ನಸುಗತ್ತಲ ಸಂಭಾಷಣೆ

ಆರ್. ಪಿ. ರಘೋತ್ತಮ  

“ನಿಹಾರ್! ನಾಳೆ ನಿನ್ನ ಹುಟ್ಟಿದ ದಿನ ಡಾರ್ಲಿಂಗ್! ನಮ್ಮ ಮದುವೆಯ ನಂತರ ಬರ್ತಿರೋ ನಿನ್ನ ಮೊದಲ ಬರ್ತಡೇ ಇದು. ವಿಶೇಷವಾಗಿ ಆಚರಿಸೋಣ. ನಿನಗೊಂದು ಸರ್ಪ್ರೈಸ್ ಇದೆ ಕಣೇ. ನಾಳೆ ಮಧ್ಯಾಹ್ನ ಆಚೆ ಊಟಕ್ಕೆ ಹೋಗೋಣ. 12.30ಕ್ಕೆ ಸಿದ್ಧವಾಗಿರು” ಅಂದ ಪುರಂದರ. ಬೆಳಗ್ಗೆಯಿಂದ ಸಂಜೆಯವರೆಗೂ ಕಚೇರಿಯಲ್ಲಿ ಕೆಲಸ ಮಾಡಿ, ಸುಸ್ತಾಗಿ ಬಂದರೂ ಪುರಂದರ ಅತ್ಯಂತ ಲವಲವಿಕೆಯಿಂದ ನಿಹಾರಿಕಾಳಿಗೆ ಹೇಳಿದ.

ಪುರಂದರ ಇರುವುದೇ ಹಾಗೆ. ಪಾದರಸದಂತೆ, ಎಂದಿಗೂ ಬತ್ತದ ಉತ್ಸಾಹ. ಪುರಂದರ ನಿಹಾರಿಕಾಳನ್ನು ಕೈಹಿಡಿದದ್ದೇ ಒಂದು ಸೋಜಿಗ. ನಿಹಾರಿಕಾ ಬಡವರ ಮನೆಯ ಹುಡುಗಿ. ಮನೆಯಲ್ಲಿ ವಾದ ಮಾಡಿ, ತಾನು ಮದುವೆಯಾಗುವ ಹುಡುಗನನ್ನು ತಾನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಅಪ್ಪ-ಅಮ್ಮನನ್ನು ಒಪ್ಪಿಸಿದ್ದಳು.

ಪದವಿ ಪರೀಕ್ಷೆ ಮುಗಿದು ಫಲಿತಾಂಶ ಬರುತ್ತಲೇ ಕಾಲೇಜು ದಿನಗಳಿಂದಲೂ ಪ್ರೀತಿಸಿದ ಪುರಂದರನನ್ನು ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಳು. ಮದುವೆ ಸರಳವಾಗಿರಬೇಕು, ನಂತರದ ಬದುಕು ವೈಭವೋಪೇತವಾಗಿರಬೇಕು ಎಂಬುದು ಪುರಂದರನ ಆಶಯ. ಬಯಸಿ ಬಯಸಿ ಮದುವೆಯಾಗಿದ್ದು ಸಾರ್ಥಕ ಎನ್ನುವಂತೆ ಪುರಂದರ ನಿಹಾರಿಕಾಳನ್ನು ಖುಷಿಯಾಗಿರುವಂತೆ ನೋಡಿಕೊಂಡಿದ್ದ.

ಇಂತಹ ಪುರಂದರ ಯಾವಾಗಲೂ ನಿಹಾರಿಕಾಳಿಗೆ ಸರ್ಪ್ರೈಸ್ ಕೊಡುತ್ತಲೇ ಇರುತ್ತಿದ್ದ. ಹೀಗಿರುವಾಗ ಮದುವೆಯ ನಂತರ ನಿಹಾರಿಕಾಳ ಮೊದಲ ವರ್ಷದ ಮೊದಲ ಹುಟ್ಟುಹಬ್ಬದ ದಿನ ಬಂತು. ಅಂದು ಆಚೆ ಊಟಕ್ಕೆ ಹೋಗೋಣ ಎಂದು ಹೊರಗೆ ಕರೆದೊಯ್ದು, ಹದಿನೈದು ಕಿಲೋಮೀಟರ್ ಡ್ರೈವ್ ನ ನಂತರ ಅವರು ಒಂದು ದೊಡ್ಡ ಮಾಲ್ ನ ಮೂರನೇ ಮಹಡಿಯ ಒಂದು ಹೋಟೆಲ್ ಗೆ ಬಂದಿದ್ದರು. ಇವರು ತಲುಪುತ್ತಿದ್ದಂತೆ ಕೌಂಟರಿನಲ್ಲಿದ್ದ ಮ್ಯಾನೇಜರ್ ಬಂದು ಹುಟ್ಟುಹಬ್ಬದ ಶುಭಾಶಯಗಳು ಮೇಡಂ ನಿಮ್ಮ ಹುಟ್ಟುಹಬ್ಬ ಸದಾಕಾಲ ನೆನಪು ಉಳಿಯುವಂತಾಗಲಿ ಎಂದು ಆಶಿಸಿದರು.

ಆದರೆ ನಿಹಾರಿಕಾಳ ಮನಸ್ಸಿನಲ್ಲಿ ಏನೋ ಗೊಂದಲ. ಹೋಟೆಲ್ನಲ್ಲಿ ಒಂದೇ ಒಂದು ನರಪಿಳ್ಳೆ ಕಾಣಿಸುತ್ತಿಲ್ಲ ಆದರೂ ಪತಿದೇವ ಜೊತೆಗಿರುವಾಗ ನನಗೇಕೆ ಭಯ ಎಂದುಕೊಂಡು ಸುಮ್ಮನಾದಳು. ಮ್ಯಾನೇಜರ್ ಅವರಿಬ್ಬರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಅವರನ್ನು ಒಳಗೆ ಕರೆದುಕೊಂಡು ಹೋದ ಆದರೆ ಏನಿದೆ ಒಳಗೆ? ಹೆಜ್ಜೆ ಮುಂದಿಟ್ಟಂತೆಲ್ಲ ಕತ್ತಲು ಹೆಚ್ಚಾಗುತ್ತಿದೆ. ಇನ್ನೂ ಸ್ವಲ್ಪ ಮುಂದೆ ಹೋದಾಗ ನಿಹಾರಿಕಾಳಿಗೆ ಪುರಂದರನ ಕೈಹಿಡಿದುಕೊಂಡು ಹೋಗದೆ ಬೇರೆ ದಾರಿಯಿರಲಿಲ್ಲ. ಕತ್ತಲು ಮೈಗೆ ಬಂದು ಮೆತ್ತಿಕೊಳ್ಳುತ್ತಿದೆಯೇನೋ ಎಂಬಷ್ಟಿದೆ. ಪಕ್ಕದಲ್ಲಿ ಯಾರಿದ್ದಾರೆ ಯಾರಿಲ್ಲ ಎಂದು ಕೂಡ ಕಾಣಿಸುತ್ತಿಲ್ಲ ನಿಹಾರಿಕಾಳಿಗೆ.

ಇದ್ದಕ್ಕಿದ್ದಂತೆ ಮ್ಯಾನೇಜರ್ ಹತ್ತಿರ ಬಂದು, ಇನ್ನುಮುಂದೆ ನಿಮ್ಮ ಜವಾಬ್ದಾರಿ ನಮ್ಮ ಅಭಿ ನೋಡಿಕೊಳ್ಳುತ್ತಾನೆ ಎಂದು ಹೇಳಿ ಹೊರಟು ಹೋಗುತ್ತಾನೆ. ಅಭಿ ಮೊದಲಿಗೆ ದಂಪತಿಗಳನ್ನು ಅಭಿನಂದಿಸಿ ಬೆಚ್ಚಗಿನ ಸ್ವಾಗತ ನೀಡಿದ. “ಇಲ್ಲಿಂದ ಮುಂದೆ ಪೂರ್ತಿ ಕಗ್ಗತ್ತಲೆಯೇ ಸರ್. ಬೆಳಕಿನ ಯಾವುದೇ ಮೂಲ ಇಲ್ಲಿಲ್ಲ. ಹೀಗೆ ಬನ್ನಿ ನನ್ನ ಕೈ ಹಿಡಿದುಕೊಳ್ಳಿ. ದಯವಿಟ್ಟು ನನ್ನನ್ನು ನಂಬಿ ಕತ್ತಲಲ್ಲಿ ನಿಮಗೆ ಯಾವ ಅಪಾಯವೂ ಆಗದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದು. ನಿಮ್ಮ ಟೇಬಲ್ ಬಳಿ ಕರೆದುಕೊಂಡು ಹೋಗುತ್ತೇನೆ” ಎಂದ ಅಭಿ.

ಅವನ ಮಾತು ಕೇಳದೆ ದಂಪತಿಗಳಿಗೆ ಬೇರೆ ದಾರಿಯೇ ಇರಲಿಲ್ಲ ಅಭಿಯ ಕೈಹಿಡಿದು ಪಕ್ಕದಲ್ಲಿದ್ದ ಗೋಡೆಯನ್ನು ಅವನ ಆಣತಿಯಂತೆ ಏನೇನೂ ಅಪಾಯವಿಲ್ಲದೆ ಟೇಬಲ್ ಬಳಿ ಹೋಗಿ ಕುಳಿತರು. ಮುಂದಿನ ಐದು ನಿಮಿಷದಲ್ಲಿ ಅಭಿ ಮೊದಲೇ ಆರ್ಡರ್ ಮಾಡಿದ್ದ ಊಟವನ್ನು ತಂದಿರಿಸಿ, ಸಾವಕಾಶವಾಗಿ ಸೇವಿಸಿ ಸರ್ ಎಂದು ಕಣ್ಮರೆಯಾದ. ನಿಹಾರಿಕಾಳಿಗೆ ಏನೇನೂ ಅರ್ಥವಾಗುತ್ತಿಲ್ಲ. ಏನನ್ನು ಸೇವಿಸುವುದು? ಕತ್ತಲನ್ನೇ? ತನ್ನನ್ನು ತಾನೇ ಕೇಳಿಕೊಂಡಳು.

ಮುಂದಿನ 45 ನಿಮಿಷಗಳಲ್ಲಿ ಪುರು ಮತ್ತು ನಿಹಾರ್ ತಟ್ಟೆ, ಚಮಚ, ಲೋಟ ಬಟ್ಟಲುಗಳ ಜೊತೆಗೆ ಗುದ್ದಾಡಿಕೊಂಡು, ಒದ್ದಾಡುತ್ತಾ, ಗೊಣಗಿಕೊಂಡು ಊಟ ಮಾಡಿ ಮುಗಿಸಿದರು. ಅನ್ನ ಯಾವುದು ಸಾರು ಯಾವುದು, ಚಪಾತಿ ಯಾವುದು, ನೀರಿನ ಲೋಟ ಎಲ್ಲಿದೆ ಎಂದು ಒಂದೊಂದನ್ನು ಸ್ಪರ್ಶಿಸಿ, ಖಾತ್ರಿ ಪಡಿಸಿಕೊಂಡು ತಿಂದು ಮುಗಿಸಿದರು. ಮೊದಲಿಗೆ ತೀರಾ ಕಷ್ಟ ಅನ್ನಿಸಿದರೂ ಊಟ ಮುಗಿಯುವ ವೇಳೆಗೆ ಹೇಳಲಾಗದ ಒಂದು ಆರ್ದ್ರ ಭಾವ ಅವರಿಬ್ಬರನ್ನೂ ಆವರಿಸಿತ್ತು.

ಪುರಂದರ ಊಟ ಮುಗಿದ ನಂತರ ಅಭಿಯನ್ನು ಕರೆದ. ಕರೆದಾಕ್ಷಣ ಶಿಸ್ತಾಗಿ ಬಂದ ಅಭಿ ಅವರಿಬ್ಬರನ್ನೂ ಕೈಹಿಡಿದು ಯಾವ ಜಾಗದಿಂದ ಕರೆದುಕೊಂಡು ಬಂದಿದ್ದನೋ ಅಲ್ಲಿಗೆ ಕರೆದೊಯ್ದ. ಆ ಜಾಗದಲ್ಲಿ ಕೊಂಚ ಬೆಳಕಿದ್ದಿದ್ದರಿಂದ ಅಭಿಯ ಬೆನ್ನು ಇವರಿಬ್ಬರಿಗೆ ಕಾಣಿಸುತ್ತಿತ್ತು. ಆಗ ತಿರುಗಿದ ಅಭಿ ದಂಪತಿಗಳೆಡೆ. ಆ ಕ್ಷಣಕ್ಕೆ ನಿಹಾರಿಕಾಳಿಗಾದ ಆಶ್ಚರ್ಯಕ್ಕೆ ತಲೆತಿರುಗಿ ಬೀಳುವುದೊಂದು ಬಾಕಿ ಇತ್ತು. ಅಭಿ ಎರಡೂ ಕಣ್ಣು ಕಾಣದ ಕುರುಡನಾಗಿದ್ದ. ಪುರು ಮತ್ತು ನಿಹಾರಿಕಾಳಿಗಾಗಿರುವ ಶಾಕ್ ನ್ನು ತನ್ನ ಒಳಗಣ್ಣುಗಳಿಂದ ಊಹಿಸಿ ಮುಗುಳ್ನಕ್ಕ ಅಭಿ “ನೀವು ಇಷ್ಟೊತ್ತು ಇದ್ದದ್ದು ನನ್ನ ಜಗತ್ತಿನಲ್ಲಿ ಸರ್. ನನ್ನ ವೈಕಲ್ಯದ ಪರಿಚಯದೊಡನೆ ನನ್ನ ಸಾಮರ್ಥ್ಯ ಕೂಡ ನಿಮಗೆ ಪರಿಚಯವಾಗಿರಬಹುದು ಈಗ” ಅಂದ ಅಭಿ.

ಪುರು ಮತ್ತು ನಿಹಾರ್ ಅಕ್ಷರಶಃ ಮೂಕವಿಸ್ಮಿತರಾಗಿದ್ದರು. “ನಾವು ಕತ್ತಲಲ್ಲಿದ್ದದ್ದು ಸುಮಾರು 60 ನಿಮಿಷಗಳು. ಪ್ರತಿಕ್ಷಣವೂ ಬೆಳಕಿಗಾಗಿ ಚಡಪಡಿಸಿಬಿಟ್ಟೆವು. ಆದರೆ ತನ್ನ ಇಡೀ ಜೀವಮಾನ ಅದೇ ಕತ್ತಲಲ್ಲಿ ಕಳೆಯಬೇಕಾದ ಅಭಿ ಮತ್ತು ಅಂತಹವರ ಪಾಡೇನು?” ಎಂದು ಯೋಚನೆಗೆ ಬಿದ್ದರು. ಆದರೆ ಅಭಿಯಲ್ಲಿರುವ ಉತ್ಸಾಹ, ಧನಾತ್ಮಕತೆ, ಜೀವನಪ್ರೀತಿ ನಿಜಕ್ಕೂ ಅಗಾಧ ಎನಿಸಿತ್ತು. ಕತ್ತಲಲ್ಲಿ ಕಳೆದ ಅರವತ್ತು ನಿಮಿಷದ ಪ್ರತಿಕ್ಷಣವೂ ಅಭಿಯ ಜಗತ್ತಿನ ಭಾವನೆಗಳು, ನೋವು, ಅವನ ಧೈರ್ಯ ಪುರು ಮತ್ತು ನಿಹಾರ್ ಕೂಡ ಅನುಭವಿಸಿದರು. ಅಭಿಗೆ ದೃಷ್ಟಿ ಇಲ್ಲದಿರಬಹುದು, ಆದರೆ ನಮ್ಮೆಲ್ಲರಿಗಿಂತ ಅದ್ಭುತವಾದ ದೃಷ್ಟಿಕೋನವಿದೆ ಎಂದು ಹೋಟೆಲ್ನಿಂದ ವಾಪಸ್ ಬರುವಾಗ ಮಾತಾಡಿಕೊಂಡು ಭಾರದ ಹೃದಯದೊಂದಿಗೆ ಮನೆ ತಲುಪಿದರು. ಹೀಗೆ ಮುಗಿದಿತ್ತು ಒಂದು ಹುಟ್ಟಿದಹಬ್ಬ.

‍ಲೇಖಕರು nalike

May 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: