ತರಬೇನಳ್ಳಿ ಷಡಕ್ಷರಿ
“ಬೆಳಗೆದ್ದು ನಾನು ಯಾರ್ಯಾರಾ ನೆನೆಯಾಲೇ” ಅಂತಾ ಬರೋ ನಾ ಓದಿದ ಪದ್ಯಕ್ಕೆ ಇಲ್ಲಿ ಈ ಪ್ರಕಾಶನ್ನ ಮೊದಲೇ ಸೇರಿಸಿಕೊಳ್ಳ ಬೇಕಾಗುತ್ತಿತ್ತೇನೋ! ಹಾಗಿತ್ತು ಇವನ ಪ್ರಭಾವ. ಯಾರ್ದು ಅಂದ್ರಾ? ಅದೇ… ನಮ್ ತಿಮ್ನಳ್ಳಿ ಪ್ರಕಾಶಂದು!!
ತಿಮ್ಮನಹಳ್ಳಿ ನಮ್ಮ ಸುತ್ತಮುತ್ತಲಿನ ಅನೇಕ ತಾಲೂಕುಗಳಲ್ಲಿ ಮನೆಮಾತಾಗಿತ್ತು. ಕಾರಣ ಆ ಊರು ಇದ್ದ ಪರಿಸರದಿಂದ ಸುತ್ತಮುತ್ತ ಫಲವತ್ತಾದ ನೆಲ ಹಾಗೂ ಹರಿಯುವ ನೀರಿನಿಂದ ತೆಂಗು, ಭತ್ತ ಮತ್ತು ಅಡಕೆ ಬೆಳೆ ಬೆಳೆದು ಅಲ್ಲಿಯ ಜನ ಸಿರಿವಂತರೂ ಉದ್ಯಮಶೀಲರೂ ಆಗಿದ್ದರು.
ಈ ಊರಿನ ಜನರು ಆ ಸುತ್ತಮುತ್ತ ಇರುವ ನಾಲ್ಕಾರು ತಾಲ್ಲೂಕು ಕೇಂದ್ರಗಳಲ್ಲಿ ಅನೇಕ ವ್ಯಾಪಾರ, ವಹಿವಾಟು, ಅಂಗಡಿ ಮುಂಗಟ್ಟು,ಟಾಕೀಸು, ಸಾರಿಗೆ, ಹೋಟೆಲ್, ಇನ್ನೂ ಮುಂತಾದ ಹೆಚ್ಚೆಚ್ಚು ಬಂಡವಾಳ ಹೂಡುವ ಸಾಧ್ಯತೆ ಇದ್ದ ಎಲ್ಲ ಉಧ್ಯಮಗಳಲ್ಲಿ ತೊಡಗಿದ್ದರು.ನಮ್ಮ ಕಥಾನಾಯಕನಾದ ಪ್ರಕಾಶನೂ ಕೂಡ ಇದೇ ಊರಿನಲ್ಲಿ ಹುಟ್ಟಿ ಬೆಳೆದವನು.
ನಮ್ಮ ಸುತ್ತಮುತ್ತಾ ತುಂಬಾ ಫೇಮಸ್ಸು. ಇವನ ಹೆಸರು ಕೇಳದೇ ಇರುವವರೇ ಇಲ್ಲಾ, ಇವನ ಹೆಸರು ಇಲ್ಲಿಯ ಎಲ್ಲ ಜನರ ಬಾಯಲ್ಲಿ ದಿನ ಹುಟ್ಟಿ ಮುಳುಗುವುದರೊಳಗೆ ಕನಿಷ್ಟ ಹತ್ತಾರು ಬಾರಿಯಾದರೂ ಬರದಿದ್ದರೆ ಅವನು ಪ್ರಕಾಶನೇ ಅಲ್ಲ. ಅವ ಜನರ ಬದುಕಲ್ಲಿ, ಮನಸಲ್ಲಿ, ರಕ್ತಸಂಭಂದಿಯಂತೆ ಬೆಸೆದುಕೊಂಡಿದ್ದ.
ಇವನ ಹೆಸರು, ಬಣ್ಣ, ಗಾತ್ರ ಎಲ್ಲಾ ಒಂದೇ. ಇವನೆಂದರೆ ಇವನದೇ ಒಂದು ಬ್ರಾಂಡು ನೇಮು ಹಾಗೂ ಫೇಮು. ಇವನೆಂದರೆ ನಮ್ಮ ಸುತ್ತಮುತ್ತಲಿನ ಅನೇಕ ತಾಲೂಕುಗಳ ಬೆಸೆಯುವ ಜೀವನಾಡಿಯಂತಿದ್ದ. ತಿಪಟೂರಿನಿಂದ ಪ್ರಾರಂಭವಾಗಿ,ಹುಳಿಯಾರು, ಶಿರಾ, ಹೊಸದುರ್ಗ,ಕೇಬಿ ಕ್ರಾಸುಗಳನ್ನೆಲ್ಲ ಸುತ್ತುವರಿದು ಬಂದು ನಮ್ಮ ತಾಲೂಕಾದ ಚಿಕ್ಕನಾಯಕನಹಳ್ಳಿಗೆ ಕೊನೆಗೊಳ್ಳುವ ಎಲ್ಲ ರಸ್ತೆ ಮತ್ತು ಆ ರಸ್ತೆಗಳ ಪಕ್ಕದ ಎಲ್ಲ ಹಳ್ಳಿಗಳ ಜನರ ಬದುಕು, ಕಷ್ಟ,ಸುಖ, ಪರದಾಟ,ಹಬ್ಬ ಹರಿದಿನ, ಜಾತ್ರೆಗಳ,ಸಂಭ್ರಮ, ಜನ, ಜಾನುವಾರುಗಳ ಹರಿದಾಟ,ಎಲ್ಲವನ್ನೂ ನಿಯಂತ್ರಿಸಬಲ್ಲವನಾಗಿದ್ದ.
“ಬೆಳಗೆದ್ದು ನಾನು ಯಾರ್ಯಾರಾ ನೆನೆಯಾಲೇ” ಅಂತಾ ಬರೋ ನಾ ಓದಿದ ಪದ್ಯಕ್ಕೆ ಇಲ್ಲಿ ಈ ಪ್ರಕಾಶನ್ನ ಮೊದಲೇ ಸೇರಿಸಿಕೊಳ್ಳ ಬೇಕಾಗುತ್ತಿತ್ತೇನೋ! ಹಾಗಿತ್ತು ಇವನ ಪ್ರಬಾವ. “ಇನ್ನೂ ಸ್ನಾನಾನೇ ಮಾಡಿಲ್ಲಾ, ತಿಂಡಿ ತಿನ್ನೋದ್ಯಾವಾಗಾ? ಸ್ಕೂಲಿಗೆ ಹೊರಡೋದ್ಯಾವಾಗ!ಪ್ರಕಾಶ ಕೆ.ಬಿ ಕ್ರಾಸ್ ಕಡೀಕೆ ಹೋಗಿ ಆಗ್ಲೇ ಎಷ್ಟು ಹೊತ್ತಾಯ್ತೂ. 7ಘಂಟೆಗೇ ಹೋಗಿದಾನೆ ಇವತ್ತು ಬೇರೇ.ಇನ್ನೇನು ಬಿ.ಪಾಳ್ಯದ ಹತ್ತಿರಕ್ಕೆ ಬಂದೇ ಬಿಟ್ಟಿರ್ತಾನೇನೋ! ಬೇಗ ತಿಂಡಿ ತಿಂದು ಹೊರಡು, ಇವತ್ತು ಸ್ನಾನ ಬೇಡಾ ಬಿಡು” ಎಂದು ಅವಸರಿಸುವ ಅಮ್ಮಂದಿರ ಮಾತಿಗೆ ಮರುಮಾತಾಡದೇ ತಿಂಡಿ ತಿಂದು ಬ್ಯಾಗು ಹಿಡಿದು ಓಡುವ ಚಿಕ್ಕವರಿಂದಾ ಹಿಡಿದು ಪ್ರೈಮರಿ,ಹೈಸ್ಕೂಲ್, ಡಿಗ್ರೀ ಕಾಲೇಜು ಓದುವ ನಮ್ಮ ಭಾಗದ ಎಲ್ಲ ಮಕ್ಕಳ ಓದಿನ ಭವಿಷ್ಯದ ರೂವಾರಿಯಾಗಿದ್ದ ಈತ.
ಯಾಕಂದ್ರೆ ಈ ಪ್ರಕಾಶ ಅವರನ್ನೇನಾದ್ರೂ ಬಿಟ್ಟೋದ್ರೇ, ಅವತ್ತು ಅವರೆಲ್ಲರಿಗೂ ಬೆಳಗಿನ ಕ್ಲಾಸ್ ಗೋವಿಂದಾ ಗೋವಿಂದಾ. ಆಮೇಲೆ ಎಂಟತ್ತು ಕಿಲೋಮೀಟರ್ ಸೈಕಲ್ಲು ಹತ್ತಿ ಆ ಮೂರ್ನಾಲ್ಕು ಕಡಿದಾದ ದಿಬ್ಬತುಳಿದು ಚಿನಾಹಳ್ಳಿಗೆ ತಲುಪುವ ಹೊತ್ತಿಗೆ ಸಾಕಪ್ಪಾ ಸಾಕು ಈ ಓದುವ ಸಹವಾಸವೆನ್ನಿಸಿಬಿಡುತ್ತಿತ್ತು ಅವರಿಗೆ.
ಹಾಗಾಗಿ ಈ ಪ್ರಕಾಶ ನಮ್ಮ ಸುತ್ತಮುತ್ತಲಿನ ಅನೇಕರ ಓದಿನ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದ್ದ. ಅವನಿಲ್ಲದ, ಅವನ ನೆನಪಿಲ್ಲದ, ನಮ್ಮ ಶಾಲಾ ದಿನಗಳ ದಿನಚರಿಯೇ ನಮ್ಮ ನೆನಪಿನಲ್ಲಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವ ನಮ್ಮ ನೆನಪುಗಳನ್ನು ಅತಿಕ್ರಮಿಸಿದ್ದ.ಈ ಸುತ್ತಮುತ್ತಲಿನ ಅನೇಕರ ಅಂದಿನ ಓದಿನ ಕನಸು ನನಸಾಗಿಸಿಕೊಳ್ಳಲು ಈತನೇ ಮೂಲ ಕಾರಣ ಪುರುಷನೂ ಆಗಿದ್ದ.
***
“ಸಿವರುದ್ರಣ್ಣಾ, ಪ್ರಕಾಶ ಕೆ.ಬಿ ಕ್ರಾಸ್ ಕಡೀಕೆ ಹೋದ್ನಾ? ಅವ್ನು ಹೋಗಿ ಆಗ್ಲೇ ಎಷ್ಟು ಹೊತ್ತಾತೂ?
“ಏ ಇನ್ನೂ ಈಗ ಹೋದ ಕಣಣ್ಣಾ ಅವನು ಹೋದಾ ಅಂದ್ರೆ 1 ಘಂಟೆ ಗ್ಯಾರಂಟೀ ಕಣಣ್ಣಾ. ಇವತ್ತು ನಿಂಗೆ ಪಿಚ್ಚರ್ರು ಮಿಸ್ಸಾಗಲ್ಲಾ ಬಿಡು.ಗ್ಯಾರಂಟೀ ಮಾಡ್ಕೋ. ನಿನ್ನ ಮನೇಯವರನ್ನೂ ಕರ್ಕಂಬಂದಿದ್ದೀಯಾ, ಸರೀ ಬಿಡು ಇಬ್ಬರೂ ಸೋಮವಾರದ ಸಂತೆ ಮುಗಿಸ್ಕೋಂಡು ಹಂಗೇ ಹಾಲು ಜೇನು ಪಿಚ್ಚರ್ರಿಗೋಗ್ರೀ. ಎಸ್. ಎಲ್. ಎನ್ ಟಾಕೀಸಲ್ಲೈತಂತೇ ಕಣಣ್ಣೋ” ಅಂದ ಸಿವರುದ್ರಣ್ಣ ಏನ್ಕೋಡ್ಲಣ್ಣೋ? ಅಂತಾ ಅವನು ಆ ಕೈಮರದಂತಾ ಗೇಟಿನಲ್ಲಿ ಅಂಗಡಿಗೆ ಹಾಕಿದ್ದ ಬಂಡವಾಳ ಗಟ್ಟಿ ಮಾಡಿಕೊಳ್ಳತೊಡಗಿದಾ.
ಆಮೇಲೆ ವಾರದ ಸಂತೆಗೆಂದು ಬಂದಾ ಸುತ್ತ ಮುತ್ತಲ ನಾಲ್ಕಾರು ಹಳ್ಳಿಯ ಇಪ್ಪತ್ತು ಮೂವತ್ತು ಜನಕ್ಕೆ ಆ ಬ್ಯಾಡ್ರಳ್ಳೀ ಸಿದ್ದಲಿಂಗಣ್ಣನೇ ಪ್ರಕಾಶನ ಬರುವಿನ ಮಾಹಿತಿದಾರನಾಗಿ ಅವರೆಲ್ಲರ ಅಣ್ಣ ಡಾ ರಾಜಣ್ಣನ ಹೊಸಾ ಪಿಚ್ಚರ್ರಿನ ಆಸೆ ಜೀವಂತವಾಗಿರಿಸಿದ. ಸಿವರುದ್ರಣ್ಣ ಅವರೆಲ್ಲರಿಗೂ ಕೇಳೀ ಕೇಳೀ ಮೇಲೆ ಬಿದ್ದು ಕಾಪೀ, ಟೀ ಕಾಯಿಸಿ ಕೊಟ್ಟು, ಬೀಡಿ, ಸಿಗರೇಟು, ಬೆಂಕಿ ಪೊಟ್ಟಣ, ವೀಳ್ಯದೆಲೆ, ಅಡಿಕೆ ಪೊಟ್ಣ, ಹೊಗೆಸೊಪ್ಪೂ ಕೊಟ್ಟು ಸುಣ್ಣದ ಡಬ್ಬದಿಂದಾ ಅವನ ಹೆಂಡತಿಗೇಳಿ ಅವಳ ಕೈಯಿಂದಲೇ ಎಲೆ ತೊಗೋಂಡೋರಿಗೆ ಪುಗಸಟ್ಟೆ ಕೊಡಿಸಿ ಅವರು ಮುಂದಿನ ಬಾರಿ ಅವನ ಅಂಗಡಿಗೇ ಬರುವುದನ್ನ ಖಾತ್ರಿ ಮಾಡಿ ಕೊಳ್ಳತೊಡಗಿದ.
“ಇವತ್ತು ಸೋಮಾರ ಬೇರೆ, ಸಂತೆ ಕಣಣ್ಣೋ, ಸಕತ್ತು ಜನ ಬ್ಯಾರೆ ಇದ್ದಾರೇ, ಪ್ರಕಾಶ ನಮ್ಮ ಕುರಿ ಹಾಕಿಸ್ಕೋಂತಾನೋ ಇಲ್ಲವೋ ಗೊತ್ತಿಲ್ಲ ಕಣಣ್ಣೋ”ಅಂದ ಗೊಲ್ಲರಟ್ಟಿಯ ಕ್ಯಾತಯ್ಯನಿಗೆ ಅವನ ಬಡಗಿಯ ಕೆಲಸದ ಹತಾರಗಳೊಂದಿಗೆ ಮತ್ತು 2 ಪೆಟ್ಟಿಗೆಗಳೊಂದಿಗೆ ಕೂತಿದ್ದ ಶಂಕ್ರಾಚಾರ್ರು “ಏ ನಾನು ನೋಡಿಲ್ಲದವನೇನಯ್ಯಾ ಅವನು ನಾನು ಅದೆಷ್ಟು ಸೋಮವಾರದ ಸಂತೆ ದಿನ ಹೋಗಿಲ್ಲಾ, ಒಂದೇ ಒಂದು ದಿನವೂ ನನ್ನ ಬಿಟ್ಟು ಹೋಗಿಲ್ಲಾ ಕಣಯ್ಯಾ, ಏನಾದ್ರೂ ಮಾಡ್ತಾನೆ ಬಿಡಯ್ಯಾ, ಅದ್ಯಾಕೆ ಅಷ್ಟೋಂದು ತಲೆ ಕೆಡಿಸಿಕೊಳ್ತೀಯಾ,” ಎಂದು ಆಚಾರ್ರು ಸಮಾಧಾನ ಹೇಳುತ್ತಿರುವಂತೆಯೇ ಪ್ರಕಾಶ ದೂರದಲ್ಲಿ ಕಂಡೇ ಬಿಟ್ಟಿದ್ದ!
ಸಿವರುದ್ರಣ್ಣಾ ಇನ್ನೇನು ಎಲ್ಲರಿಗೂ ಕಡ್ಲೇಪುರಿಯ ಪೊಟ್ಟಣಗಳನ್ನು ಕೈಗಿಟ್ಟು “ಏ ಬರೀ 5 ರೂಪಾಯಿ ಕಣಣ್ಣಾ” ಎಂದು ವಸೂಲು ಮಾಡುತ್ತಿರುವಂತೆಯೇ ಪ್ರಕಾಶ ಬ್ಯಾಡ್ರಳ್ಳೀ ಗೇಟಿನಲ್ಲಿ ಬಂದಿದ್ದು ದೂರದಲ್ಲಿ ಕಾಣುತ್ತಿದ್ದಂತೆಯೇ, ಅಲ್ಲಿದ್ದ ಜನರೆಲ್ಲಾ, ಬೇಗ ಬೇಗ ಅವರವರ ಸಾಮಾನು, ಸರಂಜಾಮುಗಳನ್ನು ಹಾಗೂ ಅವರೊಂದಿಗೆ ಕರೆದುಕೊಂಡು ಬಂದಿದ್ದ ಅವರವರ ಹೆಂಡತಿಯರನ್ನೂ ಮಕ್ಕಳನ್ನೂ ಜೊತೆಗೆ ಹೊಂದಿಸಿಕೊಂಡು ಅವರ ಅಂದಿನ ಏಕೈಕ ಅಜೆಂಡವಾದ ವಾರದ ಸಂತೆ, ಡಾ// ರಾಜಕುಮಾರ್ ರವರ ಹೊಸಾ ಪಿಚ್ಚರನ್ನೂ ನನಸಾಗಿಸಿ ಕೊಳ್ಳಲು ಪ್ರಕಾಶನ್ನ ಎದುರು ನೋಡತೊಡಗಿದರು.ಕೆಲವೇ ಕ್ಷಣಗಳಲ್ಲೇ ಬಂದ ಪ್ರಕಾಶ ಅಂದಿನ ಅವರೆಲ್ಲರ ಬಯಕೆಯಾದ ಸಂತೆ ಮತ್ತು ಮ್ಯಾಟ್ಣೀ ಪಿಚ್ಚರ್ರಿನ ಕನನು ನನಸು ಮಾಡಲು ಚಿನಾಹಳ್ಳೀ ಕಡೆಗೆ ಉಸಿರುಕಟ್ಟಿ ಧಾವಿಸಿದ.
ಆ ಗೋಡೇಕೆರೆ ಗೇಟಿನಲ್ಲಿದ್ದ ಎಲ್ಲಾ ಜನ, ಕುರಿ, ಆಡುಗಳಿಗೆ, ಅವುಗಳೊಂದಿಗೆ ವೀಳ್ಯದೆಲೆಯ, ಹೂವಿನ, ಅಡಿಕೆಯ, ತರಕಾರಿಯ ಚೀಲಗಳೊಂದಿಗೆ ಬಂದಿದ್ದ ಸುತ್ತಮುತ್ತಲ ಅನೇಕ ಹಳ್ಳಿಯ ಸಂತೆಯ ನಿಮಿತ್ತ ವ್ಯಾಪಾರದ ಲಾಭದ ಕನಸುಗಳೊಂದಿಗೆ ಬಂದಿದ್ದ ಎಲ್ಲ ಗಂಡಸರೂ, ಹೆಂಗಸರೂ ಅವತ್ತು ಈ ಪ್ರಕಾಶನಿಂದ ಅವರ ಅಂದಿನ ಸಂತೆಯ ಲಾಭದ ಖಾತರಿ ಮಾಡಿಕೊಂಡರು.
***
“ಲೇ ಕುಮಾರಾ ಎಲ್ಲೀದ್ದೀಯೋ? ಅಲ್ಲಾ ಕಣ್ಲಾ 12 ಘಂಟೆಗೆ ಆ ಪ್ರಕಾಶ ಹೋಗಿ ಎಷ್ಟೋತ್ತಾಯ್ತೂ? ಏನ್ಕಥೇ? ದನಾ ಬಿಡಾಕಿಲ್ವೇನ್ಲಾ? ಮಠ ಮಠ ಮಧ್ಯಾಹ್ನ ಆಗ್ಯತೆ, ಬಾರಾಲೋ ಮೊದ್ಲೂ. ಬಂದು ಮೊದಲೂ ನೀರು ಕುಡಿಸೀ ದನ ಮೇಯೋಕೆ ಬಿಡುಬಾರೋ ದರಿದ್ರದೋನೇ. ಮೂಕ ದನಾ ಶಾಪ ಹಾಕ್ತಾವೆ ಕಣಲಾ. ನಮ್ಮನೆಗೆ ಅದು ಒಳ್ಳೇದಲ್ಲಾ ಕಣೋ ಅದೂ” ಎಂದ ಬಸವಣ್ಣನ ಮಾತಿಗೆ ಅದೆಲ್ಲಿದ್ದನೋ ಕುಮಾರ, ಬಂದವನೇ ದನಗಳನ್ನು ಹಗ್ಗ ಬಿಚ್ಚಿ ನೀರು ಕುಡಿಸಲು ಕೆರೆಕಡೆಗೆ ಹೊಡೆದುಕೊಂಡು ಹೊರಟ. ಹಾಗೆಯೇ ಬಸವಣ್ಣನ ಬೈಗುಳಕ್ಕೇ ಅಲ್ಲಲ್ಲೇ ಸುತ್ತಮುತ್ತಾ ಕಟ್ಟಿಹಾಕಿ ಇನ್ನೂ ಮೇಯಲು ಬಿಡದಿದ್ದ ಕುಮಾರನಂಥವರೇ ಅನೇಕರು ಅವರವರ ದನಗಳನ್ನೂ ಹಗ್ಗ ಬಿಚ್ಚಿ ಮೇಯಲು ಬಿಟ್ಟರು.
ಬಾಯಾರಿದ್ದ ಆ ದನಗಳು ನಮ್ಮ ಈ ಪ್ರಕಾಶನ ಹೆಸರೇಳಿ ಅವನ ಸಮಯ ಪಾಲನೆಯ ನಿಯತ್ತಿಗೆ ಮೆಚ್ಚಿ, ಅವನಿಂದಾ ಇವತ್ತು ಸಮಯಕ್ಕೆ ಸರಿಯಾಗಿ ಹುಲ್ಲು ನೀರು ಸಿಗುವಂತಾದದ್ದಕ್ಕೆ, ನಿಟ್ಟುಸಿರು ಬಿಟ್ಟಿದ್ದು ಕುಮಾರನಿಗೂ, ಬಸವಣ್ಣನಿಗೂ ಅಲ್ಲಿದ್ದ ಯಾರಿಗೂ ಕಾಣಲಿಲ್ಲ.
***
“ಏನ್ರೀ ಚೇರ್ಮ್ನನ್ರೇ, ಊಟ ಮಾಡಿದ್ರಾ? ಬರ್ರೀ ಎಲೆಅಡಿಕೆ ಹಾಕ್ಕಳ್ಳಣಾ.”
“ಇಲ್ಲಾ ಕಣ್ ಆನಂದಯ್ಯಾ, ಇನ್ನೂ ರಾತ್ರಿ 10 ಘಂಟೆಯಾಗಕೆ ನಮ್ಮ ಈ ಪ್ರಕಾಶನೇ ಇನ್ನೂ ಬಂದಿಲ್ಲಾ,ಇಷ್ಟೋತ್ತಿಗೇ ಊಟಾನಾ? ಇನ್ನೂ ನಮ್ಮನೇಲೀ ಹುಡುಗರು ಓದಿಕೊಳ್ಳುತ್ತಿದ್ದಾವೆ. ಅವರೆಲ್ಲಾ ಆ ಪ್ರಕಾಶ ಬಂದಮೇಲೇನೇ ಎಲ್ಲ ಒಟ್ಟಿಗೆ ಊಟಕ್ಕೆ ಕೂತ್ಕತ್ತೀವಿ ಕಣಪ್ಪಾ” ಅಂದ್ರು ಚೇರ್ಮ್ನನ್ರು.
ಅವರು ಮಾತು ಮುಗಿಸೋದರೊಳಗೆ ಬಂದು ನಿಂತ ಪ್ರಕಾಶ ಅವತ್ತು ಸಂಜೆಯ ಮೊದಲನೇ ಶೋ ಪಿಚ್ಚರ್ರು ನೋಡಿಕೊಂಡವರೂ, ವ್ಯಾಪಾರ ಮುಗಿಸಿ ಅವರವರ ಅಂಗಡಿ ಮುಂಗಟ್ಟುಗಳನ್ನು ಬಾಗಿಲಿಕ್ಕಿಬಂದವರೂ, ಹುಶಾರಿಲ್ಲದೇ ದಾಸು ಡಾಕ್ಟರ್ ಶಾಪಿಗೆ ಹೋದ ರೋಗಿಗಳೂ, ಹೈಸ್ಕೂಲಿನ ಹಿಂದೆ ಕುಳಿತು ಬೆಳಗ್ಗೆಲ್ಲಾ ಇಸ್ಪೀಟಾಡಿ ಹಣ ಕಳೆದು ಯಾರತ್ರಲೋ ಸಾಲ ಮಾಡಿ ಹೊಟ್ಟೆತುಂಬಾ ಮದ್ಯ ಕುಡಿದು ಬಂದವರನ್ನೂ ಜೋಪಾನವಾಗಿಳಿಸಿದ.
ಅಂದಿನ ಅವನ ಕಾಯಕ ಮುಗಿಸಿ ನೆಮ್ಮದಿಯಾಗಿ ರಾತ್ರಿಯೆಲ್ಲಾ ಮಲಗಿ ಬೆಳಗ್ಗೆ ಮತ್ತೆ ನಮ್ಮ ಸುತ್ತ ಮುತ್ತಲಿನ ಜನರ ದೈನಂದಿನ ಭಾಗ ವಾಗಲೂ ಭಾಗ್ಯ ತರುವವನಂತಾಗಲೂ ತೀರ್ಮಾನಿಸಿ ಕೇಬೀ ಕ್ರಾಸಿನ ಕಡೆಗೆ ಹೊರಟ. ಅವನು ಪ್ರತೀದಿನ ಚಲಿಸುವ ದಾರಿಯುದ್ದದಲ್ಲಿ ಅವರವರ ಹೆಂಡರೂ ಮಕ್ಕಳೊಂದಿಗೆ ಮಲಗಲು ಸಿದ್ದವಾಗುತ್ತಿದ್ದ ಎಲ್ಲ ಜನರಿಗೆ ಪ್ರೀತಿಯಿಂದಾ ಖುಷಿಯಿಂದಾ ಶಿಳ್ಳೇ ಹಾಕುತ್ತಾ, ಶುಭರಾತ್ರಿ ಹೇಳುತ್ತಾ ಕತ್ತಲೆಯಲ್ಲಿ ಕಣ್ಮರೆಯಾದ….







SSSSSSSSsoooooooooo Nice nammurina prakasha thanks for write this words
Nav chikkavariddaga prakasha bus ellandra school ge hogoke agtirlilla
Idhu Varegu Naaanu Bus Galalli Athi Hecchu Prayaana Athava Hodaadiruvudhu Andhre Adhu Prakasha Bus Only …
Naavu Collage School Ella Eeee bus le hoguthidhvi…
Collage Students Andhre Half Charge …Ashtella Anukoola Maadikotta namma Prakasha Bus ge & praksha bus Maalikari ge Vandhanegalu