ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗೇಶ್ ಹೆಗಡೆ ಹೇಳಿದ 'ಆನೆ ಬಾಲ'ದ ಕಥೆ

ನಾಗೇಶ್ ಹೆಗಡೆ

ಆನೆ ಪಾರಾಯ್ತು, ಬಾಲ ಸಿಕ್ಹಾಕ್‍ಕೊಂಡ್‍ಬುಡ್ತು ಡುಮ್‍ ಡುಮ್‍!
ನನ್ನ ‘ಗೋ-ಮಯ’ ಲೇಖನಕ್ಕೆ ಪ್ರತಿಕ್ರಿಯೆಯಾಗಿ ‘ವಿಶ್ವವಾಣಿ’ಯಲ್ಲಿ ಇಂದು ಇಡೀ ಪುಟದ ತುಂಬೆಲ್ಲ ಮ್ಯಾಂಚೆಸ್ಟರ್‍ನ ಡಾ. ವೈಶಾಲಿ ದಾಮ್ಲೆಯವರು ಬರೆದಿದ್ದಾರೆ.
ನಾಲ್ಕು ದಿನಗಳ ಹಿಂದೆ ಇದೇ ಪತ್ರಿಕೆಯಲ್ಲಿ ರೋಹಿತ್‍ ಚಕ್ರತೀರ್ಥ ವಿಜ್ಞಾನ ಅಂಕಣಕಾರರನ್ನೆಲ್ಲ ಜಾಲಾಡಲು ತಮ್ಮ ಅಂಕಣವನ್ನು ಮೀಸಲಿಟ್ಟಿದ್ದರು.
ಅದು ಬಿಡಿ. ಡಾ. ವೈಶಾಲಿ ದಾಮ್ಲೆ “‘ಗೋ-ಮಯ ಲೇಖನದಲ್ಲಿ ಬರೆದಿರುವುದೆಲ್ಲಾ ಸುಳ್ಳು ಎಂದು ನಾನು ಹೇಳಲು ಹೋಗುವುದಿಲ್ಲ'” ಎಂದೇ ಆರಂಭಿಸಿದ್ದಾರೆ. ಹಾಗಾಗಿ ಸುಮಾರು ಶೇ. 99 ಭಾಗವನ್ನು ಬಿಟ್ಟು ಇನ್ನುಳಿದ ಶೇ. 1ರಷ್ಟು ಸಂಗತಿಗಳ ಬಗ್ಗೆ ದೀರ್ಘ ಲೇಖನ ಬರೆದಿದ್ದಾರೆ.
ಇನ್ಸೂಲಿನನ್ನು ಹಂದಿಗಳಿಂದಲೂ ಪಡೆಯುತ್ತಾರೆ ಎಂದು ಬರೆಯಬೇಕಿತ್ತಂತೆ. ಹೃದ್ರೋಗ ಚಿಕಿತ್ಸೆಯ ಸಂದರ್ಭದಲ್ಲಿ ಬಳಸುವ ‘ಎಪಿನೆಫ್ರಿನ್‍’ ಎಂಬ ಔಷಧವನ್ನು ಬೇರೆ ಮೂಲಗಳಿಂದಲೂ ಪಡೆಯಬಹುದು ಎಂದು ತಿಳಿಸಬೇಕಿತ್ತಂತೆ. B-12 ಜೀವಸತ್ವವನ್ನು ಪ್ರಾಣಿಗಳಿಂದ ಯಕೃತ್ತಿನಿಂದ ಅವಶ್ಯಕತೆ ಇಲ್ಲವಂತೆ. ಹಿರಿಯ ನಾಗರಿಕರ ಮೂತ್ರನಿಯಂತ್ರಣಕ್ಕೆ ಬಳಸುವ ಕೊಲ್ಲಾಜೆನ್‍ಅನ್ನು ಬೇರೆ ಮೂಲಗಳಿಂದಲೂ ಪಡೆಯಬಹುದಂತೆ; ಆಸ್ಪತ್ರೆಗಳಲ್ಲಿ ಬಳಸುವ ಎಲ್ಲ ಬ್ಯಾಂಡೇಜಿನಲ್ಲೂ ಕೊಲ್ಲಾಜೆನ್‍ ಇರಲಿಕ್ಕಿಲ್ಲವಂತೆ ಇತ್ಯಾದಿ ಇತ್ಯಾದಿ ಸಂಗತಿಗಳನ್ನು ಸುದೀರ್ಘವಾಗಿ ವಿಶ್ಲೇಷಿಸಿದ್ದಾರೆ.
ಆದರೆ…
ಕಸಾಯಿಖಾನೆಯಿಂದ ಹೊರಬೀಳುವ ನಿರುಪಯುಕ್ತ 99% ಭಾಗದಿಂದ (ಅಂದರೆ ಮೂಳೆ, ಚರ್ಮ, ಕೋಡು, ಗೊರಸುಗಳಿಂದ) ಸಿಗುವ ಟ್ಯಾಲೊ, ಸ್ಟೀರಿಕ್‍ ಆಸಿಡ್‍, ಜಿಲೆಟಿನ್, ರಂಜಕ, ಕ್ಯಾಲ್ಸಿಯಂ ಇವೆಲ್ಲವೂ ಬಳಕೆಯಾಗುತ್ತಿರುವ ಬಗ್ಗೆ ಈ ಮ್ಯಾಂಚೆಸ್ಟರ್‍ ಡಾಕ್ಟರ್‍ರ ಆಕ್ಷೇಪಣೆ ಇಲ್ಲ! ಅವೆಲ್ಲ ಈ ಡಾಕ್ಟರ್‍ ವ್ಯಾಪ್ತಿಗೆ ಬರಲಿಕ್ಕಿಲ್ಲ, ಒಪ್ಪೋಣ. ಆದರೆ ದನಗಳ ಹೃದಯದ ಹೊರಪೊರೆಯನ್ನೇ ಪ್ರತಿ ವರ್ಷ ಲಕ್ಷಾಂತರ ಹೃದ್ರೋಗಿಗಳಿಗೆ ಕೃತಕ ಕವಾಟವಾಗಿ ಸೇರಿಸುತ್ತಾರೆ (ಅದೂ ಹಂದಿಯದ್ದಲ್ಲ, ದನಗಳದ್ದೇ) ಎಂದು ನಮ್ಮ ಚರ್ಚೆಯಲ್ಲಿ ಹಾರ್ಟ್ ಸರ್ಜನ್ ಡಾ. ನಿಸರ್ಗ ಎಂದು ಹೇಳಿದ್ದರ ಬಗ್ಗೆ ಡಾ. ದಾಮ್ಲೆ ಯಾವ ಆಕ್ಷೇಪಣೆಯನ್ನೂ ವ್ಯಕ್ತಪಡಿಸುವುದಿಲ್ಲ. ಪರೀಕ್ಷೆ ಮಾಡಿದ ಎಲ್ಲ ಸಕ್ಕರೆ ಸ್ಯಾಂಪಲ್ಲಿನಲ್ಲೂ ದನದ ಮೂಳೆಯ ಅಂಶಗಳೇ ಇವೆಯೆಂದು ನಾನು ಒದಗಿಸಿದ ಲ್ಯಾಬ್‍ ರಿಪೋರ್ಟ್ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸುವುದಿಲ್ಲ.
ಇದು ಹೇಗಿದೆ ಎಂದರೆ ಆನೆ ಪಾರಾಗಿ ಹೋದರೂ ಅದರ ಬಾಲದ ಕಿರು ರೋಮವೊಂದು ಇನ್ನೂ ಇಲ್ಲೇ ಉಳಿದಿದೆ ಎಂದು ಕೂದಲು ಸೀಳುತ್ತ ಹುಯಿಲಿಡುವ ಕೆಲವರ ಪರವಾಗಿ ಡಾಕ್ಟರರು ಅಷ್ಟೊಂದು ದೀರ್ಘ ಸಂಶೋಧನಾ ಪ್ರಬಂಧವನ್ನು ಬರೆದಂತಿದೆ.
ಡಾಕ್ಟರರೆ, ಈ ದೇಶದ ಕಸಾಯಿಖಾನೆಗಳಿಂದ ಪರ್ವತೋಪಾದಿ ಹೊರಬೀಳುವ ತ್ಯಾಜ್ಯದ ಮರುಬಳಕೆಯಾಗುತ್ತಿರುವ ಬಗ್ಗೆ ಬರೆದಿದ್ದೇನೆ. ರೋಗಿಗಳಿಗೆ ಈ ಲೇಖನದಿಂದ ಕಷ್ಟವಾದೀತು ಎಂಬ ಚಿಂತೆ ನಿಮಗೆ ಬಾಧಿಸಿದ್ದರೆ ಕ್ಷಮೆಯಿರಲಿ; ನನ್ನ ಚಿಂತೆ ಏನೆಂದರೆ ಈ ದೇಶದ ಕಸಾಯಿಖಾನೆಗಳನ್ನು ಮುಚ್ಚಿಬಿಟ್ಟರೆ ಕೃಷಿ ಕ್ಷೇತ್ರಕ್ಕೆ ಬೇಕಾದ ಭಾರೀ ಪ್ರಮಾಣದ ರಂಜಕವನ್ನು ಎಲ್ಲಿಂದ ತರೋದು, ದನಗಳಿಗಾಗಿ ಹುಲ್ಲು ಬೆಳೆಯಲೆಂದು ರಸಗೊಬ್ಬರ ಸುರಿಯುವವರ ಪರದಾಟ ಎಷ್ಟು ಹೆಚ್ಚೀತು? ಸತ್ತ ದನಗಳು ಅಲ್ಲಿ ಇಲ್ಲಿ ಕೊಳೆಯುತ್ತ ಬಿದ್ದಿರುವಾಗ ಅಂಥ್ರಾಕ್ಸ್ ರೋಗ ಹಬ್ಬಿ, ರೈತರು ಸಾಯುವ ಸಂದರ್ಭ ಬಂದರೆ ಅವರಿಗೆ ವೈದ್ಯಕೀಯ ನೆರವು ಎಲ್ಲಿಂದ ಸಿಕ್ಕೀತು?
ನನ್ನ ಲೇಖನದಲ್ಲಿಕಂಡ ಒಂದೆರಡು ದುರ್ಬಲ ಅಂಶಗಳನ್ನೇ ಬೃಹತ್ತಾಗಿ ಎತ್ತಿ ತೋರಿಸಿ ಕೂದಲು ಸೀಳ ಹೊರಟವರನ್ನು ಹೆಗಲಮೇಲಿಟ್ಟು ಮೆರೆಸುವ ನನ್ನ ಪತ್ರಕರ್ತ ಮಿತ್ರರಿಗೆ ಹೇಳುವುದಿಷ್ಟೆ: ದೇಶವನ್ನು ದೊಡ್ಡ ದುರಂತಕ್ಕೆಳೆಯಬಲ್ಲ ಅನೇಕ ವಿದ್ಯಮಾನಗಳು ಜರುಗತೊಡಗಿವೆ: ಹೊಸ ಪರಮಾಣು ಸ್ಥಾವರಗಳು ಅಗತ್ಯವಿಲ್ಲದಿದ್ದರೂ ತಲೆಯೆತ್ತಲಿವೆ; ದೇಶದ ಸಮಗ್ರ ಸಮುದ್ರ ಸಂಪತ್ತನ್ನು ದೋಚಿ ಸಾಗಿಸಲು ವಿದೇಶೀ ಹೂಡಿಕೆದಾರರನ್ನು ಆಮಂತ್ರಿಸಲಾಗುತ್ತಿದೆ. ದೇಶಕ್ಕೆ ಬೇಕೇ ಇಲ್ಲದ ಕುಲಾಂತರಿ ಸಾಸಿವೆಯನ್ನು ಹೊಲಗಳಿಗೆ ನುಗ್ಗಿಸಲು ಪಿತೂರಿ ನಡೆದಿದೆ. ಅವೆಲ್ಲವುಗಳ ಬಗ್ಗೆ ನಾನು ಬರೆದಿದ್ದರಲ್ಲಿ ದೋಷ ಕಂಡರೆ ಎತ್ತಿ ಹೇಳಿ.
ನನ್ನ ತಪ್ಪನ್ನು ಸಾಬೀತು ಮಾಡಲು ಬೇಕಿದ್ದರೆ ದೇಶವಿದೇಶಗಳ ತಜ್ಞರನ್ನು ಸಾಲಾಗಿ ನಿಲ್ಲಿಸಿ. ವ್ಯವಸ್ಥೆಯ ವಿರುದ್ಧ ಅಭಿಪ್ರಾಯ ಪ್ರಕಟಿಸುವ ಮಾಧ್ಯಮಗಳ ಕತ್ತು ಹಿಸುಕುವ ಯತ್ನಗಳು ಆರಂಭವಾಗಿವೆ. ಅಂಥ ಯತ್ನಕ್ಕೆ ಜೈಕಾರ ಹಾಕುವವರನ್ನು ಉಡಿಯಲ್ಲಿಟ್ಟು ಪೋಷಿಸಬೇಡಿ. ಅಂಥವರ ತಾಳಕ್ಕೆ ಹೆಜ್ಜೆ ಹಾಕಬೇಡಿ. ಅದು ಇಡೀ ಪತ್ರಿಕೋದ್ಯಮಕ್ಕೇ ಅಪಾಯಕಾರಿ! ಭಾರತದ ಪ್ರಜಾತಂತ್ರದ ಹೆಮ್ಮೆಯ ಆಧಾರ ಸ್ತಂಭಕ್ಕೆ ಗೆದ್ದಲು ಹತ್ತಲು ಬಿಡಬೇಡಿ.

‍ಲೇಖಕರು avadhi

12 June, 2017

3 Comments

  1. Anonymous

    ಆಶಯಗಳನ್ನು ಚರ್ಚೆಗಿಟ್ಟಾಗ ಅದನ್ನೊಂದಿಷ್ಟು ಫ್ಯಾಕ್ಟ್ ಪ್ಯಾಕೇಜುಗಳ ಮೂಲಕ ಕೌಂಟರ್ ಮಾಡುವ ಮತ್ತು ಫ್ಯಾಕ್ಟ್ ಗಳನ್ನು ಮುಂದಿಟ್ಟಾಗ ಆಶಯಗಳ ಬಗ್ಗೆ ಕೆಸರೆರಚುವ ಈ ಆಟದ ಕುರಿತು ನಾವು ಮತ್ತೆ ಮತ್ತೆ ಚರ್ಚಿಸಬೇಕೆಂಬುದೇ ನಾಗೇಶ ಹೆಗಡೆಯವರ ಬರಹವನ್ನು ಪ್ರಶ್ನಿಸುತ್ತಿರುವವರ ಉದ್ದೇಶ. ಅದೇ ಅವರಿಗೆ ಪೆಟ್ರೋಲು. ಅವರಿಗೆ ಪ್ರಚಾರ ಎಷ್ಟು ಕಡಿಮೆ ಸಿಗುತ್ತದೋ ಅಷ್ಟು ಈ ಸಮಾಜಕ್ಕೆ ಹೆಚ್ಚು ಸೌಖ್ಯ. ಪತ್ರಕರ್ತ ವೈದ್ಯ/ವಿಜ್ನಾನಿ ಅಲ್ಲ. ಆತನ ಓದುಗ ರಿಸರ್ಚ್ ಸ್ಕಾಲರೂ ಅಲ್ಲ. ಈ ಮೂಲಭೂತ ಅಂಶ ಗೊತ್ತಿಲ್ಲದವರೊಂದಿಗೆ ಚರ್ಚೆ ಕಷ್ಟ. ವಿಜ್ನಾನ ಕೂಡ ಪ್ರತೀ ಕ್ಷಣ ಬದಲಾಗುತ್ತಿರುತ್ತದೆ ಮತ್ತು ಅದು ರಿಲೇಟಿವ್. ದೇಶದಿಂದ ದೇಶಕ್ಕೆ, ಜನಾಂಗದಿಂದ ಜನಾಂಗಕ್ಕೆ, ಆರ್ಥಿಕತೆಯಿಂದ ಆರ್ಥಿಕತೆಗೆ, ಪುಸ್ತಕದ ಬದನೆಕಾಯಿಯಿಂದ ವಾಸ್ತವ ಪ್ರಯೋಗಕ್ಕೆ, ಅಧಿಕ್ರತದಿಂದ ಅನಧಿಕ್ರತಕ್ಕೆ – ವಿಜ್ನಾನದಂತೆ ವೈದ್ಯಕೀಯ ಕ್ಷೇತ್ರದಲ್ಲೂ ವ್ಯತ್ಯಾಸಗಳಿರುತ್ತವೆ. ಇದೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಸಾಮಾಜಿಕ ಕಳಕಳಿಯ ಒಂದು ಆಶಯದ ವಿರುದ್ಧ ಕಾಲುಕೆರೆದು ಜಗಳಕ್ಕಿಳಿಯುವುದು ಸಾಮಾಜಿಕ ಸ್ವಾಸ್ಥ್ಯದ ಲಕ್ಷಣ ಅಲ್ಲ.- Rajaram Tallur

  2. Anonymous

    Sir, Very well said

  3. Prabhushankara J

    ಕೆಲವರ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲ. ನಿರ್ಲಕ್ಷಿಸುವುದು ಒಳಿತು. ವಿಶ್ವವಾಣಿ ಪತ್ರಿಕೆಯೊಂದು ಇದೆ ಎಂಬುದೇ ನಮಗೆ ಗೊತ್ತಿಲ್ಲ. ಸಾಮಾನ್ಯ ಜನರಿಗೆ ಗೊತ್ತಿಲ್ಲದ ಪತ್ರಿಕೆ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದು, ಅದನ್ನು ಸಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸುವುದರಿಂದ ಜನರಿಗೆ ಗೊತ್ತೇ ಇಲ್ಲದ ಪತ್ರಿಕೆಯನ್ನು ಮುಂಚೂಣಿಗೆ ತಂದಂತಾಗುತ್ತದೆ. ಇಂತಹ ಕುತ್ಸಿತ ಮನಸ್ಸಿನವರನ್ನು ಲಕ್ಷಿಸದೆ ನಿಮ್ಮ ಚಿಂತನೆ, ಬರಹ ಮುಂದುವರಿಸಿ ಎಂದಷ್ಟೇ ನಾಗೇಶ್ ಹೆಗಡೆ ಅವರಲ್ಲಿ ಮನವಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading