ಗಂಡು + ಗಂಡು
ತುಂಬಾ ವರ್ಷಗಳ ಹಿಂದಿನ ಕತೆ ಇದು. ಗೆಳೆಯನೊಬ್ಬ ಬೆಂಗಳೂರಿನ ಮೆಜೆಸ್ಟಿಕ್ ನಿಂದ ತನ್ನ ಹಾಸ್ಟೆಲ್ ಗೆ ಒಂದು ದಿನ ಬಿಟಿಎಸ್ (ಈಗಿನ ಬಿಎಂಟಿಸಿ) ಬಸ್ಸಿನಲ್ಲಿ ಪಯಣ ಬೆಳೆಸಿದ್ದನಂತೆ. ಆತನ ವಯಸ್ಸು ಆಗ ಸುಮಾರು 18 ವರ್ಷವಿರಬಹುದು. ಹಳ್ಳಿಯಲ್ಲಿ ಬೆಳೆದಿದ್ದರಿಂದ ಮೈ ಒರಟುತನದಿಂದ ಕೂಡಿದ್ದರೂ ಹಳ್ಳಿಯವನ ಮುಗ್ದತೆ ಅವನ ಮುಖದಲ್ಲಿ ಎದ್ದು ಕಾಣುವಂತಿತ್ತು. ಅವನು ಕುಳಿತ್ತಿದ್ದ ಸೀಟಿನಲ್ಲಿ ಅವನ ಪಕ್ಕದಲ್ಲಿ ಮಧ್ಯ ವಯಸ್ಸಿನ ಒಳ್ಳೆಯ ಬಟ್ಟೆ ಧರಿಸಿದ ಸಭ್ಯಸ್ಥನಂತೆ ಕಾಣುವ ವ್ಯಕ್ತಿಯೊಬ್ಬ ಕುಳಿತಿದ್ದನಂತೆ. ಸುಮ್ಮನೆ ಕುಳಿತ್ತಿದ್ದ ವ್ಯಕ್ತಿ ಆ ಗೆಳೆಯನ ಜೊತೆ ಮಾತು ಶುರು ಮಾಡಿದ್ದನಂತೆ. ಯಾರ ಊರು ಏನು ಕತೆ ಹೆಸರೇನು ಏನು ಮಾಡಿಕೊಂಡಿದ್ದೀಯ ಎಂದು ಶುರುವಾದ ಮಾತುಕತೆ ಕೊನೆಗೆ ಆ ಗೆಳೆಯನ ಊರಿನ ವಿಳಾಸ, ಬೆಂಗಳೂರಿನಲ್ಲಿರುವ ಆತನ ಹಾಸ್ಟೆಲ್ ನ ವಿಳಾಸ, ಎಲ್ಲವನ್ನು ಕೇಳಿ ಆ ವ್ಯಕ್ತಿ ತಿಳಿದುಕೊಂಡಿದ್ದನಂತೆ. ಏನೂ ಅರಿಯದ ಮುಗ್ಧ ಹುಡುಗ ಹಳ್ಳಿಯಿಂದ ಆಗಷ್ಟೇ ನಗರಕ್ಕೆ ಬಂದಿದ್ದರಿಂದ ಎಲ್ಲಾ ವಿವರಗಳನ್ನು ಅಪರಿಚಿತ ವ್ಯಕ್ತಿಗೆ ನೀಡಿಬಿಟ್ಟಿದ್ದನಂತೆ. ಅಪರಿಚಿತನೊಂದಿಗೆ ಮಾತನಾಡಿ ತಾನು ಇಳಿಯಬೇಕಾದ ಜಾಗ ಬಂದಾಗ ತನ್ನ ಪಾಡಿಗೆ ತನ್ನ ಹಾಸ್ಟೆಲ್ ನೆಡೆಗೆ ಅಂದು ನಡೆದು ಹೋದ ಹುಡುಗನಿಗೆ ಆ ವ್ಯಕ್ತಿಯ ಮನಸ್ಸು ಆಗ ಬಹುಶಃ ಗೊತ್ತಿರಲಿಲ್ಲ ಅನಿಸುತ್ತೆ.
ಆ ದಿನವಾದ ಮೇಲೆ ಒಂದು ದಿನ ಯಾರೋ ತನ್ನ ಹಾಸ್ಟೆಲ್ ರೂಮಿನ ಬಾಗಿಲು ಬಡಿದ ಸದ್ದು ಕೇಳಿ ಈ ಹುಡುಗ ಬಾಗಿಲು ತೆರೆದಾಗ ಎದುರಿಗೆ ಅವತ್ತು ಬಸ್ಸಿನಲ್ಲಿ ಸಿಕ್ಕಿದ್ದ ಅದೇ ವ್ಯಕ್ತಿ ನಿಂತಿದ್ದನಂತೆ. ಒಮ್ಮೆ ಆಶ್ಚರ್ಯವಾದರೂ ಅತಿಥಿಯಲ್ಲವೇ ಎಂದುಕೊಂಡು ಮುಗ್ಧ ಹುಡುಗ ನಗುತ್ತಾ “ಓ ಬನ್ನಿ ಒಳಗೆ” ಎಂದು ರೂಮಿನ ಒಳಗೆ ಆ ವ್ಯಕ್ತಿಯನ್ನು ಕರೆದು ಕೂರಿಸಿದ್ದನಂತೆ. ಹಾಸ್ಟೆಲ್ ನಲ್ಲಿದ್ದ ಕಾರಣ ತನ್ನ ಬಳಿ ಕಪ್ ಬೋರ್ಡ್ ನಲ್ಲಿದ್ದ ಬಿಸ್ಕತ್ ಗಳಿಂದಲೇ ಅತಿಥಿ ಸತ್ಕಾರ ಮಾಡಿದ್ದನಂತೆ. ಆ ವ್ಯಕ್ತಿ ಮಂಚದ ಮೇಲೆ ಆ ಹುಡುಗನ ಪಕ್ಕ ಕುಳಿತು ಮಾತನಾಡುವಾಗ ಆ ಹುಡುಗನ ತೊಡೆಯ ಮೇಲೆ ಕೈ ಇಟ್ಟು ಮಾತನಾಡುತ್ತಾ ಆಗಾಗ ತೊಡೆಯನ್ನು ಸವರುತ್ತಾ ಇದ್ದದ್ದು ಆ ಗೆಳೆಯನಿಗೆ ಅರಿವಿಗೆ ಬಂದು ಒಂಚೂರು ಇರುಸು ಮುರುಸಾದರೂ ಏನನ್ನೂ ಹೇಳಲಾಗದೆ ಸುಮ್ಮನಿದ್ದನಂತೆ. ಒಂದೆರಡು ನಿಮಿಷ ಹಾಗೆ ಕಳೆಯುತ್ತಿದ್ದಂತೆ ಸಡನ್ ಆಗಿ ಬಾಗಿಲಿನ ಚಿಲಕ ಹಾಕಿದ ವ್ಯಕ್ತಿ ಆ ಹುಡುಗನಿಗೆ ಶಾಕ್ ಆಗುವಂತೆ ಅವನನ್ನು ಬಿಗಿಯಾಗಿ ಅಪ್ಪಿ ಮುತ್ತಿಡಲು ಶುರು ಮಾಡಿದ್ದನಂತೆ. ಅತಿಥಿಯಾಗಿ ಬಂದಿದ್ದ ಅಪರಿಚಿತನಿಂದ ಹೀಗೆ ದಿಗ್ಬ್ರಮೆಗೊಳಗಾದ ಹುಡುಗ ಕೊಸರಿಕೊಂಡು ಆ ವ್ಯಕ್ತಿಗೆ ಬಯ್ದು ತನ್ನ ಗೆಳೆಯರಿಂದ ಒದೆ ಬೀಳುವ ಮೊದಲು ಅಲ್ಲಿಂದ ತೊಲಗುವಂತೆ ಹೇಳಿದ್ದನಂತೆ.
ಆ ಗೆಳೆಯನಿಂದ ಈ ಕತೆ ಕೇಳಿದ ಮೇಲೆ ಜನ ಹೀಗೂ ಇರ್ತಾರ ಅಂತ ಅಚ್ಚರಿಯಾಗಿ ಮತ್ತಷ್ಟು ಗೆಳೆಯರ ಜೊತೆ ಈ ಕುರಿತು ಮಾತನಾಡಿದಾಗ ಬಸ್ ನಲ್ಲಿ ಗಂಡಸರೇ ಪಕ್ಕ ಕುಳಿತ ಹುಡುಗರ ತೊಡೆ ಸವರುವ, ಮೆಜೆಸ್ಟಿಕ್ ಹತ್ತಿರದ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಹೋದರೆ ಪಕ್ಕದಲ್ಲಿ ತಾವು ಮೂತ್ರ ವಿಸರ್ಜನೆಗೆ ಬಂದವರಂತೆ ನಟಿಸಿ ಮಧ್ಯೆ ಮಧ್ಯೆ ಇಣುಕಿ ನೋಡುವ ಜನರ ಕತೆಗಳನ್ನು ಕೇಳಿ ಅಯ್ಯೋ ಶಿವನೇ ಹೀಗೂ ಉಂಟೆ ಎಂದು ಗೊಳ್ ಎಂದು ನಕ್ಕಿದ್ದ ದಿನಗಳು ಇನ್ನೂ ನೆನಪಿದೆ. ಹೀಗೆ ಒಬ್ಬ ಗಂಡು ಮತ್ತೊಬ್ಬ ಗಂಡಿಗೆ ಆಕರ್ಷಣೆಯಂತೆ ಕಾಣವುದು ಹೊಸ ವಿಷಯವಲ್ಲದಿದ್ದರೂ ಆ ವಯಸ್ಸಿನಲ್ಲಿ ಆ ಗೆಳೆಯನ ಕತೆ, ಆ ಗೆಳೆಯರು ಹೇಳಿದ ಕತೆಗಳು ನನಗೆ ಹೊಚ್ಚ ಹೊಸದು. ಏನಪ್ಪಾ ಇವತ್ತು ಇಂಥಾ ವಿಷಯ ಕುರಿತು ಬರೆದಿದ್ದಾನೆ ನಮ್ಮ ಹುಡುಗ ಅಂತ ಮುಜುಗರಕ್ಕೆ ಒಳಗಾಗದಿರಿ. ಈ ಕುರಿತು ಬರೆಯಲು ಒಂದಷ್ಟು ಕಾರಣಗಳು ಖಂಡಿತಾ ಇರುತ್ತವೆ. ನನ್ನ ಮೇಲೆ ಬೇಸರಿಸಿಕೊಳ್ಳದೆ ನೀವು ಓದುವಿರೆಂದು ನನ್ನ ನಂಬಿಕೆ.
ಮೇಲಿನ ಕತೆಗಳ ಗುಂಗು ನನ್ನನ್ನು ಇತ್ತೀಚೆಗೆ ಕಾಡಲು ಶುರು ಮಾಡಿದ್ದೇ ಒಂದು ಸಂದರ್ಶನವನ್ನು ಅಟೆಂಡ್ ಮಾಡಿ ಬಂದ ಮೇಲೆ. ಹೆಚ್ ಐ ವಿ ಸೋಂಕು ಹರಡುವಿಕೆ, ನಿಯಂತ್ರಣ, ಮತ್ತು ಹೆಚ್ ಐ ವಿ ಮೇಲೆ ಕಣ್ಗಾವಲು ಕುರಿತ ಪ್ರಾಜೆಕ್ಟ್ ಒಂದರಲ್ಲಿ ಕೆಲಸಕ್ಕೆ ಸೇರಲು ಒಮ್ಮೆ ಸಂದರ್ಶನಕ್ಕೆ ಹೋಗಬೇಕಾಗಿತ್ತು. ಹೆಚ್ ಐ ವಿ ಎಂದರೇನು, ಅದು ಹೇಗೆ ಹರಡುತ್ತದೆ, ಅದು ಎಷ್ಟು ಮಾರಕವಾದ ಕಾಯಿಲೆಯನ್ನು ಉಂಟು ಮಾಡುತ್ತದೆ. ಅದರ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಏನೇನು ಕ್ರಮ ಕೈಗೊಂಡಿದೆ ಇತ್ಯಾದಿ ಮಾಹಿತಿಗಳಿರುವ ದೊಡ್ಡ ದೊಡ್ಡ ಬೋರ್ಡ್ ಗಳನ್ನು ಅಥವಾ ದೊಡ್ಡ ಬಿತ್ತಿ ಚಿತ್ರಗಳನ್ನು ನಗರಗಳಲ್ಲಿ ಪಟ್ಟಣಗಳಲ್ಲಿ ಆಸ್ಪತ್ರೆಯ ಮುಂದೆ ಕಾರ್ಪೊರೇಷನ್ ಕಚೇರಿಗಳ ಮುಂದೆ ನಾನು ನೋಡಿದ್ದೆನಾ ಹೊರತು ಹೆಚ್ ಐ ವಿ ಕುರಿತು ಹೆಚ್ಚು ಓದಿರಲಿಲ್ಲ. ನನಗೆ ಸಂದರ್ಶನವಿದ್ದ ಕಾರಣ ಚೆನ್ನಾಗಿ ಓದಿಕೊಂಡೇ ಹೋಗೋಣ ಎಂದು ನನ್ನ ಬಳಿ ಇದ್ದ ಒಂದಷ್ಟು ಪುಸ್ತಕಗಳಲ್ಲಿಯೂ, ನ್ಯಾಕೋ ವೆಬ್ ತಾಣದಲ್ಲಿಯೂ ಹೆಚ್ ಐ ವಿ ಕುರಿತು ಓದಿಕೊಂಡಿದ್ದೆ. ನ್ಯಾಕೋ ಎಂದರೆ ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಜೇಷನ್ (ಎನ್ ಎ ಸಿ ಓ) ಎಂದು. ಕನ್ನಡದಲ್ಲಿ ರಾಷ್ಟ್ರೀಯ ಏಡ್ಸ್ ರೋಗ ನಿಯಂತ್ರಣ ಸಂಸ್ಥೆ ಎನ್ನುತ್ತಾರೆ.
ರಾಷ್ಟ್ರೀಯ ಏಡ್ಸ್ ರೋಗ ನಿಯಂತ್ರಣ ಸಂಸ್ಥೆ ರಾಜ್ಯಗಳ ಏಡ್ಸ್ ನಿಯಂತ್ರಣ ಸೊಸೈಟಿಗಳ ಸಹಯೋಗದೊಂದಿಗೆ ಹೆಚ್ ಐ ವಿ ಕುರಿತು ಅಧ್ಯಯನ ನಡೆಸಿ ವರದಿಗಳನ್ನು ತಯಾರು ಮಾಡುವುದರ ಜೊತೆಗೆ ನಿಯಂತ್ರಣ ಕ್ರಮಗಳನ್ನು ಸಹ ಕೈಗೊಳ್ಳುತ್ತದೆ. ನ್ಯಾಕೋದವರು ಸಿರಿಂಗ್ ಉಪಯೋಗಿಸಿ ಡ್ರಗ್ ಬಳಸುವವರನ್ನು, ವೇಶ್ಯೆಯರನ್ನು, ಸಲಿಂಗ ಕಾಮಿಗಳನ್ನು (ಗಂಡು), ಟ್ರಕ್ ಡ್ರೈವರ್ ಗಳನ್ನು, ಮತ್ತು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಹೋಗುವ ಜನಗಳನ್ನು ಹೆಚ್ ಐ ವಿ ಗೆ ಹೆಚ್ಚು ತುತ್ತಾಗಬಹುದಾದ ಜನಗಳು ಎಂದು ಗುಂಪು ಮಾಡಿದ್ದಾರೆ. ಈ ಗುಂಪುಗಳಲ್ಲಿ ಮತ್ತು ಇತರರಲ್ಲಿ ಅದರಲ್ಲೂ ತಾಯಂದಿರಲ್ಲಿ ಹೆಚ್ ಐ ವಿ ಪ್ರಮಾಣ ಎಷ್ಟಿದೆ ಎಂದು ನ್ಯಾಕೋ ಅಧ್ಯಯನ ನಡೆಸಿ ಹೆಚ್ ಐ ವಿ ಕುರಿತ ಅಂಕಿ ಅಂಶಗಳನ್ನು ಪುಸ್ತಕ ರೂಪದಲ್ಲಿಯೂ ವೆಬ್ ತಾಣದಲ್ಲಿಯೂ ಪ್ರಕಟಿಸುತ್ತದೆ.
ಹೆಚ್ಚು ಜನರೊಂದಿಗೆ ಲೈಂಗಿಕ ಸಂಬಂಧ ಹೊಂದುವುದು, ಡ್ರಗ್ ಉಪಯೋಗಿಸುವಾಗ ಒಂದೇ ಸಿರಿಂಜ್ ನಿಂದ ಹೆಚ್ಚು ಜನ ಚುಚ್ಚಿಕೊಳ್ಳುವುದು, ಹೆಚ್ ಐ ವಿ ಸೋಂಕಿತ ತಾಯಿಯಿಂದ ಮಗುವಿಗೆ ರೋಗ ಹರಡುವುದು, ಹೆಚ್ ಐ ವಿ ಸೋಂಕಿತ ರಕ್ತದಿಂದ ರೋಗ ಹರಡುವುದು ಹೀಗೆ ಏನೆಲ್ಲಾ ಮಾಹಿತಿಯನ್ನು ನಾವು ಹೆಚ್ ಐ ವಿ ಕುರಿತ ಫಲಕಗಳಿಂದ ತಿಳಿಯಬಹುದು. ಆದರೆ ಸಲಿಂಗ ಕಾಮವನ್ನು ಕುರಿತು ಆ ಫಲಕಗಳಲ್ಲಿ ಮಾಹಿತಿ ಇದೆಯೋ ಇಲ್ಲವೋ ಒಮ್ಮೆ ಗಮನಿಸಬೇಕು. ಯಾಕೆಂದರೆ 2007ನೇ ಇಸವಿಯಲ್ಲಿ ನ್ಯಾಕೋ ಪರೀಕ್ಷಿಸಿರುವ ರಕ್ತದ ಸ್ಯಾಂಪಲ್ ಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಲಿಂಗ ಕಾಮಿಗಳ (ಗಂಡು) ಗುಂಪಿನ ಶೇಕಡ 7.4 ರಷ್ಟು ರಕ್ತದ ಸ್ಯಾಂಪಲ್ ಗಳು ಹೆಚ್ ಐ ವಿ ಪಾಸಿಟೀವ್ ಆಗಿದ್ದರೆ ಕರ್ನಾಟಕದ ಸಲಿಂಗ ಕಾಮಿಗಳ ರಕ್ತದ ಸ್ಯಾಂಪಲ್ ಗಳು ಶೇಕಡ 17.6% ರಷ್ಟು ಹೆಚ್ ಐ ವಿ ಪಾಸಿಟೀವ್ ಆಗಿದ್ದು ಅಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ ಸಿಕ್ಕಿದೆ ಎಂದರೆ ಶಾಕ್ ಆಗಬೇಡಿ.
ಇಂಗ್ಲೀಷ್ ನಲ್ಲಿ ಗೇ ಎಂದು ಕರೆಯಲ್ಪಡುವ ಸಲಿಂಗ ಕಾಮಿ ಎಂಬ ವ್ಯಕ್ತಿ ಮತ್ತು ಅವರ ಕತೆಗಳು ಹೆಚ್ಚಿನವರ ಪಾಲಿಗೆ ತಮಾಷೆಯ ಸಂಗತಿಯಂತೆ ಕಾಣುತ್ತವೆ. ಇವತ್ತು ಒಂದು ವರ್ಗ ಸಲಿಂಗ ಕಾಮಿಗಳ ಹಕ್ಕುಗಳ ರಕ್ಷಣೆಗೆ ನಿಂತರೆ ಮತ್ತೊಂದು ವರ್ಗ ಅದಕ್ಕೆ ವಿರೋಧವಾಗಿ ನಿಲ್ಲುವುದನ್ನು ನಾವು ಕಾಣುತ್ತೇವೆ. ಸಲಿಂಗ ಕಾಮಿಗಳ ಸಮಸ್ಯೆ ಕುರಿತ ಕಥಾ ವಸ್ತುಗಳುಳ್ಳ ಸಿನಿಮಾಗಳು, ಕಾದಂಬರಿಗಳು ಪಾಶ್ಚಾತ್ಯ ದೇಶದಲ್ಲಿ ಆಗಾಗ ಬಿಡುಗಡೆಯಾಗುತ್ತಲೇ ಇರುತ್ತವೆ. ನಮ್ಮ ದೇಶದಲ್ಲೂ ಅಂತಹ ಕತೆಗಳ ಎಳೆಯುಳ್ಳ ಸಿನಿಮಾಗಳು ಇತ್ತೀಚೆಗೆ ಕಾಣಿಸಿಕೊಳ್ಳುತ್ತಿವೆ ಜೊತೆಗೆ ಪ್ರಶಸ್ತಿ ಬಹುಮಾನಗಳ ಗರಿಗಳು ಅಂತಹ ಸಿನಿಮಾ ಮತ್ತು ಕಾದಂಬರಿಗಳಿಗೆ ಸಲ್ಲುತ್ತಲೇ ಇರುತ್ತವೆ. ಜೊತೆಗೆ ಬಹಿರಂಗವಾಗಿ ಕೆಲವು ಸೆಲೆಬ್ರಿಟಿಗಳು ಸಲಿಂಗ ಕಾಮಿಗಳ ಹಕ್ಕುಗಳ ರಕ್ಷಣೆಗೆ ಪ್ರಚಾರದ ಕಾರಣಕ್ಕೋ ಏನೋ ತಮ್ಮ ಬೆಂಬಲವನ್ನು ಸಹ ಸೂಚಿಸುತ್ತಾರೆ. ವಿಪರ್ಯಾಸವೆಂದರೆ ಹೆಚ್ಚು ಸಲ ಸಲಿಂಗ ಕಾಮಿಗಳು ಎಲ್ಲೂ ಸಲ್ಲದವರಾಗಿ ನಿಂತುಬಿಡುತ್ತಾರೆ.
ಅನುವಂಶೀಯತೆಯಿಂದ ವರ್ಣತಂತುಗಳಲ್ಲಿ ಉಂಟಾಗುವ ಬದಲಾವಣೆಗಳು, ತಾವು ಬೆಳೆದ ಜಾಗಗಳ ಪ್ರಭಾವಗಳು ಜನಗಳನ್ನು ಸಲಿಂಗ ಕಾಮಿಗಳನ್ನಾಗಿ ಮಾಡಿಬಿಡುತ್ತವೆ ಅನಿಸುತ್ತೆ. ಅದೇನೆ ಇದ್ದರೂ ಮೇಲೆ ತಿಳಿಸಿದ ನ್ಯಾಕೋದ ಅಂಕಿ ಅಂಶಗಳಲ್ಲಿ ಕಂಡುಬರುವ ಸತ್ಯಾಸತ್ಯತೆ ಎಷ್ಟಿದೆಯೋ ತಿಳಿಯದು. ಆದರೆ ಹೆಚ್ ಐ ವಿ ಇತಿಹಾಸ ಕುರಿತು ಒಮ್ಮೆ ಇಣುಕಿದರೆ ಸಲಿಂಗ ಕಾಮದಿಂದಲೇ ಹೆಚ್ ಐ ವಿ ಸೋಂಕಿನ ಉಗಮಕ್ಕೆ ನಾಂದಿಯಾಯಿತು ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಈ ತರಹದ ಅಂಕಿ ಅಂಶಗಳು ಸಲಿಂಗ ಕಾಮಿಗಳಲ್ಲಿ ಹೆಚ್ ಐ ವಿ ಸೋಂಕಿನ ನಿಯಂತ್ರಣ ತುಂಬಾ ಮುಖ್ಯ ಎಂಬುದನ್ನು ತಿಳಿಸುತ್ತವೆ. ಯಾಕೆಂದರೆ ಮೇಲೆ ತಿಳಿಸಿದ ಹೆಚ್ ಐ ವಿ ಸೋಂಕಿಗೆ ಹೆಚ್ಚು ತುತ್ತಾಗಬಹುದಾದ ಮುಖ್ಯವಾದ ಮೂರ್ನಾಲ್ಕು ಗುಂಪುಗಳಿಂದ ಆರೋಗ್ಯವಂತರಿಗೂ ಒಂದಲ್ಲ ಒಂದು ರೀತಿಯಲ್ಲಿ, ಯಾವುದೋ ವಿಧದಲ್ಲಿ ಹೆಚ್ ಐ ವಿ ಸೋಂಕು ತಗುಲಿಬಿಡುವ ಅಪಾಯ ಹೆಚ್ಚಿರುತ್ತದೆ. ಹೆಚ್ ಐ ವಿ, ಸಲಿಂಗ ಕಾಮ ಎಂಬ ಈ ವಿಚಾರಗಳು ಸೂಕ್ಷ್ಮ ವಿಚಾರಗಳಾದರು ಇಂತಹ ಸೂಕ್ಷ್ಮ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡುವ ಮನಸ್ಥಿತಿಗಳು ನಮ್ಮಲ್ಲಿ ಉಂಟಾದರೆ ಈ ಲೇಖನಕ್ಕೊಂದು ಅರ್ಥ ಸಿಕ್ಕಂತಾಗುತ್ತದೆ.
ಕೊನೆಯ ಪಂಚ್ :
ಕೆಲವು ಕೆಲಸಗಳ ಸಂದರ್ಶನಕ್ಕೆ ಹೋದಾಗ ಅಭ್ಯರ್ಥಿಗಳನ್ನು ಮೊದಲೇ ಫಿಕ್ಸ್ ಮಾಡಿಕೊಂಡು ನಾಮಕಾವಸ್ಥೆಗಷ್ಟೇ ಸಂದರ್ಶನ ಮಾಡುವುದು ಎಲ್ಲಾ ಜಾಗಗಳಲ್ಲೂ ಸಾಮಾನ್ಯ. ಅಂತಹ ಸಂದರ್ಶನದಲ್ಲಿ ನನ್ನ ಈ ಸಂದರ್ಶನವೂ ಒಂದಾಗಿತ್ತು ಎಂದು ನನ್ನ ಭಾವನೆ. ಒಂದು ಪ್ರಶ್ನೆಯನ್ನೂ ಸಹ ಕೇಳದೆ ಆತುರವಾಗಿ ನನ್ನನ್ನೂ ಸೇರಿದಂತೆ ಎಷ್ಟೋ ಅಭ್ಯರ್ಥಿಗಳನ್ನು ಸಂದರ್ಶನ ಕೋಣೆಯಿಂದ ನಗುತ್ತಲೇ ಹೊರಕಳಿಸಿದಾಗ ಅವತ್ತು ಹೆಚ್ ಐ ವಿ ಕುರಿತು ಓದಿದ್ದ ಒಂದಷ್ಟು ವಿಷಯಗಳಲ್ಲಿ ಮುಖ್ಯವಾಗಿ ಸಲಿಂಗ ಕಾಮ ಕುರಿತ ಈ ವಿಷಯವನ್ನು ಹೀಗೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತ್ತು. ಅದಕ್ಕೇ ಈ ಪ್ರಯತ್ನ..





ಈ ರೀತಿಯ ಅನುಭವಗಳು ತುಂಬಾ ಜನರಿಗೆ ಆಗಿದೆ ನಟರಾಜು ಸಾರ್..
ಅರ್ಥವಿಲ್ಲದ ಮಡಿವಂತಿಕೆಯಿಂದ ಆಚೆ ಬಂದು, ಬದುಕಿನೊಂದಿಗೆ ನೇರವಾಗಿ ಹಾಸುಹೊಕ್ಕಾದ ಪ್ರೇಮ (ಜಾತೀಯತೆಯಂತ ಮಡಿವಂತಿಕೆಗಳು), ಕಾಮ (ಲೈಂಗಿಕತೆಯೆಡೆಗಿನ ಮಾತಿನ ಮಡಿವಂತಿಕೆ)ಗಳಂತಹ ವಿಚಾರಗಳನ್ನು ಮುಕ್ತವಾಗಿ ನಮ್ಮವರೊಂದಿಗೆ ಚರ್ಚಿಸುವಂತಾದರೆ ಸಮಾಜದ ಎಷ್ಟೋ ಸಮಸ್ಯೆಗಳು ಗಂಭೀರವಾಗುವ ಮುನ್ನವೇ ಪರಿಹಾರವಾಗುವ ಸಾಧ್ಯತೆಯಿದೆ…ನಾವೆಲ್ಲ ಬುದ್ಧಿವಂತಿಕೆಯ ಬದಲು ವಿಚಾರವಂತಿಕೆಯಿಂದ ವರ್ತಿಸುವಂತಾದರೆ ಎಷ್ಟು ಚೆನ್ನ…
ಒಂದು ಅರಿವಿನ ಲೇಖನ ನಿಮ್ಮಿಂದ…ಖುಷಿಯಾಯಿತು ನಟರಾಜು…
Very good and currently relevant article!
ಪುರೋಗಾಮಿಗಳು ಪ್ರಚಾರಕ್ಕೋಸ್ಕರ ಸಲಿಂಗ ಕಾಮಿಗಳನ್ನು ಬೆಂಬಲಿಸುತ್ತಾರೆ. ಆದರೆ ಈ ಸಲಿಂಗಕಾಮಿಗಳು ತಮ್ಮ ಕಾಮಶಮನಕ್ಕೆ ಹೆಚ್ಚಾಗಿ ಬಲೆ ಹಾಕುವುದು ಹದಿಹರೆಯದ ಕೌತುಕ ಮನದ ಕಿಶೋರರಿಗೆ ಎನ್ನುವುದು ಸಾಕ್ಷಿ ಇಲ್ಲದ ಸತ್ಯ. ಅದರ ಇನ್ನೊಂದು ಮುಖವನ್ನು ಬಿಚ್ಚಿಟ್ಟು ಉತ್ತಮ ಕೆಲಸ ಮಾಡಿದಿರಿ.
ಸೂಕ್ಷ್ಮ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡುವ ಮನಸ್ಥಿತಿಗಳು ನಮ್ಮಲ್ಲಿ ಉಂಟಾದರೆ…
ಉಂಟಾಗುತ್ತವೆ, ನಾವು ಮನಸ್ಸು ಮಾಡಬೇಕಷ್ಟೆ. ಸಂವಹನದ ಮುಜುಗರಗಳು ವಿಚಾರವಂತಿಕೆಯನ್ನ ಅಡಗಿಸಿ ಬುದ್ದಿವಂತಿಕೆಯ ಪರದೆಯೆಳೆದಾಗ ಅರಿವು ದಿಕ್ಕುತಪ್ಪುತ್ತದೆ. ಹಾಗಾಗದಿರಲಿ.
ಉಪಯುಕ್ತ ಹಾಗೂ ಮಾಹಿತಿಯುಳ್ಳ ಲೇಖನ.
ಸಲಿಂಗಕಾಮದ ವಿಷಯವಾಗಿ ನಿಮ್ಮ ಅವಧಿಯಲ್ಲಿ ನಟರಾಜ್ ರವರ ಅಂಕಣವನ್ನು ಬರೆದಿರುವುದಕ್ಕೆ ಧನ್ಯವಾದಗಳು.
ನಿಮ್ಮಗೆ ತಿಳಿಸಲು ಬಯಸುವುದೇನೆಂದರೆ. ನಿಮ್ಮ ಸ್ನೇಹಿತನಿಗೆ ಈ ರೀತಿಯ ಅನುಭವ ಆಗಿರುವುದು ನಿಜ ಇರಬಹುದು. ಹಾಗೆಯೇ ಆಗಿದೆ ಎಂದರೆ ಒಬ್ಬ ಸಲಿಗಕಾಮಿ ಆ ತರಹ ಮಾಡಿರಬಹುವದು. ಅವರು ಮಾಡಿರುವುದುಕ್ಕೆ ಇಡೀ ಸಲಿಂಗಕಾಮಿ ಸಮುದಾಯವನ್ನು ಈ ತರಹ ಮಾಡುತಾರೆ ಎಂದು ಹೇಳುವುದು ಸರಿಯಲ್ಲ. ಹಾಗೆ ನೀವು ನಿಮ್ಮ ಸ್ನೇಹಿತರ ಅನುಭವವನ್ನು ಜನರ ಮುಂದೆ ಇಡುವ ಮುನ್ನ ನಿಮಗೆ ಒಬ್ಬ ಸಲಿಂಗಕಾಮಿಯ ಜೊತೆ ಮಾತಾಡಿ ಅವರ ಅನುಭವಗಳು ಹಾಗು ಇರುವ ಸಮಸ್ಯೆಗಳ ಬಗ್ಗೆ ತಿಳಿದು ಕೋಳ್ಳಬೇಕು ಎಂದು ಅನ್ನಿಸಲಿಲ್ಲವೇ??
ಇನ್ನು ಹೆಚ್.ಐ.ವಿ ವಿಷಯವಾಗಿ ಹೇಳುವುದಾದರೆ ನಮ್ಮ ಸರ್ಕಾರ ಒಂದು ಕಡೆ ಹೆಚ್.ಐ.ವಿ ತಡಗಟ್ಟುವ ಕೆಲಸವನ್ನು ಮಾಡುತ್ತಾ ಬಂದಿದೆ. ಅದೆ ಸಮಯದಲ್ಲಿ ಐಪಿಸಿ ೩೭೭ ಎಂಬ ಕಾಯ್ದೆಯನ್ನು ನಮ್ಮ ಕಾನುನಿನಲ್ಲಿ (ಬ್ರಿಟಿಸರ ಕಾಲದಲ್ಲಿ ಜಾರಿಗೆ ತದ ಕಾಯ್ದೆಯನ್ನು) ಇನ್ನು ಇಟ್ಟಿಕೊಂಡಿದೆ. ಹಾಗು ಸಲಿಂಗಕಾಮಿಗಳ ಹೆಚ್.ಐ.ವಿ ತಡಗಟ್ಟುವ ಕಾರ್ಯಕ್ರಮದಲ್ಲಿ ಬರೀ ಹೆಚ್.ಐ.ವಿ ತಡಗಟುವುದಲ್ಲದೆ ಸಲಿಂಗಕಾಮಿಗಳ ಸಮಸ್ಯೆಗಳನ್ನು ನೋಡಬೇಕಾಗಿದೆ. ಯಾವುದೇ ಸಲಿಂಗಕಾಮಿಯಾಗಲಿ ನನ್ನಗೆ ಹೆಚ್.ಐ.ವಿ ಬರಲಿಎಂದು ಬಯಸುವುದಿಲ್ಲಾ. ನಾವು ಸಲಿಂಗಕಾಮಿಗಳಲ್ಲಿ ಹೆಚ್.ಐ.ವಿ ಜಾಸ್ತಿ ಇದೆ ಎಂದು ಹೇಳುವಾಗ ಜಾಸ್ತಿಯಾಗಲು ಕಾರಣಗಳು ಏನು. ಅದಕ್ಕೆ ಯಾರು ಕಾರಣ ಎಂದು ನಾವೇಲ್ಲಾರು ಯೋಚಿಸ ಬೇಕು.!!
ಇವತ್ತಿನ ದಿನಗಳಲ್ಲಿ ಹೆಚ್.ಐವಿಯಿಂದ ಬದುಕುತ್ತಿರುವವರ ಸಮಸ್ಯೆಗಳು ತುಂಬ ಚಿಂತಾಜನಕವಾಗಿದೆ. ನೀವು ನೋಡಿರುವ ನ್ಯಾಕೋ ಅಂಕಿ ಅಂಶಗಳ ಪ್ರಕಾರ ಅದು ೨೦೦೭ರ ಅಂಕಿ ಅಂಶ, ನಾವು ಮಾತನಾಡುವಾಗ ಸಲಿಂಗಕಾಮಿಗಳಿಂದ ಜಾಸ್ತಿ ಹೆ.ಐವಿ ಹರಡುತ್ತಿದ್ದೆ ಎಂಬ ಬಾವನೆ ಬರುತ್ತದೆ. ಅಂತಾ ಬರೆದಿದ್ದೀರಿ ಇದು ನಿಮ್ಮ ಮತ್ತು ಸಮಾಜದವರ ತಪ್ಪು ಕಲ್ಪನೆ ಹಲವು ವರ್ಷಗಳಿಂದ ಹೆಚ್ ಐ ವಿ ಯ ಕಾರ್ಯಕ್ರಮದಲ್ಲಿ ಕೆಲವು ಸಂಘ ಸಂಸ್ಥೆಗಳು ಕೆಲಸಮಾಡಿ ಅದನ್ನು ತಡೆಗಟ್ಟುತ್ತಿದ್ದಾರೆ ಈಗ ನಿಮ್ಮ ಬರಹದಿಂದ ಸಮಾಜದ ಜನರು ಸಲಿಂಗಕಾಮಿಗಳ ಬಗ್ಗೆ ಯಾವ ರೀತಿಯಾ ಕೀಳರಿಮೆ ಉಂಟಾಗಬಹುದು ಎಂದು ಯೋಚಿಸಬೆಕು.
ಹಾಗೇ ಲೈಂಗಿಕ ಆಕರ್ಷಣೆ ಯಾವುದೇ ರೀತಿಯ ಅನುವಂಶೀಯತೆಯಿಂದ ವರ್ಣತಂತುಗಳಲ್ಲಿ ಉಂಟಾಗುವ ಬದಲಾವಣೆಗಳಲ್ಲಾ ಅವರು ಬೆಳೆದ ಬೆಳವಣಿಗೆಯ ಜಾಗಗಳ ಪ್ರಭಾವಗಳು ಜನಗಳನ್ನು ಸಲಿಂಗ ಕಾಮಿಗಳನ್ನಾಗಿ ಮಾಡಿಬಿಡುತ್ತದೆ ಎಂದು ಹೇಳಲು ಸಾದ್ಯವಿಲ್ಲಾ. ಇದು ನಿಜವಾಗಿಯೋ ವಾಸ್ತವವಲ್ಲ ಹಲವು ಜನ ಸಲಿಂಗಕಾಮಿಗಳ ಮತ್ತು ಲಿಂಗಪರಿವರ್ತನೆ ಆಗಿರುವವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರೆಲ್ಲ ಯಾಕೆ ಸಲಿಂಗಕಾಮಿಗಳಾಗಿಲ್ಲ ನೀವು ಇದರ ಬಗ್ಗೆ ಸ್ವಲ್ಪ ಚಿಂತಿಸಿ.!!
ಹಾಗೇ ನಿಮ್ಮಗೆ ಇನೊಂದು ವಿಷಯವನ್ನು ತಿಳಿಸಲು ಇಷ್ಟಪಡುತ್ತಿನಿ ವಲ್ಡ್ ಹೆಲ್ತ್ ಸಂಸ್ಥೆಯು ಸಂಶೋದನೆಯ ಪ್ರಕಾರ ಸಲಿಂಗಕಾಮ ಪ್ರಕೃತಿದತವಾಗಿ ಬಂದಿರುವುದು ಎಂದು ಹೇಳುತ್ತದೆ.
ನಿಮ್ಮ ಬರಹದ ಬಗ್ಗೆ ನಾವು ತಪ್ಪು ಅಂತಾ ಹೇಳುತ್ತಿಲ್ಲ ಆದರೆ ಒಬ್ಬ ಜವಾಬ್ದಾರಿಯ ಬರಹಗಾರರಾಗಿ ಈ ವಿಷಯದ ಬಗ್ಗೆ ಸಂಪೋರ್ಣವಾಗಿ ತಿಳಿದು ಸಮಾಜದ ಮುಖ್ಯವಾಹಿನಿಗೆ ಸಲಿಂಕಕಾಮಿಗಳ ಬಗ್ಗೆ ಉತ್ತಮ ಬರಹ ಬರೆದರೆ ನಿಜವಾಗಿ ಅದು ಸಾರ್ಥಕವಾಗುತ್ತದೆ ಹೆಚ್ಚಿನ ಮಾಹಿತಿಗಳನ್ನು ಅದರಲ್ಲಿ ಪರಿಣಿತಿ ಹೊಂದಿರುವ (ಸಂಘ ಸಂಸ್ಥೆಗಳು) ಜನರಿಂದ ಪಡೆಯುವುದು ಸೂಕ್ತ
ಸಲಿಂಗಕಾಮಿಗಳ ಬಗ್ಗೆ ನೀವು ಬರೆದಿರುವ ಅಂಕಣ ಓದಿ ನನಗೆ ನಿಮ್ಮ ಬಗ್ಗೆ ಅಭಿಮಾನವಿದೆ. ಹಾಗೆಯೇ ಸಲಿಂಗಕಾಮಿಗಳಿಂದ ಹೆಚ್ ಐ ವಿ ಬರುವುದು ಎನ್ನುವುದು ಎಷ್ಟರ ಮಟ್ಟಿಗೆ ನಿಜ ಕಾರಣ ಕಳೆದ ಕೆಲವು ವರ್ಷಗಳಿಂದ ಇದೇ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಇದು ಸರಿ ಅಲ್ಲ ಈ ರೀತಿಯ ಬರಹದಿಂದ ಸಮಾಜದಲ್ಲಿ ಈ ಸಮುದಾಯದ ಮೇಲೆ ಕೆಟ್ಟ ಅಭಿಪ್ರಾಯಗಳು ಬರಬಹುದು ಈಗಲೇ ಇವರನ್ನು ಹಲವು ರೀತಿಯ ಕೆಟ್ಟ ದೃಷ್ಟಿಗಳಿಂದ ನೋಡುತ್ತಾರೆ ಪ್ರಕೃತಿಯ ವಿರುದ್ದ ಲೈಂಗಿಕ ಕ್ರಿಯೆ ಮಾಡುವವರು ಅಂತಾ ಅದರ ಜೊತೆಯಲ್ಲಿ ನಮ್ಮ ದೇಶದ ದೆಲ್ಲಿ ಹೈ ಕೋರ್ಟ್ ಹೇಳಿದೆ ವಯಸ್ಕರ ನಡುವೆ ಒಪ್ಪಿಗೆ ಇದ್ದು ನೆಡೆಯುವ ಲೈಂಗಿಕ ಕ್ರಿಯೆ ಅಪರಾಧವಲ್ಲ ಅಂತಾ ಹೀಗಿರುವಾಗ ಒಬ್ಬರ ನಡುವೆ ಇನ್ನೊಬ್ಬರಿಗೆ ಆಕರ್ಷಣೆ ಬರುವುದು ಸಹಜ ಹೀಗಿರುವಾಗ ನಿಮ್ಮ ಬರಹದಲ್ಲಿ ಒಳ್ಳೆಯ ವಿಚಾರದ ಜೊತೆಯಲ್ಲಿ ಸಮುದಾಯದ ಮೇಲೆ ತಪ್ಪಾಗಿ ಬರೆಯುವುದು ಸರಿ ಅಲ್ಲ ಇನ್ನು ಮುಂದೆ ಬರೆಯುವಾಗ ಯೋಚಿಸಿ ಈ ಸಮುದಾಯದ ಬಗ್ಗೆ ಬರೆದರೆ ಸಮಾಜ ಬದಲಾವಣೆಯಲ್ಲಿ ನಿಮ್ಮ ಪಾತ್ರ ಮುಖ್ಯವಾಗಿರುತ್ತದೆ ಅಂತಾ ನನಗನಿಸುತ್ತದೆ.
ಕಡೆಯಲ್ಲಿ ನನಗನಿಸಿದ ಅನಿಸಿಕೆ ಸಲಿಂಗಕಾಮಿಗಳನ್ನು ಗೇಲಿ ಮಾಡುವ ರೀತಿಯಾಗಿದೆ ಅಂತಾ ಅನ್ನಿಸುತ್ತದೆ
ನಮ್ಮ ದುರಂತ ಎಂದರೆ ಸಲಿಂಗ ಪ್ರೇಮ(ಕಾಮ ಎನ್ನುವ ಶಬ್ದ ತೀರ ಪೂರ್ವಾಗ್ರಹ ಪೀಡಿತ ಬಳಕೆ ಅನ್ನಿಸುತ್ತದೆ)ವನ್ನು ನಾವು ಎಚ್ ಐ ವಿ ಸಮಸ್ಯೆಯ ಒಂದು ಭಾಗವಾಗಿ ಮಾತ್ರ ಚರ್ಚಿಸುತ್ತೇವೆ. ಇತ್ತೀಚಿಗೆ ವಿದ್ಯಾ ಸ್ಮೈಲ್ ಆತ್ಮ ಕತೆ “ನಾನು ಅವನಲ್ಲ ಅವಳು” ಓದಿದ್ದೆ. ಅದು ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಒಬ್ಬ ಸಲಿಂಗ ಪ್ರೇಮಿಯ ಅಥವಾ ಇನ್ನೊಂದು ಸಮುದಾಯವಾದ ಹಿಜಡಾ ಎಂದು ಕರೆಯುವ ಗಂದಾಗಿಯೂ ಹೆಣ್ಣಾಗಿರುವ ವ್ಯಕ್ತಿಯ ಒಳ ಸಂಘರ್ಷಗಳನ್ನು ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಪ್ರಕೃತಿಯ ಬಲಿಪಶುಗಳು ಅವರು ಎನ್ನುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಿ ಎಂ ಟಿ ಸಿ ಬಸ್ಸಲ್ಲಿ ಒಂಟಿ ಹೆಣ್ಣು ಸಿಕ್ಕಿದಾಗ ಗಂಡು ಒಬ್ಬ ಏನು ಮಾಡಬಹುದೋ, ಅದನ್ನೇ ತನ್ನದೇ ಭಾವನೆಗಳುಳ್ಳ ಇನ್ನೊಬ್ಬ ಗಂಡು ಸಿಕ್ಕಿದಾಗ ಸಲಿಂಗ ಪ್ರೇಮಿಯು ಮಾಡಬಹುದು. ಅದು ಸಲಿಂಗ ಪ್ರೆಮಿಗಳಲ್ಲಿರುವ ದೋಷ ಮಾತ್ರ ಅಲ್ಲ.
ಸಲಿಂಗ ಪ್ರೇಮಿ ಬೇರೆ, ಹಿಜದಗಳು ಬೇರೆ. ಇದನ್ನು ನಾವು ಮೊದಲು ನೆನಪಿಟ್ಟು ಕೊಳ್ಳಬೇಕು. ಸ. ಪ್ರೇಮಿ ಯಾರು ಎನ್ನುದನ್ನು ಗುರುತಿಸುದು ನಮ್ಮ ಸಮಾಜದಲ್ಲಿ ಅಷ್ಟು ಸುಲಭವಲ್ಲ. ಹೆಚ್ಚಿನ ಸ. ಪ್ರೇಮಿಗಳು ಹುಡುಗಿಯರನ್ನು ಕಣ್ಣೆತ್ತಿಯೂ ನೋದುದಿಲ್ಲ. ಹಾಗೆಯೇ ತನ್ನದೇ ಭಾವಾನೆಗಳು ಹೊಂದಿದ ಹುಡುಗನಾಗಿರಬಹುದು ಎಂಬ ಅನುಮಾನ ಬಂದ ಬಳಿಕವೇ ಸ. ಪ್ರೇಮಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಮುಂದಾಗುತ್ತಾನೆ ಎನ್ನೋದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಇಬ್ಬರು ಸ.ಪ್ರೇಮಿಗಳು ಜೀವನದುದ್ದಕ್ಕೂ ಒಬ್ಬರಿಗೊಬ್ಬರು ಆಸರೆಯಾಗಬಲ್ಲರು. ಇದನ್ನು ಹಿಂದಿ ಚಿತ್ರ “ಮೈ ಬ್ರದರ್ ನಿಖಿಲ್” ಚಿತ್ರದಲ್ಲಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ದುರದೃಷ್ಟವಶಾತ್ ಅದು ಕೂಡ ಎಡ್ಸ್ನ ಒಂದು ಭಾಗವಾಗಿಯೇ ತೋರಿಸಲ್ಪಡುತ್ತದೆ. ಸ. ಪ್ರೇಮಿಗಳನ್ನು ಬೇರೆ ಮಾಡುವ ಯಾವ ಅಧಿಕಾರವು ಮನುಷ್ಯ ಮಾತ್ರ ರಾದ ನಮಗೆ ಇಲ್ಲ. ಯಾಕೆಂದರೆ ಯಾರನ್ನು ನೀನು ಪ್ರೀತಿಸಬೇಕು ಎನ್ನುದನ್ನು ಅವರಿಗೆ ಪ್ರಕೃತಿಯೇ ಆದೇಶಿಸಿದೆ. ಅದು ಅವರ ದೌರ್ಭಾಗ್ಯ ಆಗಿರಬಹುದು. ಆದರೆ ಆ ಆದೇಶಕ್ಕೆ ತಲೆ ಭಾಗದೇ ಅವರಿಗೆ ಬೇರೆ ದಾರಿಯೇ ಇಲ್ಲ. ಸ. ಪ್ರೇಮ ಪ್ರಕೃತಿ ವಿರೋಧಿಯೇ ಆಗಿರಬಹುದು. ಆದರೆ ಅವರ ಪಾಲಿಗೆ ಆ ವಿರೋಧವು ಪ್ರಕ್ರುತಿಯಿಂದಲೇ ದಕ್ಕಿದ್ದು. ಅದು ಅವರ ಆಯ್ಕೆ ಅಲ್ಲ ಎನ್ನುದನ್ನು ನಾವೆಲ್ಲಾ ನೆನಪಿಟ್ಟುಕೊಲ್ಲಬೇಕಾಗಿದೆ.
naanu nivu heliruvada oputtene
ಒಂದು ಸೂಕ್ಷ್ಮ ವಿಷಯ ಕುರಿತು ಆರೋಗ್ಯಕರವಾದ ಚರ್ಚೆ ನಡೆಸಿದ ಗೆಳೆಯರೆಲ್ಲರಿಗೂ ವಂದನೆಗಳು.. ಉಮೇಶ್ ಸರ್, ಚಾಂದಿನಿ ಮೇಡಂ ಮತ್ತು ಬಶೀರ್ ರವರೆ ನಿಮ್ಮಿಂದ ಅನೇಕ ವಿಷಯಗಳು ತಿಳಿಯಿತು.. ಧನ್ಯವಾದಗಳು ನಿಮ್ಮೆಲ್ಲರ ಪ್ರತಿಕ್ರಿಯೆಗೆ.. ನಿಮ್ಮ ಓದು ನಮ್ಮ ಬೆಳೆಸಲಿ.. ಎಲ್ಲರಿಗೂ ಶುಭವಾಗಲಿ..
very nice article……
ಏಕ ಮುಖಿಯಾದ ಲೇಖನಕ್ಕೇ ಬಹುಮುಖಿ ಚಿಂತನೆಗಳ ಪ್ರತಿಕ್ರಿಯೆ ಮೌಲ್ಯ ನೀಡಿವೆ
ಇದಕ್ಕೆಲ ಕಾರಣ ಮನಸ್ಸು ಮನಸ್ಸನ್ನು ನಿಯಂತ್ರಿಸು ಕಾಮ ನಿಯಂತ್ರಣದಲ್ಲಿರುತ್ತೆ. ಮನಸ್ಸನ್ನು ನಿಯಂತ್ರಿಸುವುದಂರೆ ಬೀಸೋ ಗಾಳಿಯನ್ನು ತಡೆಯಿಡಿದಂತ್ತೆ ಸರಿ. ಮನಸ್ಸು ಭಗವಂತನ ಮಾತು ಕೇಳುತ್ತೆ ಆದ ಕಾರಣ ಭಗವಂತನನ್ನು ಬೇಡಕೋ ಮನಸ್ಸು ಸರಿಯಾದದಾರಿಗೆಬರಬಹುದು. ಅದರ ಭಗವದ್ಗೀತೆ. ( ಸಲಿಂಗಕಾಮಿಗಳಿಗೆ ನನ್ನದೋಂದು ಚಿಕ್ಕ ಸಲಹೆ ) ತಪ್ಪಿದ್ದರೆ ಕ್ಷಮೆಯಿರಲಿ.