒಂದು ಸಾರಿ ಕಣ್ಣಿಗೆ ಸೆರಗೊತ್ತಿದಳು. ಅಷ್ಟೆ. ನಾನವಳ ಕೈಹಿಡಿದೆ. ನನಗರ್ಥವಾಗಿತ್ತು ಇವಳಿಗ್ಯಾಕೆ ನನ್ನ ಮೇಲೆ ಅಷ್ಟೊಂದು ಮೋಹ ಎಂದು. ಕ್ಷಣದಲ್ಲೇ ‘ನಡೀನಡೀ, ನಂಗ್ ಬಂಡಿ ಕೆಲ್ಸ ಬಿದ್ದದೆ. ನಿಂಗೇನು ಹರಟ್ತಾಕೂತ್ರೆ ಕೂತೇ ಇರ್ತಿ ‘ ಹೇಳುತ್ತ ಎದ್ದವಳೇ ದುಡುದುಡು ಹಿತ್ತಲಿಗೆ ನಡೆದೇಬಿಟ್ಟಳು. ನನಗೆ, ಇವಳೇನು ಭಾವನೆಗಳನ್ನು ಅದುಮಿಡುವ ಕಲೆಯಲ್ಲಿ ಪಳಗಿದ್ದಾಳೋ ಅಥವಾ ಭಾವನೆಗಳೇ ಇಲ್ಲದ ನಿಜರ್ೀವ ಬೊಂಬೆಯ ಹಾಗೋ ಎನ್ನಿಸಿಬಿಟ್ಟಿತು. ಮುಂದೇನು ಕೇಳಲೂ ಆಸ್ಪದ ಕೊಡದಂತೆ ಅವಳು ಎದ್ದುಹೋಗಿಯಾಗಿತ್ತು…..
ದೊಡ್ಡಮ್ಮ ಎಂದೂ ಬದಲಾಗಲೇ ಇಲ್ಲ. ಕಾಲಮಾತ್ರ ಬದಲಾಗುತ್ತ, ಪಾತ್ರಗಳು ಬದಲಾಗುತ್ತ ದಿನಗಳು ಉರುಳುವಾಗ ಏನೆಲ್ಲಾ ನಡೆಯಿತು !

ಭಾಮಾದೊಡ್ಡಮ್ಮ ಐದನೇಹೆರಿಗೆಯಲ್ಲಿ ದುರಂತಅಂತ್ಯ ಕಂಡಳು. ದೊಡ್ಡಪ್ಪನ ಕಪಟಹೃದಯ ನಾಲ್ಕುದಿನ ಕಣ್ಣೀರು ಸುರಿಸಿತು. ಮತ್ತೆ ಮುಪ್ಪಾಗುವ ಹುಣಿಸೆಗೆ ಹುಳಿಜಾಸ್ತಿ ಎನ್ನುವುದನ್ನು ನಿರೂಪಿಸಿಬಿಟ್ಟಿತು. ಆ ಹೆಜ್ಜೆಗಳು ಈಗ ರಾಜಾರೋಷವಾಗೇ ಪಕ್ಕದಬೀದಿಯ ವಿಧವೆ ವಿಮಲಳ ಮನೆಗೆ ಚಪ್ಪಲಿ ಸವೆಸತೊಡಗಿದವು. ದೊಡ್ಡಮ್ಮ ಅದೇ ಭಯಭಕ್ತಿಯಿಂದ ಹಿಂದಿನ ಅಂಗಳದಲ್ಲಿ ನಿಂತು, ‘ಅಡ್ಗೆ ಆಯ್ತು. ಊಟಕ್ ಬನ್ನಿ ಮಾರಾಯ್ರೇ’ ಎಂದು ದನಿಯೇರಿಸಿ, ‘ದೇಹದಂಡಿಸುವ’ ಪತಿದೇವರ ಕರೆಯುತ್ತಿದ್ದಳು. ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ಮಯರ್ಾದೆಯ ಹಂಗುತೊರೆದಳು. ನಾಲ್ಕಾರುಮನೆಯ ಕಸಮುಸುರೆ, ಹಪ್ಪಳ, ಪುಡಿಗಳ ಮಾಡುವ ಕೆಲಸಕ್ಕೆ ಒಡ್ಡಿಕೊಂಡಳು. ಪುಡಿಗಾಸಿನ ಸಂಪಾದನೆಯಲ್ಲಿ ಮಲಮಕ್ಕಳಿಗೆ, ಪತಿದೇವರಿಗೆ ಕೂಳು ಕಾಣಿಸುತ್ತ ಹೆಣ್ಣು ಸಂಸಾರದ ಕಣ್ಣು ಎನ್ನುವುದನ್ನು ಮಾಡಿತೋರಿಸುತ್ತಿದ್ದಳು. ನಾನು ಮದುವೆಯಾಗಿ ದೂರವಾಗಿದ್ದೆ. ಎಂದಾದರೊಮ್ಮೆ ಊರಿಗೆಹೋದಾಗ ಹರುಕುಸೀರೆಯ, ಮತ್ತಷ್ಟು ಬೆಂಡಾದ ಶರೀರದ, ಬೆನ್ನುಬಾಗಿದ ರುಕ್ಕಮ್ಮನನ್ನು ಕಂಡು ಕರುಳು ಕಿತ್ತುಬರುತ್ತಿತ್ತು. ನಾನು ಅವಳಿಗೆಂದು ಕೊಟ್ಟ ನೂರಾರುರೂಪಾಯಿ ದೊಡ್ಡಪ್ಪನ ತೆವಲಿಗೆ ಸೇರುತ್ತಿತ್ತು. ಕಣ್ಣೀರೂ ಬತ್ತಿದವಳ ಕಂಡು ‘ಅಯ್ಯೋ ಅಮಾಯಕಿಯೇ…’ ಎಂದು ನೋಯುತ್ತಿದ್ದೆ.

* * *

ದೊಡ್ಡಮ್ಮ ತುಂಬಾ ನೆನಪಾಗುತ್ತಾಳೆ.

ಅವಳು ಅವಿದ್ಯಾವಂತೆ, ನಾನು ವಿದ್ಯಾವಂತೆ. ನಾನು ಅವಳಂತೆ ಕುರೂಪಿಯಲ್ಲ ಸುರೂಪಿ. ಅವಳಂತೆ ನನಗೂ ಸುಂದರನಾದ ಗಂಡ, ‘ಮೇಡ್ ಫಾರ್ ಈಚ್ಅದರ್’. ನಾನು ಕಷ್ಟಕಾಣದೆ ಸಂಸಾರ ನಡೆಸತೊಡಗಿದೆ. ಮುದ್ದಾದ ಮಗಳು ಹುಟ್ಟಿದಳು. ಅವಳಂತೆ ಭಾವಿನೀರು ಸೇದದೆ, ಕೊಟ್ಟಿಗೆ ಗುಡಿಸದೆ, ಪರರ ಚಾಕರಿಮಾಡದೆ, ಹೊಟ್ಟೆಪಾಡಿಗೆ ಅವರಿವರ ಮನೆಗೆಲಸ ಮಾಡದೆ ರಾಣಿಯಂತೆ ಹೆಜ್ಜೆಹಾಕಿದೆ. ರಾಜೀವ, ನಾ ಹೆಜ್ಜೆಯಿಟ್ಟಲ್ಲಿ ಹೂವ ಹಾಸುತ್ತಿದ್ದ, ದೊಡ್ಡಪ್ಪನಂತಲ್ಲ. ಆಧುನಿಕ ಚಿಂತನೆಗಳ ಮೈಗೂಡಿಸಿಕೊಂಡು ಬೀಗಿದೆ. ನನ್ನ ವ್ಯಕ್ತಿತ್ವ ಬೆಳೆಯಿತೆಂದು ಹಿಗ್ಗಿದೆ. ರುಕ್ಕಮ್ಮ ಸಿಕ್ಕಾಗ, ‘ನೀನು ಕುರಿಯಂತೆ ಬದುಕಿದ್ದೇ ನಿನ್ನ ದುರಂತಕ್ಕೆ ಕಾರಣ’ ಎಂದೆ. ಆದರೆ, ದುರಂತದ ಬದುಕು, ಸೋಲಿನ ಬದುಕು ಯಾರದು…?
ದೊಡ್ಡಮ್ಮ ತುಂಬಾ ನೆನಪಾಗುತ್ತಾಳೆ….

ರಾಜೀವ ಮೊದಲು ಹೀಗಿರಲಿಲ್ಲ. ಬ್ಯಾಂಕ್ ವ್ಯವಹಾರಕ್ಕೆಂದು ಬರುತ್ತಿದ್ದವ ಅಲ್ಲಿಯೇ ಕೆಲಸಮಾಡುತ್ತಿದ್ದ ನನ್ನನ್ನು ಮೆಚ್ಚಿ ಮದುವೆಯಾದ. ಒಳ್ಳೆಯ ಬಿಸéಿನೆಸ್, ರೂಪ, ನನ್ನದೇ ಜಾತಿ ಮತ್ತೇನು ಬೇಕು ಸಪ್ತಪದಿ ತುಳಿಯೋಕೆ. ಜೋಡಿಹಕ್ಕಿ ಮುಗಿಲಲ್ಲಿ ತೇಲಿದ್ದು ಹತ್ತಾರುವರ್ಷ. ಆಮೇಲೆ ? ಗಂಡಿಗೆ ಹೆಂಡತಿ ಅದೆಷ್ಟೇ ಸುಂದರಿಯಾದರೂ ಒಂದೇತೆರನ ಊಟ ಬೇಸರವಂತೆ. ರಾಜೀವನೇನೂ ಹೊರತಲ್ಲ. ಹೊರಗಡೆ ಹೆಂಗಸರೊಡನೆ ಫ್ಲಟರ್ಿಂಗ್, ಓಡಾಟ, ಕಾರಿನಲ್ಲಿ ಸೆಂಟಿನ ಘಮ, ತಡಮಾಡಿ ಬರುವ ರಾತ್ರಿಗಳು, ಪಾಟರ್ಿಗಳು ಎಲ್ಲ ಬದಲಾದ ಮನಸಿಗೆ ತಕ್ಕಂತೆ ತೆರೆದುಕೊಳ್ಳತೊಡಗಿತು. ನಾನು ಹೈರಾಣಾದೆ, ಕನಸಿನರಮನೆಯಲ್ಲಿ ಬಿರುಕಾಯಿತು.

‘ ಹೆಣ್ಣಿಗೆ ಪ್ರೀತಿ ದೀರ್ಘಕಾಲದ ಯಾನ, ಅದೇ ಪ್ರಪಂಚ, ಗಂಡಿಗೆ ಮಾತ್ರ ಅದೊಂದು ಅಂಶ ಮಾತ್ರವೇ…. ‘ಇಂಥ ಮಾತುಗಳ ಕಲಿತಿದ್ದೆ, ದೊಡ್ಡಮ್ಮನಿಗಿಂತ ವಿವೇಚನಾಶೀಲಳಾಗಿದ್ದೆ. ಹೆಣ್ಣು ಸಂಕೋಲೆಗಳನ್ನು, ಶೋಷಣೆಯನ್ನು ಧಿಕ್ಕರಿಸಬೇಕು ಎಂದು ರುಕ್ಕಮ್ಮನಂಥ ಶೋಷಿತರಿಗೆ ಬೋಧಿಸುತ್ತಿದ್ದೆ. ಕಲಿತ ಕಲಿಕೆಯನ್ನೆಲ್ಲ ರಾಜೀವನ ಮೇಲೆ ಪ್ರಯೋಗಿಸಿದೆ. ಆಧುನಿಕ ಬಣ್ಣಗಳಿಂದ ಮದಿಸಿದ ಗಂಡು ಎಲ್ಲ ಬೇಲಿಗಳನ್ನೂ ಉಪೇಕ್ಷಿಸಿದಾಗ ನಾನು ವಿಚ್ಛೇದನಕ್ಕೆ ಅಂಟಿಕೊಂಡುಬಿಟ್ಟೆ. ನಿರಾಳಳಾದೆ ಎಂದು, ಗೆದ್ದೆನೆಂದು ಉಸಿರುಬಿಟ್ಟೆ. ಆದರೆ, ಮುಂದಿನ ಏಕಾಂಗಿ ಬದುಕು…?

‘ಅವ್ರ್ ಬಿಟ್ಟ್ ಇವ್ರ್ ಬಿಟ್ ಅವ್ರ್ಯಾರು..’ ಹೀಗೆಂದು ಸಂಗಾತಿಗಳ ಆರಿಸುತ್ತ ಹೋಗಲು ಬದುಕೇನು ಕಣ್ಣಾಮುಚ್ಚಾಲೆಯಾಟವೇ..? ನನ್ನ ಮನಸಿಂದ ರಾಜೀವ ಎಂದೂ ಜಾರಲೇ ಇಲ್ಲ, ಮತ್ತೆ ತೆಕ್ಕೆಗೆ ಸಿಕ್ಕಲೂ ಇಲ್ಲ. ಆದರೆ, ಬದುಕಿಂದ ಜಾರದಂತೆ ನೋಡಿಕೊಳ್ಳುವುದರಲ್ಲಿ ನಾನು ಎಡವಿದೆನೇ…?ಅವನೂ ಪಾಡುಪಟ್ಟ. ಆದರೂ ಗಂಡು, ದೇಹಕ್ಕೆ ತೆವಲು ಹತ್ತಿದಾಗ ಎಲ್ಲಿಯೋ ಕಳೆದುಕೊಂಡಿದ್ದಾನೆ. ನಾನು…? ಹಗಲು ಕಾಡುವ ಒಂಟಿತನ, ಮಗಳ ಹೊಣೆ, ಇರುಳು ಹಾಸಿಗೆಯಲ್ಲಿ ಕಾಮನ ಭೂತನರ್ತನ, ಬಾಳು ಹಿಂಡಿಬಿಟ್ಟಿತು.

ರುಕ್ಮಿಣಿ ದೊಡ್ಡಮ್ಮ ಈಗ ಅಡಿಗಡಿಗೆ ನೆನಪಾಗುತ್ತಾಳೆ.

ಎಂಬತ್ತುವರ್ಷದ ಹಾಸಿಗೆಹಿಡಿದ ದೊಡ್ಡಪ್ಪ, ‘ನಂ ರುಕ್ಕು ಒಬ್ಳು ಇಲ್ದೇ ಇದ್ದಿದ್ರೆ ನನ್ ಪಾಡು ಯಾತಕ್ಕೂ ಬ್ಯಾಡಾಗ್ತಿತ್ತು ಕಣೇ’ ಎಂದು ಆದಿನ ಕಣ್ಣೀರಿಟ್ಟಿದ್ದನ್ನು ಕಂಡು ನಾಚುತ್ತ, ಕಷ್ಟದಬಾಳು ಸಾರ್ಥವಾಯಿತು ಎಂಬ ಧನ್ಯಭಾವ ತೋರ್ಪಡಿಸಿದ ಎಪ್ಪತ್ತರ ಹರಯದ ದೊಡ್ಡಮ್ಮ ನನ್ನನ್ನಿಂದು ಕೆಣಕುತ್ತಾಳೆ. ಇದಾಗಿ ವರ್ಷವಷ್ಟೇ, ಮಲಗಿದವಳು ಏಳಲೇ ಇಲ್ಲವಂತೆ. ಸಾವಿನಲ್ಲೂ ನಿರಾಳಳಾಗಿ ಸತ್ತ ರುಕ್ಕಮ್ಮ, ಕಡೆಯಲ್ಲಾದರೂ ತನ್ನನ್ನು ಕೈಹಿಡಿದವ ಹೊಗಳಿದ್ದಕ್ಕೆ ಜಗದಸಿರಿ ಸುರಿದಂತೆ ತುಸು ಉಬ್ಬಿ ನನ್ನ ನೆನಪಲ್ಲಿ ಪಿಸುಗುತ್ತಾಳೆ, ‘ಕಷ್ಟ ಪಟ್ಟಿದ್ದು ನಾನಾ ನೀನಾ’ ಎಂದು. ಹಾಗಾದರೆ, ಗಂಡಸರನ್ನು ಕಾಡುವ ‘ಫಾಟರ್ಿಪ್ಲಸ್ನ’ ‘ಪಾಸಿಂಗ್ ಫೇಸ್’ ಇದೆಂದು ನಾನು ಸಹನೆ ತಾಳಬೇಕಿತ್ತೆ.. ಕಾದುನೋಡಿ, ಕಾದಾಡಿ, ನನ್ನ ಆಧುನಿಕ ಚಿಂತನೆಗಳ ಕಿತ್ತೊಗೆದು ರಾಜೀವನನ್ನು ಅನುನಯಿಸಿ ಉಳಿಸಿಕೊಳ್ಳಬೇಕಿತ್ತೆ…ಸಮಾನತೆ, ಸ್ವಾತಂತ್ರ್ಯದ ಅರ್ಥ ನನಗಾಗಲಿಲ್ಲವೇ… ಅವನಂತೆ ನಾನೂ ಅಹಮ್ಮಿನ ಅಡಿಯಾಳಾದೆನಾ… ದೊಡ್ಡಮ್ಮನಂತೆ ಕೆಲವು ಸೂಕ್ಷ್ಮತೆಗಳಲ್ಲಿ ‘ಕೊಂಚ ನಿಲರ್ಿಪ್ತಳಾಗಿದ್ದರೆ’ ಬಹುಷಃ ರಾಜೀವ ಜೀವನಸಂಧ್ಯೆಯಲ್ಲಿ ನನ್ನೊಡನೇ ಇರುತ್ತಿದ್ದನೇನೋ…ಅವಳಂತೆ ನಾನು ಮುಗ್ಧೆ ಯಾಕಾಗಲಿಲ್ಲ…ಬೆಳವಣಿಗೆ ಅಂದುಕೊಂಡ ಚಿಂತನೆಯೇ ಈ ಕಾಲದ ಹೆಣ್ಣುಗಳ ಒಂಟಿತನಕ್ಕೆ, ಒತ್ತಡಕ್ಕೆ ಕಾರಣವಾಗುತ್ತಿದೆಯೇ…ಅವಳದ್ದೂ ಬದುಕೇ, ನನ್ನದೂ ಬದುಕೇ. ಆದರೆ, ಬದುಕಿದ ರೀತಿ ತೀರಾ ವಿಭಿನ್ನ. ಮೊದಲು ಸುಖವೆಂದರೂ ಕಡೆಯಲ್ಲಿ ಸೋತವಳು ನಾನೇ ಅಲ್ಲವಾ…
ದೊಡ್ಡಮ್ಮ ಇನ್ನೂ , ತುಂಬಾ ನೆನಪಾಗುತ್ತಿದ್ದಾಳೆ.

ಮಗಳು ‘ಮಂದ್ರ’ಳ ಆಧುನಿಕ ಚಿಂತನೆಗಳು ತೀವ್ರಸ್ಥಾಯಿಯಲ್ಲಿವೆ. ನೀರಡಿಕೆ, ಹಸಿವಿನಷ್ಟೇ ಕಾಮವೂ ಅಗತ್ಯ ಅನಿವಾರ್ಯ ಎನ್ನುತ್ತಾಳೆ. ಅದಕ್ಕಿಲ್ಲದ ಮಡಿವಂತಿಕೆ ಇದಕ್ಕೇಕೆ ಎನ್ನುತ್ತಾಳೆ. ‘ಮದುವೆಯಿಂದ ನೀನೇನು ಸುಖಪಟ್ಟೆ’ ಎಂದು ನನ್ನನ್ನು ಪ್ರಶ್ನಿಸುತ್ತಾಳೆ. ಈ ಬಂಧ ನನಗೊಗ್ಗದ ಸಂಗತಿ ಎಂದು, ಮುಂಬೈನ ಕಾಪರ್ೋರೇಟ್ ವಲಯದ ಗೆಳೆಯನೊಂದಿಗೆ ‘ಲಿವ್ -ಇನ್-ರಿಲೇಷನ್ಶಿಪ್’ ನಲ್ಲಿ ಹಾಯಾಗಿದ್ದೇನೆನ್ನುತ್ತಾಳೆ. ರಾಜೀವ ಇದ್ದಿದ್ದರೆ ಹೀಗಾಗುತ್ತಿತ್ತೆ..? ದೊಡ್ಡಮ್ಮನ ಬದುಕಿನ ಕೆಲವು ‘ಬಿಟ್ಟುಕೊಡುವ’ ಗುಣಗಳನ್ನು ನಾನು ರೂಢಿಸಿಕೊಂಡಿದ್ದರೆ ರಾಜೀವ ನನ್ನೊಡನೇ ಇರುತ್ತಿದ್ದನೇ..? ಬೆಳವಣಿಗೆ ಎಂದು ನಾವು ಭಾವಿಸುವುದು ನಮ್ಮ ಬದುಕಿನ, ನಮ್ಮ ದೇಶದ ಮೌಲ್ಯಗಳ ಅಧಃಪತನವೇ..? ನನ್ನಿಂದ ಇಳಿಮುಖವಾದ{?} ಮೌಲ್ಯವೇ ಮಂದ್ರಳನ್ನು ಈ ಅಪಮೌಲ್ಯದ ಹಾದಿಗೆ ಹಚ್ಚಿತೇ..? ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲದೆ,

ರುಕ್ಕಮ್ಮ ಮತ್ತೆ ನೆನಪಾಗುತ್ತಿದ್ದಾಳೆ.

ನನ್ನ ದುಡುಕಿನ ನಿರ್ಧಾರ, ರಾಜೀವನ ಸ್ವಾರ್ಥ…ಇದರ ಫಲಿತಾಂಶ…? ಮಂದ್ರಳ ಮಂದವಾಗಲಿರುವ ಭವಿಷ್ಯ !
‘ಎಲ್ಲಾಕಡೆ ರಾಮನೇ ಇರ್ತಾನೇನೇ, ಕೃಷ್ಣನೂ ಇರ್ತಾನೆ. ರುಕ್ಮಿಣಿ ಇದ್ಮೇಲೆ ಸತ್ಯಭಾಮೆನೂ ಇರ್ತಾಳೆ. ನಂಗ್ ಕಾಟ ತಪ್ತು ಬಿಡು.’ ‘ಎಂಥ ಕಾಟನೇ ಅದು?’ ಕಿಸಕ್ಕಂತ ನಕ್ಕ ದೊಡ್ಡಮ್ಮ ಮತ್ತೆ ನೆನಪಾಗುತ್ತಾಳೆ. ಅವಳೇನೋ ನಕ್ಕಳು, ಕಡೆಯಲ್ಲಿ ನಾಚಿದಳು, ಧನ್ಯೆ ಎಂದುಕೊಂಡಳು, ನಾನು..? ಇದೇನೂ ಇಲ್ಲದೆ ಒಂಟಿಗೂಡಲ್ಲಿ ನರಳುತ್ತ ಕುಳಿತಿರುವೆ….

ನಿಜ, ದೊಡ್ಡಮ್ಮನ ದೇಹಕ್ಕೆ ಕಷ್ಟವಿತ್ತು. ಆದರೆ, ಅವುಗಳನ್ನು ಮನಸಿನ ಭಾವಲೋಕಕ್ಕೆ ಎಳೆತಂದು ಹಿಗ್ಗಾಮುಗ್ಗಾ ಜಗ್ಗಾಡಿ ಬದುಕಿನ ಬೇರೆ ರಸಗಳನ್ನು ಕೆಡಿಸಿಕೊಳ್ಳಲಿಲ್ಲ. ಎಲ್ಲವೂ ಬಂದಂತೆ, ಸಿಕ್ಕಂತೆ ಸರಳವಾದ ಸ್ವೀಕಾರ. ಅದಕ್ಕೆ ನಿರುಮ್ಮಳವಾಗಿ ಬದುಕು ಕೊನೆಗಾಣಿಸಿದಳು. ಆದರೆ ನಾವು, ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಎಳೆದಾಡುತ್ತ, ಮನಸನ್ನು ರಾಡಿಗೊಳಿಸುತ್ತ, ಭಾರಭಾರವಾಗುತ್ತ…..

ಏನೂ ಇಲ್ಲದೆ ಎಲ್ಲವನ್ನೂ ಪಡೆದಂತೆ ನಿರಾಳಳಾದ,

ರುಕ್ಮಿಣಿ ದೊಡ್ಡಮ್ಮ ಮತ್ತೆ ನೆನಪಾದಳು…..

‍ಲೇಖಕರು avadhi-sandhyarani

September 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: