ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗರೇಖಾ ಗಾಂವಕರ ಕವಿತೆಗಳು

ನಾಗರೇಖಾ ಗಾಂವಕರ

ಕೆನೆಹಾಲಿನ ಪ್ರೀತಿ

ತಂಪು ದೃಷ್ಟಿಯನ್ನೊಮ್ಮೆ
ನನ್ನತ್ತ ಎಸೆದುಬಿಡು
ಬದುಕ ಮೆಲ್ಲಗೆ ನುಡಿಸಿಕೊಳ್ಳುತ್ತೇನೆ.

ಮಣ್ಣಮನೆಯ ಗೋಡೆ ಕಂಬಗಳು
ತಳತಳಿಸುತ್ತಾ ಒಪ್ಪಗೊಂಡಿವೆ
ತಾಜ್ ಮಹಲ ಮನದೊಳಗೆ
ತನ್ನಷ್ಟಕ್ಕೆ ತಾನೆ ತೆರೆದುಕೊಳ್ಳುತ್ತದೆ.

ಹಾಡುವ ನಾದಕ್ಕೆ ಮೆಲ್ಲಗೆ
ಅರಳುತ್ತಿದೆ ಹೂ
ತೊನೆದಾಡುತ್ತಿವೆ ತರುಲತೆಗಳ
ಕಿರುನಡು
ಬಯಲಗಿಡದ ಬಿಸಿಯೇರುವ
ತನುವಿನ ಮತ್ತನ್ನು ಮುತ್ತನ್ನು
ಕಾಪಿಡುತ್ತೇನೆ ಮುದದಿಂದ.

ಕಾಯಲಿಡುತ್ತೇನೆ ಪ್ರೀತಿ
ಹದವಾಗಿ
ಉಕ್ಕುವ ಕೆನೆಹಾಲಿನ ರುಚಿಗಾಗಿ
ಶುಚಿಯಾಗಿ.

ಖಾಲಿ ಜೀವದ ಚೀಲ
ತುಂಬಿಕೊಳ್ಳುತ್ತೇನೆ
ಮೆಲ್ಲಗೆ ಒಂದೊಂದೆ ಪೊರೆ ಕಳಚಿ
ಮೆದುವಾಗುತ್ತ ಗೆಲುವಾಗುತ್ತ
ಸಾವ ಮಸಣದ ಮನೆಗೆ
ಮುಟ್ಟಿಸಿ ಬರುತ್ತೇನೆ.

ಆ ಹಕ್ಕಿ ಮತ್ತೆ ಈ ಜೀವ

ಉರಿಯ ಪಂಜನು ಸುತ್ತಿ
ಬಿಗಿದು ಕಟ್ಟಿದ ಸರಪಳಿಯ
ನಡುವೆ ಒಂಟಿ ಜೀವ
ಹೊಳೆವ ಸರಳುಗಳ ಒಳಗೆ
ಕೂತು ಆಕಾಶದೆತ್ತರಕೆ
ಜಿಗಿವ ಹಂಬಲ ಹೊತ್ತ ಭಾವ

ಮಿನುಗುವ ಬೆಳಕಿನ ಬಂಗಲೆಯ
ಕಂಡ ಜನ ಸುಖಾತೀಸುಖವ
ಆರೋಪಿಸಿ ಒಳಗೊಳಗೆ
ಕುದಿಗೊಂಡರು.
ಸಹಸ್ಪಂದನೆಗೆ ಜೊತೆಯಾಗಲಿಲ್ಲ.
ಜೀವ ಸಂವಾದಕ್ಕೆ ಕಿವಿಯಾಗಲಿಲ್ಲ.

ಬೆಂಕಿಯುಗುಳುವ ದಾರಿಯಲ್ಲಿಯೇ
ಬೆಳಕಾಗುವ ಕನಸ ಹೊತ್ತು
ಬಾಗಿಲು ಹಿಡಿದೆಳೆದು ಹೊರಬಿದ್ದ
ಹಕ್ಕಿ -ನೀ
ಜರ್ೀವ ಪಕ್ಕೆಗಳಲ್ಲೂ ಹಾರುತ
ಸಣ್ಣಗೆ ನರಳಿ
ಅರಳುವುದ ಕಲಿತಿದ್ದು ಕಂಡು
ಜೀವದೊಳಗೊಂದು
ಜೀವಿತದ ಜ್ಞಾನ

ಹಕ್ಕಿಗಾಲಿನ ನುಣುಪುತನವ
ಎದೆಗಾನಿಸಿಕೊಂಡ ದಿನದಿಂದ
ಜೀವದ
ಜಡ್ಡುಗಟ್ಟಿದ ನರಗಳಲ್ಲಿ ಮೆಲ್ಲಗೆ
ಅದೇನೋ ನವಚೇತನದ ರಸ
ಈಗ
ಊದ್ರ್ವಮುಖಿಯಾಗಿ ಎತ್ತರದ
ಮೋಡಗಳ ಮೇಲೆ ಆ ಹಕ್ಕಿ
ಮತ್ತು ಈ ಜೀವ

 

‍ಲೇಖಕರು avadhi

1 October, 2019

6 Comments

  1. VASUNDHARA K M

    ಅನನ್ಯವಾಗಿ ಕವನ ಕಟ್ಟುತ್ತೀರಿ ನಾಗರೇಖಾಜೀ. ನೀವು ಬಳಸುವ ಪರಿಭಾಷೆ, ಚಿತ್ರಣ ಒಂದು ಹೂಮಾಲೆಯಂತೆ ಭಾಸವಾಗುತ್ತದೆ ನನಗೆ..! ಅದರಲ್ಲಿ ಘಮವಿರುತ್ತದೆ..! ಸೊಗಸೂ ಕಾಣುತ್ತದೆ..!!

    • nagarekha Gaonkar

      ಧನ್ಯವಾದ ವಸುಂಧರಾ.ನಿಮ್ಮ ಅಭಿಮಾನಕ್ಕೆ

  2. Ramya Srihari

    ಚೆನ್ನಾಗಿದೆ

    • nagarekha Gaonkar

      ಧನ್ಯವಾದ

  3. Alagundi Andanayya

    ಖುಷಿಗೊಂಡೆ. ಹದಗೊಂಡ ಭಾವಾಭಿವ್ಯಕ್ತಿ.ದೃಢವಾದ ಹೆಜ್ಜೆ ಗುರುತು. ಅಭಿಮಾನ ಮೂಡುತ್ತದೆ. ಅಭಿನಂದನೆಗಳು, ಶರಣು ಶರಣಾರ್ಥಿಗಳು ತಮಗೆ.

    • nagarekha Gaonkar

      ಶರಣೆಂದೆ ಸರ್. ಖುಷಿಯಾಯ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading