ಪ್ರಗತಿಶೀಲ ರಾಜ್ಯದಲ್ಲಿ ಪ್ರಗತಿ ಪಥಿಕರ ಕಗ್ಗೊಲೆ
ಗಿರಿಜಾ ಶಾಸ್ತ್ರಿ
ಮುಂಬಯಿ
ಸುಮಾರು ಮೂರು ದಶಕಗಳಿಂದ ಸತತವಾಗಿ ಅಂಧಶ್ರದ್ಧೆಯ ವಿರುದ್ಧ ಹೋರಾಡಿದ ಹೋರಾಟಗಾರ ನರೇಂದ್ರ ಅಚ್ಯುತ ದಾಭೋಲ್ಕರ್ರನ್ನು ಪುಣೆಯಲ್ಲಿ ಇತ್ತೀಚೆಗೆ ಅಮಾನುಷವಾಗಿ ಕೊಲೆಗೈಯ್ಯಲಾಯಿತು.

21 ನೆಯ ಶತಮಾನಕ್ಕೆ ಕಾಲಿಟ್ಟಿರುವ ನಾವು ಅಭಿವೃದ್ಧಿ ಶೀಲ ರಾಷ್ಟ್ರವೆಂದು ಹೇಳಿಕೊಳ್ಳುತ್ತಿದ್ದೇವೆ. ವಿಪರ್ಯಾಸವೆಂದರೆ ಇಂತಹ ಆಧುನಿಕ ಸಾಮಾಜಿಕ ಸಂದರ್ಭಗಳಲ್ಲಿಯೇ ದಾಭೋಲ್ಕರ್ ಅವರು ತಮ್ಮ ಚಳವಳವನ್ನು ತೀವ್ರಗೊಳಿಸುವುದು ಅನಿವಾರ್ಯವಾಯಿತು.
ಅಂಧಶ್ರದ್ಧೆಯ ನಿರ್ಮೂಲನದ ಹರಿಕಾರರೆಂದೇ ಪ್ರಖ್ಯಾತರಾದ ದಾಭೋಲ್ಕರ್ ಅವರು ಹನ್ನೆರಡಕ್ಕೂ ಹೆಚ್ಚಿನ ಪುಸ್ತಕಗಳನ್ನು ಹೊರತಂದಿದ್ದಾರೆ. ಅಂಧಶ್ರದ್ಧಾ ವಿನಾಶಾಯ, ಅಂಧಶ್ರದ್ಧಾ: ಪ್ರಶ್ನ್ ಚಿನ್ಹ್ ಆಣಿ ಪೂರ್ಣ ವಿರಾಮ್, ಭ್ರಮ್ ಆಣಿ ನಿರಾಸ್, ಮತಿ-ಭನಾಮತಿ, ಶ್ರದ್ಧಾ ಅಂಧಶ್ರದ್ಧಾ, ತಿಮಿರತೂನಿ ತೇಜಾಕಡೆ (ತಿಮಿರದಿಂದ ಬೆಳೆಕಿನ ಕಡೆಗೆ), ಐಸೇ ಕೈಸೇ ಝಾಲೇ ಭೋಂದೂ-ಬುವಾಬಾಜೀಚ್ಸಾ ಪಂಚನಾಮ (ಅದು ಹೇಗೆ ಮೋಸಹೋದೆ-ಸ್ವಘೋಷಿತ ದೇವ ಮಾನವರ ಪಂಚನಾಮ) ಹೀಗೆ ಈ ಪುಸ್ತಕಗಳ ಹೆಸರುಗಳೇ, ಅಂಧ ಶ್ರದ್ಧೆಯ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಅವರ ಬದ್ಧತೆ ಹಾಗೂ ಅದಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಸಿದ ಅವರ ಕ್ರಿಯಾಶೀಲತೆಯ ಬಗ್ಗೆ ಹೇಳುತ್ತವೆ.
ಅಡಿಗರ ಕವಿತೆಯೊಂದರಲ್ಲಿ ‘ಕಾಣ್ಕೆ ಕಣ್ಕಟ್ಟುಗಳ ಗೆರೆ ತೆಳುವು’ ಎನ್ನುವ ಸಾಲು ಬರುತ್ತದೆ. ದಾಭೋಲ್ಕರ್ ಅವರ ಶ್ರದ್ಧೆ ಮತ್ತು ಅಂಧಶ್ರದ್ಧೆಯ ಕುರಿತ ವಿಚಾರಗಳೂ ಅಡಿಗರ ವಿಚಾರವನ್ನೇ ಅನುಮೋದಿಸುತ್ತದೆ. ಅವರ ‘ಶ್ರದ್ಧಾ ಅಂಧಶ್ರದ್ಧಾ’ ಎನ್ನುವ ಕೃತಿಯ ವಿಚಾರಗಳು ಈ ನೆಲೆಯಲ್ಲಿ ವಿಶಿಷ್ಟವಾಗಿವೆ. ಈ ಪುಸ್ತಕದ ‘ಶ್ರದ್ಧಾ ಆಣಿ ಅಂಧಶ್ರದ್ಧಾ’ ಎಂಬ ಶೀರ್ಷಿಕೆಯ ಮೊದಲನೆಯ ಅಧ್ಯಾಯದಲ್ಲಿ ಅಂಧಶ್ರದ್ಧೆ ಎಂದರೆ ಏನು? ನಾವು ಅಂಧಶ್ರದ್ಧೆಯ ನಿರ್ಮೂಲನೆಯ ಹೆಸರಿನಲ್ಲಿ ನಮ್ಮ ದೇವರು, ಧರ್ಮ, ಪರಂಪರೆಯನ್ನು ನೀರುಪಾಲಾಗಿಸುತ್ತಿದ್ದೇವೆಯೇ? ಎಂಬ ಚರ್ಚೆಯನ್ನು ಮಾಡುತ್ತಾರೆ. ಒಬ್ಬರ ಶ್ರದ್ಧೆ ಇನ್ನೊಬ್ಬರಿಗೆ ಅಂಧಶ್ರದ್ಧೆಯಾಗಬಹುದು, ಅದೇ ಇನ್ನೊಬ್ಬರ ಅಂಧಶ್ರದ್ಧೆ ಮತ್ತೊಬ್ಬರ ಶ್ರದ್ಧೆಯಾಗಬಹುದು. ಇವುಗಳ ನಡುವೆ ವ್ಯತ್ಯಾಸ ಬಹಳ ಸೂಕ್ಷ್ಮವಾದುದು. ಅಂಧಶ್ರದ್ಧೆಯೆಂದರೆ ಕೆಂಡವನ್ನು ಮುಚ್ಚಿದ ಬೂದಿಯಂತೆ. ಈ ಬೂದಿಯನ್ನು ಕೊಡವಿದಾಗ ಮಾತ್ರ ಒಳಗೆ ಶ್ರದ್ಧೆಯೆಂಬ ಹೊಳೆಯುವ ನಿಗಿ ನಿಗಿ ಕೆಂಡ ಕಾಣಿಸುತ್ತದೆ. ಶ್ರದ್ಧೆಯ ಕೆಂಡಕ್ಕೆ ಮುಚ್ಚಿದ ಬೂದಿಯನ್ನು ಕೊಡಹ ಬೇಕಾದ ಅವಶ್ಯಕತೆ ಇಂದು ನಮಗಿದೆ. ಆದರೆ ಹೀಗೆ ಕೆಂಡದ ಮೇಲಿನ ಬೂದಿಯನ್ನು ಕೊಡಹುವ ಭರದಲ್ಲಿ ಕೆಂಡವನ್ನೂ ಕೊಡವಬಾರದಷ್ಟೇ. ಧಾರ್ಮಿಕತೆ ಮತ್ತು ಹುಸಿ ಧಾರ್ಮಿಕತೆ ಬಗೆಗೆ ಅವರಿಗೆ ಎಂತಹ ಸೂಕ್ಷ್ಮಗ್ರಾಹೀ ಒಳನೋಟಗಳಿದ್ದವು ಎಂಬುದನ್ನು ಇದು ವ್ಯಕ್ತಪಡಿಸುತ್ತದೆ.
ಅಂಧಶ್ರದ್ಧೆಯಲ್ಲಿ ‘ಕಾಲ ಸಾಪೇಕ್ಷ’ ಮತ್ತು ‘ವ್ಯಕ್ತಿ ಸಾಪೇಕ್ಷ’ಗಳೆಂಬ ಎರಡು ವಿಧಗಳಿವೆಯೆಂದು ದಾಭೋಲ್ಕರ್ ಅಭಿಪ್ರಾಯ ಪಡುತ್ತಾರೆ. ಕಾಲ ಸಾಪೇಕ್ಷ ಅಂಧಶ್ರದ್ಧೆಗೆ ಅವರು ಕೊಡುವ ಉದಾಹರಣೆ ಎಂದರೆ, ನಮ್ಮ ಸ್ವಾತಂತ್ರ್ಯ ಪೂರ್ವದಲ್ಲಿ ಸತಿಪದ್ಧತಿ ನಿರ್ಮೂಲನೆ ಕಾಯ್ದೆ. ವಿಲಿಯಂ ಬೆಂಟಿಕನು ಈ ಕಾಯ್ದೆಯನ್ನು ಜಾರಿಗೊಳಿಸಿದಾಗ ಸಾಂಪ್ರದಾಯಕ ಹಿಂದೂಗಳು ಬ್ರಿಟಿಷ್ ಸರ್ಕಾರಕ್ಕೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಮೂಗುತೂರಿಸುವ ಹಕ್ಕಿಲ್ಲವೆಂದು ಬಂಡು ಕೋರಿದ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಅದೇ ವ್ಯಕ್ತಿ ಸಾಪೇಕ್ಷ ಅಂಧಶ್ರದ್ಧೆಗೆ ನಿದರ್ಶನವಾಗಿ, ಸತ್ಯ ಸಾಯಿಬಾಬಾ ಅವರು ನಿವರ್ಾತದಿಂದ ಬೂದಿ ಮತ್ತು ಇನ್ನಿತರ ಚಿನ್ನದ ಆಭರಣಗಳನ್ನು ಪವಾಡದಿಂದ ಸೃಷ್ಟಿಸಿ ಕೊಡುತ್ತಿದ್ದಾಗ, ಮಂತ್ರಿ ಮಹೋದಯರುಗಳೂ, ವಿದ್ವಜ್ಜನರೂ, ಮೇಧಾವಿಗಳೂ, ವಿಚಾರವಂತರೂ ಅವರ ಪದತಲದಲ್ಲಿ ಕುಳಿತು ಸೇವೆ ಗೈಯುತ್ತಿದ್ದ ಸಂಗತಿಗಳ ಕಡೆಗೆ ಗಮನ ಹರಿಸುತ್ತಾರೆ.

ಈ ಕೃತಿಯ ಮನೋಗತದಲ್ಲಿ (ಪಾಸ್ತಾವಿಕ) ಶ್ರದ್ಧೆ ಮತ್ತು ಅಂಧಶ್ರದ್ಧೆಯ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಾ, ಕೆಲವರಿಗೆ ಪ್ರತ್ಯೇಕ ಶ್ರದ್ಧೆಯೇ ಅಂಧಶ್ರದ್ಧೆ ಎನಿಸಬಹುದು. ಇನ್ನೂ ಕೆಲವರಿಗೆ ಶ್ರದ್ಧೆಯ ವಿನಾ ಮನುಷ್ಯ ಜಾಗೃತನಾಗಲಾರ ಎನಿಸಬಹುದು, ಮತ್ತೂ ಕೆಲವರಿಗೆ ಅಂಧಶ್ರದ್ಧೆಯ ಜೊತೆಗೆ ಶ್ರದ್ಧೆಯೂ ನಿರ್ಮೂಲವಾಗಿಬಿಡಬಹುದು ಎನಿಸಬಹುದು… ಅಂಧಶ್ರದ್ಧೆಯ ನಿರ್ಮೂಲನೆಯ ವಿಷಯದ ಮೇಲೆ ಇದು ನನ್ನ ಐದನೆಯ ಪುಸ್ತಕ, ಅನೇಕರಿಗೆ ಅಂಧಶದ್ಧೆಯ ನಿರ್ಮೂಲನೆಯ ಕುರಿತು ಹೇಳುವಂತಹುದೇನಿದೆ? ಪುನಃ ಪುನಃ ಹೇಳಿದ್ದನ್ನೇ ಹೇಳಿ ಪುಸ್ತಕದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೇ ಎಂದು ಎನಿಸಬಹುದು. ನನ್ನ ಮೊದಲನೆಯ ಪುಸ್ತಕ ‘ಭ್ರಮ್ ಆಣಿ ನಿರಾಸ್ ಅಂಧ ಶ್ರದ್ಧೆಯ ವಿವಿಧ ಪ್ರಕಾರಗಳನ್ನು ಒಳಗೊಂಡಿದ್ದರೆ, ಏಳು ಆವೃತ್ತಿಗಳನ್ನು ಕಂಡ ಎರಡನೆಯ ಪುಸ್ತಕ ‘ಅಂಧ ಶ್ರದ್ಧಾ: ಪ್ರಶ್ನ್ ಚಿನ್ಹ್ ಆಣಿ ಪೂರ್ಣ ವಿರಾಮ್’ ಅಂಧಶ್ರದ್ಧೆಯ ವಿವಿಧ ಸ್ವರೂಪಗಳನ್ನು ಚಿತ್ರಿಸುವ ಕೃತಿಯಾಗಿದೆ. ಮೂರನೆಯ ಕೃತಿಯಾದ ‘ಅಂಧಶ್ರದ್ಧಾ ವಿನಾಶಾಯ’ ಅಂಧಶ್ರದ್ಧಾ ನಿರ್ಮೂಲನ ಸಮಿತಿಯು ಕೈಗೊಂಡ ಚಳವಳಗಳು ಮತ್ತು ವಾಸ್ತವ ಸಂಘರ್ಷದ ಅನುಭವಗಳನ್ನು ವ್ಯಕ್ತಪಡಿಸುವ ಕೃತಿಯಾಗಿದೆ.
ನಾಲ್ಕನೆಯದಾದ ‘ವಿಚಾರ್ ತರ್ ಕರಾಲ’ (ವಿಚಾರವನ್ನಾದರೂ ಮಾಡುವಿರಾ) ಕೃತಿಯ ಮೊದಲ ಭಾಗವು ವೈಜ್ಞಾನಿಕ ದೃಷ್ಟಿಕೋನ, ವಿವೇಕವಾದ, ಧರ್ಮ ಚಿಕಿತ್ಸೆ ಮುಂತಾದ ವೈಚಾರಿಕ ಲೇಖನಗಳನ್ನು ಒಳಗೊಂಡಿದ್ದರೆ, ಎರಡನೆಯ ಭಾಗವು ವಾಸ್ತವದಲ್ಲಿ ಅಂತಹ ಸಿದ್ಧಾಂತಗಳನ್ನು ಆತ್ಮಸಾತ್ ಮಾಡಿಕೊಳ್ಳಲು ಇರುವ ಅಡ್ಡಿ ಆತಂಕಗಳ ಕುರಿತಾಗಿದೆ. ಎನ್ನುತ್ತಾರೆ. ಶ್ರದ್ಧೆ ಅಂಧಶ್ರದ್ಧೆಯ ಕುರಿತಾಗಿ ಅನೇಕ ಆಕ್ಷೇಪಗಳಿವೆ, ಹತ್ತು ಹಲವು ವಿಚಾರಗಳಿವೆ. ಈ ನಿಟ್ಟಿನಲ್ಲಿ ಸಮಿತಿಯ ಕಾರ್ಯ ರೂಪಗಳು ಭಿನ್ನವಾಗಿವೆ, ಉಪಯುಕ್ತವಾಗಿವೆ ಮತ್ತು ವಸ್ತು ನಿಷ್ಠವಾಗಿವೆ. ಈ ಪುಸ್ತಕ ಪ್ರಸಕ್ತ ವಿಷಯದ ಮೇಲೆ ಹೊಸ ಚಚರ್ೆಯನ್ನು ಎತ್ತಬಹುದೇನೋ ಎಂದು ತಮ್ಮ ಐದನೆಯ ಕೃತಿ ಹೊರಬರಲು ಕಾರಣಗಳನ್ನು ಕೊಡುತ್ತಾರೆ.
ಅವರ ಐದನೆಯ ಕೃತಿಯಾದ ‘ಶ್ರದ್ಧಾ ಅಂಧಶ್ರದ್ದಾ’, ವೈಜ್ಞಾನಿಕ ದೃಷ್ಟಿಕೋನ, ಫಲಜ್ಯೋತಿಷ್ಯ ವಿಚಾರಗಳು, ದೇವಿ ಮೈಮೇಲೆ ಬರುವುದು, ಭೂತ ಚೇಷ್ಟೆ, ಅಂಧಶ್ರದ್ಧೆ ನಿಮರ್ೂಲನೆಯ ವ್ಯಾಪಕವಾದ ವೈಜ್ಞಾನಿಕ ಭೂಮಿಕೆ, ಮಹಿಳೆ ಮತ್ತು ಅಂಧಶ್ರದ್ಧೆ ನಿರ್ಮೂಲನೆ, ಅಂಧಶ್ರದ್ಧೆಯ ನಿರ್ಮೂಲನೆ ಮತ್ತು ನೀತಿ ವಿಚಾರ ಹೀಗೆ ಅಂಧಶ್ರದ್ಧೆಯ ವಿಭಿನ್ನ ಆಯಾಮಗಳನ್ನು ಒಳಗೊಂಡಿರುವುದು ಮೇಲಿನ ಅವರ ಮಾತುಗಳನ್ನು ಪುಷ್ಟೀಕರಿಸುತ್ತವೆ.
‘ಐಸೇ ಕೈಸೇ ಝಾಲೇ ಭೋಂದೂ’ (ಅದು ಹೇಗೆ ಮುಗ್ಧನಾದೆ)-ಬುವಾಬಾಜೀಚ್ಸಾ (ಸ್ವಘೋಷಿತ ದೇವದೂತರ) ಪಂಚನಾಮಾ, ಎಂಬ ತಮ್ಮ ಕೃತಿಯ ‘ಮನೋಗತ’ ದಲ್ಲಿ ಅಂಧ ಶ್ರದ್ಧೆಯ ಕುರಿತ ಇದು ನನ್ನ ಹತ್ತನೆಯ ಪುಸ್ತಕ. ಮೊದಲ ಪುಸ್ತಕ ಬರೆದಾಗ ಬರೆದದ್ದೆಲ್ಲಾ ಇನ್ನು ಮುಗಿಯಿತು ಎಂಬ ಸಂಪನ್ನ ಭಾವನೆ ಬಂದಿತ್ತು. ಆದರೆ ಈಗ ವಿಸ್ತೃತಗೊಳ್ಳುತ್ತಿರುವ ಇದರ ಹರಹನ್ನು ನೋಡಿದರೆ ವಿಸ್ಮಯವಾಗುತ್ತದೆ ಎನ್ನುತ್ತಾರೆ. ಅವರು ತಮ್ಮ ಪ್ರತಿ ಪುಸ್ತಕದ ‘ಮನೋಗತ’ ದಲ್ಲಿಯೂ ಕೂಡ ಹೀಗೆ ಮತ್ತೆ ಮತ್ತೆ ಬರೆಯಬೇಕಾಗಿ ಬಂದಿರುವ ಅನಿವಾರ್ಯತೆಯ ಕುರಿತು ಮಾತನಾಡುತ್ತಾರೆ. ಅಂಧಶ್ರದ್ಧೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಅವರು ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ, ಆರ್ಥಿಕ ಹೀಗೆ ಸರ್ವ ಅಂಧಶ್ರದ್ಧೆಗಳ ವಿರುದ್ಧ ಸಮರ ಹೂಡಬೇಕಾದ ಅಗತ್ಯದ ಮೇಲೆ ಒತ್ತುಕೊಡುತ್ತಾರೆ.

ಹೀಗೆ ಸಾಕು ಸಾಕೆಂದೇ ದಾಭೋಲ್ಕರ್ರು ಹನ್ನೆರಡಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಈ ಮಾತುಗಳು ಇಂದು ಅಂಧಶ್ರದ್ಧೆಯ ಕಬಂಧ ಬಾಹುವಿನ ವಿಸ್ತೃತ ವಿಕೃತ, ರೂಪಗಳನ್ನು ಹೊರಗೆಡಹುತ್ತದಲ್ಲದೇ 21 ನೇ ಶತಮಾನದ ಸಾಂಸ್ಕೃತಿಕ ವೈರುಧ್ಯಗಳನ್ನೂ ಬಯಲಾಗಿಸುತ್ತದೆ.
’ಅಂಧಶ್ರದ್ಧೆ ನಿರ್ಮೂಲನೆಯ ಹೆಸರಿನಲ್ಲಿ ನೀವು ಜನರ ಶ್ರದ್ಧೆಯನ್ನೇ ನಿರ್ಮೂಲನೆ ಮಾಡಲು ಹೊರಟಿದ್ದೀರಾ?’
’ನಿಮ್ಮ ಹಲ್ಲೆಗಳೆಲ್ಲಾ ಕೇವಲ ಹಿಂದು ಧರ್ಮದ ಮೇಲೆಯೇ ಏಕೆ? ಸ್ವಲ್ಪ ಮುಸ್ಲಿಮ್, ಕ್ರಿಶ್ಚಿಯನ್ ಧರ್ಮಗಳ ಬಗ್ಗೆಯೂ ಹೇಳಿ’
ಇವು ದಾಭೋಲ್ಕರ್ ಅವರನ್ನು ಮತ್ತೆ ಮತ್ತೆ ಕೇಳಿದ ಪ್ರಶ್ನೆಗಳು. ಕೆಲವರು ಅವರ ಚಳವಳದ ಬಗ್ಗೆ ಶಂಕೆಯನ್ನು ಹರಡುವ ಉದ್ದೇಶದಿಂದಲೇ ಕೇಳಿದರೆ, ಇನ್ನು ಕೆಲವರು ಅಜ್ಞಾನದಿಂದಲೂ ಕೇಳುತ್ತಾರೆ. ಕಾರಣಗಳು ಏನೇ ಇದ್ದರು ಜನಸಮೂಹದಲ್ಲಿ ಚಳವಳದ ಬಗ್ಗೆ ಅಕಾರಣವಾದ ಕುತೂಹಲ, ಸಂಭ್ರಮಗಳು ಹುಟ್ಟಿಕೊಳ್ಳುವಲ್ಲಿ ಎರಡೂ ರೀತಿಯ ಜನರ ಪಾತ್ರವಿರುತ್ತದೆ ಎಂದು ಹೇಳುತ್ತಾರೆ. (ಮನೋಗತ, ‘ಅಂಧಶ್ರದ್ಧಾ ವಿನಾಶಾಯ’)
ಹನ್ನೆರಡು ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ದಾಭೋಲ್ಕರ್, ತಮ್ಮ ವೈಯಕ್ತಿಕ ಜೀವನದ ಸವಲತ್ತುಗಳಿಂದ ತೃಪ್ತರಾಗಿ ಎಲ್ಲ ವೈದ್ಯರ ಹಾಗೆ ಐಷಾರಾಮದ ಜೀವನ ನಡೆಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಹನ್ನೆರೆಡು ವರುಷದ ತಮ್ಮ ವೈದ್ಯಕೀಯ ಸೇವೆಗೆ ವಿದಾಯ ಹೇಳಿ ಸಾಮಾಜಿಕ ನ್ಯಾಯಕ್ಕಾಗಿ ಚಳವಳಕ್ಕೆ ಧುಮುಕಿದರು. ವೈದ್ಯವೃತ್ತಿಯನ್ನು ತ್ಯಜಿಸಿದ ಅವರು ಹೆಸರಾಂತ ಸಾಮಾಜಿಕ ಕಾರ್ಯಕರ್ತ, ಕಾರ್ಮಿಕ ವರ್ಗದ ನಾಯಕನೆಂದೇ ಹೆಸರಾದ ಬಾಬಾಸಾಹೇಬ್ ಪಾಂಡುರಂಗ್ ಅಧವ್ ಅವರ “One Village , One Drinking Water Well” ಚಳವಳಿಯಲ್ಲಿ ತೊಡಗಿಕೊಂಡರು. 1989 ರಲ್ಲಿ ‘ಭಾರತೀಯ ಅಂಧಶ್ರದ್ಧಾ ನಿರ್ಮೂಲನ ಸಮಿತಿ’ಯ ಸದಸ್ಯರಾಗುತ್ತಲೇ ರಾಜ್ಯಮಟ್ಟದಲ್ಲಿ, ಸ್ವಘೋಷಿತ ದೇವ ಮಾನವರನ್ನು, ಮಂತ್ರ ತಂತ್ರಗಳ ಪವಾಡ ಪುರುಷರನ್ನು, ಹುಸಿ ಧಾರ್ಮಿಕತೆಯನ್ನು ಪ್ರಶ್ನಿಸುವ ಒಂದು ವೇದಿಕೆಯನ್ನು ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ’ ಎನ್ನುವ ಹೆಸರಿನಲ್ಲಿ ಸ್ಥಾಪಿಸಿದರು. ಸಾನೆ ಗುರೂಜಿಯವರು ಪ್ರಾರಂಭಿಸಿದ ‘ಸಾಧನಾ’ ಪತ್ರಿಕೆಯ ಸಂಪಾದಕರಾಗಿ ಅದನ್ನು ಮುಂದುವರೆಸುವುದರ ಮೂಲಕ ತಮ್ಮ ತಾತ್ವಿಕ ನೆಲೆಗಟ್ಟನ್ನು ಗಟ್ಟಿಗೊಳಿಸಿದರು.
Federation of Indian Rationalist Associations ನ ಉಪಾಧ್ಯಕ್ಷರಾದುದೇ ಅಲ್ಲದೇ, ಹೆಸರಾಂತ ವಿಚಾರವಾದಿ ಸನಾಲ್ ಎಡಮರುಕು ಅವರ ಜೊತೆಯೂ ಬಹಳ ಹತ್ತಿರದ ಸಂಬಂಧವನ್ನು ಹೊಂದಿದ್ದರು. 1990 ರಿಂದ 2010 ರವರೆಗೆ ದಲಿತ ಪರ ಹೋರಾಟಗಳಲ್ಲಿ, ಜಾತಿಭೇದದ ವಿರುದ್ಧ ಸಂಘರ್ಷಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತಾರಾಷ್ಟ್ರೀಯ ಖ್ಯಾತಿಯ ಖಗೋಲ ವಿಜ್ಞಾನಿ ಜಯಂತ ನಾರಲೀಕರ್ ಅವರ ಜೊತೆಗೂಡಿ ಫಲಜ್ಯೋತಿಷ್ಯದ ವಿರುದ್ಧ ಪ್ರತಿಭಟಿಸಿದರು. ಮರಾಠವಾಡ ವಿಶ್ವವಿದ್ಯಾಲಯವನ್ನು ಅಂಬೇಡ್ಕರ್ ವಿಶ್ವವಿದ್ಯಾಲಯವನ್ನಾಗಿ ಮರುನೇಮಕ ಮಾಡಬೇಕೆಂಬ ಅಹವಾಲಿಗೆ ಇವರೂ ದನಿಗೂಡಿಸಿದರು.
2013 ಮಾರ್ಚ್ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ನೀರಿನ ಅಭಾವದಿಂದಾಗಿ ಜನತೆ ಕಂಗೆಟ್ಟ ಸಮಯದಲ್ಲಿ ಆಸಾರಾಂ ಬಾಪು ಅವರು ನಾಗಪುರದಲ್ಲಿ ಹೋಳಿ ಹಬ್ಬಕ್ಕೆಂದು ಸು. 50,000 ಲೀಟರುಗಳಷ್ಟು ನೀರನ್ನು ಪೋಲು ಮಾಡಿದಾಗ ಅದರ ವಿರುದ್ಧ ಧ್ವನಿಯನ್ನು ಎತ್ತ್ತಿದರು. ದಾಭೋಲ್ಕರ್ ಅವರ ಸಾಮಾಜಿಕ ಕಳಕಳಿ ಕೇವಲ ಅಂಧಶ್ರದ್ಧೆಯ ನಿರ್ಮೂಲನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇದಕ್ಕೆ ಅವರು ಪುಣೆಯ ‘ಪರಿವರ್ತನ್’ ಸಂಸ್ಥೆಯ ಕಾರ್ಯದರ್ಶಿಯಾಗಿ ಕೈಗೊಂಡ ಯೋಜನಗಳೇ ಸಾಕ್ಷಿಯಾಗಿವೆ. ಮಾದಕ ವ್ಯಸನಿಗಳ ಪುರ್ನವಸತೀಕರಣ, ಸಾವಯವ ಕೃಷಿ, ಯುವ ಜನತೆಯ ಕೌನ್ಸ್ಸಲಿಂಗ್, ಗ್ರಾಮೀಣ ಮಹಿಳೆಯರಿಗೆ ವೈದ್ಯಕೀಯ ತರಬೇತಿ (Paramedical Training) ಮುಂತಾದವು ಅವರ ವ್ಯಾಪಕವಾದ ಕಾರ್ಯಕ್ಷೇತ್ರವನ್ನು ಅನಾವರಣಗೊಳಿಸುತ್ತದೆ. ಅವರು ಸ್ಥಾಪಿಸಿದ ‘ಸಾಮಾಜಿಕ ಕೃತಜ್ಞತಾ ನಿಧಿ 23 ವರುಷಗಳಿಂದ ಸತತವಾಗಿ, ನಿಸ್ವಾರ್ಥವಾಗಿ ಸಮಾಜಸೇವೆ ಸಲ್ಲಿಸುವ 25 ಕಾರ್ಯಕರ್ತರಿಗೆ ಕೃತಜ್ಞತಾ ರೂಪದಲ್ಲಿ ತಲಾ 1000 ರೂಗಳಂತೆ ಪ್ರತಿವರ್ಷ ಪ್ರದಾನಮಾಡುತ್ತಿದೆ. ಇದು ದಾಭೋಲ್ಕರ್ ಅವರ ಬಹುಮುಖ ಆಸಕ್ತಿಗಳ ಮೇಲೆ ಬೆಳಕು ಚೆಲ್ಲುತ್ತದೆ.
2010 ರಲ್ಲಿ ಅಂಧಶ್ರದ್ಧಾ ನಿರ್ಮೂಲನೆಯ ಕಾಯ್ದೆಯನ್ನು (Anti-superstition Law) ಜಾರಿಗೊಳಿಸಬೇಕೆಂಬ ಅವರ ಅನೇಕ ಪ್ರಯತ್ನಗಳು ವಿಫಲವಾದರೂ ಅವರು ಹೋರಾಟವನ್ನು ಮುಂದುವರೆಸಿದರು. ಅವರ ಸಾಹಸ ಕಾರ್ಯಗಳಿಂದಾಗಿ 1989 ರಿಂದಲೂ ಅನೇಕ ಸಲ ಜೀವ ಬೆದರಿಕೆಗಳನ್ನು ಎದುರಿಸಿದರೂ ಪೋಲೀಸ್ ರಕ್ಷಣೆಯನ್ನು ನಿರಾಕರಿಸಿದರು. ಮಾಟ ಮಂತ್ರ ವಿರೋಧಿ ಮಸೂದೆಯನ್ನು (Anti Black Magic Bill) ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿದಾಗ ಇದು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲೆ ಮಾರಕ ಪ್ರಭಾವ ಬೀರುವುದೆಂದು, ಶಿವಸೇನೆ, ಭಾ.ಜ.ಪ ಮುಂತಾದ ರಾಜಕೀಯ ಪಕ್ಷಗಳೇ ಅಲ್ಲದೇ, ವಾರಕರಿ ಸಮುದಾಯ ಹಾಗೂ ಹಿಂದೂ ಉಗ್ರವಾದೀ ಸಂಘಟನೆಗಳು ವಿರೋಧಿಸಿದವು. ಧರ್ಮವಿರೋಧಿ ಹಣೆಪಟ್ಟಿಯನ್ನು ಕಟ್ಟಿಕೊಂಡ ದಾಭೋಲ್ಕರ್, ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಮಸೂದೆಯಲ್ಲಿ ಎಲ್ಲಿಯೂ ಯಾವುದೇ ದೇವರ, ಧರ್ಮದ ಉಲ್ಲೇಖವಿಲ್ಲ. ನಮ್ಮ ಸಂವಿಧಾನವು ಯಾವುದೇ ಧರ್ಮವನ್ನು ಪಾಲಿಸುವ ಹಕ್ಕನ್ನು ಪ್ರಜೆಗಳಿಗೆ ಕೊಟ್ಟಿದೆ. ಅದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಇಲ್ಲಿ ನನ್ನ ಮುಖ್ಯ ವಿರೋಧವಿರುವುದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆಯ ಬಗೆಗಷ್ಟೇ ಎಂದು ತಾವು ಸಾಯುವ ಕೆಲವೇ ದಿನಗಳ ಹಿಂದೆ ಹೇಳಿದ್ದರು.
ಆಗಸ್ಟ್ 20 ರಂದು ತಮ್ಮ ಪುಣೆಯ ಮನೆಯಿಂದ ಮುಂಜಾನೆ ವಾಯುವಿಹಾರಕ್ಕೆ ಹೊರಟ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗರೆದರು. ದಾಭೋಲ್ಕರ್ ನೆಲಕ್ಕುರುಳಿದರು. ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಕೊಂದವರಲ್ಲಿ ವೈದ್ಯರೂ ಇದ್ದರೆನ್ನಲಾಗಿದೆ. ಆದರೆ ಅವರನ್ನು ಹಿಡಿಯುವಲ್ಲಿ ಸಕರ್ಾರ ಇನ್ನೂ ಸಫಲವಾಗಿಲ್ಲ. ಅಂಧಶ್ರದ್ಧೆಯನ್ನು ನಿಮರ್ೂಲನೆ ಮಾಡಲು ಹೊರಟ, ಸಾಂಸ್ಕೃತಿಕ ನೈರ್ಮಲ್ಯವನ್ನು ಕಾಪಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ವ್ಯಕ್ತಿಯನ್ನು ಅಮಾನವೀಯವಾಗಿ ಹತ್ಯೆಗೈಯಲಾಯಿತು. ಲಾಗಾಯ್ತಿನಿಂದಲೂ ನಮ್ಮ ದೇಶದಲ್ಲಿ ಇದುವೇ ನಡೆಯುತ್ತಾ ಬಂದಿದೆ. ಸಾಮಾಜಿಕ ನ್ಯಾಯಕ್ಕಾಗಿ ನಡೆಸುವ ಹೋರಾಟವೆನ್ನುವುದು ಪಟ್ಟಭದ್ರ ಹಿತಾಸಕ್ತಿಗಳ ಗುಂಡಿನ ದಾಳಿಗೆ ತನ್ನ ಎದೆಯನ್ನು ಯಾವಾಗಲೂ ತೆರೆದಿಟ್ಟುಕೊಂಡೇ ಇರಬೇಕಾಗುತ್ತದೆ. ದಾಭೋಲ್ಕರ್ ಅವರು ಮಡಿದ ಎರಡು ದಿನಗಳಲ್ಲಿಯೇ, ಅವರ ಅಸಮಾಧಾನಕ್ಕೆ ಕಾರಣವಾದ ಮಹಾರಾಷ್ಟ್ರ ರಾಜ್ಯ ಸಂಪುಟವು ಮಾಟ ಮಂತ್ರ ವಿರೋಧಿ ಮಸೂದೆ ಮತ್ತು ಅಂಧಶ್ರದ್ಧಾ ನಿರ್ಮೂಲನ ಸುಗ್ರೀವಾಜ್ಞೆಯನ್ನು (Anti-superstition ordinance) ಜಾರಿಗೊಳಿಸಿತು. ಆದರೆ ಅದು ಕಾಯ್ದೆಯಾಗಲು ಇನ್ನೂ ಪಾರ್ಲಿಮೆಂಟಿನ ಒಪ್ಪಿಗೆಯನ್ನು ಕಾಯಬೇಕಾಗಿದೆ.






ಸತ್ವಯುತ ಹೋರಾಟಗಾರರು ಸತ್ತ ಮೇಲೆ ಸತ್ಕರಿಸುವುದೇ ಈ ಆಳ್ವಿಗರಲ್ಲಿ ಅಡಗಿರುವ ಜಾಣ್ಮೆ? ಬದುಕಿದ್ದಾಗ ಈ ಕಾಯ್ದೆ ಜಾರಿಗೊಂಡಿದ್ದರೆ ಅವರ ನೆರವನ್ನು ಪಡೆದು ಇನ್ನಶ್ಟು ಉತ್ತಮವಾಗಿ ಈ ಕಾಯ್ದೆಯನ್ನು ರೂಪಿಸಬಹುದಾಗಿತ್ತು.
Very well written – true to the core
-Anil Talikoti