
ಸೋಮು ಕುದರಿಹಾಳ
*ಅಂಗನವಾಡಿ* ಅಂದರೆ ನಮ್ಮೂರಲ್ಲಿ *ಬಾಲವಾಡಿ* ಅಂತ ಕರೆಯುತ್ತಿದ್ರು, ನಾನು ಹೋಗುತ್ತಿದ್ದಾಗ *’ಉಪ್ಪಿಟ್ಟಿನ್ ಸಾಲಿ’* ಅಂತಿದ್ವಿ.
ನಮ್ಮೂರಿನ ಮಧ್ಯಭಾಗದಲ್ಲಿದ್ದ ಹನುಮಂತಪ್ಪನ ಗುಡಿಯೇ ಶಾಲೆ. ದೇವರು ಇದ್ದ ಹತ್ರಾನೆ ಶಾಲೆ ಮಾಡಬೇಕು ಅಂತ ಅದಾವ ಹಿರಿಕನ ತಲೆಯಲ್ಲಿ ಮೂಡಿತ್ತೊ ಅವರಿಗೊಂದು ನನ್ನ ಸಲಾಮ್ ಸಲ್ಲುತ್ತದೆ. ಇವತ್ತು ಶಾಲೆಗಳು ದೇವಾಲಯ, ಮಕ್ಕಳು ದೇವ್ರು, ಮೇಷ್ಟ್ರು ಟೀಚರ್ರು ಅರ್ಚಕರು ಎಂಬ ಕಾಲದಲ್ಲಿರುವಾಗ ನಾನು ಕಲಿತದ್ದೊಂದಿಷ್ಟು ಭಿನ್ನ ಅನುಭವ.
*ಉಪ್ಪಿಟ್ಟಿನ್ ಸಾಲಿ* ಎಂಬ ಬಾಲವಾಡಿಯಲ್ಲಿದ್ದಾಗ ನಮ್ಮನ್ನು ಕರೆದೊಯ್ಯಲು ಬರುತ್ತಿದ್ದ *ತಳವಾರ ನಾಗಮ್ಮ ಎಂಬ ಅಜ್ಜಿಯ* ಕಡೆ ಮನಸ್ಸು ಎಳೆದೂ ಎಳೆದೂ ಕರೆದೊಯ್ದು ನಿಲ್ಲಿಸುತ್ತಿದೆ.

ಊರಿನ ಪ್ರವೇಶಕ್ಕೆ ಮನೆಯಿದ್ದ ನಾಗಮ್ಮ ಕರೆದುಕೊಂಡು ಹೋಗಲು ಬಂದಳೆಂದರೆ ದೂರದಿಂದಲೇ ಗೊತ್ತಾಗುತ್ತಿತ್ತು. “ನಿಮ್ಮ ಹುಡರ್ರನ್ ಸಾಲಿಗೆ ಕಳಿಸ್ರೆವ್ವೋ” ಎಂದು ಕೂಗುತ್ತಿದ್ದಳು. ನಮ್ಮನ್ನು ಮನೆಯ ಅಂಗಳಕ್ಕೆ ತಂದು ನಿಲ್ಲಿಸುತ್ತಿದ್ದರು. ಅಲ್ಲಿಂದ ನಾವು ನಾಗಮ್ಮನ ಕೈವಶ.
ಅವಾಗೆಲ್ಲ ಸಾಲಿ ಅಂದರೆ ಭಯದ ಚಿತ್ರಣವನ್ನು ಕಟ್ಟಿಕೊಡಲಾಗುತ್ತಿತ್ತು. ಒಂದೊಂದು ಸಲ ‘ನಾಗಮ್ಮ ಬಂದ್ಲು ಓಡ್ರಲೇ’ ಎಂದು ಕಟ್ಟೆಯ ಮೇಲೆ ಕುಳಿತಿದ್ದ *ಸೀನಿಯರ್ ಮೋಸ್ಟ್ ಉಪ್ಪಿಟ್ ಈಟರ್ಸ್* ಹೆದರಿಸುತ್ತಿದ್ದರು. ಆದರೆ ಹೆದರಿ ಓಡುತ್ತಿದ್ದ ಗೆಳೆಯರ ನಡುವೆ ಹೆದರದೇ ನಿಲ್ಲತ್ತಿದ್ದುದು ನಾನೊಬ್ಬನೆ. ಬಂದ ತಕ್ಷಣ ನಾಗಮ್ಮನ ಬೆರಳು ಹಿಡಿದು ನಡೆಯುತ್ತಿದ್ದೆ.
ನನಗೂ ಭಯವಿತ್ತು. ಅದನ್ನು ದೂರವಾಗಿಸುವ ಕಂಫರ್ಟ್ ಫೀಲ್ ಕೊಟ್ಟವರೇ ನಾಗಮ್ಮ. ತನ್ನ ಮಕ್ಕಳನ್ನು ನಡೆಸಿಕೊಂಡು ನಮ್ಮನ್ನು ಕಂಕುಳಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಆ ತಾಯಿಗೆ ನಾನು ಕೃತಜ್ಞನಾಗಿರಬೇಕು.
ನಮ್ಮ *ಉಪ್ಪಿಟ್ಟಿನ್ ಸಾಲಿ* ಅಂದರೆ ಹನುಮಪ್ಪನ ಗುಡಿ ಅಂತ ಹೇಳ್ದೆ ತಾನೆ. ಆ ಗುಡಿಯಲ್ಲಿ ನಾಲ್ಕು ಕಂಬಗಳಿದ್ದವು. ಆ ಕಂಬಕ್ಕೆ ಒರಗಿ ಕುಳಿತುಕೊಳ್ಳುವ ಜಗಳಗಳು *ಸಿಯೆಮ್ಮು ಕುರ್ಚಿ ರೇಸ್* ನಂತಿರುತಿತ್ತು. ಜೊತೆ ಜೊತೆಗೆ ಆ ಕಂಬವೇ ನಮ್ಮನ್ನು ಕಟ್ಟಿ ಹಾಕುವ ಕಟ್ಟುಗಂಬವೂ ಆಗಿರುತ್ತಿತ್ತು.
*ತಳವಾರ ನಾಗಮ್ಮ*ನೇ ಎಲ್ಲಾ ವ್ಯಾಜ್ಯಗಳನ್ನು ನಿಯಂತ್ರಿಸುವ ಪೋಲಿಸ್ ಮತ್ತು ಬಗೆಹರಿಸುವ ಲಾಯರ್ ಕಮ್ ಜಡ್ಜ್. ಹೆಚ್ಚಿಗೆ ಹಾರಾಡಿದರೆ ಸ್ಪಾಟ್ ಶಿಕ್ಷೆ ಕೊಡುವ ಜೈಲರ್ ಕೂಡ ಹೌದು.
ಮೂರು ವರ್ಷದಿಂದ ಹಿಡಿದು ದೊಡ್ಡ ಸಾಲಿಗೆ ಹೋಗುವವರವರೆಗೂ ಎಲ್ಲರಿಗೂ ಮೊದಲ ಪಾಠ ತಳವಾರ ನಾಗಮ್ಮನಿಂದಲೇ ಆಗುತ್ತಿತ್ತು. ಗೊಣ್ಣೆ ತೆರೆಯುವುದು, ಅರ್ಧ ಗಂಟೆಗೊಮ್ಮೆ ಚಡ್ಡಿ ನೆನೆಸಿಕೊಳ್ಳುತ್ತಿದ್ದ *ನೀರಾವರಿ ಸಚಿವರ* ಬಟ್ಟೆ ಬದಲಾಯಿಸುವುದಕ್ಕೆ ನಾಗಮ್ಮ ಎಂದೆಂದಿಗೂ ಬೇಸರಪಟ್ಪುಕೊಂಡಿರಲಿಲ್ಲ
ಹಾಗಾದರೆ ಟೀಚರ್ ಇರಲಿಲ್ವಾ? ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಿದೆ. ನಮ್ಮೂರಿನಿಂದ ಮೂರು ಕ. ಮೀ ನಡೆದು ಬರುತ್ತಿದ್ದ ಅವರು ತಡವಾಗಿ ಬರುತ್ತಿದ್ದರು. ಹೋಗುತ್ತಿದ್ದುದೂ ಬೇಗ. ಹಾಗಾಗಿ ನಾಗಮ್ಮನೇ ಟೀಚರ್ರು ನಾಗಮ್ಮನೇ ಎಲ್ಲ.
ಅವರಿಗೆ ಸಂಬಳವಾದರೂ ಎಲ್ಲಿತ್ತು? ಮಕ್ಕಳುಂಡು ಉಳಿದ ಸ್ವಲ್ಪ ಉಪ್ಪಿಟ್ಟು ಮತ್ತು ರೈತರು ಕೊಡುತ್ತಿದ್ದ ಅಕ್ಕಿ ಜೋಳ ದವಸ ಧಾನ್ಯ ಎಂಬುದೇ ಜೀವನಾಧಾರ. ಅದರಲ್ಲಿ ತೃಪ್ತ ಬದುಕು ಸಾಗುತ್ತಿತ್ತು. ಮರುದಿನ ಬೆಳಗ್ಗೆ ಮತ್ತೆ “ನಿಮ್ಮ ಹುಡರ್ರನ್ ಸಾಲಿಗೆ ಕಳುಸ್ರೆವೋ” ಎಂಬ ಅಹ್ವಾನ.
ಆದರೆ ಇವತ್ತು ಬದುಕು ದುಸ್ತರದ ಹಳಿಯೇರಿದೆ. ಬೆಲೆ ಏರಿಕೆ ಮತ್ತು ಬರಗಾಲದ ಬರೆಯ ನಡುವೆ ಬದುಕಲಾರದ ಬದುಕಿನ ಚಿತ್ರಣ ಸಹಜವಾಗಿ ಹೋರಾಟಕ್ಕೆ ಅಣಿಗೊಳಿಸಿದೆ.
ಇವತ್ತೇನಾದರೂ ಆ ತಾಯಿ ನಾಗಮ್ಮ ಇದ್ದಿದ್ದರೆ ಇಷ್ಟೊತ್ತಿಗೆ ಫ್ರೀಡಂ ಪಾರ್ಕ್ ನ ಮೈದಾನದಲ್ಲಿರುತ್ತಿದ್ದಳೇನೊ?
ಯಾಕೆಂದರೆ ಉಪ್ಪಿಟ್ಟಿನ್ ಸಾಲಿಗೀಗ ಕೆಲಸಗಳೊತ್ತಡವಿದೆ.






ಅಂಗನವಾಡಿಯಲ್ಲಿ ನನ್ನ ಅನೇಕ ಬಾಲ್ಯಸ್ನೇಹಿತೆಯರು ಕೆಲಸ ಮಾಡುತ್ತಿದ್ದಾರೆ.
ನಾನು ಕಾಲೇಜಿಗೆ ಹೋಗಿಬರುವ ದಾರಿಯಲ್ಲಿಯೇ ಗೆಳತಿ ವಿಶಾಲಾಕ್ಷಿ ಟೀಚರಮ್ಮನಾಗಿರುವ ಅಂಗನವಾಡಿಯಿದೆ.
” ಬಾರೇ, ಬಾರೇ, ಹೋಗುವಂತಿ ಬಾರೇ..” ಎಂಬುದು ಅವಳ ಅನುದಿನದ ವರಾತ.. ಒಳಗೆ ಹೋದರೆ…
ನಾನು ಮೌನವಾಗಿ ಕುಳಿತುಕೊಳ್ಳುತ್ತಿದ್ದುದೇ ಹೆಚ್ಚು.. ಮಾತುಗಳು ಕೇಳಿದರೆ ತಾನೇ..? ಅಷ್ಟೊಂದು ಮಕ್ಕಳ ಚಿಲಿಪಿಲಿ..
ಅಲ್ಲಿದ್ದ ಟೇಬಲಿನ ಮೇಲೆ ದಾಸವಾಳ, ಕಣಗಿಲ, ಮಲ್ಲಿಗೆ, ಕನಕಾಂಬರ ಹೂಗಳು ಒಂದಿಷ್ಟಾದರೂ ಇರುತ್ತಿದ್ದವು.
“ನಂ ಹುಡುಗರು ತರ್ತಾರ..” ಅವಳ ಹೆಮ್ಮೆಯ ನುಡಿಗಳು.. ಅದು ನನಗೂ ಗೊತ್ತು…
ಆದರೂ ಅವಳ ಸಂಭ್ರಮ ನೋಡುವುದೆ ಚಂದ..”ಹೌದೇನೇ..” ಎಂದು ಅವಳ ಖುಷಿ ಹೆಚ್ಚಿಸುತ್ತೇನೆ.
ಅವಳ ಜೊತೆ ಒಬ್ಬಳು ಅಡುಗೆಯವಳು, ಅವಳಿಗೆ ಸಹಾಯಕಿ ಹೀಗೆ..
ಅವಳ ಅಂಗನವಾಡಿ ಪರಿವಾರ ತಮಗಿರುವುದು ಮೂವತ್ತು ಮಕ್ಕಳು ಎಂಬಂತೆ ಅವರ ಲಾಲನೆ ಪಾಲನೆಯಲ್ಲಿ ತೊಡಗಿರುತ್ತಾರೆ..
ಅದರ ಜೊತೆಗೆ ಮಕ್ಕಳನ್ನು ಕರೆತರಲು, ಬಿಟ್ಟುಹೋಗಲು ಬರುವ ಪಾಲಕರೊಡನೆ ನಗುನಗುತ್ತಾ ಮಾತು..
“ಮನೇಲಿ ಹೊಡಿಬ್ಯಾಡ್ರಿ ಮಕ್ಕಳನ್ನ..ಹಠ ಮಾಡಿದ್ರ ನಮಗೆ ಫೋನ್ ಮಾಡ್ರಿ, ನಾವು ಬಂದು ಕರ್ಕೊಂಬರ್ತೀವಿ..” ಎಂಬ ತಾಕೀತಿನಂಥಾ ಅಹವಾಲು..
ನಾನೂ ಆ ಮಕ್ಕಳನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದೆ..
ಒಂದೆರಡು ನಿಮಿಷ ನನ್ನ ಮಡಿಲಲ್ಲಿ, ತೋಳಿನಲ್ಲಿ ಗ್ರಹಚಾರಕ್ಕೆಂಬಂತೆ ಸುಮ್ಮನಿರುತ್ತಿದ್ದ ಮಕ್ಕಳು ವಿಶಾಲಳೆಡೆಗೆ, ಅಡುಗೆಯ ಲಕ್ಷ್ಮಮ್ಮನೆಡೆಗೆ ಕೈಚಾಚಿ ಕೋಡಿಬೀಳುತ್ತವೆ… ನನ್ನನ್ನು ಪೆಚ್ಚುಮಾಡುತ್ತವೆ..ಅವರೂ ಮಕ್ಕಳು ಕೈಚಾಚುತ್ತಲೇ ಎತ್ಡ ಕಂಕುಳಲ್ಲೆತ್ತಿಕೊಂಡು ಸಮಾಧಾನಿಸುವವರೇ..
ಹೀಗೆ ಹೃದಯಕ್ಕೊತ್ತಿಕೊಂಡು ಮಾಡುವ ಕೆಲಸವನ್ನು ನೌಕರಿಯೆಂದು ಕರೆಯಬಹುದೇ..?
ಕರೆದರೂ “ನಿಮಗಿಷ್ಟೇ ಕಣ್ರೀ ಸಂಬಳ..ಹೋಗ್ರೀ.. ಕೆಲಸಾ ನೋಡ್ರೀ..” ಎನ್ನಬಹುದೇ..?
ಎಲ್ಲರಿಂದ “ಅಮ್ಮಾ” ಎನಿಸಿಕೊಳುವವರು ಆಳುವವರ ಎದುರು ನಾಲ್ಕು ಕಾಸಿಗಾಗಿ ಕೈ ಚಾಚಿ, ಅತ್ತು ಕೇಳಬೇಕೇ…?
ಸತ್ಯಾಗ್ರಹಿ, ಚಳುವಳಿಗಾರ ಮಹಾತ್ಮಾ ಗಾಂಧಿ ಬಂದುಹೋದ ನಾಡಿನ ಈ ಸರ್ಕಾರ ನಮ್ಮನ್ನು (ಪಿಯು ಉಪನ್ಯಾಸಕರನ್ನು) ಚಳುವಳಿ ಮಾಡಿದ್ರೆ ಜೈಲಿಗೆ ಹಾಕುವ ಕಾನೂನನ್ನು ಮಾಡಿದೆ..ಸಧ್ಯ, ಅಂಗನವಾಡಿ ಗೆಳತಿಯರಿಗೂ ಹಾಗೆನ್ನಲಿಲ್ಲ..ಅಷ್ಟಾದರೂ ವಿವೇಕ ಪ್ರಭುತ್ವಕ್ಕಿದೆಯಲ್ಲ..
ಅಥವಾ ಸರ್ಕಾರವನ್ನು ಬಗ್ಗಿಸಿದರು ಇವರು ಎಂಬುದೇ ಸಮಂಜಸ ಎನಿಸುತ್ತದೆ..
ಸುದ್ದಿ ನೋಡಿದ ತಕ್ಷಣ ಫೋನಾಯಿಸಿದೆ ವಿಶಾಲಾಕ್ಷಿಗೆ…
ರಾಜಧಾನಿಯ ಟ್ರಾಫಿಕ್ ಶಬ್ದದ ಜೊತೆಗೆ ಅಷ್ಟೂಜನ ಹೆಣ್ಣುಮಕ್ಕಳ ಗದ್ಲೋಗದ್ಲ ಕೇಳಿಸಿತು..
ಆನಂದ…
ನ್ಯಾಯಯುತವಾಗಿ ಸಲ್ಲಬೇಕಾದ್ದನ್ನೂ ಹೋರಾಡಿ ಪಡೆಯುವುದೂ ದುಸ್ತರವಾಗಿರುವ ಸಂದರ್ಭದಲ್ಲಿ ರವಷ್ಟಾದರು ಗೆಲುವು ಕಂಡಿತಲ್ಲ..
ಅಭಿನಂದನೆ ಗೆಳತಿಯರಿಗೆಲ್ಲಾ..
ತುಂಬಾ ಆಪ್ತವಾದ ಮತ್ತ ವಾಸ್ತವದ ಬರಹ ಹಿಡಿಸಿತು ಗೆಳೆಯ