–ಇಂದಿರಾ ಮೋಟೆಬೆನ್ನೂರ
ಮಳೆ ಇಳೆ ಹಾಡು
ವರುಣ ಸುರಿದ ಮುತ್ತಿನ ಮಳೆಯ
ಮತ್ತಿನಲಿ ತೇಲಿಹೋಗಿಹಳು ಇಳೆ
ಅರುಣ ಬೀರಿದ ಕಿರಣ ಕೆನ್ನೆಯ
ಸೋಕಲು ನಾಚಿ ನೀರಾಗಿಹಳು ಇಳೆ
ಬಿಸಿಲ ಬೇಗೆಯಲಿ ಬಳಲಿ ಬಾಯಾರಿ
ಬಿರಿಬಿಟ್ಟ ಭುವಿಯ ಒಡಲು
ಸುರಿವ ವರ್ಷ ಧಾರೆಯಲಿ ಜಳಕ
ಮಾಡುತ ಪುಳಕಿತಳಾಗಿಹಳು ಇಳೆ
ಮುಸಲ ಧಾರೆಯ ಸಲಿಲ ಗಾನಕೆ
ಭುವಿಯ ಒಡಲಲಿ ನವಪಲ್ಲವ
ಹರಿವ ನೀರಿನ ಕಲಕಲ ನಿನಾದಕೆ
ಸೋಲುತ ಶರಣಾಗಿಹಳು ಇಳೆ
ಕಣ್ಣ ತೆರೆದು ಮಣ್ಣ ಕಣಕಣ
ಹೊನ್ನ ಮುಡಿಯುತ ಬಣ್ಣ ತಳೆಯಿತು
ಹಸಿರು ಸೀರೆಯ ಧರಿಸಿ ಹೊಸ ಉಸಿರ ಪಡೆದು ನಗುತಿಹಳು ಇಳೆ
ಮಳೆಯ ಸಿಂಚನ ಇಳೆಗೆ ರೋಮಾಂಚನ ಬೀಜ ಮೊಳಕೆ ಸಂಭ್ರಮ
ಇಂದು ಎಲ್ಲೆಡೆ ರಂಗು ರಂಗಿನ ಹಸಿರು ಕಿರಣ ಧರಿಸಿಹಳು ಇಳೆ
ಬಾನು ಬೀರಿದ ಮೋಡ ತೂರಿದ
ಹನಿ ಹಾಡಿಗೆ ಹೆಜ್ಜೆ ತಾಳ ಹಾಕಿದೆ
ಬಾಗಿ ಬಳುಕುತ ಕೆರೆ ತೊರೆಯಾಗಿ
ನದಿ ನವಿಲಾಗಿ ಕುಣಿದಿಹಳು ಇಳೆ
ನೆಲ ಮುಗಿಲಿನ ಪ್ರೇಮ ಬಂಧನ
ಮಳೆ ಇಳೆಯ ಚೆಲುನಂದನ
ಸುರಿದ ಸೋನೆ ಮಳೆಯ ಮಡಿಲಲಿ
ಮಗುವಾಗಿ ನೆನೆದಿಹಳು ಇಳೆ
ಮಣ್ಣಿನಲ್ಲಿ ಬೆಚ್ಚಗೆ ಅವಿತು ಕುಳಿತ
ಬೀಜ ಮೆಲ್ಲ ಕಣ್ಣ ತೆರೆದಿದೆ
ಭರದಿ ಬರುವ ಮಳೆಯ ಹಾಡಿಗೆ
ನಲಿದು ಅರಳಿಹಳು ಇಳೆ






0 Comments