ನಾಗೇಶ್ ಹೆಗಡೆ ಕಂಡ 'ಕುಲಾಂತರಿ'

ಏನಿದು ಕುಲಾಂತರಿ ಸಾಸಿವೆ?

ನಾಗೇಶ್ ಹೆಗಡೆ 

ಈ ಭಾನುವಾರ ಬೆಂಗಳೂರಿನಲ್ಲಿ ‘ಕುಲಾಂತರಿ ಸಾಸಿವೆ’ ವಿರುದ್ಧ ಪ್ರತಿಭಟನಾ ಸಮಾವೇಶ ನಡೆಯಿತು. ಅಲ್ಲಿಗೆ ಬಂದಿದ್ದ ಅನೇಕರಿಗೆ ಈಗಲೂ ಅದೇನೆಂಬ ಸ್ಪಷ್ಟ ಕಲ್ಪನೆ ಇಲ್ಲವೆಂಬುದು ಗಮನಕ್ಕೆ ಬಂದುದರಿಂದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡುತ್ತೇನೆ. ನೀವೂ ಫ್ರೆಂಡ್ಸ್ ಜೊತೆ ಹಂಚಿಕೊಳ್ಳಬಹುದು; ಅಥವಾ ನಿಮ್ಮಲ್ಲೇ ಒಂದು ಗಟ್ಟಿ ಅಭಿಪ್ರಾಯವನ್ನು ರೂಪಿಸಿಕೊಳ್ಳಬಹುದು :
ಎ. ‘ಕುಲಾಂತರಿ ಹತ್ತಿ’ಯ ಬಗ್ಗೆ ನಮಗೆಲ್ಲ ಗೊತ್ತಿದೆ. ಮಣ್ಣಿನಲ್ಲಿರುವ ಒಂದು ಬಗೆಯ ಏಕಾಣುಜೀವಿಯ ವಂಶವಾಹಿಯ ಒಂದು ತುಣುಕನ್ನು ಹತ್ತಿಯ ವಂಶವಾಹಿಗೆ ಸೇರಿಸಿದ್ದಾರೆ. ಆ ತಳಿಯ ಹತ್ತಿಗಿಡದ ಪ್ರತಿ ಎಲೆ, ಹೂವು, ಕಾಯಿ, ಕಾಂಡದಲ್ಲೂ ಒಂದುಬಗೆಯ ವಿಷ ತುಂಬಿರುತ್ತದೆ- ಅದನ್ನು ಕಾಯಿಕೊರಕ ಹುಳಗಳು ಹೀರಿದರೆ ಹೊಟ್ಟೆಕೆಟ್ಟು ಸತ್ತುಬೀಳುತ್ತವೆ, ಹಾಗಾಗಿ ಅಂಥ ಹತ್ತಿಗಿಡಕ್ಕೆ ವಿಷ ಸಿಂಪಡನೆ ಬೇಕಾಗಿಲ್ಲ ಎಂದು ಪ್ರಚಾರ ಮಾಡಲಾಗಿತ್ತು. ಆರಂಭದಲ್ಲಿ ಅದು ನಿಜವೂ ಆಗಿತ್ತು.
ಬಿ. ಕುಲಾಂತರಿ ಸಾಸಿವೆ ಹಾಗಲ್ಲ. ಅದರಲ್ಲಿ herbicide tolerant (HT) ಗುಣವನ್ನು ಸೇರಿಸಲಾಗಿದೆ. ಆ ಗುಣ ಹೇಗಿದೆ ಎಂದರೆ ಸಾಸಿವೆ ಗಿಡದ ಆಸುಪಾಸಿನಲ್ಲಿ ಎಂಥದ್ದೇ ಕಳೆ ಬೆಳೆದರೂ ‘ಗ್ಲುಫೊಸಿನೇಟ್‍’ ಎಂಬ ಕಳೆನಾಶಕ ವಿಷವನ್ನು ಸುರಿಯುತ್ತ ಹೋದರೆ ಕಳೆಯೆಲ್ಲ ಸುಟ್ಟು ಹೋಗುತ್ತವೆ -ಆದರೆ ಸಾಸಿವೆ ಗಿಡ ಮಾತ್ರ ಉಳಿದುಕೊಳ್ಳುತ್ತದೆ.
ಸಿ. ಮೇಲ್ನೋಟಕ್ಕೆ ಇದು ಚಮತ್ಕಾರಿಕ ಸಸ್ಯವೆಂದು ಅನ್ನಿಸುತ್ತದೆ. ವಿಜ್ಞಾನದ ಅದ್ಭುತ ಸಾಧನೆಯ ಬಗ್ಗೆ ಗೌರವ ಮೂಡುತ್ತದೆ. ಆದರೆ ತುಸು ಕೆರೆದು ನೋಡಿದಾಗ ಅದರ ಕರಾಳ ಗುಣಗಳು ಕಾಣುತ್ತವೆ. ಒಂದಲ್ಲ ಹತ್ತಿಪ್ಪತ್ತು ಕರಾಳ ಮುಖಗಳು ಅದರಲ್ಲಿ ಅಡಗಿವೆ.
1. ನಿಸರ್ಗದಲ್ಲಿ ‘ಕಳೆ’ ಎಂಬುದು ಇಲ್ಲ. ನಮಗೆ ಗೊತ್ತಿಲ್ಲದ ಸಸ್ಯಕ್ಕೆ ನಾವು ಕಳೆ ಎನ್ನುತ್ತೇವೆ. ಅನೇಕ ಜೀವಿಗಳಿಗೆ ಅವು ಆಹಾರ, ಆಶ್ರಯ ಕೊಡುತ್ತವೆ. ಔಷಧವಾಗುತ್ತವೆ. ಮಣ್ಣಿನ ರಕ್ಷಣೆ ಮಾಡುತ್ತವೆ. ಅಸಂಖ್ಯ ಗ್ರಾಮೀಣ ಮಹಿಳೆಯರಿಗೆ ಅವು ಉದ್ಯೋಗ ಕೊಡುತ್ತವೆ. ಒಂದು ಲೆಕ್ಕಾಚಾರದ ಪ್ರಕಾರ ಸಾಸಿವೆಯೊಂದರ ಸುತ್ತ ಬೆಳೆಯುವ ಅನಗತ್ಯ ಸಸ್ಯಗಳನ್ನು ಕೀಳಲೆಂದೇ ಉತ್ತರ ಭಾರತದಲ್ಲಿ ಕೂಲಿಕಾರರಿಗೆ ನಾಲ್ಕು ಕೋಟಿ ಮಾನವ ಗಂಟೆಗಳಷ್ಟು ಉದ್ಯೋಗ ಸಿಗುತ್ತಿದೆ. ಇದು ನಮ್ಮ ರಾಜ್ಯದ ಒಟ್ಟೂ ನರೆಗಾ ಯೋಜನೆಯಡಿ ಸಂದಾಯವಾಗುವುದಕ್ಕಿಂತ ಹೆಚ್ಚಿನ ಹಣವನ್ನು ರೈತ ಮಹಿಳೆಗೆ ಸಾಸಿವೆ ಬೆಳೆಗಾರರು ಕೊಡುತ್ತಿದ್ದಾರೆ. ಇನ್ನುಮೇಲೆ ಕುಲಾಂತರಿ ಸಾಸಿವೆಯನ್ನು ಬೆಳೆಯುವವರು ಗ್ಲುಫೋಸಿನೇಟ್‍ ಕಳೆನಾಶಕವನ್ನು ‘ಬಾಯರ್‍’ Bayer ಎಂಬ ಕಂಪನಿಯಿಂದ (ಮಾತ್ರ) ಖರೀದಿಸಬೇಕಾಗುತ್ತದೆ. ನಮ್ಮ ಗ್ರಾಮೀಣ ಕಾರ್ಮಿಕರಿಗೆ ಸೇರಬೇಕಾದ ಕೂಲಿ ಹಣವನ್ನು ಅದೊಂದೇ ವಿದೇಶೀ ಕಂಪನಿ ಗಳಿಸುತ್ತದೆ.
2. ಈ ಕಳೆನಾಶಕ ವಿಷವನ್ನು ಬಳಸಿದರೆ ಪರಿಸರವೆಲ್ಲ ವಿಷಮಯ ಆಗುತ್ತದೆ. ಸಿಂಪಡನೆ ಮಾಡುವವರ ಆರೋಗ್ಯಕ್ಕೂ ಹಾನಿ. ಮಣ್ಣಿಗೆ, ನೀರಿಗೆ ಕೂಡ ಹಾನಿ.
3. ಅಂಥ ಕಳೆನಾಶಕವನ್ನು ಹೀರಿಕೊಂಡೂ ಬೆಳೆಯಬಲ್ಲ ‘ವಿಷಕಂಠ’ ಸಾಸಿವೆಯನ್ನು ನಾವು ಆಹಾರ ರೂಪದಲ್ಲಿ ಬಳಸಿದರೆ ಏನೇನು ದೀರ್ಘಕಾಲೀನ ಪರಿಣಾಮ ಆಗಲಿದೆ ಎಂಬುದನ್ನು ಯಾರೂ ಪರೀಕ್ಷೆ ಮಾಡಿ ನೋಡಿಲ್ಲ. ನಾವೇನೊ ಒಗ್ಗರಣೆಗೆ ಮಾತ್ರ ಸಾಸಿವೆ ಬಳಸುತ್ತೇವೆ. ಉತ್ತರಭಾರತದಲ್ಲಿ ಅದನ್ನು ಎಣ್ಣೆಯಾಗಿ ವ್ಯಾಪಕವಾಗಿ ಬೆಳೆಸುತ್ತಾರೆ.
[ಸದ್ಯಕ್ಕೆ ಇವಿಷ್ಟು ಸಾಕೇನೊ. ಆಸಕ್ತರು ಕೋರಿದರೆ ಇನ್ನೂ ಹತ್ತಾರು ಕರಾಳ ಮುಖಗಳನ್ನು ಪಟ್ಟಿ ಮಾಡಬಹುದು. ಇಸ್ರೇಲ್, ಜಪಾನ್ ಮತ್ತು ಬಹಳಷ್ಟು ಐರೋಪ್ಯ ದೇಶಗಳಲ್ಲಿ ಎಲ್ಲ ಬಗೆಯ ಕುಲಾಂತರಿಗಳಿಗೆ ನಿಷೇಧ ಹಾಕಲಾಗಿದೆ. ಹಿಂದೆ ಕುಲಾಂತರಿ ಹತ್ತಿ ಬೇಡ ಬೇಡ ಎಂದರೂ ಅದನ್ನು ಬೆಳೆಯಲು ಹಿಂದಿನ ಸರಕಾರ ಅನುಮತಿ ನೀಡಿದ್ದರಿಂದ ಭಾರೀ ಭಾನಗಡಿ ಆಗಿವೆ. 80 ಲಕ್ಷ ರೈತರು ಕಳೆದ ಮೂರು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ಹುಳಗಳ ಕಾಟ ಹಾಗೂ ವಿಷ ಸಿಂಪಡನೆಯ ಪ್ರಮಾಣ ಮೊದಲಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ. ಸ್ಥಳೀಯ ಉತ್ತಮ ಹತ್ತಿತಳಿಗಳೆಲ್ಲ ನಿರ್ನಾಮವಾಗಿವೆ. ಈಗಿನ ಎನ್‍ಡಿಎ ಸರಕಾರ ಕುಲಾಂತರಿ ಸಾಸಿವೆ ಕೃಷಿಗೆ ಅನುಮತಿ ನೀಡುವ ಹಂತದಲ್ಲಿದೆ. ನೀಡಿದ್ದೇ ಆದರೆ, ಇದು ಮೊದಲನೆಯ ಕುಲಾಂತರಿ ‘ಆಹಾರ ಬೆಳೆ’ಗೆ ಅನುಮತಿ ಕೊಟ್ಟಂತಾಗುತ್ತದೆ. ಅದರ ಹಿಂದೆಯೇ ಕೋಸು, ಮೆಣಸು, ಗೆಣಸು, ಅವರೆ, ಬವಡೆ, ಸೌತೆ, ಕುಂಬಳ ಹೀಗೆ ಸಾಲು ಸಾಲು ನೂರೆಂಟು ಆಹಾರ ಸಸ್ಯಗಳು ಕುಲಾಂತರಿ ರೂಪದಲ್ಲಿ ನಮ್ಮ ಹೊಲಕ್ಕೆ ಬರಲು ಸಜ್ಜಾಗಿವೆ.]

‍ಲೇಖಕರು avadhi

July 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: