ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಶಿವನಹಳ್ಳಿ
ಕನಕಪುರದಿಂದ ಸಾತನೂರು ಹಲಗೂರು ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ಒಂದು ರಸ್ತೆ ಇದೆ. ಕನಕಪುರ ಮತ್ತು ಸಾತನೂರಿನ ನಡುವೆ ಸಿಗುವ ಊರುಗಳಲ್ಲಿ ಮೊದಲ ಊರು ಶಿವನಹಳ್ಳಿ. ನಂತರ ನಮ್ಮೂರು. ನಮ್ಮೂರು ಮುಖ್ಯ ರಸ್ತೆಯಿಂದ ಒಂಚೂರು ಒಳ ಬರುತ್ತದೆ. ಶಿವನಹಳ್ಳಿಯನ್ನು ಹಳೆಯ ಕಾಲದವರು ದೇವರ ಶಿವನಹಳ್ಳಿ ಎಂದು ಕರೆಯುತ್ತಾರೆ. ಯಾಕೆಂದರೆ ಕನಕಪುರ ತಾಲ್ಲೂಕಿನಲ್ಲಿ ಕಾಡುಶಿವನಹಳ್ಳಿ, ಹಾರೋಶಿವನಹಳ್ಳಿ ಅನ್ನೋ ಇತರ ಶಿವನಹಳ್ಳಿಗಳೂ ಇವೆ. ಅವುಗಳೆಲ್ಲಾ ಕನಕಪುರದಿಂದ ಒಂಚೂರು ದೂರದಲ್ಲಿದ್ದರೆ ದೇವರ ಶಿವನಹಳ್ಳಿ ಅಂದರೆ ಶಿವನಹಳ್ಳಿ ಕನಕಪುರದಿಂದ ಮೂರ್ನಾಲ್ಕು ಕಿಲೋ ಮೀಟರ್ ಅಷ್ಟೆ. ಶಿವನಹಳ್ಳಿಗೆ ದೇವರ ಶಿವನಹಳ್ಳಿ ಎಂಬ ಹೆಸರು ಬರಲು ಅಲ್ಲಿರುವ ವೀರಭದ್ರಸ್ವಾಮಿ ದೇವಸ್ಥಾನವೇ ಕಾರಣ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ವೀರಭದ್ರ, ವೀರಮ್ಮ, ವೀರೇಗೌಡ, ಚಿಕ್ಕವೀರ, ದೊಡ್ಡವೀರ, ವೀರಯ್ಯ ಎಂಬ ಹೆಸರುಗಳು ವೀರಭದ್ರಸ್ವಾಮಿ ಒಕ್ಕಲಿನವರಲ್ಲಿ ಸಾಮಾನ್ಯ. ಇದೇ ಹೆಸರುಗಳು ಜನಗಳ ಬಾಯಲ್ಲಿ ಈರಭದ್ರ, ಈರಮ್ಮ, ಈರೇಗೌಡ, ಚಿಕ್ಕೀರ, ದೊಡ್ಡೀರ, ಈರಯ್ಯ ಎಂದು ಕರೆಯಲ್ಪಡುತ್ತವೆ. ಶಿವನಹಳ್ಳಿ ಬಸ್ ಸ್ಟಾಪ್ ನಲ್ಲಿ ಇಳಿದರೆ ರಸ್ತೆಯ ಪಕ್ಕದಲ್ಲೇ ದೊಡ್ಡ ದೇವಸ್ಥಾನ ಕಾಣುತ್ತದೆ. ದೇವಸ್ಥಾನದ ಹೆಬ್ಬಾಗಿಲಿನ ಮೇಲೆ ಬಿಳಿಯ ಬಸವನ ದೊಡ್ಡ ಮೂರ್ತಿ ಇರುವುದು ಈ ದೇವಸ್ಥಾನದ ಆಕರ್ಷಣೆಯ ಬಿಂದು ಎನ್ನಬಹುದು. ದೇವಸ್ಥಾನದ ಎದುರಿಗೆ ಜಾತ್ರೆಯ ಸಮಯದಲ್ಲಿ ಪೂಜಾರಿ ಬೆಂಕಿ ಹಾಯುವ ಕೊಂಡವಿದೆ. ದೇವಸ್ಥಾನದ ಮುಂದೆ ಬಲಭಾಗದಲ್ಲಿ ಒಂದು ನೀರಿನ ಬೋರ್ ವೆಲ್, ಒಂದು ದೊಡ್ಡ ಅರಳೀ ಮರ, ಆ ಮರದ ನೆರಳಿನಲ್ಲಿ ದೊಡ್ಡದಾದ ಕಲ್ಲು ಚಕ್ರಗಳುಳ್ಳ ನುಣುಪಾದ ಮರಗಳಿಂದ ಮಾಡಿದ ಒಂದು ದೊಡ್ಡ ರಥ ಮತ್ತೊಂದು ಮರದಿಂದ ಮಾಡಿದ ಚಿಕ್ಕ ರಥವನ್ನು ಚಿಕ್ಕಂದಿನಲ್ಲಿ ನೋಡಿದ ನೆನಪು. ದೇವಸ್ಥಾನದ ಎದುರಿನಲ್ಲಿ ಪುಟ್ಟ ಆಟದ ಬಯಲು, ಆ ಬಯಲಿನ ಒಂದು ಕೊನೆಯಲ್ಲಿ ಪುಟ್ಟ ಅತೀ ಕಲುಶಿತ ನೀರಿನ ಕಟ್ಟೆ, ಮತ್ತೊಂದು ಮೂಲೆಯಲ್ಲಿ ನಮ್ಮ ಶಾಲೆ ಇತ್ತು. ಇವೆರಡರ ಮಧ್ಯೆ ಒಂದು ಪಶು ವೈದ್ಯಕೀಯ ಆಸ್ಪತ್ರೆಯನ್ನು ನೋಡಿದ ನೆನಪು.
ಶಿವನಹಳ್ಳಿಯ ಸುತ್ತಮುತ್ತಲಿನ ಊರುಗಳಲ್ಲಿ ಹೆಚ್ಚೆಂದರೆ ಕಿರಿಯ ಪ್ರಾಥಮಿಕ ಶಾಲೆ ಇದ್ದ ಕಾರಣ ಮುಂದಿನ ವ್ಯಾಸಂಗಕ್ಕೆ ನಾವು ಶಿವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ ಓದಲು ಬರಬೇಕಿತ್ತು. ನಮ್ಮೂರಿನಲ್ಲಿ ನಾಲ್ಕನೇ ತರಗತಿಯವರೆಗೆ ಓದಿ ಐದನೇ ತರಗತಿಗೆ ಶಿವನಹಳ್ಳಿ ಶಾಲೆಗೆ ಸೇರಿದ್ದೆ. ನಮಗೆ ಕೆಂಪು ಚೆಡ್ಡಿ ಬಿಳಿ ಶರ್ಟು ಯೂನಿಫಾರ್ಮ್ ಆಗಿತ್ತು. ಅದೇ ದೇವಸ್ಥಾನದ ಒಳಗೆ ಮತ್ತು ನಮ್ಮ ಶಾಲೆಯ ಮರಗಳ ಕೆಳಗು ಒಮ್ಮೊಮ್ಮೆ ನಮಗೆ ತರಗತಿಗಳು ನಡೆದ ನೆನಪು. ನಮ್ಮ ಶಾಲೆಯ್ಲಲಿ ಓದುವ ಹುಡುಗಿಯರು ಹುಡುಗರನ್ನು ‘ಅಯ್ಯೋ, ಹೋಗಯ್ಯ ಬಾರಯ್ಯ ಕೇಳಯ್ಯ’ ಅಂತ ಮಾತನಾಡಿಸಿದರೆ ಹುಡುಗರು ಹುಡುಗಿಯರನ್ನು “ಅಮ್ಮೋ ಹೋಗಮ್ಮ ಬಾರಮ್ಮ ಇಲ್ಲಿ ಕೇಳಮ್ಮ” ಎಂದು ಮಾತನಾಡಿಸಬೇಕಿತ್ತು. ಯಾಕೋ ನಮ್ಮ ಬ್ಯಾಚಿನ ಹುಡುಗ ಹುಡುಗಿಯರಿಗೆ ಅಮ್ಮ ಅಯ್ಯ ಅಂತ ಕರೆಯುವ ಶಾಲೆಯ ಪುರಾತನ ನಿಯಮ ಇಷ್ಟವಾಗುತ್ತಿರಲಿಲ್ಲ.
ಹೊಸ ಹೊಸದಾಗಿ ಶಾಲೆಗೆ ಸೇರಿದ ದಿನಗಳಲ್ಲಿ ನಮ್ಮ ಕ್ಲಾಸಿನಲ್ಲಿ ಮಾನಿಟರ್ ನ ಆಯ್ಕೆಗಾಗಿ ಒಮ್ಮೆ ಓಟು ನಡೆದಿತ್ತು. ಇದ್ದ ಮೂವತ್ತು ಮೂವತ್ತೈದು ಹುಡುಗ ಹುಡುಗಿಯರಲ್ಲಿ ಐದು ಜನ ಓಟಿಗೆ ನಿಂತಿದ್ದೆವು. ಆ ಐದು ಜನರಲ್ಲಿ ಇಬ್ಬರು ಹುಡುಗಿಯರೂ ಸಹ ಇದ್ದರು ಎಂಬ ನೆನಪು. ಒಬ್ಬರು ಎರಡು ಓಟು ನೀಡುವ ಅವಕಾಶವಿತ್ತು. ಒಂದು ಓಟು ಹುಡುಗನಿಗೆ ಮತ್ತೊಂದು ಓಟು ಹುಡುಗಿಗೆ ನೀಡಬೇಕೆಂದು ನಿಯಮವಿತ್ತು. ಹಾಗೆ ಚೀಟಿಯಲ್ಲಿ ಹೆಸರುಗಳ ಬರೆದು ಓಟು ಹಾಕಿದ ಮೇಲೆ ಅಂದು ಬಿದ್ದ ಓಟುಗಳ ಗಣತಿ ಆರಂಭವಾದಾಗ ಒಂದು ಹುಡುಗಿಯ ಹೆಸರು ಕೌಂಟಿಂಗ್ ಅರ್ಧ ಮುಗಿದಿದ್ದಾಗ ಲೀಡಿಂಗ್ ನಲ್ಲಿತ್ತು. ಎರಡನೆಯ ಲೀಡಿಂಗ್ ಹೆಸರು ನನ್ನದಿತ್ತು. ಹುಡುಗಿ ನೋಡಲು ತುಂಬಾ ಚೆನ್ನಾಗಿದ್ದಳು. ಹುಡುಗಿಯರ ಓಟುಗಳೆಲ್ಲಾ ಅವಳಿಗೆ ಬಿದ್ದಿರುತ್ತೆ. ಹುಡುಗರ ಓಟುಗಳು ಸಹ ಅವಳಿಗೆ ಬಿದ್ದಿರುತ್ತೆ. ನಾನು ಬಹುಶಃ ಸೋತುಬಿಡುವೆ ಎಂಬ ಸಣ್ಣ ಭಯವಿದ್ದರೂ ಯಾಕೋ ಗೆದ್ದರೂ ಗೆಲ್ಲಬಹುದು ಎಂಬ ಆಸೆಯೂ ಇತ್ತು. ಕೊನೆಗೆ ನನಗೂ ಮತ್ತು ಆ ಹುಡುಗಿಯ ನಡುವೆ ಸ್ಪರ್ಧೆ ಏರ್ಪಟ್ಟು ಒಂದು ಓಟಿನ ಅಂತರದಲ್ಲಿ ಆ ಹುಡುಗಿ ಸೋತು ಎರಡನೇ ಮಾನಿಟರ್ ಆದರೆ 20 ಓಟು ಪಡೆದು ನಾನು ಮೊದಲ ಮಾನಿಟರ್ ಆಗಿದ್ದೆ. ಬದುಕಿನಲ್ಲಿ ಕಂಡ ಎಷ್ಟೋ ಸಿಹಿಯಾದ ಗೆಲುವುಗಳಲ್ಲಿ ಆ ಗೆಲುವು ಸಹ ಒಂದು ಎನ್ನಬಹುದು. ಬಹುಶಃ ಗೆಲುವಿನ ರುಚಿ ಹತ್ತಲು ಶುರು ಮಾಡಿದ್ದೇ ಆಗ ಅನಿಸುತ್ತೆ.
ನಮ್ಮ ತರಗತಿಯ ಎರಡನೇ ಮಾನಿಟರ್ ನೋಡಲು ಸಿಕ್ಕಾಪಟ್ಟೆ ಬ್ಯೂಟಿಫುಲ್. ಬಿಳಿ ಶರ್ಟು, ಕೆಂಪು ಲಂಗ, ಅವಳ ಕೆಂಪಾದ ಕೆನ್ನೆಗಳು ಎಂತಹ ಹುಡುಗರನ್ನು ಸಹ ಮರುಳು ಮಾಡಿಬಿಡುತ್ತಿದ್ದವು. ಅವಳಿಗೆ ಮರುಳಾದವರಲ್ಲಿ ನನ್ನ ಆತ್ಮೀಯ ಗೆಳೆಯನೂ ಒಬ್ಬ. ನನ್ನ ಗೆಳೆಯ ನೋಡಲು ಕಪ್ಪಾಗಿದ್ದರೂ ಲಕ್ಷಣವಾಗಿದ್ದ. ಅವಳನ್ನು ಯಾಕೋ ಸಿಕ್ಕಾಪಟ್ಟೆ ಇಷ್ಟಪಡ್ತಾ ಇದ್ದ. ನಮಗೆ ಹೊಸ ವರ್ಷ ಬಂತೆಂದರೆ ಅಂಗಡಿಯಲ್ಲಿ 50 ಪೈಸೆಯ ಗ್ರೀಟಿಂಗ್ ಕಾರ್ಡ್ ಗಳಿಂದ ಹಿಡಿದು ಐದು ರೂಪಾಯಿಯ ಕಾರ್ಡ್ ಗಳು ಸಿಗುತ್ತಿದ್ದವು. ನನ್ನ ಗೆಳೆಯನಿಗೆ ಆ ಹುಡುಗಿಯ ಜೊತೆ ಮಾತನಾಡುವ ಆಸೆ. ಆದರೆ ಅವನಿಗೆ ಅವಳ ಜೊತೆ ಮಾತನಾಡುವ ಧೈರ್ಯವಿರಲಿಲ್ಲ. ಹೊಸ ವರ್ಷ ಬಂದ ತಕ್ಷಣ ಧೈರ್ಯ ಮಾಡಿ ನೀನು ಗ್ರೀಟಿಂಗ್ ಕಾರ್ಡ್ ಕೊಡು ನೀನು ಕಾರ್ಡ್ ಕೊಡುವಾಗ ನಿನ್ನ ಜೊತೆ ಬಂದು ಮಾತನಾಡಲಾಗದಿದ್ದರೂ ಒಂಚೂರು ಅವಳ ಮುಂದೆ ಮುಗುಳ್ನಗುವೆ ಎಂದು ನನ್ನ ಪುಸಲಾಯಿಸಿದ್ದ. ಗ್ರೀಟಿಂಗ್ ಕಾರ್ಡ್ ಕೊಡುವುದು ಆ ಕಾಲದಲ್ಲಿ ಲವ್ ಲೆಟರ್ ಕೊಟ್ಟಷ್ಟೇ ಅಪರಾಧ ಎನ್ನುವ ಭಾವನೆ ನಮ್ಮಲ್ಲಿದ್ದ ವಯಸ್ಸದು. ಒಂದು ಮನಸ್ಸು ಧೈರ್ಯ ಮಾಡಿದರೂ ಮತ್ತೊಂದು ಮನಸ್ಸು ಅವಳು ಹೋಗಿ ಹೆಚ್ ಎಂ ಗೆ ಕಂಪ್ಲೇಟ್ ಕೊಟ್ಟರೆ ಎಂದು ಒಂಚೂರು ಹಿಂದೆ ಮುಂದೆ ನೋಡಿತ್ತು.
ಕೊನೆಗೂ ಧೈರ್ಯ ಮಾಡಿ ನಾನು ನನ್ನ ಗೆಳೆಯ ನಮ್ಮ ಶಾಲೆಯ ಎದುರಲ್ಲೇ ಇದ್ದ ಪೆಟ್ಟಿ ಅಂಗಡಿಯಲ್ಲಿ ಗ್ರೀಟಿಂಗ್ ಕಾರ್ಡಿನ ಆಯ್ಕೆಗೆ ನಿಂತಿದ್ದೆವು. ಆ ಸಮಯದಲ್ಲಿ ಗ್ರೀಟಿಂಗ್ ಕಾರ್ಡ್ ಗಳೆಂದರೆ ಹೂವಿನ ಚಿತ್ರಗಳು ಹೆಚ್ಚಿರುತ್ತಿದ್ದವು. ಅವುಗಳಲ್ಲಿ ಗುಲಾಬಿ ಹೂವಿನ ಚಿತ್ರಗಳೇ ಜಾಸ್ತಿ. ಅವುಗಳ ಜೊತೆಗೆ ನಮ್ಮ ಕನ್ನಡದ ಹೀರೋಗಳ ಹೀರೋಯಿನ್ ಗಳ ಚಿತ್ರಗಳಿರುವ ಗ್ರೀಟಿಂಗ್ ಕಾರ್ಡ್ ಗಳು ದೊರೆಯುತ್ತಿದ್ದವು. ಇವತ್ತಿನ ದಿನಗಳ ಹಾಗೆ ಶಾರುಖ್ ಸಲ್ಮಾನ್ ಗಳ ಚಿತ್ರಗಳಿಂದ ನಮ್ಮ ಗ್ರೀಟಿಂಗ್ ಕಾರ್ಡ್ ಗಳು ಕನ್ನಡತನ ಕಳೆದುಕೊಂಡಿರಲಿಲ್ಲ. ಹೂವಿನ ಚಿತ್ರಗಳಿರುವ ಕಾರ್ಡ್ ಗಳ ಕೊಟ್ಟರೆ ತಪ್ಪಾಗುವುದು ಎಂದು ಭಾವಿಸಿ ಸಿನಿಮಾ ನಟರಿರುವ ಕಾರ್ಡ್ ಒಂದನು ನೀಡಲು ಬಯಸಿದ್ದೆವು. ಆಗಷ್ಟೇ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ “ಅರಣ್ಯದಲ್ಲಿ ಅಭಿಮನ್ಯು” ಚಿತ್ರ ಬಿಡುಗಡೆಯಾಗಿತ್ತು ಅನಿಸುತ್ತೆ. ಆ ಚಿತ್ರದಲ್ಲಿ ಅಂಬರೀಶ್ ಕಾಡಿನಲ್ಲಿ ಒಂದು ಜೀಪಿನ ಮುಂದೆ ಟೋಪಿ ಹಾಕಿಕೊಂಡು ಗನ್ ಹಿಡಿದು ನಿಂತಿರುವ ಗ್ರೀಟಿಂಗ್ ಕಾರ್ಡ್ ಒಂದನು ನಾವು ಖರೀದಿಸಿದ್ದೆವು. ನಮಗೆ ಅದರೊಳಗೆ ಏನು ಬರೆಯೋದು ಎಂದು ಯೋಚಿಸುವ ಅಗತ್ಯವೇ ಇರಲಿಲ್ಲ. ಜನರಿಂದ ಜನರಿಗೆ ತಲುಪಿದ ಜಾನಪದ ಗೀತೆಗಳಂತೆ ಆಗಿನ ಕಾಲದಲ್ಲಿ ಗ್ರೀಟಿಂಗ್ಸ್ ನಲ್ಲಿ ಬರೆಯಬೇಕಿದ್ದ ಸಾಲುಗಳು ಸಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೆ ತಲುಪುತ್ತಿದ್ದವು. ಯಾರೋ ಬರೆದಿಟ್ಟಿರುವ ಸಾಲುಗಳಂತಿರುವ ಆಕಾಶಕ್ಕೆ ಸೂರ್ಯ ಚಂದ, ನೀರಿಗೆ ಮೀನು ಚಂದ, ಹೂವಿಗೆ ದುಂಬಿ ಚಂದ, ನನಗೆ ನಿನ್ನ ಗೆಳೆತನ ಚಂದ.. ಎನ್ನುವಂತಹ ಸಾಲುಗಳನ್ನು ಗ್ರೀಟಿಂಗ್ ಕಾರ್ಡ್ ಒಳಗೆ ಗೀಚಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಅಂತ ರೆಡ್ ಇಂಕ್ ನಲ್ಲಿ ಬರೆದು ಒಂಚೂರು ಡಿಸೈನ್ ಮಾಡಿ ಕೊಟ್ಟುಬಿಡಬಹುದಾಗಿತ್ತು.
ಹಾಗೆ ನಾನು ನನ್ನ ಗೆಳೆಯ ಗ್ರೀಟಿಂಗ್ ಕಾರ್ಡ್ ಒಳಗೆ ಏನೋ ಒಂದನು ಬರೆದು ಊಟದ ಸಮಯದಲ್ಲಿ ಅಮ್ಮೋ ಬಾರಮ್ಮ ಅಂತ ಆ ಹುಡುಗಿಯನ್ನು ದೇವಸ್ಥಾನದ ಮುಂದಿರುವ ರಥದ ಬಳಿ ಕರೆದಿದ್ದೆವು. ಆಕೆ ಬಂದಾಗ ಗ್ರೀಟಿಂಗ್ಸ್ ನಾನು ಹೊಸ ವರ್ಷದ ಶುಭಾಶಯವನ್ನು “ಹ್ಯಾಪಿ ನೀವ್ ಯೀಯರ್” ಅಂತ ನನ್ನ ಅರೆ ಬರೆ ಇಂಗ್ಲೀಷ್ ನಲ್ಲಿ ಹೇಳಿ ಅವಳ ಕೈಗಿತ್ತಿದ್ದೆ. ಅಲ್ಲೇ ರಥದ ಮೇಲೆ ಆಡುತ್ತಿದ್ದ ಹುಡುಗಿಯರ ಗುಂಪು “ಲೇ ಏನೇ ಕೊಟ್ಟ ಅವಯ್ಯಾ” ಅಂತ ಅದೂ ಇದೂ ಮಾತನಾಡಿಕೊಂಡು ನಮ್ಮ ಕ್ಲಾಸ್ ಹೆಚ್ ಎಂ ಆಫೀಸಿನ ಹತ್ತಿರ ಇಲ್ಲದಿದ್ದರೂ ಆ ಹುಡುಗಿಯರ ಗುಂಪು ಹೆಚ್ ಎಂ ಆಫೀಸ್ ಕಡೆ ನಡೆದು ಹೋಗಿದ್ದರು. ಅದ ಕಂಡು ಕಂಪ್ಲೇಂಟ್ ಗ್ಯಾರಂಟಿ ಮಗ ಅಂತ ನಾನು ಒಂಚೂರು ಭಯಪಟ್ಟಿದ್ದೆ. ಹಾಗೆ ಹೆಚ್ ಎಂ ರೂಮಿನೆಡೆಗೆ ಹೋದವರಂತೆ ಹೋಗಿ ಮಾಯವಾದ ಹುಡುಗಿಯರು ಎಷ್ಟೋ ಹೊತ್ತಿನ ಮೇಲೆ ಬಂದವರೇ “ಅಯ್ಯೋ ವಸ ವರ್ಸದ ಸುಬಾಸಯಗಳು” ಅಂತ ಕೆಂಪು ಗುಲಾಬಿ ಹೂವಿರುವ ಗ್ರೀಟಿಂಗ್ ಕಾರ್ಡ್ ಒಂದನ್ನು ಕೈಗಿತ್ತಾಗ ಆಕಾಶ ಕೈಗೆ ಸಿಕ್ಕ ಹಾಗೆ ನಾನು ನನ್ನ ಗೆಳೆಯ ಕುಣಿದಿದ್ದೆವು. ಆಮೇಲೆ ನನಗೆ ಆ ವರ್ಷ ಆ ಗ್ರೀಟಿಂಗ್ ಕಾರ್ಡ್ ಸೇರಿದಂತೆ ಇನ್ನಷ್ಟು ಗ್ರೀಟಿಂಗ್ ಕಾರ್ಡ್ ಗಳನ್ನು ನನ್ನ ಗೆಳೆಯ ಗೆಳತಿಯರು ಕೊಟ್ಟಿದ್ದರು. ನಾನು ಸಹ ಅವರಿಗೆ ಗ್ರೀಟಿಂಗ್ ಕಾರ್ಡ್ ಗಳ ಕೊಟ್ಟ ನೆನಪು. ನಂತರ ಆ ಕಾರ್ಡ್ ಗಳನ್ನೆಲ್ಲಾ ನಮ್ಮ ಮನೆಯ ಗೋಡೆಗೆ ಆ ದಿನಗಳಲ್ಲಿ ಅಂಟಿಸಿಕೊಂಡು ಸಿಕ್ಕಾಪಟ್ಟೆ ಖುಷಿಪಟ್ಟಿದ್ದೆ. ಆ ಕಾರ್ಡ್ ಗಳೆಲ್ಲಾ ಎಲ್ಲಿ ಕಳೆದು ಹೋದವೋ ತಿಳಿಯದು. ಇವತ್ತಿಗೂ ಆ ಕಾರ್ಡ್ ಗಳ ಒಳಗೆ ಆ ಹುಡುಗಿಯರು ಏನು ಬರೆದಿದ್ದರು ಎಂದು ನೆನೆದರೆ ಹಾಳಾದ ಮರೆವು ಯಾವ ಸಾಲುಗಳನ್ನು ಸಹ ಜ್ಞಾಪಕಕ್ಕೆ ತರದಿದ್ದಾಗ ಯಾರಾದರು ಕೊಟ್ಟ ಗ್ರೀಟಿಂಗ್ ಕಾರ್ಡ್ ಗಳ ಯಾವತ್ತಿಗೂ ಬಿಸಾಕಿಬಿಡಬಾರದು ಎಂದು ಇವತ್ತಿಗೆ ಅನಿಸುತ್ತೆ.
ನಾವೆಲ್ಲಾ ಐದನೇ ತರಗತಿಗೆ ಸೇರಿದ್ದ ಕಾರಣ ಎ ಫಾರ್ ಆಪಲ್ ಬಿ ಫಾರ್ ಬಾಲ್ ಅಂತ ಹೇಳುತ್ತಾ ಎಬಿಸಿಡಿ ಕಲಿಯುವುದರಲ್ಲಿ ಬ್ಯುಸಿಯಾಗಿದ್ದ ವಯಸ್ಸದು. ಆರನೆಯ ತರಗತಿಗೆ ಹೋದರೆ ಗಣಿತದ ಲೆಕ್ಕ ಸರಿಯಾಗಿ ಮಾಡದೆ ಇದ್ರೆ ಜುಟ್ಟು ಹಿಡಿದು ವಿಸಿಎಂ ಮೇಷ್ಟ್ರು ಬೋರ್ಡ್ ಗೆ ತಲೆ ಹೊಡೆಸುತ್ತಾರೆ, ರೂಲ್ ದೊಡ್ಡೆಯಲ್ಲಿ ಮೈ ಮೇಲೆ ಬಾಸುಂಡೆ ಬರಿಸುತ್ತಾರೆ ಎಂದು ಹೆದರುತ್ತಾ ಆಟಕ್ಕಿಂತ ಪಾಠದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದೆವು. ಕ್ರಿಕೆಟ್ ಎಂದರೇನು ಅಂತ ಗೊತ್ತಿಲ್ಲದಿದ್ದ ದಿನಗಳವು. ಒಮ್ಮೆ ನಮ್ಮ ಶಾಲೆಯಲ್ಲಿ ನಡೆಯುವ ಜನಪದ ಗೀತೆ ಮತ್ತು ಚಿತ್ರಗೀತೆಗಳ ಹಾಡುವ ಸ್ಪರ್ಧೆಯಲ್ಲಿ ನಮ್ಮ ತರಗತಿಯಿಂದ ಇಬ್ಬರು ಭಾಗವಹಿಸಿದ್ದರು. ಡುಂ ಡುಂ ಡುಂ… ಡುಂ ಡುಂ ಡುಂ.. ತ್ರಿಪುರಾ ಸುಂದರಿ ಬಾರೆ ನೀ ಹಸೆಮಣೆಗೆ ಎಂದು ನಗು ನಗುತ್ತಾ ಹಾಡಿದ ಹಾಡಿಗೆ ನಮ್ಮ ಕ್ಲಾಸಿನ ಕಲ್ಪನಾ ಚಲನಚಿತ್ರಗೀತೆಗೆ ಪ್ರಥಮ ಬಹುಮಾನ ಪಡೆದರೆ, ಕಲಿಯುತ್ತಾ ಹುಡುಗಿ ಕುದುರೆಯ ನಡಿಗೆ ನಡೆಯುತ್ತಾ ಬರುತ್ತಿತ್ತಾ ಎಂಬ ಹಾಡನ್ನು ನಮ್ಮ ಕ್ಲಾಸಿನ ವೀರಭದ್ರ ಹಾಡಿ ನಮ್ಮನ್ನೆಲ್ಲಾ ಸಿಕ್ಕಾಪಟ್ಟೆ ನಗಿಸಿಬಿಟ್ಟಿದ್ದ. ತೀರ್ಪುಗಾರರು ಜನಪದ ಗೀತೆಗೆ ಪ್ರಥಮ ಬಹುಮಾನ ಅವನಿಗೇ ನೀಡಿದ್ದರು. ಹೀಗೆ ಒಮ್ಮೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಮಗೆ ಖುಷಿಯ ಆಗರವಾದರೆ ಮತ್ತೊಮ್ಮೆ ವೀರಭದ್ರಸ್ವಾಮಿ ದೇವಸ್ಥಾನದ ಹಿಂದೆ ಇದ್ದ ಸರ್ಕಾರಿ ಪ್ರೌಢಶಾಲೆಯ ಹುಡುಗ ಹುಡುಗಿಯರು ದೇವಸ್ಥಾನದ ಮುಂದಿರುವ ಬಯಲಿನಲ್ಲಿ ಖೋ ಖೋ, ಕಬ್ಬಡ್ಡಿ ಆಟಗಳನ್ನು ಆಡುತ್ತಿದ್ದರೆ ನೋಡಲು ಒಂತರಾ ಖುಷಿ ಇರುತ್ತಿತ್ತು. ಖೋ ಖೋ ಆಟವನ್ನು ಬಹುಶಃ ಹೆಚ್ಚು ಜನ ಈಗ ಮರೆತುಬಿಟ್ಟಿದ್ದಾರೆ ಎನಿಸುತ್ತೆ.
ಐದನೇ ತರಗತಿ ಮುಗಿಸಿ ಆರನೇ ತರಗತಿಗೆ ಬಂದಾಗ ಅಭಿಮನ್ಯು ನಾಟಕಕ್ಕಾಗಿ ಕನಕಪುರದಿಂದ ಬರುತ್ತಿದ್ದ ಜಯಾ ಮೇಡಂ ನಮಗೆ ನಾಟಕದ ತರಬೇತಿ ನೀಡಿದ್ದು. ನಾನು ಪೇಟೆಯಿಂದ ರಟ್ಟುಗಳನ್ನು ತಂದು ಕಿರೀಟದ ಹಾಗೆ ಕತ್ತರಿಸಿ ಮಿನುಗುವ ಬಣ್ಣದ ಪೇಪರ್ ಗಳನ್ನು ಅಂಟಿಸಿದ್ದು. ಆ ಕಿರೀಟಗಳಿಗೆ ಅದೆಂತದೋ ವಸ್ತುಗಳನ್ನು ಉಪಯೋಗಿಸಿ ಡಿಸೈನ್ ಮಾಡಿದ್ದು, ರಜೆ ಇದ್ದ ಕಾರಣ ನನ್ನ ಮಾವನ ಮನೆಗೆ ಹೋಗಿ ವಾಪಸ್ಸು ಬರಲು ಒಂದು ವಾರ ತೆಗೆದುಕೊಂಡಾಗ ಧರ್ಮರಾಯನ ಪಾತ್ರ ಮಾಡಬೇಕಾಗಿದ್ದ ನಾನೇ ಕಣ್ಮರೆಯಾಗಿರುವುದ ಕಂಡು ನಮ್ಮ ಮೇಡಂ ಟೆನ್ಷನ್ ಆಗಿದ್ದು, ಎಲ್ಲವೂ ಸಿಹಿ ನೆನಪುಗಳೇ. ವರ್ಷದಲ್ಲಿ ಒಂದು ಬಾರಿ ನಮ್ಮ ಶಾಲೆಯಲ್ಲಿ ನಡೆಯುತ್ತಿದ್ದ ನಮ್ಮ ಶಾಲೆಯ ಯೂನಿಯನ್ ಡೇನಲ್ಲಿ ನನ್ನ ಅಕ್ಕ (ದೊಡ್ಡಪ್ಪನ ಮಗಳು)ಳೊಬ್ಬಳ ಜಾನಪದ ಹಾಡುಗಳು ಆ ವರ್ಷ ಸೂಪರ್ ಹಿಟ್ ಆಗಿದ್ದವು. ಅವಳ ಹಾಡಿಗೆ ಒನ್ಸ್ ಮೋರ್ ಒನ್ಸ್ ಮೋರ್ ಅನ್ನೋ ಪದವನ್ನು ಜನ ಹೇಳುವಾಗ ಲೈಫನಲ್ಲಿ ಮೊದಲ ಬಾರಿಗೆ ಒನ್ಸ್ ಮೋರ್ ಅನ್ನುವ ಪದ ಕೇಳಿದ್ದು ಆಗಲೇ ಅನಿಸುತ್ತೆ.. ಅವಳ ಹಾಡಿನ ನಂತರ ಕತ್ತಲಲ್ಲಿ ಛೇರಿನಲ್ಲಿ (ಸಿಂಹಾಸನ ಅಂದುಕೊಳ್ಳಿ 🙂 ) ಚಿಂತಾಕ್ರಾಂತನಾಗಿ ಕುಳಿತ ಧರ್ಮರಾಯನ ಮೇಲೆ ಬೆಳಕು ಬಿದ್ದಾಗ ಜನ ಸೀಟಿ ಹೊಡೆದಿದ್ದು ಇಂದಿಗೂ ಕಿವಿಯಲ್ಲಿ ಗುಯ್ ಗುಟ್ಟಿದ ಹಾಗೆ ಆಗುತ್ತೆ. “ದೊಡ್ಡಪ್ಪ ಯಾಕಿಷ್ಟು ಚಿಂತಾಕ್ರಾಂತರಾಗಿ ಕುಳಿತಿರುವಿರಿ” ಎಂದು ಪ್ರಶ್ನೆ ಕೇಳಿದ್ದ ಅಭಿಮನ್ಯುವಿನ ಪಾತ್ರ ಮಾಡಿದ್ದ ಕುಳ್ಳಗಿದ್ದ ಗೆಳೆಯನೊಬ್ಬ ನೆನಪಾಗುತ್ತಾನೆ. ನಮ್ಮ ಶಾಲೆ ಅಂದ ತಕ್ಷಣ ಏನೆಲ್ಲಾ ನೆನಪಾಗುತ್ತೆ ಅಲ್ಲವೇ ಸಹೃದಯಿಗಳೇ.. ನಮ್ಮ ಕಾಲದ ಹೆಚ್ಚು ಜನ ಓದಿರೋದು ಕನ್ನಡ ಶಾಲೆಗಳಲ್ಲೇ ಆದುದರಿಂದ ಯಾವ ಇಂಗ್ಲೀಷ್ ಮೀಡಿಯಮ್ ಶಾಲೆಗಳು ಕೊಡಲಾರದ ನೆನಪುಗಳ ಬುತ್ತಿಗಳ ನಮಗೆ ಈ ಪುಟ್ಟ ಶಾಲೆಗಳು ನೀಡಿವೆ ಎಂಬ ಮಾತನ್ನು ನೀವು ಒಪ್ಪುತ್ತೀರೆಂಬ ನಂಬಿಕೆ ನನ್ನದು..
ಕೊನೆಯ ಪಂಚ್: ಕನಕಪುರದ ಮುಖ್ಯ ರಸ್ತೆಯಲ್ಲದೆ ಶಿವನಹಳ್ಳಿ ದೇವಸ್ಥಾನದ ಹಿಂದೆ ಬೇರೆ ಊರಿಗೆ ಹೋಗಲು ಆಗಿನ ಕಾಲದಲ್ಲೇ ಟಾರ್ ರಸ್ತೆಯೊಂದಿತ್ತು. ಆ ರಸ್ತೆಯಲ್ಲೇ ಒಮ್ಮೆ ಹೈಸ್ಕೂಲ್ ಹುಡುಗರ ರನ್ನಿಂಗ್ ರೇಸ್ ನಡೆಯುತ್ತಿತ್ತು. ಅವತ್ತು ಬಹುಶಃ 5000ಮೀ ಸ್ಪರ್ಧೆ ಇತ್ತು ಅನಿಸುತ್ತೆ. ನಮ್ಮ ಲೆಕ್ಕದಲ್ಲಿ ಹೇಳಬೇಕೆಂದರೆ ಆ ರೋಡಿನಲ್ಲಿ ಸಿಗುವ ಮೂರ್ನಾಲ್ಕು ಊರುಗಳ ದಾಟಿ ಕೊನೆಯ ಊರನ್ನು ಮುಟ್ಟಿ ಬರುವ ಸ್ಪರ್ಧೆ ಅದು. ಆ ರೇಸ್ ನಡೆಯುವಾಗ ಸ್ಪರ್ಧಾಳುಗಳ ಜೊತೆ ಬೇರೆ ಹುಡುಗರು ಸೈಕಲ್ ತುಳಿದು ಜೊತೆಯಲ್ಲಿ ಹೋಗುತ್ತಾ ನಿಗಾ ಇಡುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿದ್ದ ಎಲ್ಲರೂ ಅವತ್ತು ಸಾಲಾಗಿ ಓಡಲು ನಿಂತಿರುವಾಗ ಒಬ್ಬರು ಮೇಷ್ಟು ನೋಡುಗನಾಗಿ ನಿಂತಿದ್ದ ಹುಡುಗನೊಬ್ಬನನ್ನು “ನೀನು ಓಡ್ತೀಯೇನೋ?” ಅಂದಿದ್ದರು. “ಹೇ ಬ್ಯಾಡ ಸರ್” ಅಂತ ನಾಚಿಕೊಂಡವನನ್ನು ಬಲವಂತ ಮಾಡಿ ಮೇಸ್ಟ್ರು ಸ್ಪರ್ಧೆಗೆ ಇಳಿಸಿದ್ದರು. ಆಗಾಗಲೇ ನೂರು ಮೀಟರ್, ಇನ್ನೂರು ಮೀಟರ್ ರನ್ನಿಂಗ್ ರೇಸ್ ನಲ್ಲಿ, ಹೈ ಜಂಪ್, ಲಾಂಗ್ ಜಂಪ್, ಕಬ್ಬಡ್ಡಿಯಲ್ಲಿ ಚಾಂಪಿಯನ್ ಆಗಿದ್ದ ಹುಡುಗನೊಬ್ಬ ಸಹ ಆ ರನ್ನಿಂಗ್ ರೇಸ್ ನಲ್ಲಿ ಓಡಲು ರೆಡಿಯಾಗಿ ನಿಂತಿದ್ದ. ಆ ಚಾಂಪಿಯನ್ ಹುಡುಗ ನಮ್ಮ ಕಣ್ಣಿಗೆ ಹೀರೋ ತರಹ ಕಾಣ್ತಾ ಇದ್ದ. ಅವನ ಟೀಮ್ ಖೋ ಖೋದಲ್ಲಿ ಎರಡನೇ ಸ್ಥಾನ ಪಡೆದಿದ್ದು ಬಿಟ್ಟರೆ ಅವನು ಎಲ್ಲದರಲ್ಲೂ ಪ್ರಥಮ. ನಮ್ಮ ನಿರೀಕ್ಷೆಯೂ ಕೂಡ ಆ ಚಾಂಪಿಯನ್ ಹುಡುಗ ಗೆದ್ದೇ ಗೆಲ್ಲುತ್ತಾನೆ ಎನ್ನುವಂತ್ತಿತ್ತು. 5000ಮೀಟರ್ ಸ್ಪರ್ಧೆಗಾಗಿ ಓಟ ಕಿತ್ತಿದ್ದ ಅಷ್ಟು ಸ್ಪರ್ಧಾಳುಗಳಲ್ಲಿ ಕೆಲವರು ಮುಟ್ಟಬೇಕಾದ ಊರನ್ನು ಮುಟ್ಟಿ ವಾಪಸ್ಸು ಬರುವಾಗ ಚಾಂಪಿಯನ್ ಗೂ ಮತ್ತು ಆ ಬ್ಯಾಡ ಸರ್ ಎಂದು ನಾಚಿದ್ದ ಆ ಹುಡುಗನಿಗೂ ಸ್ಪರ್ಧೆ ಬಿದ್ದಿರುವುದ ಕಂಡು ನಮ್ಮೆಲ್ಲರಿಗೂ ಅಚ್ಚರಿ ಜೊತೆಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತು. ನಾವು ಅಂದುಕೊಂಡಂತೆ ಚಾಂಪಿಯನ್ ಮೊದಲ ಸ್ಥಾನ ಪಡೆಯದೇ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.. ಅದೇ ಬ್ಯಾಡ ಸರ್ ಎಂದು ನಾಚಿದ್ದ ಹುಡುಗ ಪ್ರಥಮ ಸ್ಥಾನ ಪಡೆದಿದ್ದ. ಮುಂದಿನ ಸಾರಿ ನೀವು ಯಾವುದೇ ಸ್ಪರ್ಧೆಗಿಳಿಯಲು ನಾಚಬೇಡಿ.. ಯಾರಿಗೆ ಗೊತ್ತು ಜಯಮಾಲೆ ನಿಮ್ಮ ಕೊರಳಿಗೆ ಬಿದ್ದರೂ ಬೀಳಬಹುದು.. 🙂
ಕನಕಪುರದ ಕಡೆ ಹೋದಾಗ ಶಿವನಹಳ್ಳಿ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಹೋಗಿ ಬನ್ನಿ.. ನಿಮಗೆ ಇಷ್ಟವಾಗಬಹುದು…







ನನಗೂ ನನ್ನ ಶಾಲೆಯ ನೆನಪನ್ನು ಮತ್ತೆ ಮತ್ತೆ ಉಕ್ಕಿಸಿಟ್ಟ ನಿಮ್ಮ ಈ ಬರಹಕ್ಕೆ ನನ್ನ ಶರಣು.
ಸೇಮ್ ಟು ಸೇಮ್ ಶಾಲೆ ನೆನಪುಗಳು 🙂
ಚಿಕ್ಕೋಳಾಗಿ ಹೋದೆ ಸ್ಕೂಲಿಗೆ :)) ಚೆನ್ನಾಗಿ ಬರೆದಿದ್ದೀರಿ… ನೆನಪುಗಳು ಮಧುರ
“ಬಾಲ್ಯದ ಆಟ ಆ ಹುಡುಗಾಟ ಇನ್ನು ಮರೆತಿಲ್ಲ……..” ಮತ್ತೊಮ್ಮೆ ನಾನು ನನ್ನ ಬಾಲ್ಯಕ್ಕೆ ಮರಳಿದಂತ ಅನುಭವವಾಯಿತು … ಚನ್ನಾಗಿದೆ ಗೆಳೆಯ
ಶಾಲಾ ದಿನಗಳಲ್ಲಿ ಮಾಡಿದ ಚೇಷ್ಟೆಗಳೆಲ್ಲಾ ನೆನಪಾಗುವಂತೆ ಮಾಡಿತು ಈ ಲೇಖನ! 🙂
tumba channagide hele nenapugalu
ಸಾವಿರ ಬಣ್ಣಗಳ ಓಕುಳಿಯಾಟದ ಮರೆಯಲಾಗದ ಆ ದಿನಗಳು…
ಚಂದದ ನೆನಪಿನ ಬರಹ…
“ಏನೆಂದು ಹೆಸರಿಡಲಿ.. ಆ ಚಂದ ಅನುಭವಕೆ !” 🙂 ಲೇಖನ ಮನಮುಟ್ಟುವಂತಿದೆ, ಧನ್ಯವಾದಗಳು ನಟರಾಜ್ !
ಮಗಾ,
ಚಿಕ್ಕಂದಿನ, ಪುಟ್ಟ ಹಳ್ಳಿಯ, ಕನ್ನಡ ಮೀಡಿಯಮ್,ಸರ್ಕಾರಿ ಸ್ಕೂಲಿನ, ಎಲ್ಲ ಈಗಿನ ಜಂಜಡ ಬದುಕಿನಿಂದ ದೂರವಾದ ನೆನಪುಗಳು ಹಾಗೆಯೇ ಕಣ್ಣ ಮುಂದೆ ಹಾಗೆ ಬಂದು ಹೋದ ಹಾಗಾಯಿತು. ಅಷ್ಟೊಂದು ಚೆನ್ನಾಗಿ ಬರೆದಿದ್ದೀಯ.
ಬಹುಶ ಹಳ್ಳಿಯ ಆ ಚಿತ್ರಣ ಎಲ್ಲರಿಗೂ ಅದೇ ರೀತಿ ಅನುಭವ ಕೊಡುತ್ತದೆ ಅನ್ನೋದು ನನ್ನ ಅಭಿಪ್ರಾಯ.
ಟಿಕೆಟ್ ಇಲ್ಲದೆನೇ ನನ್ನನ್ನು ನಮ್ಮ ಲೊಕ್ಕನಹಳ್ಳಿಗೂ ಕಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು:) !!
ಅನುಭವಿಸದೇ ಈ ರೀತಿ ಬರೆಯೋಕೆ ಕಷ್ಟ ಕಣೋ, ನನಗೆ ಗೊತ್ತು.
ಇದೇ ರೀತಿ ಬರೀತಾ ಇರು.
superb
ಸಕ್ಕತ್ ಆಗಿ ಓದಿಸಿಕೊಂಡು ಹೋಯ್ತು. ಚೆನ್ನಾಗಿದೆ ನಟ್ಟೂ ಭಾಯ್ 🙂
Namma shaleya dingallanu nenapisidira
Danyavada natanna
Shubavagali
ನಟರಾಜ್ ಅವರೇ, ನಿಜಕ್ಕೂ ನಾವು ನಮ್ಮ ಎಳೆಯಾ ವಯಸ್ಸಿನ ಶಾಲಾ ದಿನಗಳಿಗೆ ಹಾಗೆ ವಾಹನವಿಲ್ಲದೇ, ಆಯಾಸವಿಲ್ಲದೇ ಖುಷಿ,ಖುಷಿಯಾಗಿ ಓಡಾಡಿಕೊಂಡು, ಗೆಳೆಯರನ್ನು ಮಾತಾಡಿಸಿಕೊಂಡು ಬಂದಂತಾಯಿತು..
ನಿಮ್ಮೆಲ್ಲರ ಪ್ರೋತ್ಸಾಹ ಹೀಗೆಯೇ ಇರಲಿ ಫ್ರೆಂಡ್ಸ್.. ಥ್ಯಾಂಕ್ ಯೂ..
Hai nata good memories