– ಸ್ಮಿತಾ ಅಮೃತರಾಜ್
ನಮ್ಮೂರ ಶಾಲೆಯಲ್ಲಿ ಅಧ್ಯಾಪಿಕೆಯಾಗಿರುವ ದೂರದ ಊರಿನ ಹುಬ್ಬಳ್ಳಿ ಟೀಚರ್, ಮೊನ್ನೆ ಮೊನ್ನೆ ಒಂದಷ್ಟು ದಿನ ರಜೆ ಸಿಕ್ಕಿದ್ದೇ ತಡ ಸಂಭ್ರಮದಿಂದ ಊರಿಗೆ ಹೊರಟಿದ್ದಾರೆ.ಹೋಗುವಾಗ ಇದ್ದ ಲವಲವಿಕೆ ಬರುವಾಗ, ಮಾಸಿ ಮುಖ ಕಳೆಗುಂದಿತ್ತು.ಕಾರಣ ಇಷ್ಟೆ.ಅವರಿಗೆ ಪಸರ್್ ಹಿಡಿಯುವ ಅಭ್ಯಾಸ ಇರಲಿಲ್ಲವಂತೆ.ಕೈಯಲ್ಲಿ ಪಸರ್ು ನೇತು ಹಾಕಿಕೊಂಡು ಅದರ ಕಡೆಗೇ ಲಕ್ಷ್ಯವಹಿಸಿಕೊಂಡು ಇರುವುದು ಅವರಿಗೆ ಕಿರಿಕಿರಿಯಾಗುತ್ತಿತ್ತಂತೆ.ಹಾಗಾಗಿ ತನ್ನ ಬಟ್ಟೆ ಬರೆ,ಅಗತ್ಯದ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದ ದೊಡ್ಡ ಬ್ಯಾಗಿನಲ್ಲೇ ತಮ್ಮ ಹಣ,ಪಾನ್ ಕಾರ್ಡ್, ಎಟಿಎಂ ಕಾರ್ಡ್ ಹೀಗೆ ಇನ್ನೊಂದಷ್ಟು ಅಗತ್ಯದ ಡಾಕ್ಯುಮೆಂಟ್ ಗಳನ್ನೆಲ್ಲಾ ಜೊತೆಯಲ್ಲೇ ಇರಲಿ ಅಂತ ಆ ಬ್ಯಾಗಿನಲ್ಲೇ ತುಂಬಿಸಿ ಹೊತ್ತೊಯ್ಯುತ್ತಿದ್ದದ್ದು.ಈ ಸಲವೂ ಅಷ್ಟೆ ಎಲ್ಲಾ ಭಾರವನ್ನೂ ಆ ಭಾರದ ಬ್ಯಾಗಿಗೊಪ್ಪಿಸಿ ,ಕಾಲಿನಡಿಗೆ ಅದನ್ನ ತಳ್ಳಿ ತಾವು ಆರಾಮವಾಗಿ ಮಡಿಕೇರಿ ಬರುವಲ್ಲಿವರೆಗೂ ನಿದ್ದೆ ತೂಗುತ್ತಾ ಬಂದಿದ್ದಾರೆ.ಪ್ರತೀ ಸಲವೂ ಅವರ ಕಾರ್ಯವೈಖರಿ ಇದೇ ರೀತಿ ಇದ್ದುದರಿಂದ ಇದರಲ್ಲಿ ಅಂತಹ ವಿಶೇಷವೇನೂ ಇರಲಿಲ್ಲ.ಆದರೆ ಈ ಸಲ ಅದೃಷ್ಟ ಕೈಕೊಟ್ಟು ಯಡವಟ್ಟು ನಡೆದೇ ಬಿಟ್ಟಿತ್ತು.ಸುತ್ತಮುತ್ತಲಿನವರ ಬಗ್ಗೆ ಇಟ್ಟುಕೊಂಡ ಅಪಾರ ನಂಬಿಕೆಯ ಬುಡಕ್ಕೇ ಕೊಡಲಿ ಪೆಟ್ಟು ಬಿದ್ದು ಬಿಟ್ಟಿತು.
ಈ ಸಾರಿ ಮಡಿಕೇರಿಯಲ್ಲಿಳಿದು ಎಂದಿನಂತೆ ಬ್ಯಾಗಿಗಾಗಿ ಕೈ ತಡಕಾಡುವಾಗ ಬ್ಯಾಗೇ ನಾಪತ್ತೇ.ಮತ್ತೆ ಬ್ಯಾಗ್ ಕಳುವಾಗಿದೇ ಅಂತ ತಿಳಿದುಕೊಳ್ಳಲು ಹೆಚ್ಚು ಕಾಲ ಬೇಕಾಗಲಿಲ್ಲ.ಪಕ್ಕದಲ್ಲಿ ಸಭ್ಯನಂತೆ ಕುಳಿತ ಯುವಕ ಎಲ್ಲವನ್ನೂ ಯಾಮಾರಿಸಿ ಇವರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.ಇವರಿಗೆ ನಮ್ಮೂರಿನ ಹಳ್ಳಿ ಮೂಲೆಗೆ ಮತ್ತೊಂದು ಬಸ್ಸು ಹಿಡಿದು ಬರುವುದಿತ್ತು.ಕೈಯಲ್ಲಿ ನಯಾಪೈಸೆ ಹಣವಿಲ್ಲ.ಇವರ ಕಷ್ಟವನ್ನು ನೋಡಿ ಯಾರೋ ಪುಣ್ಯಾತ್ಮರು ಬಸ್ಸಿನ ಖಚರ್ಿಗೆ ಹಣವಿತ್ತು ಸಹಾಯ ಮಾಡಿದ್ದಾರೆ.ಅಸಾಹಯಕರನ್ನಾಗಿ ಮಾಡುವ ದುರುಳರ ನಡುವೆಯೂ ಮರುಗುವ,ಸಹಾಯ ಹಸ್ತ ಚಾಚುವ ಮಾನವೀಯ ಕೈಗಳೂ ಕೂಡ ಇರುವುದರಿಂದಲೇ ಇವತ್ತು ನಮ್ಮ ಬದುಕು ಸಹ್ಯವಾಗುತ್ತಿರುವುದು ಅಂತನ್ನಿಸುತ್ತದೆ.

ಆದರೆ ಕೆಲವೊಮ್ಮೆ,ನನ್ನ ವಸ್ತುಗಳೆಲ್ಲಾ ಕಳೆದು ಹೋಯಿತು ಅಂತ ಮನಮಿಡಿಯುವಂತೆ ಲಬೋ ಎಂದು ಗೋಳಿಡುತ್ತಲೇ ಅನುಕಂಪ ಗಿಟ್ಟಿಸುತ್ತಾ,ಎಲ್ಲವನ್ನು ಗಿಟ್ಟಿಸಿಕೊಳ್ಳುವ,ದುರುಪಯೋಗ ಪಡಿಸಿಕೊಳ್ಳುವ ದಂಧೆ ಕೂಡ ಇವತ್ತು ವ್ಯಾಪಕವಾಗಿ ನಡೆಯುತ್ತಿದೆ.ಇಂತಹ ಸೋಗಲಾಡಿತನ,ನಯವಂಚಕತನವನ್ನು ಬಂಡವಾಳವಾಗಿಸಿಕ್ಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಒಂದು ವರ್ಗವೇ ಇದೆ.
ಮೊನ್ನೆ ಮೊನ್ನೆ ರಾತ್ರೆ ಹೊತ್ತು ಸುಮ್ಮಗೆ ರೇಡಿಯೋ ಹಚ್ಚಿ ಕುಳಿತ್ತಿದ್ದೆ.ನೀವು ನಿಮ್ಮ ತಪ್ಪಿಲ್ಲದೇ ಅಪಾದನೆ ಹೊತ್ತ ಘಟನೆಗಳೇನಾದರಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ ಅಂತ ಫೋನ್ ಇನ್ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಅತ್ತಲಿನಿಂದ ನಿರೂಪಕರು ಕೇಳಿಕೊಳ್ಳುತ್ತಿದ್ದರು.ಇತ್ತಲಿನಿಂದ ಯುವತಿಯೊಬ್ಬಳು ತನ್ನ ಅನುಭವವನ್ನ ಹಂಚಿಕೊಳ್ತಾ ಇದ್ದಳು.ಅವಳು ಹೈಸ್ಕೂಲ್ ಹುಡುಗಿಯಾಗಿದ್ದಾಗ ಶಾಲಾ ಪಿಕ್ನಿಕ್ ಮುಗಿಸಿಕೊಂಡು ಅದೇ ಖುಷಿಯ ಗುಂಗಿನಲ್ಲಿ ತನ್ನೂರು ತಲುಪುವ ಬಸ್ಸು ಹತ್ತಿ ಕುಳಿತು ಪಕ್ಕದ ಗೆಳತಿಯ ಜೊತೆ ಹರಟೆಯಲ್ಲಿ ತೊಡಗಿದ್ದಾಳೆ.ಬಸ್ಸು ಬೇರೆ ತುಂಬಾ ರಶ್ ಇತ್ತಂತೆ.ಅಷ್ಟರಲ್ಲಿ ಬಸ್ಸೇರಿದ ಮಹಿಳೆಯೊಬ್ಬಳು ತನ್ನ ಕೈ ಚೀಲವನ್ನು ಹಿಡಿದುಕೊಳ್ಳಲೆಂದು ತಾನಾಗಿಯೇ ಇವಳ ಬಳಿ ಕೊಟ್ಟು,ತಾನು ನಡುವಲ್ಲೇ ಕೈ ಚೀಲ ಮರೆತು ಇಳಿದು ಬಿಟ್ಟಿದ್ದಾಳೆ.ಮಾತಿನ ಗುಂಗಿನಲ್ಲಿ ಮರೆತ ಹುಡುಗಿ ತನ್ನ ಇಳಿಯುವ ಸ್ಥಳ ಬಂದಾಗ ಕೈಚೀಲದ ವಾರಿಸುದಾರರು ಕಾಣದೆ ಕಂಗಾಲಾಗಿ,ಏನು ಮಾಡಬೇಕೆಂದು ತೋಚದೆ ಕೊನೆಗೆ ಎಲ್ಲವನ್ನೂ ಹೇಳಿ ಬಸ್ಸಿನ ಡ್ರೈವರ್ನ ಸುಪಧರ್ಿಗೆ ಒಪ್ಪಿಸಿ ಬಂದಿದ್ದಾಳೆ.ಇತ್ತ ತನ್ನ ಬೇಜಾವಬ್ದಾರಿತನದಿಂದ ಮರೆತು ಬಂದ ಒಡವೆಯಿರುವ ಚೀಲ ಕಾಣದೆ ಬೆದರಿದ ಮಹಿಳೆ ಹಿಂದು ಮುಂದು ನೋಡದೆ ಸ್ಟೇಷನ್ ಗೆ ದೌಡಾಯಿಸಿ ಈ ಹುಡುಗಿಯ ಮೇಲೆ ಸುಖಾ ಸುಮ್ಮನೆ ಕಳ್ಳತನದ ಆರೋಪ ಹೊರಿಸಿದಳಂತೆ.ಅವಳ ಮಾತುಗಳನ್ನ ಕೇಳ್ತಾ ಒಳ್ಳೆಯತನವೂ ಹೇಗೆ ಅಪರಾಧಿ ಪಟ್ಟವನ್ನು ಹೊರಿಸಿಬಿಡುತ್ತದೆ ಎಂಬುದನ್ನು ನೆನೆದರೆ,ಉಪಕಾರ ಮಾಡುವ ಉಸಾಬರಿ ಯಾರಿಗೂ ಬೇಡ ಅಂತ ಅನ್ನಿಸದೇ ಇರಲಾರದು.ಇವುಗಳೆಲ್ಲ ಒಂದು ಮುಖವಷ್ಟೆ.ಅದರಂತೆ ಅಮೂಲ್ಯ ವಸ್ತುಗಳನ್ನು ಅಜಾಗರೂಕತೆಯಿಂದ ಬಿಟ್ಟು ಹೋದರೂ,ಅದನ್ನ ಸಿಕ್ಕವರು ಅಷ್ಟೇ ಪ್ರಾಮಾಣಿಕವಾಗಿ ಹಿಂತುರಿಗಿಸಿದ ಉದಾಹರಣೆಗಳು ಬೇಕಾದಷ್ಟಿವೆ.ಒಳ್ಳೆಯವರು ಕೆಟ್ಟವರು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತಾರೆಂಬುದಕ್ಕೆ ಬೇಕಾದಷ್ಟು ಪುರಾವೆಗಳು ನಮ್ಮ ಮುಂದೆ ಸಿಗುತ್ತವೆ.
ವಿದ್ಯಾವಂತರಾದ ನಾವುಗಳೂ ಕೂಡ ಇವತ್ತು ಎಷ್ಟು ಮೂರ್ಖರಾಗುತ್ತಿದ್ದೇವೆ ಎಂದರೆ ಚಿನ್ನ ತೊಳೆಯಲು ಕೇಳಿಕೊಂಡು ಬರುವವರಿಗೆ ಅಮಾಯಕರಂತೆ ಒಡವೆಗಳನ್ನು ತೊಳೆಯಲು ಕೊಟ್ಟು ಮೋಸ ಹೋಗುವುದು,ಅದೂ ಇದೂ ಮಾರಿಕೊಂಡು ಬರುವವರ ಗಿಲೀಟಿನ ಮಾತುಗಳಿಗೆ ಮರುಳಾಗಿ ಗುಂಡಿಗೆ ಬೀಳುವುದು, ಕಿಸೆಗಳ್ಳರಿಂದ ಜೇಬಿಗೆ ಕತ್ತರಿ ಪ್ರಯೋಗ ಆಗುವುದು,ಜನಜಂಗುಳಿಯ ನಡುವೆ ಕತ್ತಿನ ಸರ ಕಾಣೆಯಾಗುವುದು,ವ್ಯಾನಿಟಿ ಬ್ಯಾಗ್ ಯಾವುದೋ ಮಾಯಕದಲ್ಲಿ ಮಾಯವಾಗುವುದು, ಹೀಗೇ ನಮ್ಮ ಕಣ್ಣಿಗೆ ಮಣ್ಣೆರಚಿ ಅನಾಹುತಗೊಳಿಸುವಂತಹ ಹತ್ತು ಹಲವು ಪ್ರಸಂಗಗಳು ದಿನ ನಿತ್ಯ ನಡೆಯುತ್ತಲೇ ಇರುತ್ತದೆ.ಮತ್ತೆ ಮತ್ತೆ ನಾವು ಮೋಸ ಹೋಗುತ್ತಲೇ ಇರುತ್ತೇವೆ. ಅತೀ ಜಾಗೂರುಕರಾಗಿದ್ದರೂ ಕೂಡ ಕೈ ಮೀರಿ ಅಸಂಭವಗಳು ಸಂಭವಿಸುತ್ತಲೇ ಇರುತ್ತದೆ. ಈ ಕಳ್ಳತನ ,ಮೋಸ,ದಗಲ್ಬಾಜಿಯಲ್ಲಿ ತೊಡಗಿಸಿಕೊಂಡವರು ಮುಂದೊಂದು ದಿನ ಏನಾಗ್ತಾರೆ?ನಿಜಕ್ಕೂ ಸುಖಿಗಳಾಗಿರುತ್ತಾರ..?ಪುಟ್ಟ ಹುಡುಗನೊಬ್ಬನ ಸಣ್ಣಪುಟ್ಟಕಳ್ಳತನವನ್ನು ಹುರಿದುಂಬಿಸುತ್ತಾ ಬಂದ ಅವನ ಅಮ್ಮ,ಮುಂದೊಂದು ದಿನ ಹುಡುಗ ಬೆಳೆದಂತೆ ದೊಡ್ಡ ಕಳ್ಳನಾಗಿ ಜೈಲು ಸೇರಿದ ಮೇಲೆ ಅಮ್ಮನ ಕಿವಿಕಚ್ಚಿದ ಕತೆ ಬಾಲ್ಯದಿಂದಲೇ ನಾವು ಕೇಳುತ್ತಾ ಬಂದಿರುತ್ತೇವೆ.ಈ ಕತೆ ಕೇಳುವಾಗ ಇವತ್ತು ಈ ಮಟ್ಟದಲ್ಲಿ ಕಳ್ಳತನ,ದರೋಡೆ ಹೆಚ್ಚಾಗಲು ನಮ್ಮ ಸಾಮಾಜಿಕ ವ್ಯವಸ್ಥೆ,ಪರಿಸರ ಕೂಡ ಕಾರಣವಾಗಿದೆಯೇನೋ ಅಂತ ಅನ್ನಿಸದೇ ಇರಲಾರದು.
ಯಾಕೋ ಇವತ್ತು ಇಷ್ಟೆಲ್ಲಾ ಕಳ್ಳತನದ ಕರಾಳ ಮುಖಗಳ ಕೇಳುತ್ತಾ ಮನಸ್ಸು ಮುದುಡಿ ಹೋಗುತ್ತಿರುವ ಹೊತ್ತಲ್ಲಿ,ಕಾಕತಾಳಿಯವೆಂಬಂತೆ ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ,ಅವನ ಹೊಚ್ಚ ಹೊಸ ದುಬಾರಿ ಗೇರ್ ಸೈಕಲನ್ನು ಹಾಡು ಹಗಲೇ ಅವನ ಮನೆಯ ಕಾಂಪೋಂಡಿನೊಳಗಿಂದಲೇ ಕಳುವು ಮಾಡಿದ್ದಾರೆಂದು ಹೇಳುತ್ತಿರ ಬೇಕಾದರೆ,ಮನಸ್ಸು ಜಿಲ್ಲನೆ ನಡುಗಿ ಸಣ್ಣಗೊಂದು ನಡುಕ ಶುರುವಾಗಿ,ಯಾವಾಗಲೂ ಬಂದವರಿಗೆ ಸ್ವಾಗತಕೋರಲೆಂಬಂತೆ ವಿಶಾಲವಾಗಿ ತೆರೆದೇ ಇರುವ ನಮ್ಮ ಹಳ್ಳಿ ಮನೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ ಭಯದಿಂದಲೇ ಮೆಲ್ಲನೆ ಒಳ ಅಡಿಯಿಡುತ್ತಿದ್ದೇನೆ.ಕಳಬೇಡ..ಕೊಲಬೇಡ..ಹುಸಿಯ ನುಡಿಯಲು ಬೇಡ.. ಬಸವಣ್ಣನವರ ವಚನ ಮನದೊಳಗೆ ಮಾರ್ಧನಿಸುತ್ತಲೇ ಇದೆ.






ಲೇಖನ ತುಂಬಾ ಚೆನ್ನಾಗಿದೆ; ಮೇಡಂ.
ತುಂಬಾ ಹಿಡಿಸಿತು ಈ ನಿಮ್ಮ ಬರೆಹ.
ಚೆನ್ನಾಗಿದೆ