ಹೆಸರಿನ ಟೈಟಲ್!
ಕೋಲ್ಕತ್ತಾಗೆ ಬಂದ ಹೊಸದು. ಯಾರಾದರು ಸಿಕ್ಕಿ ಮಾತನಾಡಿಸುವಾಗ ಮಾತಿನ ಮಧ್ಯೆ ನಿಮ್ಮ ಹೆಸರೇನು ಅಂತ ಕೇಳ್ತಾ ಇದ್ದರು. ನನ್ನ ಹೆಸರು ನಟರಾಜ್ ಎಂದರೆ ಟೈಟಲ್ ಏನು ಅಂತ ಮತ್ತೊಂದು ಪ್ರಶ್ನೆ ಕೇಳ್ತಾ ಇದ್ದರು. ಮೊದ ಮೊದಲಿಗೆ ಟೈಟಲ್ ಎಂದರೆ ಏನು ಅಂತ ಅಷ್ಟು ಅರ್ಥವಾಗದಿದ್ದರೂ ನಂತರ ಟೈಟಲ್ ಎಂದರೆ ಇಂಗ್ಲೀಷ್ ನಲ್ಲಿ ಸರ್ ನೇಮ್ ಅಂತಾರೆ ಅಂತ ಗೊತ್ತಾಯ್ತು. ಉದಾಹರಣೆಗೆ ರಾಣಿ ಮುಖರ್ಜಿ ಎಂಬ ಹೆಸರಿನಲ್ಲಿ ರಾಣಿ ಎಂಬುದು ಹೆಸರಾದರೆ ಮುಖರ್ಜಿ ಅನ್ನೋದು ಟೈಟಲ್ ಅಥವಾ ಸರ್ ನೇಮ್. ನಮ್ಮ ಕರ್ನಾಟಕದ ಹೆಸರಿನ ಉದಾಹರಣೆ ಹೇಳಬೇಕು ಎಂದರೆ ದೇವೇಗೌಡ, ಈ ಹೆಸರಿನಲ್ಲಿ ಗೌಡ ಎಂಬುದು ಟೈಟಲ್. ನಿಮ್ಮ ಟೈಟಲ್ ಏನು ಅಂತ ಕೇಳಿದವರಿಗೆ ಎಸ್ ಎಂ ಎನ್ನುತ್ತಿದ್ದೆ. “ಓ ಎಸ್ಮೆಂ ಅನ್ನೋದು ನಿಮ್ಮ ಟೈಟಲ್ಲಾ? ಇದು ಹೊಸ ಟೈಟಲ್. ಈ ಮೊದಲು ಈ ರೀತಿಯ ಟೈಟಲ್ ಅನ್ನು ನಾವು ಕೇಳೇ ಇಲ್ಲ” ಎನ್ನುತ್ತಿದ್ದರು. ನಾನು ನಗುತ್ತಾ ಪಿ ಟಿ ಉಷಾ ಗೊತ್ತಾ ಎನ್ನುತ್ತಿದ್ದೆ. ಹೌದು ಎಂಬ ಉತ್ತರ ಅವರಿಂದ ಬಂದರೆ, ನಮ್ಮ ಕಡೆಯ ಪಿ ಟಿ ಉಷಾ ಅವರ ಹೆಸರು ಉಷಾ. ಪಿ ಅನ್ನೋದು ಅವರ ಊರಿನ ಹೆಸರಿನ ಇನಿಸಿಯಲ್ ಟಿ ಅನ್ನೋದು ಅವರ ತಂದೆಯವರ ಹೆಸರಿನ ಇನಿಸಿಯಲ್ ಎಂದು ಹೇಳಿ, ನಮ್ಮ ಕಡೆ ಊರಿನ ಹೆಸರು ಮತ್ತು ತಂದೆಯ ಹೆಸರು ನಮ್ಮ ಹೆಸರಿನ ಜೊತೆ ಬರುತ್ತದೆ. ಆ ತರಹ ಹೆಸರಿನ ಜೊತೆ ಬರುವ ಊರಿನ ಮತ್ತು ತಂದೆಯ ಹೆಸರಿನ ಮೊದಲ ಅಕ್ಷರಗಳನ್ನು ಇನಿಸಿಯಲ್ಸ್ ಎನ್ನುತ್ತೇವೆ ಎಂದು ಹೇಳುತ್ತಿದ್ದೆ. ಜನ ತಮ್ಮ ಸ್ವಂತ ಊರು ಬಿಟ್ಟು ಬೇರೆ ಊರುಗಳಲ್ಲಿ ವಾಸಿಸುವಾಗ ಕೆಲವರ ಮಕ್ಕಳ ಹೆಸರಿನಲ್ಲಿ ಊರಿನ ಹೆಸರು ಇರುವುದಿಲ್ಲ ಬದಲಿಗೆ ತಂದೆಯ ಹೆಸರು ಮಾತ್ರ ಇರುತ್ತದೆ ಎಂದು ವಿವರಿಸಿ ಹೇಳುತ್ತಿದ್ದೆ.
ಇನಿಸಿಯಲ್ ಗಳು ಮತ್ತು ಹೆಸರುಗಳು ಒಂದೇ ಆದರೆ ಗೊಂದಲವಾಗುವುದಿಲ್ಲವಾ ಎಂಬ ಅವರ ಪ್ರಶ್ನೆಗೆ “ನೋಡಿ ನನ್ನ ಹೆಸರು ನಟರಾಜು ನಮ್ಮೂರು ಸೀಗೆಕೋಟೆ ನಮ್ಮ ಅಪ್ಪನ ಹೆಸರು ಮರಿಯಪ್ಪ. ನಮ್ಮೂರಿನಲ್ಲಿ ನಟರಾಜು ಎಸ್ ಎಂ ಅನ್ನೋನು ನಾನೊಬ್ಬನೇ ಎಂದು ಹೇಳಿದ್ದೇನಾದರು ಮತ್ತೊಬ್ಬ ನಟರಾಜಣ್ಣ ನಮ್ಮೂರಿನಲ್ಲಿ ಇರುವುದು ಆತನ ತಂದೆಯ ಹೆಸರು ಮರಿಯಪ್ಪ ಎಂದಿರುವುದು ನೆನಪಿಗೆ ಬಂದಿತ್ತು. ಅವನ ಇನಿಸಿಯಲ್ ಎಸ್ ಎಂ ಎಂದಾಗಿದ್ದರೂ ನಟರಾಜ ಅಂತ ಅವನನ್ನು ಕರೆಯುವುದರಿಂದ ಅವನ ಹೆಸರು ಎಸ್ ಎಂ ನಟರಾಜು ಎಂದಿರಲು ಸಾಧ್ಯವೇ ಇಲ್ಲ ಬದಲಿಗೆ ಎಸ್ ಎಂ ನಟರಾಜ ಎಂದಾಗಿರುತ್ತದೆ ಎಂದು ನನಗೆ ನಾನೇ ಹೇಳಿಕೊಂಡಿದ್ದೆ. ಆದರೆ ನನ್ನ ತಂಗಿಯ ಹೆಸರು ಎಸ್ ಎಂ ಗೀತಾ ಆಗಿದ್ದು ನಮ್ಮೂರಿನಲ್ಲೇ ನನ್ನ ಗೆಳೆಯನ ತಂಗಿಯೊಬ್ಬಳ ಹೆಸರೂ ಕೂಡ ಎಸ್ ಎಂ ಗೀತಾ ಆಗಿದ್ದು ಅವಳ ತಂದೆಯ ಹೆಸರೂ ಕೂಡ ಮರಿಯಪ್ಪ ಎಂದಿರುವುದು ಯಾಕೋ ನೆನಪಿಗೆ ಬಂದಿತ್ತು. ನಂತರ ನಮ್ಮಪ್ಪನ್ನು ನಮ್ಮೂರಿನ ಜನ ಬೆಂಗಳೂರು ಮರಿಯಪ್ಪ ಅಂತಲೂ ನಟರಾಜಣ್ಣ ಎನ್ನುವವನ ತಂದೆಯನ್ನು ಹುಲ್ಲಹಳ್ಳಿ ಮರಿಯಪ್ಪ ಅಂತಲೂ, ನನ್ನ ಗೆಳೆಯನ ತಂದೆಯನ್ನು ಮೇಸ್ಟ್ರು ಮರಿಯಪ್ಪ ಎಂದು ಕರೆಯುವುದು ನೆನಪಿಗೆ ಬಂದಿತ್ತು.
ಒಂದೇ ಹೆಸರಿರುವವರನ್ನು ವಿಭಿನ್ನವಾದ ವಿಶಿಷ್ಟವಾದ ಹೆಸರುಗಳಿಂದ, ಅಥವಾ ಚಂದದ ಅಡ್ಡ ಹೆಸರುಗಳಿಂದ ಗುರುತಿಸುವುದು ನಮ್ಮಲ್ಲಿ ವಾಡಿಕೆಯಲ್ಲವೇ.. ಉದಾಹರಣೆಗೆ ನಮ್ಮ ತರಗತಿಯಲ್ಲಿದ್ದ ಮೂವರು ಮಂಜುನಾಥರಲ್ಲಿ ಒಬ್ಬ ಗೆಳೆಯನನ್ನು ರೆಡ್ಡಿ ಎಂತಲೂ, ಮತ್ತೊಬ್ಬ ಗೆಳೆಯನ ಊರು ಕ್ಯಾತನಹಳ್ಳಿ ಆಗಿದ್ದುದರಿಂದ ಆತನನ್ನು ಕ್ಯಾತ ಅಂತಲೂ ಇನ್ನೊಬ್ಬ ಗೆಳೆಯನನ್ನು ಪ್ರೀತಿಯಿಂದ ಅಳಿಯ ಅಂತಲೂ ಕರೆಯುತ್ತಿದ್ದರು. ನಮ್ಮ ಕಾಲೇಜಿನ ರೋಲ್ ನಂಬರ್ ಗಳು ಕೊಡದ ವಿಶೇಷವಾದ ಐಡೆಂಟಿಟಿಗಳನ್ನು ಈ ತರಹದ ವಿಶೇಷವಾದ ಹೆಸರುಗಳು ಕೊಟ್ಟಿದ್ದವು. ಇವತ್ತಿಗೂ ಎಷ್ಟೋ ಜನ ಗೆಳೆಯರ ನಿಜವಾದ ಹೆಸರುಗಳಿಗಿಂತ ಅವರ ಅಡ್ಡ ಹೆಸರುಗಳು ಬೇಗ ಜ್ಞಾಪಕಕ್ಕೆ ಬರುತ್ತವೆ. ಒಮ್ಮೊಮ್ಮೆ ಅವರ ಅಡ್ಡ ಹೆಸರುಗಳಷ್ಟೇ ನೆನಪಿದ್ದು ನಿಜವಾದ ಹೆಸರುಗಳೇ ಮರೆತು ಹೋಗಿರುತ್ತವೆ. ಅಂತಹ ಅಡ್ಡ ಹೆಸರಿಗೆ ಉದಾಹರಣೆ ಈ ಕೆಳಗಿನ ಕತೆ.
ನಮ್ಮೂರಿನಲ್ಲಿ ಕತ್ತೆಗಳ ಸಂಖ್ಯೆ ಒಂದು ಕಾಲಕ್ಕೆ ತುಂಬಾನೆ ಕಮ್ಮಿ ಇದ್ದವು. ಬಹುಶಃ ಈಗ ಕತ್ತೆಗಳು ಇಲ್ಲವೇ ಇಲ್ಲ ಎನ್ನಬಹುದು. ಕತ್ತೆ ಕೂಗಿದಾಗ ತಲೆ ಮೇಲೆ ಕೈ ಇಟ್ಟುಕೊಂಡರೆ ಕಾಸು ಸಿಗುತ್ತದೆ ಎಂದು ನಾವು ಸಿಕ್ಕಾಪಟ್ಟೆ ನಂಬಿತ್ತಿದ್ದ ವಯಸ್ಸದು. ಕತ್ತೆ ಊರಿನ ಯಾವುದೇ ಬೀದಿಯಲ್ಲಿ ಕೂಗಿದರು ಮೌನವಾಗಿರುವ ಊರಿನಲ್ಲಿ ಅದರ ಸದ್ದು ವಿಶಿಷ್ಟವಾಗಿ ಕೇಳಿಸುತ್ತಿತ್ತು. ಕತ್ತೆಯ ಕೂಗು ಕೇಳಿಸುತ್ತಿದ್ದಂತೆ ನಾವು ತಕ್ಷಣ ನಮ್ಮ ಬಲಗೈಯನ್ನು ತಲೆಯ ಮೇಲಿಟ್ಟುಕೊಳ್ಳುತ್ತಿದ್ದೆವು. ಕತ್ತೆ ಕೂಗು ಮುಗಿಯುವವರೆಗೂ ಹಲ್ ಬಿಟ್ಟುಕೊಂಡು ಶಿಲೆಯಂತೆ ನಿಂತ ನಮ್ಮ ತಲೆಯ ಮೇಲೆ ಕೈ ಇರುತ್ತಿತ್ತು. ಆಕಸ್ಮಾತ್ ಕತ್ತೆ ಒಂಚೂರಷ್ಟೇ ಕೂಗಲು ಶುರು ಮಾಡಿ ನಾವು ತಲೆ ಮೇಲೆ ಕೈ ಇಟ್ಟುಕೊಳ್ಳುವಷ್ಟರಲ್ಲಿ ತನ್ನ ಸದ್ದು ನಿಲ್ಲಿಸಿಬಿಡುತ್ತಿತ್ತು. ಆಗ ಅಯ್ಯಯ್ಯೋ ದುಡ್ಡು ಸಿಗೋ ಚಾನ್ಸ್ ಮಿಸ್ ಆಯ್ತು ಎಂದುಕೊಳ್ಳುತ್ತಿದ್ದೆವು. ಕಾಕತಳೀಯವೆಂದರೆ ಹಾಗೆ ಕತ್ತೆ ಕೂಗಿ ತಲೆಯ ಮೇಲೆ ಕೈ ಇಟ್ಟುಕೊಂಡ ದಿನ ರೋಡಿನಲ್ಲಿ ನಾಲ್ಕಾಣೆಯೋ, ಎಂಟಾಣೆಯೋ, ಎರಡು ರೂಪಾಯಿಯ ಕೆಂಪು ಕೆಂಪಾದ ಹೊಸ ನೋಟೋ, ಇಲ್ಲ ಹತ್ತು ಪೈಸೆಯೋ ಇಲ್ಲ ಇಪ್ಪತ್ತು ಪೈಸೆಯೋ ಏನೋ ಒಂದು ಸಿಕ್ಕಿಬಿಡುತ್ತಿತ್ತು. ಅದನ್ನು ಎತ್ತಿಕೊಂಡು ಕಾಸಿಗೆ ಅಂಟಿರುವ ಧೂಳನ್ನು ಚೆಡ್ಡಿಗೆ ಒರೆಸಿ ಸಣ್ಮಾಡಿಕೊಂಡು (ದೇವರಿಗೆ, ಹಿರಿಯರಿಗೆ ಕಾಲು ಮುಟ್ಟಿ ನಮಸ್ಕರಿಸುವುದನ್ನು, ಯಾರಾದರು ಆಕಸ್ಮಾತ್ ಕಾಲು ತುಳಿದರೆ ಅವರನ್ನು ಮುಟ್ಟಿ ನಮಸ್ಕರಿಸುವುದನ್ನು ನಮ್ಮ ಕಡೆ ಸಣ್ಮಾಡಿಕೊಳ್ಳೋದು ಅಂತಾರೆ:) ) ಚೆಡ್ಡಿ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು. (ಇವತ್ತಿನ ದಿನ ರೋಡಲ್ಲಿ ಒಂದು ರೂಪಾಯಿ ಬಿದ್ದಿದ್ದರು ಅದನ್ನು ಮುಟ್ಟಲು ಜನ ಹಿಂದೆ ಮುಂದೆ ನೋಡ್ತಾರೆ.)
ಹಾಗೆಯೇ ನಮ್ಮೂರುಗಳಲ್ಲಿ ಮೂರು ಹಾದಿ ಕೂಡೋ ದಾರೀಲಿ ಅಥವಾ ಕೆರೆ ಬಯಲಿನಲ್ಲಿ ಅಥವಾ ಸ್ಮಶಾನದ ಹತ್ತಿರ ಅಮಾವಾಸ್ಯೆ ರಾತ್ರಿಯಲ್ಲಿ ಜೇಡಿಮಣ್ಣಿನಿಂದ ಗೊಂಬೆ ಮಾಡಿ ಅದರ ಕಣ್ಣುಗಳಿಗೆ ಬಹುಶಃ ಕೋಳಿ ಮೊಟ್ಟೆ ಇಟ್ಟು ನೋಡಿದರೆ ಭಯ ಮೂಡುವಂತಹ ಆಕೃತಿಯ ಮಾಡಿ ಕೆಲವರು ಮಾಟ ಮಂತ್ರ ಮಾಡಿಸುತ್ತಿದ್ದರು. ಅದರ ಸುತ್ತ ನಾಲ್ಕು ದಿಕ್ಕಿಗೂ ನಾಲ್ಕು ಗೂಟ ಹೊಡೆದು ಬಣ್ಣ ಬಣ್ಣದ ನೂಲುಗಳಿಂದ ಸುತ್ತಿರುತ್ತಿದ್ದ ಆ ಗೂಟಗಳ ಹತ್ತಿರ ಕಾಣಿಕೆಯ ಕಾಸು ಸಹ ಬಿದ್ದಿರುತ್ತಿದ್ದವು. ಅಂತಹ ಕಾಸುಗಳನ್ನು ಸಹ ಏನಾಗುತ್ತೆ ನೋಡೇ ಬಿಡೋಣ ಅಂತ ಎತ್ತಿ ಜೇಬಿಗೆ ಹಾಕಿಕೊಂಡ ಗೆಳೆಯರೂ ಸಹ ನಮ್ಮ ಊರಿನಲ್ಲಿದ್ದರು. ಅಂತಹ ಭಂಡ ಧೈರ್ಯದ ಹುಡುಗರಲ್ಲಿ ಅವನೂ ಸಹ ಒಬ್ಬ ಎನ್ನಬಹುದು. ಕೆಲವು ಹುಡುಗರ ಜೊತೆ ಸೇರಿ ಮೈಥುನ ಮಾಡುತ್ತಿರುವ ಶ್ವಾನಗಳ ಜನನಾಂಗಕ್ಕೆ ದೊಡ್ಡ ದೊಣ್ಣೆಗಳಿಂದ ಹೊಡೆಯೋದು, ಬೀದಿಯಲ್ಲಿ ಆಟಾಮ್ ಬಾಂಬನು ಹತ್ತಿಸಿ ಅದರ ಮೇಲೆ ಹಳೆ ಮಡಿಕೆಯನ್ನೋ, ಅಥವಾ ತಗಡಿನ ಡಬ್ಬವನ್ನು ಮುಚ್ಚಿ ಬಿಡೋದು, ಹೀಗೆ ವಿನಾಶಕಾರಿ ಎನ್ನುವಂತಹ ಕೆಲಸಗಳನ್ನು ಮಾಡಿ ಅವನು ದೊಡ್ಡವರಿಂದ ಬಯ್ಯಿಸಿಕೊಳ್ಳುತ್ತಿದ್ದ. ಒಮ್ಮೆ ಹೀಗೆ ಆತ ತನ್ನ ಸಾಹಸಗಳನ್ನು ಪ್ರದರ್ಶಿಸುವುದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಒಮ್ಮೆ ಕತ್ತೆಯೊಂದರ ಬಾಲಕ್ಕೆ ಡಬ್ಬ ಕಟ್ಟುವ ಸಾಹಸ ಮಾಡಿದ್ದ. ಕತ್ತೆಯ ಬಾಲಕ್ಕೆ ಡಬ್ಬ ಕಟ್ಟಲು ಹೋದವನಿಗೆ ಕತ್ತೆ ತನ್ನ ಹಿಂದಿನ ಎರಡೂ ಕಾಲನ್ನು ಎತ್ತಿ ಒದ್ದುಬಿಟ್ಟಿತ್ತು. ಪಾಪ ಆತನಿಗೆ ಹಣೆಗೆ ಜೋರಾಗಿ ಪೆಟ್ಟು ಬಿದ್ದು ಅವನ ಹಣೆಯನ್ನು ರಕ್ತ ಸೋರುತ್ತಿತ್ತು. ಆತುರಾತುರವಾಗಿ ಅವನ ಹಣೆಗೆ ಬಟ್ಟೆ ಕಟ್ಟಿ ಅವನ ತಂದೆ ಬೋರಯ್ಯ ಅವನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ದೇವರ ದಯೆಯಿಂದ ಅವನು ಬದುಕಿದನಾದರೂ ಅವನ ಹೆಸರು ಮುಂದೆ ಕತ್ತೆ ಬೋರ ಎಂದಾಗಿಬಿಟ್ಟಿತು, ಅವನ ಆ ಹೆಸರನ್ನು ಕರೆದರೆ ಅವನು ಸಿಕ್ಕಾಪಟ್ಟೆ ಕೋಪಗೊಳ್ಳುತ್ತಿದ್ದ.ಟೈಟಲ್ ಇಲ್ಲದಿದ್ದರೆ ವ್ಯಕ್ತಿಗಳನ್ನು ಗುರುತಿಸುವುದು ಹೇಗೆ ಎಂಬ ಬೆಂಗಾಳಿಗಳ ಪ್ರಶ್ನೆಯೊಂದನ್ನು ನೆನೆದಾಗ ಹೆಸರುಗಳ ಕುರಿತ ಎಷ್ಟೊಂದು ಪುಟ್ಟ ಪುಟ್ಟ ಕತೆಗಳು ಹೀಗೆ ಒಂದೊಂದಾಗಿ ಜ್ಞಾಪಕಕ್ಕೆ ಬರುತ್ತವೆ. ಟೈಟಲ್ ಗಳು ನಮಗೊಂದು ಐಡೆಂಟಿಟಿ ತಂದುಕೊಟ್ಟರೂ ನಮ್ಮ ಊರು ನಮಗೊಂದು ವಿಶೇಷವಾದ ಐಡೆಂಟಿಟಿ ತಂದುಕೊಡುತ್ತದೆ ಎಂದು ಗೆಳೆಯನೊಬ್ಬ ಮೊನ್ನೆ ಹೇಳುತ್ತಿದ್ದ. ಆತ ತನ್ನ ಕವಿತೆಯೊಂದನು ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದಾಗ ಮೊದಲ ಬಾರಿಗೆ ಆತನ ಊರಿನ ಹೆಸರು ಅವನ ಹೆಸರಿನ ಕೆಳಗೆ ಪ್ರಿಂಟಾಗಿರುವುದ ನೋಡಿ ಖುಷಿಯಾಗಿತ್ತು. ಅವನು ಹೇಳಿದಂತೆ ಕುವೆಂಪುರವರು ಮೈಸೂರಿನಲ್ಲಿದ್ದರೂ ಕುವೆಂಪು ಎಂದರೆ ಕುಪ್ಪಳ್ಳಿ ನೆನಪಾಗುತ್ತೆ ಮೈಸೂರಲ್ಲ ಎಂದಿದ್ದ. ಆತನ ಮಾತಿಗೆ ನಾನು ಹೌದು ಎಂದಿದ್ದೆ. ಮಾಸ್ತಿ ಎಂದರೆ ವೆಂಕಟೇಶ್ ಅಯ್ಯಂಗಾರ್, ಗೋರೂರು ಎಂದರೆ ರಾಮಸ್ವಾಮಿ ಅಯ್ಯಂಗಾರ್, ದೇವನೂರು ಎಂದರೆ ಮಹಾದೇವ, ಆಲನಹಳ್ಳಿ ಎಂದರೆ ಶ್ರೀಕೃಷ್ಣ, ಬೆಳಗೆರೆ ಎಂದರೆ ರವಿ, ಗುರುವಾಯನಕೆರೆ ಎಂದರೆ ಜೋಗಿ, ಜಾವಗಲ್ ಎಂದರೆ ಶ್ರೀನಾಥ್, ಕುಂಬ್ಲೆ ಎಂದರೆ ಅನಿಲ್.. ಹೀಗೆ ನೆನಪಾಗುವ ಅಸಂಖ್ಯಾತ ಕನ್ನಡದ ಸಾಧಕರಲ್ಲಿ ಅವರ ಟೈಟಲ್ ಗಳಿಗಿಂತ ಅವರ ಊರುಗಳ ಹೆಸರುಗಳು ಅವರ ಸಾಧನೆಗಳು ನಮ್ಮಲ್ಲಿ ಚಿರಸ್ಥಾಯಿಯಾಗಿ ಉಳಿದುಬಿಟ್ಟಿವೆ. ಉತ್ತರ ಭಾರತದಲ್ಲಿ ಮತ್ತು ನಮ್ಮಲ್ಲಿ ಹೆಚ್ಚು ಸಲ ಟೈಟಲ್ ಗಳೆಂದರೆ ಜಾತಿ ಸೂಚಕಗಳಿದ್ದ ಹಾಗೆ ಎಂದು ತಿಳಿದಾಗ ಅಚ್ಚರಿಯಾಗುತ್ತದೆ. ಆದರೂ ಜಾತಿ ಮತಗಳನ್ನು ಮೀರಿಸಿ ನಮ್ಮನ್ನು ಬೆಳೆಸುವ ಶಕ್ತಿ ನಮ್ಮೂರಿನ ಹೆಸರುಗಳಿಗಿದೆ ಎನ್ನುವುದು ನನ್ನ ಭಾವನೆ.
ಕೊನೆಯ ಪಂಚ್: ಐದಾರು ತಿಂಗಳುಗಳ ಹಿಂದೆ ಫೇಸ್ ಬುಕ್ ನ ನನ್ನ ಪ್ರೊಫೈಲ್ ಹೆಸರನ್ನು ನೋಡಿ.. “ಅಣ್ಣ ಸೀಗೆಕೋಟೆ ನಮ್ಮ ತಾಯಿಯವರ ಊರು” ಎಂದು ಗೆಳೆಯನೊಬ್ಬ ಬಳ್ಳಾರಿಯ ಕೂಡ್ಲಿಗಿಯಿಂದ ಮೆಸೇಜ್ ಕಳುಹಿಸಿದ್ದ. ಕನಕಪುರದ ಹತ್ತಿರದ ಪುಟ್ಟ ಊರಿಗೂ ಬಳ್ಳಾರಿಯ ಹತ್ತಿರದ ಕೂಡ್ಲಿಗಿಗೂ ಎತ್ತಣದೆತ್ತಣ ಸಂಬಂಧವಯ್ಯ ಎಂದುಕೊಳ್ಳುತ್ತಾ “ಬಹುಶಃ ನೀವು ಅಂದುಕೊಂಡ ಸೀಗೆಕೋಟೆ ನಮ್ಮ ಸೀಗೆಕೋಟೆ ಅಲ್ಲ” ಎಂದು ಮೆಸೇಜ್ ಮಾಡಿದ್ದೆ. “ಇಲ್ಲ ಅಣ್ಣ ಕನಕಪುರದ ಹತ್ತಿರದ ಸೀಗೆಕೋಟೇನೆ ನಮ್ಮ ತಾಯಿಯವರ ಊರು” ಎಂದಿದ್ದ ಫೇಸ್ ಬುಕ್ ಗೆಳೆಯ. ನಂತರದ ದಿನಗಳಲ್ಲಿ ಆತನೊಡನೆ ಮಾತನಾಡಿದಾಗ ನನ್ನ ಕ್ಲಾಸ್ ಮೇಟ್ ಅವನ ಪರಿಚಯದವನು ಅಂತ ಕೇಳಿ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಮತ್ತೊಬ್ಬ ಕಳೆದ ಒಂದೆರಡು ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾದ ಆಯುರ್ವೇದ ವೈದ್ಯರೊಬ್ಬರು ನಮ್ಮೂರಿನ ಹೆಸರನ್ನು ನನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ನೋಡಿ “ನಿಮಗೆ ಇವರು ಗೊತ್ತಾ” ಅಂತ ಒಬ್ಬರ ಹೆಸರನ್ನು ಮೆಸೇಜ್ ಮಾಡಿದ್ದರು. ಅಚಾನಕ್ಕಾಗಿ ಬಂದ ಪ್ರಶ್ನೆ ಒಂದು ಕ್ಷಣಕ್ಕೆ ಅರ್ಥವಾಗದಿದ್ದಾಗ, ಅದು ಅವರ ಮೊಮ್ಮಗನ ಹೆಸರೆಂದೂ ಅವರ ಮಗಳನ್ನು ನಮ್ಮೂರಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಅಳಿಯ, ಮಗಳು ಮತ್ತು ಮೊಮ್ಮಗ ತಮ್ಮ ಮನೆಯಲ್ಲೇ ತಮ್ಮ ಜೊತೆ ಇದ್ದಾರೆ ಎಂದು ಸಹ ತಿಳಿಸಿದ್ದರು. ಅವರೆಲ್ಲಾ ನಮ್ಮೂರಿನವರೇ ಎಂದು ತಿಳಿದ ಕ್ಷಣ ನಮ್ಮೂರಿನವರು ಅನ್ನೋ ಅಭಿಮಾನದ ಮೇಲೆ ಅವರ ಅಳಿಯನವರನ್ನು ಮಾತನಾಡಿಸುವ ಮನಸ್ಸಾಗಿತು. ಒಮ್ಮೆ ಅವರ ಅಳಿಯನವರಿಗೆ ಫೋನ್ ಮಾಡಿ “ಏನ್ ಅಣ್ಣಾ ಚೆನ್ನಾಗಿದ್ದೀರ” ಎನ್ನುತ್ತಲೇ.. “ಮಗಾ ಸೀಗೆಕೋಟೇಲಿ ಯಾರ ಮಗಾನಪ್ಪ.” ಎಂದು ನಮ್ಮೂರಿನ ಶೈಲಿಯಲ್ಲಿ ಕೇಳಿದ್ದರು. ನಾನು ಬೆಂಗಳೂರು ಮರಿಯಪ್ಪನ ಮಗ ಅಂದಿದ್ದೆ. “ಓ.. ಚಿಕ್ ಹೈದಪ್ಪನ ತಮ್ಮ ಬೆಂಗಳೂರಣ್ಣನ ಮಗಾನೆ. ಸಂತೋಷ ಕಣಪ್ಪ.” ಅಂತ ಖುಷಿಯಾಗಿ ಮಾತನಾಡಿದ್ದರು. ಯಾಕೋ ನಮ್ಮೂರು ಅನ್ನೋ ಭಾವ ನನ್ನಲ್ಲಿ ಸಿಕ್ಕಾಪಟ್ಟೆ ಖುಷಿ ತಂದಿತ್ತು..
ಈ ಬರಹ ಕೋಲ್ಕತ್ತಾದಿಂದ ಮದ್ರಾಸ್ ಗೆ ಪಯಣಿಸುವಾಗ ರೈಲಿನಲ್ಲಿ ಕುಳಿತು ಬರೆದಿದ್ದು.. 🙂
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.. ಎಂಜಾಯ್ ಮಾಡಿ.. 🙂






Nataraj raware nimma baravanige thumba chennagide heege saagali payana.naanu harohalliyalli primary school teacher agi kelsa madtidene.nanathu inmele nimma fan…sahityadalli nanage tumba asaktiyide…nimmma msrgadarshana sigabahudo? ! Nimma uttarada nireeksheyalli
ಉಮೇಶ್ ರವರೇ, ತಡವಾಗಿ ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ ಕ್ಷಮೆ ಇರಲಿ.. ನಿಮ್ಮ ನಲ್ಮೆಯ ನುಡಿಗಳಿಗೆ ನಮನಗಳು.. ನೀವು ನಮ್ಮ ಕನಕಪುರದ ಕಡೆಯವರು ಎಂದು ಕೇಳಿ ಖುಷಿಯಾಯಿತು.. ನಿಮಗೆ ಮಾರ್ಗದರ್ಶನ ನೀಡುವಷ್ಟು ದೊಡ್ಡವನಲ್ಲ.. ಫೇಸ್ ಬುಕ್ ನಲ್ಲಿ Nataraju Seegekote Mariyappa ಅನ್ನೋ ಹೆಸರಿಗೊಂದು ರಿಕ್ವೆಸ್ಟ್ ಕಳುಹಿಸಿ.. ಶುಭವಾಗಲಿ..