ಕನ್ನಡ ಸಾಹಿತ್ಯ : ಪಂಡಿತ ಮಂಡಳಿಯ ಸ್ವದೇಶಿ ನಿರ್ಲಕ್ಷ್ಯ
-ಡಾ.ಪ್ರಕಾಶ ಗ.ಖಾಡೆ
ನವೋದಯ ಆರಂಭದ ಕನ್ನಡ ಕಾವ್ಯದ ಕೃಷಿಕಾರರು ಕನ್ನಡ ಜನಪದವನ್ನು ಮೈಗೂಡಿಸಿಕೊಂಡ ಲಾವಣಿಕಾರರು, ತತ್ತ್ವಪದಕಾರರು ಮತ್ತು ಈ ಬಗೆಯ ರಚನಾಕಾರರು. ಇವರಿಗೆ ನೇಗಿಲು ಹೂಡಿ ಹೊಸ ಬೆಳೆ ತೆಗೆಯಲು ಭೂಮಿ ಹದ ಮಾಡಿಕೊಟ್ಟವರು ವಚನಕಾರರು ಮತ್ತು ದಾಸ ಪರಂಪರೆಯವರು. ಆದರೆ ಈ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿ ನಿಂತು ಕನ್ನಡ ಕಾವ್ಯವನ್ನೇ ಬೆಳಗಬೇಕಾಗಿದ್ದ ಈ ದೇಸೀ ನೆಲಗಟ್ಟಿನ ಹಾಡುಗಾರರು ಮರೆಯಲ್ಲಿ ನಿಂತು ಗುರುತಿಸಿಕೊಳ್ಳದೇ ಹೋಗಿದ್ದು ದಟ್ಟವಾದ ವಸಾಹತುಶಾಹಿ ಪ್ರಜ್ವಲತೆ ಹಾಗೂ ಪಂಡಿತ ಮಂಡಳಿಯ ಸ್ವದೇಶಿ ನಿರ್ಲಕ್ಷ್ಯತೆ ಕಾರಣವಾಗಿರುವ ಸಾಧ್ಯತೆ ಇದೆ.
ಆಧುನಿಕ ಪೂರ್ವ ಸಾಹಿತ್ಯದ ಅಧ್ಯಯನ ಸಂಸ್ಕೃತದ ಹಂಗಿನಲ್ಲಿ ನಡೆದರೆ, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅದು ಐರೋಪ್ಯ ಮಾದರಿಯಲ್ಲಿ ನಡೆಯಿತು. ಹೀಗೆ ಕನ್ನಡ ಭಾಷೆ ಮತ್ತು ಸಮಾಜ ಮೊದಲಿನಿಂದಲೂ ರಾಜಪ್ರಭುತ್ವ, ಪಾಳೆಗಾರಿಕೆ, ಪುರೋಹಿತಶಾಹಿ, ವಸಾಹತುಶಾಹಿ ಪ್ರಭಾವಗಳಿಗೆ ಒಳಗಾಗುತ್ತ ವಿರೋದಿಸುತ್ತ ಬೆಳೆದು ಬಂದಿದೆಯಾದರೂ ನಮ್ಮದಲ್ಲದ ಭಾಷೆ, ಸಂಸ್ಕೃತಿ, ಓದು, ಬರಹ, ಅಧ್ಯಯನದ ವ್ಯಾಮೋಹದಿಂದ ನಾವು ಮುಕ್ತರಾಗಿಲ್ಲ್ಲ’ ಎಂಬ ಡಾ.ವೀರೇಶ ಬಡಿಗೇರ ಅವರ ಮಾತುಗಳು ಆಧುನಿಕ ಅಧ್ಯಯನ ಮಾದರಿಗಳು ಹುಟ್ಟು ಹಾಕಿದ ಕುರುಡು ಧೋರಣೆಗಳನ್ನು ಪುನರ್ ಅವಲೋಕಿಸುವ ಜರೂರತೆಯನ್ನು ಸಾರುತ್ತದೆ. ಪುನರುಜ್ಜೀವನದ ಮಾತು ಭಾರತೀಯ ಮನಸ್ಸುಗಳಲ್ಲಿ ಆ ಮೂಲಕ ಕನ್ನಡ ಚಿಂತನೆಗಳಲ್ಲಿ ಪ್ರಧಾನವಾಗಿದ್ದ ಕಾಲದಲ್ಲಿ, ಇಂಗ್ಲಿಷ್ ಶಿಕ್ಷಣ ಕ್ರಮದ ಕಾರಣವಾಗಿ ಮೈಸೂರು, ಮಂಗಳೂರು ಕೇಂದ್ರಗಳಲ್ಲಿ ಸುಧಾರಣಾವಾದಿ ನೆಲೆಯಲ್ಲಿ ಅಲ್ಲಿನ ಕವಿಗಳು ಭಾರತೀಯ ಕಾವ್ಯ ವೀಮಾಂಸೆಯ ಪರಿಕಲ್ಪನೆಯನ್ನಾಧರಿಸಿದ ಶಿಷ್ಟಕ್ಕೆ ಪ್ರಭಾವಿತರಾದರೆ, ಆ ಕಾಲಕ್ಕೆ ಅನುವಾದಗೊಂಡು ಬಂದ ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ತತ್ತ್ವಗಳು ಸೆಳೆದುಕೊಂಡವು.
ಆದರೆ ಉತ್ತರ ಕರ್ನಾಟಕದ ವಿಜಾಪುರದ ಹಲಸಂಗಿ ಮತ್ತು ಧಾರವಾಡ ಕೇಂದ್ರಗಳಲ್ಲಿ ಈ ಸುಧಾರಣಾವಾದಿತನ, ಆದರ್ಶ, ವಸಾಹತುಶಾಹಿ ಶಿಕ್ಷಣ ಕ್ರಮಗಿಂತ ಈ ನೆಲದಲ್ಲಿ ಹಿಂದಿನಿಂದಲೂ ಮೌಖಿಕವಾಗಿ ಬಂದ ಕಾವ್ಯ ಸಂದರ್ಭಗಳು ಹುಟ್ಟು ಹಾಕಿದ ದೇಸೀ ಕಾವ್ಯ ತತ್ತ್ವಗಳು ಅವರನ್ನು ತೀವ್ರವಾಗಿ ಆಕರ್ಷಿಸಿದವು. ಹೀಗಾಗಿ ಹಲಸಂಗಿ ಮತ್ತು ಧಾರವಾಡ ಕೇಂದ್ರದ ನವೋದಯ ಕಾವ್ಯ ಜಾನಪದವನ್ನು ಪ್ರಭಾವಿಸಿಕೊಂಡು ರಚನೆಯಾದದ್ದು ಒಂದು ಚಾರಿತ್ರಿಕ ಸಂಗತಿಯಾಗಿದೆ.
ಮೈಸೂರು, ಮಂಗಳೂರು ಕೇಂದ್ರಗಳಲ್ಲಿ ಕನ್ನಡ ನವೋದಯ ಯುಗದ ಕವಿಗಳು ಸಂಕ್ರಮಣ ಕಾಲದಲ್ಲಿದ್ದುದರಿಂದ ಅವರಿಗೆ ತಮ್ಮ ಸಾಹಿತ್ಯದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಬೇಕೆಂಬ ವಿಚಾರಕ್ಕೆ ಇಂಗ್ಲಿಷಿನ ರೊಮ್ಯಾಂಟಿಕ್ ಸಾಹಿತ್ಯ ಪ್ರೇರಣೆ ನೀಡಬೇಕಾಯಿತು. ನವೋದಯದ ಮುಂಬೆಳಗಿನ ಕವಿಗಳಿಗೆ ತಮ್ಮ ಸಾಹಿತ್ಯ ಪರಂಪರೆಯಲ್ಲಿ ಬಿಟ್ಟು ದಿಡಿರನೆ ಹೊಸತನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಸಂದರ್ಭವೊಂದು ಉಂಟಾಗಿದ್ದುದರಿಂದ ಇವರು ಆರಂಭದ ಹಂತದಲ್ಲಿ ನಾಟಕ, ಕಾದಂಬರಿ, ಕತೆ, ಕವಿತೆಗಳ ಅನುವಾದ, ಅವತರಣಿಕೆಗಳಿಗೆ ತೊಡಗಿದುದನ್ನು ಗಮನಿಸಬಹುದು. ಆದ್ದರಿಂದಲೇ ನವೋದಯದ ಆರಂಭದ ಕವಿಗಳು ಸ್ವತಂತ್ರ ರಚನೆಗಳಿಗಿಂತ ಅನುವಾದ, ರೂಪಾಂತರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಇವರನ್ನು ಬಹುವಾಗಿ ಆಕರ್ಷಿಸಿದ್ದು ಇಂಗ್ಲಿಷ್ ಭಾಷೆಯ ಭಾವಗೀತೆಯ ಶ್ರೀಮಂತ ಪ್ರಪಂಚ. ಅದು ಮನುಷ್ಯನ ಅತಿ ಸೂಕ್ಷ್ಮ ಭಾವನೆಗಳ, ಕನಸುಗಳ, ನೋವು ನಲಿವುಗಳನ್ನು ಜೀವಂತವಾಗಿ ಅಬಿವ್ಯಕ್ತಿಸುವ ಮಾಂತ್ರಿಕತೆಯನ್ನು ಹೊಂದಿದೆ ಎಂಬ ಅಂಶವನ್ನು ಇವರು ಗಮನಿಸಿದರು. ಹಾಗಾಗಿ ತಮ್ಮ ಸಾಹಿತ್ಯದ ಅಬಿವ್ಯಕ್ತಿ ಮಾಧ್ಯಮವಾಗಿ ‘ಭಾವಗೀತೆ’ಯನ್ನು ಒಪ್ಪಿಕೊಂಡರು. ಅಲ್ಲಿಯ ವೈವಿಧ್ಯಮಯ ಕಾವ್ಯ ಪ್ರಕಾರಗಳಾದ ಸಾನೆಟ್, ಓಡ್, ಎಲಿಜಿಗಳನ್ನು ‘ಭಾವಗೀತೆ’ಯ ವಿವಿಧ ಕಾವ್ಯ ಪ್ರಕಾರಗಳಾಗಿ ಸ್ವೀಕರಿಸಿದರು. ಇದೆಲ್ಲದರ ಜೊತೆಗೆ ಈ ಹೊಸ ಸಂದರ್ಭ, ಹೊಸ ರೀತಿಯ ಅಬಿವ್ಯಕ್ತಿಗೆ ಹೊಸದೆನಿಸುವ ಅದಕ್ಕೆ ಹೊಂದಾಣಿಕೆಯಾಗುವ ‘ಭಾಷೆ’ಯನ್ನು ಇವರು ಸ್ಪಷ್ಟ ಮಾಡಿಕೊಂಡರು. ಆದರೆ ಅನುವಾದ, ರೂಪಾಂತರಗಳಿಗೆ ಹೆಚ್ಚು ತೊಡಗಿಕೊಳ್ಳದೆ ಸ್ವತಂತ್ರ ಅಬಿವ್ಯಕ್ತಿಯಲ್ಲಿ ಹೊಸಕಾವ್ಯ ಕಟ್ಟತೊಡಗಿದ ಹಲಸಂಗಿ, ಧಾರವಾಡ ಕೇಂದ್ರದ ಕವಿಗಳು ಇಲ್ಲಿ ಹೆಡೆಮುರಿದು ಬಿದ್ದ ಜಾನಪದ ‘ಭಾಷೆ’ಯನ್ನು ಮತ್ತಷ್ಟು ಸತ್ವ ಕಸುವು ತುಂಬಿ ದುಡಿಸಿಕೊಂಡು ‘ಕನ್ನಡ ಸ್ವತಂತ್ರ ನವೋದಯ ಕಾವ್ಯ’ದ ಹರಿಕಾರರೆನಿಸಿದರು.
ಕನ್ನಡ ಸಂದರ್ಭದಲ್ಲಿಯೇ ನವೋದಯ ಕಾವ್ಯಕ್ಕೆ ಒಂದೆಡೆ ಪಶ್ಚಿಮದಿಂದ ಬಂದ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯದ ಪ್ರಭಾವ ದಟ್ಟವಾದರೆ, ಮತ್ತೊಂದೆಡೆ ಈ ನೆಲದ ಒಡಲಿನಿಂದ ಸೆಲೆವೊಡೆದು ಬಂದ ಜಾನಪದ ಮೂಲದ ತಾಜಾತನ ಪ್ರಭಾವಿತವಾಯಿತು. ರೊಮ್ಯಾಂಟಿಕ್ ಕಾವ್ಯ ಹೊಸನ್ನಡ ಕಾವ್ಯವನ್ನು ಮುಖ್ಯವಾಗಿ ಐದು ರೀತಿಯಲ್ಲಿ ಪ್ರಭಾವಕ್ಕೆ ಒಳಗು ಮಾಡಿಕೊಂಡಿತು. ಧೋರಣೆಗಳ ಪ್ರಭಾವ, ಕಾವ್ಯರೂಪದ ಪ್ರಭಾವ, ತಾತ್ವಿಕತೆಯ ಪ್ರಭಾವ, ಭಾವನೆಗಳ ಪ್ರಭಾವ ಹಾಗೂ ವಿಚಾರಗಳ ಪ್ರಭಾವ.
ಆಧುನಿಕ ಸಾಹಿತ್ಯದ ಮೊದಲ ಘಟ್ಟದಲ್ಲಿ ಈ ಬಗೆಯ ‘ರೊಮ್ಯಾಂಟಿಸಿಸಂ’ನ ಪ್ರಭಾವ ಕೊಟ್ಟ ಸ್ವತಂತ್ರವಲ್ಲದ, ಅನ್ಯ ಮಾದರಿಯ ಅನುವಾದಗಳನ್ನು ನವೋದಯದ ಪ್ರಾರಂಭದ ಕವಿತೆಗಳಾಗಿ ಈವರೆಗೆ ಒಪ್ಪಿಕೊಂಡು, ಒಪ್ಪಿಸಿಕೊಂಡು ಬಂದಿರುವುದು ‘ಕನ್ನಡತನದ’ ಸಂದರ್ಭದಲ್ಲಿ ಅಥವಾ ಸ್ವಂತಿಕೆಯ ವಿಶಾಲಾರ್ಥದಲ್ಲಿ ಮುಖ್ಯ ಚರ್ಚೆಯಾಗಬೇಕಿದೆ. ನನ್ನ ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಅಧ್ಯಯನವು ಸ್ವಂತಿಕೆಯ ಶ್ರೇಷ್ಟತೆಯನ್ನು ಸಾರುವ ಮೂಲಕ ಅನ್ಯದೇಶೀ ಪ್ರಭಾವ, ಪ್ರೇರಣೆ ಅವಲಂಬಿತ ರಚನೆಗಳನ್ನು ನವೋದಯ ಕಾವ್ಯದ ‘ಮೊದಲಿಗ’ ‘ಮೊದಲಾದುದು’ ಎಂಬುದನ್ನು ಬದಿಯಲ್ಲಿಟ್ಟು ಸ್ಥಳೀಯತೆಗೆ ಆ ಮೂಲಕ ಜಾನಪದದ ಹಲವು ಹತ್ತು ರೂಪಗಳ ದೇಸೀಯತೆಗೆ ಒತ್ತು ಕೊಡಲಾಗಿದೆ. ಜನಪದ ಭಾಷೆ, ಆಡುಮಾತಿನ ಲಯ, ಜನನುಡಿಯ ಸೊಗಡು, ಜನಪದ ಕಥನ ಕ್ರಮ ಏನೆಲ್ಲವನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಂಡ ನವೋದಯ ಕವಿಗಳು ಕನ್ನಡದ ಜಾನಪದಕ್ಕೆ ಋಣಿಯಾಗಬೇಕಿದೆ.








ಕನ್ನಡ ನವೋದಯ ಕಾವ್ಯದ ಅಧ್ಯಯನವು ಈವರೆಗೆ ಮೈಸೂರು ಕೇಂದ್ರಿತವಾಗಿದ್ದನ್ನು ಹೊಡೆದು ಹಾಕಿ ಮೊದಲ ಬಾರಿಗೆ ಉತ್ತರ ಕರ್ನಾಟಕದಿಂದ ಹೊಸ ಅಧ್ಯಯನವನ್ನು ಕಟ್ಟಿ ಕೊಡುವ ಮೂಲಕ ಡಾ.ಪ್ರಕಾಶ ಖಾಡೆ ಅವರು ಜಾನಪದ ಮತ್ತು ದೇಸಿ ಚಿಂತನೆಗೆ ಪ್ರಧಾನ ವೇದಿಕೆ ಒದಗಿಸಿದ್ದಾರೆ,ಈ ಕುರಿತು ವ್ಯಾಪಕ ಚೆರ್ಚೆಯಾಬೇಕಿದೆ.
-ವಿಕ್ರಮ ಬಸನಗೌಡರ.
ನವೋದಯ ಸಂದರ್ಬದಲ್ಲಿ ಆರಂಭದಲ್ಲಿ ಜ್ಞಾನಪೀಠವೆತ್ತ ಕವಿಗಳು ಮನೆ ಮುಂದೆ ಬಂದ ಕೊರವಂಜಿ,ಬುಡಬುಡಿಕ್ಯಾ,ಜೋಗಮ್ಮ,ಹೆಳವರು…… ಮುಂತಾದವರನ್ನ ನಿಲ್ಲಿಸಿ ,ಬಾರಿಬಾರಿ ಹಾಡಿಸಿ,ಆಸ್ವಾದಿಸುತ್ತಿದ್ದುದನ್ನ ……..ಮತ್ತು …….. (ಸಂಶೋಧಿಸಬೇಕಿದೆ)ಇಲ್ಲಿ ಪ್ರಸ್ತಾಪಿಸುವುದು ಪ್ರಸ್ತುತ.
Aadhunika Kannada Kaavyada Abhyaasa purna lekhana.Dr.Prakash Khade avrige Abhinandanegalu.-Raju Yadava.